ಕವಿತೆ: ಹೇಗೆ ಮರೆಯಲಿ ನಿನ್ನ

– ವಿನು ರವಿ.

ಹೇಗೆ ಮರೆಯಲಿ ನಿನ್ನ
ಏನು ಹೇಳಲಿ ಚೆನ್ನ
ನಿನ್ನ ಸ್ನೇಹ ನಿನ್ನ ಮೌನ
ನನ್ನ ಕಾಡಿರುವಾಗ

ನೀನೆಂದು ಏನೂ ಹೇಳದೆ ಹೋದರೂ
ನೀನೆಂದೂ ಏನೂ ಕೇಳದೆ ಹೋದರೂ
ಮದುರ ನೆನಪಾಗಿ ನೀ
ಮನದಲಿ ಉಳಿದಿರುವಾಗ
ಹೇಗೆ ಮರೆಯಲಿ ನಿನ್ನ

ಮಾತು ನೂರು ಮನದೊಳಗೆ
ದಿನಗಳು ಕಳೆದಿವೆ ಮೌನದೊಳಗೆ
ಒಲವು ಮಾತ್ರ ಇನ್ನೂ ಹಾಗೆ
ಹೇಗೆ ಮರೆಯಲಿ ನಿನ್ನ

ನಿನ್ನ ಮುನಿಸು
ನಿನ್ನ ಮನಸು
ನಾಬಲ್ಲೆ ನಲ್ಲ
ನೀನಿತ್ತ ಹೂಮುತ್ತ ಹೊತ್ತ ಕದಪು
ಕೆಂಪಾಗಿ ಕಾಡಿರುವಾಗ
ಹೇಗೆ ಮರೆಯಲಿ ನಿನ್ನ

ಮರೆತೆನೆಂದು ಮನವು ಸುಳ್ಳು ಹೇಳಿದೆ
ದೂರು ಹೇಳಲು ಮನಸು ಬಾರದೆ
ಬಾವದಲೆಗಳ ರಾಗದಿಂಪಿಗೆ ಸಿಲುಕಿರುವಾಗ

ಹೇಗೆ ಮರೆಯಲಿ ನಿನ್ನ
ಹೇಗೆ ಹೇಳಲಿ ಚೆನ್ನ
ನಿನ್ನ ಸ್ನೇಹ ನಿನ್ನ ಮೌನ
ನನ್ನ ಕಾಡಿರುವಾಗ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: