ಕರ್‍ನಾಟಕದ ಹೆಮ್ಮೆಯ ಬೌಲರ್ – ವೆಂಕಟೇಶ ಪ್ರಸಾದ್

– ರಾಮಚಂದ್ರ ಮಹಾರುದ್ರಪ್ಪ.

Venkatesh Prasad ವೆಂಕಟೇಶ್ ಪ್ರಸಾದ್

1990 ರ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಅಬ್ಯಾಸಕ್ಕೆಂದು ಬಾರತ ಕ್ರಿಕೆಟ್ ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟುರುತ್ತದೆ. ಆ ವೇಳೆ ಬಾರತ ತಂಡದ ಬ್ಯಾಟ್ಸ್ಮನ್ ಗಳಿಗೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವುದಕ್ಕಾಗಿ ಆಗಾಗಲೇ ತಮ್ಮ ವೇಗದಿಂದ ದೇಸೀ ಕ್ರಿಕೆಟ್ ನಲ್ಲಿ ಸಂಚಲನ ಮೂಡಿಸಿದ್ದ ಕರ‍್ನಾಟಕದ ಯುವ ವೇಗಿ ಜಾವಗಲ್ ಶ್ರೀನಾತ್ ರೊಟ್ಟಿಗೆ ಇನ್ನೂ ರಣಜಿ ಪಾದಾರ‍್ಪಣೆ ಮಾಡದ ಕರ‍್ನಾಟಕದ ಇನ್ನೊಬ್ಬ ಬರವಸೆಯ ವೇಗಿಯನ್ನು ಕರೆಸಲಾಗುತ್ತದೆ. ಆಗಿನ ಬಾರತದ ಪ್ರಬಲ ಬ್ಯಾಟ್ಸ್ಮನ್ ಗಳಾದ ಅಜರುದ್ದೀನ್, ಮಂಜ್ರೇಕರ್, ಸಿದ್ದು ಹಾಗೂ ತೆಂಡೂಲ್ಕರ್ ಬಾರತ ತಂಡದ ಬೌಲರ್ ಗಳಾದ ಮನೋಜ್ ಪ್ರಬಾಕರ್, ಸಂಜೀವ್ ಶರ‍್ಮ ಅವರಿಗಿಂತ ಕರ‍್ನಾಟಕದ ಯುವ ವೇಗಿಗಳನ್ನುಎದುರಿಸುವುದರಲ್ಲಿ ಕೊಂಚ ಕಶ್ಟಕ್ಕೆ ಒಳಗಾಗುತ್ತಾರೆ. ಇದನ್ನು ಕಂಡ ಆಗಿನ ಬಾರತದ ಕೋಚ್ ಹಾಗೂ ಸ್ಪಿನ್ ದಿಗ್ಗಜ ಬಿಶನ್ ಸಿಂಗ್ ಬೇಡಿ ಅವರು ತಂಡದ ಆಯ್ಕೆ ನನಗೆ ಬಿಟ್ಟಿದ್ದರೆ ಕರ‍್ನಾಟಕದ ಈ ಇಬ್ಬರು ಬೌಲರ್ ಗಳನ್ನು ತಂಡಕ್ಕೆ ನೇರವಾಗಿ ಆಯ್ಕೆ ಮಾಡುತ್ತಿದ್ದೆ ಎಂದು ಹೇಳುತ್ತಾರೆ. ಶ್ರೀನಾತ್ ರವರೇನೋ ಮೊದಲ ದರ‍್ಜೆ ಕ್ರಿಕೆಟ್ ಆಡಿ ಪಳಗಿದ್ದರು. ಆದರೆ ಇಪ್ಪತ್ತರ ಹರೆಯದ ಇನ್ನೊಬ್ಬ ವೇಗಿ ಮೊದಲ ದರ‍್ಜೆ ಕ್ರಿಕೆಟ್ ಆಡದಿದ್ದರೂ ತಮ್ಮ ಚಳಕದಿಂದ ಅಂತರಾಶ್ಟ್ರೀಯ ಬ್ಯಾಟ್ಸ್ಮನ್ ಗಳನ್ನು ನೆಟ್ಸ್ ನಲ್ಲಿ ಕಾಡಿದ್ದು ಸೋಜಿಗವೇ! ಹೀಗೆ ಅನುಬವದ ಕೊರತೆಯ ಹೊರತಾಗಿಯೂ ಬೇಡಿ ಅವರಿಂದ ಪ್ರಶಂಸೆ ಪಡೆದ ಕರ‍್ನಾಟಕದ ಆ ಇನ್ನೊಬ್ಬ ವೇಗಿಯೇ ನಮ್ಮ ನಾಡಿನ ಹೆಮ್ಮೆಯ ಕ್ರಿಕೆಟರ್ ಗಳಲ್ಲೊಬ್ಬರಾದ ವೆಂಕಟೇಶ್ ಪ್ರಸಾದ್.

ಹುಟ್ಟು – ಎಳವೆಯ ಕ್ರಿಕೆಟ್ ಗೀಳು

ಆಗಸ್ಟ್ 5, 1969 ರಂದು ಬೆಂಗಳೂರಿನಲ್ಲಿ ವೆಂಕಟೇಶ್ ಪ್ರಸಾದ್ ಹುಟ್ಟಿದರು. ಎಳವೆಯಿಂದಲೂ ಆಟೋಟಗಳ ವಿಶಯದಲ್ಲಿ ಪುಟ್ಟ ಪ್ರಸಾದ್ ರಿಗೆ ಅವರ ತಂದೆಯಿಂದ ಸಾಕಶ್ಟು ಪ್ರೋತ್ಸಾಹ ದೊರಕಿತು. ಮೊದಲು ಬಾಸ್ಕೆಟ್ ಬಾಲ್ ಹಾಗೂ ಹಾಕಿ ಆಡುತ್ತಿದ್ದ ಪ್ರಸಾದ್ ಕಡೆಗೆ ತಮ್ಮ ನೆಚ್ಚಿನ ಕ್ರಿಕೆಟ್ ನತ್ತ ವಾಲಿದರು. ಐಟಿಐ ವಿದ್ಯಾಮಂದಿರದ ಶಾಲೆಯ ದಿನಗಳಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಅವರು, ಮುಂದೆ ವಿಜಯ್ ಕಾಲೇಜ್ ತಂಡದ ಸದಸ್ಯರಾದರು. ಅವರು ಹದಿನೆಂಟನೇ ವಯಸ್ಸಿನ ತನಕ ಲೆದರ್ ಬಾಲ್ ನಿಂದ ಒಮ್ಮೆಯೂ ಬೌಲ್ ಮಾಡದ್ದದ್ದು ನಿಜಕ್ಕೂಅಚ್ಚರಿಯ ವಿಶಯ. ಆದರೆ ಲೆದರ್ ಬಾಲ್ ನಿಂದ ಬೌಲ್ ಮಾಡುವ ಚಳಕವನ್ನು ಬೇಗನೆ ಕರಗತ ಮಾಡಿಕೊಂಡ ಪ್ರಸಾದ್ ವಿಕೆಟ್ ಪಡೆಯುತ್ತಾ ಬೆಂಗಳೂರು ವಿಶ್ವವಿದ್ಯಾಲಯ ತಂಡದಲ್ಲೂ ಗುರುತಿಸಿಕೊಂಡರು. ವಿಶ್ವವಿದ್ಯಾಲಯ ಮಟ್ಟದಲ್ಲೂ ಪ್ರಸಾದ್‌ರ ವಿಕೆಟ್ ಬೇಟೆ ಮುಂದುವರೆಯಿತು. ಅವರ ಬೌಲಿಂಗ್ ಅಳವನ್ನು ಗುರುತಿಸಿದ ದೂರವಾಣಿ ಕ್ರಿಕೆಟರ‍್ಸ್ ಕ್ಲಬ್ ತಂಡ ಪ್ರಸಾದ್ ರನ್ನು ಒಡನೆಯೇ ತನ್ನ ತೆಕ್ಕೆಗೆ ಹಾಕಿಕೊಂಡಿತು. ಕೆ.ಎಸ್.ಸಿ.ಎ ಮೊದಲ ಡಿವಿಶನ್ ನ ಹಲವಾರು ಪಂದ್ಯಾವಳಿಗಳಲ್ಲಿ ಪ್ರಸಾದ್ ದೂರವಾಣಿ ಕ್ರಿಕೆಟರ‍್ಸ್ ಪರ ವಿಕೆಟ್ ಗಳನ್ನು ಪಡೆಯುತ್ತಾ ಕರ‍್ನಾಟಕದ ಕ್ರಿಕೆಟ್ ವಲಯದಲ್ಲಿ ಮನೆ ಮಾತಾದರು. ಕೆಲವೇ ವರುಶಗಳಲ್ಲಿ ಇವರ ಅಸಾದಾರಣ ಬೆಳೆವಣಿಗೆಯನ್ನು ಕಂಡು ಸಿಂಡಿಕೇಟ್ ಬ್ಯಾಂಕ್ 19 ರ ಹರೆಯದ ಪ್ರಸಾದ್ ರಿಗೆ ನೌಕರಿ ನೀಡಿ, ತಮ್ಮ ಕ್ರಿಕೆಟ್ ತಂಡದ ಸದಸ್ಯನನ್ನಾಗಿ ಆಯ್ಕೆ ಮಾಡಿತು. ಆನಂತರದ ಎರಡು ವರುಶಗಳಲ್ಲಿಯೂ ರಾಜ್ಯದ ವಿವಿದ ಲೀಗ್ ಗಳಲ್ಲಿ ಬೌಲಿಂಗ್ ನಲ್ಲಿ ಮಿಂಚಿದ ಪ್ರಸಾದ್ ಕರ‍್ನಾಟಕ ರಣಜಿ ತಂಡದ ಕದ ತಟ್ಟಲಾರಂಬಿಸಿದರು.

ರಣಜಿ ಪಾದಾರ‍್ಪಣೆ

1991 ರ ಜನವರಿಯಲ್ಲಿ ಪ್ರಸಾದ್, ಸಯ್ಯದ್ ಕಿರ‍್ಮಾನಿ ನಾಯಕತ್ವದಲ್ಲಿ ಕರ‍್ನಾಟಕದ ಪರ ಕೇರಳ ಎದುರು ತಲಸ್ಸೇರಿಯಲ್ಲಿ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಎರಡೂ ಇನ್ನಿಂಗ್ಸ್ ಗಳಲ್ಲಿ ಒಳ್ಳೆಯ ಪ್ರದರ‍್ಶನದಿಂದ (2/59 ಮತ್ತು 2/54) ತಮ್ಮ ಮೊದಲ ದರ‍್ಜೆ ವ್ರುತ್ತಿ ಬದುಕಿಗೆ ಒಳ್ಳೆ ಅಡಿಪಾಯ ಹಾಕಿಕೊಂಡರು. ಅಲ್ಲಿಂದ ಹಂತ ಹಂತವಾಗಿ ಬೆಳೆದ ಅವರು ರಾಜ್ಯ ತಂಡದ ಕಾಯಮ್ ಸದಸ್ಯರಾದರು. ಶ್ರೀನಾತ್ ಹಾಗೂ ಕುಂಬ್ಳೆ ಬಾರತ ತಂಡದೊಂದಿಗೆ ಇರುವಾಗ ಪ್ರಸಾದ್ ಕರ‍್ನಾಟಕದ ಬೌಲಿಂಗ್ ನೊಗ ಹೊತ್ತು ಮುನ್ನಡೆಸಿದರು. 1993/94 ರ ಹೊತ್ತಿಗಾಗಲೇ ವೇಗದ ಬೌಲಿಂಗ್ ನಲ್ಲಿ ಸಾಕಶ್ಟು ಮಾಗಿದ್ದ ಪ್ರಸಾದ್, ಬೆಂಗಳೂರಿನಲ್ಲಿ ಗೋವಾ ಎದುರು ತಮ್ಮ ಮೊದಲ ಐದು ವಿಕೆಟ್(5/41) ಸಾದನೆ ಮಾಡಿದರು. ಅಲ್ಲಿಂದ ಹೆಚ್ಚೆಚ್ಚು ವಿಕೆಟ್ ಪಡೆಯುತ್ತಾ ವಿಲ್ಸ್ ಟ್ರೋಪಿ, ದುಲೀಪ್, ದೇವದರ್ ಹಾಗೂ ಇರಾನಿ ಟ್ರೋಪಿಗಳಲ್ಲಿಯೂ ತಮ್ಮ ಬೌಲಿಂಗ್ ನಿಂದ ಸದ್ದು ಮಾಡಿದರು. 1993 ರ ನವೆಂಬರ್ ನಲ್ಲಿ ಸೂರತ್ ನಲ್ಲಿ ನಡೆದ ಐವತ್ತು ಓವರ್ ಗಳ ದೇವದರ್ ಟೂರ‍್ನಿಯಲ್ಲಿ ದಕ್ಶಿಣ ವಲಯ 82 ರನ್ ಗಳಿಗೆ ಆಲೌಟ್ ಆಗಿ ಉತ್ತರ ವಲಯದ ಎದುರು ಸೋಲನ್ನು ಎದುರು ನೋಡುತ್ತಿರುತ್ತದೆ. ಆದರೆ ಪ್ರಸಾದ್ ರ ಸೊಗಸಾದ ದಾಳಿಗೆ (6/18) ಸಿಲುಕಿ ಕೇವಲ 68 ರನ್ ಗಳಿಗೆ ಸರ‍್ವಪತನ ಕಾಣುತ್ತದೆ. ಈ ಪ್ರದರ‍್ಶನದಿಂದ ಪ್ರಸಾದ್ ಮೊದಲ ಬಾರಿಗೆ ರಾಶ್ಟ್ರೀಯ ಆಯ್ಕೆಗಾರರ ಗಮನ ಸೆಳೆಯುತ್ತಾರೆ. ಬಳಿಕ ಅದೇ ಸಾಲಿನ ರಣಜಿ ಟೂರ‍್ನಿಯಲ್ಲಿ ಕೇರಳ ಎದುರು ಮೊದಲ ಬಾರಿಗೆ ಹತ್ತು ವಿಕೆಟ್ (7/37; 3/21) ಸಾದನೆ ಮಾಡಿ ತಾವು ಅಂತರಾಶ್ಟ್ರೀಯ ಕ್ರಿಕೆಟ್ ಗೆ ಸಜ್ಜಾಗಿರುವುದಾಗಿ ಮತ್ತೊಮ್ಮೆ ನೆನಪಿಸುತ್ತಾರೆ.

ಅಂತರಾಶ್ಟ್ರೀಯ ಕ್ರಿಕೆಟ್ ಪಾದಾರ‍್ಪಣೆ

ದೇಸೀ ಕ್ರಿಕೆಟ್ ನಲ್ಲಿ ಮೂರು ವರುಶ ಸ್ತಿರ ಪ್ರದರ‍್ಶನ ನೀಡಿದ್ದ ಪ್ರಸಾದ್ ಗಾಯಗೊಂಡಿದ್ದ ಮನೋಜ್ ಪ್ರಬಾಕರ್ ರ ಬದಲಾಗಿ ನ್ಯೂಜಿಲ್ಯಾಂಡ್ ನ ಒಂದು ದಿನದ ಪಂದ್ಯಗಳ ಪ್ರವಾಸಕ್ಕೆ ಆಯ್ಕೆಯಾಗುತ್ತಾರೆ. ಬೆಂಗಳೂರಿನಿಂದ ಒಬ್ಬರೇ ಆಕ್ಸ್‌ಲ್ಯಾಂಡ್ ಗೆ ಪ್ರವಾಸ ಬೆಳೆಸಿದ ಪ್ರಸಾದ್, ವಿಮಾನದಲ್ಲಿ ತಮ್ಮ ಕಿಟ್ ಬ್ಯಾಗ್ ಕಳೆದುಕೊಂಡು ಪೇಚಿಗೆ ಸಿಲುಕುತ್ತಾರೆ. ಅವರ ಕಿಟ್ ಬ್ಯಾಗ್ ಅಚಾತುರ‍್ಯದಿಂದ ಲಾಸ್ ಏಂಜೆಲ್ಸ್ ತಲುಪಿರುತ್ತದೆ. ಆಗ ಗೆಳೆಯ ಶ್ರೀನಾತ್ ನೆರವಿಗೆ ಬಂದು ತಮ್ಮ ಬೂಟ್ಸ್ ಹಾಗೂ ಆಟದ ಎಲ್ಲಾ ಸಲಕರಣೆಗಳನ್ನು ಪ್ರಸಾದ್ ರಿಗೆ ನೀಡುತ್ತಾರೆ. ಕಡೆಗೆ ಕ್ರೈಸ್ಟ್ ಚರ‍್ಚ್ ನಲ್ಲಿ ತಮ್ಮ ಮೊದಲ ಅಂತರಾಶ್ಟ್ರೀಯ ಪಂದ್ಯ ಆಡಿದ ಪ್ರಸಾದ್ 9 ಓವರ್ ಬೌಲ್ ಮಾಡಿ ವಿಕೆಟ್ ಪಡೆಯದೇ 49 ರನ್ ನೀಡಿ ನಿರಾಸೆ ಅನುಬವಿಸುತ್ತಾರೆ. ಆ ನಂತರ ಶಾರ‍್ಜಾದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ಎದುರು ಕೂಡ ವಿಕೆಟ್ ಅವರ ಕೈ ತಪ್ಪುತ್ತದೆ. ಮೂರೂ ಅವಕಾಶಗಳನ್ನು ಕೈಚೆಲ್ಲಿದರೂ ಪ್ರಸಾದ್ ರ ಮೇಲೆ ಬರವಸೆ ಇಟ್ಟು ಆಯ್ಕೆಗಾರರು ಶ್ರೀಲಂಕಾ ಪ್ರವಾಸಕ್ಕೆ ಅವರನ್ನು ಆಯ್ಕೆ ಮಾಡುತ್ತಾರೆ. ತಮ್ಮ ನಾಲ್ಕನೇ ಪಂದ್ಯದಲ್ಲಿ ರೂವನ್ ಕಲ್ಪಗೆ ವಿಕೆಟ್ ಪಡೆದು ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಪ್ರಸಾದ್ ತಮ್ಮ ವಿಕೆಟ್ ಕಾತೆ ತೆರೆಯುತ್ತಾರೆ.

ಬಳಿಕ ಕರ‍್ನಾಟಕದ ದಿಗ್ಗಜ ಆಟಗಾರ ಎ.ವಿ ಜಯಪ್ರಕಾಶ್ ಅವರು ಟಿ.ಎ. ಶೇಕರ್ ರಿಗೆ ಶಿಪಾರಸ್ಸು ಮಾಡಿ ಮದ್ರಾಸ್ ನ ಎಮ್.ಆರ್.ಎಪ್ ಪೇಸ್ ಅಕಾಡಮಿಯಲ್ಲಿ ಪ್ರಸಾದ್ ರನ್ನು ತರಬೇತಿಗೆ ಕಳಿಸುತ್ತಾರೆ. ಅಲ್ಲಿನ ಮುಕ್ಯ ಕೋಚ್ ಆಸ್ಟ್ರೇಲಿಯಾದ ದಿಗ್ಗಜ ವೇಗಿ ಡೆನ್ನಿಸ್ ಲಿಲ್ಲಿ ಗರಡಿಯಲ್ಲಿ ಕರ‍್ನಾಟಕದ ಯುವ ಪ್ರತಿಬೆ ಬೌಲಿಂಗ್ ನ ಎಲ್ಲಾ ಪಟ್ಟುಗಳನ್ನು ಕಲಿತು ಪರಿಪೂರ‍್ಣ ಬೌಲರ್ ಆಗಿ ರೂಪಗೊಳ್ಳುತ್ತಾರೆ. ವೇಗ ತಮ್ಮ ಶಕ್ತಿಯಲ್ಲವೆಂದು ಬೇಗನೆ ಅರಿತ ಪ್ರಸಾದ್ ನಿದಾನ ಗತಿಯ ಲೆಗ್ ಕಟರ್, ಆಪ್ ಕಟರ್, ಲೇಟ್ ಸ್ವಿಂಗ್ ಹೀಗೆ ಬೌಲಿಂಗ್ ನ ಹಲವಾರು ಬಗೆಯ ಚಳಕಗಳನ್ನು ಕಲಿತು ಲಿಲ್ಲಿರಿಂದ ‘Thinking man’s bowler’ ಎಂದು ಪ್ರಶಂಸೆ ಪಡೆಯುತ್ತಾರೆ.

ಅಂತರಾಶ್ಟ್ರೀಯ ಬೌಲರ್ ಆಗಿ ಬೆಳೆದ ಪ್ರಸಾದ್

Venkatesh Prasad and Javagal Srinath,

1994/95 ರಿಂದ ತಮ್ಮ ಬಹುಕಾಲದ ಗೆಳೆಯ ಶ್ರೀನಾತ್ ರೊಟ್ಟಿಗೆ ಬಾರತದ ವೇಗದ ಜೋಡಿಯಾಗಿ ಪ್ರಸಾದ್ ಹೊಸ ಚೆಂಡನ್ನು ಹಂಚಿಕೊಂಡರು. ಒಂದೆಡೆಯಿಂದ ಶ್ರೀನಾತ್ ತಮ್ಮ ಅಸಾಮಾನ್ಯ ವೇಗದಿಂದ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದರೆ ಇನ್ನೊಂದೆಡೆಯಿಂದ ಪ್ರಸಾದ್ ತಮ್ಮ ಕರಾರುವಾಕ್ ಬೌಲಿಂಗ್ ನಿಂದ ಬ್ಯಾಟ್ಸ್ಮನ್ ಗಳಿಗೆ ಸವಾಲು ಒಡ್ಡುತ್ತಿದ್ದರು. ಇವರಿಬ್ಬರ ಜೋಡಿ ಬಾರತಕ್ಕೆ ಹಲವಾರು ಪಂದ್ಯಗಳನ್ನು ಗೆಲ್ಲಿಸುವಲ್ಲಿ ನಿರ‍್ಣಾಯಕ ಪಾತ್ರ ವಹಿಸಿತು. 1995 ರ ವೇಳೆಗೆ ಬಾರತದ ಒಂದು ದಿನ ತಂಡದ ಕಾಯಮ್ ಸದಸ್ಯರಾದ ಪ್ರಸಾದ್ ತಮ್ಮ ವ್ರುತ್ತಿ ಬದುಕಿನಲ್ಲಿ ಎರಡು ವಿಶ್ವಕಪ್ ಗಳನ್ನು (1996, 99) ಆಡುತ್ತಾರೆ. ಬೆಂಗಳೂರಿನಲ್ಲಿ ಪಾಕಿಸ್ತಾನದ ಎದುರು ನಡೆದ ವಿಶ್ವಕಪ್ ಕ್ವಾರ‍್ಟರ್ ಪೈನಲ್‌ ಪಂದ್ಯದಲ್ಲಿ ಒಂದು ಬೌಂಡರಿ ಬಾರಿಸಿ, ಇನ್ನೊಮ್ಮೆ ಅದೇ ದಿಕ್ಕಿನಲ್ಲಿ ಬೌಂಡರಿ ಬಾರಿಸುತ್ತೇನೆ ಎಂದು ಕಿಚಾಯಿಸಿದ ಅಮಿರ್ ಸೊಹೈಲ್ ರ ಸೊಕ್ಕಿಗೆ ಮರು ಚೆಂಡಿನಲ್ಲೇ ಕ್ಲೀನ್ ಬೌಲ್ಡ್ ಮಾಡಿ ಡ್ರೆಸ್ಸಿಂಗ್ ರೂಮ್ ದಿಕ್ಕು ತೋರಿಸಿದ್ದು ಪ್ರಸಾದ್ ರ ಕ್ರಿಕೆಟ್ ಬದುಕಿನ ಮರೆಯಲಾಗದ ಕ್ಶಣ ಎಂದೇ ಹೇಳಬೇಕು. ಆ ವೇಳೆ ಚಿನ್ನಸ್ವಾಮಿ ಅಂಗಳದಲ್ಲಿ ನೆರೆದಿದ್ದ ತವರಿನ ಪ್ರೇಕ್ಶಕರ ಹರ‍್ಶೋದ್ಗಾರ ಮುಗಿಲು ಮುಟ್ಟಿತ್ತು. ಪ್ರಸಾದ್ ರ (3/45) ಪ್ರದರ‍್ಶನ ಬಾರತಕ್ಕೆ ಗೆಲುವು ದಕ್ಕಿಸಿಕೊಟ್ಟಿತು. ಆ ಬಳಿಕ 1999 ರ ವಿಶ್ವಕಪ್ ನಲ್ಲೂ ಪ್ರಸಾದ್ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಳುವಾಗುತ್ತಾರೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಬಾರತ ಸಾಂಪ್ರದಾಯಿಕ ಎದುರಾಳಿ ಪಾಕ್‌ಗೆ 228 ರನ್ ಗಳ ಸಾದಾರಣ ಗುರಿ ನೀಡಿರುತ್ತದೆ. ಬಲಾಡ್ಯ ಬ್ಯಾಟಿಂಗ್ ಹೊಂದಿದ್ದ ಪಾಕಿಸ್ತಾನದ ಎದುರು ಗೆಲ್ಲುವುದು ಕಶ್ಟಸಾದ್ಯವಾಗಿತ್ತು. ಆದರೆ ತಮ್ಮ ಸೊಗಸಾದ ಸ್ವಿಂಗ್ ದಾಳಿಯಿಂದ (5/27) ಪಾಕಿಸ್ತಾನವನ್ನು ಕಟ್ಟಿ ಹಾಕಿ ಪ್ರಸಾದ್ ಬಾರತದ ಗೆಲುವಿನ ರೂವಾರಿಯಾಗುತ್ತಾರೆ. ಒಂದು ದಿನದ ಕ್ರಿಕೆಟ್ ನಲ್ಲಿ ಇದು ಅವರ ಶ್ರೇಶ್ಟ ಸಾದನೆಯೂ ಹೌದು. ಬಿಳಿ ಚೆಂಡಿನಿಂದ ತಮ್ಮ ಕಟರ್ ಗಳ ಮೂಲಕ ಸದಾ ವಿಕೆಟ್ ನಿಂದ ವಿಕೆಟ್ ಗೆ ಕಟ್ಟಿ ಹಾಕುವಂತ ಲೈನ್ ಹಾಗೂ ಲೆಂಗ್ತ್ ಬೌಲಿಂಗ್ ಮಾಡುತ್ತಿದ್ದ ಪ್ರಸಾದ್ ಹೆಚ್ಚು ರನ್ ನೀಡದ ಬರವಸೆಯ ಬೌಲರ್ ಆಗಿ, ಒಂದು ದಿನದ ಅಂತರಾಶ್ಟ್ರೀಯಕ್ರಿಕೆಟ್ ನಲ್ಲಿ ತಮ್ಮದೇ ವಿಶಿಶ್ಟ ಚಾಪು ಮೂಡಿಸಿ ಇತರರಿಗೆ ಸರಿಸಮಾನವಾಗಿ ಬೆಳೆಯುತ್ತಾರೆ.

ಟೆಸ್ಟ್ ಕ್ರಿಕೆಟ್ ಬದುಕು

1996 ರಲ್ಲಿ ಬರ‍್ಮಿಂಗ್‌ಹ್ಯಾಮ್ ನಲ್ಲಿ ಇಂಗ್ಲೆಂಡ್ ಎದುರು ಪ್ರಸಾದ್ ತಮ್ಮ ಚೊಚ್ಚಲ ಟೆಸ್ಟ್ ಆಡುತ್ತಾರೆ. ಆಗಲೇ ಎರಡು ವರ‍್ಶಗಳ ಅಂತರಾಶ್ಟ್ರೀಯ ಕ್ರಿಕೆಟ್ ನ ಅನುಬವ ಹೊಂದಿದ್ದ ಅವರು ಟೆಸ್ಟ್ ಪಂದ್ಯಕ್ಕೂ ಒಡನೆ ಹೊಂದಿಕೊಂಡು ಮೊದಲ ಪಂದ್ಯದಲ್ಲೇ (4/71; 2/50) ಗಮನ ಸೆಳೆಯುತ್ತಾರೆ. ನಂತರ ಲಾರ‍್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ (5/76; 2/54) ಪ್ರದರ‍್ಶನದಿಂದ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಸಾದನೆ ಮಾಡಿ ಲಾರ‍್ಡ್ಸ್ ನ ಹಾನರ‍್ಸ್ ಬೋರ‍್ಡ್ ನಲ್ಲಿ ತಮ್ಮ ಹೆಸರು ರಾರಾಜಿಸುವಂತೆ ಮಾಡುತ್ತಾರೆ. 1991 ರಿಂದ ಟೆಸ್ಟ್ ಆಡುತ್ತಿದ್ದ ಶ್ರೀನಾತ್ ರಿಗೂ ಮುನ್ನ ಪ್ರಸಾದ್ 5 ವಿಕೆಟ್ ಪಡೆದು ದಾಕಲೆ ಮಾಡಿದ್ದು ಅವರ ಅಳವಿಗೆ ಎತ್ತುಗೆ ಎಂದೇ ಹೇಳಬೇಕು. ಮೊದಲ ಟೆಸ್ಟ್ ಸರಣಿಯಲ್ಲಿ ಒಟ್ಟು 15 ವಿಕೆಟ್ ಪಡೆದು ಅವರು ಬಾರತದ ಶ್ರೇಶ್ಟ ಬೌಲರ್ ಆಗಿ ಹೊರಹೊಮ್ಮುತ್ತಾರೆ. ಆ ಬಳಿಕ ದಕ್ಶಿಣ ಆಪ್ರಿಕಾ ಎದುರು ಡರ‍್ಬನ್ ಟೆಸ್ಟ್ ನಲ್ಲಿ (5/60; 5/93) ಪ್ರದರ‍್ಶನದಿಂದ ಪಂದ್ಯವೊಂದರಲ್ಲಿ ಮೊದಲ ಬಾರಿ ಹತ್ತು ವಿಕೆಟ್ ಗಳ ಸಾದನೆ ಮಾಡುತ್ತಾರೆ. 1997 ರಲ್ಲಿ ಬಾರ‍್ಬಡಾಸ್ ನಲ್ಲಿ ವಿಂಡೀಸ್ ಎದುರು ಕೂಡ ಪ್ರಸಾದ್ (5/82) ತಮ್ಮ ಪ್ರಾಬಲ್ಯ ಮೆರೆಯುತ್ತಾರೆ. ಪ್ರಸಾದ್ ರ (6/33) ಪ್ರದರ‍್ಶನದಿಂದಾಗಿ 1999 ರ ಪಾಕಿಸ್ತಾನದ ಐತಿಹಾಸಿಕ ಪ್ರವಾಸದ ವೇಳೆ ಚೆನ್ನೈ ಟೆಸ್ಟ್ ನಲ್ಲಿ ಕೈ ಮೀರಿ ಹೋಗುತ್ತಿದ್ದ ಪಂದ್ಯದಲ್ಲಿ ಬಾರತ ಮರಳುವಂತೆ ಮಾಡುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ಹಂತದಲ್ಲಿ 275/4 ಇದ್ದ ಪಾಕಿಸ್ತಾನ 286 ಕ್ಕೆ ನೆಲಕಚ್ಚುವಂತೆ ಮಾಡಿದ್ದು ಪ್ರಸಾದ್ ರ ರೋಚಕ ಎರಡನೇ ಸ್ಪೆಲ್. ಒಂದೂ ರನ್ ನೀಡದೆ 5 ವಿಕೆಟ್ ಪಡೆದ ಅವರ ಎರಡನೇ ಸ್ಪೆಲ್ ಕ್ರಿಕೆಟ್ ಇತಿಹಾಸದಲ್ಲಿ ದಾಕಲೆಯಾಗಿ ಇನ್ನೂ ಉಳಿದಿದೆ. ಆ ಬಳಿಕ 2001 ರಲ್ಲಿ ಶ್ರೀಲಂಕಾ ಎದುರು ವೇಗದ ಬೌಲರ್ ಗಳಿಗೆ ನೆರವಿಲ್ಲದ ನಿರ‍್ಜೀವ ಕ್ಯಾಂಡಿ ಪಿಚ್ ಮೇಲೆ ಅವರ (2/52; 5/72) ಸೊಗಸಾದ ಬೌಲಿಂಗ್ ಏಳು ವರ‍್ಶಗಳ ಬಳಿಕ ಬಾರತಕ್ಕೆ ವಿದೇಶದಲ್ಲಿ (ಬಾಂಗ್ಲಾದೇಶ ಹೊರತುಪಡಿಸಿ) ಮೊದಲ ಗೆಲುವು ದಕ್ಕಿಸಿ ಕೊಟ್ಟಿತು. ಕೆಂಪು ಚೆಂಡಿನಲ್ಲೂ ಪ್ರಸಾದ್ ತಮ್ಮ ಬೌಲಿಂಗ್ ನಿಂದ ಸಾಕಶ್ಟು ದಾಕಲೆ ಮಾಡಿ ಶ್ರೀನಾತ್ರಿಗೆ ಸರಿಯಾದ ಜೋಡಿಯಾಗಿ ಬೌಲಿಂಗ್ ನೊಗ ಹೊತ್ತರು.

2001 ರ ದಕ್ಶಿಣ ಆಪ್ರಿಕಾ ಪ್ರವಾಸ – ವ್ರುತ್ತಿ ಬದುಕಿನ ಕಟ್ಟ ಕಡೇ ಸರಣಿ

ಪ್ರಸಾದ್ ತಮ್ಮ ಉತ್ತುಂಗದಲ್ಲಿದ್ದಾಗಲೂ ಕೂಡ ಅವರಿಗೆ ಸಿಗಬೇಕಾದ ಮನ್ನಣೆ ಎಂದೂ ಸಿಗಲಿಲ್ಲ. ಎಶ್ಟೋ ಸಲ ತಂಡದ ಸೋಲಿಗೆ ಅವರನ್ನು ಹರಕೆಯ ಕುರಿ ಮಾಡಲಾಯಿತು. ನಿರಂತರವಾಗಿ ಒಳ್ಳೆ ಬೌಲಿಂಗ್ ಮಾಡುತ್ತಿರುವಾಗಲೂ ಅನೇಕ ಬಾರಿ ಯುವಕರಿಗೆ ಅವಕಾಶ ನೀಡುವ ಸೋಗಿನಲ್ಲೋ ಅತವಾ ಹೆಚ್ಚುವರಿ ಸ್ಪಿನ್ನರ್ ಆಡಿಸಬೇಕೆಂಬ ನೆಪದಿಂದಲೋ ಅವರನ್ನು ಸಾಕಶ್ಟು ಬಾರಿ ಆಡುವ ಹನ್ನೊಂದರಿಂದ ಕೈಬಿಡಲಾಗುತ್ತಿತ್ತು. ಇಂತಹ ಹಿನ್ನಡೆಗಳಿಂದಲೂ ಪ್ರಸಾದ್ ಎಂದೂ ಎದೆಗುಂದಲಿಲ್ಲ. ಬಾಲ್ ನಿಂದಲೇ ಉತ್ತರ ನೀಡುತ್ತಾ ತಂಡದಲ್ಲಿ ಮುಂದುವರೆದರು. 2001 ರಲ್ಲಿ ದಕ್ಶಿಣ ಆಪ್ರಿಕಾ ಪ್ರವಾಸದ ವೇಳೆ 31ರ ಹರೆಯದ ಪ್ರಸಾದ್ ರಿಗೆ ಕೇವಲ ಎರಡು ಒಂದು-ದಿನದ ಪಂದ್ಯಗಳಲ್ಲಿ ಆಡುವ ಅವಕಾಶ ನೀಡಲಾಯಿತು. ಜಹೀರ್ ಕಾನ್ ಹಾಗೂ ನೆಹ್ರಾ ರಂತಹ ಯುವಕರ ಬೆನ್ನಿಗೆ ನಿಂತಿದ್ದ ನಾಯಕ ಗಂಗೂಲಿ ಅವರ ನಿರ‍್ಲಕ್ಶೆ ಪ್ರಸಾದ್ ರ ಅಂತರಾಶ್ಟ್ರೀಯ ವ್ರುತ್ತಿ ಬದುಕಿಗೆ ತೆರೆ ಎಳೆಯಿತು. ಐತಿಹಾಸಿಕ ಕ್ಯಾಂಡಿ ಟೆಸ್ಟ್ ಗೆಲುವಿನ ರೂವಾರಿಗೆ ಆ ನಂತರ ದೊರಕಿದ್ದು ಒಂದೇ ಒಂದು ಟೆಸ್ಟ್ ಆಡುವ ಅವಕಾಶ ಎನ್ನುವುದು ದೊಡ್ಡ ದುರಂತ. ಕೊಲಂಬೋದಲ್ಲಿ ಬಾರತ ಸೋಲುಂಡರೂ ಪ್ರಸಾದ್ (3/101) ಸೈ ಎನಿಸಿಕೊಂಡರು. ದಕ್ಶಿಣ ಆಪ್ರಿಕಾದಲ್ಲಿ ಒಳ್ಳೆ ದಾಕಲೆಹೊಂದಿದ್ದ ಪ್ರಸಾದ್ ಲಯದಲ್ಲಿದ್ದರೂ ಗಂಗೂಲಿ ಮೊದಲೆರಡು ಟೆಸ್ಟ್ ಗಳಿಗೆ ಅವರಿಗೆ ಮಣೆ ಹಾಕುವುದಿಲ್ಲ. ಕಡೆಗೆ ಮೂರನೇ ಸೆಂಚೂರಿಯನ್ ಟೆಸ್ಟ್ ಗೆ ಅವರಿಗೆ ಅವಕಾಶ ಸಿಕ್ಕರೂ ಐಸಿಸಿ ಹಾಗೂ ಬಿಸಿಸಿಐ ತಿಕ್ಕಾಟದಿಂದ ಆ ಪಂದ್ಯ ಅನದಿಕ್ರುತ ಎಂದು ಗೋಶಿಸಲಾಗುತ್ತದೆ. ಹಾಗಾಗಿ ಕೊಲಂಬೋ ಟೆಸ್ಟ್ ವೆಂಕಟೇಶ್ ಪ್ರಸಾದ್ ರ ವ್ರುತ್ತಿ ಬದುಕಿನ ಕಟ್ಟಕಡೆಯ ಟೆಸ್ಟ್ ಆಗುತ್ತದೆ. ಏಳು ವರ‍್ಶಗಳ ಕಾಲ ಅಂತರಾಶ್ಟ್ರೀಯ ಕ್ರಿಕೆಟ್ ಆಡಿದ ಪ್ರಸಾದ್ 161 ಒಂದು ದಿನದ ಪಂದ್ಯಗಳಲ್ಲಿ 32 ರ ಸರಾಸರಿಯಲ್ಲಿ 196 ವಿಕೆಟ್ ಗಳು ಹಾಗೂ 33 ಟೆಸ್ಟ್ ಗಳಲ್ಲಿ 32 ರ ಸರಾಸರಿಯಲ್ಲಿ 96 ವಿಕೆಟ್ ಗಳನ್ನು ಪಡೆದು ಶ್ರೀನಾತ್ ಬಳಿಕ ಬಾರತದ ಅತ್ಯಂತ ಯಶಸ್ವಿ ವೇಗದ ಬೌಲರ್ ಎನಿಸಿಕೊಳ್ಳುತ್ತಾರೆ.

ಕರ‍್ನಾಟಕ ತಂಡಕ್ಕೆ ಪ್ರಸಾದ್ ಕೊಡುಗೆ

ಪ್ರಸಾದ್ ರಾಜ್ಯ ತಂಡಕ್ಕೆ 12 ವರ‍್ಶಗಳ ಕಾಲ ಆಡಿದ ದಿಗ್ಗಜ ಬೌಲರ್. ಕರ‍್ನಾಟಕ ತಂಡದೊಂದಿಗೆ ಆಟಗಾರನಾಗಿ ಒಂದು ರಣಜಿ ಟ್ರೋಪಿ (1995/96) ಗೆದ್ದರೆ, ಅವರ ನಾಯಕತ್ವದಲ್ಲಿ 1998/99 ರಲ್ಲಿ ಬಲಾಡ್ಯ ಬಾರತ ಇತರೆ ತಂಡದೆದುರು ಇರಾನಿ ಕಪ್ ಗೆದ್ದದ್ದು ವಿಶೇಶ. 2001 ರ ಬಳಿಕ ಎರಡು ವರ‍್ಶಗಳ ಕಾಲ ಬಾರತ ತಂಡಕ್ಕೆ ಮರಳುವ ಉದ್ದೇಶದಿಂದ ಪ್ರಸಾದ್ ದೇಸೀ ಕ್ರಿಕೆಟ್ ನಲ್ಲಿ ಕರ‍್ನಾಟಕದ ಪರ ನಿರಂತರವಾಗಿ ಒಳ್ಳೆ ಪ್ರದರ‍್ಶನ ನೀಡುತ್ತಿದ್ದರೂ ಅವರನ್ನು ಪರಿಗಣಿಸಲಾಗುವುದಿಲ್ಲ. ಕಡೆಗೆ 2005 ರಲ್ಲಿ 35 ರ ಹರೆಯದ ಪ್ರಸಾದ್ ಎಲ್ಲಾ ಬಗೆಯ ಕ್ರಿಕೆಟ್ ನಿಂದ ನಿವ್ರುತ್ತಿ ಗೋಶಿಸುತ್ತಾರೆ. ಕರ‍್ನಾಟಕದ ಪರ ಒಟ್ಟು 53 ಮೊದಲ ದರ‍್ಜೆ ಪಂದ್ಯಗಳನ್ನಾಡಿದ ಪ್ರಸಾದ್ 22 ರ ಸರಾಸರಿಯಲ್ಲಿ ಒಟ್ಟು175 ಪಡೆದಿದ್ದಾರೆ.

ಪ್ರಸಾದ್ ರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು

1996/97 ರ ಸಾಲಿನ ಸಿಯೆಟ್ ವರ‍್ಶದ ಅಂತರಾಶ್ಟ್ರೀಯ ಕ್ರಿಕೆಟರ್ ಪ್ರಶಸ್ತಿ ಪಡೆದದ್ದು ಪ್ರಸಾದ್ ರ ದೊಡ್ಡ ಹೆಗ್ಗಳಿಕೆ. ದಿಗ್ಗಜರಾದ ಗಾವ್ಕಸರ್, ಚಾಪೆಲ್, ಬಾರ‍್ಡರ್ ಹಾಗೂ ಕ್ಲೈವ್ ಲ್ಲಾಯ್ಡ್ ರನ್ನೊಳಗೊಂಡಿದ್ದ ಜ್ಯೂರಿ ಬಾರತದ ಪ್ರಸಾದ್ ರ ಪ್ರದರ‍್ಶನವನ್ನು ಗುರುತಿಸಿ ಆರಿಸಿದ್ದು ದೇಶಕ್ಕೆ ಗೌರವ ತಂದು ಕೊಟ್ಟಿತ್ತು. ಪೋಟಿಯಲ್ಲಿದ್ದ ಆಸ್ಟ್ರೇಲಿಯಾದ ಮೆಗ್ರಾ, ದಕ್ಶಿಣ ಆಪ್ರಿಕಾದ ಪೊಲಾಕ್ ಹಾಗೂ ಗೆಳೆಯ ಶ್ರೀನಾತ್ ರನ್ನು ಹಿಂದಿಕ್ಕಿ ಪ್ರಸಾದ್, ಈ ಪ್ರತಿಶ್ಟಿತ ಪ್ರಶಸ್ತಿ ಪಡೆದದ್ದು ಅವರ ವ್ರುತ್ತಿ ಬದುಕಿನ ಮರೆಯಲಾಗದ ಕ್ಶಣ. ನಂತರ 2000 ಇಸವಿಯಲ್ಲಿ ಬಾರತ ಸರ‍್ಕಾರ ಅವರ ಕೊಡುಗೆಯನ್ನು ಗುರುತಿಸಿ ಅರ‍್ಜುನ ಪ್ರಶಸ್ತಿ ನೀಡಿ ಗೌರವಿಸಿತು.

ನಿವ್ರುತ್ತಿ ನಂತರದ ಬದುಕು

ವೆಂಕಟೇಶ್ ಪ್ರಸಾದ್, Venkatesh Prasadಆಟಗಾರನಾಗಿ ಕ್ರಿಕೆಟ್ ಅಂಗಳದಿಂದ ದೂರ ಸರಿದ ನಂತರವೂ ಪ್ರಸಾದ್ ಕ್ರಿಕೆಟ್ ನೊಟ್ಟಿಗೆ ತಮ್ಮ ಒಡನಾಟ ಉಳಿಸಿಕೊಂಡಿದ್ದಾರೆ. ರೋಹಿತ್ ಶರ‍್ಮ, ಪೂಜಾರ ರಂತಹ ಆಟಗಾರರು ಪಾಲ್ಗೊಂಡ 2006 ರ ಕಿರಿಯರ ವಿಶ್ವಕಪ್ ಗೆ ಪ್ರಸಾದ್ ಮುಕ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು. ತಂಡ ಪೈನಲ್ ನಲ್ಲಿ ಸೋತರೂ ಈಗ ಅಂತರಾಶ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಆಟಗಾರರೆಲ್ಲಾ ಅವರ ಮಾರ‍್ಗದರ‍್ಶನವನ್ನು ಈಗಲೂ ನೆನೆಯುತ್ತಾರೆ. 2007 ರಲ್ಲಿ ಕೆಲ ಕಾಲ ಕರ‍್ನಾಟಕ ತಂಡದ ಕೋಚ್ ಆಗಿ ಆ ಬಳಿಕ 2007 ರಿಂದ 2009 ರ ತನಕ ಬಾರತ ತಂಡದ ಬೌಲಿಂಗ್ ಕೋಚ್ ಆಗಿ ದುಡಿದರು. 2013-15 ರ ತನಕ ಉತ್ತರ ಪ್ರದೇಶ ತಂಡದ ಕೋಚ್ ಕೂಡ ಆಗಿದ್ದರು. ಐಪಿಎಲ್ ನಲ್ಲೂ ಪ್ರಸಾದ್ ಬೆಂಗಳೂರು, ಪಂಜಾಬ್ ಹಾಗೂ ಚೆನ್ನೈ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಈಗ ಪ್ರಸ್ತುತ ಸ್ಟಾರ್ ಸ್ಪೋರ‍್ಟ್ಸ್ ಕನ್ನಡದಲ್ಲಿ ನೇರುಲಿಗರಾಗಿ(Commentator) ಕರ‍್ನಾಟಕದ ಹೆಮ್ಮೆಯ ಆಟಗಾರ ಪ್ರಸಾದ್ ಕನ್ನಡಿಗರಿಗೆ ಕನ್ನಡದಲ್ಲಿ ಕ್ರಿಕೆಟ್ ಅನ್ನು ಸ್ವಾರಸ್ಯಕರವಾಗಿ ಉಣಬಡಿಸುತ್ತಿದ್ದಾರೆ.

ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ಸುಮಾರು 300 ವಿಕೆಟ್ ಪಡೆದಿರುವ ಪ್ರಸಾದ್ ರಿಗೆ ಸಿಗಬೇಕಾದ ಗೌರವ ಸಿಗದೇ ಇರುವುದು ದಿಟ. ಆಗಿನ ಎಲ್ಲಾ ಬಲಿಶ್ಟ ತಂಡಗಳೆದುರು ತಮ್ಮ ಬೌಲಿಂಗ್ ಚಳಕದಿಂದ ಬಾರತಕ್ಕೆ ಎಶ್ಟೋ ಅವಿಸ್ಮರಣೀಯ ಗೆಲುವುಗಳನ್ನು ದಕ್ಕಿಸಿ ಕೊಟ್ಟ ಪ್ರಸಾದ್ ರನ್ನು ಮಾದ್ಯಮ ಹಾಗೂ ಕ್ರಿಕೆಟ್ ಪಂಡಿತರು ನೆನೆಯದೇ ಮರೆತ್ತಿದ್ದರೂ 90 ರ ದಶಕದಲ್ಲಿ ಕ್ರಿಕೆಟ್ ನೋಡಿದ ಅಬಿಮಾನಿಗಳು ಮಾತ್ರ ಅವರನ್ನು ಇಂದಿಗೂ ಗೌರವಿಸುತ್ತಾರೆ. ಕ್ರಿಕೆಟ್ ಅರಿವು ಇರುವವರ ದ್ರುಶ್ಟಿಯಲ್ಲಿ ಪ್ರಸಾದ್ ನಿಜಕ್ಕೂ ಒಬ್ಬ ದಿಗ್ಗಜ ಬೌಲರ್!

(ಚಿತ್ರ ಸೆಲೆ: twitter.com/ICC, reddit.com, flickr.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Vishal Dsouza says:

    wow… well very written….

ಅನಿಸಿಕೆ ಬರೆಯಿರಿ: