ಕವಿತೆ: ಕೈಗೊಂಬೆ

– ವೆಂಕಟೇಶ ಚಾಗಿ.

ಕತ್ತಿಗೆ ಎಳ್ಳಶ್ಟೂ
ನೋವಾಗುತ್ತಿಲ್ಲ
ಕತ್ತುಗಳ ಕತ್ತರಿಸಿದಶ್ಟು
ಮತ್ತೆ ಮತ್ತೆ ಸವೆದು
ಚೂಪಾಗಿ ಹೊಳೆಯುತ್ತಿದೆ
ಮತ್ತಶ್ಟು ಮಗದಶ್ಟು
ಕತ್ತುಗಳ ಕತ್ತರಿಸಲು

ಕತ್ತಿಗೂ ಗೊತ್ತು
ಕತ್ತು ಕತ್ತರಿಸುವುದು
ತನ್ನ ಕೆಲಸವೆಂದು
ತನ್ನ ಹಿಡಿದ ಕೈಗಳ
ಕೈಗೊಂಬೆ ತಾನೆಂದು
ಕತ್ತರಿಸಿದ ಕತ್ತಿನ ನೋವು
ಹತ್ತಿರದಲಿ ನೋಡಿದರೂ
ಗೊತ್ತು, ತಾನು ಬೆತ್ತಲು ಎಂದು

ಪಾಪ ಪುಣ್ಯಗಳ ಲೆಕ್ಕ
ಗೊತ್ತಿಲ್ಲದಶ್ಟು ಅನಕ್ಶರಸ್ತ
ಮತ್ತಾರೋ ತುತ್ತಿಗಾಗಿ
ಆಡಿಸುವಾತನಿಗೆ
ತಾನೆಂದೂ ದತ್ತು
ಕತ್ತುಗಳಿಗೆ ಮುತ್ತಿತ್ತು
ಕಳೆಯುವುದು ಹೊತ್ತು

ಬತ್ತಿ ಬರಡಾಗಿರುವ
ನೆಲದ ಜೀವಗಳಿಗೆ
ಉತ್ತಿದ ಬಡಕಲು
ಮೂಳೆಗಳಿಂದ
ಒಂದಿಶ್ಟು ಕಾಸು ಕೊಡಿಸುವ
ಪಾಪದ ಕೆಲಸ
ಆಪತ್ತು ವಿಪತ್ತುಗಳ
ಅರಿವಿಲ್ಲದ ದುಕ್ಕ

ನೆತ್ತರ ಮರೆತರೆ
ಜಗವು ತನ್ನ ಮರೆತಂತೆ
ಬೆತ್ತಲು ಬದುಕಿಗೆ
ರಕ್ತದೋಕುಳಿಯ ಸೊಬಗು
ಸುಮ್ಮನಿರೆ ಕತ್ತಿಗೂ ಕೊನೆ
ತುಕ್ಕು ಹಿಡಿಯುತ
ಮತ್ತೆ, ಮಣ್ಣಲಿ ಮಣ್ಣಾಗುತ

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: