ಕವಿತೆ : ಮೊಬೈಲ್ ಎಂಬ ಮಾಲೀಕ
ಹೊಸ ಮದು ಮಗಳಂತೆ
ಹೊಸ ಹೊಸ ಶ್ರುಂಗಾರ
ಹೊತ್ತ ರಂಗು ರಂಗಿನ
ಚಿತ್ತಾಕರ‍್ಶಕ ಮೊಬೈಲ್
ಪೋನುಗಳು ಮಾರುಕಟ್ಟೆಲಿ
ದಾಂಗುಡಿಯಿಟ್ಟು ಮಹಾ
ಮಾಲೀಕನಾಗಿದ್ದೀ
ಮಕ್ಕಳು, ಮುದುಕರು,
ಹುಡುಗರು ಎನ್ನದೆ ನಿನ್ನ ರಂಗಿ
ತರಂಗದಾಟದಲಿ
ಎಲ್ಲರನೂ ಸೆಳೆದು ನಿನ್ನ
ಬೆರಳ ತುದಿಯಲಿ ಆಡಿಸುತ
ನಿಂತಿಹೇ
ಕಿರು ಮೊಬೈಲಿನಲಿ
ವಿಶ್ವದ ಎಲ್ಲ ವಿದ್ಯಾಮಾನಗಳಡಗಿಸಿ
ಮಂದಿಯ ಮುಂಜಾನೆಯ
ಮಜ್ಜನದಿಂದ ರಾತ್ರಿಯ
ನಿದಿರೆಯವರೆಗೂ
ರಿಂಗಿಣಿ… ಕಿಂಕಿಣಿ…
ಅಂಗೈಯಲಿ ಎಲ್ಲರ ತಕ ತಕ
ಕುಣಿಸಿದ್ದೀ
ಒಳಿತೋ… ಕೆಡುಕೋ…
ಆಯ್ದುಕೊಳುವವರ
ಒಲುಮೆಗೆ ಬಿಟ್ಟಿಹೆ
ನಿನ್ನ ಕ್ಶಣ ಮಾತ್ರ ಮನುಜರು
ಬಿಟ್ಟಿದ್ದರು ಕೊತ ಕೊತ
ಕುದಿಯುತ ಉದ್ವಿಗ್ನರಾಗಿರೇ
ಇವರ ಇಂತಹ ಅತೀ
ದಾಸ್ಯಕ್ಕೆ ಕಾರಣವೇನಿಹೇ
ಹೇ… ಮನುಶ್ಯ ನಿರ‍್ಮಿತ
ರಿಂಗಿಣಿಯೇ, ಮನುಜರೆಲ್ಲರ
ಸಾಮೀಪ್ಯ ಸಂಬಂದ ನುಂಗಿ
ನಿನ್ನ ದಾಸ್ಯದ ಸಂಕೋಲೆಯಲಿ
ಬಂದಿಸಿ ಬಸವಳಿಸಿ ಬಿಟ್ಟಿದ್ದೀ
ಏ.. ರಿಂಗಿಣೀ…
ನಿನ್ನ ತಪ್ಪಲ್ಲ ಬಿಡು
ನಿನ್ನನು ಬಿಡದೆ ಅತಿಯಾಗಿ ಅಪ್ಪಿ
ಉಸಿರಗಟ್ಟಿಸಿಕೊಂಡು
ನರಳುತ್ತಿರುವವರು ನಾವೇ!
ನಿನ್ನ ಹಿತ ಮಿತದ ಬಳಕೆಯ
ಔಚಿತ್ಯ ಮರೆತು… ಚಿತ್ತ ಎತ್ತ
ಬೇಕತ್ತ ಹರಿಬಿಟ್ಟು ನಿನ್ನ
ಗುಲಾಮರಂತೆ ವರ‍್ತಿಸುವ
ನಾವು ಮನೋರೋಗಿಗಳೇ
ನಿನಗಂದು ಏನು ಪ್ರಯೋಜನ
ನಿನ್ನ ಅಗತ್ಯವರಿತು
ಇತಿಮಿತಿಯಲಿ ನಿನ್ನ ಸಾಂಗತ್ಯ
ಮಾಡಬೇಕಾದವರು ನಾವೇ!
ಇತಿಮಿತಿಯಲಿ ನಿನ್ನ ಸಾಂಗತ್ಯ
ಮಾಡಬೇಕಾದವರು ನಾವೇ!
( ಚಿತ್ರ ಸೆಲೆ : uchealth.org )
ಇತ್ತೀಚಿನ ಅನಿಸಿಕೆಗಳು