ಸಂಬಂದಗಳನ್ನು ಪರೀಕ್ಶಿಸಬಾರದು!
“ಸಂಬಂದ”ವೆಂಬುವುದನ್ನು ಪ್ರೀತಿ ಮತ್ತು ನಂಬಿಕೆಯ ಬುನಾದಿ ಮೇಲೆ ಕಟ್ಟಿರುವಂತದ್ದು. ಒಂದು ಸಂಬಂದ ರೂಪುಗೊಂಡ ಮೇಲೆ ಪ್ರೀತಿ, ನಂಬಿಕೆಯ ಜೊತೆ ಹೊಂದಾಣಿಕೆ ಕೂಡ ಮುಕ್ಯ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಗಟನೆಗಳು ಪ್ರೀತಿ, ನಂಬಿಕೆಗಳನ್ನು, ಹೊಂದಾಣಿಕೆಗಳನ್ನು ಕಡಿಮೆಮಾಡಿ, ಅಪನಂಬಿಕೆ, ಅಸಹಕಾರ, ಸಂಶಯಗಳನ್ನು ಜಾಸ್ತಿ ಮಾಡಿಬಿಡುತ್ತವೆ. ಆದರೆ ಹಾಗಂತ ಕೆಲವು ಸಂಬಂದಗಳಿಗೆ ಪೂರ್ಣ ವಿರಾಮ ಕೊಡಲು ಬರುವುದಿಲ್ಲ. ಕ್ಶಣಿಕ ಜೀವನದಲ್ಲಿ, ಸಂಬಂದಗಳಿಗೆ ತಿಲಾಂಜಲಿ ಇಟ್ಟು ಜೀವನ ನಡೆಸಿದರೆ ಏನು ಪ್ರಯೋಜನ?
ಗಂಡ ಹೆಂಡತಿಯ ಸಂಬಂದವನ್ನೇ ತೆಗೆದುಕೊಳ್ಳಿ. ಹೊಸದಾಗಿ ಮದುವೆಯಾದ ದಂಪತಿಗಳಲ್ಲಿ ಪ್ರೀತಿಗೇನು ಕೊರೆತೆ ಇರೋದಿಲ್ಲ ಬಿಡಿ. ಆದರೆ ಬೆಳೆಯಬೇಕಾಗಿರೋದು ನಂಬಿಕೆ ಹಾಗು ಹೊಂದಾಣಿಕೆ. ಆ ನಂಬಿಕೆಯ ಜಾಗವನ್ನು ಸಂಶಯ ಅವರಿಸಿಕೊಂಡ್ರೆ, ಅಲ್ಲಿ ಹೊಂದಾಣಿಕೆಯ ಕೊರತೆ ಕಂಡುಬರುತ್ತದೆ. ಗಂಡಿಗಿಂತ ಹೆಣ್ಣು ತುಂಬಾ ಸೂಕ್ಶ್ಮಮನಸ್ಸಿನವಳು. ಅದಕ್ಕೆ ವಿರುದ್ದ ಸ್ವಬಾವ ಗಂಡಿನದು. ಎಶ್ಟೋ ಬಾರಿ ಗಂಡು ತನ್ನ ಮನದನ್ನೆಯ ಮನಸ್ಸನ್ನು ಅರಿಯುವಲ್ಲಿ ವಿಪಲನಾಗುತಾನೆ. ಸೂಕ್ಶ್ಮಗಳು ಅವನಿಗೆ ಸುಲಬವಾಗಿ ಅರ್ತವಾಗೋದಿಲ್ಲ. ಹೆಣ್ಣು ತನ್ನ ಅರೋಗ್ಯ ಏರುಪೇರಾಗಿದ್ರು ಅದನ್ನು ಹೇಳಿಕೊಳ್ಳಲ್ಲ. ಹಾಗಂತ ವಿರಾಮವನ್ನು ಕೂಡ ತೆಗೆದುಕೊಳ್ಳದೆ ತನ್ನ ದಿನ ನಿತ್ಯದ ಕೆಲಸಕಾರ್ಯಗಳನ್ನು ಪೂರೈಸುತ್ತಾಳೆ. ಆದರೆ ತನ್ನ ಆರೋಗ್ಯದ ಬಗ್ಗೆ ತನ್ನ ಪತಿ ವಿಚಾರಿಸಬೇಕೆಂದು ಬಯಸುತ್ತಾಳೆ. ಕೆಲಸ ಮುಗಿಸಿ ಮನೆಗೆ ಬಂದ ಪತಿ ತನ್ನ ಕಚೇರಿಯಲ್ಲಿ ನಡೆದ ಯಾವುದೊ ವಿಶಯದ ಬಗ್ಗೆ ಹೆಂಡತಿಯ ಬಳಿ ಹೇಳತೊಡಗುತ್ತಾನೆ. ಆದರೆ ಮೊದಲೇ ಅನಾರೋಗ್ಯದಿಂದ ಇರುವ ಪತ್ನಿಗೆ ಅದನ್ನು ಕೇಳುವಶ್ಟು ತಾಳ್ಮೆ ಇರುವುದಿಲ್ಲ. ಆದರೂ ತನ್ನ ಅನಾರೋಗ್ಯವನ್ನು ಗಂಡನ ಬಳಿ ಹೇಳಿಕೊಳ್ಳದೆ ಅವನಾಗಿಯೇ ಬಂದು ವಿಚಾರಿಸಬೇಕೆಂದು ಬಯಸುತ್ತಾಳೆ. ಸೂಕ್ಶ್ಮ ಅರಿಯಾದ ಪತಿಗೆ ಇದು ಅರ್ತವಾಗಲ್ಲ. ಇವಳಿಗೆ ನನ್ನ ಮಾತನ್ನು ಕೇಳಲು ಇಶ್ಟವಿಲ್ಲ ಎಂದು ಅವನು ಕೋಪಗೊಳ್ಳುತ್ತಾನೆ. ಇಲ್ಲಿ ಅವನನ್ನು ಪರೀಕ್ಶೆಗೆ ಒಡ್ಡದೆ ತನಗೆ ಅನಾರೋಗ್ಯವಾಗಿದೆ ಎಂದು ಹೆಂಡತಿ ಅವನ ಬಳಿ ಹೇಳಿದ್ರೆ ಕಂಡಿತವಾಗಲೂ ಅವನು ಕಾಳಜಿ ವಹಿಸುತಿದ್ದ. ಅವನಾದರೂ ಅಶ್ಟೇ, ಮನೆಗೆ ಬಂದಾಗ ಮೊದಲು ಪತ್ನಿ ಏಕೋ ಇಂದು ಸಪ್ಪೆ ಇದ್ದಾಳೆ, ಏನಾಯಿತು ಇವಳಿಗೆ ಅಂತ ವಿಚಾರಿಸಿದರೆ ಅಲ್ಲಿ ತಪ್ಪು ತಿಳುವಳಿಕೆ ಮೂಡಲು ಆಸ್ಪದವಿರುವುದಿಲ್ಲ.
ಯಾವುದೇ ಸಂಬಂದ ತೆಗೆದುಕೊಳ್ಳಿ. ಅಲ್ಲಿ ಹೊಂದಾಣಿಕೆ ಮುಕ್ಯ . ಹೊಂದಾಣಿಕೆ ಮೂಡಬೇಕಾದ್ರೆ ತ್ಯಾಗ ಕೂಡ ಅಶ್ಟೇ ಅಗತ್ಯ. ಪರಸ್ಪರ ಅಬಿಪ್ರಾಯ ಬೇದ ಇರುವುದು ಸಹಜ. ಪ್ರತಿಯೊಬ್ಬನ ಯೋಚನಾ ಲಹರಿ ಬೇರೆ ಬೇರೆ ಯಾಗಿರುತ್ತದೆ. ಆದರೂ ಒಂದು ಕುಟುಂಬದ ಬೆಳವಣಿಗೆಯಲ್ಲಿ ಪ್ರೀತಿ ವಿಶ್ವಾಸ ಮುಕ್ಯವಾಗಿರುತ್ತೆ. ಅಂತ ಸಂದರ್ಬದಲ್ಲಿ ಸಂಬಂದಗಳನ್ನು ಪರೀಕ್ಶೆಗೊಡ್ಡುವುದು ತುಂಬಾ ಅಪಾಯಕಾರಿ. ಅತ್ತೆ ಸೊಸೆ ಸಂಬಂದವೇ ತೆಗೆದುಕೊಳ್ಳಿ. ತಪ್ಪುಗಳು ಸಹಜ. ಅದು ಅತ್ತೆಯದಾಗಿರಬಹುದು ಅತವಾ ಸೊಸೆಯದಾಗಿರಬಹುದು! ಆದರೆ ಬದುಕಬೇಕು ಜೊತೆ ಜೊತೆಯಲ್ಲೇ. ಹೀಗಿರುವಾಗ ಅತ್ತೆ ತನ್ನ ಸೊಸೆಯ ಬಗ್ಗೆ , ತಮ್ಮ ಸಂಬಂದದ ಬಗ್ಗೆ ಮೂರನೆಯವರ ಬಳಿ ಮಾತನಾಡುವುದು ಸಂಬಂದವನ್ನು ಪರೀಕ್ಶೆಗೆ ಒಡ್ಡಿದಂತೆ. ಇದೆ ಮಾತು ಸೊಸೆಗೆ ಕೂಡ ಅನ್ವಯವಾಗುತ್ತೆ. ಆ ಮೂರನೆಯವರ ಬಾಯಿಂದ ಇವರ ಕಿವಿಗೆ ಈ ಮಾತುಗಳು ಬಿದ್ದಾಗ ಸಂಬಂದ ಸಹಜವಾಗಿರಲು ಹೇಗೆ ಸಾದ್ಯ!
ಸ್ನೇಹ ಸಂಬಂದಗಳನ್ನೇ ತೆಗೆದುಕೊಳ್ಳಿ. ಪರಸ್ಪರ ಎಶ್ಟೋ ಬಿನ್ನಾಬಿಪ್ರಾಯಗಳಿರುತ್ತೆ. ಆದರೂ ಕೆಲವೊಂದು ಸಮಾನ ಮನಸ್ಕ ವಿಚಾರಗಳು ಸ್ನೇಹವನ್ನು ಗಟ್ಟಿಗೊಳಿಸಿರುತ್ತೆ. ಆದರೆ ಸ್ನೇಹಿತರ ನಡುವೆ ಹುಳಿ ಹಿಂಡುವವರಿಗೇನು ಕೊರತೆಯಿಲ್ಲ ಈ ಪ್ರಪಂಚದಲ್ಲಿ. ಇದು ನಿಜವಾಗ್ಲೂ ಸ್ನೇಹ ಸಂಬಂದಕ್ಕೆ ಒಡ್ಡುವ ಒಂದು ಕಟಿಣ ಪರೀಕ್ಶೆಯೇ ಸರಿ. ಆದರೆ ಸಂಬಂದ ಉಳಿಯಬೇಕಾದ್ರೆ ನಾವು ಕೆಲವೊಂದು ಕಹಿಯನ್ನು ನಮ್ಮೊಳಗೇ ನುಂಗಿಕೊಂಡು ಮರೆತುಬಿಡಬೇಕಾಗುತ್ತದೆ. ಇಲ್ಲವೇ ಸಂಬಂದವೇ ನಶಿಸಿ ಹೋಗಿಬಿಡುತ್ತೆ. ಬಾಲ್ಯದಲ್ಲಿ ನಡೆದ ಒಂದು ಗಟನೆ ನನಗೆ ನೆನಪು ಬರುತ್ತದೆ. ಒಬ್ಬ ಒಳ್ಳೆ ಸ್ನೇಹಿತ. ಯಾವಾಗ್ಲೂ ಜೊತೆ ಜೊತೆಯಲ್ಲೇ. ಯಾವಾಗ್ಲೋ ಒಮ್ಮೆ ಕ್ರಿಕೆಟ್ ಆಡುವಾಗ ನಡೆದ ಒಂದು ಸಣ್ಣ ಜಗಳ. ಅದಕ್ಕೆ ಉಳಿದವರಿಂದ ಉಪ್ಪು ಕಾರ ಬೇರೆ. ಯಾವುದು ಸರಿ ಯಾವುದು ತಪ್ಪು ಎಂದು ನಿರ್ದರಿಸಲಾಗದ ಪ್ರಾಯ. ಪರಸ್ಪರ ಮಾತು ಬಿಟ್ವಿ . ವರುಶ ಕಳೆಯಿತು ಇಪ್ಪತ್ತೈದು . ಕಳೆದು ಕೊಂಡದ್ದು ಸ್ನೇಹವನ್ನು ಅದು ಕೂಡ ಬಾಲಿಶವಾದ ವಿಚಾರಕ್ಕೆ. ಈಗ ಪರಸ್ಪರ ಮಾತುಕತೆ ಇದೆಯಾದ್ರೂ ಮೊದಲಿದ್ದ ಆತ್ಮೀಯತೆ ಇಲ್ಲ. ನಾವು ನಮ್ಮ ಸ್ನೇಹವನ್ನು ಪರೀಕ್ಶೆಗೆ ಒಡ್ಡದಿದ್ದಿದ್ರೆ! ಈಗ ಯೋಚಿಸಿ ಏನು ಪ್ರಯೋಜನ ಅಲ್ವೇ!
ಕೆಲವೊಮ್ಮೆ ನಮಗೆ ಗೊತ್ತಿರುತ್ತೆ . ನಮ್ಮ ಆತ್ಮೀಯರೇ , ತುಂಬಾ ಬೇಕಾದವರೇ ತಪ್ಪು ಮಾಡುತ್ತಿದ್ದಾರೆ ಅಂತ. ಹಾಗಂತ ಅವರನ್ನು ತಿದ್ದಲು ಕೂಡ ಸಾದ್ಯವಿಲ್ಲ . ಹುಟ್ಟು ಗುಣ ಸುಟ್ಟರು ಹೋಗದು ಅಂತ ಹೇಳ್ತಾರಲ್ವ ಹಾಗೆ! ಹಾಗಂತ ಸಂಬಂದಗಳನ್ನು ಕೊನೆಗೊಳಿಸಲು ಸಾದ್ಯಾನೂ ಇಲ್ಲ. ನಿಮ್ಮವರನ್ನು ಹಾಗೆ ಬಿಟ್ಟುಬಿಡಲು ಸಾದ್ಯ ಇಲ್ಲ ಅಲ್ಲವೇ! ಇಂತವರು ತುಂಬಾ ಸಲ ನಮ್ಮ ಸಂಬಂದವನ್ನು ಪರೀಕ್ಶೆಗೆ ಒಡ್ಡುತ್ತಾರೆ. ಹೆಚ್ಚಿನ ಸಂದರ್ಬದಲ್ಲಿ ದ್ರುತರಾಶ್ಟ್ರನಂತೆ ನಾವು ಕಣ್ಣಿಗೆ ಬಟ್ಟೆ ಕಟ್ಟಿ, ಕಿವಿ ಮುಚ್ಚಿಕೊಂಡು ಏನು ನೋಡಿರದಂತೆ ಅತವಾ ಏನು ಕೇಳಿರದಂತೆ ನಟಿಸಬೇಕಾಗುತ್ತದೆ. ಸಂಬಂದಗಳು ಪರೀಕ್ಶೆಗೆ ಒಡ್ಡಿದಂತಾ ಸಂದರ್ಬದಲ್ಲಿ , ಅದರ ಉಳಿಯುವಿಕೆಗಾಗಲಿ ನಾವು ಕೆಲವೊಮ್ಮೆ ಹೀಗೆ ಮಾಡಬೇಕಾಗುತ್ತದೆ. ನನ್ನ ಬಳಿ ಯಾರಾದರೂ ನಮ್ಮ ಆತ್ಮೀಯರ ಬಗ್ಗೆ ದೂರು ಹೇಳಲು ಆರಂಬಿಸಿದಾಗ ನಾನು ಹೇಳುವುದು ಒಂದೇ ಮಾತು, ‘ದಯವಿಟ್ಟು ನನ್ನ ಮನಸ್ಸನ್ನು ಕೆಡಿಸಬೇಡಿ. ಏನಾದ್ರು ಒಳ್ಳೆ ವಿಚಾರವಾಗಿದ್ರೆ ಮಾತ್ರ ತಿಳಿಸಿ. ಏಕೆಂದ್ರೆ ನೀವು ಯಾರ ಬಗ್ಗೆ ಹೇಳ್ತಾ ಇದ್ದಿರೋ ಅವರು ತಪ್ಪು ಮಾಡುತಿದ್ದಾರೆ ಅಂತ ನಂಗೆ ಗೊತ್ತು! ಆದರೆ ಅವರು ನನ್ನ ಮಾತನ್ನು ಕೂಡ ಕೇಳೋದಿಲ್ಲ. ಹೀಗಿರುವಾಗ ಇನ್ನೂ ಹೆಚ್ಚಿನ ನಕಾರತ್ಮಕ ವಿಚಾರಗಳನ್ನು ಕೇಳಿಕೊಂಡು ನನ್ನ ಮನಸ್ಸನ್ನು, ನನ್ನ ಸಂಬಂದವನ್ನು ನಾನ್ಯಾಕೆ ಕೆಡಿಸಿಕೊಳ್ಳಲಿ. ನಿಮ್ಮಿಂದ ಸಾದ್ಯವಾದರೆ ನೀವೇ ಕುಳಿತುಕೊಂಡು, ನೇರ ಮಾತುಕತೆ ನಡೆಸಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸ್ಕೊಳ್ಳಿ’ ಅಂತ.
ಸಂಬಂದಗಳನ್ನು ಪರೀಕ್ಶೆಗೆ ಒಡ್ಡಿದಶ್ಟೂ ಅದು ಹಾಳಾಗುತ್ತದೆಯೇ ವಿನಾ ಸರಿಯಾಗಲಾರದು! ಪರಸ್ಪರ ಅನುಸರಿಸಿಕೊಂಡು ಹೋಗಬೇಕಾದ್ರೆ ಎಶ್ಟೋ ತಪ್ಪುಗಳನ್ನು ನಾವು ಕಡೆಗಣಿಸಬೇಕಾಗುತ್ತೆ. ಹಾಗಂತ ಪ್ರತಿಯೊಂದು ಸಂಬಂದಗಳಲ್ಲೂ ಇದೇ ಮಾತು ಅನ್ವಯವಾಗುತ್ತೆ ಅಂತ ಹೇಳಲು ಬರಲ್ಲ. ಒಂದು ಸಂಬಂದ ನಿಮ್ಮನ್ನು ನಾಶಮಾಡಿಯೇ ತೀರಬೇಕು ಎಂದು ಪ್ರಯತ್ನಿಸುವಾಗ ನಾವು ಕಟಿಣರಾಗಿ ಆ ಸಂಬಂದವನ್ನು ಕಳಚಿಕೊಳ್ಳಬೇಕಾಗುತ್ತದೆ. ಆದರೆ ಸಣ್ಣ ಪುಟ್ಟ ವಿಚಾರಗಳನ್ನು, ಕಡೆಗಣಿಸಬಹುದಾದ ವಿಶಯಗಳನ್ನು, ಆತ್ಮೀಯ ಸಂಬಂದಗಳನ್ನು ಚಿಕ್ಕ ವಿಚಾರಗಳಿಗೆ ಪರೀಕ್ಶೆಗೆ ಒಡ್ಡಬಾರದು ಎಂಬುದು ನನ್ನ ಅನಿಸಿಕೆ.
(ಚಿತ್ರಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು