ಸಣ್ಣಕತೆ: ಪುಟದೊಳಗಿನ ಬಾವಗಳು

 

– .

ಹಳೆಯ ಡೈರಿ, old diary

ತುಂತುರು ಮಳೆ, ಅದೂ ಬೆಳಗಿನ ಜಾವ ಶುರುವಾಗಿದ್ದು. ಮೈಮೇಲಿನ ಹೊದಿಕೆ ತೆಗೆಯಲು ಮನಸ್ಸಾಗಲಿಲ್ಲ. ಬೆಳಗಿನ ವಾಕಿಂಗ್, ಜಾಗಿಂಗ್ ಸ್ಕಿಪ್ ಮಾಡಿದರಾಯಿತು, ಮೇಲಾಗಿ ಮಳೆ ಎಂದು ಮುಸುಕೆಳೆದ. ರಗ್ಗಿನ ಒಳಗೆ ಬಿಸಿಯ ಉಸಿರಿನಿಂದ ಬೆಚ್ಚಗಾಯಿತು. ನಿದ್ರಾ ದೇವಿ ತಾನೇ ತಾನಾಗಿ ಆವರಿಸಿಕೊಂಡಳು. ಸಿಹಿ ನಿದ್ದೆ. ಬೆಳಗಿನ ಜಾವದ ಕನಸು ಬೇರೆ. ಆಹಾ…! ಎಶ್ಟು ಸೊಗಸು. ಕನಸಿನಲ್ಲಿ ಯಾರೋ ಕೂಗಿದಂತಾಯಿತು. ಮುಸುಕು ತೆಗೆಯದಯೇ ಉತ್ತರಿಸಿದ. ಆ ದ್ವನಿ ಅವನು ಕೊಟ್ಟ ಉತ್ತರಕ್ಕೆ ಸ್ಪಂದಿಸದೇ, ರಗ್ಗನ್ನು ಎಳೆಯಿತು. ಆಗಲೇ ಅವನಿಗೆ ಗೊತ್ತಾಗಿದ್ದು ಅದು ‘ಅವಳ’ ದನಿ ಎಂದು.

ಎದ್ದ ತಕ್ಶಣ ಸಮಯ ನೋಡಿದ. ಎಂಟೂವರೆ. ಕೇವಲ ಇನ್ನೊಂದು ಗಂಟೆ ಸಮಯದಲ್ಲಿ ಆಪೀಸಿನಲ್ಲಿರಬೇಕು. ನೆನ್ನೆಯ ದಿನವೇ ನಿಗದಿ ಪಡಿಸಿದ್ದ ಬಹು ಮುಕ್ಯವಾದ ತುರ‍್ತು ಸಬೆಯಲ್ಲಿ ಮಂತ್ರಿಗಳು ಸಹ
ಬಾಗ ವಹಿಸುತ್ತಿದ್ದಾರೆ. ಚೇ… ಎಂತಹ ಕೆಲಸವಾಯಿತು? ದಡಬಡನೆ ಎದ್ದು ಮುಕ ಮಾರ‍್ಜನದ ಜೊತೆಗೆ ಸ್ನಾನವನ್ನೂ ಮುಗಿಸಿ ಹೊರ ಬಂದಾಗ ಒಂಬತ್ತು ಗಂಟೆಗೆ ಐದು ನಿಮಿಶ ಇತ್ತು. ಆಪೀಸ್ ತಲುಪಲು ಕನಿಶ್ಟ ಹದಿನೈದು ನಿಮಿಶ ಬೇಕು ಎಂಬ ವಿಚಾರ ಅವನಿಗೆ ತಿಳಿದಿತ್ತು. ಅವಳು ಕೊಟ್ಟ ಹಬೆಯಾಡುವ ಬಿಸಿ ಬಿಸಿ ಕಾಪಿ ಹೀರಿ, ನೇರ ರೂಮಿಗೆ ಹೋಗಿ, ಹತ್ತು ನಿಮಿಶದಲ್ಲಿ ಬಟ್ಟೆ ಹಾಕಿಕೊಂಡು ತಯಾರಾಗಿ ಹೊರ ಬಂದ. ಅವಳು ‘ತಿಂಡಿ’ ಎಂದರೂ ಅತ್ತ ಗಮನ ಕೊಡುವಶ್ಟು ಸಮಯ ಅವನಿಗೆ ಉಳಿದಿರಲಿಲ್ಲ. ರೆಡಿಯಿದ್ದ ಡಬ್ಬಿಯನ್ನು ಬ್ಯಾಗಿನಲ್ಲಿ ತುರುಕಿಟ್ಟುಕೊಂಡು, ಅವಳಿಗೆ ಬಾಯ್ ಮಾಡಿ ಸ್ಕೂಟರ್ ಏರಿದ್ದ.

ಅವಳಿಗೆ ಇವನ ಆತುರ ನೋಡಿ ನಗು ತಡೆಯಲಾಗಲಿಲ್ಲ. ಬಾಯ್ ಮಾಡುತ್ತಾ ಒಳಗೊಳಗೇ ನಗುತ್ತಾ ಬಾಗಿಲು ಹಾಕಿಕೊಂಡು, ಮನೆಯ ಉಳಿದ ಕೆಲಸದತ್ತ ಗಮನ ಹರಿಸಿದಳು. ಹತ್ತೂವರೆ ವೇಳೆಗೆ ಅವನಿಂದ ಪೋನ್ ಬಂತು. ‘ಎಂದೂ ಇಲ್ಲದ ಪೋನು ಇಂದೇಕೆ?’ ಎನ್ನುತ್ತಾ ರಿಸೀವ್ ಮಾಡಿದಳು. ಅವನು ಕೊಂಚ ಗಾಬರಿಯಲ್ಲಿದ್ದ ಅನಿಸಿತು. ‘ಯಾಕೆ ಗಾಬರಿ? ಏನಾಯ್ತು?’ ಒಂದರ ಹಿಂದೆ ಒಂದು ಪ್ರಶ್ನೆಯನ್ನು ಕೇಳಿದ್ದಳು ಅವಳು.‘ಮುಕ್ಯವಾದ ಪೈಲ್ ಮನೆಲೇ ಮರೆತು ಬಿಟ್ಟಿದ್ದೇನೆ. ಅರ‍್ಜೆಂಟ್ ಬೇಕೇ ಬೇಕು, ಕಪಾಟಿಲ್ಲಿ ಇದೆ. ರಾಜಣ್ಣನ್ನ ಕಳಿಸ್ತೀದ್ದೀನಿ ಅವನ ಸಂಗ್ಡ ಬೇಗ ಕಳ್ಸು’ ಹೇಳಿ ಪೋನಿಟ್ಟ.

ರಾಜಣ್ಣ ಬರುವ ಮುನ್ನ ಪೈಲು ತೆಗೆದಿರಿಸಲು ಅವಳು ಕಪಾಟಿನ ಬಾಗಿಲನ್ನು ತೆರೆದಳು. ಮದುವೆಯಾದ ದಿನದಿಂದ ಇದೇ ಮೊದಲ ಬಾರಿ ಅವಳು ಆ ಕಪಾಟನ್ನು ತೆಗೆದಿದ್ದು. ಅದರಲ್ಲಿ ಬರೀ ಅವನ ಆಪೀಸಿಗೆ ಸಂಬಂದಿಸಿದ ರಾಶಿ ರಾಶಿ ಪೈಲುಗಳೇ ಇದ್ದವು. ಅದ್ರುಶ್ಟಕ್ಕೆ ಅವನಿಗೆ ಇಂದು ಬೇಕಿದ್ದ ಪೈಲು ಮೇಲೆಯೇ ಇತ್ತು. ಅದನ್ನು ಎಳೆದು ತೆಗೆಯುವಾಗ ಅಚಾನಕ್ಕಾಗಿ ‘ಆ ಡೈರಿ’ ಕೆಳಗೆ ಬಿತ್ತು. ಅದನ್ನೂ ಮತ್ತು ಪೈಲನ್ನು ತೆಗೆದುಕೊಳ್ಳುವಶ್ಟರಲ್ಲಿ ರಾಜಣ್ಣ ಬೆಲ್ ಮಾಡಿದ್ದ. ಅವನ ಕೈಲಿ ಆ ಪೈಲನ್ನು ಕಳಿಸಿ, ತನ್ನ ಕುತೂಹಲ ಕೆರಳಿಸಿದ್ದ ಆ ಡೈರಿಯನ್ನು ಕೈಗೆತ್ತಿಕೊಂಡಳು. ಮನಸ್ಸು ಡೋಲಾಯಮಾನವಾಯಿತು. ‘ಇನ್ನೊಬ್ಬರ ಡೈರಿಯನ್ನು ಓದುವುದು ಎಶ್ಟು ಸರಿ?’ ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ‘ಅವನೇನು ಬೇರೆಯವನಲ್ಲವಲ್ಲ, ನನ್ನವನೇ. ಅವನ ನನ್ನಲ್ಲಿ ಮುಚ್ಚಿಡುವಂತಹುದು ಏನಿಲ್ಲ. ಅವನ ಡೈರಿ ಓದುವ ಎಲ್ಲಾ ಹಕ್ಕು ತನಗಿದೆ’ಎಂದು ತನಗೆ ತಾನೇ ಸಮಜಾಯಿಶಿ ಹೇಳಿಕೊಳ್ಳುತ್ತಾ ಡೈರಿ ತೆಗೆದಳು.

ಮೊದಲ ಸುಮಾರು ಪುಟಗಳು ಕಾಲಿ ಕಾಲಿ. ಅವಳಿಗೆ ಬ್ರಮನಿರಸನವಾಯಿತು. ಚಲ ಬಿಡದೆ, ಪುಟಗಳನ್ನು ತಿರುವಿ ಹಾಕಿದಳು. ಈಗ ಕುತೂಹಲ ಇನ್ನಶ್ಟು ಹೆಚ್ಚಾಯಿತು. ಅದೊಂದು ಪುಟದಲ್ಲಿ ಬಹಳ ಆಸಕ್ತಿದಾಯಕ ವಿಶಯ ಕಂಡಿತು. ಅದರ ಮೇಲೆ ಕಣ್ಣಾಡಿಸಿದಳು. ಅದರಲ್ಲಿ ಒಂದು ಹುಡುಗಿಯ ಬಗ್ಗೆ ಅವನ ಬಾವನೆಗಳನ್ನು ಅಬಿವ್ಯಕ್ತಿ ಪಡಿಸಿದ್ದು ಕಂಡು ಬಂತು. ಕುತೂಹಲ ಇನ್ನೂ ಹೆಚ್ಚಾಯಿತು. ಓದಲು ಮೊದಲಿಟ್ಟಳು. ಓದುತ್ತಾ ಓದುತ್ತಾ ಆ ಹುಡುಗಿಯ ಮುಕ ಕಣ್ಣ ಮುಂದೆ ಬರುವಶ್ಟು ಸೊಗಸಾಗಿತ್ತು ವರ‍್ಣನೆ. ಕಣ್ಣ ಮುಂದೆ ಆ ಹುಡುಗಿಯ ಮುಕ ಬಂತು. ಆದರೆ ಅದು ಯಾರೆಂದು? ಗುರುತಿಸುವಲ್ಲಿ ಮನಸ್ಸು ಸೋತಿತು. ಮತ್ತೆ ಮತ್ತೆ ಓದಿದಳು. ಅದೇ ಮುಕ ಪದೇ ಪದೇ ಅವಳ ಮನದಲ್ಲಿ ಮೂಡಿತು. ಎಶ್ಟು ಬಾರಿ ಆ ಪುಟವನ್ನು ಓದಿದರೂ ಪ್ರತಿ ಬಾರಿಯೂ ಅದೇ ಮುಕ ಕಣ್ಣ ಮುಂದೆ ಬರುತ್ತಿತ್ತು. ಆ ಮುಕವನ್ನು ಗುರುತಿಸುವಲ್ಲಿ ಮತ್ತೆ ವಿಪಲಳಾದಳು. ಆ ಮುಕದ ಪೋಟೋಗಾಗಿ ಡೈರಿಯ ಮುಂದಿನ ಎಲ್ಲಾ ಪುಟಗಳನ್ನು ತಿರುವಿ ಹಾಕಿದಳು. ನಿರಾಸೆ ಕಾದಿತ್ತು. ಪೋನ್ ಮಾಡಿ ಅವನನ್ನೇ ಕೇಳುವ ಎಂದು ಪೋನ್ ಕೈಗೆತ್ತಿಕೊಂಡಳು. ಅತಿ ಮುಕ್ಯ ಮೀಟಿಂಗ್ ಇದೆ ಎಂದು ಆತುರಾತುರವಾಗಿ ಹೋಗಿದ್ದು ನೆನಪಾಗಿ ಸುಮ್ಮನಾದಳು. ಸಂಜೆ ಅವನು ಬಂದ ಮೇಲೆ ‘ಕೋರ‍್ಟ್ ಮಾರ‍್ಶಲ್’ ಮಾಡಿದರಾಯಿತು ಎಂದು, ಆ ಪುಟವನ್ನು ಮತ್ತೆ ತೆಗೆದು ನೋಡಿದಳು. ಎಲ್ಲೂ ದಿನಾಂಕದ ಸುಳಿವು ಕಾಣಲಿಲ್ಲ. ಗುರುತಿಗಾಗಿ ಆ ಪುಟದ ಪೇಪರ್ ಕೊಂಚ ಮಡಚಿಟ್ಟಳು.

ಸಂಜೆ ಅವನು ಎಂದಿಗಿಂತ ಕುಶಿಯಾಗಿ ಬಂದಿದ್ದ. ಬಂದವನಿಗೆ ಟಿವಿ ಸ್ಟ್ಯಾಂಡ್ ಮೇಲಿದ್ದ ಡೈರಿ ಎಲ್ಲವನ್ನೂ ತಿಳಿಸಿತ್ತು. ಅದರೂ ತೋರ‍್ಪಡಿಸೊಕೊಳ್ಳದೆ, ಸಬೆಯಲ್ಲಿ ಮಂತ್ರಿಗಳು ತನ್ನ ಕೆಲಸವನ್ನು ಹಾಡಿ ಹೊಗಳಿದ್ದಾಗಿ ಅವಳಬಳಿ ಕುಶಿ ಕುಶಿಯಾಗಿ ಹೇಳಿದ್ದ. ಅವಳ ಪ್ರತಿಕ್ರಿಯೆ ನೀರಸವಾಗಿತ್ತು. ಅವನಿಗೆ ಎಲ್ಲಾ ಅರ‍್ತವಾಗಿತ್ತು. ಅವಳ ಮನದಲ್ಲಿನ ಬಿರುಗಾಳಿ ಬುಗಿಲೇಳುವ ಮುನ್ನ ಶಾಂತಗೊಳಿಸಬೇಕಿತ್ತು. ಅವಳಿದ್ದೆಡೆಗೆ ನೇರವಾಗಿ ಹೋಗಿ, ಹಿಂದಿನಿಂದ ಅವಳನ್ನು ಗಟ್ಟಿಯಾಗಿ ತಬ್ಬಿದ್ದ. ಅವಳು ಕೊಸರಾಡುತ್ತಾಳೆ ಎಂದು ಅವನಿಗೆ ಗೊತ್ತಿತ್ತು. ಅದಕ್ಕಾಗಿ ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ ಅವಳನ್ನು ಅನಾಮತ್ತಾಗಿ ಎತ್ತಿ ಹೊತ್ತುಕೊಂಡು ರೂಮಿಗೆ ಹೋದ. ಅಲ್ಲಿ ಅವಳನ್ನು ಕೆಳಗಿಳಿಸಿ, ‘ಆ ಪುಟದಲ್ಲಿದ್ದ ಹುಡುಗಿಯ ವರ‍್ಣನೆ ಇದೇ ಹುಡುಗಿಯದ್ದು’ ಎಂದು ಎದುರಿದ್ದ ನಿಲುವುಗನ್ನಡಿಯನ್ನು ತೋರಿಸಿ ನಕ್ಕಿದ್ದ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: