ಅಲ್ಲಮನ ವಚನಗಳ ಓದು – 16ನೆಯ ಕಂತು
– ಸಿ.ಪಿ.ನಾಗರಾಜ.
ಕಾಯದ ಕಳವಳವ ಗೆಲಿದಡೇನೊ
ಮಾಯದ ತಲೆಯನರಿಯದನ್ನಕ್ಕರ
ಮಾಯದ ತಲೆಯನರಿದಡೇನೊ
ಜ್ಞಾನದ ನೆಲೆಯನರಿಯದನ್ನಕ್ಕರ
ಜ್ಞಾನದ ನೆಲೆಯನರಿದಡೇನೊ
ತಾನು ತಾನಾಗದನ್ನಕ್ಕರ
ತಾನು ತಾನಾದ ಶರಣರ ನಿಲವಿಂಗೆ
ಒಂದು ಧಾರೆ ಮೇರೆಯುಂಟೆ ಗುಹೇಶ್ವರಾ.
ತನ್ನ ಮಯ್ ಮನದಲ್ಲಿ ಮೂಡುವ ಕಾಮನೆಗಳನ್ನು ಹಂತ ಹಂತವಾಗಿ ಹತೋಟಿಗೆ ತಂದುಕೊಳ್ಳುತ್ತಾ, ತನ್ನನ್ನು ತಾನು ಅರಿತುಕೊಂಡು ಬಾಳುವ ಶಿವಶರಣನ ವ್ಯಕ್ತಿತ್ವ ರೂಪುಗೊಳ್ಳುವ ಬಗೆಯನ್ನು ಈ ವಚನದಲ್ಲಿ ಹೇಳಲಾಗಿದೆ.
( ಕಾಯ=ಮಯ್/ದೇಹ/ಶರೀರ; ಕಳವಳ=ತುಡಿತ/ತಳಮಳ/ಚಿಂತೆ; ಕಾಯದ ಕಳವಳ=ವ್ಯಕ್ತಿಯ ಮಯ್ ಮನದಲ್ಲಿ ನಿರಂತರವಾಗಿ ತುಡಿಯುತ್ತಿರುವ ಹಸಿವು ಮತ್ತು ಕಾಮದ ಬಯಕೆ; ಗೆಲಿದಡೆ+ಏನೊ; ಗೆಲ್=ಜಯಿಸು; ಗೆಲಿದಡೆ=ಗೆದ್ದರೆ/ಜಯಿಸಿದರೆ; ಏನ್=ಯಾವುದು; ಏನೊ=ಯಾವುದನ್ನು ಪಡೆದಂತಾಯಿತು;
“ಕಾಯದ ಕಳವಳವ ಗೆಲ್ಲುವುದು“ ಎಂದರೆ ವ್ಯಕ್ತಿಯು ತನ್ನ ಮಯ್ ಮನದಲ್ಲಿ ತುಡಿಯುವಂತಹ ಹಸಿವು ಮತ್ತು ಕಾಮವನ್ನು ಸಮಾಜ ಒಪ್ಪಿತವಾದ ರೀತಿಯಲ್ಲಿ ಈಡೇರಿಸಿಕೊಳ್ಳುವುದು. ”ಸಮಾಜ ಒಪ್ಪಿತವಾದ ರೀತಿ“ ಎಂದರೆ ವ್ಯಕ್ತಿಯು ತನ್ನ ಅಗತ್ಯಗಳನ್ನು ಪೂರಯಿಸಿಕೊಳ್ಳುವಾಗ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯದಿರುವುದು;
ಮಾಯ/ಮಾಯೆ=ವ್ಯಕ್ತಿಯ ಮಯ್ ಮನದಲ್ಲಿ ಬಯಕೆಗಳನ್ನು ಕೆರಳಿಸಿ ತಮ್ಮತ್ತ ಸೆಳೆಯುವ ವಸ್ತು/ಜೀವಿ/ವ್ಯಕ್ತಿಗಳು;
ತಲೆ+ಅನ್+ಅರಿಯದ+ಅನ್ನಕ್ಕರ; ತಲೆ=ಆದಿ/ಮೊದಲು; ಮಾಯದ ತಲೆ=ವ್ಯಕ್ತಿಯ ಮಯ್ ಮನದಲ್ಲಿ ನೂರೆಂಟು ಬಗೆಯ ಕಾಮನೆಗಳನ್ನು ಕೆರಳಿಸುವಂತಹ ಸಂಗತಿಗಳ ಮೂಲ; ಅನ್=ಅನ್ನು; ಅರಿ=ತಿಳಿ/ಗ್ರಹಿಸು; ಅರಿಯದ=ತಿಳಿಯದ/ಗ್ರಹಿಸದ;
“ಮಾಯದ ತಲೆಯನ್ನು ಅರಿಯುವುದು“ ಎಂದರೆ ವ್ಯಕ್ತಿಯು ತನ್ನ ಮಯ್ ಮನದಲ್ಲಿ ಬಹುಬಗೆಯ ಕಾಮನೆಗಳು ಕೆರಳಲು ಕಾರಣವಾದ ಸಂಗತಿಗಳನ್ನು ತಿಳಿಯುವುದು;
ಅನ್ನಕ್ಕರ=ಅಲ್ಲಿಯವರೆಗೆ/ಅಲ್ಲಿಯತನಕ; ಅರಿಯದನ್ನಕ್ಕರ=ತಿಳಿಯುವತನಕ/ಗ್ರಹಿಸುವವರೆಗೆ;
ಕಾಯದ ಕಳವಳವ ಗೆಲಿದಡೇನೊ ಮಾಯದ ತಲೆಯನರಿದನ್ನಕ್ಕರ=ಕಾಯದ ಕಳವಳವನ್ನು ಗೆದ್ದ ಮಾತ್ರಕ್ಕೆ ಎಲ್ಲವನ್ನೂ ಪಡೆದಂತಾಗುವುದಿಲ್ಲ. ಮಾಯೆಯ ಮೂಲವನ್ನು ಅರಿಯಬೇಕು. ಮಾಯೆಯ ಮೂಲ ಎಂದರೆ “ಮಯ್ ಮನದಲ್ಲಿ ಬಹು ಬಗೆಯ ಬಯಕೆಗಳು ಎಡೆಬಿಡದೆ ತನ್ನನ್ನು ಏಕೆ ಕಾಡುತ್ತಿವೆ? ಇದಕ್ಕೆ ನಿಸರ‍್ಗ ಸಹಜವಾದ ಮತ್ತು ಸಾಮಾಜಿಕವಾದ ಕಾರಣಗಳು ಯಾವುವು ಎಂಬುದನ್ನು ತಿಳಿಯಬೇಕು”;
ತಲೆ+ಅನ್+ಅರಿದಡೆ+ಏನೊ; ಅರಿದಡೆ=ತಿಳಿದರೆ/ಗ್ರಹಿಸಿಕೊಂಡರೆ; ಜ್ಞಾನ=ಅರಿವು/ತಿಳುವಳಿಕೆ; ನೆಲೆ+ಅನ್+ಅರಿಯದ+ಅನ್ನಕ್ಕರ; ನೆಲೆ=ಜಾಗ/ಗುರಿ/ಉದ್ದೇಶ;
ಜ್ಞಾನದ ನೆಲೆ= ಮಾನವ ಸಮುದಾಯದ ಜೀವನದಲ್ಲಿ “ ಯಾವುದು ಸರಿ-ಯಾವುದು ತಪ್ಪು; ಯಾವುದು ದಿಟ-ಯಾವುದು ಸಟೆ; ಯಾವುದು ನೀತಿ-ಯಾವುದು ಅನೀತಿ “ ಎಂಬ ಅರಿವನ್ನು ಪಡೆದುಕೊಳ್ಳುವುದು;
ಮಾಯದ ತಲೆಯನರಿದಡೇನೊ ಜ್ಞಾನದ ನೆಲೆಯನರಿಯದನ್ನಕ್ಕರ=ಮಾಯೆಯ ಮೂಲವನ್ನು ತಿಳಿದ ಮಾತ್ರಕ್ಕೆ ಎಲ್ಲವನ್ನೂ ಪಡೆದಂತಾಗುವುದಿಲ್ಲ. ಜ್ಞಾನದ ನೆಲೆಯನ್ನು ಅರಿಯಬೇಕು.” ಜ್ಞಾನದ ನೆಲೆ “ ಎಂದರೆ ವ್ಯಕ್ತಿಯು ತಾನು ಒಳ್ಳೆಯ ರೀತಿಯಲ್ಲಿ ಬದುಕನ್ನು ನಡೆಸಬೇಕು ಎಂಬ ಅರಿವನ್ನು ಪಡೆದುಕೊಳ್ಳುವುದು;
ನೆಲೆ+ಅನ್+ಅರಿದಡೆ+ಏನೊ; ತಾನು=ವ್ಯಕ್ತಿಯು; ತಾನ್+ಆಗದ+ಅನ್ನಕ್ಕರ;
ತಾನು ತಾನಾಗುವುದು=ಮಾನವ ಜೀವಿಯಾಗಿ ತನ್ನನ್ನು ನಿಯಂತ್ರಿಸುತ್ತಿರುವ ಮತ್ತು ಮುನ್ನಡೆಸುತ್ತಿರುವ ನಿಸರ‍್ಗದ ನಿಯಮ ಹಾಗೂ ಸಮಾಜದ ಕಟ್ಟುಪಾಡುಗಳು ಯಾವುವು ಎಂಬುದನ್ನು ಅರಿತುಕೊಂಡು ಬಾಳುವುದು;
ಜ್ಞಾನದ ನೆಲೆಯನರಿದಡೇನೊ ತಾನು ತಾನಾಗದನ್ನಕ್ಕರ=ಅರಿವನ್ನು ತಿಳಿದುಕೊಂಡ ಮಾತ್ರಕ್ಕೆ ಎಲ್ಲವನ್ನೂ ಪಡೆದಂತಾಗುವುದಿಲ್ಲ. ಪಡೆದ ಅರಿವನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕು;
ಶರಣ=ಒಳ್ಳೆಯ ನಡೆನುಡಿಗಳಿಂದ ಬಾಳುವುದರ ಮೂಲಕ ಶಿವನನ್ನು ಒಲಿದವನು/ಶಿವನಿಗೆ ತಲೆಬಾಗಿದವನು; ನಿಲವು=ಇರುವಿಕೆ/ರೀತಿ/ ಆಲೋಚನೆ/ಚಿಂತನೆ; ಧಾರೆ=ಪ್ರವಾಹ/ನಿರಂತರತೆ/ಎಡೆಬಿಡದೆ ಮುಂದುವರಿಯುವುದು; ಮೇರೆ=ಎಲ್ಲೆ/ಗಡಿ/ಮಿತಿ; ಉಂಟೆ=ಇದೆಯೇ; ಒಂದು ಧಾರೆ ಮೇರೆಯುಂಟೆ=ಯಾವುದೇ ಎಲ್ಲೆಯಿರುವುದಿಲ್ಲ/ಅನಂತವಾದುದು;
ತಾನು ತಾನಾದ ಶರಣರ ನಿಲವಿಂಗೆ ಒಂದು ಧಾರೆ ಮೇರೆಯುಂಟೆ=ತನ್ನನ್ನು ತಾನು ಅರಿತುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ಶರಣನ ವ್ಯಕ್ತಿತ್ವಕ್ಕೆ ಎಲ್ಲೆ ಎಂಬುದೇ ಇಲ್ಲ; ಗುಹೇಶ್ವರ=ಶಿವ/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಬಳಕೆಯಾಗಿರುವ ಅಂಕಿತನಾಮ;)
( ಚಿತ್ರ ಸೆಲೆ : lingayatreligion.com )
ಇತ್ತೀಚಿನ ಅನಿಸಿಕೆಗಳು