ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 9ನೆಯ ಕಂತು
– ಸಿ.ಪಿ.ನಾಗರಾಜ.
ಬರಿಯ ಮಾತಿನ ಮಾಲೆಯಲೇನಹುದು. (191-25 )
ಬರಿ=ಏನೂ ಇಲ್ಲದಿರುವುದು; ಮಾತು=ನುಡಿ/ಸೊಲ್ಲು; ಬರಿಯ ಮಾತು=ವ್ಯಕ್ತಿಯು ತನ್ನ ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳದೆ, ಕೇವಲ ಮಾತಿನಲ್ಲಿ ಮಾತ್ರ ಸತ್ಯ, ನೀತಿ, ನ್ಯಾಯ, ಕರುಣೆ, ಪ್ರಾಮಾಣಿಕತನ, ಸಮಾನತೆಯ ವಿಚಾರಗಳನ್ನು ದೊಡ್ಡದಾಗಿ ಆಡುತ್ತಿರುವುದು; ಮಾಲೆ+ಅಲ್+ಏನ್+ಅಹುದು; ಮಾಲೆ=ಸರ/ಕೊರಳಲ್ಲಿ ಹಾಕಿಕೊಳ್ಳುವ ಹೂವಿನ ಹಾರ/ಮುತ್ತಿನ ಹಾರ/ಸಾಲು/ಪಂಕ್ತಿ;
ಮಾತಿನ ಮಾಲೆ=ಇದು ಒಂದು ರೂಪಕ. ದಾರದ ಎಳೆಯೊಂದಕ್ಕೆ ಬಿಡಿಬಿಡಿ ಹೂಗಳನ್ನು/ಮುತ್ತುಗಳನ್ನು ಪೋಣಿಸಿ ಹಾರವನ್ನು ಕಟ್ಟುವಂತೆ ಅಂದ ಚಂದದ ಪದಗಳನ್ನು ಜೋಡಿಸಿಕೊಂಡು ಕೇಳುಗರ ಮನಸೆಳೆಯುವಂತೆ ಇಂಪಾಗಿ/ಸೊಗಸಾಗಿ ಮಾತನಾಡುವ ಕುಶಲತೆ; ಏನು=ಯಾವುದು; ಅಹುದು=ಆಗುತ್ತದೆ; ಏನಹುದು=ಏನನ್ನು ತಾನೇ ಗಳಿಸಿದಂತಾಗುತ್ತದೆ;
ವ್ಯಕ್ತಿಯು ತನ್ನ ನಿಜ ಜೀವನದಲ್ಲಿ ಆಚರಿಸಿ ತೋರಿಸಲಾಗದ ಸತ್ಯ, ನೀತಿ, ಸಾಮಾಜಿಕ ನ್ಯಾಯದ ಸಂಗತಿಗಳನ್ನು ಕುರಿತು ದೊಡ್ಡ ದೊಡ್ಡ ಮಾತುಗಳನ್ನು ಕೇಳುಗರು ತಲೆದೂಗುವಂತೆ ಆಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಕೇವಲ ಮಾತಿನಿಂದ ವ್ಯಕ್ತಿಯ ಇಲ್ಲವೇ ಸಮುದಾಯದ ಬದುಕಿನಲ್ಲಿ ಒಳ್ಳೆಯದು ಉಂಟಾಗುವುದಿಲ್ಲ.
ಬೇವಿನ ಬೀಜವ ಬಿತ್ತಿ
ಬೆಲ್ಲದ ಕಟ್ಟೆಯ ಕಟ್ಟಿ
ಆಕಳ ಹಾಲನೆರೆದು
ಜೇನುತುಪ್ಪವ ಹೊಯ್ದಡೆ
ಸಿಹಿಯಾಗಬಲ್ಲುದೆ
ಕಹಿಯಹುದಲ್ಲದೆ. (626-58 )
ಬೇವು=ಒಂದು ಬಗೆಯ ಮರ. ಇದರ ಎಲೆ,ಕಾಯಿ,ಹಣ್ಣುಗಳೆಲ್ಲವೂ ಕಹಿಯಾದ ರುಚಿಯಿಂದ ಕೂಡಿರುತ್ತವೆ; ಬೀಜ=ಕಾಳು/ಬಿತ್ತ; ಬಿತ್ತು=ಬೀಜವನ್ನು ಹಾಕು; ಬಿತ್ತಿ=ಬೀಜವನ್ನು ಮಣ್ಣಿನಲ್ಲಿ ಹೂತು/ನೆಟ್ಟು; ಬೆಲ್ಲ=ಕಬ್ಬಿನ ಜಲ್ಲೆಯನ್ನು ಗಾಣದಿಂದ ಅರೆದಾಗ ಬರುವ ಕಬ್ಬಿನ ಹಾಲನ್ನು ಕುದಿಸಿ ತಯಾರಿಸಿದ ವಸ್ತು. ಇದು ಸಿಹಿಯಾದ ರುಚಿಯನ್ನು ಹೊಂದಿದೆ; ಕಟ್ಟೆ=ಪಾತಿ/ಮಡಿ/ಹಾಕಿದ ಬೀಜ ಇಲ್ಲವೇ ನೆಟ್ಟ ಗಿಡದ ಸುತ್ತಲೂ ಕಟ್ಟುವ ಒಡ್ಡು; ಕಟ್ಟಿ=ನಿರ‍್ಮಿಸಿ/ರಚಿಸಿ;
ಆಕಳು=ಹಸು/ಗೋವು/ದನ; ಹಾಲನ್+ಎರೆದು; ಆಕಳ ಹಾಲು=ಹಸುವಿನ ಹಾಲು; ಎರೆ=ಸುರಿ/ಹೊಯ್ಯು; ಎರೆದು=ಸುರಿದು/ಹಾಕಿ; ಜೇನುತುಪ್ಪ=ಜೇನು ಹುಳುಗಳು ನೂರಾರು ಬಗೆಯ ಹೂಗಳ ಮಕರಂದವನ್ನು ಹೀರಿ ತಂದು ತಯಾರಿಸಿರುವ ಸಿಹಿಯಾದ ರುಚಿಯನ್ನುಳ್ಳ ತುಪ್ಪ; ಹೊಯ್=ಸುರಿ/ಸೂಸು/ಹಾಕು; ಹೊಯ್ದಡೆ=ಹಾಕಿದರೆ/ಸುರಿದರೆ; ಸಿಹಿ+ಆಗಬಲ್ಲುದೆ; ಸಿಹಿ=ಒಂದು ಬಗೆಯ ರಸದ ಹೆಸರು. ಮಾನವರು ತಿನ್ನುವ, ಕುಡಿಯುವ ಮತ್ತು ಉಣ್ಣುವ ವಸ್ತುಗಳಲ್ಲಿ ಉಪ್ಪು, ಕಾರ, ಸಿಹಿ, ಕಹಿ, ಹುಳಿ, ಒಗರು ಎಂಬ ಆರು ಬಗೆಯ ರಸಗಳನ್ನು ಹೆಸರಿಸುತ್ತಾರೆ; ಆಗಬಲ್ಲುದೆ=ಆಗುತ್ತದೆಯೇ; ಕಹಿ+ಅಹುದು+ಅಲ್ಲದೆ; ಅಹುದು=ಆಗುವುದು; ಅಲ್ಲದೆ=ಹೊರತು ಪಡಿಸಿ;
ಸಿಹಿಯಾಗಬಲ್ಲುದೆ ಕಹಿಯಹುದಲ್ಲದೆ=ಕಹಿಯಾಗುವುದೇ ಹೊರತು ಸಿಹಿಯಾಗುವುದಿಲ್ಲ; ಕಲ್ಪನೆಯ ಪ್ರಸಂಗವೊಂದನ್ನು ರೂಪಕವಾಗಿ ಚಿತ್ರಿಸಲಾಗಿದೆ. “ ಬಿತ್ತಿದಂತೆ ಬೆಳೆ “ ಎಂಬ ನಾಣ್ಣುಡಿಯೊಂದು ಜನಸಮುದಾಯದಲ್ಲಿ ಬಳಕೆಯಲ್ಲಿದೆ. ಅಂತೆಯೇ ಬೇವಿನ ಬೀಜವನ್ನು ಬಿತ್ತಿ , ಅದಕ್ಕೆ ಯಾವುದೇ ಬಗೆಯ ಆರಯಿಕೆಯನ್ನು ಮಾಡಿದರೂ, ಅದರಿಂದ ಹೊರಹೊಮ್ಮುವ ಬೇವಿನ ಹಣ್ಣು ಕಹಿಯೇ ಆಗಿರುತ್ತದೆ.
ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡುವಾಗ ಮನದಲ್ಲಿ ಒಳ್ಳೆಯ ಉದ್ದೇಶವನ್ನು ಹೊಂದಿ, ಅದನ್ನು ಒಳ್ಳೆಯ ರೀತಿಯಲ್ಲಿ ಮಾಡಿದಾಗ ಮಾತ್ರ ಒಳ್ಳೆಯದು ದೊರಕುತ್ತದೆ. ಒಳ್ಳೆಯ ಉದ್ದೇಶ ಎಂದರೆ ತಾನು ಮಾಡುವ ಕೆಲಸ ತನ್ನನ್ನು ಒಳಗೊಂಡಂತೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಿರಬೇಕು ಎಂಬ ಆಸೆ.
ವ್ಯಕ್ತಿಯು ಮನದಲ್ಲಿ ಕೆಟ್ಟ ಉದ್ದೇಶವನ್ನು ಹೊಂದಿ ಹೊರನೋಟಕ್ಕೆ ಅಂದಚೆಂದದ ಮಾತುಗಳನ್ನಾಡುತ್ತ ಮಾಡುವ ಕೆಲಸವು, ನೋಡುವುದಕ್ಕೆ ಕೇಳುವುದಕ್ಕೆ ಸುಂದರವಾಗಿದ್ದರೂ, ಅದರಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡು ಉಂಟಾಗುತ್ತದೆ ಎಂಬುದನ್ನು ಈ ರೂಪಕ ಸೂಚಿಸುತ್ತದೆ.
ಮನ್ನಣೆ ತಪ್ಪಿದ ಬಳಿಕ
ಅಲ್ಲಿರಬಹುದೆ
ಸಲಿಗೆ ತಪ್ಪಿದ ಬಳಿಕ
ಸಲುವುದೆ ಮಾತು. ( 1303-119 )
ಮನ್ನಣೆ=ಒಲವು ನಲಿವಿನಿಂದ ಕೂಡಿದ ಮರ‍್ಯಾದೆ/ಆದರ/ಮಾನ್ಯತೆ/ಆದ್ಯತೆ; ತಪ್ಪು=ಇಲ್ಲವಾಗು/ಸಿಕ್ಕದಿರು/ದೊರೆಯದಿರು; ತಪ್ಪಿದ=ಇಲ್ಲವಾದ; ಬಳಿಕ=ನಂತರ/ತರುವಾಯ/ಆ ಮೇಲೆ; ಅಲ್ಲಿ+ಇರಬಹುದೆ; ಅಲ್ಲಿ=ಅಂತಹ ಕಡೆ/ಜಾಗ/ನೆಲೆ; ಇರಬಹುದೆ=ಇರಲು ಆಗುತ್ತದೆಯೇ;
ಮನ್ನಣೆ ತಪ್ಪಿದ ಬಳಿಕ ಅಲ್ಲಿರಬಹುದೆ=ಇತರರೊಡನೆ ಹೊಂದಿದ್ದ ಒಲವು ನಲಿವಿನಿಂದ ಕೂಡಿದ ಆದರದ ಆತ್ಮೀಯವಾದ ನಂಟು ಮುರಿದುಬಿದ್ದ ನಂತರ/ಕಡಿದುಹೋದ ಮೇಲೆ, ಅಂತಹ ನೆಲೆಯಲ್ಲಿ/ಕಡೆಯಲ್ಲಿ ನೆಮ್ಮದಿಯಿಂದ ಬಾಳಲು/ಇರಲು ಆಗುತ್ತದೆಯೇ;
ಸಲಿಗೆ=ಗೆಳೆತನ/ಸ್ನೇಹ/ಸದರ/ಅತಿಯಾದ ಒಡನಾಟ; ಸಲ್=ಸರಿಹೊಂದು/ಯುಕ್ತವಾಗು/ತಕ್ಕುದಾಗಿರು; ಸಲುವುದೆ=ಸರಿಹೊಂದುವುದೇ/ಸೂಕ್ತವೆನಿಸುವುದೇ; ಮಾತು=ನುಡಿ/ಸೊಲ್ಲು;
ಸಲಿಗೆ ತಪ್ಪಿದ ಬಳಿಕ ಸಲುವುದೆ ಮಾತು=ವ್ಯಕ್ತಿಗಳ ನಡುವಣ ಒಳ್ಳೆಯ ನಂಟು ಮುರಿದುಬಿದ್ದ ನಂತರ/ಕಡಿದುಹೋದ ಮೇಲೆ ಮತ್ತೆ ಮೊದಲಿನಂತೆ ಸರಸದ ಮಾತುಕತೆಯನ್ನಾಡಲು ಆಗುತ್ತದೆಯೇ;
ವ್ಯಕ್ತಿಗಳ ಒಲವಿನ ನಂಟಿನಲ್ಲಿ ಬಿರುಕು ಉಂಟಾದಾಗ, ಮನಸ್ಸುಗಳು ಮುರಿದುಬಿದ್ದು, ಮೊದಲಿನಂತೆ ವ್ಯವಹರಿಸಲು ಆಗುವುದಿಲ್ಲವೆಂಬ ಸಾಮಾಜಿಕ ವಾಸ್ತವವನ್ನು ಈ ನುಡಿಗಳು ಸೂಚಿಸುತ್ತಿವೆ.
( ಚಿತ್ರಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು