ಗೇಮ್‌ಸ್ಟಾಪ್ – ಶೇರು ಮಾರುಕಟ್ಟೆಯಲ್ಲಿ ಮಿಂಚಿನ ಓಟ

ಸಚಿನ್ ಎಚ್‌. ಜೆ.

ನೀವು ಆನ್‌ಲೈನ್‌ನಲ್ಲಿ ಸುದ್ದಿ ಓದುವವರಾಗಿದ್ದರೆ, ಅಂತರರಾಶ್ಟ್ರೀಯ ಶೇರು ಮಾರುಕಟ್ಟೆಯ ಬಗ್ಗೆ ಒಲವುಳ್ಳವರಾಗಿದ್ದರೆ ಕಳೆದ ನಾಲ್ಕೈದು ವಾರದಲ್ಲಿ ಗೇಮ್‌ಸ್ಟಾಪ್ ಈ ಪದವನ್ನು ಕೇಳಿರಬಹುದು. ಗೇಮ್‌ಸ್ಟಾಪ್ ಪ್ರಸಂಗ ಇತ್ತೀಚೆಗೆ ನಡೆದ ಬಹಳ ಕುತೂಹಲಕಾರಿ ಬೆಳವಣಿಗೆ. ಇಂದಿನ ಇಂಟರ್‌ನೆಟ್ ಮತ್ತು ಸಮಾಜಿಕ ಜಾಲತಾಣಗಳ ಲೀಲಾಜಾಲ ಜಗತ್ತಿನಲ್ಲಿ ಏನು ಬೇಕಾದರೂ ಚಮತ್ಕಾರ ಆಗಬಹುದು ಎಂದು ಈ ಬೆಳವಣಿಗೆ ತೋರಿಸಿಕೊಟ್ಟಿದೆ. ಈ ಕುರಿತು ತಿಳಿಯುವ ಮುನ್ನ ಶೇರು ಮಾರುಕಟ್ಟೆಯ ಪರಿಬಾಶೆಯಲ್ಲಿ ಕೆಲ ವಿಶಯಗಳನ್ನು ನೋಡೋಣ.

ಶೇರು ಮಾರಕುಟ್ಟೆ ಕುಸಿಯುತ್ತಿದ್ದರೂ ಲಾಬ ಸಾದ್ಯವೇ?

ಸಾಮಾನ್ಯವಾಗಿ ಶೇರು ಮಾರುಕಟ್ಟೆಯಲ್ಲಿ ನಾವು ಕೊಂಡ ಶೇರಿನ ಕಂಪನಿ ಲಾಬ ಗಳಿಸಿದಾಗ ಆ ಶೇರಿನ ಬೆಲೆ ಜಾಸ್ತಿ ಆಗುತ್ತದೆ.‌ ಅಂತೆಯೇ ಲಾಬ ಗಳಿಸುತ್ತೇವೆ. ಆದರೆ ಒಂದು ಶೇರಿನ ಬೆಲೆ ಕಡಿಮೆ ಆಗುತ್ತೆ. ಕಂಪನಿಯಲ್ಲಿನ ಬಿಕ್ಕಟ್ಟಿನ ಅತವಾ ಯಾವುದೋ ಕಾರಣದಿಂದ ಶೇರಿನ ಬೆಲೆ ಕುಸಿಯುತ್ತದೆ ಎಂದು ಗೊತ್ತಿದ್ದಾಗಲೂ ಕೂಡ ಲಾಬ ಗಳಿಸಬಹುದು. ಅದಕ್ಕೆ ಶಾರ‍್ಟ್ ಸೆಲ್ಲಿಂಗ್ (short selling) ಅತವಾ ಶಾರ‍್ಟಿಂಗ್ (shorting) ಎನ್ನುವ ವಿದಾನವನ್ನು ಬಳಸಲಾಗುತ್ತದೆ. ಒಂದು ಉದಾಹರಣೆ ನೋಡೋಣ – ಈಗ ನಿಮ್ಮ ಅಪ್ಪನ ಬಳಿ 10 ಗ್ರಾಮ್ ಚಿನ್ನ (ಬೆಲೆ 40,000 ಅನ್ನೋಣ) ಇದ್ದು ಚಿನ್ನದ ಬೆಲೆ ಕುಸಿಯತ್ತೆ ಅಂತ ನಿಮಗೆ ಗೊತ್ತಿದೆ. ಆ ಚಿನ್ನವನ್ನ ಇವತ್ತು ಮಾರಿ ಬೆಲೆ ಕುಸಿದಾಗ (30,000 ಅನ್ನೋಣ) ಕಡಿಮೆ ಬೆಲೆಗೆ ಕರೀದಿ ಮಾಡಬಹುದು. ಕೊನೆಗೆ ಅಪ್ಪನಿಗೆ ಚಿನ್ನ ಮರಳಿಸಿದರೆ 10,000 ರೂಪಾಯಿ ಲಾಬ ಮಾಡಿಕೊಳ್ಳಬಹುದು. ಹಾಗೆಯೇ ಸ್ಟಾಕ್ ಬ್ರೋಕರ್ ಹತ್ತಿರ ಇರುವ ಶೇರುಗಳನ್ನು ಎರವಲು ಪಡೆದು ಮೊದಲು ಜಾಸ್ತಿ ದುಡ್ಡಿಗೆ ಮಾರುಕಟ್ಟೆಯಲ್ಲಿ ಮಾರಿ, ಆಮೇಲೆ ಕಡಿಮೆ ದುಡ್ಡಿಗೆ ಮತ್ತೆ ಕರೀದಿಸಿ ಬ್ರೋಕರ‍್‌ಗೆ ಮರಳಿಸುವುದೇ ಶಾರ‍್ಟ್ ಸೆಲ್ಲಿಂಗ್. ಮಾರಿದ ಶೇರುಗಳನ್ನು ನಂತರ ಮರುಕರೀದಿ ಮಾಡುವುದನ್ನು ಶಾರ‍್ಟ್ ಕವರಿಂಗ್ (short covering) ಎಂದು ಕರೆಯುತ್ತಾರೆ.

ಶಾರ್ಟ್ ಸೆಲ್ಲಿಂಗ್ ಮಾಡುವುದರ ಅಪಾಯವೇನು?

ಶಾರ‍್ಟ್ ಮಾಡಿದ ಮೇಲೆ ಬ್ರೋಕರ‍್‌ಗೆ ಇಂತಿಶ್ಟು ಸಮಯದ ಒಳಗೆ ಶೇರನ್ನು ಹಿಂತಿರುಗಿಸಬೇಕಾಗುತ್ತದೆ. ಅಶ್ಟರಲ್ಲಿ ಶೇರಿನ ಬೆಲೆ ಏನೇ ಇದ್ದರೂ ಮೊದಲೇ ನೇಮಿಸಿದ ಸಮಯದೊಳಗೆ ಮರುಕಟ್ಟೆಯಿಂದ ಕೊಳ್ಳಲೇಬೇಕಾಗುತ್ತದೆ. ಶೇರಿನ ಬೆಲೆ ಏನಾದರು ಅಂದುಕೊಂಡಂತೆ ಕುಸಿಯದೇ, ಮೇಲೇರಿದರೆ ಹೆಚ್ಚಿನ ಬೆಲೆಗೆ ಕರೀದಿಸಿ ಬ್ರೋಕರ‍್‌ಗೆ ಶೇರು ಮರುಪಾವತಿ ಮಾಡಲೇಬೇಕು. ಆಗ ನಶ್ಟ ಆಗುತ್ತದೆ. ಇದರಲ್ಲಿರುವ ಅಪಾಯವನ್ನು ಸಂಬಾಳಿಸುವುದು ಎಲ್ಲರ ಕೈಯ್ಯಲ್ಲಿ ಸಾದ್ಯವಿಲ್ಲ.

ಸಾಮಾನ್ಯವಾಗಿ ಹೆಡ್ಜ್ ಪಂಡ್ಸ್ ಎಂದು ಕರೆಯಲ್ಪಡುವ ದೊಡ್ಡ ದೊಡ್ಡ ಹೂಡಿಕೆ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಸಾಮಾನ್ಯವಾಗಿ ಮೂಲೆಗುಂಪಾಗಿರುವ (ಬೇರೆ ಬೇರೆ ಕಾರಣಗಳಿಂದ ತಳ ಕಚ್ಚಿರುವ) ಶೇರುಗಳಲ್ಲಿ ಶಾರ‍್ಟ್ ಮಾಡುತ್ತವೆ. ದೊಡ್ಡ ಪ್ರಮಾಣದಲ್ಲಿ ಶೇರುಗಳ ಮಾರುವಿಕೆ ಆದಾಗ ಪೂರೈಕೆ ಹೆಚ್ಚಾಗಿ ಬೇಡಿಕೆ ಕಡಿಮೆಯಾಗಿದ್ದರಿಂದ ಆ ಶೇರಿನ ಬೆಲೆ ಕುಸಿಯುವುದು ನಿಜ ಕೂಡ. ಆಗ ಅದೇ ಶೇರುಗಳನ್ನು ಶಾರ‍್ಟ್ ಮಾಡಿದವರು ಇನ್ನಶ್ಟು ಕಡಿಮೆ ಬೆಲೆಗೆ ಕೊಂಡು ಬ್ರೋಕರ‍್‌ಗೆ ಮರಳಿಸುತ್ತಾರೆ. ಹೀಗೆ ಮಾರುಕಟ್ಟೆಯನ್ನು ನಿಯಂತ್ರಿಸುವ ಪ್ರಕ್ರಿಯೆಗೆ ಹೆಡ್ಜಿಂಗ್ ಎನ್ನುತ್ತಾರೆ.

ಹೆಡ್ಜಿಂಗ್ ಮಾಡುವುದು ಶೇರಿನ ದರವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಂತ್ರಣ ಮಾಡಿದ ಹಾಗೆ, ಇದು ತಪ್ಪು ಎನ್ನಿಸಬಹುದು. ಆದರೆ ಇದನ್ನು ಮಾಡುವುದರಲ್ಲಿರುವ ಅಪಾಯವನ್ನು ಸಂಬಾಳಿಸಿದ್ದಕ್ಕೆ ಸಿಕ್ಕ ಪಲ ಅನ್ನೋ ಒಮ್ಮತ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. 2008ರ ಆರ‍್ತಿಕ ಪತನದಲ್ಲಿ ಶೇರು ಮಾರುಕಟ್ಟೆ ನೆಲಕಚ್ಚಿದಾಗ ಮೈಕೆಲ್ ಬರ‍್ರಿ ಮೊದಲಾದವರು ತಮ್ಮ ಹೆಡ್ಜ್ ಪಂಡ್‌ಗಳ ಮೂಲಕ ಶಾರ‍್ಟ್ ಮಾಡಿ ಕೋಟಿ ಕೋಟಿ ಲಾಬ ಗಳಿಸಿದ್ದು ದಂತಕತೆ. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ಬಿಗ್ ಶಾರ‍್ಟ್ ನಂತ ಹಲವು ಸಿನಿಮಾಗಳು ಬಂದಿವೆ, ಜನಪ್ರಿಯವೂ ಆಗಿವೆ.

ಹೆಡ್ಜಿಂಗ್ ಹೇಗೆ ನಡೆಯುತ್ತದೆ?

ಶೇರು ಮಾರಕಟ್ಟೆಯ ಇತಿಹಾಸ ತೆರೆದು ನೋಡಿದರೆ ಶಾರ‍್ಟ್ ಸೆಲ್ಲಿಂಗ್ ಮಾಡುವುದು ದೊಡ್ಡ ಹೂಡಿಕೆದಾರರು ಹಾಗು ಬಂಡವಾಳ ಇರುವ ಹೆಡ್ಜ್ ಪಂಡ್‌ಗಳು ಮಾಡುವ ಕೆಲಸ. ಈ ಹೆಡ್ಜ್ ಪಂಡ್‌ಗಳು ಬವಿಶ್ಯವಿಲ್ಲದ ಕಡಿಮೆ ಮೊತ್ತದ ಶೇರುಗಳನ್ನು ಗುರಿ ಮಾಡುವಾಗ ಅಪಾಯವನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಏಕೆಂದರೆ ಆ ಶೇರಿನ ಮೊತ್ತ ಏರಿದರೆ ಈ ಕಂಪನಿಗಳಿಗೆ ಅಪಾರ ನಶ್ಟ ಆಗುತ್ತದೆ. ಹಾಗಾಗಿ ಈ ಹೆಡ್ಜ್ ಪಂಡ್‌ಗಳು ತಾವು ಹುಟ್ಟುಹಾಕಿದ ಶಾರ‍್ಟ್ ಪೊಸಿಶನ್ಗಳು ಸಣ್ಣ ಹೂಡಿಕೆದಾರರ ಕಿವಿಗೆ ಬೀಳುವಂತೆ ಮಾಡುತ್ತವೆ. ಆ ಶೇರುಗಳ ಬಗ್ಗೆ ಮಾರುಕಟ್ಟೆಯಲ್ಲಿ ಸಂಪೂರ‍್ಣ ನಕಾರಾತ್ಮಕ ಸುದ್ದಿಗಳೇ ಹರಿಯುವಂತೆ ಮಾಡುತ್ತವೆ. ಮಾರುಕಟ್ಟೆಯಲ್ಲಿ “ಮೊದಲು ಈ ಶೇರನ್ನು ಮಾರಿಬಿಡು. ನಾಳೆ ಇದು ಬಿದ್ದಾಗ ನಿನ್ನ ಸಂಪೂರ‍್ಣ ಹೂಡಿಕೆ ಮಾಯವಾಗಲಿದೆ” ಅಂತ ಹೆದರಿಸೋರು ಮಾರುಕಟ್ಟೆಯಲ್ಲಿ ತುಂಬಿಹೋಗುತ್ತಾರೆ. ಈ ಸುದ್ದಿಗಳು ಎಶ್ಟರ ಮಟ್ಟಿಗೆ ವ್ಯಾಪಕವಾಗುತ್ತವೆ ಅಂದರೆ ಸಣ್ಣ ಹೂಡಿಕೆದಾರರು ಹೆದರಿ ಹೈರಾಣಾಗಿ ತಮ್ಮ ಶೇರುಗಳನ್ನು ನಶ್ಟದಲ್ಲಿ ಮಾರಿಬಿಡುತ್ತಾರೆ. ಹೀಗೆ ಒಬ್ಬರನ್ನೊಬ್ಬರು ನೋಡಿ ಶೇರು ಮಾರುವ ಪ್ರವ್ರುತ್ತಿ ಹಬ್ಬಿದಾಗ ಶೇರಿನ ಬೆಲೆ ಅಗತ್ಯಕ್ಕಿಂತಲೂ ಹೆಚ್ಚು ಕುಸಿಯುತ್ತದೆ. ಇದನ್ನೇ ಎದುರು ನೋಡುತ್ತಿದ್ದ ಹೆಡ್ಜ್ ಪಂಡ್‌ಗಳು ಕಡಿಮೆ ಬೆಲೆಗೆ ಈ ಶೇರುಗಳನ್ನು ಕೊಂಡು ಬ್ರೋಕರ್‌ಗೆ ಅವನ್ನು ಮರಳಿಸಿ ಕೋಟಿ ಕೋಟಿ ಲಾಬವನ್ನು ಜೇಬಿಗಿಳಿಸುತ್ತವೆ.

ಹೆಡ್ಜಿಂಗ್ ಅನ್ಯಾಯ ಎಂದು ಕಂಡರೂ ಇದರಲ್ಲಿ ಹೆಡ್ಜ್ ಪಂಡ್‌ಗಳು ಬಹಳ ಜಾಗರೂಕವಾಗಿ ಕೆಲಸ ಮಾಡುತ್ತವೆ. ಮಾರುಕಟ್ಟೆಯಲ್ಲಿ ಬಂದ ಗಾಳಿ ಸುದ್ದಿಯ ಮೂಲ, ಅವು ಸ್ರುಶ್ಟಿಸಿದ ಶಾರ‍್ಟ್ಗಳ (short position) ವಿವರ, ಸಣ್ಣ ಹೂಡಿಕೆದಾರರಿಗೆ ಗೊತ್ತಾಗುವ ಬಗೆ ಇವ್ಯಾವೂ ಸಾಮಾನ್ಯವಾಗಿ ಆ ಹೆಡ್ಜ್ ಪಂಡ್ ಮಾಡಿದ ಕೆಲಸ ಅಂತ ಸಾಬೀತುಪಡಿಸಲಾಗುವುದಿಲ್ಲ. ಸಣ್ಣ ಹೂಡಿಕೆದಾರರು ತಮ್ಮ ಶೇರುಗಳ ಬಗ್ಗೆ ನಕಾರಾತ್ಮಕ ಸುದ್ದಿ ಕೊಟ್ಟ ದಲ್ಲಾಳಿಯನ್ನು ಹುಡುಕಿದರೂ ಈಗ ಸಿಗುವುದಿಲ್ಲ. ಅತ್ತ ಕಡಿಮೆ ಬೆಲೆಗೆ ಮಾರಿದ ಶೇರಿನ ಬೆಲೆ ಮತ್ತೆ ವಾಪಾಸು ತನ್ನ ಮೊದಲ ಸ್ತಾನಕ್ಕೆ ಬಂದಿದ್ದನ್ನು ನೋಡುವ ಸಣ್ಣ ಹೂಡಿಕೆದಾರರು ನುಂಗಿದ ನಶ್ಟವನ್ನು ನೆನೆದು ಕೈ ಕೈ ಹಿಸುಕಿಕೊಳ್ಳಬೇಕು ಅಶ್ಟೆ. ಇದರಲ್ಲಿ ನಶ್ಟ ಆಗುವುದು ಸಾವಿರಾರು ಸಾಮಾನ್ಯ ಸಣ್ಣ ಹೂಡಿಕೆದಾರರಿಗೆ. ತಾವು ಮೆಚ್ಚಿದ ಶೇರು ಹಿಗ್ಗುತ್ತೆ ಅಂತ ಅಂದುಕೊಂಡಿದ್ದು ದರ ಕುಸಿದು ನೆಲ ಕಚ್ಚಿದಾಗ ತಡೆಯಲಾರದೆ ತಮ್ಮ ಶೇರುಗಳನ್ನು ತಳಮಟ್ಟದ ದರಕ್ಕೆ ಮಾರಿದಾಗ ಆಗುವ ನಶ್ಟವನ್ನ ಮೌನವಾಗಿ ನುಂಗಿದ್ದು ಯಾರಿಗೂ ಗೋಚರಿಸುವುದೇ ಇಲ್ಲ.

ಹೆಡ್ಜಿಂಗ್ ಉಲ್ಟಾ ಹೊಡೆದರೆ ಏನಾಗುತ್ತದೆ?

ಶಾರ‍್ಟ್ ಮಾಡಿದ ಶೇರಿನ ಬೆಲೆ ಏನಾದರು ಯಾವುದೇ ಕಾರಣಕ್ಕೆ ಹಿಗ್ಗಿಬಿಟ್ಟರೆ ಶಾರ‍್ಟ್ ಮಾಡಿದವರು ಅನಿವಾರ‍್ಯವಾಗಿ ಹೆಚ್ಚಿನ ಬೆಲೆಗೆ ಕೊಳ್ಳಬೇಕಾಗುತ್ತದೆ. ಬಾರೀ ಪ್ರಮಾಣದಲ್ಲಿ ಶಾರ‍್ಟ್ ಮಾಡಿ ಹೆಚ್ಚಿನ ಬೆಲೆಗೆ ಕೊಂಡಾಗ ಶೇರಿನ ಬೆಲೆ ಶಾರ‍್ಟ್ ಕವರಿಂಗ್ ಪರಿಣಾಮವಾಗಿ ಮತ್ತೂ ಹಿಗ್ಗುತ್ತದೆ. ಇದಕ್ಕೆ ಶಾರ‍್ಟ್ ಸ್ಕ್ವೀಜ್(short squeeze) ಅಂತ ಕರೆಯುತ್ತಾರೆ. ಇದರಿಂದ ಬಾರೀ ಪ್ರಮಾಣದ ನಶ್ಟ ಎದುರಿಸಬೇಕಾಗುತ್ತದೆ. ಈ ರೀತಿ ಆಗುವುದು ಸಾಮಾನ್ಯವಾಗಿ ವಿರಳ.

ತಮ್ಮ ಹಣ ಲಪಟಾಯಿಸುವ ಈ ಹೆಡ್ಜ್ ಪಂಡ್‌ಗಳ ಹುಟ್ಟಡಗಿಸಬೇಕು ಅನ್ನೋದು ಸಣ್ಣ ಹೂಡಿಕೆದಾರರ ಉದ್ವೇಗ ಆದರೆ ಇನ್ನೊಂದೆಡೆ ಇಲಾನ್ ಮಸ್ಕ್ ಕೊಟ್ಟಿರುವ ಕುಮ್ಮಕ್ಕು ಗೇಮ್‌ಸ್ಟಾಪ್ ನ ಬೆಳವಣಿಗೆಗೆ ಕಾರಣವಾಯಿತು. ಕಳೆದ ವರ‍್ಶ ಇಲಾನ್ ಮಸ್ಕ್ ಟ್ವೀಟಿಸಿದ ಶೇರುಗಳು ಹುಚ್ಚುಕುದುರೆಯಂತೆ ಓಡುತ್ತಿವೆ. ಶಾರ‍್ಟ್ ಸೆಲ್ ಮಾಡುವವರ ಮೇಲೆ ಎಲಾನ್ ಮಸ್ಕ್ ಗೂ ಎಲ್ಲಿಲ್ಲದ ಸಿಟ್ಟು.

ಗೇಮ್‌ಸ್ಟಾಪ್ ನ ಕತೆ ಏನು?

ಗೇಮ್‌ಸ್ಟಾಪ್ ಅಮೇರಿಕದ ಅಶ್ಟೇನು ಉಜ್ವಲ ಬವಿಶ್ಯ ಇಲ್ಲದ ಕಡಿಮೆ ಬೆಲೆಗೆ ಸಿಗುವ ಶೇರುಮಾರುಕಟ್ಟೆಯಲ್ಲಿ ಹೆಸರಿಸಲ್ಪಟ್ಟಿರುವ ಒಂದು ಸಣ್ಣ ಕಂಪನಿ. ಈ ಕಂಪನಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಯ ಶೇರುಗಳನ್ನು ಹೆಡ್ಜ್ ಪಂಡ್‌ಗಳು ಶಾರ‍್ಟ್ ಮಾಡಿ ಮಾಡಿ ಹಣ ಗಳಿಸುತ್ತಿದ್ದುದು ಸಹಜವೆನಿಸುವಂತೆ ನಡೆದಿತ್ತು. ಈ ಬಗ್ಗೆ ರೆಡ್ಡಿಟ್ ಜಾಲತಾಣದ r/wallstreetbets ಅನ್ನೋ ಒಂದು ಗುಂಪಿನಲ್ಲಿ 2018ರಿಂದ ಈಚೆಗೆ ಬಹಳ ಚರ‍್ಚೆ ಆಗುತ್ತಲೇ ಇತ್ತು.

ಗೇಮ್‌ಸ್ಟಾಪ್ ಶೇರಿನ ಬೆಲೆ ಕಳೆದ ಆರು ತಿಂಗಳಿಂದ 10-13 ಡಾಲರ್ ಆಸುಪಾಸಿನಲ್ಲಿ ಇದ್ದಾಗ ಮೆಲ್ವಿನ್ ಕ್ಯಾಪಿಟಲ್ ಮತ್ತು ಸಿಟ್ರಾನ್ ಮತ್ತಿತರ ಹೆಡ್ಜ್ ಪಂಡ್‌ಗಳು ಕೋಟ್ಯಂತರ ದುಡ್ಡು ಹಾಕಿ ಶಾರ‍್ಟ್ ಪೊಸಿಶನ್ ಸ್ರುಶ್ಟಿ ಮಾಡಿದ್ದಲ್ಲದೇ. ಇದೇ ಸುದ್ದಿಯ ಗುಟ್ಟನ್ನು ತಾನೇ wallstreetbets ಗುಂಪಿನಲ್ಲಿ ಸೋರಿಕೆ ಮಾಡಿತು. ಈಗ wallstreetbets ಗುಂಪಿನ ಸದಸ್ಯರು ಒಬ್ನರೊಬ್ಬರನ್ನು ಪ್ರೇರೇಪಿಸಿ ಶೇರುಗಳನ್ನು ಹೆದರಿ ಮಾರುವ ಬದಲು ಮುಗಿಬಿದ್ದು ಕೊಳ್ಳಲು ಶುರು ಮಾಡಿದರು. ಕೆಲವರು ಗುಂಪಿನ ಕುಮ್ಮಕ್ಕಿನಿಂದ ಕೊಂಡರೆ ಕೆಲವರು ಏನಾದರೂ ಆಗಲಿ ಹೆಡ್ಜ್ ಪಂಡ್‌ಗಳ ಮೇಲೆ ಸೇಡು ತೀರಿಸಬೇಕೆಂದು ಕೊಂಡರು. ನೋಡು ನೋಡುತ್ತಲೆ ಗೇಮ್‌ಸ್ಟಾಪ್ ಶೇರನ್ನು ಯಾವುದೇ ಬೆಲೆಗಾದರೂ ಕೊಳ್ಳಲೇಬೇಕು ಅನ್ನೊ ಹಟಕ್ಕೆ ಬಿದ್ದಂತೆ ಕೊಳ್ಳುವುದು ಶುರು ಆಯಿತು. ಕಾಲೇಜು ಹುಡುಗರು ತಮ್ಮ ಸಣ್ಣ ಉಳಿತಾಯವನ್ನು ಹಾಕಿದರು. ಹೊಸದಾಗಿ ಕೆಲಸ ಸೇರಿರುವವರು ಅಲ್ಪಸಲ್ಪ ದುಡಿಮೆ ಮಾಡಿದ್ದವರೆಲ್ಲರೂ ಗೇಮ್‌ಸ್ಟಾಪ್‌ನ ಶರವೇಗದ ಓಟದಲ್ಲಿ ಬಾಗಿಯಾದರು.

ಹೆಚ್ಚಿದ ಬೇಡಿಗೆ ಆಗಸಕ್ಕೇರಿದ ಶೇರು ಬೆಲೆ

ಕೊಳ್ಳುಗರು ಹೆಚ್ಚಾಗುತ್ತಿದ್ದಂತೆಯೇ ಗೇಮ್‌ಸ್ಟಾಪ್‌ನ ಶೇರು ಬೆಲೆ ಏರತೊಡಗಿತು. ಜನವರಿಯ ಶುರುವಿನಲ್ಲಿ 20 ಡಾಲರ್ ಆಸುಪಾಸಿನಲ್ಲಿ ಮಾರಾಟವಾಗುತ್ತಿದ್ದ ಗೇಮ್‌ಸ್ಟಾಪ್‌ನ ಶೇರು ಜನವರಿ 28ರ ಹೊತ್ತಿಗೆ 483 ಡಾಲರ್ ತಲುಪಿತು. ನೋಡ ನೋಡುತ್ತಲೇ ನಾಲ್ಕೇ ವಾರದಲ್ಲಿ ಇಪ್ಪತ್ತು ಪಟ್ಟಾಗಿತ್ತು. ತಬ್ಬಿಬ್ಬಾದ ಶಾರ‍್ಟ್ ಮಾಡಿದ ಹೆಡ್ಜ್ ಪಂಡ್‌ಗಳು ಹೆಚ್ಚು ಬೆಲೆಗೆ ಶಾರ‍್ಟ್ ಕವರ್ ಮಾಡಿ ಸರಾಸರಿ 12,000 ಕೋಟಿ ಡಾಲರ್ ನಶ್ಟ ಮಾಡಿಕೊಂಡಿವು. ಹೆಚ್ಚು ಬೆಲೆಗೆ ಒಮ್ಮೆಲೆ ಶೇರುಗಳ ಕರೀದಿಯಿಂದ ಶಾರ‍್ಟ್ ಸ್ಕ್ವೀಜ್ ಉಂಟಾಗಿ ಗೇಮ್‌ಸ್ಟಾಪ್ ಬೆಲೆ ಮತ್ತೂ ಮೇಲೆ ಏರಿತು. ಬೆಲೆ ಏರಿದ ಹಾಗೆಲ್ಲ ಒಂದು ಕಡೆ ಶಾರ‍್ಟ್ ಮಾಡಲು ಹವಣಿಸುವ ಪಂಡ್‌ಗಳಿಗೆ ಅರೆ “ಇನ್ನು ಮೇಲೆ ಹೋಗಲು ಸಾದ್ಯವಿಲ್ಲ” ಎಂದೆನಿಸಿ ಒಂದು ಕಡೆ ಕಂಡು ಮತ್ತಶ್ಟು ಶಾರ‍್ಟ್ ಪೊಸಿಶನ್ ಸ್ರುಶ್ಟಿಸಿದರೆ ಇನ್ನೊಂದು ಕಡೆ wallstreetbets ನ ಮಿಲಿಯನ್ ಗಟ್ಟಲೆ ಸಣ್ಣ ಹೂಡಿಕೆದಾರರು ಒಬ್ಬರನ್ನೊಬ್ಬರು ಪ್ರೇರೇಪಿಸುತ್ತ ವ್ಯಾಪಾರವೇ ಕುಸಿದು ನಶ್ಟ ಮಾಡಿಕೊಳ್ಳುತ್ತಿದ್ದ ಗೇಮ್‌ಸ್ಟಾಪ್‌ ಕಂಪನಿಯ ಶೇರುಗಳನ್ನು ಹುಚ್ಚರಂತೆ ಕೊಂಡು ಶೇರಿನ ದರವನ್ನು ಮತ್ತೂ ಮೇಲಕ್ಕೆ ಎತ್ತಿದ್ದರು. ಶಾರ‍್ಟ್ ಮಾಡಿದ ಕಂಪನಿಗಳು ಮತ್ತೊಮ್ಮೆ ನಶ್ಟ ಅನುಬವಿಸಿದವು. ಮೆಲ್ವಿನ್ ಕ್ಯಾಪಿಟಲ್ ಒಂದೇ ಕಂಪನಿಯ ಸಂಪತ್ತು ಜನವರಿ ಕೊನೆಗೆ ಅರ‍್ದಕ್ಕೆ ಬಿದ್ದುಹೋಗಿತ್ತು.

ಸಾಮಾನ್ಯವಾಗಿ ಶೇರು ಮಾರುಕಟ್ಟೆಯಲ್ಲಿ ದೊಡ್ಡ ಕಂಪನಿಗಳು ಪೂರ‍್ಣ ರಿಸರ‍್ಚ್ ಟೀಮ್ಗಳ ಸೇನೆಯೊಂದಿಗೆ ಸಾವಿರಾರು ಬಾರಿ ಪರಾಮರ‍್ಶಿಸಿ ತಯಾರಿಸಿದ ಸ್ಟ್ರಾಟಜಿಯೊಂದಿಗೆ ದೊಡ್ಡ ಮೊತ್ತ ಹೂಡಿಕೆ ಮಾಡಿ ಲಾಬಗಳಿಸಿದರೆ ಸಣ್ಣ ಹೂಡಿಕೆದಾರರು ದುರಾಸೆ ಬಾವನೆಗಳು ಅತವಾ ಯಾರೋ ಕೊಟ್ಟ ಟಿಪ್ ಮೇಲೆ ನಂಬಿಕೆಯಿಟ್ಟು ಹೂಡಿಕೆ ಮಾಡಿ ನಶ್ಟ ಮಾಡಿಕೊಳ್ಳುತ್ತಾರೆ. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಣ್ಣ ಹೂಡಿಕೆದಾರರು ಒಟ್ಟಿಗೆ ಸೇರಿ ಹೆಡ್ಜ್ ಪಂಡ್‌ಗಳಿಗೆ ಚಳ್ಳೆ ಹಣ್ಣು ತಿನಿಸಿದ್ದರು.

ಹೆಡ್ಜ್ ಪಂಡ್‌ಗಳಿಗೆ ದುಡ್ಡು ಬರುವುದಾದರೂ ಎಲ್ಲಿಂದ? ಅದೂ ಕೂಡ ಆ ಪಂಡ್‌ಗೆ ದುಡ್ಡು ಹಾಕುವ ಸಣ್ಣ ಹೂಡಿಕೆದಾರರಿಂದಲೇ ಅಲ್ಲವೇ? ಈಗ ಆ ಸಣ್ಣ ಹೂಡಿಕೆದಾರರೆಲ್ಲ ಹೆದರಿ ಹೌಹಾರಿದರು. ಹೆಡ್ಜ್ ಪಂಡ್‌ಗಳ ಮೇಲೆ ಅಪಾರ ಒತ್ತಡ ಸ್ರುಶ್ಟಿ ಆಯಿತು.

ವ್ಯವಹಾರ ನಿಶೇದಿಸಿದ ರಾಬಿನ್‌ಹುಡ್ – ಶೇರು ಬೆಲೆಯಲ್ಲಿ ಅಲ್ಲೋಲ ಕಲ್ಲೋಲ

ಅಮೆರಿಕಾದ ಶೇರು ಮಾರುಕಟ್ಟೆಯ ಕಟ್ಟಳೆಗಳನ್ನು ರೂಪಿಸುವ SEC (ಸೆಕ್ಯೂರಿಟೀಸ್ & ಎಕ್ಸ್‌ಚೇಂಜ್ ಕಮಿಶನ್) ಮೇಲೆ ‘ಈ ರೀತಿಯಲ್ಲಿ ಶೇರು ಮಾರುಕಟ್ಟೆಯನ್ನು ಮ್ಯಾನಿಪುಲೇಟ್ ಮಾಡಲು ಬಿಟ್ಟಿದ್ದೀರ, ನಿಯಮಾವಳಿ ಬಿಗಿಗೊಳಿಸಬೇಕು’ ಎಂಬ ಕೂಗು ಬರುತ್ತಲೇ ಸಣ್ಣ ಹೂಡಿಕೆದಾರರೇ ತುಂಬಿರುವ ಟ್ರೇಡಿಂಗ್ ಪ್ಲಾಟ್‌ಪಾರಮ್ ರಾಬಿನ್‌ಹುಡ್ ಗೇಮ್‌ಸ್ಟಾಪ್‌ನಲ್ಲಿ ವ್ಯವಹಾರ ನಿಶೇದಿಸಿತು. ಇದರಿಂದಾಗಿ ಗೇಮ್‌ಸ್ಟಾಪ್ ಶೇರು ಕುಸಿಯಿತು.

ಇಡೀ ಶೇರು ಮಾರುಕಟ್ಟೆ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ಬೇಟೆಯಾಡಲು ಕಟ್ಟಲಾಗಿದೆ ಅನ್ನೋ ಕೂಗು ಕೇಳತೊಡಗಿತು. ಈ ಕೂಗು ಕೂಡ ದೊಡ್ಡದಾಗುತ್ತಲೇ ಆದರೆ ಮತ್ತೊಮ್ಮೆ ರಾಬಿನ್‌ಹುಡ್‌ ತನ್ನ ಪ್ಲಾಟ್‌ಪಾರಮ್ ಅಲ್ಲಿ ಗೇಮ್‌ಸ್ಟಾಪ್‌ನ ಮೇಲಿನ ನಿಶೇದ ತೆಗೆಯಿತು. ವ್ಯವಹಾರ ಶುರು ಮಾಡುತ್ತಲೇ ರಾಬಿನ್‌ಹುಡ್‌ನ ಸಣ್ಣಹೂಡಿಕೆದಾರರು ಮತ್ತೆ ಕೊಳ್ಳತೊಡಗಿದರು. ಮತ್ತೆ ಗೇಮ್‌ಸ್ಟಾಪ್ ಶೇರು ಗಗನಕ್ಕೆ ಏರಿತು. “ಮಾರಬೇಡಿ ಇನ್ನೂ ಕರೀದಿಸಿ” ಅನ್ನೋ ಕೂಗು ರೆಡ್ಡಿಟ್ ಅಲ್ಲದ್ದೇ ಅಂತರ‍್ಜಾಲದ ಮೂಲೆ ಮೂಲೆಯಲ್ಲಿ ಮಾರ‍್ದನಿಸಿತು. ಆಗಲೇ ಗೇಮ್‌ಸ್ಟಾಪ್‌ನ ಸುದ್ದಿ ಜಗತ್ತಿನಾದ್ಯಂತ ಹರಡಿತು.

ನಿಜವಾಗಿಯೂ ಗೇಮ್‌ಸ್ಟಾಪ್‌ನ ನಾಗಾಲೋಟದ ಓಟಕ್ಕೆ ಕೊನೆಯೇ ಇಲ್ಲವೆಂದೆನಿಸಿತು. ಶೇರು ಮಾರುಕಟ್ಟೆಯಲ್ಲಿನ ಬೆಲೆಗಳನ್ನು ಹಿಂದೆ ದೊಡ್ಡ ದೊಡ್ಡ ಕಂಪನಿಗಳು ಹಣವಂತರು ಮ್ಯಾನಿಪುಲೇಟ್ ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಅಂತರ‍್ಜಾಲದ ಸಾಮಾನ್ಯ ಜನರ ಗುಂಪುಗಳು ಹೀಗೆ ಮ್ಯಾನಿಪುಲೇಟ್ ಮಾಡಬಹುದಾ ಅನ್ನೋ ಆತಂಕ ಇಡೀ ಅಮೇರಿಕದ ಶೇರು ಮಾರುಕಟ್ಟೆಯನ್ನೇ(wallstreet) ಕುಸಿಯುವಂತೆ ಮಾಡಿತು.

ಆದರೆ ಎಲ್ಲ ಕತೆಗಳೂ ಅಂತ್ಯಕ್ಕೆ ಬರುವ ಹಾಗೆ ಗೇಮ್‌ಸ್ಟಾಪ್‌ನ ಕತೆ ಕೂಡ ನಿದಾನಕ್ಕೆ ಅಂತ್ಯಕ್ಕೆ ಬರುವಂತೆ ಸದ್ಯಕ್ಕೆ ಕಾಣುತ್ತಾ ಇದೆ. ಸಣ್ಣ ಹೂಡಿಕೆದಾರರು ಎಂದಿನಂತೆ ದುರಾಸೆಗೋ ಉದ್ವೇಗಕ್ಕೋ ಒಳಗಾಗಿ ಕೊಂಡ ಶೇರು ಕುಸಿಯುವುದನ್ನು ನೋಡಲಾಗದೆ ಮಾರಲು ಶುರುವಾಗಿ ಶೇರು ಈಗ ನಿದಾನವಾಗಿ 50 ಡಾಲರ‍್‌ಗೆ ಇಳಿದಿದೆ. ಈ ನಡುವೆ ಗೇಮ್‌ಸ್ಟಾಪ್‌ನಲ್ಲಿ ಹೂಡಿಕೆ ಮಾಡಿ ಲಕ್ಶ ಲಕ್ಶ ಲಾಬ ಗಳಿಸಿದವರು ಒಂದು ಕಡೆ ಆದರೆ ಯಾವಾಗ ಮಾರಬೇಕು ಅಂತ ಗೊತ್ತಾಗದೆ ಹೆಚ್ಚು ಬೆಲೆಗೆ ಕೊಂಡು ಕಡಿಮೆ ಬೆಲೆಗೆ ಮಾರಿ ಹಾಕಿದ ದುಡ್ಡನ್ನೆಲ್ಲ ಕಳೆದುಕೊಂಡವರು ಇನ್ನೊಂದು ಕಡೆ.

ಒಟ್ಟಿನಲ್ಲಿ ಶೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡಬಾರದು, ಯಾವತ್ತಿದ್ದರೂ ದೀರ‍್ಗಾವದಿಗೆ ಹೂಡಿಕೆ ಮಾಡಬೇಕೆಂಬ ಜಾಣ್ನುಡಿಯೊಂದೆ ಕೊನೆಗೆ ಗಟ್ಟಿಯಾಗಿ ನಿಂತಿದ್ದು. ಗೇಮ್‌ಸ್ಟಾಪ್‌ನಂತಹ ಪತನಗೊಂಡ ಕಂಪನಿಗಳ ಮೇಲೆ ನಾವು ಬೆವರು ಸುರಿಸಿ ಗಳಿಸಿದ ದುಡ್ಡನ್ನು ಹಾಕಬಾರದು. ಯಾವತ್ತಿದ್ದರೂ ಸಂಪೂರ‍್ಣವಾಗಿ ಪರಾಮರ‍್ಶಿಸಿದ ಮೇಲೆಯೇ ದೀರ‍್ಗಾವದಿ ಹೂಡಿಕೆಯನ್ನಶ್ಟೇ ಮಾಡಿರಿ.

ಏನೇ ಆದರೂ ಈ ಇಡೀ ಪ್ರಸಂಗ ಗೇಮ್‌ಸ್ಟಾಪ್‌ನಂತೆ ಮತ್ತೆ ಮುಂದೆ ಯಾವ ಶೇರಿನಲ್ಲಿ ಅಂತರ‍್ಜಾಲದ ಸಮುದಾಯಗಳು ಚಮತ್ಕಾರ ತೋರಿಸಬಲ್ಲವು ಅನ್ನೋ ಕುತೂಹಲದ ಬೀಜವನ್ನ ಬಲವಾಗಿ ಬಿತ್ತಿದೆ. ಜಗತ್ತು ನಿಬ್ಬೆರಗಾಗಿ ಇದಿರು ನೋಡುತ್ತಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: apnews.com, nytimes.com, moneycontrol.com, moneycontrol.com, wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: