ರಟೊಂಕಾ ಪಟ್ಟಣದಲ್ಲೊಂದು ಬಯಾನಕ ಮನೆ

–  ಕೆ.ವಿ. ಶಶಿದರ.

ದೆವ್ವದಮನೆ, haunted house

ಬೆಲೋರೆಶಿಯನ್ ರಾಜದಾನಿ ಮಿನ್ಸ್ಕ್ ನಿಂದ ಐದು ಕಿಲೋಮೀಟರ್ ದೂರದಲ್ಲಿ ರಟೊಂಕಾ ಪಟ್ಟಣವಿದೆ. ಇಲ್ಲಿನ ಒಂದು ಬೀದಿಯಲ್ಲಿ ಜನ ಹಗಲಲ್ಲಾಗಲಿ, ರಾತ್ರಿಯಲ್ಲಾಗಲಿ ಓಡಾಡಲು ಹಿಂಜರಿಯುತ್ತಾರೆ. ಅದರಲ್ಲೂ ರಾತ್ರಿಯ ಹೊತ್ತಿನಲ್ಲಿ ಈ ರಸ್ತೆ ಪೂರ‍್ತಿ ನಿರ‍್ಜನವಾಗಿರುತ್ತೆ. ಜನರ ಓಡಾಟ ಪೂರ‍್ತಿ ಸ್ತಗಿತವಾಗಿರುತ್ತೆ. ಈ ರಸ್ತೆಯಲ್ಲಿ ಬೀದಿ ನಾಯಿಗಳ ಕಾಟವಿಲ್ಲ. ಕಳ್ಳಕಾಕರ ಬಯವಿಲ್ಲ. ಮಾಟ ಮಂತ್ರ ಮಾಡುವವರಿಲ್ಲ. ಆದರೂ ಜನರ ಓಡಾಟವಿಲ್ಲ. ಇದಕ್ಕೆ ಮೂಲ ಕಾರಣ ರಸ್ತೆಯಲ್ಲಿರುವ ಆ ಬಯಾನಕ ಮನೆ. ಮನೆಯ ಕಲ್ಲಿನ ಕಾಂಪೌಂಡ್ ನಿಂದ ಹೊರ ಬಂದಿರುವ ಅಸ್ತಿಪಂಜರದಂತಹ ಕೈಗಳು, ಆವರಣದ ಗುಮ್ಮಟಾಕಾರದ ಮೇಲ್ಚಾವಣಿಯನ್ನು ಅಲಂಕರಿಸಿರುವ ವಿವಿದ ಆಕಾರದ, ಬಯ ಹುಟ್ಟಿಸುವ ದೆವ್ವ, ಬೂತಗಳ ಬಯಂಕರ ಬೊಂಬೆಗಳು, ಗುಮ್ಮಟಾಕಾರಕ್ಕೆ ಅಳವಡಿಸಿರುವ ಹತ್ತಾರು ಕಪ್ಪು ತಲೆಬುರುಡೆಗಳು ಇವೆಲ್ಲಾ ಆ ರಸ್ತೆಯಲ್ಲಿ ನಡೆದಾಡುವವರನ್ನು ಬಯಬೀತರನ್ನಾಗಿಸುತ್ತದೆ. ಎಂತಹ ಗಟ್ಟಿ ಗುಂಡಿಗೆಯಿದ್ದವರಿಗೂ ಗುಂಡಿಗೆ ಸಿಡಿಯುತ್ತದೆ. ಅದರ ನೋಟವೇ ಬಯಂಕರ ದುಸ್ಪಪ್ನವಾಗಿದೆ.

ದೆವ್ವದಮನೆ, haunted houseರಟೊಂಕಾದ ಈ ಬಯಾನಕ ಮನೆಯ ಪೋಟೋಗಳು ಇತ್ತೀಚೆಗೆ ಬೆಲೋರಸ್‍ನಲ್ಲಿ ಅತ್ಯಂತ ಹೆಚ್ಚು ಪ್ರಚಲಿತದಲ್ಲಿದ್ದು, ಇದರ ದಿಟ್ಟ ವಾಸ್ತು ವಿನ್ಯಾಸವನ್ನು ತನ್ನ ಮನೆಯ ನಿರ‍್ಮಾಣದಲ್ಲಿ ಅಳವಡಿಸಿಕೊಂಡಿದ್ದಕ್ಕಾಗಿ ಮಾಲೀಕರನ್ನು ಕೆಲವರು ಹೊಗಳಿದ್ದಾರೆ. ಆದರೆ ಈ ಮನೆಯ ಸುತ್ತಾಮುತ್ತ ವಾಸಿಸುತ್ತಿರುವವರಿಗೆ ಇದೊಂದು ಬಿಡಿಸಲಾಗದ ತಲೆನೋವಾದ ಕಾರಣ, ಸ್ತಳೀಯ ಅದಿಕಾರಿಗಳಲ್ಲಿ ದೂರನ್ನು ಸಲ್ಲಿಸಿದ್ದಾರೆ. ಈ ಮನೆಯತ್ತ ನೋಡಿದಾಗ ಕಂಡುಬರುವ ದೆವ್ವದ ಗೊಂಬೆಗಳು, ತಲೆ ಬುರೆಡೆಗಳು, ಹೊರ ಚಾಚಿದ ದೆವ್ವದ ಕೈಗಳು ಮಕ್ಕಳಲ್ಲಿ ಮಾತ್ರವಲ್ಲದೆ ವಯಸ್ಕರಲ್ಲೂ ಸಹ ರಾತ್ರಿ ಹೊತ್ತಿನಲ್ಲಿ ಹೆದರಿಕೆ ಹುಟ್ಟಿಸುತ್ತದೆ ಎಂದು ದೂರಲ್ಲಿ ಉಲ್ಲೇಕಿಸಲಾಗಿದೆ. ಆದರೆ ಅಲ್ಲಿನ ಅದಿಕಾರಿಗಳು ಇದರ ಬಗ್ಗೆ ಕಾನೂನಿನ ರೀತ್ಯ ಕ್ರಮ ಜರುಗಿಸಲು ಕಾನೂನಿನಲ್ಲಿ ಆಸ್ಪದವಿಲ್ಲದ ಕಾರಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಮನೆಯ ಪಕ್ಕದ ಮನೆಯವರು, ಈ ಮನೆಯ ನೋಟವೇ ಬಯಾನಕವಾಗಿದೆ ಎಂದು ದೂರಿತ್ತಿದ್ದಾರೆ. ಮೇಲಿನ ವಿವರದೊಂದಿಗೆ, ಮನೆಯ ಮೇಲ್ಚಾವಣಿಯ ಮೇಲಿರುವ ದೆವ್ವದ ಒಂದು ಗೊಂಬೆಯ ಕೈಲಿರುವ ಬಾಣ ನೇರ ತಮ್ಮ ಮನೆಯ ಕಿಟಕಿಯನ್ನು ಬೇದಿಸುವಂತೆ ಕಾಣುವುದು ಅವರಲ್ಲಿ ಇನ್ನೂ ಹೆಚ್ಚಿನ ಹೆದರಿಕೆಯನ್ನು ಬಯವನ್ನು ಉಂಟುಮಾಡಿದೆ ಎಂದೂ ಸಹ ಅದರಲ್ಲಿ ಸೇರಿಸಿದ್ದಾರೆ. ಅಲ್ಲಿನ ನಿವಾಸಿಗಳ ಪ್ರಕಾರ, ಈ ಬಯಾನಕ ಮನೆಯ ಮಾಲೀಕ ಮನೋರೋಗಿಯಲ್ಲ. ಎಲ್ಲರಂತೆ ಒಬ್ಬ ಸಾಮಾನ್ಯ ಉದ್ಯಮಿ. ಒಂದು ದಶಕದ ಹಿಂದೆ ಈ ಮನೆಯನ್ನು ನಿರ‍್ಮಿಸಲು ಪ್ರಾರಂಬಿಸಿದ. ಮದ್ಯೆ ಎಂಟು ವರ‍್ಶಗಳ ಕಾಲ ನಾಪತ್ತೆಯಾಗಿದ್ದ. ಹಾಗಾಗಿ ಈ ಮನೆ ವಾಸ್ತವಿಕವಾಗಿ ದೆವ್ವದ ಮನೆಯೇ ಆಗಿತ್ತು. ಮತ್ತೆ ವಾಪಸ್ಸು ಬಂದಾತ ನಿಲ್ಲಿಸಿದ್ದಲ್ಲಿಂದ ಮನೆಯ ನಿರ‍್ಮಾಣವನ್ನು ಪುನರಾರಂಬಿಸಿದ. ಪೂರ‍್ಣ ಮುಗಿಯುವುದರೊಳಗೆ ಆತ ಮನೆಗೆ ಮತ್ತಶ್ಟು ಬಯಂಕರ ದೆವ್ವ, ಬೂತದ ಬೊಂಬೆಗಳನ್ನು ಸೇರಿಸಿದ.

ಈ ರೀತಿಯ ವಾಸ್ತುಶಿಲ್ಪ ಎಶ್ಟು ಜನರಿಗೆ ಸಹ್ಯವಾಯಿತೋ ಇಲ್ಲವೋ, ಅವನಿಗಂತೂ ತಿಳಿದಿಲ್ಲ. ಆದರೆ ಕಳ್ಳಕಾಕರಲ್ಲಿ ಎದೆಯಲ್ಲಿ ಬಯವನ್ನು ಹುಟ್ಟಿಹಾಕುವಲ್ಲಿ ಪೂರ‍್ಣ ಸಪಲತೆಯನ್ನು ಕಂಡಿದೆ. ಕತ್ತಲಲ್ಲಿ ತಮ್ಮ ಕೈಚಳಕದ ಕರಾಮತ್ತನ್ನು ತೋರಿಸುವ ಕದೀಮರಲ್ಲೇ ಇದು ಬೀತಿಯನ್ನು ಹುಟ್ಟಿಸಿದೆ ಎಂದರೆ ಇದಕ್ಕೆ ಸರಿಸಾಟಿಯಾದದ್ದು ಬೇರಾವುದೂ ಇಲ್ಲ. ಎಲ್ಲರಲ್ಲೂ ಮನೆಮಾಡಿರುವ ದೆವ್ವ ಬೂತಗಳ ಬಗೆಗಿನ ಮೂಡನಂಬಿಕೆಯನ್ನು ಇದು ತೋರಿಸುತ್ತದೆ.

( ಮಾಹಿತಿ ಮತ್ತು ಚಿತ್ರ ಸೆಲೆ : odditycentral.com, wonderfulengineering.com, homecrux.com, ageekyworld.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *