ಕವಿತೆ: ಚೌಕದೊಳಗಿನ ಬದುಕು

– ವೆಂಕಟೇಶ ಚಾಗಿ.

ತರಕಾರಿ

ಜೀವನದ ಚೌಕದಲಿ ನೂರಾರು ಚೌಕಾಸಿ
ಬದುಕುತಿದೆ ಬಡಜೀವ ಬದುಕ ಸೋಸಿ
ಸುಳ್ಳು ಸಂತೆಯಲಿ ಒಂದಿಶ್ಟು ತರಕಾರಿ
ಕೊಳ್ಳುವರ ಕಣ್ಗಳಲಿ ಇವಳು ವ್ಯಾಪಾರಿ

ಕರಣಗಳು ಸೋತಿಹವು ಕಣ್ಣುಗಳೋ ಮಂಜು
ಸಂಜೆಯೊಳು ವ್ಯಾಪಾರ ಬದುಕೆ ನಂಜು
ಗುಂಪಿನೊಳಗೊಂದಿಶ್ಟು ತಾಜಾ ತರಕಾರಿ
ಹೊಟ್ಟೆಯೂ ಎನಗಿಹುವು ನೋಡದಿರಿ ಹೌಹಾರಿ

ಎನ್ನ ಜೀವನವ ಕೇಳುವರು ನೀವಲ್ಲ
ಸಿಕ್ಕಶ್ಟು ಚೌಕಾಸಿ ಕಡಿಮೆ ಕೊಳ್ಳಲು ನೀವೆಲ್ಲ
ಸುತ್ತ ಚೀಲಗಳಲ್ಲಿ ಉಳಿದಿಹುದು ಸ್ವಲ್ಪ
ಕೈಯೊಡ್ಡಿ ಬೇಡಲ್ಲ ಬದುಕ ಬದುಕಿಸಿ ಅಲ್ಪ

ಸ್ವಾಬಿಮಾನದ ಕಣಜ ಸುಕ್ಕು ಗಟ್ಟಿದ ದೇಹ
ಕಂಗಳಲಿ ದುಡಿತದ ಚಲವೊಂದೆ ಮರ‍್ಮ
ಅಳಿದುಳಿದ ತರಕಾರಿ ನನ್ನ ಮುಂದಿಲ್ಲ
ಕೊಳ್ಳದೇ ಹೋಗದಿರಿ ಮಕ್ಕಳು ನೀವೆಲ್ಲ

ಅಲ್ಲಿಶ್ಟು ಇಲ್ಲಿಶ್ಟು ಯಾವುದಾದರೂ ನಿಮ್ಮದೆ
ಕೊಳ್ಳಿ ಎನ್ನುವ ನಿಮಗೆ ಎಲ್ಲ ಉಳಿಕೆಯು ಇದೆ
ದಿನಗಳು ಉಳಿದಿಲ್ಲ ನನಗೂ ತರಕಾರಿಗಳಿಗೂ
ದೇವರಿಗಲ್ಲದ ಚೌಕಾಸಿ ಬಂತೆ ನಿಮಗೂ

(ಚಿತ್ರ ಸಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: