ಪುಟ್ಟ ಪುಟ್ಟ ಕತೆಗಳು

ವೆಂಕಟೇಶ ಚಾಗಿ.

ನ್ಯಾನೊ ಕತೆಗಳು, Nano Stories

ಸ್ವಾತಂತ್ರ್ಯ

ಅಲ್ಲೊಬ್ಬ ಬಿಕ್ಶುಕ, ಹತ್ತಿರವಿರುವ ಮೈದಾನದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಕಂಡ. ಮೈದಾನಕ್ಕೆ ಬಂದು ಯಾರಿಗೂ ಏನನ್ನೂ ಕೇಳದೆ ನಿಂತ. ಕೆಲವರು ಕಾಸು ನೀಡಿದರು. ಕೆಲವರು ಬೆದರಿಸಿ ಹೊರ ಹೋಗುವಂತೆ ತಿಳಿಸಿದರು. ಕೆಲವರು ಕಂಡು ಕಾಣದಂತೆ ತಮ್ಮ ಕೆಲಸದಲ್ಲಿ ಮಗ್ನರಾದಂತೆ ನಟಿಸಿದರು. ಆಯೋಜಕನು ಬಿಕ್ಶುಕನನ್ನು ಹೊರಹಾಕಬೇಕೆಂದು ಅವನ ಬಳಿ ದಾವಿಸುತ್ತಿರುವಾಗ ದ್ವಜಾರೋಹಣ ನೆರವೇರಿ ರಾಶ್ಟ್ರಗೀತೆ ಮೊಳಗತೊಡಗಿತು. ಬಿಕ್ಶುಕನೂ ದ್ವಜಕ್ಕೆ ವಂದಿಸುತ್ತಾ ರಾಶ್ಟ್ರಗೀತೆ ಹಾಡತೊಡಗಿದ. ನಂತರ  ಆಯೋಜಕ ಅವನನ್ನು ವಿಚಾರಿಸಿದಾಗ ತಾನು ಒಬ್ಬ ದೇಶಬಕ್ತನಾಗಿ ದ್ವಜಕ್ಕೆ ವಂದನೆ ಸಲ್ಲಿಸಲು ಬಂದಿರುವುದಾಗಿ ತಿಳಿಸಿ, ಕಾರ‍್ಯಕ್ರಮಕ್ಕಾಗಿ ತನ್ನ ಒಂದು ದಿನದ ಆದಾಯವನ್ನು ಆಯೋಜಕನಿಗೆ ನೀಡಿ ತನ್ನ ಹಾದಿ ಹಿಡಿದ.

ಅಪ್ಪ

ಅವನು ಅಪ್ಪನಾದ. ಅಪ್ಪನಾದ ಕುಶಿಯ ಎಲ್ಲೆಡೆ ಹಂಚಿದ. ಅವನ ಹರುಶಕ್ಕೆ ಪಾರವೇ ಇರಲಿಲ್ಲ. ಅಪ್ಪನಾದ ನಂತರ ಅಪ್ಪನ ಜವಾಬ್ದಾರಿಗಳು ಒಂದೊಂದೆ ಹೆಗಲೇರತೊಡಗಿದವು. ಅಪ್ಪ ಎಂದರೆ ಏನು ಎಂಬುದನ್ನು ಬದುಕು ಅವನಿಗೆ ಕಲಿಸತೊಡಗಿತು. “ಅಪ್ಪನಾಗಿ ನಾನು ನನ್ನ ಮಗುವಿನ ಪಾಲನೆ ಪೋಶಣೆಯಲ್ಲಿ ಎಶ್ಟೆಲ್ಲಾ ಕಶ್ಟ ಪಡುತ್ತಿದ್ದೇನೆ. ನನ್ನ ಅಪ್ಪ ನಾನು ಮಗುವಾಗಿದ್ದಾಗ ಇದೇ ರೀತಿಯ ಅತವಾ ಇದಕ್ಕಿಂತಲೂ ಹೆಚ್ಚು ಕಶ್ಟ ಅನುಬವಿಸಿರಬಹುದಲ್ಲ” ಎಂದು ಅರಿವಾದೊಡನೆ ವ್ರುದ್ದಾಶ್ರಮಕ್ಕೆ ಸೇರಿಸಿದ್ದ ತನ್ನ ಅಪ್ಪನನ್ನು ಮನೆಗೆ ಕರೆತಂದು ತನ್ನ ಅಪ್ಪನಿಗೂ ಅಪ್ಪನಾದ.

ಗೆಳೆಯ

ಗೆಳೆಯನೆಂದರೆ ಹೇಗಿರಬೇಕೆಂಬುದು ಅವನಿಗೆ ಗೊತ್ತಿಲ್ಲ. ಅವನಿಗೆ ಗೊತ್ತಿರುವುದಿಶ್ಟೇ ಒಬ್ಬ ಗೆಳೆಯ ಇನ್ನೊಬ್ಬ ಗೆಳೆಯನ ಕಶ್ಟ ಸುಕಗಳಿಗೆ ಸ್ಶಂದಿಸುವುದು. ಆದರೆ ಹಲವಾರು ಗೆಳೆಯರು ಅವನಿಂದ ಲಾಬ ಪಡೆದು ಅವನಿಂದ ದೂರವಾಗುತ್ತಿದ್ದರು. ಆದರೂ ಅವನು ಅನೇಕ ಗೆಳೆಯರಿಗೆ ಸಹಾಯ ಮಾಡುತ್ತಿದ್ದ. ತನ್ನ ಎಲ್ಲ ಗೆಳೆಯರ ಕಶ್ಟ ಸುಕಗಳಿಗೆ ಸ್ಪಂದಿಸುತ್ತಿದ್ದ. ಕೆಲವು ಗೆಳೆಯರು ಅವನ ಬಳಿ ಬೇರೆ ಗೆಳೆಯರ ಬಗ್ಗೆ ದೂರನ್ನು ಹೇಳುತ್ತಿದ್ದರು. ಆದರೂ ಅವರಿಗೆ ಸರಿಯಾದ ಉತ್ತರವನ್ನು ನೀಡಿ ಸಮಾದಾನಪಡಿಸುತ್ತಿದ್ದ. ಅವನು ಯಾವಾಗಲೂ ತನ್ನ ಗೆಳೆಯರಿಗೆ ಹೇಳುತ್ತಿದ್ದದ್ದು ಇಶ್ಟೇ “ಹಣದಿಂದ ವಸ್ತುಗಳನ್ನು ಕೊಳ್ಳಬಹುದು ಆದರೆ ಮನಸ್ಸುಗಳನ್ನಲ್ಲ. ನೀವು ನನ್ನಿಂದ ದೂರವಾಗಿ ನನ್ನನ್ನು ಕಳೆದುಕೊಳ್ಳಬಹುದು. ಆದರೆ ನಾನು ಗೆಳೆಯರನ್ನೆಂದೂ ಕಳೆದುಕೊಳ್ಳಲಾರೆ” ಎನ್ನುತ್ತಿದ್ದ.

ಗೂಡು

ಆ ನದಿಯ ಪಕ್ಕದಲ್ಲಿರುವ ಮರಗಳನ್ನು ಕಡಿದು ಮನುಶ್ಯ ಸುಂದರವಾದ ಮನೆಯನ್ನು ಕಟ್ಟಿಕೊಂಡ. ಆ ಮರದಲ್ಲಿದ್ದ ಹಕ್ಕಿಗಳೆಲ್ಲ ಅದೇ ನದಿಯ ನಡುಗಡ್ಡೆಯಲ್ಲಿ ಮರಕ್ಕೆ ಹೋಗಿ ತಮ್ಮದೇ ಆದ ಸುಂದರವಾದ ಗೂಡುಗಳನ್ನು ಕಟ್ಟಿಕೊಂಡವು. ಮಳೆಗಾಲ ಪ್ರಾರಂಬವಾದಾಗ ಮನುಶ್ಯ ತನ್ನ ಮನೆಯೊಳಗೆ ಬೆಚ್ಚನೆ ಕುಳಿತುಕೊಂಡ. ಹಕ್ಕಿಗಳು ನಡುಗಡ್ಡೆಯ ಮರದಲ್ಲಿ ಕಟ್ಟಿದ್ದ ತಮ್ಮ ಗೂಡುಗಳಲ್ಲಿ ಮರಿಗಳೊಂದಿಗೆ ನಡಗುತ್ತಾ ಕುಳಿತವು. ಮಳೆ ಹೆಚ್ಚಾಗಿ ನದಿಯ ನೀರು ಹೆಚ್ಚಾದಾಗ ನದಿಯ ಪಕ್ಕದಲ್ಲಿದ್ದ ಮನುಶ್ಯನ ಮನೆ ಕುಸಿಯತೊಡಗಿತು. ಆದರೆ ನಡುಗಡ್ಡೆಯ ಆ ಮರ ತನ್ನ ಬೇರುಗಳನ್ನು ಆಳಕ್ಕೆ ಇಳಿಸಿದ್ದರಿಂದ ಹಕ್ಕಿಗಳ ಗೂಡುಗಳು ಪ್ರವಾಹಕ್ಕೆ ಸಿಲುಕಲಿಲ್ಲ.

ಪ್ರವಾಹ

ಆ ಊರಿನ ಜನರಿಗೆ ಪ್ರತಿ ವರ‍್ಶವೂ ಅದೇ ಚಿಂತೆ ಪ್ರವಾಹ ಪ್ರವಾಹ. ಜನ ಅದೆಶ್ಟೇ ಗಟ್ಟಮುಟ್ಟಾದ ಮನೆಗಳನ್ನು ಕಟ್ಟಿದರೂ ಪ್ರವಾಹಕ್ಕೆ ಸಿಲುಕಿ ಮನೆಗಳು ಹಾನಿಗೊಳಗಾಗುತ್ತಿದ್ದವು. ಪ್ರತಿವರ‍್ಶ ನದಿ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿತ್ತು. ಇದಕ್ಕೊಂದು ಶಾಸ್ವತ ಪರಿಹಾರ ಹುಡುಕಲೇ ಬೇಕೆಂದು ಆ ಊರಿನ ಹಿರಿಯರು ಯುವಕರು ಯೋಚಿಸಿದರು. ಊರಿನ ವಿದ್ಯಾವಂತರೆಲ್ಲಾ ಪ್ರವಾಹಕ್ಕೆ ಕಾರಣಗಳನ್ನೆಲ್ಲಾ ಪಟ್ಟಿ ಮಾಡಿದರು. ಪ್ರವಾಹಕ್ಕೆ ಮೂಲ ಕಾರಣ ನದಿ ಹರಿಯುವ ದಾರಿಯಲ್ಲಿ ಜಾಗವನ್ನು ಆಕ್ರಮಿಸಿ ಮನೆ ಕಟ್ಟಿರುವುದು ಹಾಗೂ ನದಿಯ ದಂಡೆಯ ಮೇಲೆ ಬೆಳೆದ ಮರಗಿಡಗಳನ್ನು ಊರಿನ ಜನ ಕಡಿದುಹಾಕಿರುವುದು ಎಂಬುದನ್ನು ಮನಗೊಂಡರು. ಎಲ್ಲರೂ ಸರ‍್ಕಾರದ ಸಹಾಯದಿಂದ ಮನೆಗಳನ್ನು ಸ್ತಳಾಂತರಿಸಿದರು. ನದಿಯ ದಂಡೆಯ ಮೇಲೆ ಬಿದಿರು ಹಾಗೂ ಗಿಡಮರಗಳನ್ನು ಬೆಳೆಸಲಾಯಿತು. ದಿನಗಳು ಕಳೆದಂತೆ ಆ ಊರಿನ ಜನರಿಗೆ ಪ್ರವಾಹ ಬೀತಿ ಕಡಿಮೆಯಾಗುತ್ತಾ ಹೋಯಿತು.

ಸಮಾಜಸೇವೆ

ಆ ದಿನ ಅವನ ತಲೆಯಲ್ಲಿ ಅದೇನು ವಿಚಾರ ಹೊಳೆಯಿತೋ ತನ್ನ ಬ್ಯಾಗ್ ನಲ್ಲಿ ಕೆಲವು ಬಟ್ಟೆಗಳನ್ನು ತುಂಬಿಕೊಂಡು ಮನೆಯಿಂದ ಹೊರಟ. ಬಸ್ಸನ್ನು ಏರಿ ಅದೊಂದು ಕುಗ್ರಾಮಕ್ಕೆ ತೆರಳಿದ. ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬ ವಯಸ್ಸಾದ ವ್ಯಕ್ತಿ ಅವನ ಎದುರಿಗೆ ಬಂದ. ಆಗ ಅವನು ಆ ವ್ಯಕ್ತಿ ಯ ಕಾಲಿಗೆ ನಮಸ್ಕರಿಸಿ, ಆ ವ್ಯಕ್ತಿಯ ಕೈಯಲ್ಲಿ ಹಣದ ಗಂಟನ್ನಿಟ್ಟು ಹೇಳಿದ, “ಗುರುಗಳೇ, ನನ್ನ ಗುರಿಸಾದನೆಗಾಗಿ ನೀವು ತೋರಿಸಿದ ದಾರಿಯಲ್ಲಿ ನಾನು ನಡೆದೆ. ನಾನೀಗ ಉನ್ನತ ಹುದ್ದೆಯನ್ನು ಹೊಂದಿ ಸಮಾಜ ಸೇವೆ ಮಾಡಬೇಕೆಂದುಕೊಂಡಿದ್ದೇನೆ. ನನ್ನ ಮೊದಲ ಸಂಬಳ ಇದು. ಈ ಹಣ ನನ್ನ ಈ ಊರಿನ ಶಾಲೆಯ ಅಬಿವ್ರುದ್ದಿಗೆ ಬಳಸಿ” ಎಂದ.

ತ್ಯಾಗ

ಅವನು ಅವಸರದಿಂದ ತೆರಳುತ್ತಿರುವಾಗ ರಸ್ತೆ ಅಪಗಾತದಲ್ಲಿ ತೀವ್ರ ಸ್ವರೂಪದಲ್ಲಿ ಗಾಯಗೊಂಡ. ನಂತರ ಅವನನ್ನು ಆಸ್ಪತ್ರೆಗೆ ದಾಕಲಿಸಲಾಯಿತು. ವೈದ್ಯರು ಅವನ ವಿಳಾಸ ಹಾಗೂ ಇತರೆ ವಿಚಾರಿಸಿದರು. ಆದರೆ ಅವನಿಗೆ ಹೇಳಲು ಸಾದ್ಯವಾಗಲಿಲ್ಲ. ಯಾವುದೋ ಸನ್ನೆಯ ಮೂಲಕ ಒಂದು ಬಿಳಿಹಾಳೆಯನ್ನು ತರಲು ವೈದ್ಯರಿಗೆ ಸೂಚಿಸಿದ. ಅವನು ತನ್ನ ಮನೆ ವಿಳಾಸವನ್ನು ಬರೆದು ಹೇಳಬಹುದು ಎಂದು ಅಂದುಕೊಂಡ ವೈದ್ಯರು ಅವನಿಗೆ ಒಂದು ಪೆನ್ನು ಕೊಟ್ಟು ಹಾಳೆಯನ್ನು ನೀಡಿದರು. ಆಗ ಅವನು, “ಮಾನ್ಯರೇ, ನಾನು ಬದುಕುವುದಿಲ್ಲ. ನನ್ನ ದೇಹದ ಅಂಗಗಳನ್ನು ದಾನ ಮಾಡುತ್ತಿದ್ದೇನೆ. ಅವಶ್ಯಕತೆ ಇದ್ದವರಿಗೆ ಕೊಡಿ” ಎಂದು ಬರೆದು ಸಹಿಯೊಂದಿಗೆ ಕೊನೆಯುಸಿರೆಳೆದ.

ಶ್ರಮದ ಪಲ

ಅದೊಂದು ಬಿಸಿಲುಗಾಡಿನ ಹಳ್ಳಿ. ಆ ಹಳ್ಳಿಗೆ ಯಾವುದೇ ವಾಹನದ ಸೌಕರ‍್ಯಗಳಿರಲಿಲ್ಲ. ಅಲ್ಲೊಂದು ಪುಟ್ಟ ಶಾಲೆ. ಕೆಲವೇ ಮಕ್ಕಳು  ಶಾಲೆಯ ಗೋಡೆಗಳ ಮೇಲೆ ತಮ್ಮ ಕನಸುಗಳನ್ನು ಗೀಚುತ್ತಿದ್ದರು. ಆ ಶಾಲೆಗೆ ಅವನು ಶಿಕ್ಶಕನಾಗಿ ಬಂದ. ನಗರದಿಂದ ಸುಮಾರು ದೂರದ ಬಿಸಿಲಿನ ಪ್ರಯಾಣ ಆ ಹಳ್ಳಿಗೆ. ಶಾಲೆಯಲ್ಲಿ ಮಕ್ಕಳ ಕನಸುಗಳಿಗೆ ನೀರೆರೆದ. ಕನಸುಗಳನ್ನು ನನಸಾಗಿಸುವ ಪಣ ತೊಟ್ಟ. ಹಾಗೆಯೇ ಬಿಸಿಲಿನ ಮಡಿಲಲ್ಲಿದ್ದ ಆ ದಾರಿಯ ಅಕ್ಕಪಕ್ಕದಲ್ಲಿ ಗಿಡಗಳ ನೆಟ್ಟ. ಪ್ರತಿ ದಿನ ತನ್ನ ವಾಹನದಲ್ಲಿ ಗಿಡಗಳಿಗೆ ನೀರೆರೆಯುತ್ತಾ ಬಂದ. ಮಕ್ಕಳ ಕನಸುಗಳು ನನಸಾಗುವ ಕಾಲಕ್ಕೆ ಅವನು ನೆಟ್ಟ ಗಿಡಮರಳೂ ಪಲ ನೀಡಿದವು.

( ಚಿತ್ರಸೆಲೆ : quirkybyte.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: