ಇದು ಪಿಜ್ಜಾದ ಕತೆ…
ಜಗತ್ತಿನ ಎಲ್ಲೆಡೆ ತುಂಬಾ ಹೆಸರುವಾಸಿ ಆಗಿರುವ ತಿನಿಸುಗಳಲ್ಲಿ ಪಿಜ್ಜಾ ಎಲ್ಲಕ್ಕಿಂತ ಮೊದಲು ಬರುತ್ತದೆ. ಇಂಡಿಯಾದ ಎಲ್ಲ ದೊಡ್ಡ ಪಟ್ಟಣಗಳಲ್ಲಿ ಈಗ ಪಿಜ್ಜಾ ಸಿಗುತ್ತದೆ. ಜಗತ್ತಿನ ತಿಂಡಿಗಳಲ್ಲಿ ಕರ‍್ನಾಟಕದ ಮಸಾಲೆ ದೋಸೆ ಕೂಡ ತನ್ನ ಜಾಗ ಪಡೆದು ಕೊಂಡಿದೆ! ಈಗ ನಾವು ಹೇಳುತ್ತಿರುವುದು ಪಿಜ್ಜಾದ ಕತೆ. ಪಿಜ್ಜಾ ಹುಟ್ಟಿದ್ದು ಇಟಲಿಯ ನೇಪಲ್ಸಿನ ಕ್ಯಾಂಪೇನಿಯಾ ಊರಿನಲ್ಲಿ. ಇಂದಿಗೂ ಒರಿಜಿನಲ್ ಪಿಜ್ಜಾ ಸಿಗುವುದು ನೇಪಲ್ಸ್ ನಲ್ಲಿ. ಪಿಜ್ಜಾಗಳನ್ನು ಮಾಡುವ ಬಾಣಸಿಗನಿಗೆ ಪಿಜ್ಜಾಯೊಲೋ ಎಂದರೆ ಪಿಜ್ಜಾ ಮಾಡಿಕೊಡುವ ಅಂಗಡಿಗಳಿಗೆ ಪಿಜ್ಜೇರಿಯಾ ಎನ್ನುತ್ತಾರೆ. ಕರ‍್ನಾಟಕದಲ್ಲಿ ಗೆಳೆಯರು ಹುಟ್ಟುಹಬ್ಬದ ಪಾರ‍್ಟಿ ಮಾಡುವಾಗ ಪಿಜ್ಜಾ ತಿನ್ನುತ್ತಾರೆ. ಆದರೆ, ಪಿಜ್ಜಾದ ಹುಟ್ಟೂರಾದ ಇಟಲಿಯಲ್ಲಿ ಇದನ್ನು ಮದುವೆ ಸಮಾರಂಬಗಳಲ್ಲೂ ಕೊಡುತ್ತಾರೆ. ಇಟ್ಯಾಲಿಯನ್ ಮಾತಿನಲ್ಲಿ ಪಿಜ್ಜಾವನ್ನು ಪಿಟ್ಟಾಸಾ ಎಂದು ಕರೆಯುತ್ತಾರೆ.
ಪಿಜ್ಜಾದ ಹಳಮೆ
ಪಿಜ್ಜಾದ ಹುಟ್ಟಿನ ಹಳಮೆಯೂ ಆಸಕ್ತಿಕರವಾಗಿದೆ. 18-19ನೆಯ ನೂರೇಡಿನಲ್ಲಿ(century) ಪಿಜ್ಜಾ ಮಾಡುವುದು ಮೊದಲಾಯ್ತು. ಗೋದಿ ಹಿಟ್ಟಿನ ರೊಟ್ಟಿ ಮಾಡಿ ಅದರ ಮೇಲೆ ಹಾಲ್ಗಟ್ಟಿ(cheese), ಬೆಳ್ಳುಳ್ಳಿ, ಕೊಬ್ಬು ಹಾಕಿ ರೊಟ್ಟಿಯ ಒಂದು ಬದಿಯನ್ನು ಮಾತ್ರ ಸುಟ್ಟು ಪಿಜ್ಜಾ ಮಾಡುತ್ತಿದ್ದರು. ಪರ‍್ಸಿಯಾದ ಸೇನೆಯ ಬಂಟರು ಕಾದಾಟದ ಸಲುವಾಗಿ ಹೊರಗೆ ಇದ್ದಾಗ ತಮ್ಮ ಗುರಾಣಿಗಳ ಮೇಲೆ ಗೋದಿ ರೊಟ್ಟಿಯ ಮೇಲೆ ಹಾಲ್ಗಟ್ಟಿ ಎಣ್ಣೆ ಮತ್ತು ತಾಳೆ ಹಣ್ಣಿನ (ಕರ‍್ಜೂರ) ತುಣುಕುಗಳು ಹಾಕಿ ಸುಟ್ಟು ಪಿಜ್ಜಾ ಮಾಡಿ ತಿನ್ನುತ್ತಿದ್ದರು.
ಹೆಸರುವಾಸಿ ‘ಪಿಜ್ಜಾ ಮಾರ‍್ಗರೀಟಾ’ದ ಹಿನ್ನೆಲೆ
ಇಟಲಿಯ ಅರಸನನ್ನು ಕಾಣಲು 1889 ರಲ್ಲಿ ಮಾರ‍್ಗರೀಟಾ ಎಂಬ ಅರಸಿ ಬರುತ್ತಾಳೆ. ಆಗ ಬಾಣಸಿಗನಾದ ರಪಾಯಿಲೇ ಎಸ್ಪೊಸಿತೋ ಒಂದು ಹೊಸ ಬಗೆಯ ಪಿಜ್ಜಾ ಮಾಡಿದನು. ಈ ಪಿಜ್ಜಾ, ಮಾರ‍್ಗರೀಟಾ ಅರಸಿಯ ಮನಗೆದ್ದಿತು. ರಪಾಯಿಲನು ಪಿಜ್ಜಾದ ಮೇಲೆ ಕೆಂಪು ಟೊಮ್ಯಾಟೊ (ತಕ್ಕಾಳಿ) ಹಣ್ಣಿನ ಸಾಸ್, ಹಸಿರು ಸೊಪ್ಪು ಮತ್ತು ಬಿಳಿ ಮೊಜ್ಜರೆಲ್ಲಾ ಹಾಲ್ಗಟ್ಟಿ ಹಾಕಿದ್ದನು. ಇದು ಇಟಲಿ ನಾಡಿನ ಬಾವುಟದಲ್ಲಿನ ಬಣ್ಣಗಳನ್ನು ಹೋಲುತ್ತದೆ. ಈ ಪಿಜ್ಜಾವನ್ನು ಅರಸಿ ಮಾರ‍್ಗರೀಟಾ ತುಂಬಾ ಇಶ್ಟಪಡುತ್ತಾಳೆ. ಇದೇ ಮುಂದೆ ‘ಪಿಜ್ಜಾ ಮಾರ‍್ಗರೀಟಾ’ ಎಂದು ಹೆಸರಾಯಿತು. ರಪಾಯಿಲನ ಪಿಜ್ಜಾ ಅಂಗಡಿ ಇಂದಿಗೂ ಇಟಲಿಯಲ್ಲಿ ಇದೆ.
ಪಿಜ್ಜಾ ಮಾಡುವ ಹಲವು ಬಗೆಗಳು
ಎಲ್ಲಕ್ಕೂ ಆಗುವ ಹಿಟ್ಟು (All Purpose Flour) ಇದಕ್ಕೆ ಉಪ್ಪು ಯೀಸ್ಟ್ ಬೆರೆಸುತ್ತಾರೆ. ಕೆಲವು ಗಂಟೆಗಳು ಇಟ್ಟಾಗ ಈ ನಾದಿದ ಹಿಟ್ಟು ಹುದುಗು ಬಂದು ಉಬ್ಬುತ್ತದೆ. ಆಗ ಆ ಹಿಟ್ಟಿನಿಂದ ತೆಳ್ಳನೆಯ ರೊಟ್ಟಿಯನ್ನು ಒತ್ತುತ್ತಾರೆ. ಈ ರೊಟ್ಟಿಯ ಮೇಲೆ ಟೊಮ್ಯಾಟೊ ಸಾಸ್ ಹರಡಿ ಅದರ ಮೇಲೆ ಮೊಜ್ಜರೆಲ್ಲಾ ಹಾಲ್ಗಟ್ಟಿ ತುಣುಕುಗಳು ಹಾಕುತ್ತಾರೆ. ಬೇಸಲ್ ಸೊಪ್ಪನ್ನೂ ಹಾಕಿ ಈ ರೊಟ್ಟಿಯನ್ನು ಒಂದು ಉದ್ದದ ಹುಟ್ಟಿನ ಮೇಲೆ ಇಟ್ಟು ಕಟ್ಟಿಯಿಂದ ಉರಿಯುವ ಗೂಡೊಲೆಯ (wood oven) ಒಳಗೆ ತಳ್ಳುತ್ತಾರೆ. ಅಲ್ಲಿ 7 ರಿಂದ 10 ನಿಮಿಶ ಬೆಂದ ನಂತರ ಹೊರಗೆ ತೆಗೆಯುತ್ತಾರೆ. ಇದೇ ಪಿಜ್ಜಾ ಮಾಡುವ ಒರಿಜಿನಿಲ್ ಬಗೆ. ಬೇರೆ ಬೇರೆ ನಾಡುಗಳಲ್ಲಿ ಬೇರೆ ಬೇರೆ ಟಾಪಿಂಗುಗಳನ್ನು ಹಾಕುತ್ತಾರೆ. ಇಂಡಿಯಾದಲ್ಲಿ ಅಣಬೆ, ಚಿಕನ್, ಡೊಣಮೆಣಸಿನಕಾಯಿ, ಆಲಿವ್ ಕಾಯಿಗಳನ್ನು ಹಾಕುತ್ತಾರೆ. ಪಡುವಣ ನಾಡುಗಳಲ್ಲಿ ಹ್ಯಾಮ್, ಮೀನಿನ ತತ್ತಿಗಳು (ಕೇವಿಯಾರ‍್) ಮೀನು ತುಣುಕುಗಳು, ಸಾಸೇಜ್ ತುಂಡುಗಳು, ಪೈನಾಪಲ್, ಪಾಲಕ್, ಉಪ್ಪಿನ ಮೀನು, ಉಪ್ಪಿನ ಸೌತೆಕಾಯಿ, ಚಿಕನ್ ತುಣುಕುಗಳು ಹಾಕುತ್ತಾರೆ. ಕಸ್ಟಮರ್ ಗಳು ಬೇಡಿಕೆ ಇಟ್ಟ ಹಾಗೆ ಪಿಜ್ಜಾಗಳನ್ನು ಮಾಡಿ ಕೊಡುತ್ತಾರೆ. ಚಿಕ್ಕ ಚಿಕ್ಕ ಪಿಜ್ಜಾಗಳನ್ನು ಪಿಜ್ಜೆಟ್ಟಾ ಎನ್ನುತ್ತಾರೆ.
ಪಿಜ್ಜಾ ಮಾಡುವುದು ಒಂದು ಸಾಂಸ್ಕೃತಿಕ ಬಳುವಳಿ!
ಪಿಜ್ಜಾದ ತವರೂರು ನೇಪಲ್ಸ್ ನಲ್ಲಿ ದಿಟವಾದ (authentic) ಪಿಜ್ಜಾವನ್ನು ಒರಿಜಿನಲ್ ಬಗೆಯಲ್ಲಿ ತಯಾರಿಸುತ್ತಾರೆ. ದಿಟವಾದ ಒರಿಜಿನಲ್ ಪಿಜ್ಜಾವೆಂದು ‘ನೆಪೊಲಿಟನ್ ಪಿಜ್ಜಾ’ ವನ್ನು ಒಪ್ಪಿಕೊಳ್ಳಲಾಗಿದೆ. ಇದನ್ನು ಮಾಡುವ ಬಗೆಯನ್ನು ಕಾಪಾಡಲು ‘ದಿಟ ನೆಪೊಲಿಟನ್ ಪಿಜ್ಜಾ ಅಸೋಸಿಯೇಶನ್’ ಎಂಬ ಸಂಗವನ್ನೂ 1984 ರಲ್ಲಿ ಹುಟ್ಟುಹಾಕಿದ್ದಾರೆ! ನೆಪೊಲಿಟನ್ ಪಿಜ್ಜಾವನ್ನು ಮಾಡುವ ಪದ್ದತಿಯನ್ನು ‘ಮುಟ್ಟಲಾಗದ ಸಾಂಸ್ಕ್ರುತಿಕ ಬಳುವಳಿ’ (cultural heritage) ಎಂದು ಯುನೆಸ್ಕೋ 2017 ರಲ್ಲಿ ಗೋಶಣೆ ಮಾಡಿದೆ. ಗಿನ್ನಿಸ್ ದಾಕಲೆಯ ಅತಿ ದೊಡ್ಡ ಪಿಜ್ಜಾವನ್ನು ರೋಮಿನಲ್ಲಿ ಮಾಡಲಾಯ್ತು. ಇದು 13,570 ಚದರ ಅಡಿ ಹರವು ಉಳ್ಳದ್ದಾಗಿತ್ತು. ತುಂಬಾ ಉದ್ದದ ಪಿಜ್ಜಾವನ್ನು ಕ್ಯಾಲಿಪೋರ‍್ನಿಯಾದಲ್ಲಿ ಮಾಡಲಾಗಿತ್ತು ಇದು 6,333 ಅಡಿ ಉದ್ದವಾಗಿತ್ತು. ಲಂಡನ್ನಿನ ಮೇಜ್ ರೆಸ್ಟೋರೆಂಟ್ ನಲ್ಲಿ ಜಗತ್ತಿನ ದುಬಾರಿ ಪಿಜ್ಜಾ ಮಾರುತ್ತಾರೆ. ಅಲ್ಲಿನ ಒಂದು ಪಿಜ್ಜಾದ ಬೆಲೆ 9,000 ರೂಪಾಯಿಗಳು! ಸ್ಕಾಟ್ಲೆಂಡ್ ನ ಗ್ಲಾಸ್ಗೋ ದಲ್ಲಿ ಇರುವ ಹೆಗ್ಗಿಸ್ ರೆಸ್ಟೋರೆಂಟ್ ಒಂದು ಸಲ 3,78,000 ರೂಪಾಯಿ ಪಿಜ್ಜಾ ತಯಾರು ಮಾಡಿತ್ತು. ಈ ಪಿಜ್ಜಾದ ಮೇಲೆ ಮೀನಿನ ಮೊಟ್ಟೆ (ಕೇವಿಯಾರ‍್) ಲಾಬಸ್ಟರ್, 24 ಕ್ಯಾರೆಟ್ ಚಿನ್ನದ ಪುಡಿ ಉದುರಿಸಲಾಗಿತ್ತು! ಇನ್ನೂ ಕೇಳಿ, ನ್ಯೂಯಾರ‍್ಕ್ ನ ನಿನೋ ಪಿಜ್ಜೆರಿಯಾ ಮಾಡಿದ ಪಿಜ್ಜಾ ಬೆಲೆ 71,000 ರೂಪಾಯಿಗಳು ಆಗಿತ್ತು! ಇದರ ಮೇಲೂ ಕೆವಿಯಾರ್ ಹಾಕಲಾಗಿತ್ತು. ಸ್ಯಾಲ್ಮನ್ ಮೀನಿನ ತತ್ತಿಗಳು ಒಂದು ಗ್ರಾಂ ಬೆಲೆ ಸಾವಿರಾರು ರೂಪಾಯಿಗಳಶ್ಟು ತುಟ್ಟಿ!
ಇಟಲಿಯಿಂದ ಅಮೆರಿಕಕ್ಕೆ ಬಂದ ಪಿಜ್ಜಾ
19ನೇ ನೂರೇಡಿನಲ್ಲಿ ಪಿಜ್ಜಾ ಅಮೆರಿಕಕ್ಕೆ ಬಂತು. ಇದನ್ನು ಅಮೆರಿಕಕ್ಕೆ ತಂದವರು ಇಟಲಿಯಿಂದ ಬಂದಿದ್ದ ಗುಳೇಕಾರರು (immigrants). ಅಮೆರಿಕದಲ್ಲಿ ಮೊಟ್ಟ ಮೊದಲ ಬಾರಿಗೆ 1905 ರಲ್ಲಿ ಲೋಂಬಾರ‍್ಡಿ ಪಿಜ್ಜಾ ಅಂಗಡಿಯನ್ನು ತೆರೆಯಲಾಯ್ತು. ಅಲ್ಲಿಂದ ಮುಂದಕ್ಕೆ ಪಿಜ್ಜಾದ ಮಂದಿಯೊಲವು (popularity) ಹೆಚ್ಚಾಗುತ್ತಲೇ ಹೋಯಿತು. ಅಮೆರಿಕದ 13% ಮಂದಿ ದಿನಾಲೂ ಪಿಜ್ಜಾ ತಿನ್ನುತ್ತಾರೆ. ಅಮೆರಿಕದ ಪ್ರೆಸಿಡೆಂಟರು ಒಕ್ಕಲಿರುವ ‘ವೈಟ್ ಹೌಸ್’ ನಲ್ಲಿ ಪಿಜ್ಜಾದ ಔತಣಕೂಟವನ್ನೂ ಏರ‍್ಪಡಿಸುತ್ತಾರೆ! ಅಮೆರಿಕದ 83% ಮಂದಿ ತಿಂಗಳಿಗೆ ಒಂದು ಸಲವಾದರೂ ಪಿಜ್ಜಾ ತಿಂದೇ ತಿನ್ನುತ್ತಾರಂತೆ. ಅಮೆರಿಕ ಮತ್ತು ಕೆನಡಾಗಳಲ್ಲಿ ಅಕ್ಟೋಬರ್ ತಿಂಗಳನ್ನು ‘ರಾಶ್ಟ್ರೀಯ ಪಿಜ್ಜಾ ತಿಂಗಳು’ ಎಂದು ಪಿಜ್ಜಾ ಒಲವಿಗರು ಗೋಶಣೆ ಮಾಡಿಕೊಂಡಿದ್ದಾರೆ. ಆ ತಿಂಗಳು ಪಿಜ್ಜಾ ಮಾಡುವ, ತಿನ್ನುವ ಪೋಟಿಯನ್ನು(competition) ಏರ‍್ಪಡಿಸುತ್ತಾರೆ. ತುಂಬಾ ರುಚಿಕರ ಪಿಜ್ಜಾ ಮಾಡುವ ಪೋಟಿ ಏರ‍್ಪಡಿಸಿ ಗೆಲ್ಲುವವರಿಗೆ ಉಡುಗೊರೆ ಕೊಡುತ್ತಾರೆ. 2017 ರಲ್ಲಿ ಅಂದಾಜು ಮಾಡಿದ ಹಾಗೆ ಪಿಜ್ಜಾದ ಹರದು (ವಹಿವಾಟು, business) 128 ಬಿಲಿಯನ್ ಡಾಲರ್ ನಶ್ಟು ಆಗಿದ್ದು, ಅಮೆರಿಕ ಒಂದರಲ್ಲೇ ಪಿಜ್ಜಾದ ವಹಿವಾಟು 44 ಬಿಲಿಯನ್ ಡಾಲರ್ ಆಗಿದೆ!
(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು