ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 9ನೆಯ ಕಂತು

–  ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಮನದಲ್ಲಿ ಕ್ರೋಧ
ವಚನದಲ್ಲಿ ಕಿಂಕಲ
ಲಿಂಗದ ವಾರ್ತೆ ನಿನಗೇಕೆ ಹೇಳಾ. (1133/242)

( ಮನ+ಅಲ್ಲಿ; ಮನ=ಮನಸ್ಸು; ಕ್ರೋಧ=ಸಿಟ್ಟು/ಕೋಪ/ಆಕ್ರೋಶ; ಮನದಲ್ಲಿ ಕ್ರೋಧ=ಇತರರಿಗೆ ಕೇಡನ್ನು ಬಗೆಯಬೇಕೆಂಬ ಕೆಟ್ಟ ಉದ್ದೇಶ/ಇತರರ ಒಳಿತನ್ನು ಕಂಡು ಸಹಿಸಲಾರದ ಹೊಟ್ಟೆಕಿಚ್ಚು;

ವಚನ+ಅಲ್ಲಿ; ವಚನ=ಮಾತು/ನುಡಿ/ಸೊಲ್ಲು; ಕಿಂಕಲ=ವಿನಯ/ನಮ್ರತೆ/ಕೋಮಲತೆ/ತಗ್ಗಿ ಬಗ್ಗಿ ನಡೆಯುವವನು;

ವಚನದಲ್ಲಿ ಕಿಂಕಲ=ಬಹಿರಂಗದಲ್ಲಿ ಜನರ ಮುಂದೆ ಆಡುವ ಮಾತುಗಳು ಒಲವು ನಲಿವು ನಯ ವಿನಯದಿಂದ ಕೂಡಿ, ಬೇರೆಯವರ ಒಳಿತನ್ನೇ ಕುರಿತು ಚಿಂತಿಸುವಂತೆ ಇರುವುದು;

ಲಿಂಗ=ಶಿವನ ಸಂಕೇತವಾದ ವಿಗ್ರಹ; ವಾರ್ತೆ=ಸುದ್ದಿ/ಸಮಾಚಾರ/ಸಂಗತಿ;

‘ಲಿಂಗದ ವಾರ್ತೆ’ ಎಂಬ ನುಡಿಗಟ್ಟು ಒಂದು ರೂಪಕವಾಗಿ ಬಳಕೆಗೊಂಡಿದೆ. ಶಿವನನ್ನು ಕುರಿತ ಸುದ್ದಿ ಎಂದರೆ ಒಳ್ಳೆಯ ನಡೆನುಡಿಗಳಿಂದ ವ್ಯಕ್ತಿಯು ತನ್ನ ಬದುಕನ್ನು ರೂಪಿಸಿಕೊಳ್ಳುವುದರ ಜತೆಜತೆಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು;

ನಿನಗೆ+ಏಕೆ; ಏಕೆ=ಯಾವುದಕ್ಕಾಗಿ ಬೇಕು; ಹೇಳ್+ಆ; ಹೇಳು=ಉತ್ತರಿಸು/ನುಡಿ; ಇಬ್ಬರು ವ್ಯಕ್ತಿಗಳ ನಡೆನುಡಿಗಳು ಬೇರೆ ಬೇರೆ ರೀತಿಯಲ್ಲಿದ್ದಾಗ, “ ಅವನ ಸುದ್ದಿ ನಿನಗ್ಯಾಕಪ್ಪ, ಅವನ ದಾರಿಯೇ ಬೇರೆ, ನಿನ್ನ ದಾರಿಯೇ ಬೇರೆ “ ಎಂಬ ಮಾತನ್ನು ಕೇಳುತ್ತಿರುತ್ತೇವೆ.

ಯಾವ ವ್ಯಕ್ತಿಯು ತನ್ನ ಅಂತರಂಗದ ಮನದಲ್ಲಿ ಇತರರಿಗೆ ಕೇಡನ್ನು ಬಗೆಯಬೇಕೆಂಬ ಕೆಟ್ಟ ಉದ್ದೇಶದಿಂದ ಕೂಡಿ, ಬಹಿರಂಗದಲ್ಲಿ ಮಾತ್ರ ಸತ್ಯ, ನೀತಿ, ನ್ಯಾಯದ ಮಾತುಗಳನ್ನು ಬಹಳ ವಿನಯದಿಂದ ನುಡಿಯುತ್ತಿರುತ್ತಾನೋ, ಅಂತಹ ವ್ಯಕ್ತಿಯು ಮಾಡುವ ಲಿಂಗ ಪೂಜೆಯಿಂದ ಇಲ್ಲವೇ ಲಿಂಗದ ಮಹಿಮೆಯನ್ನು ಹಾಡಿಹೊಗಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ದೇವರು ಮೆಚ್ಚುವುದು ವ್ಯಕ್ತಿಯ ಒಳ್ಳೆಯ ನಡೆನುಡಿಗಳನ್ನು ಮಾತ್ರ. )

ಮದ್ದನರೆದು ಫಲವೇನು
ಪ್ರಯೋಗಿಸಿಕೊಂಡಲ್ಲದೆ
ರೋಗ ಮಾಣದು (1416/270)

( ಮದ್ದು+ಅನ್+ಅರೆದು; ಮದ್ದು=ಮರಗಿಡಬಳ್ಳಿಯ ಎಲೆ/ತೊಗಟೆ/ಬೇರುಗಳ ಸಾರವನ್ನು ಒಳಗೊಂಡು ತಯಾರಿಸಿದ ವಸ್ತು. ಇದನ್ನು ರೋಗವನ್ನು ವಾಸಿಮಾಡುವುದಕ್ಕೆ ಬಳಸುತ್ತಾರೆ ; ಅರೆ=ಪುಡಿ ಮಾಡು/ನುಣ್ಣಗೆ ಮಾಡು/ತೇಯುವುದು; ಅರೆದು=ಪುಡಿ ಮಾಡಿ/ತೇದು; ಫಲ+ಏನು; ಫಲ=ಪ್ರಯೋಜನ; ಏನು=ಯಾವುದು;

ಪ್ರಯೋಗಿಸಿ+ಕೊಂಡ+ಅಲ್ಲದೆ; ಪ್ರಯೋಗ=ಬಳಕೆ/ಉಪಯೋಗ; ಅಲ್ಲದೆ=ಹಾಗೆ ಮಾಡದೆ; ರೋಗ=ಬೇನೆ/ಕಾಯಿಲೆ/ಜಡ್ಡು; ಮಾಣ್=ವಾಸಿಯಾಗು/ಗುಣವಾಗು/ಬಿಡು; ಮಾಣದು=ವಾಸಿಯಾಗುವುದಿಲ್ಲ/ಗುಣವಾಗುವುದಿಲ್ಲ;

ಕೇವಲ ಮದ್ದನ್ನು ತಯಾರಿಸಿದ ಮಾತ್ರಕ್ಕೆ ರೋಗ ಗುಣವಾಗುವುದಿಲ್ಲ. ಅದನ್ನು ಸರಿಯಾಗಿ ಬಳಸಿದಾಗ ಮಾತ್ರ ರೋಗ ನಿವಾರಣೆಯಾಗುತ್ತದೆ. ಅಂತೆಯೇ ಅರಿವನ್ನು ಪಡೆದ ಮಾತ್ರಕ್ಕೆ/ವಿದ್ಯೆಯನ್ನು ಕಲಿತ ಮಾತ್ರಕ್ಕೆ ವ್ಯಕ್ತಿಯ ಬದುಕು ಉತ್ತಮಗೊಳ್ಳುವುದಿಲ್ಲ. ಪಡೆದ ಅರಿವಿನಿಂದ/ಕಲಿತ ವಿದ್ಯೆಯಿಂದ ವ್ಯಕ್ತಿಯು ಒಳ್ಳೆಯ ನಡೆನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವಂತಾದಾಗ ಮಾತ್ರ ವ್ಯಕ್ತಿಗೆ ಮತ್ತು ಸಮಾಜಕ್ಕೆ ಒಳಿತಾಗುತ್ತದೆ.

ವಾಕು ಪಾಕವಾದಡೇನು
ಮನ ಪಾಕವಾಗದನ್ನಕ್ಕರ. (175/152)

( ವಾಕ್=ಮಾತು/ನುಡಿ/ಸೊಲ್ಲು; ಪಾಕ+ಆದಡೆ+ಏನು; ಪಾಕ=ಬೇಯಿಸಿ ತಯಾರಿಸಿದ ಅನ್ನ/ಇನ್ನಿತರ ಆಹಾರ/ಪರಿಪಕ್ವಗೊಂಡಿರುವುದು/ಹದವಾಗಿರುವುದು/ತುಂಬಾ ಚೆನ್ನಾಗಿರುವುದು;

ವಾಕು ಪಾಕವಾಗುವುದು=ವ್ಯಕ್ತಿಯು ಆಡುವ ಮಾತುಗಳು ಸತ್ಯ ನೀತಿ ನ್ಯಾಯದ ಸಂಗತಿಗಳಿಂದ ಕೂಡಿ, ಕೇಳುವವರ ಮನಸ್ಸಿಗೆ ಮುದವನ್ನು ನೀಡಿ ತನ್ನತ್ತ ಸೆಳೆಯುವಂತಿರುವುದು; ಆದಡೆ=ಆದರೆ; ಆದಡೇನು=ಆಗುವುದರಿಂದ ಉಂಟಾಗುವ ಪ್ರಯೋಜನವೇನು;

ವಾಕು ಪಾಕವಾದಡೇನು=ಸೊಗಸಾಗಿ/ಸುಂದರವಾಗಿ ಮಾತನಾಡುವುದರಿಂದ ಪ್ರಯೋಜನವೇನು;

ಮನ=ಮನಸ್ಸು; ಪಾಕ+ಆಗದ+ಅನ್ನಕ್ಕರ; ಅನ್ನಕ್ಕರ=ಆ ತನಕ/ಆ ವರೆಗೆ; ಪಾಕವಾಗದನ್ನಕ್ಕರ=ಪಾಕಗೊಳ್ಳದಿದ್ದರೆ/ಪಾಕವಾಗದಿರುವ ವರೆಗೆ;

ಮನ ಪಾಕವಾಗುವುದು=ವ್ಯಕ್ತಿಯು ತನ್ನ ಮನದಲ್ಲಿ ತುಡಿಯುತ್ತಿರುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಒಳ್ಳೆಯದನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವುದು.

ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಯನ್ನು ಮತ್ತು ಉದ್ದೇಶವನ್ನು ಹೊಂದಿರದೆ, ಕೇವಲ ಮಾತನ್ನು ಮಾತ್ರ ಸೊಗಸಾಗಿ ಆಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ವ್ಯಕ್ತಿಯ ಬದುಕಿನಲ್ಲಿ ಒಳ್ಳೆಯ ನುಡಿಗಳಂತೆಯೇ ಒಳ್ಳೆಯ ನಡೆಯೂ ಇರಬೇಕು. )

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: