ರವೀಂದ್ರನಾತ ಟ್ಯಾಗೋರರ ಕವನಗಳ ಓದು – 3 ನೆಯ ಕಂತು

– ಸಿ.ಪಿ.ನಾಗರಾಜ.

*** ನೋವ ಗೆಲ್ಲುವೆನು ***

ನನ್ನ ಬಾಳಲಿ ಕೇಡು ಬಂದೆರಗಿದರೆ  ದೇವ
ಆಸರೆಯ ನೀಡೆಂದು ಬೇಡೆ  ನಾನಿನ್ನು
ನಿರ್ಭಯತೆಯಿಂದಲೇ ಕೇಡನೆದುರಿಪ  ಶಕ್ತಿ
ನೀಡಬೇಕೆನಗೆಂದು ನನ್ನ  ಮೊರೆಯಿನ್ನು

ನೋವ  ಪರಿಹರಿಸೆಂದು ನಾನಿನ್ನ ಬೇಡದೆಯೆ
ನೋವ ಗೆಲ್ಲುವ ಶಕ್ತಿ ನೀಡೆನಗೆ ದೊರೆಯೆ
ಬಾಳ ಬವರದಿ ಸೆಣೆಸೆ ಮಿತ್ರರನು ಹುಡುಕದೆಯೆ
ನನ್ನ ಸಾಮರ್ಥ್ಯದಲೆ ನಂಬಿಕೆಯನಿಡುವೆ

ಭಯಕೆ ತುತ್ತಾಗಿರಲು ರಕ್ಷಕಗೆ ಮೊರೆಯಿಡದೆ
ಸಹನೆಯಿಂದಲೆ ನನ್ನ ಬಿಡುಗಡೆಯ ಪಡೆವೆ
ಹೇಡಿತನ ಬರದಂತೆ ನೀಡೆನಗೆ ವರಗಳನು
ನನ್ನ ಗೆಲುವಿಂದಲೇ ನಿನ್ನ ದಯೆ ತಿಳಿವೆ

ಆದರೂ ಒಂದೊಮ್ಮೆ ನನಗೆ ಸೋಲೊದಗಿದರೆ
ಮತಿ ನೀಡು ಹುಡುಕಲಿಕೆ ನಿನ್ನಾಸರೆ.

ವ್ಯಕ್ತಿಯು ತನ್ನ ಜೀವನದ ಸಂಕಟಗಳ ನಿವಾರಣೆಯ ಜವಾಬ್ದಾರಿಯನ್ನು ದೇವರ ಪಾಲಿಗೆ ಒಪ್ಪಿಸದೆ, ತನ್ನ ಕ್ರಿಯಾಶೀಲತೆಯಿಂದಲೇ ಅವನ್ನು ಎದುರಿಸಿ ಪರಿಹರಿಸಿಕೊಳ್ಳುವ ಶಕ್ತಿಯನ್ನು ತನ್ನ ಮಯ್ ಮನಕ್ಕೆ ನೀಡುವಂತೆ ದೇವರನ್ನು ಕೇಳಿಕೊಳ್ಳುತ್ತಿರುವ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಬಾಳಲಿ=ಜೀವನದಲ್ಲಿ/ಬದುಕಿನಲ್ಲಿ; ಕೇಡು=ಆಪತ್ತು/ಅಪಾಯ/ಹಾನಿ; ಬಂದು+ಎರಗಿದರೆ; ಎರಗು=ಮೇಲೆ ಬೀಳು/ಆಕ್ರಮಿಸು; ದೇವ=ಜೀವನದಲ್ಲಿ ಉಂಟಾಗುವ ಕೆಡುಕನ್ನು ನಿವಾರಿಸಿ, ಒಳಿತನ್ನು ಮಾಡುವ ಶಕ್ತಿ ಇಲ್ಲವೇ ವ್ಯಕ್ತಿಯನ್ನು ‘ದೇವರು’ ಎಂದು ಮಾನವ ಸಮುದಾಯ ಕಲ್ಪಿಸಿಕೊಂಡಿದೆ; ಆಸರೆ=ಆಶ್ರಯ/ಅವಲಂಬನೆ; ನೀಡು+ಎಂದು; ನೀಡು=ಕೊಡು/ದಯಪಾಲಿಸು/ಅನುಗ್ರಹಿಸು; ಬೇಡು=ಯಾಚಿಸು/ಕೇಳು; ನಾನ್+ಇನ್ನು;

ನನ್ನ ಬಾಳಲಿ ಕೇಡು ಬಂದೆರಗಿದರೆ… ದೇವ,  ಆಸರೆಯ ನೀಡೆಂದು ಬೇಡೆ ನಾನಿನ್ನು=ಇನ್ನು ಮುಂದೆ ನನ್ನ ಜೀವನದಲ್ಲಿ ಆಪತ್ತು ಬಂದು ಎರಗಿದಾಗ, ದೇವರೇ, ನನಗೆ ಆಶ್ರಯವನ್ನು ನೀಡಿ ಕಾಪಾಡು ಎಂದು ನಿನ್ನನ್ನು ಯಾಚಿಸುವುದಿಲ್ಲ;

ನಿರ್ಭಯತೆ+ಇಂದಲೇ; ನಿರ್ಭಯತೆ=ಹೆದರಿಕೆಯಿಲ್ಲದಿರುವದು/ಕೆಚ್ಚೆದೆಯಿಂದ ಕೂಡಿರುವುದು; ಕೇಡನ್+ಎದುರಿಪ; ಎದುರಿಪ=ಇದಿರಿಸುವ; ಶಕ್ತಿ=ಬಲ/ಕಸುವು; ನೀಡಬೇಕು+ಎನಗೆ+ಎಂದು; ಮೊರೆ+ಇನ್ನು; ಮೊರೆ=ಬಿನ್ನಹ/ಅರಿಕೆ;

ನಿರ್ಭಯತೆಯಿಂದಲೇ ಕೇಡನೆದುರಿಪ ಶಕ್ತಿ ನೀಡಬೇಕೆನಗೆಂದು ನನ್ನ ಮೊರೆಯಿನ್ನು=ಇನ್ನು ಮುಂದೆ ಜೀವನದಲ್ಲಿ ಬರುವ ಕೇಡನ್ನು ಕೆಚ್ಚೆದೆಯಿಂದ ಎದುರಿಸಿ, ಕೇಡಿನಿಂದ ಪಾರಾಗುವ ಬಲವನ್ನು ನನ್ನ ಮಯ್ ಮನಕ್ಕೆ ನೀಡೆಂದು ಅರಿಕೆ ಮಾಡಿಕೊಳ್ಳುತ್ತೇನೆ;

ನೋವು=ಅಳಲು/ಸಂಕಟ; ಪರಿಹರಿಸು+ಎಂದು; ಪರಿಹರಿಸು=ನೀಗಿಸು/ನಿವಾರಿಸು/ಇಲ್ಲದಂತೆ ಮಾಡು; ನಾನ್+ನಿನ್ನ; ಬೇಡದೆಯೆ=ಯಾಚಿಸದೆ/ಕೇಳಿಕೊಳ್ಳದೆ; ಗೆಲ್ಲು=ಜಯಿಸು; ನೋವ ಗೆಲ್ಲುವ=ಕೆಡುಕನ್ನು ತೊಡೆದುಹಾಕಿ ಒಳಿತನ್ನು ಪಡೆಯುವ; ನೀಡು+ಎನಗೆ; ದೊರೆ=ದೇವರು ಜಗತ್ತಿಗೆ ಒಡೆಯನೆಂಬ ಕಲ್ಪನೆಯಿದೆ;

ನೋವ ಪರಿಹರಿಸೆಂದು ನಾನಿನ್ನ ಬೇಡದೆಯೆ,  ನೋವ ಗೆಲ್ಲುವ ಶಕ್ತಿ ನೀಡೆನಗೆ ದೊರೆಯೆ=ಜೀವನದಲ್ಲಿ ಬಂದ ಕೇಡನ್ನು ನಿವಾರಿಸೆಂದು ದೇವರಾದ ನಿನ್ನನ್ನು ಯಾಚಿಸದೆ, ಬಂದ ಕೇಡನ್ನು ತೊಡೆದುಹಾಕಿ, ಜೀವನದಲ್ಲಿ ಒಳಿತನ್ನು ಪಡೆಯಬಲ್ಲ ಶಕ್ತಿಯನ್ನು ನನಗೆ ನೀಡು;

ಬವರ=ಕಾಳೆಗ/ಕಲಹ; ಬಾಳ ಬವರ=ಜೀವನದಲ್ಲಿ ಬಂದ ಬಹುಬಗೆಯ ಹೋರಾಟದ ಸನ್ನಿವೇಶಗಳಲ್ಲಿ; ಸೆಣೆಸು=ಕಾದಾಡು/ಹೋರಾಡು; ಮಿತ್ರ=ಗೆಳೆಯ/ಸ್ನೇಹಿತ; ಹುಡುಕು=ಅರಸು; ಸಾಮರ್ಥ್ಯ=ಬಲ/ಶಕ್ತಿ/ಕಸುವು; ನಂಬಿಕೆ=ನೆಚ್ಚು/ವಿಶ್ವಾಸ; ಅನ್=ಅನ್ನು;

ಬಾಳ ಬವರದಿ ಸೆಣೆಸೆ ಮಿತ್ರರನು ಹುಡುಕದೆಯೆ ನನ್ನ ಸಾಮರ್ಥ್ಯದಲೆ ನಂಬಿಕೆಯನಿಡುವೆ=ಜೀವನದಲ್ಲಿ ಬಂದ ಸಂಕಟಗಳ ಎದುರಿನ ಹೋರಾಟದಲ್ಲಿ ಗೆಳೆಯರ  ನೆರವಿಗಾಗಿ ಕಾಯದೆ, ಮತ್ತೊಬ್ಬರು ನನ್ನನ್ನು ಕಾಪಾಡುತ್ತಾರೆ ಎಂದು ಸುಮ್ಮನಾಗದೆ, ನನ್ನ ಮಯ್ ಮನದ ಬಲದಲ್ಲಿಯೇ ನಂಬಿಕೆಯನ್ನಿಟ್ಟು ಹೋರಾಡುತ್ತೇನೆ;

ಭಯ=ಹೆದರಿಕೆ/ದಿಗಿಲು/ಪುಕ್ಕಲುತನ; ತುತ್ತು+ಆಗಿರಲು; ತುತ್ತಾಗಿರಲು=ಒಳಗಾಗಿರಲು/ಈಡಾಗಿರಲು; ರಕ್ಷಕ=ಕಾಪಾಡುವವನು/ಪಾಲಕ; ಮೊರೆ+ಇಡದೆ; ಮೊರೆಯಿಡದೆ=ಯಾಚಿಸದೆ; ಸಹನೆ+ಇಂದಲೆ;

ಸಹನೆ=ತಾಳ್ಮೆ/ಬಂದದ್ದೆಲ್ಲವನ್ನು ಗಟ್ಟಿ ಮನಸ್ಸಿನಿಂದ ತಾಳಿಕೊಳ್ಳುವುದು; ಬಿಡುಗಡೆ=ಕೊನೆ/ಅಂತ್ಯ/ಮುಕ್ತಾಯ; ಪಡೆವೆ=ಹೊಂದುತ್ತೇನೆ;

ಭಯಕೆ ತುತ್ತಾಗಿರಲು ರಕ್ಷಕಗೆ ಮೊರೆಯಿಡದೆ ಸಹನೆಯಿಂದಲೆ ನನ್ನ ಬಿಡುಗಡೆಯ ಪಡೆವೆ=ಮಾನಹಾನಿ ಇಲ್ಲವೇ ಜೀವಹಾನಿಯಂತಹ ಹೆದರಿಕೆಯ ಸನ್ನಿವೇಶಗಳು ಬಂದಾಗ, “ನನ್ನನ್ನು ಪಾರುಮಾಡು” ಎಂದು ದೇವರಾದ ನಿನ್ನಲ್ಲಿ ಮೊರೆಯಿಡದೆ, ತಾಳ್ಮೆ ಮತ್ತು ಕೆಚ್ಚೆದೆಯಿಂದ ನಾನೇ ಅವನ್ನು ಎದುರಿಸಿ ನನ್ನ ಮಾನ ಪ್ರಾಣಗಳನ್ನು ಉಳಿಸಿಕೊಳ್ಳುತ್ತೇನೆ ;

ಹೇಡಿತನ=ಪುಕ್ಕಲುತನ; ಬರದಂತೆ=ಬರದ ಹಾಗೆ; ನೀಡು+ಎನಗೆ; ವರ=ಅನುಗ್ರಹ/ಕೊಡುಗೆ; ದಯೆ=ಕರುಣೆ; ತಿಳಿವೆ=ತಿಳಿಯುತ್ತೇನೆ;

ಹೇಡಿತನ ಬರದಂತೆ ನೀಡೆನಗೆ ವರಗಳನು ನನ್ನ ಗೆಲುವಿಂದಲೇ ನಿನ್ನ ದಯೆ ತಿಳಿವೆ=ಎಂತಹ ಸನ್ನಿವೇಶದಲ್ಲಿಯೂ ಪುಕ್ಕಲುತನದಿಂದ ಹಿಂಜರಿಯದಂತಹ ಮನೋಬಲವನ್ನು ನನಗೆ ನೀಡು. ಜೀವನದಲ್ಲಿನ ಎಡರುತೊಡರುಗಳನ್ನು ಎದುರಿಸಿ ನಿವಾರಿಸಿಕೊಂಡು ನಾನು ಪಡೆಯುವ ಗೆಲುವಿನಿಂದಲೇ ನಿನ್ನ ಕರುಣೆಯ ಸ್ವರೂಪವನ್ನು ಎಂತಹುದು ಎಂಬುದನ್ನು ಅರಿಯುತ್ತೇನೆ;

ಒಂದು+ಒಮ್ಮೆ; ಒಂದೊಮ್ಮೆ=ಒಂದು ವೇಳೆ; ಸೋಲು+ಒದಗಿದರೆ; ಸೋಲು=ನನ್ನ ಪ್ರಯತ್ನದಲ್ಲಿ ಇಲ್ಲವೇ ನನ್ನ ಹೋರಾಟದಲ್ಲಿ; ಮತಿ=ಬುದ್ದಿ/ತಿಳುವಳಿಕೆ; ಹುಡುಕಲಿಕೆ=ಹುಡುಕುವುದಕ್ಕೆ; ನಿನ್ನ+ಆಸರೆ;

ಆದರೂ ಒಂದೊಮ್ಮೆ ನನಗೆ ಸೋಲೊದಗಿದರೆ, ಮತಿ ನೀಡು ಹುಡುಕಲಿಕೆ ನಿನ್ನಾಸರೆ=ಜೀವನದ ನನ್ನ ಹೋರಾಟದಲ್ಲಿ ಒಂದು ವೇಳೆ ಸೋಲು ಉಂಟಾದರೆ, ಆಗ ಗೆಲುವನ್ನು ಪಡೆಯುವುದಕ್ಕೆ ಅಗತ್ಯವಾದ ತಿಳುವಳಿಕೆಯನ್ನು ನನಗೆ ನೀಡು;  ದೇವರಾದ ನೀನು ನನಗೆ ಜೀವನದಲ್ಲಿ ದಾರಿದೀಪವಾಗಿರು;

ಎಲ್ಲ ಸಂಕಟಗಳನ್ನು ಪರಿಹರಿಸುವ ಶಕ್ತಿಯೆಂದು ದೇವರನ್ನು ನಂಬಿಕೊಂಡು ವ್ಯಕ್ತಿಯು ಪರಾವಲಂಬಿಯಾಗಿ ಕಯ್ ಕಟ್ಟಿ ಕುಳಿತುಕೊಳ್ಳದೆ, ದಿಟ್ಟತನ ಮತ್ತು ಕ್ರಿಯಾಶೀಲತೆಯ ನಡೆನುಡಿಯಿಂದ  ಜೀವನದಲ್ಲಿನ ಕೆಡುಕನ್ನು ತೊಡೆದುಹಾಕಿ. ಒಳಿತಿನ ಕಡೆಗೆ ಸ್ವಾವಲಂಬಿಯಾಗಿ ಮುನ್ನಡೆಯಬೇಕು. ದೇವರನ್ನು ಕಲ್ಲು, ಮಣ್ಣು, ಮರ ಮತ್ತು ಲೋಹದಿಂದ ಮಾಡಿರುವ ವಿಗ್ರಹರೂಪಿಯಾಗಿ ಕಾಣದೆ, ಮನದಲ್ಲಿ ಚೇತನವನ್ನು ಮೂಡಿಸಿ, ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಲು ನೆರವಾಗುವ ಒಂದು ಸಂಕೇತವೆಂದು ತಿಳಿಯಬೇಕು ಎಂಬ  ತಿರುಳಿನಲ್ಲಿ ಈ ನುಡಿಗಳು ಬಳಕೆಗೊಂಡಿವೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks