ಸ್ಪೇಸ್ ಎಕ್ಸ್ (SpaceX) ಮತ್ತು ಮಂಗಳದ ಸುತ್ತ : ಕಂತು-2
– ನಿತಿನ್ ಗೌಡ.
ಕಂತು-1 ಕಂತು-2
ಮಂಗಳವನ್ನು ತಲುಪುವುದು ಮತ್ತು ಅದನ್ನು ಮಾನವರ ನೆಲೆಯಾಗಿಸುವುದು ಸ್ಪೇಸ್‌ಎಕ್ಸ್ ನ ಎಲ್ಲಾ ಹಮ್ಮುಗೆಗಳಲ್ಲಿ ಅತ್ಯಂತ ಹಿರಿಹಂಬಲದ (Ambitious) ಮತ್ತು ಮುಂಚೂಣಿಯ ಹಮ್ಮುಗೆಯಾಗಿದೆ. ಮಂಗಳವೇ ಯಾಕೆ ಎನ್ನುವ ಮೊದಲು , ಮಂಗಳದ ಬಗ್ಗೆ ಕೆಲವು ಕುತೂಹಲಕಾರಿ ವಿಶಯಗಳನ್ನು ತಿಳಿದುಕೊಳ್ಳೋಣ.
ಮಂಗಳ ಬೂಮಿಯಿಂದ ಸರಾಸರಿ ಸುಮಾರು 225 ಮಿಲಿಯನ್ ಕಿ.ಮೀ ದೂರದಲ್ಲಿದೆ ಮತ್ತು ನೇಸರ ಬಳಗದಲ್ಲಿ(Solar system) ಮಂಗಳ 4ನೇ ಸುತ್ತುಗವಾಗಿದ್ದು ಬೂಮಿಯ ನಂತರದ ಸ್ತಾನದಲ್ಲಿದೆ. ಇದರ ವಯಸ್ಸು 4.5 ಬಿಲಿಯನ್ ಏಡುಗಳಾಗಿದ್ದು(year), ಸೆಳೆತ(Gravity) ಬೂಮಿಯ ಶೇ 38% ರಶ್ಟಿದೆ. ಅಂದರೆ ಮಂಗಳನಲ್ಲಿ ನಾವು ಬಾರವಾದ ವಸ್ತುಗಳನ್ನು ಸುಲಬವಾಗಿ ಎತ್ತಬಹುದು. ಮಂಗಳನಲ್ಲಿ ಒಂದು ದಿನ; 24 ಗಂಟೆ 37 ನಿಮಿಶದಿಂದ ಕೂಡಿರುತ್ತದೆ. ಇದು ಸರಾಸರಿ ಬೂಮಿಯಶ್ಟೇ ಆಯಿತಲ್ವಾ! .
ಜಗತ್ತಿನ 4 ಹೊರಬಾನ ಸಂಸ್ತೆಗಳು ಮಂಗಳನ ಸುತ್ತುದಾರಿಗೆ (oribt) ಮಾನವರನ್ನು ಹೊಂದಿರದ ಸ್ಪೇಸ್ ಕ್ರಾಪ್ಟನ್ನು ಯಶಸ್ವಿಯಾಗಿ ತಲುಪಿಸಿವೆ. ಅಮೇರಿಕಾದ ನಾಸ(NASA) , ರಶ್ಯಾದ ರೊಸ್ಕೊಮೋಸ್ (ROSCOMOS) , ಯುರೋಪ್ ಒಕ್ಕೂಟದ ಯುರೋಪಿಯನ್ ಸ್ಪೇಸ್ ಏಜೆನ್ಸಿ( European Space Agency) ಮತ್ತು ಬಾರತದ ಇಸ್ರೋ (ISRO) ಈ ಸಂಸ್ತೆಗಳಾಗಿವೆ . ಈ ಹಮ್ಮುಗೆಗಳ ನಂತರ ನಡೆದ ಅದ್ಯಯನದ ಪ್ರಕಾರ ಮಂಗಳನಲ್ಲಿ ಕಾರ‍್ಬನ್ ಡಯಾಕ್ಸೈಡ್ (CO2) , ನೈಟ್ರೋಜನ್ , ಆರ‍್ಗಾನ್ ಇತರೆ ಅಂಶಗಳು ಮತ್ತು ನೀರಿನ ಕುರುಹುಗಳು ಕಂಡುಬಂದಿವೆ. ಇದರಿಂದ ನಮಗೆ ತಿಳಿಯುವುದೇನೆಂದರೆ, ವಾತಾವರಣದ ಒತ್ತಡವನ್ನು ನಿಬಾಯಿಸುವ ಮೂಲಕ ನಾವು ಅಲ್ಲಿ ಮರ-ಗಿಡಗಳನ್ನು ಬೆಳೆಯಬಹುದು ಮತ್ತು ಬೂಮಿಯ ತರಹವೇ ಇದು ವಾಸಕ್ಕೆ ಯೋಗ್ಯ ಎಂಬುದಾಗಿದೆ. ಬೂಮಿಗೆ ಹೋಲಿಸಿದಲ್ಲಿ ಮಂಗಳ ನೇಸರನಿಂದ ದೂರವಿರುವುದರಿಂದ , ಅಲ್ಲಿ ಬಿಸುಪು ( Temperature) ಕಡಿಮೆಯಿದ್ದು, ಚಳಿಯನ್ನು ಕಾಣಬಹುದು.
ಈಗ ಮಂಗಳನನ್ನು ತಲುಪಿ, ಮರಳಲು ಸ್ಪೇಸ್ ಎಕ್ಸ್ ಮಾಡಿದ ಹಮ್ಮುಗೆಯ ಬಗ್ಗೆ ತಿಳಿದುಕೊಳ್ಳೋಣ. ಈ ಹಮ್ಮುಗೆಯ ಈ ಕೆಳಗಿನ ಯೋಚನೆ, ಇದರ ಹಿರಿಹಂಬಲ(ambition) ಸಾಕಾರಗೊಳ್ಳಲು ಅತಿ ಮುಕ್ಯವಾಗಿದೆ. ಸ್ಪೇಸ್ ಎಕ್ಸ್ ನ ಸ್ಟಾರ್‌ಶಿಪ್ ಬಾನಬಂಡಿ ಮತ್ತು ಸೂಪರ್ ಹೆವಿ ರಾಕೆಟ್ ಒಟ್ಟಾಗಿ ಮಂಗಳ ಸುತ್ತುಗದ ಮೇಲ್ಮೈಯಲ್ಲಿ ಉರುವಲು(Fuel) ತುಂಬಲು ಮಂಗಳನಲ್ಲಿರುವ ನೈಸರ‍್ಗಿಕ ನೀರಿನ (H2O) ಮತ್ತು ಕಾರ‍್ಬನ್ ಡೈಆಕ್ಸೈಡಿನ (CO2) ಸಂಪನ್ಮೂಲಗಳನ್ನು ಬಳಸಿಕೊಳ್ಳಲಿವೆ. ಇವೆರಡೂ ಸೇರಿ, ಸ್ಪೇಸ್ ಕ್ರಾಪ್ಟ್ ಗಾಗಿ ಸುತ್ತುದಾರಿಯಲ್ಲಿ ಉರುವಲನ್ನು ತುಂಬಿಸುವ ಮತ್ತು ಅದನ್ನು ನಿಯಂತ್ರಿಸುವ ಸಾಮರ‍್ತ್ಯವನ್ನು ಹೊಂದಿರುವ ಹಾಗೂ ಮರುಬಳಕೆ ಮಾಡಬಹುದಾದ ಸಾರಿಗೆ ಏರ‍್ಪಾಡನ್ನು ರಚಿಸುತ್ತದೆ.
ಈಗ ಈ ಮೇಲಿನ ಚಿತ್ರದ ಆಸರೆಯಿಂದ ಈ ಹಮ್ಮುಗೆಯ ಬೇರೆ ಬೇರೆ ಹಂತಗಳನ್ನು ನೋಡೋಣ.
1. ಹಾರಿಸುವಿಕೆ ಮತ್ತು ಬೂಸ್ಟರ್ ಮರಳುವಿಕೆ.
ಸ್ಟಾರ್‌ಶಿಪ್ ‘ಸೂಪರ್ ಹೆವಿ ಬೂಸ್ಟರ್’ ಮೂಲಕ ಉಡಾವಣೆಗೊಳ್ಳುತ್ತದೆ. ನಂತರ ಬೂಸ್ಟರ್ ಬೂಮಿಗೆ ಮರಳುತ್ತದೆ.
2. ಬೂಮಿಯ ಸುತ್ತುದಾರಿಗೆ ಬಾನಬಂಡಿಯ ಬರುವಿಕೆ.
ಬೂಮಿಯ ಸುತ್ತುದಾರಿಗೆ ಬಂಡಿಯು ತಲುಪುತ್ತಿದ್ದಂತೆ, ಉರುವಲು ತುಂಬಿಸುವ ಟ್ಯಾಂಕರ್ ಬಂಡಿಯನ್ನು ಅದೇ ಸುತ್ತುದಾರಿಯಲ್ಲಿ ಕೂಡಿಕೊಳ್ಳುವುದು. ಈ ಎರಡೂ ಕೆಲಸಗಳ ನಡುವೆ ಒಂದು ಮೇಳೈಸುವಿಕೆ(Synchronization) ಇರಬೇಕಾಗುತ್ತದೆ.
3. ಟ್ಯಾಂಕರ್ ಗಳಿಂದ ಬಂಡಿಗೆ ಇಂದನ ತುಂಬಿಸಿ ಬೂಮಿಗೆ ಮರಳುವುದು.
ಹೀಗೆ ಈ ಮೇಲಿನ ಹಂತದಲ್ಲಿ ಕೂಡಿಕೊಂಡಮೇಲೆ, ಸ್ಟಾರ್‌ಶಿಪ್ ಗೆ ಉರುವಲನ್ನು ತುಂಬಿಸಿ ಟ್ಯಾಂಕರ್ ಬೂಮಿಗೆ ಮರಳುತ್ತದೆ.
4. ಉರುವಲುಬರಿತ(Fuel filled) ಬಾನಬಂಡಿಯ ಮಂಗಳನೆಡೆಗಿನ ಪಯಣ.
ಈ ಹಂತದಿಂದ ಉರುವಲುಬರಿತ ಬಂಡಿಯು ಬೂಮಿಯ ಸುತ್ತುದಾರಿಯಿಂದ, ನೇಸರನನ್ನು(Sun) ಸುತ್ತುತ್ತಾ , ಮಂಗಳನೆಡೆಗೆ ಪಯಣ ಬೆಳೆಸುವುದು.
5. ಮಂಗಳನಲ್ಲಿರುವಾಗ, ಬಂಡಿಗೆ ಇಂದನವನ್ನು ಮರುತುಂಬಿಸುವುದು.
ಸ್ಟಾರ್‌ಶಿಪ್ ಸೆಕೆಂಡಿಗೆ 7.5 ಕಿ.ಮೀ ವೇಗದಲ್ಲಿ ಮಂಗಳನ ವಾತಾವರಣಕ್ಕೆ ಲಗ್ಗೆ ಇಡುತ್ತದೆ ಮತ್ತು ಜೊತೆ ಜೊತೆಗೆ ಏರೋಡೈನಮಿಕಲಿ ತನ್ನ ವೇಗವನ್ನು ತಗ್ಗಿಸುತ್ತಾ ಸಾಗುತ್ತದೆ. ಸ್ಟಾರ್‌ಶಿಪ್ ನ ಕಾವು ತಡೆಯುವ ಗುರಾಣಿಯು( Heat Resistant Shield) ಈ ಕಾವಿನ ಬದಲಾವಣೆಗಳನ್ನು ತಡೆದುಕೊಳ್ಳುವಂತೆ ಸಹಾಯ ಮಾಡುವುದು. ಹೀಗೆ ಮಂಗಳನ ಮೇಲೆ ಕಾಲಿಟ್ಟ ನಂತರ ಮಂಗಳನಲ್ಲಿರುವ ಸ್ತಳೀಯ ಸಂಪನ್ಮೂಲಗಳನ್ನು ಬಳಸಿ ಉರುವಲು ತುಂಬಿಸಿ ಬೂಮಿಗೆ ಮರಳುವುದು ಈ ಹಂತದ ಮುಕ್ಯ ಕೆಲಸವಾಗಿದೆ. ಮಂಗಳನ ವಾತವರಣದಲ್ಲಿ ಕಾರ‍್ಬನ್ ಡೈಆಕ್ಸೈಡ್ ಮತ್ತು ಮಂಜುಗಡ್ಡೆಯಿದ್ದು , ಇವುಗಳನ್ನು ಬಳಸಿಕೊಂಡು ಸೆಬಾಟೀಯರ್ ವಿದಾನದ ಮೂಲಕ ಮೀತೇನ್(CH4) ಮತ್ತು ಲಿಕ್ವಿಡ್ ಆಕ್ಸಿಜನ್ ಅನ್ನು ಪಡೆಯಲಾಗುವ ಪ್ರೊಪೆಲ್ಲೆಂಟ್ ಪ್ಲಾಂಟ್ ಕಟ್ಟಲಾಗುವುದು. ಈ ಮೀತೇನ್(CH4) ಮತ್ತು ಲಿಕ್ವಿಡ್ ಆಕ್ಸಿಜನ್ ಅನ್ನು ಸ್ಟಾರ್‌ಶಿಪ್ ನ ಮುಂದೂಡುಗ ಉರುವಲಾಗಿ (propellant) ಬಳಸಲಾಗುತ್ತದೆ.
6. ಬೂಮಿಯೆಡೆಗೆ ನೇರ ಪಯಣ
ಈ ಮೇಲಿನ ಬಗೆಯಿಂದ ಸ್ಟಾರ್‌ಶಿಪ್ ನಲ್ಲಿ ಪೂರ‍್ಣವಾಗಿ ಉರುವಲನ್ನು ತುಂಬಿದಮೇಲೆ, ಅದು ಮಂಗಳನಿಂದ ಏರಿ, ಬೂಮಿಯೆಡೆಗೆ ಪಯಣ ಬೆಳೆಸುತ್ತದೆ.
ಇನ್ನು ಸ್ಪೇಸ್ ಎಕ್ಸ್ 2024ರ ವೇಳೆಗೆ ಮಾನವರನ್ನು ಹೊಂದಿರದ ಮತ್ತು 2026ರ ಹೊತ್ತಿಗೆ ಮಾನವರನ್ನು ಹೊಂದಿದ ಸ್ಪೇಸ್ ಕ್ರಾಪ್ಟನ್ನು ಮಂಗಳನೆಡೆಗೆ ಕಳುಹಿಸುವ ಹಮ್ಮುಗೆ ಹೊಂದಿದೆ. ಈ ಮುನ್ ತಯಾರಿ ಮತ್ತು ಏರ‍್ಪಾಡುಗಳನ್ನು ನೋಡಿದರೆ ಈ ಕನಸು ನನಸಾಗುವದರಲ್ಲಿ ಯಾವುದೇ ಗುಮಾನಿಯಿಲ್ಲ. ಮಂಗಳಯಾನ ಒಂದರ ಯಶಸ್ಸಿನ ನಂತರ ಬಾರತ ಕೂಡ ಮಂಗಳಯಾನ-2ರ ಹಮ್ಮುಗೆಗೆ ಸಿದ್ದಗೊಳ್ಳುತ್ತಿದೆ. ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿಯು, ಅಮೇರಿಕಾದ ನಾಸಾ ಜೊತೆಗೆ ಇನ್ನೂ ಅನೇಕ ಕುತೂಹಲಕಾರಿಯಾದ ಜಂಟಿ ಹಮ್ಮುಗೆ ಮತ್ತು ವ್ಯವಹಾರಗಳನ್ನು ಹೊಂದಿದೆ. ದೂರದಲ್ಲಿ ಇರುವ ಮಂಗಳನನ್ನು ಸೂರು ಮಾಡಿಕೊಳ್ಳುವ ಹಮ್ಮುಗೆಯ ಜೊತೆ ಜೊತೆಗೆ ,ನಮ್ಮ ಇಳೆಯನ್ನು ನಾವು ಮರೆಯಬಾರದು. ಜಾಗತಿಕ ತಾಪಮಾನ, ಮಾಲಿನ್ಯ ಹತೋಟಿ ಇತ್ಯಾದಿ ವಿಶಯಗಳನ್ನು ತಡೆಯುವ ದಿಕ್ಕಿನೆಡೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದರ ಮೂಲಕ, ನಮ್ಮ ಬೂಮಿ ತಾಯಿಯನ್ನೂ ನಾವು ಕಾಪಡಿಕೊಳ್ಳಬೇಕು.
(ಚಿತ್ರ ಮತ್ತು ಮಾಹಿತಿಸೆಲೆ: pixabay.com , spacex.com , space.com , marsOrbiterwikipedia.com , bbc.com , wikipedia.org )
ಇತ್ತೀಚಿನ ಅನಿಸಿಕೆಗಳು