ಟೆಸ್ಟ್ ಕ್ರಿಕೆಟ್ ನ ಬವಿಶ್ಯ ತೂಗುಯ್ಯಾಲೆಯಲ್ಲಿ!

– ರಾಮಚಂದ್ರ ಮಹಾರುದ್ರಪ್ಪ.

ನಮ್ಮೆಲ್ಲರ ನೆಚ್ಚಿನ ಕ್ರಿಕೆಟ್ ಆಟ ಕಳೆದ ನಾಲ್ಕೈದು ದಶಕಗಳಲ್ಲಿ ಸಾಕಶ್ಟು ಮಾರ‍್ಪಾಡುಗಳನ್ನು ಕಂಡು ಅಬಿಮಾನಿಗಳನ್ನು ರಂಜಿಸುವುದರೊಟ್ಟಿಗೆ ಆಟಗಾರರನ್ನು ಹಾಗೂ ಕೆಲವು ಕ್ರಿಕೆಟ್ ಮಂಡಳಿಗಳನ್ನೂ ಶ್ರೀಮಂತವಾಗಿಸಿದೆ. ಯಾವುದೇ ಹೊರಾಂಗಣ ಆಟದಲ್ಲಿ ಇರದಶ್ಟು ವಿವಿದ ಅವತರಿಣಿಕೆಗಳು ಕ್ರಿಕೆಟ್ ನಲ್ಲಿ ಇರುವುದು ಅದರ ಬಲವೂ ಹೌದು ಹಾಗೂ ಕೆಲವೊಮ್ಮೆ ಬಲಹೀನತೆಯೂ ಹೌದು ಎನ್ನಬಹುದು. ಐವತ್ತು ಓವರ್ ಗಳ ಒಂದು ದಿನದ ಪಂದ್ಯಗಳು, ಟಿ-20 ಹಾಗೂ ಟಿ-10 ಮಾದರಿಯ ಪಂದ್ಯಗಳು ಕ್ರಿಕೆಟ್ ಅನ್ನು ಪ್ರಪಂಚದ ಮೂಲೆಮೂಲೆಗೆ ತಲುಪಿಸಿ ಆಟದ ಜನಪ್ರಿಯತೆಯನ್ನು ಹೆಚ್ಚಿಸಿರುವುದು ದಿಟವೇ ಆದರೂ, ಈಗ ನಿಯಮಿತ ಓವರ್ ಗಳ ಪಂದ್ಯಗಳ ಪ್ರವಾಹಕ್ಕೆ ಸಿಲುಕಿ, ಕಳೆದ ಹತ್ತು-ಹದಿನೈದು ವರ‍್ಶಗಳಿಂದ ಸಾಂಪ್ರದಾಯಿಕ ಟೆಸ್ಟ್ ಪಂದ್ಯಗಳು ಸೊರಗಿರುವುದು ಸ್ಪಶ್ಟವಾಗಿ ಗೋಚರಿಸುತ್ತದೆ. ಐ.ಸಿ.ಸಿ ಇಂದ ಟೆಸ್ಟ್ ಮಾನ್ಯತೆ ಪಡೆದು ತಮ್ಮ ದೇಶ ಟೆಸ್ಟ್ ಆಡುವ ಕೆಲವೇ ಕೆಲವು ದೇಶಗಳ ಪೈಕಿ ಒಂದು ಎಂದು ಕ್ರಿಕೆಟ್ ಮಂಡಳಿಗಳು ಹೆಮ್ಮೆ ಪಡುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ಟೆಸ್ಟ್ ಕ್ರಿಕೆಟ್ ಬಗೆಗೆ ನಂಬಲಾರದಂತಹ ಮಾರ‍್ಪಾಡುಗಳು ಅಬಿಮಾನಿಗಳ ಮನಸ್ತಿತಿಯಲ್ಲೂ, ಕ್ರಿಕೆಟ್ ಮಂಡಳಿಗಳ ಕಾರ‍್ಯವೈಕರಿಯಲ್ಲೂ ಆಗಿರುವುದು ಟೆಸ್ಟ್ ಪಂದ್ಯಗಳನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇತ್ತೀಚಿಗೆ ಬಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳನ್ನು ಹೊರತು ಪಡಿಸಿದರೆ ಇನ್ನುಳಿದ ದೇಶಗಳು ಆಸ್ತೆಯಿಂದ ಟೆಸ್ಟ್ ಪಂದ್ಯಗಳನ್ನು ಆಯೋಜಿಸದೆ ಹೆಸರಿಗಶ್ಟೇ ವರ‍್ಶಕ್ಕಿಶ್ಟು ಎಂದು ಬೆರಳೆಣಿಕೆಯಶ್ಟು ಪಂದ್ಯಗಳನ್ನು ತಮ್ಮ ತವರಿನಲ್ಲಿ ಆಡಿಸುತ್ತಿರುವುದು ಅತೀ ಬೇಸರದ ಸಂಗತಿ. ಇದಕ್ಕೆ ಬಲವಾದ ಕಾರಣಗಳು ಇವೆ ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಕವಾದ ಅಂಶ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪ್ರತಿಶ್ಟಿತ ಆಶೆಸ್ ಟೆಸ್ಟ್ ಸರಣಿಗೆ ಶತಮಾನಗಳ ಇತಿಹಾಸ ಇದ್ದು, ಪ್ರತೀ ಬಾರಿಯೂ ತಂಡಗಳು ಕಣಕ್ಕಿಳಿದಾಗ ಈ ಎರಡೂ ದೇಶದ ಕ್ರಿಕೆಟ್ ಮಂಡಳಿಗಳ ಕಿಸೆಯನ್ನು ತುಂಬಿ, ಆಶೆಸ್ ಲಾಬದಾಯಕ ಸರಣಿಯಾಗಿ ಪರಿಣಮಿಸಿದೆ. ಇದರೊಟ್ಟಿಗೆ ಟೆಸ್ಟ್ ಪಂದ್ಯಗಳನ್ನು ನೋಡಲು ಹಾತೊರೆಯುವ ಸಹಸ್ರಾರು ಅಬಿಮಾನಿಗಳು ಅಲ್ಲಿರುವುದರಿಂದ ಈಗಲೂ ಪ್ರತಿಯೊಂದು ಟೆಸ್ಟ್ ಪಂದ್ಯಕ್ಕೂ ಕ್ರೀಡಾಂಗಣ ಕಿಕ್ಕಿರಿದು ತುಂಬಿರುತ್ತದೆ. ಇದರ ಶ್ರೇಯ ಕಂಡಿತವಾಗಿಯೂ ಎರಡೂ ದೇಶದ ಕ್ರಿಕೆಟ್ ಮಂಡಳಿಗಳಿಗೆ ಸಲ್ಲಬೇಕು. ಇನ್ನು ಐಪಿಎಲ್ ನಿಂದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ತೆಯಾಗಿ ಬೆಳೆದಿರುವ ಬಾರತಕ್ಕೆ ಟೆಸ್ಟ್ ಪಂದ್ಯಗಳಿಂದ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದ ಲಾಬ ದೊರೆಯದಿದ್ದರೂ ಟೆಸ್ಟ್ ಗಳನ್ನು ತಪ್ಪದೇ ಮುಂದುವರಿಸಿಕೊಂಡು ಹೋಗುವಶ್ಟು ಕಸುವು ಇದೆ. ಆದರೆ ದಕ್ಶಿಣ ಆಪ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಪಾಕಿಸ್ತಾನ, ನ್ಯೂಜಿಲಾಂಡ್ ಮತ್ತು ಬಾಂಗ್ಲಾದೇಶದ ಪರಿಸ್ತಿತಿ ಇದಕ್ಕೆ ತೀರಾ ಬಿನ್ನವಾಗಿದೆ. ಈ ಮಂಡಳಿಗಳು ಟಿ.ವಿ ಪ್ರಸಾರದ ಹಕ್ಕುಗಳು, ಟಿಕೆಟ್ ಮಾರಾಟ ಹಾಗೂ ಪ್ರಾಯೋಜಕರಿಂದ ಹಣ ಗಳಿಸಲು ಒಂದು ದಿನದ ಪಂದ್ಯಗಳು ಅತವಾ ಟಿ-20 ಪಂದ್ಯಗಳ ಮೊರೆ ಹೋಗದೆ ವಿದಿಯಿಲ್ಲ. ಈ ದೇಶಗಳಲ್ಲಿ ಜರುಗುವ ಟೆಸ್ಟ್ ಗಳು ಎಶ್ಟೇ ರೋಚಕತೆಯಿಂದ ಕೂಡಿದ್ದರೂ ಕ್ರೀಡಾಂಗಣಗಳು ಶೇ 25 ರಶ್ಟೂ ಬರ‍್ತಿಯಾಗದೆ ಇರುವುದು ಈ ಸಾಂಪ್ರದಾಯಿಕ ಮಾದರಿಯ ಪಂದ್ಯಗಳ ಬವಿಶ್ಯಕ್ಕೆ ಸವಾಲೊಡ್ದುತ್ತಿದೆ.

ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸಿದ ದಕ್ಶಿಣ ಆಪ್ರಿಕಾ ನಡೆ

2024ರ ಪೆಬ್ರವರಿಯಲ್ಲಿ ಎರಡು ಟೆಸ್ಟ್ ಗಳ ಸರಣಿಗೆ ನ್ಯೂಜಿಲಾಂಡ್ ಗೆ ಪ್ರವಾಸ ಬೆಳೆಸಿದ ದಕ್ಶಿಣ ಆಪ್ರಿಕಾ ತಂಡವು ಕಳೆದ ತಿಂಗಳು ಪ್ರಕಟಗೊಂಡಾಗ ಕ್ರಿಕೆಟ್ ವಲಯ ತೀವ್ರ ಚರ‍್ಚೆಯಲ್ಲಿ ಮುಳುಗಿತು. ಅದಕ್ಕೆ ಕಾರಣ; 14 ಮಂದಿಯ ಪ್ರವಾಸಿ ತಂಡದಲ್ಲಿ 7 ಮಂದಿ ಇನ್ನೂ ಟೆಸ್ಟ್ ಪಾದಾರ‍್ಪಣೆ ಮಾಡದ ಹೊಸ ಆಟಗಾರರಿದ್ದದ್ದು. ಹಾಗೂ ತಂಡದ ನಾಯಕ ನೀಲ್ ಬ್ರಾಂಡ್ ಕೂಡ ಇನ್ನೂ ಟೆಸ್ಟ್ ಅನುಬವ ಇಲ್ಲದ ಆಟಗಾರ ಎಂಬುದು ಸೋಜಿಗದ ಸಂಗತಿಯಾಗಿತ್ತು. ಮಂಡಳಿಯ ಈ ದ್ರುಡ ತೀರ‍್ಮಾನದ ಪರ-ವಿರೋದ ವಾದಗಳು ಒಂದೆಡೆಯಾದರೆ, ಈ ನಡೆಯಿಂದ ಟೆಸ್ಟ್ ಗಳು ಅಮುಕ್ಯವೆಂದು ಸಾರಾಸಗಟಾಗಿ ದಕ್ಶಿಣ ಆಪ್ರಿಕಾ ತಳ್ಳಿಹಾಕುತ್ತಿದೆ ಎಂಬ ಆರೋಪಗಳು ಹಲವು ಮಾಜಿ ದಿಗ್ಗಜ ಆಟಗಾರರಿಂದ ಕೇಳಿ ಬಂದವು. ತಮ್ಮ ದೇಶದ ಪ್ರಮುಕ ಆಟಗಾರರು ತವರಿನಲ್ಲಿ ನಡೆಯಲಿರುವ ತಮ್ಮ ಟಿ-20 ಲೀಗ್ ನಲ್ಲಿ ಆಡಲೇಬೇಕಾದ್ದರಿಂದ ದಕ್ಶಿಣ ಆಪ್ರಿಕಾ ತನ್ನ ಎರಡನೇ ದರ‍್ಜೆ ತಂಡವನ್ನು ಟೆಸ್ಟ್ ತಂಡವನ್ನಾಗಿ ಗೋಶಿಸಿದ್ದು ನ್ಯೂಜಿಲಾಂಡ್ ತಂಡಕ್ಕೆ ಹಾಗೂ ಸಾಂಪ್ರದಾಯಿಕ ಕ್ರಿಕೆಟ್ ಗೆ ಬಗೆದ ದ್ರೋಹ ಹಾಗೂ ಅವಮಾನ ಎಂಬುದು ಕ್ರಿಕೆಟ್ ನ ಸಾಂಪ್ರಾದಾಯಿಕವಾದಿಗಳ ಅನಿಸಿಕೆಯಾಗಿದೆ. ಕಳೆದ ವರ‍್ಶ ಕೂಡ ದಕ್ಶಿಣ ಆಪ್ರಿಕಾ 2023 ರ ವಿಶ್ವಕಪ್ ನ ನೇರ ಅರ‍್ಹತೆಗೆ ತೊಂದರೆಯಾದರೂ ಅಡ್ಡಿ ಇಲ್ಲ ಎಂದು ಆಸ್ಟ್ರೇಲಿಯಾ ಎದುರಿನ ಒಂದು-ದಿನದ ಪಂದ್ಯಗಳ ಸರಣಿಯನ್ನು ರದ್ದುಗೊಳಿಸಿ ತಮ್ಮದೇ ಆದ “ಎಸ್.ಎ-20” ಲೀಗ್ ಗೆ ಚಾಲನೆ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಕೇವಲ ಎರಡೇ ದಶಕಗಳ ಹಿಂದೆ ಅಂತರಾಶ್ಟ್ರೀಯ ಕ್ರಿಕೆಟ್ ಗೆ ಹಿಂಡು-ಹಿಂಡಾಗಿ ದಿಗ್ಗಜರನ್ನು ಕೊಡುಗೆಯಾಗಿ ನೀಡುತ್ತಿದ್ದ ದಕ್ಶಿಣ ಆಪ್ರಿಕಾ ಇಂದು ಅಂತರಾಶ್ಟ್ರೀಯ ಪಂದ್ಯಗಳನ್ನೇ ದಿಕ್ಕರಿಸುವ ಮಟ್ಟಕ್ಕೆ ತಲುಪಿರುವುದು ಅವರ ಮಂಡಳಿಯ ಆರ‍್ತಿಕ ತುರ‍್ತು-ಪರಿಸ್ತಿತಿಯನ್ನು ತೋರಿಸುತ್ತದೆ. ತಮ್ಮ ಟಿ-20 ಲೀಗ್ ನಿಂದ ಹಣದ ಹೊಳೆ ಹರಿಯಲಿದ್ದು, ಇದರಿಂದ ಗಳಿಸಿದ ಹಣದಿಂದ ನಮ್ಮ ಮೊದಲ ದರ‍್ಜೆ ಕ್ರಿಕೆಟ್ ಮತ್ತು ಎಲ್ಲಾ ಮಾದರಿಯ ಆಟಗಾರರ ಬದುಕನ್ನು ಸುದಾರಿಸಲು ಅವಕಾಶವಿದೆ ಎಂಬುದು ಅವರ ಕ್ರಿಕೆಟ್ ಮಂಡಳಿಯ ಆದಿಕಾರದ ಚುಕ್ಕಾಣಿ ಹಿಡಿದವರ ಅಂಬೋಣ. ಅವರ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. ಪ್ರಬಲ-ಮೂರು ಎಂಬ ಹಣೆಪಟ್ಟಿ ಹೊತ್ತಿರುವ ಬಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಹೊರತಾಗಿ ಬೇರೆಲ್ಲಾ ದೇಶದ ಕ್ರಿಕೆಟ್ ಮಂಡಳಿಗಳ ಆರ‍್ತಿಕ ಪರಿಸ್ತಿತಿ ದಕ್ಶಿಣ ಆಪ್ರಿಕಾಕ್ಕಿಂತ ಹೆಚ್ಚೇನೂ ಬಿನ್ನವಾಗಿಲ್ಲ ಎಂಬುದನ್ನು ಗಣನೆಗೆ ತಗೆದುಕೊಳ್ಳಲೇಬೇಕಾಂದಂತಹ ತುರ‍್ತು ಈಗ ಐ.ಸಿ.ಸಿ ಮುಂದಿದೆ.

ಟೆಸ್ಟ್ ಕ್ರಿಕೆಟ್ ಆರೋಗ್ಯ ಸುದಾರಿಸಲು ಐ.ಸಿ.ಸಿಯ ಹರಸಾಹಸ!

ಸಾರ‍್ವತ್ರಿಕವಾಗಿ ಟೆಸ್ಟ್ ಪಂದ್ಯಗಳ ಬಗೆಗೆ ಕುಂದುತ್ತಿರುವ ಆಸಕ್ತಿಯನ್ನು ಮನಗಂಡು ಐ.ಸಿ.ಸಿ ಹೆಚ್ಚು ಅಬಿಮಾನಿಗಳನ್ನು ಟೆಸ್ಟ್ ಗಳತ್ತ ಸೆಳೆಯಲು ಗುಲಾಬಿ ಚೆಂಡಿನ ಹೊನಲು-ಬೆಳಕಿನ ಟೆಸ್ಟ್ ಗಳಿಗೆ 2015 ರಲ್ಲಿ ಪ್ರಾಯೋಗಿಕವಾಗಿ ಅಸ್ತು ಎಂದಿತು. ಬಳಿಕ 2019 ರಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆ ಮಣೆ ಹಾಕಿ ಟೆಸ್ಟ್ ಗಳನ್ನು ಹೆಚ್ಚು ಸ್ಪರ‍್ದಾತ್ಮಕವಾಗಿ ಮಾಡಲು ಪಣ ತೊಟ್ಟಿದೆ. ಒಂದು ರುತುವಿನಲ್ಲಿ ಎಲ್ಲಾ ತಂಡಗಳಿಗೂ ಸಮಾನ ಪಂದ್ಯಗಳು ಸಿಗದೇ ಇರುವುದು ಈ ಪ್ರಯೋಗದ ದೊಡ್ಡ ಕುಂದೇ ಆದರೂ ಪ್ರತೀ ಟೆಸ್ಟ್ ಗೆಲುವಿಗೂ ಚಾಂಪಿಯನ್ಶಿಪ್ ನ ಅಂಕಗಳು ಸಿಗುವುದರಿಂದ ಯಾವ ಪಂದ್ಯವನ್ನೂ ಕೇವಲ ಔಪಚಾರಿಕ ಎಂದು ತಂಡಗಳು ಪರಿಗಣಿಸುವಂತಿಲ್ಲ ಎಂಬುದು ಸಮಾದಾನಕರ ವಿಶಯ. ಇವೆಲ್ಲದರ ಹೊರತಾಗಿ ನಾಲ್ಕೈದು ದಿನ ಒಳ್ಳೆ ಆಟಕ್ಕೆ ಅವಕಾಶವಿರುವಂತಹ ಪಿಚ್ ಗಳ ಅಗತ್ಯತೆಯನ್ನರಿತು ಐ.ಸಿ.ಸಿ ಪಿಚ್ ಗಳಿಗೂ ಮಾನದಂಡವನ್ನು ಗುರುತಿಸಿ ಪ್ರತೀ ಟೆಸ್ಟ್ ಬಳಿಕ ಆ ಪಿಚ್ ನ ಗುಣಮಟ್ಟವನ್ನು ಪರಿಗಣಿಸಿ ಅಂಕಗಳನ್ನು ನೀಡುತ್ತಿದೆ. ಇಲ್ಲಿ ಪಿಚ್ ಗುಣಮಟ್ಟದಲ್ಲಿ ಕುಂದು ಕಂಡು ಬಂದಲ್ಲಿ ಆ ಅಂಗಳದಲ್ಲಿ ಎರಡು ವರ‍್ಶಗಳ ಟೆಸ್ಟ್ ನಡೆಯದಂತೆ ತಡೆಹಿಡಿದು, ಆ ಸಂಸ್ತೆಗೆ ದಂಡ ಕೂಡ ವಿದಿಸುವ ಕಟಿಣ ಕಾನೂನನ್ನು ಐ.ಸಿ.ಸಿ ಹುಟ್ಟುಹಾಕಿದೆ. ಇಂತಹ ಶತಾಯ-ಗತಾಯ ಪ್ರಯತ್ನಗಳ ಬಳಿಕವೂ ಟೆಸ್ಟ್ ಕ್ರಿಕೆಟ್ ಹೇಳಿಕೊಳ್ಳುವಂತಹ ಏಳಿಗೆಯನ್ನು ಕಂಡಿಲ್ಲವಾದರೂ ಐ.ಸಿ.ಸಿ ಟೆಸ್ಟ್ ಉಳಿವಿಗೆ ಸರಿಯಾದ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಡುತ್ತಿದೆ ಎಂಬುದನ್ನು ಶ್ಲಾಗಿಸಲೇಬೇಕು. “ಟೆಸ್ಟ್ ಕ್ರಿಕೆಟ್ ಪ್ರಪಂಚದ ಅತ್ಯಂತ ಶ್ರೇಶ್ಟ ಆಟ! ವರ‍್ಶಕ್ಕೆ ತಂಡಗಳು ಕನಿಶ್ಟ 10-15 ಟೆಸ್ಟ್ ಗಳನ್ನು ಆಡಿ ಕ್ರಿಕೆಟ್ ನ ಸಾಂಪ್ರದಾಯಿಕ ಅಬಿಮಾನಿಗಳನ್ನು ರಂಜಿಸಬೇಕು” ಎಂದೆಲ್ಲಾ ಈಗಲೂ ಹುಂಬತನದಿಂದ ಆಟದ ಸೊಗಸನ್ನು ಬಣ್ಣಿಸುವ ಮಂದಿಗೇನೂ ಕಮ್ಮಿ ಇಲ್ಲ. ಆದರೆ, ವಾಸ್ತವತೆಯ ಅರಿವು ನಮಗೆಲ್ಲರಿಗೂ ಆಗಬೇಕಿದೆ. ಲಾಬ ನೀಡದ ಯಾವ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಉಳಿಸಿಕೊಳ್ಳಲು ಆಗದು. ಟೆಸ್ಟ್ ಕ್ರಿಕೆಟ್ ಈಗ ಶೇ.80% ಕ್ರಿಕೆಟ್ ತಂಡಗಳಿಗೆ ನಶ್ಟವನ್ನು ಉಂಟುಮಾಡುತ್ತಿರುವ ಉತ್ಪನ್ನ ಎಂಬುದನ್ನು ಅರಿಯಬೇಕಿದೆ. ಈ ದೊಡ್ಡ ತೊಂದರೆಯನ್ನು ಬಗೆಹರಿಸಲು ಬಲಾಡ್ಯ ಬಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ ವಾರ‍್ಶಿಕ ವರಮಾನವನ್ನು ಎಲ್ಲಾ ತಂಡಗಳೊಟ್ಟಿಗೆ ಸಮನಾಗಿ ಹಂಚಿಕೊಂಡರೆ ಜಾಗತಿಕ ಕ್ರಿಕೆಟ್ ನ ಬಹುತೇಕ ಸಮಸ್ಯೆಗಳು ಪರಿಹಾರಗೊಂಡು ಎಲ್ಲಾ ದೇಶಗಳು ಟೆಸ್ಟ್ ಗಳಿಗೆ ಒತ್ತು ನೀಡಲು ಸಹಕಾರಿಯಾಗುತ್ತದೆ ಎಂದು ಹಲವು ಕ್ರಿಕೆಟ್ ಪಂಡಿತರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟೆಸ್ಟ್ ಪಂದ್ಯಗಳಿಗೆ ಆಟಗಾರರಿಗೆ ನೀಡುವ ಶುಲ್ಕವನ್ನು ನಾಲ್ಕೈದು ಪಟ್ಟು ಹೆಚ್ಚಿಸಿದರೆ ಟಿ-20 ಲೀಗ್ ಗಳ ಕಡೆ ಆಟಗಾರರು ವಾಲದಂತೆ ತಡೆಯಬಹುದು ಎಂಬ ಅಬಿಪ್ರಾಯಾಗಳೂ ಕೇಳಿಬರುತ್ತಿವೆ. ಬದಲಾವಣೆ ಜಗದ ನಿಯಮ ಎಂಬುದು ಸತ್ಯ! ಆದರೆ, ಕಾಲಕ್ಕನುಗುಣವಾಗಿ ಟೆಸ್ಟ್ ಕ್ರಿಕೆಟ್ ಜಾಗತಿಕ ಸವಾಲುಗಳನ್ನು ಹಿಮ್ಮೆಟ್ಟಿ ತನ್ನ ವರ‍್ಚಸ್ಸನ್ನು ಉಳಿಸಿಕೊಂಡು, ಕುಗ್ಗದೆ ಮುಂದೆ ಸಾಗಲಿ ಎಂಬುದೇ ಪ್ರತಿಯೊಬ್ಬ ಕ್ರಿಕೆಟ್ ಅಬಿಮಾನಿಯ ಹೆಬ್ಬಯಕೆ. ಈ ನಿಟ್ಟಿನಲ್ಲಿ ಐ.ಸಿ.ಸಿ ಯ ಪ್ರಯತ್ನಗಳು ಯಶಸ್ಸು ಕಾಣಲಿ, ಟೆಸ್ಟ್ ಪಂದ್ಯಗಳು ಉಳಿಯಲಿ ಎಂದು ಹರಸೋಣ!

(ಚಿತ್ರಸೆಲೆ: sportskeeda.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks