ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 10ನೆಯ ಕಂತು

ಸಿ.ಪಿ.ನಾಗರಾಜ.

ಬಸವಣ್ಣ,, Basavanna

ಮಾತಿನಲ್ಲಿ ದಿಟ
ಮನದಲ್ಲಿ ಸಟೆ
ಬೇಡವಯ್ಯಾ
ಮನ ವಚನ ಕಾಯ
ಒಂದಾಗದಿದ್ದರೆ
ಕೂಡಲಸಂಗಯ್ಯನೆಂತೊಲಿವನಯ್ಯಾ. (1374-127 )

ಮಾತಿನ+ಅಲ್ಲಿ; ಮಾತು=ನುಡಿ/ಸೊಲ್ಲು; ದಿಟ=ನಿಜ/ಸತ್ಯ/ವಾಸ್ತವ; ಮನದ+ಅಲ್ಲಿ; ಮನ=ಮನಸ್ಸು/ಚಿತ್ತ; ಸಟೆ=ಸುಳ್ಳು/ಹುಸಿ/ಇರುವುದನ್ನು ಇಲ್ಲವೆಂದು, ಇಲ್ಲದ್ದನ್ನು ಇದೆಯೆಂದು ಹೇಳುವುದು; ಬೇಡ+ಅಯ್ಯಾ; ಬೇಡ=ಸಲ್ಲದು/ಕೂಡದು/ಬೇಕಾಗಿಲ್ಲ; ಅಯ್ಯಾ=ಮತ್ತೊಬ್ಬ ವ್ಯಕ್ತಿಯನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಮಾತಿನಲ್ಲಿ ದಿಟ ಮನದಲ್ಲಿ ಸಟೆ=ವ್ಯಕ್ತಿಯು ಬಹಿರಂಗದಲ್ಲಿ ಇತರರ ಮುಂದೆ ಆಡುತ್ತಿರುವ ಮಾತುಗಳಲ್ಲಿ ಸತ್ಯ,ನೀತಿ, ನ್ಯಾಯದ ಸಂಗತಿಗಳು ಕೂಡಿರುತ್ತವೆ. ಆದರೆ ಅದೇ ಸಮಯದಲ್ಲಿ ಆತನ ಅಂತರಂಗದ ಮನದಲ್ಲಿ ಜನಸಮುದಾಯಕ್ಕೆ ಕೇಡನ್ನು ಬಗೆಯುವ ಕಪಟತನದ/ವಂಚನೆಯ ಆಲೋಚನೆಗಳೇ ತುಂಬಿರುತ್ತವೆ/ ವ್ಯಕ್ತಿಯು ಬಾಯಲ್ಲಿ ಒಳ್ಳೆಯದನ್ನು ಹೇಳುತ್ತ, ಮನದೊಳಗೆ ಕೆಟ್ಟದ್ದನ್ನು ಚಿಂತಿಸುತ್ತಿರುವುದು; ಬೇಡವಯ್ಯಾ=ಹೊರಗೊಂದು ಒಳಗೊಂದು ಬಗೆಯ ವರ‍್ತನೆಯು ಸರಿಯಲ್ಲ/ಯೋಗ್ಯವಲ್ಲ;

ವಚನ=ಮಾತು/ನುಡಿ/ಸೊಲ್ಲು; ಕಾಯ=ದೇಹ/ಶರೀರ/ಮಯ್; ಒಂದು+ಆಗದೆ+ಇದ್ದರೆ; ಒಂದಾಗು=ಜತೆಗೂಡು/ಒಂದಾಗಿ ಸೇರು; ಒಂದಾಗದಿದ್ದರೆ=ಜತೆಗೂಡದಿದ್ದರೆ/ಬೇರೆ ಬೇರೆಯಾದರೆ;

ಮನ ವಚನ ಕಾಯ ಒಂದಾಗುವುದು=ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಮಾಡುವ ಆಲೋಚನೆ, ಬಹಿರಂಗದಲ್ಲಿ ಇತರರೊಡನೆ ಆಡುವ ಮಾತು, ದಿನನಿತ್ಯದ ಜೀವನದಲ್ಲಿ ಮಾಡುವ ಕೆಲಸ-ಇವು ಮೂರು ಒಂದೇ ಆಗಿರುವುದು. ಅಂದರೆ ವ್ಯಕ್ತಿಯ ಚಿಂತನೆ, ಮಾತು ಮತ್ತು ಕೆಲಸಗಳು ಒಳಿತಿನ ಸಂಗತಿಗಳಿಂದ ಕೂಡಿರಬೇಕು;

ಕೂಡಲಸಂಗಯ್ಯನ್+ಎಂತು+ಒಲಿವನ್+ಅಯ್ಯಾ; ಕೂಡಲಸಂಗಯ್ಯ=ಬಸವಣ್ಣನ ಮೆಚ್ಚಿನ ದೇವರು; ಎಂತು=ಹೇಗೆ ತಾನೆ/ಯಾವ ರೀತಿ; ಒಲಿ=ಮೆಚ್ಚು/ಒಪ್ಪು/ಪ್ರೀತಿಸು; ಒಲಿವನ್=ಒಲಿಯುವನು/ಮೆಚ್ಚುವನು; ಎಂತೊಲಿವನಯ್ಯಾ=ಹೇಗೆ ತಾನೆ ಒಲಿಯುತ್ತಾನೆ;

ಒಳ್ಳೆಯ ನಡೆನುಡಿಗಳೇ ಶಿವನೆಂದು ಮತ್ತು ಅವನ್ನು ದಿನನಿತ್ಯದ ಬದುಕಿನಲ್ಲಿ ಆಚರಿಸುವುದೇ ಶಿವನ ಪೂಜೆಯೆಂದು ಶಿವಶರಣಶರಣೆಯರು ನಂಬಿದ್ದರು. ಆದ್ದರಿಂದಲೇ ಒಳ್ಳೆಯ ಮನಸ್ಸು, ಒಳ್ಳೆಯ ಮಾತು, ಒಳ್ಳೆಯ ಕೆಲಸವನ್ನು ಮಾಡದ ವ್ಯಕ್ತಿಯನ್ನು ಕೂಡಲಸಂಗಯ್ಯನು ಒಲಿಯುವುದಿಲ್ಲ/ಒಪ್ಪಿಕೊಳ್ಳುವುದಿಲ್ಲವೆಂದು ವಚನಕಾರನು ಹೇಳಿದ್ದಾನೆ.

ಮೃದುವಚನವೆ
ಸಕಲ ಜಪಂಗಳಯ್ಯಾ
ಮೃದುವಚನವೆ
ಸಕಲ ತಪಂಗಳಯ್ಯಾ. (244-29)

ಮೃದು=ಮೆತ್ತಗಿರುವ/ಮೆದುವಾದ/ಇಂಪಾದ/ಕೋಮಲವಾದ; ವಚನ=ಮಾತು/ಸೊಲ್ಲು/ನುಡಿ;

ಮೃದು ವಚನ=ವ್ಯಕ್ತಿಯು ಆಡುವ ಮಾತು ಅದನ್ನು ಕೇಳುವವನ ಮನಸ್ಸಿನಲ್ಲಿ ಅರಿವು , ಒಲವು, ನಂಬಿಕೆ, ಆನಂದವನ್ನು ಮೂಡಿಸುವಂತಿರಬೇಕು. ಆಡುವ ಮಾತುಗಳು ಯಾವುದೇ ರೀತಿಯಲ್ಲಿಯೂ ಕೇಳುಗನ ಮನಸ್ಸನ್ನು ಗಾಸಿಗೊಳಿಸಿ ಸಂಕಟ/ನೋವು/ಅಪಮಾನದಿಂದ ಮುದುಡಿಕೊಳ್ಳುವಂತೆ ಇರಬಾರದು;

ಸಕಲ=ಎಲ್ಲವನ್ನು ಒಳಗೊಂಡಿರುವುದು/ಸಮಗ್ರವಾದುದು; ಜಪಂಗಳ್+ಅಯ್ಯಾ; ಜಪ=ದೇವರ ಹೆಸರನ್ನು/ದೇವರನ್ನು ಮಹಿಮೆಯನ್ನು ಕೊಂಡಾಡುವ ನುಡಿಗಳನ್ನು ಮತ್ತೆ ಮತ್ತೆ ನಿರಂತರವಾಗಿ ಉಚ್ಚರಿಸುತ್ತಿರುವುದು; ಜಪಂಗಳ್=ಜಪಗಳು; ತಪಂಗಳ್+ಅಯ್ಯಾ; ತಪ=ದೇವರ ಒಲವನ್ನು ಗಳಿಸಿಕೊಳ್ಳುವುದಕ್ಕಾಗಿ/ದೇವರ ಕರುಣೆಗೆ ಪಾತ್ರರಾಗುವುದಕ್ಕಾಗಿ ದೇವರ ಹೆಸರನ್ನು ಒಂದೇ ಸಮನೆ ಬಾಯಲ್ಲಿ ಉಚ್ಚರಿಸುತ್ತ ಇಲ್ಲವೇ ಮನದಲ್ಲಿ ನೆನಪಿಸಿಕೊಳ್ಳುತ್ತ ಅನ್ನ ಆಹಾರಗಳನ್ನು ತೊರೆದು ದೇಹವನ್ನು ಬಹುಬಗೆಯ ದಂಡನೆಗಳಿಗೆ ಗುರಿಮಾಡುವುದು;

ದಿನನಿತ್ಯದ ಜೀವನದ ವ್ಯವಹಾರಗಳಲ್ಲಿ ಸಹಮಾನವರೊಡನೆ ಜತೆಗೂಡಿ ಬಾಳುವಾಗ ವ್ಯಕ್ತಿಯು ಆಡುವ ನುಡಿಗಳು ಬೇರೆಯವರನ್ನು ಮುದಗೊಳಿಸುವಂತಿರಬೇಕೆ ಹೊರತು ನೋಯಿಸಿ ಗಾಸಿಗೊಳಿಸುವಂತಿರಬಾರದು. ವ್ಯಕ್ತಿಯು ಆಡುವ ಒಳ್ಳೆಯ ಮಾತುಗಳು ಎಲ್ಲಾ ಬಗೆಯ ಜಪತಪಗಳ ಆಚರಣೆಗೆ ಸಮನಾದುದು ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು.

ಲೋಕದ ಡಂಬಕರ ಮಾತು ಬೇಡ.(608-56)

ಲೋಕ=ಜಗತ್ತು/ಪ್ರಪಂಚ; ಡಂಬಕ=ಮೋಸಗಾರ/ವಂಚಕ/ಕಪಟಿ; ಮಾತು=ನುಡಿ/ಸೊಲ್ಲು; ಲೋಕದ ಡಂಬಕರ ಮಾತು= ದೇವರು/ದರ‍್ಮದ ಹೆಸರಿನಲ್ಲಿ ನೂರೆಂಟು ಬಗೆಯ ಕಟ್ಟುಕತೆಗಳನ್ನು ಕಟ್ಟಿ, ಜನರನ್ನು ಮಾತಿನಿಂದಲೇ ಮರಳುಮಾಡಿ, ಜನರನ್ನು ವಂಚಿಸುವವರು ಆಡುವ ಮಾತು;

ಬೇಡ=ಬೇಕಾಗಿಲ್ಲ/ಅಗತ್ಯವಿಲ್ಲ/ಸಲ್ಲದು/ಕೂಡದು;

ವಂಚಕರ/ಕಪಟಿಗಳ ಮಾತುಗಳಿಗೆ ಮರುಳಾಗಬಾರದು. ನಿಜ ಜೀವನದಲ್ಲಿ ಕಾರ‍್ಯರೂಪಕ್ಕೆ ಬಾರದ ಬರಿಮಾತುಗಳನ್ನು ನಂಬಬಾರದು.

( ಚಿತ್ರಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: