ಕವಿತೆ: ಚಳಿರಾಯ

– ವಿನು ರವಿ.

ಚಳಿ, ಚಳಿಗಾಲ, winter

ಚಳಿರಾಯ
ಕೊಂಚ ದೂರ ನಿಲ್ಲು
ಕೈ ಮುಗಿವೆ
ಕನಿಕರಿಸು

ಬೆಚ್ಚಗಿನ ಕನಸುಗಳು
ಮುದುರಿ ಮಲಗಿವೆ
ಹೊಚ್ಚ ಹೊಸ ಬಿಸಿಲಿಗೆ
ಮೈ ಮನ ಕಾತರಿಸಿವೆ

ಇಚ್ಚೆಗಳೆಲ್ಲಾ
ಎಚ್ಚರವಾಗದೆ
ಇರುಳು ಕರಗಿದರೂ
ತಣ್ಣಗೆ ಕೊರೆಯುತ್ತಿವೆ

ನೀ ಕದ್ದ ಕಾಮನಬಿಲ್ಲು
ಕಾಣದೆ, ಆಗಸವೆಲ್ಲಾ
ಬೆಳ್ಳನೆ ಬಿಳಿಚಿಕೊಂಡಿದೆ

ಚಂದಿರನ ತಂಪು
ತುಸು ಹೆಚ್ಚಾಗಿ ತಾರೆಗಳೆಲ್ಲಾ
ತವರೂರಿಗೆ ತೆರಳಿವೆ

ಅದೋ ಅರುಣ ಕಿರಣಗಳ
ಹೊಂಬೆಳಕು ಮೂಡುತಿದೆ

ದಾರಿಬಿಡು
ಹಿತವಾದ ಹೊಂಬಿಸಿಲಿಗೆ
ಮೈಮನ ಕಾದಿದೆ
ಕಾದಿರುವೆ ಕಾಡದೆ
ದೂರ ಸರಿದುಬಿಡು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: