ಒಂದು ಕಾಲ್ಪನಿಕ ಬರಹ

– ವಿನಯ ಕುಲಕರ‍್ಣಿ.

ಕಲ್ಪನೆ imagination

ಕೆಲಸ ಮುಗಿದ ಹೆಮ್ಮೆ ಆತನ ಮುಕದ ನೆಮ್ಮದಿಯಲ್ಲಿತ್ತು. ನಿಜವಾದ ಸಂತಸ ಹುಟ್ಟುವುದೂ ಅಲ್ಲೆಯೇ. ನಮ್ಮೂಲಕವಾಗಿ ಸ್ರುಶ್ಟಿ ಪಡೆದಂತಹ ಯಾವುದೇ ವಸ್ತುವಿಗೆ ಒಂದು ನಿರ‍್ದಿಶ್ಟ ರೂಪ ಬಂದಾಗ ವರ‍್ಶದ ದ್ಯಾನದ ಹಾದಿ, ದಿನಗಳು ಉರುಳಿದ ಅರಿವು ಅಶ್ಟಕ್ಕಶ್ಟೇ. ಕಡೆಗೂ ಬಂದಿದೆಇದೆ ಸರಿ ಸಮಯ ಇನ್ನೂ ನಿಂತರೆ ಇನ್ನಶ್ಟು ತೊಡಕುಗಳು. ಅವನಿಗೆ ಅರಮನೆಯ ಹಿರಿಜನರ ಪರಿಚಯ ಚೆನ್ನಾಗೇ ಇದೆ. ಸೌಂದರ‍್ಯವನ್ನೆಲ್ಲ ಕೈಯ ಬಿಗಿ ಮುಶ್ಟಿಯಲ್ಲಿ ಹಿಡಿದು ಕುಶಿಪಡುವ ಜನ. ಒಂದರ ಅಂತ್ಯ ಇನ್ನೊಂದು ಯೋಚನೆಗೆ ಯೋಜನೆಗೆ ಆದಿ. ಅಲ್ಲದೇ ಮೊದಲೇ ನಿರ‍್ದರಿಸಿದಂತೆ ಸದ್ಯದ ಪರಿಸ್ತಿತಿಗೆ ಇದೆ ಕೊನೆ ಅದು ನಡೆಯಬೇಕೆಂದರೆ ಅವನು ಅಲ್ಲಿ ನಿಂತಿರುವುದು ಯಾವ ರೀತಿಯಿಂದಲೂ ಉಪಯೋಗವಾಗಲಿಕ್ಕಿಲ್ಲ. ದೇಹದ ಬಾರ ಹೊರುವುದು ಒಂಚೂರು ಕಶ್ಟವಾದರೆ ಪರಿಚಯದ ಮೂಲಕವಾಗಿ ಬೆಳೆದು ಬೆಸೆದುಕೊಂಡ ಸುತ್ತಲಿನ ವಾತಾವರಣ ತೊರೆದು ಕಂಡ ದಿಕ್ಕಿಗೆ ಹೆಜ್ಜೆಯಿಡುವುದು ಇನ್ನೂ ಕಶ್ಟ.

ಆದರೂ ತುಂಬಾ ಯೋಚಿಸಿ ಇಡಬೇಕಾದ ಹೆಜ್ಜೆ. ಹೊಸದನ್ನು ಕಾಣುವ ಹಂಬಲ ಸದ್ಯಕ್ಕೆ ಕಂಡಿದ್ದರ ಬೆಲೆಯನ್ನ ಕಡಿಮೆ ಮಾಡಿತ್ತು .ವ್ಯಾಮೋಹಕ್ಕೆ ಬಲಿಯಾಗಿ ತ್ರುಪ್ತಿಯನ್ನೇ ಮರಳಿ ಮರಳಿ ಬೇಟಿ ಮಾಡುತ್ತಿದ್ದರೆ ಇರುವಿಕೆಯ ಅರ‍್ತವೂ ದಿನೇ ದಿನೇ ಇಳಿಯಬಹುದು. ತೊಂದರೆಯೇನೂ ನಿರ‍್ದಿಶ್ಟವಾಗಿ ಇದೆ ಎಂದಲ್ಲ, ಆದರೆ ಮುಂದೊಂದು ದಿನ ದೊಡ್ಡದಾಗಿ ಕಾಣಬಹುದಾದ್ದರ ಬಗ್ಗೆ ಈಗಿನಿಂದಲೇ ಕಾಳಜಿ. ಏನು ಇಲ್ಲದೆ ವ್ಯತೆ ಪಡುವ ಸ್ತಿತಿಗೆ ಬಂದು ಕೊರಗುವ ಬದಲು, ಅದನ್ನು ನಾವೇ ಮೈ ಮೇಲೆ ಎಳೆದುಕೊಂಡರೆ ಇನ್ನೂ ಸುಲಬ. ಯಾತನೆ ಇನ್ನು ಅಲ್ಲೆಲ್ಲೋ ಅಲೆಯುತ್ತಿರುವಾಗ ನಾವೇ ಅದರ ಮುಂದೆ ಹೋಗಿ ನಿಂತು ಅವಸರ ಪಡುವುದು ಎಂತ ಹುಚ್ಚಿನ ಕೆಲಸ. ಅವನ ಕಡೆಯ ಆಸೆಯೂ ಅದಶ್ಟೇ ಆದಂತಿತ್ತು. ದೇಹಕ್ಕೆ ವಯಸ್ಸಾಗಿ ದಡ ಸೇರುವುದರ ಮೇಲಿನ ನಂಬಿಕೆಯಲ್ಲ, ಹುಚ್ಚು ಆಸೆಗಳ ಮೂಟೆ ಹೊತ್ತು ಬಾರವನ್ನು ಹೆಚ್ಚಿಸುತ್ತಲೇ ಹೋಗುವ ಪ್ರಕ್ರಿಯೆಗೆ ವಯಸ್ಸಾಗಬೇಕು ಮುಪ್ಪು ಬರಬೇಕು. ಏಕಾಗ್ರತೆಯಲ್ಲಿ ದೊರಕದ್ದನ್ನು ಇದ್ದುದನ್ನೆಲ್ಲ ತೊರೆಯುತ್ತ ಹುಡುಕುವ ಹಾದಿಗೆ ಅವನ ಮನಸ್ಸು ಮುಕಮಾಡಿತ್ತು.

ಕತ್ತಲೆಯಲ್ಲೇ ನಡೆದ ಒಂದಿಶ್ಟು ದೂರ, ಒಂದೇ ದಿಕ್ಕಿನಲ್ಲಿ ಬಾಣ ಬಿಟ್ಟಶ್ಟೇ ನಿಕರವಾಗಿ. ದಾರಿಯ ಅಡೆತಡೆಗಳು ಪಕ್ಕಕ್ಕೆ ಸರಿದು ಮರ‍್ಯಾದೆ ತೋರಿದವು. ಒಂದು ಲೆಕ್ಕದಲ್ಲಿ ಕೆತ್ತಿದ ಎಲ್ಲ ಶಿಲ್ಪಗಳ ತಂದೆ ಈತನೇ. ಅವೆಲ್ಲ ಅವನ ಸಾದನೆಯ ಸಾಕ್ಶಿಗಳೇ. ಒಂದೊಂದು ಶಿಲ್ಪವೂ ವಿವಿದಾಲಂಕಾರವನ್ನ ಬಂಗಿಗಳನ್ನ ಅಪ್ಪಿ ಮೈ ತಳೆದಿವೆ. ಅಶ್ಟೊಂದು ಕಾಲ್ಪನಿಕತೆ ನೈಜತೆಯ ಸಂಪೂರ‍್ಣ ಅರಿವಿರುವವನಿಗೆ ಮಾತ್ರ. ಮಾತುಗಳಲ್ಲಿ ವರ‍್ಣಿಸಿದ್ದರೂ ಕಡೆಗೊಂದು ದಿನಕ್ಕೆ ಅದು ನಿಂತೀತು. ಆದರೆ ಕಲಾಕ್ರುತಿಗಳ ರೂಪದಿಂದ ಮಾತ್ರ ಹೊಸ ಹೊಸ ಅರ‍್ತಗಳು ನೋಡಿದ ಪ್ರತಿನೋಟಕ್ಕೆ ಪ್ರಶ್ನೆಗಳಾಗಿ ಕಂಡವು. ಪುಣ್ಯಕ್ಕೆ ಅವನ ಮೊದಲ ಆಕ್ಶೇಪಣೆ ಅದೇ ಆಗಿತ್ತು. ಮುಗಿವವರೆಗೆ ನೋಡುವ ಅವಕಾಶ ಯಾರಿಗೂ ಇಲ್ಲವೆಂದು. ಜನ ಹೊರಗಿಂದ ಕಟ್ಟಿದ ಗುಡಿ ಕಂಡರೆ ವಿನಹ ಒಳಗಿನ ಕಳೆಯ ಸೌಂದರ‍್ಯ ಇನ್ನು ತೆರೆದುಕೊಳ್ಳುವುದು ಬಾಕಿ ಇತ್ತು. ಮಹಾರಾಜರಿಗೆ ಕುತೂಹಲವೆನಿಸಿದರೂ ಅಪ್ಪಣೆ ನೀಡಿ ಕಾಯುವ ಕಾತರ. ಕಾದರು ಅವರು ಪಾಪ ಅದೆಶ್ಟೋ ದಿನ ಇವನ ದ್ಯಾನಕ್ಕೆ ಅವರ ಮೌನದ ತಾಳ್ಮೆಯ ಮರ‍್ಯಾದೆ.

ಕಡೆಗೆ ಇಂದು ಅವರಿಗೂ ಹೇಳದೆ ಹೊರಟು ನಿಂತ. ಇನ್ನೆರಡು ಹೆಜ್ಜೆ ಇಶ್ಟು ದಿನವಿದ್ದ ಊರಿನ ಚಿತ್ರಣ ಕ್ರಮೇಣ ಅಸ್ಪಶ್ಟವಾಗ ತೊಡಗುತ್ತದೆ. ದೂರ ನಡೆದಂತೆಲ್ಲ ಬಂದನಗಳು ಕಳಚಿಕೊಂಡಂತ ಹಗುರ ಬಾವನೆ. ಏನೋ ಯೋಚಿಸಿ ಊರಿಗೆ ಅಬಿಮುಕವಾಗಿ ಚಪ್ಪಲಿಯನ್ನ ಅಲ್ಲೇಬಿಟ್ಟ. ಅಗೌರವದ ಮಾತಿರಲಿಕ್ಕಿಲ್ಲ ಬಹುಶಹ ಇನ್ನೊಮ್ಮೆ ಬಂದರೆ ಬಳಸಬಹುದೇ ಎಂದಿರಬೇಕು. ಆದರೆ ಬೇರೆಲ್ಲಾದರೂ ಬಿಡಬಹುದಿತ್ತಲ್ಲ ಊರಾಚೆಯ ದಾರಿಯಲ್ಲಿ ಯಾಕೆ ಎಂಬ ಪ್ರಶ್ನೆ ಚಪ್ಪಲಿಯೊಡನೆ ಅಲ್ಲೇ ಉಳಿಯಿತು. ತಿರುಗಿ ಬಿರುಸಾಗಿ ನಡೆಯ ತೊಡಗಿದ್ದವನು ಕಡೆ ಕಡೆಗೆ ಸ್ವಾತಂತ್ರ್ಯವನ್ನ ಅಪ್ಪುತ್ತ ಓಡೋಡುತ್ತ ದಟ್ಟವಾದ ಅರಣ್ಯದಲ್ಲಿ ಮರೆಯಾದ. ಅದರ ಗಾಟು ಅದೇ ತರಹದ್ದೇ ಒಮ್ಮೆ ಮೈ ಹೊಕ್ಕರೆ ಎಲ್ಲವನ್ನು ಮರೆಯಿಸುವಂತದ್ದು. ಅಂತೆಯೇ ಅಶ್ಟು ಸುಂದರ ಕಾಲ ಪ್ರತಿಮೆಗಳನ್ನ ಗುಡಿಯಲ್ಲಿ ಅಂತೆಯೇ ಮೂಟೆ ಮೂಟೆ ಪ್ರಶ್ನೆಗಳನ್ನು ಅದರೊಡನೆ ಗಂಟು ಕಟ್ಟಿ ಅಲ್ಲೇ ಬಿಟ್ಟಿದ್ದ. ಹೋದವ ಹೊರಟ ಆದರೆ ಹಿಂದಿಂದೆಯೇ ಅದೆಶ್ಟೋ ಪ್ರಶ್ನೆಗಳನ್ನ ಪುಟ್ಟ ಪುಟ್ಟ ಮೂರ‍್ತಿಗಳ ಹ್ರುದಯದಲ್ಲಿತ್ತು ಹೋದ. ಅವು ನಾಳೆ ಹೊರಬಂದು ಬಾವನೆಗಳಾಗಿ ವ್ಯಕ್ತವಾಗಲಿಕ್ಕೆ ಇನ್ನು ಶತಮಾನಗಳ ಕಾಯುವಿಕೆ ಸಮಾದಾನ ಅವಶ್ಯಕವಿತ್ತು. ಅಲ್ಲದೆ ಕರಗಿದ ಕಾಲದೊಡನೆ ಅದೆಶ್ಟೋ ಪ್ರಶ್ನೆಗಳೂ ತಮ್ಮ ಪ್ರಾಮುಕ್ಯತೆ ಕಳೆದುಕೊಂಡವು.    

(ಚಿತ್ರ ಸೆಲೆ: pixabay

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.