ಕಬ್ಬಿನಹಾಲು ಹಾಗೂ ಅಕ್ಕಿ ಹುಗ್ಗಿ

– ಮಾರಿಸನ್ ಮನೋಹರ್.
ಹುಗ್ಗಿ, sweet dish

ಈಗ ಬೇಸಿಗೆಯು ಬಂದಿದೆ, ಇದರೊಂದಿಗೆ ಕಬ್ಬಿನ ಹಾಲು ಕೂಡ ಬಂದಿದೆ‌. ಕಬ್ಬಿನ ಹಾಲಿನಿಂದ ಮಾಡುವ ತುಂಬಾ ಸುಲಬವಾದ ಹುಗ್ಗಿ ಇದು. ಕಬ್ಬಿನ ಹಾಲು ಸೆಕೆಯನ್ನು ಓಡಿಸಿ ಮೈ ತಂಪಾಗುವ ಹಾಗೆ ಮಾಡುತ್ತದೆ. ಕಬ್ಬಿನ ಹಾಲಿನ ಗಾಣಗಳಿಂದ ಕಬ್ಬಿನ ಹಾಲು ದೊರೆಯುತ್ತದೆ ಪ್ಲಾಸ್ಟಿಕ್ ಬಾಟಲಿನಲ್ಲಿ ತುಂಬಿಕೊಂಡು ಬಂದರೆ ಆಯ್ತು.

ಬೇಕಾಗುವ ಪದಾರ‍್ತಗಳು:

1 ಕಪ್ ಅಕ್ಕಿ
½ ಲೀಟರ್ ಕಬ್ಬಿನ ಹಾಲು
3 ಏಲಕ್ಕಿ

ಬೇಕಾದರೆ:
ತುಪ್ಪ
ಒಣದ್ರಾಕ್ಶಿ
ಗೋಡಂಬಿ
ಬಾದಾಮಿ
ಒಣ ಕೊಬ್ಬರಿ
ತಿನ್ನುವ ಸೋಂಪು

ಮಾಡುವ ಬಗೆ:

ಮೊದಲು ಒಂದು ಕಪ್ ಅಕ್ಕಿಗೆ ಮೂರು ಕಪ್ ನೀರು ಹಾಕಿ ಮೆತ್ತನೆಯ ಅನ್ನ ಮಾಡಬೇಕು‌. ಅನ್ನ ಆದ ಮೇಲೆ ಅದಕ್ಕೆ ಕಬ್ಬಿನ ಹಾಲು ಹಾಕಿ ಮೀಡಿಯಂ ಉರಿಯ ಮೇಲೆ ಕುದಿಸಬೇಕು. ನೀವು ಅಕ್ಕಿ ಜೊತೆಗೆ ಕಬ್ಬಿನ ಹಾಲು ಹಾಕಿದರೆ ಅಕ್ಕಿ ಕುದಿಯುವದಿಲ್ಲ. ಅನ್ನ ಆದ ಮೇಲೆಯೇ ಕಬ್ಬಿನ ಹಾಲು ಹಾಕಿ.ಆಗಾಗ ತಿರುವುತ್ತ ಇರಬೇಕು ಇಲ್ಲದಿದ್ದರೆ ಹುಗ್ಗಿ ತಳಕೂರುತ್ತದೆ. ಕಬ್ಬಿನ ಹಾಲು ಕುದಿದು ಅಟ್ಟಿಸಬೇಕು (ಅನ್ನದಲ್ಲಿ ಸೇರಬೇಕು). ಈ ಹಂತದಲ್ಲಿ ಏಲಕ್ಕಿಗಳನ್ನು ಕುಟ್ಟಿ ಹುಗ್ಗಿಗೆ ಸೇರಿಸ ಬೇಕು. ಈಗ ಹುಗ್ಗಿ ಆದಂತೆಯೇ ಇದನ್ನು ತಿನ್ನಬಹದು.

ಆದರೆ ಇದಕ್ಕೆ ತುಪ್ಪದ ಒಗ್ಗರಣೆ ಕೊಟ್ಟರೆ ಇನ್ನೂ ಚೆನ್ನಾಗಿ ಇರುತ್ತದೆ. ಒಂದು ಬಟ್ಟಲಲ್ಲಿ ಇಲ್ಲವೇ ಮತ್ತೊಂದು ಪಾತ್ರೆಯಲ್ಲಿ ಎರಡು ಟೀ ಸ್ಪೂನ್ ತುಪ್ಪ ಕಾಯಲು ಇಟ್ಟು ಅದರಲ್ಲಿ ಒಣದ್ರಾಕ್ಶಿ ಗೋಡಂಬಿ ಬಾದಾಮಿ ಒಣಕೊಬ್ಬರಿ ಹಾಕಿ ಒಗ್ಗರಣೆ ಕೊಟ್ಟು ಅದನ್ನು ಹುಗ್ಗಿಗೆ ಸೇರಿಸಬೇಕು. ಈಗ ಕಬ್ಬಿನಹಾಲಿನ ಅಕ್ಕಿ ಹುಗ್ಗಿ ತುಂಬಾ ರುಚಿಕಟ್ಟಾಗಿ ಬರುತ್ತದೆ. ಈ ಹುಗ್ಗಿಯನ್ನು ಬಿಸಿ ಬಿಸಿಯಾಗಿ ತಿನ್ನಬಹದು‌. ಪ್ರಿಜ್ ನಲ್ಲಿ ಕೆಲವು ಗಂಟೆ ಇಟ್ಟು ತಣಿಸಿ ಡೆಸರ‍್ಟ್ ತರಹ ತಿಂದರೆ ಇನ್ನೂ ಚೆನ್ನಾಗಿರುತ್ತದೆ. ಕೆಲವರು ಇದಕ್ಕೆ ತಿನ್ನುವ ಸೋಂಪು ಕುಟ್ಟಿ ಪುಡಿಮಾಡಿ ಹಾಕಿ ತಿನ್ನುತ್ತಾರೆ.

(ವಿ.ಸೂ : ಈ ಕಬ್ಬಿನಹಾಲಿನ ಅಕ್ಕಿ ಹುಗ್ಗಿಯನ್ನು ಊಟದ ಮುಂಚೆಯೇ ತಿನ್ನುತ್ತಾರೆ ಊಟವಾದ ಮೇಲೆ ತಿನ್ನುವದಿಲ್ಲ. ಹುಗ್ಗಿಗೆ ಸಿಹಿ ಕಡಿಮೆ ಅನಿಸಿದರೆ ಮೇಲಿಂದ ಸ್ವಲ್ಪ ಸಕ್ಕರೆ ಸೇರಿಸಿ ಬ್ಯಾಲೆನ್ಸ್ ಮಾಡಿಕೊಳ್ಳಬಹುದು)

(ಚಿತ್ರ ಸಲೆ: ಮಾರಿಸನ್ ಮನೋಹರ್)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: