ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 10ನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಸಮುದ್ರದಾಚೆಯ ತಡಿಯಲ್ಲಿ
ಕಳ್ಳನ ಕಂಡು
ಇಲ್ಲಿಂದ ಮುನಿದು ಬೈದರೆ
ಅವ ಸಾಯಬಲ್ಲನೆ. (459/173)

( ಸಮುದ್ರದ+ಆಚೆಯ; ಸಮುದ್ರ=ಕಡಲು/ಸಾಗರ; ಆಚೆ=ಅತ್ತ ಕಡೆ/ಮತ್ತೊಂದು ತುದಿ; ತಡಿ+ಅಲ್ಲಿ; ತಡಿ=ದಡ/ತೀರ/ದಂಡೆ; ಕಳ್ಳ=ಇತರರ ಒಡವೆ ವಸ್ತುಗಳನ್ನು ಕದಿಯುವುದನ್ನೇ ಕಸುಬನ್ನಾಗಿ ಮಾಡಿಕೊಂಡಿರುವ ವ್ಯಕ್ತಿ/ಚೋರ; ಕಂಡು=ನೋಡಿ;

ಇಲ್ಲಿ+ಇಂದ; ಇಲ್ಲಿ=ಇತ್ತ/ಈಚೆಯ ದಡ; ಇಲ್ಲಿಂದ=ಈಚೆಯ ದಡದಲ್ಲಿ ನಿಂತುಕೊಂಡು;
ಮುನಿ=ಸಿಟ್ಟಾಗು/ಕೋಪಗೊಳ್ಳು/ಆಕ್ರೋಶಗೊಂಡು; ಬಯ್=ನಿಂದಿಸು/ತೆಗಳು; ಬೈದರೆ=ಬಯ್ದರೆ/ಬಯ್ಯಲು ತೊಡಗಿದರೆ/ಶಪಿಸಿದರೆ; ಅವ=ಅವನು/ಆ ಕಳ್ಳನು; ಸಾಯ್=ಮರಣ ಹೊಂದುವುದು/ಜೀವ ಹೋಗುವುದು; ಸಾಯಬಲ್ಲನೆ=ಸಾಯುತ್ತಾನೆಯೆ/ನಾಶವಾಗುತ್ತಾನೆಯೆ.

ಈ ಸಂಗತಿಯು ಒಂದು ರೂಪಕವಾಗಿ ಬಳಕೆಗೊಂಡಿದೆ. ವ್ಯಕ್ತಿಯ/ಕುಟುಂಬದ/ಸಮಾಜದ ವ್ಯವಹಾರದಲ್ಲಿ ಯಾವುದೇ ಬಗೆಯ ತೊಡಕು/ತೊಂದರೆ/ಸಮಸ್ಯೆ ಉಂಟಾದಾಗ, ಅದಕ್ಕೆ ಕಾರಣವೇನೆಂಬುದನ್ನು ಸರಿಯಾಗಿ ತಿಳಿದುಕೊಂಡು, ಎಲ್ಲಿ ತಪ್ಪು ಆಗಿದೆಯೋ ಅದನ್ನು ಸರಿಪಡಿಸಿಕೊಂಡು ಬಾಳುವಂತಹ ಕೆಲಸವಾಗಬೇಕೆ ಹೊರತು ಬಯ್ಯುವಿಕೆಯಲ್ಲಿ ತೊಡಗುವುದರಿಂದ ಇಲ್ಲವೇ ಒಬ್ಬರ ಮೇಲೆ ಮತ್ತೊಬ್ಬರು ಆರೋಪವನ್ನು ಹೊರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. )

ಹಿಂದನರಿಯದುದು
ಮುಂದನೇನ
ಬಲ್ಲುದೋ. (312/162)

( ಹಿಂದು+ಅನ್+ಅರಿಯದುದು; ಹಿಂದು=ಈ ಮೊದಲು ನಡೆದಿರುವುದು/ಆಗಿರುವುದು; ಅನ್=ಅನ್ನು; ಅರಿ=ತಿಳಿ/ಕಲಿ; ಅರಿಯದುದು=ತಿಳಿದುಕೊಳ್ಳದಿರುವುದು/ಅರಿತುಕೊಳ್ಳದಿರುವುದು;

ಮುಂದು+ಅನ್+ಏನ; ಮುಂದು=ಬರಲಿರುವ ಕಾಲದಲ್ಲಿ ನಡೆಯಲಿರುವುದು/ಉಂಟಾಗುವುದು ; ಏನ=ಯಾವುದನ್ನು ತಾನೆ; ಬಲ್=ತಿಳಿ/ಅರಿ; ಬಲ್ಲುದೋ=ತಿಳಿಯಲು/ಅರಿಯಲು/ಗೊತ್ತುಮಾಡಿಕೊಳ್ಳಲು ಆಗುತ್ತದೆಯೇ;

ಮುಂದನೇನ ಬಲ್ಲುದೋ=ಮುಂದೆ ಏನು ಮಾಡಬೇಕೆಂಬುದನ್ನು ತಿಳಿಯಲಾಗುವುದಿಲ್ಲ;

‘ ಹಿಂದನರಿಯುವುದು ‘ ಎಂದರೆ ಪ್ರಾಚೀನ ಕಾಲದಿಂದಲೂ ಇಂದಿನ ತನಕ ಜನಸಮುದಾಯದ ಬದುಕನ್ನು ರೂಪಿಸಿ ಮುನ್ನಡೆಸುತ್ತಿರುವ ಸಂಗತಿಗಳನ್ನು ಅರಿತುಕೊಳ್ಳುವುದು. ಆ ಸಂಗತಿಗಳಲ್ಲಿ ಯಾವ ಬಗೆಯ ಸಂಗತಿಗಳು ಮಾನವ ಸಮುದಾಯಕ್ಕೆ ಒಳಿತನ್ನು ಇಲ್ಲವೇ ಕೆಡುಕನ್ನು ಮಾಡುತ್ತಿವೆ ಎಂಬುದನ್ನು ಒರೆಹಚ್ಚಿ ನೋಡಿ ಮಾನವನ ಬದುಕಿನ ಸಾಮಾಜಿಕ ವಾಸ್ತವವನ್ನು ತಿಳಿಯಬೇಕು.

ಈ ಬಗೆಯ ಅರಿವನ್ನು/ಎಚ್ಚರವನ್ನು ಪಡೆದಾಗ, ವ್ಯಕ್ತಿಯ ಮತ್ತು ಜನಸಮುದಾಯದ ನೆಮ್ಮದಿಯ ಬದುಕಿಗೆ ಹಾನಿಯನ್ನುಂಟುಮಾಡುವ ಸಂಪ್ರದಾಯಗಳನ್ನು ಮತ್ತು ಆಚರಣೆಗಳನ್ನು ತ್ಯಜಿಸಿ, ಒಳ್ಳೆಯ ನಡೆನುಡಿಗಳನ್ನು ಅಳವಡಿಸಿಕೊಂಡು ಬಾಳುವುದರ ಕಡೆಗೆ ಮುನ್ನಡೆಯಬಹುದು.)

ಹಿಂದೆ ಎಷ್ಟು ಪ್ರಳಯ ಹೋಯಿತ್ತೆಂದರಿಯೆ
ಮುಂದೆ ಎಷ್ಟು ಪ್ರಳಯವಾಗುವುದೆಂದರಿಯೆ
ತನ್ನ ಸ್ಥಿತಿಯ ತಾನರಿದಡೆ
ಅದೇ ಪ್ರಳಯವಲ್ಲಾ. (655/189 )

( ಹಿಂದೆ=ಈ ಮೊದಲು/ಕಳೆದ ಹೋದ ಕಾಲದಲ್ಲಿ; ಎಷ್ಟು=ಯಾವ ಪ್ರಮಾಣದಲ್ಲಿ/ಯಾವ ಅಳತೆಯಲ್ಲಿ; ಪ್ರಳಯ=ಅಳಿವು/ಬದಲಾವಣೆ/ಸರ‍್ವನಾಶ/ಕ್ರುತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂಬ ಹೆಸರಿನ ನಾಲ್ಕು ಯುಗಗಳು ಒಂದರ ನಂತರ ಮತ್ತೊಂದು ಬಂದಿವೆ. ಒಂದು ಯುಗ ಕೊನೆಗೊಂಡು ಮತ್ತೊಂದು ಯುಗ ಹುಟ್ಟುವಾಗ ಒಂದು ಯುಗದಲ್ಲಿದ್ದ ಸಕಲ ಜೀವರಾಶಿಗಳು ನಾಶಗೊಂಡು ಮತ್ತೆ ಹೊಸದಾದ ಜೀವರಾಶಿಗಳು ಹುಟ್ಟಿಬರುತ್ತವೆ ಎಂಬ ಕಲ್ಪನೆಯು ಜನಸಮುದಾಯದ ಮನದಲ್ಲಿ ನೆಲೆಗೊಂಡಿದೆ.

ಹೋಯಿತ್ತು+ಎಂದು+ಅರಿಯೆ; ಹೋಗು=ತೆರಳು/ಗಮಿಸು/ದಾಟು; ಹೋಯಿತ್ತು=ಉಂಟಾಗಿದೆ/ನಡೆದಿದೆ; ಅರಿಯೆ=ಅರಿಯೆನು/ನನಗೆ ಗೊತ್ತಿಲ್ಲ/ನಾನು ತಿಳಿದಿಲ್ಲ; ಮುಂದೆ=ಬರಲಿರುವ ಕಾಲದಲ್ಲಿ/ಸಮಯದಲ್ಲಿ; ಪ್ರಳಯ+ಆಗುವುದು+ಎಂದು+ಅರಿಯೆ;

ತನ್ನ=ವ್ಯಕ್ತಿಯಲ್ಲಿರುವ; ಸ್ಥಿತಿ=ಇರವು/ಇರುವಿಕೆ/ಇರುವ ರೀತಿ; ತಾನ್+ಅರಿದಡೆ; ತಾನ್=ವ್ಯಕ್ತಿಯು; ಅರಿದಡೆ=ಅರಿತುಕೊಂಡರೆ/ತಿಳಿದುಕೊಂಡರೆ; ಅದೇ=ಆ ಬಗೆಯ ಬದಲಾವಣೆಯೇ/ಆ ರೀತಿಯ ನಡೆನುಡಿಗಳೇ; ಪ್ರಳಯ+ಅಲ್ಲಾ; ಅಲ್ಲಾ=ಅಲ್ಲವೇ;

ತನ್ನ ಸ್ಥಿತಿಯ ತಾನರಿದಡೆ ಅದೇ ಪ್ರಳಯ=ವ್ಯಕ್ತಿಯ ನಡೆನುಡಿಯಲ್ಲಿ ಕೆಟ್ಟದ್ದು ನಾಶಗೊಂಡು ಒಳ್ಳೆಯದು ಮೂಡಿಬರುವುದನ್ನು/ಉಂಟಾಗುವ ಬದಲಾವಣೆಯನ್ನು ಸೂಚಿಸಲು “ ಪ್ರಳಯ “ ಎಂಬ ಪದವನ್ನು ಒಂದು ರೂಪಕವಾಗಿ ಬಳಸಲಾಗಿದೆ.

ವ್ಯಕ್ತಿಯು ತನ್ನ ಮಯ್ ಮನಗಳನ್ನು ಕಾಡುತ್ತಿರುವ ಒಳಮಿಡಿತಗಳಲ್ಲಿ ಕೆಟ್ಟದ್ದು ಯಾವುದು/ಒಳ್ಳೆಯದು ಯಾವುದು ಎಂಬುದನ್ನು ತಾನೇ ತಿಳಿದುಕೊಂಡು, ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಒಳ್ಳೆಯದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಬಾಳಲು ತೊಡಗಿದರೆ, ಅದು ವ್ಯಕ್ತಿಯ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. )

( ಚಿತ್ರ ಸೆಲೆ: lingayatreligion.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.