ಶಣ್ಮುಕಸ್ವಾಮಿಯ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

ಸಿ.ಪಿ.ನಾಗರಾಜ.

ವಚನಗಳು, Vachanas

ಮಾತಿನಲ್ಲಿ ಕರ್ಕಶ
ಮನದಲ್ಲಿ ಘಾತಕತನವುಳ್ಳವನ
ಕನಿಷ್ಠನೆಂಬರು
ಮಾತಿನಲ್ಲಿ ಎಲ್ಲೆ
ಮನದಲ್ಲಿ ಕತ್ತರಿಯುಳ್ಳವನ
ಮಧ್ಯಮನೆಂಬರು
ಮಾತಿನಲ್ಲಿ ಮೃದು
ಮನದಲ್ಲಿ ಪ್ರೀತಿಯುಳ್ಳವನ
ಉತ್ತಮನೆಂಬರು
ನೋಡಾ ಜಗದವರು. (362/1048)

ಮಾತು+ಅಲ್ಲಿ; ಮಾತು=ನುಡಿ/ಸೊಲ್ಲು; ಕರ್ಕಶ=ಒರಟು/ಜೋರು/ಮೊನಚು; ಮಾತಿನಲ್ಲಿ ಕರ್ಕಶ=ವ್ಯಕ್ತಿಯು ಆಡುವ ಮಾತುಗಳು ಕೇಳುಗರ ಮನವನ್ನು ಚುಚ್ಚಿ ಗಾಸಿಗೊಳಿಸುವಂತೆ ಅಣಕದ, ತೆಗಳಿಕೆಯ, ತಿರಸ್ಕಾರದ, ವ್ಯಂಗ್ಯದ ಪದಗಳಿಂದ ಕೂಡಿರುವುದು/ಕೇಳುಗರ ವ್ಯಕ್ತಿತ್ವವನ್ನು ಅಲ್ಲಗಳೆಯುವಂತೆ ಆಡುವ ಬಯ್ಗುಳದ ನುಡಿಗಳು;

ಮನ+ಅಲ್ಲಿ; ಮನ=ಮನಸ್ಸು/ಚಿತ್ತ; ಘಾತಕತನ+ಉಳ್ಳ್+ಅವನ; ಘಾತಕ=ವಂಚಕ/ಮೋಸಗಾರ/ನೀಚ; ಘಾತಕತನ=ವಂಚಕತನ/ಕಪಟತನ/ನೀಚತನ ; ಉಳ್ಳ್=ಇರು/ಹೊಂದು/ಪಡೆ; ಉಳ್ಳವನ=ಇರುವವನ;

ಮನದಲ್ಲಿ ಘಾತಕತನವುಳ್ಳವನ=ಮನದಲ್ಲಿ ಪರರಿಗೆ ಕೇಡು ಮತ್ತು ವಂಚನೆಯನ್ನು ಮಾಡುವುದರ ಬಗ್ಗೆಯೇ ಸದಾಕಾಲ ಕೆಟ್ಟ ಆಲೋಚನೆಯನ್ನು ಮಾಡುತ್ತಿರುವ ವ್ಯಕ್ತಿ;

ಕನಿಷ್ಠನ್+ಎಂಬರು; ಕನಿಷ್ಠ=ಅತಿ ಕಡಿಮೆಯಾದುದು/ತೀರ ಅಲ್ಪವಾದುದು/ಅತಿ ಕೀಳಾಗಿರುವುದು; ಕನಿಷ್ಠನ್= ಅತಿ ಕೆಳಗಿನವನು/ಅತಿ ನೀಚ ವ್ಯಕ್ತಿ; ಎಂಬರು=ಎನ್ನುವರು;

ಎಲ್ಲೆ=ಮೇರೆ/ಸರಹದ್ದು/ಗಡಿ; ಮಾತಿನಲ್ಲಿ ಎಲ್ಲೆ=ವ್ಯಕ್ತಿಯು ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ತಿಳಿದುಕೊಂಡು, ಇತರರೊಡನೆ ಮಾತನಾಡುವಾಗ ಎಚ್ಚರದಿಂದ ಇರುವುದು/ಬೇರೆಯವರ ಮನಸ್ಸನ್ನು ಗಾಸಿಗೊಳಿಸದಂತೆ ಮಾತನಾಡುವುದು;

ಕತ್ತರಿ+ಉಳ್ಳ್+ಅವನ; ಕತ್ತರಿ= 1.ಏನನ್ನಾದರೂ ಕತ್ತರಿಸುವುದಕ್ಕಾಗಿ ಬಳಸುವ ಇಕ್ಕುಳದ ಆಕಾರದಲ್ಲಿರುವ ಉಪಕರಣ. 2.ಕಪಟತನ/ಮೋಸ/ವಂಚನೆ;

ಮನದಲ್ಲಿ ಕತ್ತರಿಯುಳ್ಳವನ=ಇತರರನ್ನು ವಂಚಿಸಿ ಕೇಡನ್ನು ಬಗೆಯುವ ಆಲೋಚನೆಯನ್ನು ಮನದಲ್ಲಿ ಹೊಂದಿರುವ ವ್ಯಕ್ತಿಯನ್ನು; ಮಧ್ಯಮನ್+ಎಂಬರು; ಮಧ್ಯಮ=ನಡುವೆ ಇರುವುದು; ಮಧ್ಯಮನ್=ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡನ್ನು ಹೊಂದಿರುವವನು;

ಮೃದು=ಮಿದು/ಕೋಮಲ/ಮೆತು; ಮಾತಿನಲ್ಲಿ ಮೃದು=ವ್ಯಕ್ತಿಯು ಆಡುವ ಮಾತುಗಳು ಕೇಳುಗರಿಗೆ ಅರಿವು ಮತ್ತು ಆನಂದವನ್ನು ನೀಡುವಂತಿರುವುದು/ಒಲವು ನಲಿವು ನೆಮ್ಮದಿಯನ್ನು ನೀಡುವಂತಿರುವುದು;

ಪ್ರೀತಿ+ಉಳ್ಳ್+ಅವನ; ಪ್ರೀತಿ=ಒಲವು/ಅನುರಾಗ; ಮನದಲ್ಲಿ ಪ್ರೀತಿ=ಇತರರಿಗೆ ಒಳಿತನ್ನು ಮಾಡಬೇಕೆಂಬ ಒಲವನ್ನು/ಉತ್ಸಾಹವನ್ನು/ಆಸಕ್ತಿಯನ್ನು ಮನಸ್ಸಿನಲ್ಲಿ ಹೊಂದಿರುವುದು;

ಉತ್ತಮನ್+ಎಂಬರು; ಉತ್ತಮನ್=ಒಳ್ಳೆಯವನು/ಗುಣವಂತ; ನೋಡು+ಆ; ನೋಡು=ಒರೆಹಚ್ಚಿ ತಿಳಿ/ಆಲೋಚನೆ ಮಾಡು; ಜಗ=ಲೋಕ/ಜಗತ್ತು/ಪ್ರಪಂಚ; ಜಗದವರು=ಪ್ರಪಂಚದಲ್ಲಿ ನೆಲೆಸಿರುವ ಮಾನವ ಸಮುದಾಯ/ಜನರು;

ವ್ಯಕ್ತಿಯ ಮನದೊಳಗಿನ ಆಲೋಚನೆ ಮತ್ತು ಆಡುವ ಮಾತುಗಳೆರಡೂ ಕೆಟ್ಟದ್ದಾಗಿದ್ದರೆ, ಅಂತಹವನು ನೀಚ.

ಮನದೊಳಗೆ ಕೆಟ್ಟ ಆಲೋಚನೆಗಳಿಂದ ಕೂಡಿದ್ದು, ಆಡುವ ಮಾತಿನಲ್ಲಿ ಎಚ್ಚರವುಳ್ಳವನು ನಯವಂಚಕ.

ಮನದಲ್ಲಿ ಒಳ್ಳೆಯ ಆಲೋಚನೆ ಮತ್ತು ಮಾತಿನಲ್ಲಿ ಒಲವು ನಲಿವಿನ ನುಡಿಗಳನ್ನಾಡುವವನು ಗುಣವಂತ.

ನುಡಿಯಲಾಗದು ನುಡಿಯಲಾಗದು
ನಯನುಡಿಯಿಲ್ಲದವರೊಡನೆ
ನುಡಿಯಲಾಗದು ನುಡಿಯಲಾಗದು
ದಯಗುಣವಿಲ್ಲದವರೊಡನೆ. (385/1051)

ನುಡಿಯಲ್+ಆಗದು; ನುಡಿ=ಮಾತು/ಸೊಲ್ಲು; ಆಗದು=ಆಗುವುದಿಲ್ಲ; ನುಡಿಯಲಾಗದು=ಮಾತನ್ನಾಡಲು ಆಗುವುದಿಲ್ಲ; ನಯ+ನುಡಿ+ಇಲ್ಲದ+ಅವರ್+ಒಡನೆ; ನಯ=ಒಲವು/ನ್ಯಾಯ/ನೀತಿ; ಒಡನೆ=ಜತೆ/ಸಂಗಡ; ನಯನುಡಿ=ಇತರರ ಮನಸ್ಸಿಗೆ ಅರಿವು ಮತ್ತು ಆನಂದವನ್ನು ಉಂಟುಮಾಡುವಂತಹ ಮಾತುಗಳು;

ದಯ+ಗುಣ+ಇಲ್ಲದ+ಅವರ್+ಒಡನೆ; ದಯ=ದಯೆ/ಕರುಣೆ/ಕನಿಕರ/ಮರುಕ/ಅನುಕಂಪ; ಗುಣ=ನಡತೆ/ನಡವಳಿಕೆ; ದಯಗುಣ=ವ್ಯಕ್ತಿಯು ಇತರರ ಸಂಕಟವನ್ನು ಕಂಡು ಮರುಗಿ, ಅದನ್ನು ನಿವಾರಿಸಲು ನೆರವನ್ನು ನೀಡುವುದು;

ನಯನುಡಿಯಿಲ್ಲದ ಮತ್ತು ದಯಾಗುಣವಿಲ್ಲದ ವ್ಯಕ್ತಿಗಳ ಸಂಗಡ ಯಾವುದೇ ಬಗೆಯ ಒಡನಾಟವನ್ನಾಗಲಿ ಇಲ್ಲವೇ ಮಾತುಕತೆಯನ್ನಾಗಲಿ ಇಲ್ಲವೇ ನಂಟನ್ನಾಗಲಿ ಹೊಂದಲು ಆಗುವುದಿಲ್ಲ.

ಏಕೆಂದರೆ ನಯನುಡಿಯಿಲ್ಲದ ವ್ಯಕ್ತಿಗಳು ಇತರರ ವ್ಯಕ್ತಿತ್ವವನ್ನು ಹಾಳುಮಾಡುವಂತಹ ಚಾಡಿಯ, ಸುಳ್ಳಿನ, ಅಸೂಯೆಯ, ಅಪನಂಬಿಕೆಯ ಮತ್ತು ಹಗೆತನದ ಮಾತುಗಳನ್ನಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳು ಬಾಯಿಬಿಟ್ಟರೆ ಸಾಕು ಬೇರೆಯವರ ಮನಸ್ಸನ್ನು ಗಾಸಿಗೊಳಿಸುವಂತಹ ಕೆಟ್ಟ ನುಡಿಗಳೇ ಕೇಳಿಬರುತ್ತಿರುತ್ತವೆ.

ದಯಾಗುಣವಿಲ್ಲದ ವ್ಯಕ್ತಿಗಳು ಸತ್ಯ,ನೀತಿ,ನ್ಯಾಯದ ಮಾತುಗಳಿಗೆ ಕಿವಿಗೊಡದಂತಹ ನೀಚರಾಗಿರುತ್ತಾರೆ. ಅಪಾರವಾದ ಸಂಪತ್ತನ್ನು ಗಳಿಸುವುದಕ್ಕಾಗಿ ಮತ್ತು ಆಡಳಿತದ ಗದ್ದುಗೆಯನ್ನು ಏರುವುದಕ್ಕಾಗಿ ಯಾರನ್ನು ಬೇಕಾದರೂ ಬಲಿಕೊಡಲು ತಯಾರಾಗಿರುತ್ತಾರೆ. ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಜಾತಿ, ಮತ ಮತ್ತು ದೇವರ ಹೆಸರನಲ್ಲಿ ಬಹುಬಗೆಯ ಜನಸಮುದಾಯಗಳ ಸಹಬಾಳ್ವೆಯನ್ನು ಹಾಳುಮಾಡಿ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ಮೇಲೆ ಎತ್ತಿಕಟ್ಟಿ, ಕೊಲೆ ಸುಲಿಗೆಯನ್ನು ಮಾಡಿಸುತ್ತ, ತಮ್ಮ ಹಿತವನ್ನು ಕಾಯ್ದುಕೊಳ್ಳುವ ಕ್ರೂರಿಗಳಾಗಿರುತ್ತಾರೆ.

ತನ್ನ ತಾನರಿಯದೆ
ಅನ್ಯರ ಗುಣಾವಗುಣಗಳ
ಎತ್ತಿ ಎಣಿಸುವನ್ನಕ್ಕ ಶಿವಶರಣನೆಂತಪ್ಪನಯ್ಯ (435/1058)

ತನ್ನ=ವ್ಯಕ್ತಿಯು; ತಾನ್+ಅರಿಯದೆ; ಅರಿ=ತಿಳಿ; ಅರಿಯದೆ=ತಿಳಿದುಕೊಳ್ಳದೆ; ತನ್ನ ತಾನರಿಯದೆ=ಮಾನವನ ಬದುಕಿನ ಆಗುಹೋಗುಗಳಿಗೆ ಕಾರಣವಾದ ವಾಸ್ತವದ ಸಂಗತಿಗಳನ್ನು ವ್ಯಕ್ತಿಯು ತಾನೇ ಸರಿಯಾಗಿ ತಿಳಿದುಕೊಳ್ಳದೆ; ಅನ್ಯರ=ಬೇರೆಯವರ/ಇತರರ; ಗುಣ+ಅವಗುಣಗಳ; ಗುಣ=ನಡವಳಿಕೆ/ನಡೆನುಡಿ; ಅವಗುಣ=ಕೆಟ್ಟ ನಡವಳಿಕೆ/ಕೆಟ್ಟ ನಡೆನುಡಿ;

ಎತ್ತಿ=ಎಲ್ಲರಿಗೆ ತಿಳಿಯುವಂತೆ ತೋರಿಸುತ್ತ/ಎಚ್ಚರಿಸುತ್ತ; ಎಣಿಸು+ಅನ್ನಕ್ಕ; ಎಣಿಸು=ಲೆಕ್ಕಹಾಕು/ಗಮನ ಕೊಡು; ಅನ್ನಕ್ಕ=ಆ ವರೆಗೆ/ಆ ತನಕ; ಶಿವಶರಣನ್+ಎಂತು+ಅಪ್ಪನ್+ಅಯ್ಯ; ಶಿವಶರಣ=ಒಳ್ಳೆಯ ನಡೆನುಡಿಗಳಿಂದ ಶಿವನನ್ನು ಒಲಿದವನು/ಪೂಜಿಸುವವನು; ಎಂತು=ಯಾವ ರೀತಿ/ಯಾವ ಬಗೆ; ಅಪ್ಪನ್=ಆಗುವನು; ಎಂತಂಪ್ಪನ್=ಯಾವ ರೀತಿ ಆಗುತ್ತಾನೆ; ಅಯ್ಯ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ತನ್ನ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳದೆ, ಇತರರ ನಡೆನುಡಿಗಳಲ್ಲಿ ಕಂಡು ಬರುವ ತಪ್ಪುಗಳನ್ನೇ ದೊಡ್ಡದಾಗಿ ಎತ್ತಿ ಆಡುವವನು ಎಂದಿಗೂ ಶಿವಶರಣನಾಗಲಾರ. ಏಕೆಂದರೆ ಶಿವಶರಣನಾದವನು ಮೊದಲು ತನ್ನ ವ್ಯಕ್ತಿತ್ವದ ಇತಿಮಿತಿಗಳನ್ನು ಸರಿಯಾಗಿ ತಿಳಿದುಕೊಂಡು, ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡವಳಿಕೆಯಿಂದ ಬಾಳಬೇಕು.

ವ್ಯಕ್ತಿಯು “ ತನ್ನ ತಾನರಿಯುವುದು “ ಎಂದರೆ ಮಾನವ ಸಮುದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನವು ನಿಸರ‍್ಗದ ಆಗುಹೋಗು ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟಿದೆ. ಆದ್ದರಿಂದಲೇ ತನ್ನನ್ನೂ ಒಳಗೊಂಡಂತೆ ಎಲ್ಲ ವ್ಯಕ್ತಿಗಳ ಮಯ್ ಮನದಲ್ಲಿ ಒಳಿತು ಕೆಡುಕಿನ ಒಳಮಿಡಿತಗಳು ಸದಾಕಾಲ ಇದ್ದೇ ಇರುತ್ತವೆ ಎಂಬುದನ್ನು ಅರಿತುಕೊಂಡು, ಜೀವನದ ಉದ್ದಕ್ಕೂ ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯವನಾಗಿ ಬಾಳಬೇಕೆಂಬ ಎಚ್ಚರವನ್ನು ಹೊಂದುವುದು. ತಾನು ಸಮಾಜದ ಒಂದು ಕೊಂಡಿ ಎಂಬುದನ್ನು ತಿಳಿದುಕೊಂಡು, ತನ್ನ ಜೀವನದ ಒಳಿತು ಕೆಡುಕು ಸಮಾಜದಲ್ಲಿ ಉಂಟಾಗುವ ಒಳಿತು ಕೆಡುಕನ್ನು ಅವಲಂಬಿಸಿದೆ ಮತ್ತು ಸಮಾಜದೊಡನೆ ನಂಟನ್ನು ಹೊಂದಿದೆ ಎಂಬ ವಾಸ್ತವವನ್ನು ಅರಿತು ಬಾಳುವುದು;

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: