ಹೊನೊಕೊಹೌ ಜಲಪಾತ

– .

ಹೊನೊಕೊಹೌ ಜಲಪಾತವು ಹವಾಯಿ ದ್ವೀಪ ಸಮೂಹದಲ್ಲಿನ ಮಾಯಿ ದ್ವೀಪದಲ್ಲಿದೆ. ಮಾಯಿ ದ್ವೀಪದಲ್ಲಿನ ಜಲಪಾತಗಳಲ್ಲಿ ಇದು ಅತಿ ಎತ್ತರದ ಜಲಪಾತವಾಗಿದೆ. ಎರಡು ಹಂತದ ಈ ಜಲಪಾತವನ್ನು ನೈಸರ‍್ಗಿಕ ಸೌಂದರ‍್ಯವೆಂದು ವರ‍್ಗೀಕರಿಸಲಾಗಿದೆ. ಇದರ ಎತ್ತರ 341 ಮೀಟರ್. ಆದರೆ ಕೆಲವು ಮೂಲಗಳ ಪ್ರಕಾರ, ಇದರ ಎತ್ತರವನ್ನು 487 ಮೀಟರ್ ಎಂದು ಅಂದಾಜಿಸಿದ್ದಾರೆ ಎನ್ನಲಾಗಿದೆ. ಅಬೇದ್ಯ ಪಶ್ಚಿಮ ಮಾಯಿ ಪರ‍್ವತಗಳ ಶ್ರೇಣಿಯಲ್ಲಿ, ಮಾನವ ಪ್ರವೇಶಿಸಲಾಗದ ಕಣಿವೆಯಲ್ಲಿ ಈ ಜಲಪಾತವಿದ್ದು, ಜಲಪಾತದ ಪಾದದ ಬಳಿಗೆ ಹೋಗುವುದು ಅಸಾದ್ಯವಾಗಿದೆ. ಅಲ್ಲಿಗೆ ಹೋಗಲು ಮಾರ‍್ಗವೇ ಇಲ್ಲ. ಎರಡು ಹಂತದ ಈ ಹೊನೊಕೊಹೌ ಜಲಪಾತದ ನಿಜವಾದ ಸೌಂದರ‍್ಯವನ್ನು ಆಸ್ವಾದಿಸಬೇಕಾದಲ್ಲಿ, ಹೆಲಿಕಾಪ್ಟರ್ ಮೂಲಕ ಹೋಗಿ ಆಕಾಶದಿಂದ ವೀಕ್ಶಿಸಬೇಕು. ಅದರ ಅದ್ಬುತ ವೀಕ್ಶಣೆ ಮನದಲ್ಲಿ ಚಿರಸ್ತಾಯಿಯಾಗಿ ಉಳಿದು ಹೋಗುತ್ತದೆ.

ಈ ಜಲಪಾತವು ಮಾಯಿ ದ್ವೀಪದಲ್ಲಿರುವ ಹೊನೊಕೊಹೌ ಹೊಳೆಯ ಬಾಗವಾಗಿರುವುದರಿಂದ ಈ ಜಲಪಾತಕ್ಕೆ ಅದೇ ಹೆಸರು ಬಂದಿದೆ. ಪುಪ್ ಕುಕುಯಿ ಶಿಕರದಿಂದ ಪ್ರಾರಂಬವಾಗಿ ಉದ್ದವಾಗಿ ಹರಿಯುವ ಈ ಹೊಳೆ ಜಲಪಾತವಾಗಿ ಹರಿದು ನೋಡಲು ಅತ್ಯಂತ ಬವ್ಯವಾದ ನೋಟಕ್ಕೆ ಸಾಕ್ಶಿಯಾಗಿದೆ. ಹವಾಯಿ ದ್ವೀಪಗಳಿಗೆ ಯಾರೇ ಪ್ರವಾಸ ಹೋದಲ್ಲಿ, ಹೊನೊಕೊಹೌ ಜಲಪಾತ ನೋಡಲೇಬೇಕಾದ ತಾಣವಾಗಿದೆ. ಇದನ್ನು ವೀಕ್ಶಿಸದಿದ್ದಲ್ಲಿ ಹವಾಯಿ ದ್ವೀಪದ ವೀಕ್ಶಣೆ ಪೂರ‍್ಣವಾಗುವುದಿಲ್ಲ. ಇದರಂತಹ ನೈಸರ‍್ಗಿಕ ಸೌಂದರ‍್ಯ, ದುಮ್ಮಿಕ್ಕುವ ಜಲಪಾತದ ಲಾಸ್ಯ ವಿಶ್ವದ ಬೇರಾವುದೇ ತಾಣಗಳಲ್ಲೂ, ಕಾಣಸಿಗುವುದಿಲ್ಲ. ಹೆಲಿಕಾಪ್ಟರ್ ಹೊರತು ಪಡಿಸಿ ಬೇರಾವುದೇ ಮಾರ‍್ಗದಲ್ಲಿ ಹೋಗಿ ಇದನ್ನು ವೀಕ್ಶಿಸುವುದು ಅಸಾದ್ಯವೇ ಸರಿ!. ಹೊನೊಕೊಹೌ ಜಲಪಾತದ ಮೋಡಿ ಮಾಡುವ ನೋಟ ಉಸಿರನ್ನು ಬಿಗಿ ಹಿಡಿಯುವಂತೆ ಮಾಡುತ್ತದೆ. ತನ್ನದೇ ಆದ ಬೇರೆ ಪ್ರಪಂಚಕ್ಕೆ ಅದು ವೀಕ್ಶಕರನ್ನು ಕೊಂಡೊಯ್ಯುತ್ತದೆ.

ಮಾಯಿ ದ್ವೀಪವು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಪುಪ್ ಕುಕುಯಿ ಶಿಕರ ಪ್ರದೇಶ ವರ‍್ಶಕ್ಕೆ 9000 ಮಿಲಿಮೀಟರ‍್ಗೂ ಹೆಚ್ಚು ಮಳೆಯನ್ನು ಆಕರ‍್ಶಿಸುತ್ತದೆ. ಇದರ ಆಸುಪಾಸಿನಲ್ಲಿರುವ ಹೊನೊಕೊಹೌ ಜಲಪಾತ ಸಹ ಮಳೆಯಿಂದ ಸದಾ ಕಾಲ ಆವ್ರುತವಾಗಿರುತ್ತದೆ. ಹಾಗಾಗಿ ತಿಳಿಯಾದ ವಾತಾವರಣ ಇದ್ದಾಗ ಮಾತ್ರ ಈ ಜಲಪಾತದ ಸವಿಯನ್ನು ಪೂರ‍್ಣವಾಗಿ ಆಸ್ವಾದಿಸಲು ಸಾದ್ಯ. ಇಲ್ಲಿ ‘ಹೆಲಿ ಟೂರಿಸಂ’ ಆಯೋಜಿಸುವ ಕಂಪನಿಗಳು, ಈ ವಿಶಯಗಳನ್ನು ಪ್ರವಾಸ ಆರಂಬಿಸುವ ಮುನ್ನ ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಹಲವೊಮ್ಮೆ ಮೋಡಗಳೂ ಸಹ ಜಲಪಾತಕ್ಕೆ ಪರದೆಯಾಗಿ, ನೋಡುಗರ ವೀಕ್ಶಣೆಯನ್ನು ಮಸಕುಗೊಳಿಸುತ್ತದೆ.

(ಚಿತ್ರ ಮತ್ತು ಮಾಹಿತಿಸೆಲೆ:   world-of-waterfalls.com , whenonearth.com , wondermondo.com, to-hawaii.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: