ಕವಿತೆ : ಸೋಲು

– ಶಶಾಂಕ್.ಹೆಚ್.ಎಸ್.

ಸೋಲು, Lost

ಓ ಸೋಲೆ ನೀ ಎಶ್ಟು ಚೆಂದ
ನೀ ಎಶ್ಟು ಅಂದ
ಒಮ್ಮೆ ನೀ ಆತ್ಮೀಯನಾದರೆ
ಸದಾ ಜೊತೆಯಾಗಿಯೇ ಸಾಗುವೆ
ಎಂದೂ ಕೈ ಬಿಡದೆ ನೆಡೆಸುವೆ

ಗೆದ್ದಾಗ ದೂರವಾಗುವೆ
ಬಿದ್ದಾಗ ಜೊತೆಯಾಗುವೆ
ಮತ್ತೊಂದು ಅವಕಾಶವ
ನೀಡಿ ಸಾಂತ್ವನಿಸುವೆ
ಅನುಬವಗಳ ಪಾಟವ
ಸದಾ ಹೇಳುತ್ತಿರುವೆ
ಒಮ್ಮೆ ಸ್ನೇಹಿತನಾಗಿ ಒಮ್ಮೆ ಗುರುವಾಗಿ
ಸದಾ ಜೊತೆಗೆ ಇರುವೆ

ಜಗತ್ತಿನ ಮುಕವಾಡವ ಕಳಚಿ
ನೈಜತೆಯ ದರ‍್ಶನ ಮಾಡಿಸುವೆ
ಬ್ರಮೆಯ ಲೋಕದ ಬದುಕಿನಿಂದ ಎಳೆತಂದು
ವಾಸ್ತವ ಬದುಕನು ಪರಿಚಯಿಸುವೆ
ಬದುಕ ಬದುಕುವ ಕಲೆಯ
ಕಲಿಸುತ್ತಲೆ ಇರುವೆ

ಇಲ್ಲಿ ತನ್ನವರ‍್ಯಾರು ಪರರ‍್ಯಾರು
ಎಂದು ಮನದಟ್ಟು ಮಾಡುವೆ
ಇಲ್ಯಾರು ನಮ್ಮವರಲ್ಲ
ಇಲ್ಯಾವುದು ನಮ್ಮದಲ್ಲ
ಎಂದು ಸಾರಿ ಸಾರಿ ಹೇಳುವೆ
ಓ ಸೋಲೆ ನೀ ಎಶ್ಟು ಚೆಂದ
ನೀ ಎಶ್ಟು ಅಂದ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications