ಕವಿತೆ: ಆ ಒಂದು ಕನಸು ಬೀಳಬೇಕಿತ್ತು

– ವೆಂಕಟೇಶ ಚಾಗಿ.

ಕನಸು night dreams

ಆ ನೀಲಿಯಾಕಾಶ ಸೋರಿದಂತೆ
ನನಗಾಗಿ ಒಂದು ಕನಸು ಬೀಳಬೇಕಿತ್ತು
ಹಲವು ದಿನಗಳ ಹಾದಿಯಲ್ಲಿ
ಬೆಳೆದು ನಿಂತ ಗಿಡಗಳೆಲ್ಲ
ಹೂ ಬಿಟ್ಟು ನಲಿಯುತಿರುವಾಗ
ಕನಸು ಬೀಳಬೇಕಿತ್ತು

ಆಗಸದ ಅಂಚಿನಿಂದ ಬಿಡುಗಡೆಯಾದ
ಪ್ರತಿ ಹನಿಯೂ
ವಿಳಾಸವನ್ನು ಹುಡುಕುತ ಬರುತಿರಲು
ಹನಿಯೊಳಗೂ ಅವಿತಿಲ್ಲ
ಆ ಒಂದು ಕನಸು
ಬೂಮಿ ಆಕಾಶಕ್ಕೆ ಬೆಸುಗೆ ಹಾಕಿದಂತೆ
ಕಾಮನಬಿಲ್ಲಿನ ಹಲವು ಬಣ್ಣಗಳು ಜಾರಿ
ಹಕ್ಕಿಗಳು ಹಿಂದಿರುಗಿದರೂ
ಹೊತ್ತು ತರಲಿಲ್ಲವಂತೆ

ಪ್ರತಿ ದಿನವೂ ಅದೇ ಸಮೀಕ್ಶೆ
ಅದೇ ನಿರೀಕ್ಶೆ ಅದೇ ಅಪೇಕ್ಶೆ
ನಡೆದಾಡುವ ಹಾದಿಯಲಿ
ಹಟಮಾಡಿ ತಳವೂರಿರುವ ಕಲ್ಲುಗಳು
ಸಾಕ್ಶಿಯನು ನುಡಿಯದೇ
ಮೌನವಾಗಿ ಕುಳಿತುಬಿಟ್ಟಿವೆ
ಕಂಡು ಕಾಣದಂತೆ
ಆ ಒಂದು ಕನಸನು

ಬೂಗರ‍್ಬದ ಹಲವು ತಳಮಳಗಳು
ತಾಳ್ಮೆಯ ಮೊಟ್ಟೆಯೊಡೆದು
ಮೋಡದೆಡೆಗೆ ಮುಕಮಾಡಿ ನಿಂತಿರಲು
ಹೊಸ ಸಂದೇಶದ ಹಕ್ಕಿ
ದೂರ ಹಾರಿ ಹಾರಿ ಹಾಡುತಿರಲು
ಮತ್ತೆ ಅದೇ ಗೈರು ಹಾಜರಿ
ಆ ಹೊತ್ತಿನಲ್ಲಿ ಆ ಒಂದು
ಕನಸು ಬೀಳಬೇಕಿತ್ತು

ಬದುಕಿನ ಬಂಡಿಯೊಳಗಿನ ಆಶ್ಚರ‍್ಯಗಳು
ಕರಗಿ ಕನವರಿಸುತಿವೆ ಅದೇ ಹಳೆಯ ರಾಗವನ್ನು
ಅದಾರದೋ ಮೋಸದ ಬಲೆಯಲ್ಲಿ
ಸಿಲುಕಿ ನಲುಗುತಿವೆ ಬಿಕ್ಕಿ ಅಳುತ್ತಿವೆ
ಎಂದೆನಿಸದೇ ಇರದು; ಅದಕ್ಕೊಂದು ಉತ್ತರವಾಗಿ
ಆ ಒಂದು ಕನಸು ಬೀಳಬೇಕಿತ್ತು

ಮತ್ತೆ ಮತ್ತೆ ಕೇಳಿಬರುವ ಆ ಆಲಾಪಗಳು
ಹಂಗಿಸಿವೆ ಅಂತರಂಗವನು
ಬಯಕೆಗಳ ಮಾರ‍್ಜಾಲಕ್ಕೆ ಬಲಿಯಾಗುವ ವೇದನೆ
ಇನ್ನೂ ಮರೆಯಾಗಿಲ್ಲವಶ್ಟೇ
ಇನ್ನು ಅದೇ ಬೇಕಾಗಿದೆ
ಅದೇ ಆ ಒಂದು ಕನಸು ಬೀಳಬೇಕಿತ್ತು

(ಚಿತ್ರ ಸೆಲೆ: maxpixel)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: