ಸ್ವತಂತ್ರ ಸಿದ್ದಲಿಂಗೇಶ್ವರನ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

ಸಿ.ಪಿ.ನಾಗರಾಜ.

ವಚನಗಳು, Vachanas

ಆಚಾರವನನಾಚಾರವ ಮಾಡಿ ನುಡಿವರು
ಅನಾಚಾರವನಾಚಾರವ ಮಾಡಿ ನುಡಿವರು
ಸತ್ಯವನಸತ್ಯವ ಮಾಡಿ ನುಡಿವರು
ಅಸತ್ಯವ ಸತ್ಯವ ಮಾಡಿ ನುಡಿವರು
ವಿಷವ ಅಮೃತವೆಂಬರು
ಅಮೃತವ ವಿಷವೆಂಬರು
ಸಹಜವನರಿಯದ ಅಸಹಜರಿಗೆ
ಶಿವನೊಲಿಯೆಂದಡೆ ಎಂತೊಲಿವನಯ್ಯ. (891/450)

ಆಚಾರ+ಅನ್+ಅನಾಚಾರವ; ಆಚಾರ=ಒಳ್ಳೆಯ ನಡೆನುಡಿ/ಒಳ್ಳೆಯ ನಡವಳಿಕೆ; ಅನ್=ಅನ್ನು; ಅನಾಚಾರ=ಕೆಟ್ಟ ನಡೆನುಡಿ/ಕೆಟ್ಟ ನಡವಳಿಕೆ; ಮಾಡಿ=ಹುಟ್ಟಿಸಿ/ಕಲ್ಪಿಸಿ/ಹೊಸದಾಗಿ ಕಟ್ಟಿ; ನುಡಿವರು=ಹೇಳುವರು/ಮಾತನಾಡುವರು;

ಆಚಾರವನನಾಚಾರವ ಮಾಡಿ ನುಡಿವರು=ಒಳ್ಳೆಯ ನಡೆನುಡಿಗಳನ್ನೇ ಕೆಟ್ಟದ್ದೆಂದು ಹೇಳುವರು;

ಅನಾಚಾರ+ಅನ್+ಆಚಾರವ; ಅನಾಚಾರವನಾಚಾರವ ಮಾಡಿ ನುಡಿವರು=ಕೆಟ್ಟ ನಡೆನುಡಿಗಳನ್ನೇ ಒಳ್ಳೆಯದೆಂದು ಹೇಳುವರು;

ಸತ್ಯ+ಅನ್+ಅಸತ್ಯವ; ಸತ್ಯ=ದಿಟ/ನಿಜ/ವಾಸ್ತವ; ಅಸತ್ಯ=ಸಟೆ/ಸುಳ್ಳು/ಅವಾಸ್ತವ; ವಿಷ=ಜೀವಿಗಳು ಸೇವಿಸಿದಾಗ ಸಾವಿಗೆ ಕಾರಣವಾಗುವ ವಸ್ತು/ನಂಜು; ಅಮೃತ+ಎಂಬರು; ಅಮೃತ=ಸೇವಿಸಿದರೆ ಜೀವಿಗಳಿಗೆ ಸಾವಿಲ್ಲವೆಂದು ನಂಬಿರುವ ಒಂದು ಪಾನೀಯ/ಸಂಜೀವಿನಿ; ಎಂಬರು=ಎಂದು ಹೇಳುವರು; ವಿಷ+ಎಂಬರು;

ವಿಷವ ಅಮೃತವೆಂಬರು=ನಂಜನ್ನು ಸಾವಿನಿಂದ ಪಾರುಮಾಡುವ ಸಂಜೀವಿನಿ ಎನ್ನುತ್ತಾರೆ;

ಅಮೃತವ ವಿಷವೆಂಬರು=ಸಂಜೀವಿನಿಯನ್ನು ಸಾವಿಗೆ ಕಾರಣವಾಗುವ ನಂಜೆಂದು ಹೇಳುತ್ತಾರೆ;

ಸಹಜ+ಅನ್+ಅರಿಯದ; ಸಹಜ=ವಾಸ್ತವವಾದುದು/ನಿಜವಾದುದು; ಅರಿಯದ=ತಿಳಿಯದ; ಅಸಹಜ=ವಾಸ್ತವವಲ್ಲದ್ದು/ನಿಜವಲ್ಲದ್ದು;

ಸಹಜವನ್ನು ಅರಿಯುವುದು ಎಂದರೆ “ ಮಾನವ ಸಮುದಾಯದ ಬದುಕಿನ ನೋವು ನಲಿವುಗಳಿಗೆ ನಿಸರ‍್ಗದಲ್ಲಿ ನಡೆಯುವ ಸಂಗತಿಗಳು , ಮಾನವ ಸಮುದಾಯ ರೂಪಿಸಿಕೊಂಡಿರುವ ಸಾಮಾಜಿಕ ಕಟ್ಟುಪಾಡುಗಳು ಮತ್ತು ಮಾನವರ ಒಳಿತು ಕೆಡುಕಿನ ವರ‍್ತನೆಗಳೇ ಕಾರಣ”ವೆಂಬ ವಾಸ್ತವವನ್ನು ಅರಿಯುವುದು.

‘ ಅಸಹಜರು ’ ಎಂದರೆ ಇಲ್ಲದಿರುವುದನ್ನು ಇದೆ ಎಂದು, ಇರುವುದನ್ನು ಇಲ್ಲವೆಂದು ಹೇಳುವವರು. ವಾಸ್ತವವಾದುದನ್ನು ಅಲ್ಲಗಳೆದು, ಅವಾಸ್ತವವನ್ನು ಎತ್ತಿಹಿಡಿಯುವವರು. ಇಂತಹ ವ್ಯಕ್ತಿಗಳು ಪ್ರತಿಪಾದಿಸುವ ಸಂಗತಿಗಳು ಈ ಕೆಳಕಂಡಂತಿವೆ.

“ ಈ ಜಗತ್ತು ಬ್ರಹ್ಮನಿಂದ ರಚನೆಗೊಂಡಿದೆ. ಮಾನವ ಸಮುದಾಯದ ನೋವು ನಲಿವುಗಳಿಗೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಪುಣ್ಯಗಳೇ ಕಾರಣ. ಪುಣ್ಯ ಮಾಡಿದವರು ಮೇಲು ಜಾತಿಯ ಕುಟುಂಬಗಳಲ್ಲಿ ಹುಟ್ಟಿ ವಿದ್ಯೆ, ಸಂಪತ್ತು, ಆಡಳಿತದ ಗದ್ದುಗೆಯನ್ನು ಪಡೆದು ಸಿರಿವಂತರಾಗಿ ಆನಂದವಾಗಿದ್ದಾರೆ, ಪಾಪ ಮಾಡಿದವರು ಕೆಳಜಾತಿಯ ಕುಟುಂಬಗಳಲ್ಲಿ ಹುಟ್ಟಿ ಹಸಿವು, ಬಡತನ ಮತ್ತು ಅಪಮಾನಗಳಿಂದ ನರಳುತ್ತಿದ್ದಾರೆ. ಈ ಜಗತ್ತಿನಲ್ಲಿ ನಡೆಯುತ್ತಿರುವ ಒಳಿತು ಕೆಡುಕುಗಳೆಲ್ಲವೂ ದೇವರ ಇಚ್ಚೆಯಂತೆಯೇ ನಡೆಯುತ್ತಿದೆ. ದೇವರ ಅಪ್ಪಣೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಚಲಿಸದು ಎಂಬ ನಂಬಿಕೆಯಿಂದ ಬಹು ಬಗೆಯ ಕತೆಗಳನ್ನು ಕಟ್ಟಿ ಕಲೆ,ಸಂಗೀತ,ಸಾಹಿತ್ಯಗಳ ಮೂಲಕ ದೇವರ ಅವತಾರಗಳನ್ನು ಮತ್ತು ಪವಾಡಗಳನ್ನು ಬಣ್ಣಿಸುತ್ತಾ ಕರ‍್ಮ ಸಿದ್ದಾಂತ, ಹಣೆ ಬರಹ, ವಿದಿ ಲಿಕಿತ ಎಂಬ ತತ್ವಗಳನ್ನು ಜನಮನದಲ್ಲಿ ತುಂಬಿದ್ದಾರೆ.

ಸಹಜವನರಿಯದ ಅಸಹಜರು=ವಾಸ್ತವವನ್ನು ಕಡೆಗಣಿಸಿ, ಅವಾಸ್ತವವನ್ನೇ ದಿಟವೆಂದು ಪ್ರತಿಪಾದಿಸುವವರು;

ಶಿವನ್+ಒಲಿ+ಎಂದಡೆ; ಶಿವ=ದೇವರು/ಈಶ್ವರ; ಒಲಿ=ಮೆಚ್ಚು; ಎಂದಡೆ=ಎಂದರೆ; ಎಂತು+ಒಲಿವನ್+ಅಯ್ಯ; ಎಂತು=ಯಾವ ರೀತಿಯಲ್ಲಿ/ಯಾವ ಬಗೆಯಲ್ಲಿ; ಒಲಿವನ್=ಮೆಚ್ಚುತ್ತಾನೆ/ಒಪ್ಪಿಕೊಳ್ಳುತ್ತಾನೆ; ಅಯ್ಯ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ಸಹಜವನ್ನು ಅರಿಯದೆ ತಾವು ಹೇಳುತ್ತಿರುವುದೇ ಸರಿಯೆಂದು ಪಟ್ಟು ಹಿಡಿದು ಹೇಳುತ್ತ, ಮಾತಿನ ಮೋಡಿಯಿಂದಲೇ ಜನರನ್ನು ಮರುಳು ಮಾಡಿ, ಜನರನ್ನು ಮತ್ತು ಸಮಾಜವನ್ನು ವಂಚಿಸುವ ವ್ಯಕ್ತಿಗಳಿಗೆ ಶಿವನು ಒಲಿಯುವುದಿಲ್ಲ . ಏಕೆಂದರೆ ಶಿವನು ಒಲಿಯುವುದು ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗಳಿಗೆ ಮಾತ್ರ ಎಂಬ ನಿಲುವನ್ನು ವಚನಕಾರರು ಹೊಂದಿದ್ದರು.

ನಿಜವನರಿಯದೆ ಬರಿಮಾತನಾಡುವರೆಲ್ಲ
ಜ್ಞಾನಿಗಳಹರೆ. (977/460)

ನಿಜ+ಅನ್+ಅರಿಯದೆ; ನಿಜ=ಸತ್ಯ/ದಿಟ/ವಾಸ್ತವ; ಅನ್=ಅನ್ನು; ಅರಿ=ತಿಳಿ/ಕಲಿ; ಅರಿಯದೆ=ತಿಳಿದುಕೊಳ್ಳದೆ; ಬರಿ+ಮಾತು+ಅನ್+ಆಡುವರ್+ಎಲ್ಲ; ಬರಿ=ಏನೂ ಇಲ್ಲದ; ಮಾತು=ನುಡಿ/ಸೊಲ್ಲು; ಬರಿಮಾತು=ಕೆಲಸಕ್ಕೆ ಬಾರದ ಮಾತು/ಹೇಳಿದಂತೆ ನಡೆದುಕೊಳ್ಳದ ಮಾತು/ಪೊಳ್ಳು ನುಡಿ;

ಆಡುವರು=ನುಡಿಯುವವರು; ಜ್ಞಾನಿ+ಗಳ್+ಅಹರೆ; ಜ್ಞಾನಿ=ಒಳಿತು ಕೆಡುಕುಗಳನ್ನು ಒರೆಹಚ್ಚಿ ನೋಡಿ, ಯಾವುದು ಸರಿ-ಯಾವುದು ತಪ್ಪು; ಯಾವುದು ನೀತಿ-ಯಾವುದು ಅನೀತಿ; ಜೀವನದಲ್ಲಿ ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು ಎಂಬ ವಿವೇಕವುಳ್ಳವನು/ತಿಳುವಳಿಕೆಯುಳ್ಳವನು; ಅಹರೆ=ಆಗುತ್ತಾರೆಯೇ;

ನಿಜವಾಗಿ ಯಾವುದು ಇದೆ ಮತ್ತು ಏನು ನಡೆಯುತ್ತಿದೆ ಎಂಬುದನ್ನು ತಿಳಿಯದೆ ಸುಮ್ಮನೆ ಮಾತನಾಡುವವರು ಎಂದಿಗೂ ವಿವೇಕಿಗಳಾಗುವುದಿಲ್ಲ.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: