ಸಣ್ಣ ಕತೆ: ಒಲಿದು ಬಂದ ಅದ್ರುಶ್ಟ

– .

rich man and servant, ಸಿರಿವಂತ ಮತ್ತು ಅವನ ಕೆಲಸದ ಆಳು

ರವೀಂದ್ರ ಹೆಗ್ಗಡೆ ಸುಂದರ ಮೈಕಟ್ಡಿನ ನೀಳಕಾಯದ ಸುರದ್ರೂಪಿ. ವಯಸ್ಸು 24 ವರ‍್ಶ. ಬೆಂಗಳೂರಿನ ರಾಮಯ್ಯ ಇನ್ಸಿಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿ. ಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ವಾಪಾಸ್ ತನ್ನ ಕಲ್ಲುಗುಂಡಿಯ ಕಾಪಿ ಎಸ್ಟೇಟ್ ಗೆ ತೆರಳಿ ಕ್ರುಶಿಯಲ್ಲಿ ತೊಡಗಿಕೊಂಡಿದ್ದಾನೆ.

ಕಲ್ಲುಗುಂಡಿ ಕಾಪಿ ಎಸ್ಟೇಟಿನ ನಡುವೆ ಬವ್ಯವಾದ ಮೂರು ಮಹಡಿಯುಳ್ಳ ಇಪ್ಪತ್ತು ಕೋಣೆಯುಳ್ಳ ಬವ್ಯ ಬಂಗಲೆ ‘ಮಂದಾರ’. ಆ ಮಂದಾರದ ಕೊನೆಯ ತೆರೆದ ಚಾವಣಿಯ ಮೇಲೆ ರವೀಂದ್ರ ಹೆಗ್ಗಡೆ ತಾನು ಸಾಕಿದ ಪಾರಿವಾಳಗಳಿಗೆ ಕಾಳುಗಳನ್ನು ಬೀಸುತಿದ್ದಾನೆ. ಅವು ಬಹು ಸಲಿಗೆಯಿಂದ ಕಾಳುಗಳನ್ನು ಹೆಕ್ಕಿ ತಿನ್ನುತ್ತ ರವೀಂದ್ರನ ಹೆಗಲ ಮೇಲೆ, ತೋಳು, ಮುಂಗೈ ಮೇಲೆ ಹಾರಿ ಬಂದು ಕುಳಿತುಕೊಳ್ಳುತಿದ್ದವು. ಅವುಗಳ ಮೈದಡವಿ ಮುದ್ದು ಮಾಡುತಿದ್ದ ರವೀಂದ್ರ. ಬಂಗಲೆಯ ತುಂಬ ಆಳು ಕಾಳು. ಅಡಿಗೆ ಮಾಡುವವರು, ಕಸ ತೆಗೆಯುವವರು, ಬಟ್ಟೆ, ಪಾತ್ರೆ ತೊಳೆಯುವವರು, ಹೂ ತೋಟಕ್ಕೆ ನೀರು ಗೊಬ್ಬರ ಹಾಕಿ ಆರೈಕೆ ಮಾಡುವವರು ಹೀಗೆ ಇಡಿ ಬಂಗಲೆ ಗಿಜಿ ಗಿಜಿಯಾಗಿರುತಿತ್ತು.

ಹೆಗ್ಗಡೆಯವರದ್ದು ಕುಟುಂಬ ಕೋಟ್ಯಾದಿಪತಿಗಳ ಕುಟುಂಬ. ನೂರಾರು ಎಕರೆ ಕಾಪಿ ತೋಟ, ಟೀ ತೋಟ, ಅಡಿಕೆ ತೋಟ, ಬತ್ತದ ಗದ್ದೆ, ಕಿತ್ತಳೆ ತೋಟ. ಹೀಗೆ ಅವರ ಆಸ್ತಿಯ ವಿವರ ಕಲೆ ಹಾಕುವುದು ಅಶ್ಟು ಸುಲಬದ ಮಾತಲ್ಲ. ಈ ಎಸ್ಟೇಟಿನ ವಹಿವಾಟು ನೋಡಿಕೊಳ್ಳಲು ನೂರಾರು ಜನ ರೈಟರ್ ಗಳು, ಮೇಸ್ತ್ರಿ ಗಳು, ಕೂಲಿಯಾಳುಗಳು. ರವೀಂದ್ರ ಹೆಗ್ಗಡೆಯವರ ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ದೊಡ್ಡ ದೊಡ್ಡ ಕಾಪಿ ಎಸ್ಟೇಟುಗಳ ಮಾಲಿಕರೇ. ಇನ್ನೂ ಕೆಲವರು ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಉದ್ಯಮವನ್ನು ಹೊಂದಿದವರು. ಒಟ್ಟಾರೆ ಹೆಗ್ಗಡೆ ಕುಟುಂಬ ಎಂದರೆ ಅದು ಕೋಟ್ಯಾದೀಶರ ಕುಟುಂಬ ಎಂಬುದು ಮನೆಮಾತು.

ರವಿಂದ್ರ ಹೆಗ್ಗಡೆ ಮಹಡಿಯ ಚಾವಣಿಯಿಂದ ಕೆಳಗಿನ ವಿಸ್ತಾರ ಕಾಪಿ ಬೀಜ ಒಣಗಿಸುವ ಕಾಪಿ ಕಣ ನೋಡುತ್ತಿದ್ದ, ಹಾಗೆಯೇ ಪ್ಲಾಶ್ ಬ್ಯಾಕ್ ಗೆ ಹೋದ… ಅಮ್ಮ ರತ್ನಮ್ಮ ಆಳುಗಳಿಗೆ ವಸ್ತ್ರ, ದಾನ್ಯ, ಹಣ ಇನ್ನೂ ಕೆಲವರಿಗೆ ಹೆಣ್ಣು ಕರು ದಾನ ಮಾಡುತಿದ್ದಾಳೆ. ಹೆಣ್ಣು ಕರು ದಾನ ಪಡೆಯುತ್ತಿರೋ ಆಳು ಮಂಜಿಯನ್ನು ಕುರಿತು “ಲೇ ಮಂಜಿ ಈ ಹೆಣ್ಣು ಕರು ಚೆನ್ನಾಗಿ ಸಾಕು ನಿನ್ನ ಬಡತನದ ಸಂಸಾರಕ್ಕೆ ದಿಕ್ಕಾಗುತ್ತದೆ” ಎಂದು ಬುದ್ದಿ ಮಾತು ಹೇಳಿ ಕೊಡುತಿದ್ದಳು. ಅಮ್ಮ ಬ್ಲಡ್ ಕ್ಯಾನ್ಸರ್ ನಿಂದ ತೀರಿಕೊಂಡು ಇಂದಿಗೆ ಎಂಟು ವರ‍್ಶ. ಇದ್ದಕಿದ್ದಂತೆ ಅಮ್ಮನ ನೆನೆದುಕೊಂಡ ಅವನ ಎರಡು ಕಣ್ಣುಗಳು ತೇವವಾಯ್ತು.

ಅಕ್ಕನನ್ನು ಸಿಂದಗೆರೆಯ ‘ಸಿರಿ ಮನೆ’ ಎಸ್ಟೇಟ್ ಮಾಲಿಕ ಕಿರಣ್ ಗೌಡನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಅವನೂ ಕೋಟ್ಯದೀಶನೇ. ಅವನದು ಬೆಂಗಳೂರಿನಲ್ಲಿ ದೊಡ್ಡ ಉದ್ಯಮ ನಡೆಸುತ್ತಿದ್ದರಿಂದ ಅವನು ಮತ್ತು ಅವನ ಕುಟುಂಬ ಬೆಂಗಳೂರಲ್ಲೆ ನೆಲೆಸಿದೆ. ಎಸ್ಟೇಟಿಗೆ ಆಗಾಗ ಬಂದು ಹೋಗುತ್ತಿರುತ್ತಾರೆ. ಅಕ್ಕನಿಗೆ ಎರಡು ಮುದ್ದಾದ ಮಕ್ಕಳು ದರಿತ್ರಿ ಮತ್ತು ರಾಹುಲ್. ಅವರು ರಜೆಗೆಂದು ಮಾವನ ಮನೆಗೆ ಬಂದು ಬಂಗಲೆ ತುಂಬ ಓಡಾಡುತಿದ್ದರೆ ರವೀಂದ್ರನ ಮನೆ ಮನ ತುಂಬಿ ಬರುತಿತ್ತು.

ಅಪ್ಪ ಚಿನ್ನಪ್ಪ ಹೆಗ್ಗಡೆ. ಇವರಿಗೆ ಎರಡು ವರ‍್ಶಗಳಿಂದ ಬೆನ್ನು ಮೂಳೆ ಕ್ಯಾನ್ಸರ್ ನಿಂದ ಬಳಲುತಿದ್ದು ಸಿಂಗಾಪುರ್ ನ ‘ಇಂಟರ್ ನ್ಯಾಶನಲ್ ಮಲ್ಟಿ ಸ್ಪೇಶಾಲಿಟಿ’ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯ್ತು. ಆದರೆ ಅಲ್ಲಿಯೂ ಗುಣ ಹೊಂದುವ ಲಕ್ಶಣ ಕಾಣದಿದ್ದಾಗ ಚಿಕಿತ್ಸೆಗಾಗಿ ಅಮೇರಿಕಾಕ್ಕೆ ಕರೆದುಕೊಂಡು ಹೋಗುವ ತಯಾರಿ ಮಾಡಿಕೊಳ್ಳುತಿದ್ದರು.. ಆದರೆ ಅಶ್ಟರಲ್ಲಿಯೇ ಅವರ ಪ್ರಾಣ ಪಕ್ಶಿ ಹಾರಿ ಹೋಗಿತ್ತು. ಈಗ್ಗೆ ಅಪ್ಪ ಸತ್ತು ಮೂರು ತಿಂಗಳಾಗಿದೆ. ರವೀಂದ್ರ ಹೆಗ್ಗಡೆಯ ಮನದಲ್ಲಿ ಒಂದು ರೀತಿಯ ಅನಾತ ಬಾವ ಕಾಡುತ್ತಿದೆ.

ರವೀಂದ್ರನ ಹಿರಿಯರೆಲ್ಲರೂ ಮದುವೆ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪ ಮಾಡ ತೊಡಗಿದರು. ಅವನ ಅಂತಸ್ತಿಗೆ ಸರಿ ಹೊಂದುವ ಕೆಲವು ಹೆಣ್ಣನ್ನು ತೋರಿಸಿದರು ಆದರೆ ಯಾಕೋ ರವೀಂದ್ರನಿಗೆ ಮದುವೆ ಆಗುವ ಮನಸ್ಸಿಲ್ಲವೋ ಅತವಾ ಸದ್ಯಕ್ಕೆ ಮದುವೆ ಬೇಡವೋ? ಗೊತ್ತಿಲ್ಲ.

ನಿತ್ಯ ಬಂಗಲೆಯ ಮನೆಗೆ ಅಡಿಗೆ ಮಾಡಲು ಸರೋಜಮ್ಮ ಬರುತಿದ್ದಳು. ಸಾಹುಕಾರ್ ರವೀಂದ್ರರಿಗೆ ಇಶ್ಟವಾದ ಮಟನ್ ಸುಕ್ಕಾ, ಅಕ್ಕಿ ರೊಟ್ಟಿ, ಬೆಳ್ಳಂಜಿ ಮೀನಿನ ಸಾರು, ಬೀನ್ಸ್ ಪಲ್ಯ, ಅನ್ನ ಇವೆಲ್ಲ ಮಾಡಿಟ್ಟು ಹೋಗುತಿದ್ದಳು. ತನಗೆ ಹಸಿವಾದಗ ರವೀಂದ್ರ ಸ್ವಲ್ಪ ತಿಂದು ಉಳಿದದ್ದನ್ನು ಪ್ರಿಜ್ ನಲ್ಲಿ ಎತ್ತಿಡುತಿದ್ದನು. ರಾತ್ರಿಗೆ ಅದನ್ನೆ ಬಿಸಿ ಮಾಡಿಕೊಂಡು ಊಟ ಮಾಡುತಿದ್ದ.

ಅಂದು ಮುಂಜಾನೆ ತೆರೆದ ಮಹಿಂದ್ರಾ ಜೀಪ್ ಏರಿ ರವೀಂದ್ರ ತನ್ನ ಎಸ್ಟೇಟ್ ಒಂದು ಸುತ್ತು ಹಾಕಲು ಹೋಗಿದ್ದನು. ಅವರ ವಾಹನದ ಸಂಗ್ರಹದಲ್ಲಿ, ರೇಂಜ್ ರೋವರ್, ಆಡಿ, ನಿಸ್ಸಾನ್, ಹುಂಡೈ, ಟಾಟಾ, ಜಿಪ್ಸಿ ಹೀಗೆ ಒಂದು ದೊಡ್ಡ ಕಾರ್ ಶೋ ರೂಂ ತೆಗೆಯುವಶ್ಟು ಕಾರುಗಳಿದ್ದವು. ಆದರೆ ರವೀಂದ್ರನ ನೆಚ್ಚಿನ ಕಾರು ರೇಂಜ್ ರೋವರ್ ಆಗಿತ್ತು. ಅಂದು ಉಲ್ಲಾಸದಲಿ ತನ್ನ ತೋಟ ಸುತ್ತು ಹಾಕುವ ಉಮೇದಿನಲ್ಲಿದ್ದನು. ಅವರ ತೋಟದ ನಂದಿ ಮರದ ಪೊಟರೆಯೊಳಗೆ ಹಕ್ಕಿಯೊಂದು ಗೂಡು ಕಟ್ಟಿ ಮೊಟ್ಟೆಯಿಟ್ಟು ಕಾವು ಕೊಟ್ಟು ಮರಿ ಮಾಡಿತ್ತು. ಆ ಹಕ್ಕಿಯ ಗೂಡು ಮರಿಗಳ ಚಿವ್ ಚಿವ್ ಗುಟ್ಟುವಿಕೆಯಿಂದಾಗಿ ಒಂದು ರೀತಿಯ ಸಣ್ಣ ಕಲರವ ಅಲ್ಲಿ ಏರ‍್ಪಟ್ಟಿತ್ತು. ತಾನು ತೋಟಕ್ಕೆ ಬಂದಾಗೆಲ್ಲ ಪೊಟರೆಯಲ್ಲಿ ಹಕ್ಕಿಗಳ ಚಲನವಲನ ಸದ್ದಿಲ್ಲದೆ ಹೋಗಿ ಇಣುಕಿ ವೀಕ್ಶಿಸುತಿದ್ದ. ಇವತ್ತು ಮೆತ್ತಗೆ ಹೋಗಿ ಇಣುಕಿದ ರವೀಂದ್ರ… ಆಗತಾನೆ ಬಂದ ತಾಯಿ ಹಕ್ಕಿ ಮರಿಗಳಿಗೆ ಗುಟುಕು ನೀಡುತಿತ್ತು. ಆ ದ್ರುಶ್ಯ ಕಂಡು ರವೀಂದ್ರನ ಮನ ಕಲಕಿತು. ಸಣ್ಣವನಿದ್ದಾಗ ಅಮ್ಮನ ಕೈ ತುತ್ತು ನೆನಪಿಸಿಕೊಂಡ, ಕಣ್ಣು ಮತ್ತೇ ತೇವವಾಯ್ತು.

ತೋಟದ ಸುತ್ತಾಟದಿಂದ ಆಯಾಸಗೊಂಡಿದ್ದ ರವೀಂದ್ರ ಬಂಗಲೆಗೆ ಬಂದವನೆ ಸೀದಾ ಸ್ನಾನದ ಮನೆಗೆ ಹೋದ. ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದ, ಮೈ ಒರೆಸಿಕೊಳ್ಳಲು ನೋಡುತ್ತಾನೆ ಟವೆಲ್ ಮರೆತು ಬಂದಿದ್ದಾನೆ. ನಿತ್ಯ ಮನೆಯೊಳಗೆ ಇರುತಿದ್ದ ವಯಸ್ಸಾದ ಆಳು ಹನುಮಂತಣ್ಣನ ಹೆಸರು ಹಿಡಿದು ಜೋರಾಗಿ ಕೂಗಿ ಟವೆಲ್ ತರಲು ಹೇಳಿದ, ಆದರೆ ಅವನು ಬರುವ ಲಕ್ಶಣ ಕಾಣಲಿಲ್ಲ. ಮತ್ತೊಮ್ಮೆ ಜೋರಾಗಿ ಅವನ ಹೆಸರು ಹಿಡಿದು ಕೂಗಿದ ಆಗಾ ಒಂದು ಮ್ರುದುವಾದ ಹೆಣ್ಣು ದ್ವನಿ “ಹಾ…. ತಂದೆ ಸಾಹುಕಾರ‍್ರೆ…” ಎಂದು ನುಲಿಯಿತು. ಅವಳು ಟವೆಲ್ ಬಾತ್ ರೂಂನ ಹೊರಗಿಟ್ಟು “ಇಲ್ಲಿ ಇಟ್ಡಿದ್ದೀನಿ ತಗೊಳ್ಳಿ ಸಾಹುಕಾರ‍್ರೇ…” ಎಂದು ಹೇಳಿ ಹೊರಟು ಹೋದಳು‌. ರವೀಂದ್ರನಿಗೆ ಆಶ್ಚರ‍್ಯ! “ಯಾರಿವಳು…? ಇದುವರೆಗೂ ನಾನು ಇಶ್ಟು ನಾಜೂಕಿನ ಹೆಣ್ಣು ದನಿ ಈ ಬಂಗಲೆಯಲ್ಲಿ ಕೇಳಿಲ್ಲವಲ್ಲ…!?” ಎಂದು ತಲೆ ಕೆಡಿಸಿಕೊಂಡ.

ಸುಮಾರು ಇಪ್ಪತ್ತೊಂದು ವಯಸ್ಸು ಇರಬಹುದು ಎತ್ತರದ ಆಕರ‍್ಶಕ ನಿಲುವಿನ ವ್ಯಕ್ತಿತ್ವ, ಕೋಲು ಮುಕ, ನೀಳ ನಾಸಿಕ, ಹೊಳೆವ ಬಟ್ಟಲುಗಣ್ಣು, ತಿದ್ದಿ ತೀಡಿದ ಹುಬ್ಬು, ವಿಶಾಲವಾದ ಹಣೆ, ಕೆಂಪು ಬಿಳಿ ಮಿಶ್ರಿತ ಮೈ ಬಣ್ಣದ ಸುಂದರಿ ಕರುಣಾ. ಇವಳು ನಿತ್ಯ ಬಂಗಲೆಗೆ ಅಡಿಗೆ ಮಾಡಲು ಬರುತಿದ್ದ ಸರೋಜಮ್ಮನ ಮಗಳು. ಅಮ್ಮನಿಗೆ ಮೈ ಹುಶಾರಿಲ್ಲ ಎಂದು ಇವತ್ತು ಅವಳು ಬಂಗಲೆಗೆ ಅಡಿಗೆ ಮಾಡಲು ಬಂದಿದ್ದಳು. ಅವಳ ಅಡಿಗೆಯ ವೈಕರಿ ಸರೋಜಮ್ಮಳಿಗಿಂತ ಒಂದು ಕೈ ಮೇಲೆ ಅಶ್ಟು ರುಚಿಕಟ್ಟಾದ ಮೀನು ಸಾರು, ರೊಟ್ಟಿ, ಬೀಟ್ರೂಟ್ ಪಲ್ಯ, ಸೌತೆಕಾಯಿ ಕೊಸಂಬರಿ ಮಾಡಿಟ್ಟಿದ್ದಳು. ರವೀಂದ್ರ ಸ್ನಾನ‌ ಮುಗಿಸಿ ದೇವರ ಪೂಜೆ ಮಾಡಿ ಹೊರಬಂದಾಗ ಇವಳು ಅಡಿಗೆ ಮಾಡಿಟ್ಟು, “ಸಾಹುಕಾರ‍್ರೇ ಅಡಿಗೆ ಮಾಡಿಟ್ಟಿದ್ದೀನಿ ನಾನು ಬರ‍್ತೀನಿ” ಎಂದು ಹೊರಡಲನುವಾದಾಗ ರವೀಂದ್ರ, “ನಿಲ್ಲು.. ಯಾರು ನೀನು? ಇದುವರೆಗೂ ನಮ್ಮ ಬಂಗಲೆಯಲ್ಲಿ ನಿನ್ನ ನೋಡಿಲ್ಲವಲ್ಲ?” ಎಂದ.

ಕರುಣಾ ತಲೆ ತಗ್ಗಿಸಿಕೊಂಡು “ಸಾಹುಕಾರ‍್ರೇ ನಾನು ಸರೋಜಮ್ಮನ ಮಗಳು, ಅಮ್ಮನಿಗೆ ಮೈ ಹುಶಾರಿಲ್ಲದ ಸಲುವಾಗಿ ಇವತ್ತು ಅಮ್ಮ ಅಡಿಗೆ ಮಾಡಿಟ್ಟು ಬರಲು ನನಗೆ ಕಳುಹಿಸಿದಳು” ಎಂದು ಹೊರಡಲು ಒಂದು ಹೆಜ್ಜೆ ಮುಂದಡಿ ಇಟ್ಟಳು.

” ನಿನ್ನ ಹೆಸರೇನು..? ನೀನು ಈಗ ಏನ್ಮಾಡ್ತಾ ಇದ್ದೀಯಾ” ಎಂದು ರವೀಂದ್ರ ಮರು ಪ್ರಶ್ನಿಸಿದ.

“ಸಾಹುಕಾರ‍್ರೇ ನನ್ನ ಹೆಸರು ಕರುಣಾ, ನಾನು ಪೈನಲ್ ಇಯರ್ ಡಿಗ್ರಿ ಓದ್ತಾ ಇದಿನಿ. ಬರ‍್ತೀನಿ ಸಾಹುಕಾರ‍್ರೇ ” ಎಂದು ಹೆಚ್ಚು ಕಡಿಮೆ ಓಡಲು ಅನುವಾದಳು.

“ಸರಿ, ತೋಟದಿಂದ ತಂದ ಕಿತ್ತಲೆ ಹಣ್ಣಿದೆ ನಿಮ್ಮ ಅಪ್ಪ, ಅಮ್ಮನಿಗೆ ತಗೊಂಡು ಹೋಗಿ ಕೊಡು” ಎಂದು ಕಿತ್ತಲೆ ಹಣ್ಣು ತುಂಬಿದ ಬ್ಯಾಗ್ ಅವಳ ಕೈಗಿತ್ತಾಗ ರವೀಂದ್ರನ ಕೈ ಕರುಣಾಳ ಕೈ ಸೋಕಿತು ಅವಳಿಗೆ ಅವ್ಯಕ್ತ ಬಯ, ವಯಸ್ಸಿನ ಸಹಜ ನಾಚಿಕೆ ಎಲ್ಲವೂ ಆವರಿಸಿತು. ಬ್ಯಾಗು ಇಸಿದುಕೊಳ್ಳುವಾಗ ಕರುಣಾಳ ಮತ್ತು ರವೀಂದ್ರನ ಕಣ್ಣು ಪರಸ್ಪರ ಸಂದಿಸಿದವು. ಅವಳ ಕಣ್ಣಲ್ಲಿ ಅದೆಂತದೋ ವಿಶೇಶ ಸೆಳೆತ ಕಂಡ ರವೀಂದ್ರ. ಬ್ಯಾಗು ಇಸಿದುಕೊಂಡವಳೆ ಕ್ಶಣ ಮಾತ್ರವೂ ನಿಲ್ಲದೆ ಕರುಣಾ ಅಲ್ಲಿಂದ ಗಾಡಿ ಬಿಟ್ಟಿದ್ದಳು.

ರಾತ್ರಿ ಹಾಸಿಗೆಯ ಮೇಲೆ ಪವಡಿಸಿದ್ದ ರವೀಂದ್ರನ ಮನಸ್ಸು ಕರುಣಾಳ ಕಣ್ಣಲ್ಲಿದ್ದ ವಿಶೇಶ ಸೆಳೆತದ ಬಗ್ಗೆ ಯೋಚಿಸುತ್ತಿತ್ತು, ಅವಳ ಕೈ ಸೋಕಿದಾಗ ಆದ ಮೈ ಪುಳಕ ಅವನಿಗೆ ರೋಮಾಂಚನ ತಂದಿತ್ತು. ಅಂದು ಅವನಿಗೆ ಮೈಯೆಲ್ಲ ಒಂದು ರೀತಿಯ ಆಹ್ಲಾದ ತಂದಿತ್ತು. ‘ಅರೇ ಕರುಣಾ ಕಾಡಿನಲ್ಲಿ ಅರಳಿದ ಸುಂದರ ಮಲ್ಲಿಗೆ, ಬಡವರ ಮನೆಯಲ್ಲಿ ಒಂದು ದಂತದ ಬೊಂಬೆ ಸ್ರುಶ್ಟಿ ಮಾಡಿದ್ದಾನೆ ದೇವರು. ಅವಳ ಅಡಿಗೆಯಲ್ಲಿ ಅದೆಂತಹ ರುಚಿ, ತೇಟ್ ನಮ್ಮ ಅಮ್ಮನನಂತೆ ಕೈ ರುಚಿ. ಹೆಣ್ಣಿನ ವಯೋ ಸಹಜವಾದ ಬಯ, ನಾಚಿಕೆ ಅವಳಲ್ಲಿ ತುಸು ಹೆಚ್ಚಾಗಿಯೇ ಇದೆ’. ಅವಳ ಎತ್ತರದ ನಿಲುವು, ಸುಂದರವಾದ ಮೊಗ, ಸಹಜವಾದ ಚೆಲುವು ಕಂಡು ತನಗರಿವಿಲ್ಲದಂತೆ ಅವಳ ಮೇಲೆ ಒಂದು ರೀತಿಯ ಸೆಳೆತ ಪ್ರಾರಂಬವಾಗಿತ್ತು. ಆತನ ಸಾಹುಕಾರಿಕೆಗೆ ಹಣದ ಆಸೆ ಒಡ್ಡಿ ಇಂತಹ ಎಶ್ಟೋ ಆಸೆ ಬಾಕ ಹೆಣ್ಣುಗಳ ಜೊತೆ ಅವನು ಚಕ್ಕಂದವಾಡಬಹುದಿತ್ತು. ಆದರೆ ರವೀಂದ್ರ ಹೆಗ್ಗಡೆಯ ವ್ಯಕ್ತಿತ್ವ ಅಂತಹದ್ದಲ್ಲ. ಆತ ಹೆಣ್ಣು ಮಕ್ಕಳನ್ನು ಗೌರವಿಸುತಿದ್ದ, ಆತನ ಬಂಗಲೆ ಎಸ್ಟೇಟ್ ನಲ್ಲಿ ಸಾವಿರಾರು ಜನ ಹೆಣ್ಣು ಮಕ್ಕಳು, ಕೂಲಿಯಾಳುಗಳು, ಇದ್ದರೂ ಒಮ್ಮೆಯೂ ಅವರನ್ನು ಕೆಟ್ಟ ದ್ರುಶ್ಟಿಯಿಂದ ನೋಡಿದವನಲ್ಲ. ಈತನಲ್ಲಿ ಯಾವುದೆ ಹೆಣ್ಣುಬಾಕತನದ ಗುಣ ಇಲ್ಲವೇ ಇಲ್ಲ.

ಕರುಣಾಳ ಅಮ್ಮ ಇನ್ನೂ ಚೇತರಿಸಿಕೊಂಡಿಲ್ಲ “ಇವತ್ತು ಅಡಿಗೆ ಮಾಡಕ್ಕೆ ಬಂಗಲೆಗೆ ನೀನೆ ಹೋಗಿ ಬಾ ಕರುಣಾ” ಎಂದು ಮಲಗಿದಲ್ಲಿಯೇ ಮಗಳಿಗೆ ಎಚ್ಚರಿಸಿದಳು. ನಿನ್ನೆ ಸಾಹುಕಾರರ ಕೈಗೆ ಕೈ ಸೋಕಿದಾಗ ಅವಳಲ್ಲು ಒಂದು ರೀತಿಯ ಆನಂದವಿತ್ತು. ಆದರೆ… ಅವಳ ಬಯ ಏನೆಂದರೆ ಈ ಸಾಹುಕಾರರು ಹರೆಯದ ಹುಡುಗಿರ ಜೊತೆ ಸಲಿಗೆ ಬೆಳಸಿ ನಂತರ ಅವರು ತಮ್ಮ ಕಾಮ ತ್ರುಶೆಗೆ ಬಳಸಿಕೊಂಡು ಕಸ ಎಸೆದಂತೆ ಎಸೆದು ಬಿಡುತ್ತಾರೆ ಎಂಬ ಸುದ್ದಿ ಇವಳು ಕೇಳಿ ತಿಳಿದಿದ್ದಳು.

“ಅಮ್ಮ… ನನಗೆ ಬಂಗಲೆಗೆ ಹೋಗಲು ಬಯ ಸಾಹುಕಾರ‍್ರು ನನ್ನ ಯಾಕೋ ಒಂತರಾ ನೋಡ್ತಾರೆ” ಎಂದಳು .

“ಏಯ್, ಸಣ್ಣ ಸಾಹುಕಾರರನ್ನು ಅವರು ಚಿಕ್ಕವರಿರುವಾಗಿನಿಂದ ನೋಡ್ತಾ ಇದ್ದೀನಿ, ಅವರು ಅಂತಹವರಲ್ಲ, ಅವರಿಗೆ ಬಡವರು ಬಗ್ಗರು ಎಂದರೆ ಕನಿಕರ ಗೌರವವಿದೆ. ಹಂಗೆಲ್ಲ ಇನ್ನೊಬ್ಬರ ಹೆಣ್ಶು ಮಕ್ಕಳನ್ನು ಅವರು ಕಣ್ಣೆತ್ತಿ ನೋಡಲ್ಲ, ನನಗೆ ಹುಶಾರಾಗೊ ತನಕ ಅಡಿಗೆ ಕೆಲಸಕ್ಕೆ ಹೋಗು, ಆಮೇಲೆ ನಿನ್ಯಾರು ಕಳಸ್ತಾರೆ ಅಲ್ಲಿಗೆ” ಎಂದು ಗದರಿ ಮಗಳನ್ನು ಕಳಿಸಿದಳು.

ಅಡಿಗೆ ಮಾಡಲು ಅಡಿಗೆ ಕೋಣೆಯಲ್ಲಿ ತರಕಾರಿ ಹೆಚ್ಚುತಿದ್ದಾಳೆ ಕರುಣಾ‌. ಸಾಹುಕಾರರು ಮುಕ್ಯ ಹಾಲಿನಲ್ಲಿ ಕುಳಿತು ಪತ್ರಿಕೆ ಒದುತಿದ್ದಾರೆ. ಬಾಯಾರಿದ ಸಾಹುಕಾರ‍್ರು ಆಳು ಹನುಮಂತಣ್ಣನ ಕೂಗಿ ಒಂದು ಗ್ಲಾಸ್ ನೀರು ತರಲು ಹೇಳಿದರೆ, ಆತನಿಗೆ ವಯಸ್ಸಾಗಿರೊದ್ರಿಂದ ಕಿವಿಯೂ ಸರಿಯಾಗಿ ಕೇಳುವುದಿಲ್ಲ, ಎತ್ತ ಮರೆಯಾಗಿ ಬಿಡ್ತಾನೋ ಗೊತ್ತಿಲ್ಲ. ಎರಡು ಮೂರು ಸಾರಿ ಕರೆದರು ಬಾರದಿದ್ದಾಗ ಸಾಹುಕಾರರೇ ಎದ್ದು ನೀರು ಕುಡಿಯಲು ಹೊರಟಾಗ. ಕರುಣಾಳೆ ಒಂದು ಗ್ಲಾಸ್ ನೀರನ್ನು ಅವರಿರುವಲ್ಲಿಗೆ ತಂದಳು. ಅವಳ ಕೈ ನಡುಗುತ್ತಿದೆ, ಏನೋ ಅಂಜಿಕೆ ನೀರನ್ನು ಅವರಿರುವಲ್ಲಿಗೆ ಹೋಗಿ ಕೊಡುವ ಬರದಲ್ಲಿ ಹಾಲಿನ ರತ್ನಗಂಬಳಿ ನೆಲ ಹಾಸು ಎಡವಿ ಟೀಪಾಯಿಯ ಮೇಲೆ ಬಿಳುವವಳಿದ್ದಳು. ಇದನ್ನು ಕಂಡ ರವೀಂದ್ರ ಕೂಡಲೆ ಎರಡು ಕೈಯಿಂದ ಬರಸೆಳೆದು ಬೀಳುವ ಕರುಣಾಳನ್ನು ಹಿಡಿದುಕೊಂಡ. ಗ್ಲಾಸಿನ ನೀರು ನೆಲ ಹಾಸಿನ ಪಾಲಾಯ್ತು. ಕರುಣಾ ರವೀಂದ್ರರ ಎದೆಗೂಡಿನ ಬಂದಿಯಾದಳು. ಇಬ್ಬರದು ಬಿಸಿಯುಸಿರು ಪರಸ್ಪರ ಮುಕಕ್ಕೆ ಸೋಕುತ್ತಿದೆ. ರವೀಂದ್ರ ಎಂದೂ ಈ ರೀತಿ ಪರಸ್ತ್ರೀಯ ಮೈ ಮುಟ್ಟಿದವನಲ್ಲ. ಅಕಸ್ಮಾತಾಗಿ ಕರುಣಾಳನ್ನು ಮುಟ್ಟ ಬೇಕಾಯ್ತು. ನಾಚಿಕೆಯಿಂದ ಕೆಂಪೇರಿದ್ದ ಅವಳ ವದನದಿಂದ ರವೀಂದ್ರನಿಗೆ ಮತ್ತಶ್ಟು ಸುಂದರವಾಗಿ ಕಂಡಳು. ಅವನಿಗರಿವಿಲ್ಲದೆ ಮಂತ್ರಮುಗ್ದನಂತೆ ಕರುಣಾಳನ್ನು ಮತ್ತಶ್ಟು ಎದೆಗೆ ಅವಚಿಕೊಂಡ. ಅವಳ ಕಿವಿಯ ಬಳಿ ಸಾರಿ ಉಸುರಿದ. ನಿನ್ನ ಕೈಯ ಅಡಿಗೆ ನನ್ನ ಅಮ್ಮನ ನೆನಪು ತರಿಸುತ್ತಿದೆ. ನಿನ್ನನ್ನು ಬಲು ಇಶ್ಟ ಪಡುತ್ತೀನಿ ನೀನು ನನ್ನ ಮದುವೆಯಾಗುತ್ತೀಯಾ…?? ಎಂದಾಗ ಕರುಣಾ ಅವನ ಎದೆಯ ಗೂಡಲ್ಲಿ ಕರಗಿ ನಾಚಿ ನೀರಾಗಿದ್ದಳು.

ಎಲ್ಲರ ವಿರೋದದ ನಡುವೆ ರವೀಂದ್ರ ಹೆಗ್ಗಡೆ ಕರುಣಾಳನ್ನು ಕೈ ಹಿಡಿದ, ಇವರಿಗೆ ಎರಡು ಮುದ್ದಾದ ಮಕ್ಕಳಾದವು. ಆಳಾಗಿ ಬಂದ ಕರುಣಾ ಕೋಟ್ಯಾದೀಶನ ಕಣ್ಣಿಗೆ ಬಿದ್ದು ಇಂದು ಆ ಬಂಗಲೆಯ ಮಹಾರಾಣಿಯಾದಳು. ಅದ್ರುಶ್ಟ ಎಂದರೆ ಇದೇ ಅಲ್ಲವೇನು…?

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. shri says:

    Story from 1960-70s

ಅನಿಸಿಕೆ ಬರೆಯಿರಿ:

Enable Notifications OK No thanks