ಕುವೆಂಪು ಕವನಗಳ ಓದು – 12ನೆಯ ಕಂತು
– ಸಿ.ಪಿ.ನಾಗರಾಜ.
ಇಂದ್ರಿಯ ಜಯ
“ ನನ್ನಿಂದ್ರಿಯಂಗಳನು ನಾನೆಂದು ಜಯಿಸುವೆನು?”
ಎಂದೊಬ್ಬ ಸನ್ಯಾಸಿ ಕೇಳಿದನನೇಕರನು
ಲೋಕವೆಲ್ಲವು ಮಾಯೆ ಪ್ರೇಮವೆಂಬುದು ಮಿಥ್ಯೆ
ಸೌಂದರ್ಯವೆಂಬುವುದು ಪ್ರಕೃತಿಯೊಡ್ಡಿದ ಜಾಲ
ಸಂಸಾರ ಮರುಭೂಮಿ ಎಲ್ಲ ಬಿಟ್ಟರೆ ಮುಂದೆ
ಎಲ್ಲವೂ ಲಭಿಸುವುದು ಸನ್ಯಾಸದೊಳೆ ಮುಕ್ತಿ
ಎಂದವನು ಕಾವಿಯನು ಉಟ್ಟು ಬೂದಿಯ ತೊಟ್ಟು
ದುಡಿದು ತಿನ್ನುವ ಬದಲು ಬೇಡಿಯುಣುವುದ ಕಲಿತು
ಮಿಂದು ನದಿಯಲಿ ಧ್ಯಾನ ಜಪಗಳನು ಮಾಡುತ್ತ
ಇಂದ್ರಿಯಗಳ ಜಯಕೆ ಮುಕ್ತಿಯಾಸ್ವಾದನೆಗೆ
ಸಾಧನೆಯ ಮಾಡಿದನು ಆದರೂ ಆತನಿಗೆ
ಇಂದ್ರಿಯಂಗಳ ಜಯವು ಸಾಧ್ಯವಾಗಲೆ ಇಲ್ಲ
ಆಗವನು ಕಂಡಕಂಡವರನು ಕೇಳಿದನು
“ ನನ್ನಿಂದ್ರಿಯಂಗಳನು ನಾನೆಂದು ಜಯಿಸುವೆನು? “
“ ಕಾಶಿಯನು ಕಂಡಂದು.” “ ಮೋಹಗಳ ಬಿಟ್ಟಂದು.”
“ ಕಾಮ ಜಯವಾದಂದು.” “ ದ್ವಂದ್ವಗಳ ಗೆದ್ದಂದು.”
“ ಕಾನನಕೆ ನಡೆದು ಏಕಾಂತದಲಿ ಕುಳಿತಂದು.”
ಎಂದು ಒಬ್ಬೊಬ್ಬರೊಂದನು ಹೇಳಿ ತೆರಳಿದರು.
ಸನ್ಯಾಸಿ ಒಂದೊಂದನೇ ಮಾಡಿ ದೇವರನು
ಕಾಣದೆಯೆ ಕಾಮಜಯಿಯಾಗದೆಯೆ ಬೇಸತ್ತು
ಎದೆಗೆಟ್ಟು ಸೋತವನು ದಾರಿಯಲಿ ಬರುತಿರಲು
ಚೆಲುವೆಯೊಬ್ಬಳ ಕಂಡು ಕೇಳಿದನು. “ ಹೇಳಮ್ಮ,
ನನ್ನಿಂದ್ರಿಯಂಗಳನು ನಾನೆಂದು ಜಯಿಸುವೆನು?”
ಸುಂದರಿಯು “ ಬಾ “ ಎಂದು ಸನ್ಯಾಸಿಯನು ತನ್ನ
ಆಲಯಕೆ ಕರೆದೊಯ್ದು ಬಾಗಿಲಲಿ ನಿಲಹೇಳಿ
ಒಳಗಿಂದ ಏನನೋ ಮುಚ್ಚುಹಿಡಿಯಲಿ ತಂದು
“ ಹಿಡಿ “ ಎಂದು ನೀಡಿದಳು. ಸಾಧುವೂ ಮುಷ್ಟಿಯಲಿ
ಮುಚ್ಚಿ ಹಿಡಿದದನು ದೂರಕೆ ನಡೆದು ನೋಡಿದನು
ಬರಿಬೂದಿ ಕೈ ಬಿಚ್ಚಿದೊಡನೆಯೇ ಗಾಳಿಯಲಿ
ತೂರಿಹೋಯಿತು. ಸಾಧು ಆಶ್ಚರ್ಯದಲಿ ನಿಂತು
ಚಿಂತಿಸುತ್ತಿರೆ ಬೂದಿ ಇಂತು ನುಡಿಯಿತ್ತಂದು
“ ನೀ ಸತ್ತು ಸೂಡಿನಲಿ ಹೆಣ ಬೂದಿಯಾದಂದು
ನಿನಗೆ ಇಂದ್ರಿಯ ಜಯವು ನೀನು ನಾನಾದಂದು!”
ಒಬ್ಬ ಸನ್ಯಾಸಿಯು ತನ್ನ ಮಯ್ ಮನದಲ್ಲಿ ಬಯಕೆಗಳು ಮೂಡುವುದಕ್ಕೆ ಕಾರಣವಾಗುವ ಇಂದ್ರಿಯಗಳನ್ನು ಜಯಿಸಬೇಕೆಂದು ಪ್ರಯತ್ನಿಸಿದಾಗ ನಡೆದ ಪ್ರಸಂಗಗಳನ್ನು ಈ ಕವನದಲ್ಲಿ ನಿರೂಪಿಸಲಾಗಿದೆ.
( ನನ್ನ+ಇಂದ್ರಿಯಂ+ಗಳನು; ಇಂದ್ರಿಯ=ಶಬ್ದವನ್ನು ಕೇಳುವ ಕಿವಿ, ಸ್ಪರ‍್ಶವನ್ನು ಹೊಂದುವ ತೊಗಲು; ರೂಪವನ್ನು ಕಾಣುವ ಕಣ್ಣು; ರಸವನ್ನು ಸವಿಯುವ ನಾಲಗೆ, ವಾಸನೆಯನ್ನು ಗ್ರಹಿಸುವ ಮೂಗು-ಇವನ್ನು ಅಯ್ದು ಇಂದ್ರಿಯಗಳೆಂದು ಕರೆಯುತ್ತಾರೆ; ನಾನ್+ಎಂದು; ಎಂದು=ಯಾವಾಗ/ಯಾವ ಕಾಲ; ಜಯಿಸು=ವ್ಯಕ್ತಿಯು ಏನನ್ನಾದರೂ ಇಲ್ಲವೇ ಯಾರನ್ನಾದರೂ ಹತೋಟಿಯಲ್ಲಿಟ್ಟುಕೊಂಡು ತನ್ನ ಇಚ್ಚೆಯಂತೆಯೇ ನಡೆಸಿಕೊಳ್ಳುವುದು ಇಲ್ಲವೇ ಬಳಸಿಕೊಳ್ಳುವುದು; ಎಂದು+ಒಬ್ಬ;
ಸನ್ಯಾಸಿ=ಮಡದಿ ಮಕ್ಕಳನ್ನು ಹೊಂದಿರದೆ ಇಲ್ಲವೇ ಮದುವೆಯನ್ನೇ ಆಗದೆ ಮಾನವ ಸಹಜವಾದ ಸಾಮಾಜಿಕ ವ್ಯವಹಾರಗಳಿಂದ ದೂರನಾಗಿ, ತನ್ನ ಪಾಡಿಗೆ ತಾನು ಬಾಳುತ್ತಿರುವವನು; ಕೇಳಿದನ್+ಅನೇಕರನು; ಕೇಳಿದನು=ವಿಚಾರಿಸಿದನು; ಅನೇಕರನು=ಬಹಳ ಮಂದಿಯನ್ನು ;
‘ ಇಂದ್ರಿಯ ಜಯ ‘ ಎಂದರೆ ವ್ಯಕ್ತಿಯು ಅಯ್ದು ಇಂದ್ರಿಯಗಳಿಂದ ಉಂಟಾಗುವ ಸಂವೇದನೆಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಬಾಳುವುದು. ಎಂತಹ ಸನ್ನಿವೇಶದಲ್ಲಿಯೂ ಅವುಗಳಿಂದ ಉಂಟಾಗುವ ಸಂವೇದನೆಗಳ ಸೆಳೆತಕ್ಕೆ ತನ್ನ ಮಯ್ ಮನ ಈಡಾಗದಂತೆ ಎಚ್ಚರದಿಂದ ನಡೆದುಕೊಳ್ಳುವುದು;
ಲೋಕ+ಎಲ್ಲವೂ; ಲೋಕ=ಜಗತ್ತು/ಪ್ರಪಂಚ; ಮಾಯೆ=ಮಯ್ ಮನದಲ್ಲಿ ಬಯಕೆಗಳನ್ನು ಕೆರಳಿಸಿ, ತಮ್ಮತ್ತ ಸೆಳೆಯುವ ವಸ್ತು/ಜೀವಿ/ವ್ಯಕ್ತಿಗಳು; ಲೋಕವೆಲ್ಲವೂ ಮಾಯೆ=ನಮ್ಮ ಕಣ್ಣ ಮುಂದಿನ ಲೋಕದಲ್ಲಿ ಇರುವ ವಸ್ತು ಮತ್ತು ಜೀವರಾಶಿಗಳೆಲ್ಲವೂ ಮಾನವನ ಮಯ್ ಮನದಲ್ಲಿ ಬಹುಬಗೆಯ ಆಸೆಗಳನ್ನು ಕೆರಳಿಸಿ, ಅವನ ಬದುಕನ್ನು ನೂರಾರು ಬಗೆಯ ದುರಂತಕ್ಕೆ ತಳ್ಳುತ್ತವೆ. ಆದ್ದರಿಂದ ಅವುಗಳ ಸೆಳೆತಕ್ಕೆ ಬಲಿಯಾಗಬಾರದು ಎಂಬ ನಿಲುವು;
ಪ್ರೇಮ+ಎಂಬುದು; ಪ್ರೇಮ=ಒಲವು/ಪ್ರೀತಿ; ಎಂಬುದು=ಎನ್ನುವುದು; ಮಿಥ್ಯೆ=ಸುಳ್ಳು;
ಪ್ರೇಮವೆಂಬುದು ಮಿಥ್ಯೆ=ವ್ಯಕ್ತಿಗಳ ಮನಸ್ಸನ್ನು ಪರಸ್ಪರ ಬೆಸೆದು ಒಬ್ಬರ ಒಳಿತಿಗಾಗಿ ಮತ್ತೊಬ್ಬರು ಎಂತಹ ತ್ಯಾಗಕ್ಕಾದರೂ ಮುಂದಾಗಲು ಪ್ರೇರಣೆಯಾಗುವ ಪ್ರೇಮವೇ ಸುಳ್ಳು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಂತರಂಗದಲ್ಲಿ ತನ್ನೊಬ್ಬನ ಹಿತಕ್ಕಾಗಿಯೇ ಬಾಳುತ್ತಿರುತ್ತಾನೆ ಎಂಬ ನಿಲುವು;
ಸೌಂದರ್ಯ+ಎಂಬುದು; ಸೌಂದರ್ಯ=ಅಂದವಾಗಿರುವುದು/ಸುಂದರವಾಗಿರುವುದು; ಪ್ರಕೃತಿ+ಒಡ್ಡಿದ; ಪ್ರಕೃತಿ=ಜಗತ್ತಿನಲ್ಲಿರುವ ಚಲಿಸುವ ಜೀವರಾಶಿಗಳಿಂದ ಮತ್ತು ಚಲಿಸದಿರುವ ವಸ್ತುಗಳಿಂದ ಕೂಡಿರುವ ನಿಸರ‍್ಗ; ಒಡ್ಡು=ಮುಂದೆ ಹಾಕಿರುವ/ಹಿಡಿದಿರುವ ; ಜಾಲ=ಬಲೆ;
ಸೌಂದರ್ಯವೆಂಬುದು ಪ್ರಕೃತಿಯೊಡ್ಡಿದ ಜಾಲ=ನಿಸರ‍್ಗದಲ್ಲಿರುವ ಸುಂದರವಾಗಿರುವ ವಸ್ತುಗಳು ಮತ್ತು ಜೀವಿಗಳು ಮಾನವನ ಮಯ್ ಮನವನ್ನು ತಮ್ಮತ್ತ ಸೆಳೆದು ಅವನನ್ನು ಮೋಹದ ಬಲೆಯಲ್ಲಿ ಸಿಲುಕಿಸುತ್ತವೆ. ಇದರಿಂದ ಅವನ ಬದುಕು ಬಲೆಯಲ್ಲಿ ಸಿಲುಕಿದ ಪ್ರಾಣಿಯು ವಿಲವಿಲನೆ ಒದ್ದಾಡಿ ನರಳುವಂತೆ ಜೀವನದ ಉದ್ದಕ್ಕೂ ಬಹುಬಗೆಯ ಸಂಕಟಗಳಿಂದ ನರಳುತ್ತಿರಬೇಕಾಗುತ್ತದೆ ಎಂಬ ನಿಲುವು;
ಸಂಸಾರ=ಗಂಡ ಹೆಂಡತಿ ಮಕ್ಕಳು ಹಾಗೂ ರಕ್ತದ ನಂಟುಳ್ಳ ವ್ಯಕ್ತಿಗಳ ಪರಿವಾರ; ಮರುಭೂಮಿ=ನೀರಿನ ಅಂಶವಿಲ್ಲದೆ ಮರುಳಿನ ಕಣಗಳಿಂದ ತುಂಬಿರುವ ಮರುಳುಗಾಡು;
ಸಂಸಾರ ಮರುಭೂಮಿ=ಇದೊಂದು ನುಡಿಗಟ್ಟಾಗಿ ಬಳಕೆಯಾಗಿದೆ. ಮರುಳುಗಾಡಿನಲ್ಲಿ ನೀರಿನ ಆಸರೆಯಿಲ್ಲದಿರುವಂತೆ ಸಂಸಾರದಲ್ಲಿ ನೆಮ್ಮದಿಯೆಂಬುದು ಇರುವುದಿಲ್ಲ; ಲಭಿಸು=ದೊರೆಯುವುದು; ಸನ್ಯಾಸದೊಳೆ=ಸನ್ಯಾಸದಿಂದಲೇ;
ಸನ್ಯಾಸದೊಳೆ=ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಸಹಮಾನವರ ಜತೆಯ ನಂಟಿನಿಂದ ಮತ್ತು ಎಲ್ಲಾ ಬಗೆಯ ಸಾಮಾಜಿಕ ವ್ಯವಹಾರಗಳಿಂದ ದೂರಸರಿದು ಸನ್ಯಾಸಿಯಾಗಿ ಬಾಳುವಂತಾದಾಗ; ಮುಕ್ತಿ=ಹುಟ್ಟು ಬದುಕು ಸಾವಿನ ಸರಪಣಿಯಿಂದ ಜೀವವು ಬಿಡುಗಡೆಯನ್ನು ಪಡೆಯುತ್ತದೆ ಎಂಬ ನಂಬಿಕೆ; ಎಂದು+ಅವನು;
ಕಾವಿ=ಕೆಂಪು ಬಣ್ಣದ ಬಟ್ಟೆ; ಉಟ್ಟು=ಸುತ್ತಿಕೊಂಡು; ಬೂದಿ=ಯಾವುದೇ ವಸ್ತು ಬೆಂಕಿಯಲ್ಲಿ ಸಂಪೂರ‍್ಣವಾಗಿ ಸುಟ್ಟುಹೋದಾಗ ಕೊನೆಯಲ್ಲಿ ಉಳಿಯುವ ಕಣಗಳು; ತೊಟ್ಟು=ಬಳಿದುಕೊಂಡು; ದುಡಿದು ತಿನ್ನು= ಒಳ್ಳೆಯ ಉದ್ದೇಶ ಮತ್ತು ಪ್ರಾಮಾಣಿಕತನದಿಂದ ಕಾಯಕವೊಂದನ್ನು ಮಾಡಿ, ಅದರಿಂದ ತನ್ನ ಜೀವನದ ಅಗತ್ಯಗಳನ್ನು ಹೊಂದುವುದು; ಬೇಡಿ+ಉಣುವುದ; ಬೇಡು=ಯಾಚಿಸು/ಕೇಳು; ಬೇಡಿಯುಣುವುದ ಕಲಿತು=ಮತ್ತೊಬ್ಬರ ಮುಂದೆ ಕಯ್ ಒಡ್ಡಿ ವ್ಯಕ್ತಿಯು ತನ್ನ ಜೀವನಕ್ಕೆ ಬೇಕಾದುದನ್ನು ಯಾಚಿಸಿ ಪಡೆಯುವುದು;
ಮಿಂದು=ಸ್ನಾನ ಮಾಡಿ; ಧ್ಯಾನ=ದೇವರ ಹೆಸರನ್ನು ಉಚ್ಚರಿಸುತ್ತಿರುವುದು; ಜಪ=ದೇವರ ಹೆಸರು ಇಲ್ಲವೇ ದೇವರ ಮಹಿಮೆಯನ್ನು ಕೊಂಡಾಡುವ ಮಂತ್ರಗಳನ್ನು ಹೇಳುತ್ತಿರುವುದು; ಮುಕ್ತಿ+ಆಸ್ವಾದನೆಗೆ; ಆಸ್ವಾದನೆ=ಪಡೆಯುವುದು/ಹೊಂದುವುದು; ಸಾಧನೆ=ಪರಿಶ್ರಮ;
ಆದರೂ ಆತನಿಗೆ ಇಂದ್ರಿಯಗಳ ಜಯವು ಸಾಧ್ಯವಾಗಲೆ ಇಲ್ಲ=ತನ್ನ ಒಳಿತಿನ ಜತೆಗೆ ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವಂತಹ ಕಾಯಕವನ್ನು ಮಾಡುವ ಕ್ರಿಯಾಶೀಲನಾದ ವ್ಯಕ್ತಿಗೆ ಮಾತ್ರ ಇಂದ್ರಿಯ ಜಯ ದೊರಕುತ್ತದೆ; ಜಗದ ಜೀವನವನ್ನು ‘ ಮಾಯೆ, ಮಿತ್ಯೆ, ಜಾಲ, ಮರುಬೂಮಿ ‘ ಎಂಬ ನಿಲುವುಗಳನ್ನು ಹೊಂದಿರುವ ಸನ್ಯಾಸಿಗೆ ಎಂದೆಂದಿಗೂ ಇಂದ್ರಿಯ ಜಯ ದೊರೆಯುವುದಿಲ್ಲ. ಏಕೆಂದರೆ ಆತ ತನ್ನ ಕಣ್ಣ ಮುಂದಿನ ಲೋಕದ ಜನಸಮುದಾಯದ ಒಳಿತು ಕೆಡುಕಿನ ಬಗ್ಗೆ ಚಿಂತಿಸದೆ , ವಾಸ್ತವದಲ್ಲಿ ಇಲ್ಲದ ಪರಲೋಕದಲ್ಲಿ ದೊರೆಯುವ ಮುಕ್ತಿಯ ಬಗ್ಗೆ ಚಿಂತಿಸುತ್ತ ಸುಮ್ಮನೆ ಕಾಲವನ್ನು ಕಳೆಯುತ್ತಿರುತ್ತಾನೆ; ಮಾನವ ಸಮುದಾಯ ಉಳಿದು ಬೆಳೆದು ಬಾಳುವುದಕ್ಕೆ ಅಗತ್ಯವಾದ ಪ್ರೀತಿ, ಕರುಣೆ ಮತ್ತು ಗೆಳೆತನದ ನಡೆನುಡಿಗಳಿಲ್ಲದೆ, ಲೋಕ ಮುನ್ನಡೆಯುವುದಕ್ಕೆ ಬೇಕಾದ ದುಡಿಮೆಯನ್ನು ಕಡೆಗಣಿಸಿ ಪರಾವಲಂಬಿಯಾಗಿ ಬಾಳುತ್ತಿರುವ ಸನ್ಯಾಸಿಯು “ ಇಲ್ಲಿರುವುದು ಸುಮ್ಮನೆ. ಅಲ್ಲಿರುವುದ ನಮ್ಮ ಮನೆ ” ಎಂಬ ಕಲ್ಪನೆಯ ಲೋಕದಲ್ಲಿ ಮೋಹಗೊಂಡಿರುತ್ತಾನೆ. ಇದರಿಂದಾಗಿ ಮಾನವನ ಕ್ರಿಯಾಶೀಲ ಚಟುವಟಿಕೆಯೇ ಮೊಟಕುಗೊಳ್ಳುತ್ತದೆ; ಕಂಡಕಂಡವರನ್ನು=ತಾನು ನೋಡಿದವರೆಲ್ಲರನ್ನೂ;
ಕಾಶಿ=ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಜಿಲ್ಲೆಯಲ್ಲಿ ಗಂಗಾ ನದಿಯ ತಟದಲ್ಲಿರುವ ಒಂದು ಪಟ್ಟಣ. ಈ ಪಟ್ಟಣಕ್ಕೆ ‘ ವಾರಣಾಸಿ/ಬನಾರಸ್/ಕಾಶಿ ‘ ಎಂಬ ಮೂರು ಬಗೆಯ ಹೆಸರುಗಳಿವೆ. ಇಲ್ಲಿರುವ ಶಿವಲಿಂಗವನ್ನು ‘ ವಿಶ್ವನಾತ ‘ ಎಂದು ಕರೆಯುತ್ತಾರೆ. ಶಿವಲಿಂಗದ ದರ‍್ಶನವನ್ನು ಪಡೆಯುವ ವ್ಯಕ್ತಿಗೆ ಪುಣ್ಯ ದೊರೆಯುವುದೆಂದು, ಕಾಶಿಯಲ್ಲಿ ಸತ್ತರೆ ಮುಕ್ತಿಯನ್ನು ಹೊಂದುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿದೆ; ಕಂಡ+ಅಂದು; ಅಂದು=ಆಗ/ಆ ಕಾಲ; ಕಂಡಂದು=ನೋಡಿದಾಗ;
ಮೋಹ=ಯಾವುದನ್ನಾದರೂ ಪಡೆಯಲೇಬೇಕೆಂಬ/ತನ್ನದಾಗಿಸಿಕೊಳ್ಳಬೇಕೆಂಬ ತೀವ್ರತರವಾದ ಆಸೆ ; ಬಿಟ್ಟ+ಅಂದು; ಬಿಟ್ಟಂದು=ತೊರೆದಾಗ; ಕಾಮ=ಬಯಕೆ/ಆಸೆ/ಗಂಡು ಹೆಣ್ಣಿನ ಮಯ್ ಮನಗಳು ಒಂದನ್ನೊಂದು ಜತೆಗೂಡಲೆಂದು ಹಂಬಲಿಸುವ ಒಳಮಿಡಿತ; ಜಯ+ಆದ+ಅಂದು; ದ್ವಂದ್ವ=ಎರಡು/ಇಬ್ಬಗೆಯ ಮನಸ್ಸು/ಆಸೆ ಮತ್ತು ಆದರ‍್ಶಗಳ ನಡುವೆ ತುಯ್ದಾಡುವ ಮನಸ್ಸು/ಒಳಿತು ಕೆಡುಕಿನ ಒಳಮಿಡಿತಗಳಿಂದ ಕೂಡಿರುವ ಮನಸ್ಸು;
ಗೆದ್ದ+ಅಂದು; ಕಾನನ=ಕಾಡು/ಅರಣ್ಯ; ಏಕಾಂತ=ಒಂಟಿಯಾದ/ರಹಸ್ಯ/ಯಾರು ಇಲ್ಲದ ಜಾಗದಲ್ಲಿ ಒಬ್ಬಂಟಿಯಾಗಿರುವುದು; ಕುಳಿತ+ಅಂದು; ಒಬ್ಬ+ಒಬ್ಬರ್+ಒಂದನು; ತೆರಳು=ಹೋಗು/ನಡೆ; ದೇವರು=ಜೀವನದಲ್ಲಿ ಬರುವ ಎಡರು ತೊಡರುಗಳನ್ನು ನಿವಾರಿಸಿ ತಮಗೆ ಒಳಿತನ್ನು ಮಾಡಿ ಕಾಪಾಡುವ ವ್ಯಕ್ತಿಯನ್ನು ‘ದೇವರು’ ಎಂದು ಮಾನವ ಸಮುದಾಯ ನಂಬಿದೆ;
ಕಾಮ+ಜಯಿ+ಆಗದೆಯ; ಕಾಮಜಯಿಯಾಗದೆಯೆ=ಕಾಮವನ್ನು ಗೆಲ್ಲಲಾಗದೆ ಅಂದರೆ ಕಾಮವನ್ನು ಹತ್ತಿಕ್ಕಿಕೊಳ್ಳಲಾಗದೆ; ಬೇಸತ್ತು=ಬೇಸರವನ್ನು ಪಟ್ಟುಕೊಂಡು ; ಎದೆ+ಕೆಟ್ಟು; ಎದೆಗೆಟ್ಟು=ಹಿಂಜರಿದು/ಮುನ್ನಡೆಯುವ ಕೆಚ್ಚನ್ನು ಕಳೆದುಕೊಂಡು;
ಸನ್ಯಾಸಿ ಒಂದೊಂದನೇ ಮಾಡಿ ದೇವರನು ಕಾಣದೆಯೆ ಕಾಮಜಯಿಯಾಗದೆಯೆ ಬೇಸತ್ತು ಎದೆಗೆಟ್ಟು ಸೋತವನು=ಯಾವುದೇ ಒಬ್ಬ ವ್ಯಕ್ತಿಯು ದೇವರನ್ನು ಕಾಣಲು ಆಗುವುದಿಲ್ಲ. ಏಕೆಂದರೆ ದೇವರು ಎನ್ನುವುದು ‘ ಮಾನವನ ಮನದಲ್ಲಿ ರೂಪುಗೊಂಡಿರುವ ನಂಬಿಕೆಯ ಪ್ರತಿರೂಪವೇ ಹೊರತು ವಾಸ್ತವದಲ್ಲಿ ಇರುವ ವ್ಯಕ್ತಿ ಇಲ್ಲವೇ ಶಕ್ತಿಯಲ್ಲ.” ಸಾಗರದಲ್ಲಿ ನೀರಿನ ಅಲೆಗಳ ಉಬ್ಬರವಿಳಿತ ಎಲ್ಲಾ ಕಾಲದಲ್ಲಿಯೂ ಗಾಳಿಯ ಬಡಿತಕ್ಕೆ ತಕ್ಕಂತೆ ತುಸು ಹೆಚ್ಚುಕಡಿಮೆ ಇದ್ದೇ ಇರುತ್ತದೆಯೋ ಅಂತೆಯೇ ವ್ಯಕ್ತಿಯ ಮಯ್ಯಲ್ಲಿ ಕೊನೆ ಉಸಿರು ಇರುವ ತನಕ ಒಂದಲ್ಲ ಒಂದು ಬಗೆಯ ಬಯಕೆಗಳು ಮೂಡುತ್ತಲೇ ಇರುತ್ತವೆ. ಏಕೆಂದರೆ ಅಯ್ದು ಇಂದ್ರಿಯಗಳಿಂದ ಮಯ್ ಮನವನ್ನು ತಟ್ಟುವ ಮುಟ್ಟುವ ಸಂವೇದನೆಗಳು ನಿರಂತರವಾಗಿ ನೂರಾರು ಬಗೆಯ ಬಯಕೆಗಳನ್ನು ಮೂಡಿಸುತ್ತಲೇ ಇರುತ್ತವೆ.
ಚೆಲುವೆ+ಒಬ್ಬಳ; ಚೆಲುವೆ=ಚೆಲುವೆ; ಆಲಯ=ಮನೆ; ಕರೆದು+ಒಯ್ದು; ಕರೆದೊಯ್ದು=ಕರೆದುಕೊಂಡು ಹೋಗಿ; ನಿಲಹೇಳಿ=ನಿಲ್ಲಲು ತಿಳಿಸಿ; ಮುಚ್ಚುಹಿಡಿ=ಒಂದು ಹಸ್ತದಲ್ಲಿ ಮುಚ್ಚಿಟ್ಟುಕೊಂಡು; ಹಿಡಿ=ತೆಗೆದುಕೊ; ಸಾಧು=ಸನ್ಯಾಸಿ; ಮುಷ್ಟಿ=ಮುಚ್ಚಿದ ಹಸ್ತ; ಬರಿ=ಕೇವಲ; ಕೈಬಿಚ್ಚಿದ+ಒಡನೆಯೆ; ಕೈಬಿಚ್ಚು=ಹಸ್ತವನ್ನು ತೆರೆದಾಗ; ತೂರು=ಗಾಳಿಯಲ್ಲಿ ಹಾರುವುದು; ನುಡಿಯಿತ್ತು+ಅಂದು; ನುಡಿಯಿತ್ತು=ಹೇಳಿತು; ಅಂದು=ಆಗ/ಆ ಸಮಯದಲ್ಲಿ ;
ಸೂಡು=ಹೆಣವನ್ನು ಸುಡಲೆಂದು ಸವುದೆಯ ತುಂಡುಗಳನ್ನು ಓತಿಟ್ಟು ಬೆಂಕಿಯನ್ನು ಹಾಕಿದಾಗ ಉರಿಯುತ್ತಿರುವ ಚಿತೆ; ಬೂದಿ+ಆದ+ಅಂದು; ನಾನ್+ಆದ+ಅಂದು=ಜೀವಂತವಾಗಿರುವ ನೀನು ಸತ್ತು ಉರಿಯುತ್ತಿರುವ ಚಿತೆಯಲ್ಲಿ ನಿನ್ನ ಹೆಣ ಬೆಂದು ನನ್ನಂತೆಯೇ ಬೂದಿಯಾದಾಗ;
ವ್ಯಕ್ತಿಯು ತನ್ನ ಮಯ್ ಮನದಲ್ಲಿ ಇಂದ್ರಿಯಗಳ ಸಂವೇದನೆಯಿಂದ ಮೂಡುವ ಒಳಿತು ಕೆಡುಕಿನ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ಬಾಳಬಹುದೇ ಹೊರತು, ಕೆಟ್ಟ ಕಾಮನೆಗಳೇ ಬಾರದಂತೆ ತಡೆಯಲು ಆಗುವುದಿಲ್ಲ. ಸುಟ್ಟು ಬೂದಿಯಾಗಿರುವ ಕಣಗಳಿಗೆ ಸಂವೇದನೆಗಳು ಇರುವುದಿಲ್ಲ. ಆದರೆ ಜೀವಂತವಾಗಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇಂದ್ರಿಯಗಳಿಂದ ಉಂಟಾಗುವ ಸಂವೇದನೆಗಳು ಇದ್ದೇ ಇರುತ್ತವೆ ಎಂಬ ಕಟು ವಾಸ್ತವವನ್ನು ಈ ಕವನ ಸೂಚಿಸುತ್ತಿದೆ.)
( ಚಿತ್ರಸೆಲೆ : karnataka.com )
ಇತ್ತೀಚಿನ ಅನಿಸಿಕೆಗಳು