ಪಂಪ ಬಾರತ ಓದು – 4ನೆಯ ಕಂತು

– ಸಿ.ಪಿ.ನಾಗರಾಜ.

(ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ಮೊದಲನೆಯ ಆಶ್ವಾಸದ 88 ನೆಯ ಪದ್ಯದಿಂದ 98 ನೆಯ ಪದ್ಯದ ವರೆಗಿನ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)

ಪಾತ್ರಗಳು

ಕುಂತಿ – ಶೂರಸೇನ ರಾಜನ ಮಗಳು.
ಶೂರಸೇನ – ಯದುವಂಶದ ರಾಜ.
ಕುಂತಿಭೋಜ – ಕುಂತಳ ದೇಶದ ರಾಜ. ಕುಂತಿಯ ಸಾಕು ತಂದೆ. ಶೂರಸೇನನ ಸೋದರತ್ತೆಯ ಮಗನಾದ ಕುಂತಿಬೋಜನು ತನಗೆ ಮಕ್ಕಳಿಲ್ಲದ್ದರಿಂದ ಕುಂತಿಯು ಚಿಕ್ಕ ವಯಸ್ಸಿನ ಬಾಲೆಯಾಗಿದ್ದಾಗಲೇ ಅವಳನ್ನು ದತ್ತು ಮಗಳನ್ನಾಗಿ ಪಡೆದಿದ್ದನು.
ದುರ್ವಾಸ – ಹೆಸರುವಾಸಿಯಾಗಿದ್ದ ಒಬ್ಬ ಮುನಿ.
ಆದಿತ್ಯ – ಸೂರ‍್ಯ. ಗಗನದಲ್ಲಿ ಉರಿಯುವ ಸೂರ‍್ಯನನ್ನು ಒಬ್ಬ ದೇವತೆಯೆಂದು ಜನಸಮುದಾಯ ಕಲ್ಪಿಸಿಕೊಂಡಿದೆ.
ಗಂಗಾದೇವಿ – ಗಂಗಾ ನದಿ. ಗಂಗೆಯನ್ನು ದೇವತೆಗಳಲ್ಲಿ ಒಬ್ಬಳೆಂದು ಜನಸಮುದಾಯ ಕಲ್ಪಿಸಿಕೊಂಡಿದೆ.
ಸೂತ – ಕರ‍್ಣನ ಸಾಕು ತಂದೆ.
ರಾಧೆ – ಕರ‍್ಣನ ಸಾಕು ತಾಯಿ.
ವಸುಷೇಣ – ಕರ‍್ಣನು ಮಗುವಾಗಿದ್ದಾಗ ಇದ್ದ ಹೆಸರು. ಅನಂತರ ಅವನ ಕೀರ‍್ತಿ ಹಬ್ಬಿದಂತೆಲ್ಲಾ ಕರ‍್ಣ ಎಂಬ ಹೆಸರು ಬಂದಿತು.

====================================

ಕರ್ಣ ಜನನ ಪ್ರಸಂಗ

ಕುಂತಿ ನೆಗಳ್ತೆಯ ಪುರುಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್. ಕುಂತಿಭೋಜನ ಮನೆಯೊಳ್ ಮತ್ತಗಜಗಮನೆ ಯದುವಂಶೋತ್ತಮೆ ಎನೆ ಬಳೆಯುತ್ತ ಇರ್ಪನ್ನೆಗಮ್, ಆ ನಳಿನಾಸ್ಯೆಯ ಗೆಯ್ದ ಒಂದು ಶುಶ್ರೂಷೆ ಮನಂಗೊಳೆ ದುರ್ವಾಸನ್ ವಿಳಸಿತ ಮಂತ್ರಾಕ್ಷರಂಗಳನ್ ದಯೆಯಿಂದಮ್ ಕೊಟ್ಟನ್. ಅಂತು ಕೊಟ್ಟು…

ದುರ್ವಾಸ: ಅಯ್ದು ಮಂತ್ರಾಕ್ಷರಗಳನ್ ಆಹ್ವಾನಮ್ ಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳನ್ ಪಡೆವೆ.

(ಎಂದು ಬೆಸಸಿದೊಡೆ ಒಂದು ದಿವಸಮ್ ಕೊಂತಿ…)

ಕುಂತಿ: ಈ ಮುನಿಯ ವರದ ಮಹಿಮೆಯನ್ ಎನ್ನ ಇಚ್ಚೆಯೊಳ್ ಪುಚ್ಚವಣಮ್ ನೋಡುವೆನ್…

(ಎನುತ ಶಫರ ಉಚ್ಚಳಿತ ತರತ್ತರಂಗೆಗೆ ಗಂಗೆಗೆ ಅಂದು ಉಚ್ಚಸ್ತನಿ ಒರ್ವಳೆ ಬಂದಳ್. ಬಂದು

ಸುರನದಿಯ ನೀರೊಳ್ ಮಿಂದು ಇನನನ್ ನೋಡಿ…)

ಕುಂತಿ: ನಿನ್ನ ದೊರೆಯನೆ ಮಗನಕ್ಕೆ.

(ಎಂದು ಆಹ್ವಾನಮ್ ಗೆಯ್ಯಲೊಡಮ್ ಅಂದು ದಲ್ ದಶಶತಕಿರಣನ್ ಧರೆಗಿಳಿದನ್ . ಅಂತು ನಭೋಭಾಗದಿನ್ ಭೂಮಿಭಾಗಕ್ಕೆ ಇಳಿದು, ತನ್ನ ಮುಂದೆ ನಿಂದ ಅರವಿಂದ ಬಾಂಧವನನ್ ನೋಡಿ ನೋಡಿ, ಕೊಡಗೂಸುತನದ ಭಯದಿನ್ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲ್ ಒಳ್ಕುಡಿಯಲ್ ಒಡಗೂಡೆ ಗಂಗೆಯ ಮಡು ಕರೆಗೆ ಅಣ್ಮಿದುದು. ನಾಣ ಪೆಂಪೇನ್ ಪಿರಿದೋ. ಆಗಳ್ ಆದಿತ್ಯನ್ ಆಕೆಯ ಮನದ ಶಂಕೆಯುಮನ್ ನಡುಗುವ ಮೆಯ್ಯ ನಡುಕಮುಮಮ್ ಕಿಡೆನುಡಿದು ಇಂತು ಎಂದನ್…)

ಆದಿತ್ಯ: ತರುಣಿ, ಬರಿಸಿದ ಕಾರಣಮ್ ಆವುದೊ?

ಕುಂತಿ: ಮುನೀಶ್ವರನ ಮಂತ್ರಮ್ ಏದೊರೆಯೆಂದು ಆನ್ ಮರುಳಿಯೆನೆ ಆರಿದುಮ್ ಅರಿಯದೆ ಬರಿಸಿದೆನ್. ಇನ್ನು ಏಳಿಮ್.

ಆದಿತ್ಯ: ಅಂಬುಜಮುಖಿ, ಮುನ್ ಬೇಡಿದ ವರಮನ್ ಕುಡದೆ ಪೋಗಲ್ ಆಗದು. ಎನ್ನ ದೊರೆಯನ್ ಪುತ್ರನ್ ನಿನಗೆ ಅಕ್ಕೆ.

(ಎಂಬುದುಮ್ ಒದವಿದ ಗರ್ಭದೊಳ್ ಅಂಬುಜಮಿತ್ರನನೆ ಪೋಲ್ವ ಮಗನ್ ಒಗೆತಂದನ್. ತನ್ನೊಳ್ ಒಡವುಟ್ಟಿದ ಮಣಿಕುಂಡಲಮ್ ಒಡವುಟ್ಟಿದ ಸಹಜ ಕವಚಮ್ ಅಮರ್ದು ಇರೆ ತೊಡರ್ದು ಇರೆಯುಮ್ ಬಂದು ಆಗಳ್ ಆ ಬಾಲಿಕೆಯಾ ಆಕೆಯ ನಡುಕಮನ್ ಒಡರಿಸಿದನ್. ಅಂತು ನಡನಡ ನಡುಗಿ ಜಲದೇವತೆಗಳ್ ಅಪ್ಪೊಡಮ್ ಮನಮ್ ಕಾಣ್ಬರ್ ಎಂದು ನಿಧಾನಮನ್ ಈಡಾಡುವಂತೆ ಕೂಸನ್ ಗಂಗೆಯೊಳ್ ಈಡಾಡಿ ಬಂದಳ್. ಇತ್ತ ಗಂಗಾದೇವಿಯುಮ್ ಆ ಕೂಸನ್ ಮುಳುಗಲ್ ಈಯದೆ ತನ್ನ ತೆರೆಗಳ್ ಎಂಬ ನಳಿತೋಳ್ಗಳಿನ್ ಒಯ್ಯನೊಯ್ಯನೆ ತಳ್ಕೈಸಿ ತರೆ, ಗಂಗಾ ತೀರದೊಳ್ ಇರ್ಪ ಸೂತನ್ ಎಂಬನ್ ಕಂಡು…)

ಸೂತ: ಬಾಳ ದಿನೇಶ ಬಿಂಬದ ನೆಳಲ್ ಜಲದೊಳ್ ನೆಲಸಿತ್ತೊ…ಮೇಣ್…ಫಣೀಂದ್ರ ಆಳಯದಿಂದಮ್ ಉರ್ಚಿದ ಫಣಾಮಣಿ ಮಂಗಳ ರಶ್ಮಿಯೋ…ಎನ್ನ ಎರ್ದೆಯನ್ ಕರಮ್ ಮೇಳಿಸಿದಪ್ಪುದು..

(ಎಂದು ಬೊದಿಲ್ಲೆನೆ ನೀರೊಳ್ ಪಾಯ್ದು , ಆ ಬಾಳನನ್ ಆದಮ್ ಆದರದೆ ಕೊಂಡು, ನಿಧಿ ಕಂಡನಂತೆ ವೋಲ್ ಎಸೆದನ್. ಅಂತು ಕಂಡು ಮನಂಗೊಂಡು ಎತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನ್ ಇಟ್ಟೊಡೆ, ಆಕೆ ರಾಗಿಸಿ ಸುತನ ಸೂತಕಮನ್ ಕೊಂಡಾಡೆ , ಆ ಮಗನ ಅಂದಮ್ ಅಗುಳ್ದರಲಾ ಕುಳಿಯೊಳ್ ತೊಟ್ಟಗೆ ನಿಧಿ ಕಂಡಂತೆ ವಸುಧೆಗೆ ಅಸದಳಮ್ ಆಯ್ತು ಎಂದು ಲೋಗರ್ ಬಗೆದು ಇರೆ, ಆಗಳ್ ವಸುಷೇಣನ್ ಎಂಬ ಪೆಸರ್ ಆಯ್ತು. ಅಂತು ಆ ಲೋಕಾಂತಂಬರಮ್ ವಸುಷೇಣನ್ ಅಳವಿ ಬಳೆಯೆ , ಬಳೆದ ಎಸಕಮ್ ಅದು ಓರಂತೆ ಜನಂಗಳ ಕರ್ಣೋಪಾಂತದೊಳ್ ಒಗೆದು ಎಸೆಯೆ, ಕರ್ಣನ್ ಎಂಬನುಮ್ ಆದನ್.)

====================================

 

ಪದ ವಿಂಗಡಣೆ ಮತ್ತು ತಿರುಳು

ನೆಗಳ್ತೆ=ಕೀರ‍್ತಿ; ನೆಗಳ್ತೆಯ=ಕೀರ‍್ತಿಯನ್ನು ಹೊಂದಿರುವ; ಪುರುಷೋತ್ತಮ=ಕ್ರಿಶ್ಣ; ಪಿತಾಮಹ=ತಾತ; ಶೂರಂಗೆ=ಶೂರನಿಗೆ;

ಕುಂತಿ ನೆಗಳ್ತೆಯ ಪುರುಷೋತ್ತಮನ ಪಿತಾಮಹಂಗೆ ಶೂರಂಗೆ ಮಗಳ್=ಕುಂತಿಯು ಕೀರ‍್ತಿವಂತ ಕ್ರಿಶ್ಣನ ತಾತನಾದ ಶೂರಸೇನನ ಮಗಳು;

ಕುಂತಿಭೋಜ=ಕುಂತಳ ರಾಜ್ಯದ ಅರಸನಾದ ಬೋಜರಾಜ; ಶೂರಸೇನನ ಮಗಳಾದ ಕುಂತಿಯನ್ನು ಬೋಜರಾಜನು ದತ್ತು ಮಗಳನ್ನಾಗಿ ಪಡೆದಿದ್ದನು;

ಮನೆ+ಒಳ್; ಒಳ್=ಅಲ್ಲಿ; ಮತ್ತ=ಸೊಕ್ಕಿದ/ಮದವೇರಿದ; ಗಜ=ಆನೆ; ಗಮನ=ನಡಿಗೆ; ಮತ್ತಗಜಗಮನೆ=ಮದವೇರಿದ ಆನೆಯ ನಡಿಗೆಯಂತೆ ಹೆಜ್ಜೆಯನ್ನು ಇಡುವವಳು. ಈ ರೂಪಕವು ಕುಂತಿಯ ದೇಹದ ಎತ್ತರವಾದ ನಿಲುವನ್ನು ಮತ್ತು ಹರೆಯದ ಉತ್ಸಾಹವನ್ನು ಸೂಚಿಸುತ್ತದೆ; ಯದುವಂಶ+ಉತ್ತಮೆ+ಎನೆ; ಯದುವಂಶ=ಯದು ಕುಲದಲ್ಲಿ ಹುಟ್ಟಿ ಬೆಳೆದವರು; ಉತ್ತಮೆ=ಒಳ್ಳೆಯವಳು; ಎನೆ=ಎನ್ನುವಂತೆ;

ಕುಂತಿಭೋಜನ ಮನೆಯೊಳ್ ಮತ್ತಗಜಗಮನೆ ಯದುವಂಶೋತ್ತಮೆ ಎನೆ ಬಳೆಯುತ್ತ ಇರ್ಪನ್ನೆಗಮ್=ಕುಂತಿಬೋಜನ ಮನೆಯಲ್ಲಿ ಮದಿಸಿದ ಆನೆಯ ನಡಿಗೆಯನ್ನು ಹೋಲುವ ಯದುಕುಲದ ಒಳ್ಳೆಯ ಹೆಣ್ಣುಮಗಳಾದ ಕುಂತಿಯು ಬೆಳೆಯುತ್ತಿರುವಾಗ;

ನಳಿನ+ಆಸ್ಯೆ; ನಳಿನ=ತಾವರೆಯ ಹೂವು; ಆಸ್ಯ=ಮೊಗ;ನಳಿನಾಸ್ಯೆ=ತಾವರೆಯ ಮೊಗದವಳು/ಸುಂದರಿ; ಗೆಯ್=ಮಾಡು; ಗೆಯ್ದ=ಮಾಡಿದ; ಶುಶ್ರೂಷೆ=ಸೇವೆ; ಮನಂಗೊಳ್=ಮನವನ್+ಕೊಳ್; ಮನಂಗೊಳ್=ಮನಸ್ಸಿಗೆ ಹಿಡಿಸಲು/ಮನಸ್ಸಿಗೆ ಮೆಚ್ಚುಗೆಯಾಗಲು;

ಆ ನಳಿನಾಸ್ಯೆಯ ಗೆಯ್ದ ಒಂದು ಶುಶ್ರೂಷೆ ಮನಂಗೊಳೆ=ಕುಂತಳ ರಾಜ್ಯದ ಬೋಜರಾಜನ ಅರಮನೆಗೆ ದುರ‍್ವಾಸ ಮುನಿಯು ಬಂದು ಕೆಲದಿನಗಳ ಕಾಲ ತಂಗಿದ್ದಾಗ, ಮುನಿಯನ್ನು ಉಪಚರಿಸುವ ಹೊಣೆಯನ್ನು ಕುಂತಿಗೆ ವಹಿಸಲಾಗಿತ್ತು;ಆಗ ಕಮಲಮೊಗದ ಅಂದರೆ ಸುಂದರಿಯಾದ ಕುಂತಿಯು ಮಾಡಿದ ಒಂದು ಸೇವೆಯು ಮುನಿಯ ಮನಸ್ಸಿಗೆ ಮುದವನ್ನು ಉಂಟುಮಾಡಲು;

ವಿಳಸಿತ=ಮನೋಹರವಾದ; ಮಂತ್ರ+ಅಕ್ಷರಮ್+ಗಳ್+ಅನ್; ಮಂತ್ರ=ವ್ಯಕ್ತಿಯು ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ದೇವತೆಯ ಮಹಿಮೆಯನ್ನು ಕೊಂಡಾಡುವಾಗ ಉಚ್ಚರಿಸುವಂತಹ ನುಡಿ; ಅಕ್ಷರ=ಉಚ್ಚಾರಣೆಯ ದನಿ ಮತ್ತು ಬರಹದ ಲಿಪಿ; ಅನ್=ಅನ್ನು; ದಯೆ+ಇಂದ+ಅಮ್; ದಯೆ=ಕರುಣೆ;

ದುರ್ವಾಸನ್ ವಿಳಸಿತ ಮಂತ್ರಾಕ್ಷರಂಗಳನ್ ದಯೆಯಿಂದಮ್ ಕೊಟ್ಟನ್=ದುರ‍್ವಾಸ ಮುನಿಯು ಕುಂತಿಗೆ ಮನೋಹರವಾದ ಮಂತ್ರಗಳನ್ನು ಕರುಣಿಸಿದನು;

ಆಹ್ವಾನ=ಕರೆಯುವಿಕೆ; ಗೆಯ್ದು=ಮಾಡಿ; ಬಗೆ=ಮನಸ್ಸು; ಪೋಲ್=ಹೋಲಿಕೆ; ಪಡೆ=ಹೊಂದು; ಬೆಸಸು=ಹೇಳು;

ಅಯ್ದು ಮಂತ್ರಾಕ್ಷರಂಗಳನ್ ಆಹ್ವಾನಮ್ ಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳನ್ ಪಡೆವೆ ಎಂದು ಬೆಸಸಿದೊಡೆ=ನಾನು ನಿನಗೆ ಈಗ ಕೊಟ್ಟಿರುವ ಐದು ಮಂತ್ರಗಳನ್ನು ನಿನಗೆ ಬೇಕೆಂದಾಗ ಉಚ್ಚರಿಸುತ್ತ, ಆಯಾಯ ಮಂತ್ರದಲ್ಲಿನ ದೇವತೆಯನ್ನು ಕೋರಿಕೊಂಡರೆ, ನಿನ್ನ ಮನಸ್ಸು ಬಯಸುವಂತಹ ಮಕ್ಕಳನ್ನು ನೀನು ಪಡೆಯುತ್ತೀಯೆ ಎಂದು ದುರ‍್ವಾಸ ಮುನಿಯು ಹೇಳಲು;

ಒಂದು ದಿವಸಮ್ ಕೊಂತಿ=ಒಂದು ದಿನ ಕುಂತಿಯು;

ವರ=ಕೊಡುಗೆ; ಮಹಿಮೆ+ಅನ್; ಮಹಿಮೆ=ಬಲ/ಶಕ್ತಿ/ಹೆಚ್ಚುಗಾರಿಕೆ; ಅನ್=ಅನ್ನು; ಎನ್ನ=ನನ್ನ; ಇಚ್ಚೆ+ಒಳ್; ಇಚ್ಚೆ=ಆಸೆ/ಬಯಕೆ; ಪುಚ್ಚವಣ=ಒರೆಹಚ್ಚಿ ನೋಡುವುದು/ಪರಿಶೀಲಿಸುವುದು; ಎನುತಮ್=ಎಂದುಕೊಂಡು;

ಈ ಮುನಿಯ ವರದ ಮಹಿಮೆಯನ್ ಎನ್ನ ಇಚ್ಚೆಯೊಳ್ ಪುಚ್ಚವಣಮ್ ನೋಡುವೆನ್ ಎನುತಮ್ =ದುರ‍್ವಾಸ ಮುನಿಯು ಕೊಟ್ಟಿರುವ ಮಂತ್ರಗಳ ಶಕ್ತಿಯನ್ನು ನನ್ನ ಮನಸ್ಸಿಗೆ ತೋಚಿದ ರೀತಿಯಲ್ಲಿ ಒರೆಹಚ್ಚಿ ನೋಡುತ್ತೇನೆ ಎಂದು ತನ್ನಲ್ಲಿಯೇ ಹೇಳಿಕೊಂಡು;

ಉಚ್ಚ=ಉಬ್ಬಿದ/ಎತ್ತರವಾದ; ಸ್ತನ=ಮೊಲೆ; ಉಚ್ಚಸ್ತನಿ=ಉಬ್ಬಿದ ಎದೆಯುಳ್ಳವಳು/ತುಂಬು ಹರೆಯದ ಹೆಣ್ಣು; ಅಂದು=ಆ ದಿನ; ಶಫರ=ಮೀನು; ಉಚ್ಚಳಿಸು=ಮೇಲೆ ನೆಗೆ/ಚಿಮ್ಮು; ತರತ್ತರಂಗೆ=ನೀರಿನ ಅಲೆ ಅಲೆಗಳಿಂದ ಹೊಯ್ದಾಡುತ್ತಿರುವ ನದಿ; ಗಂಗೆ=ಗಂಗಾ ನದಿ; ಒರ್ವಳೆ=ಒಬ್ಬಳೆ;

ಶಫರ ಉಚ್ಚಳಿತ ತರತ್ತರಂಗೆಗೆ ಗಂಗೆಗೆ ಅಂದು ಉಚ್ಚಸ್ತನಿ ಒರ್ವಳೆ ಬಂದಳ್=ಹೊಯ್ದಾಡುತ್ತಿರುವ ನೀರಿನ ಅಲೆಗಳ ನಡುವೆ ಮೇಲಕ್ಕೆ ಚಿಮ್ಮುತ್ತಿರುವ ಮೀನುಗಳಿಂದ ಕಂಗೊಳಿಸುತ್ತಿರುವ ಗಂಗಾ ನದಿಯ ಬಳಿಗೆ ಅಂದು ಉಬ್ಬಿದ ಎದೆಯುಳ್ಳ ಕುಂತಿಯು ಒಬ್ಬಳೇ ಬಂದಳು;

ಸುರ=ದೇವತೆ; ಸುರನದಿ=ಗಂಗಾ ನದಿ; ನೀರ್+ಒಳ್; ಮೀ=ಸ್ನಾನ ಮಾಡು; ಇನನ್+ಅನ್; ಇನ=ಸೂರ‍್ಯ;

ಬಂದು ಸುರನದಿಯ ನೀರೊಳ್ ಮಿಂದು ಇನನನ್ ನೋಡಿ=ಗಂಗಾನದಿಯ ಬಳಿಗೆ ಬಂದು, ನದಿಯಲ್ಲಿ ಸ್ನಾನವನ್ನು ಮಾಡಿ ಸೂರ‍್ಯನನ್ನು ನೋಡುತ್ತಾ;

ದೊರೆ=ಸಮಾನ/ರೀತಿ; ನಿನ್ನ ದೊರೆಯನೆ=ನಿನ್ನಂತೆಯೇ ತೇಜಸ್ಸನ್ನುಳ್ಳ; ಮಗನ್+ಅಕ್ಕೆ; ಅಕ್ಕೆ=ಆಗಲಿ; ಗೆಯ್ಯಲ್+ಒಡಮ್; ಒಡಮ್=ಕೂಡಲೇ;

ನಿನ್ನ ದೊರೆಯನೆ ಮಗನಕ್ಕೆ ಎಂದು ಆಹ್ವಾನಮ್ ಗೆಯ್ಯಲೊಡಮ್=ನಿನ್ನಂತೆಯೇ ತೇಜಸ್ಸನ್ನುಳ್ಳ ಮಗನು ನನಗೆ ಹುಟ್ಟಲಿ ಎಂದು ಕೋರಿಕೊಳ್ಳುತ್ತಿದ್ದಂತೆಯೇ;

ಅಂದು=ಆಗ; ದಲ್=ನಿಜವಾಗಿಯೂ/ದೇವತೆಯ ರೂಪದಲ್ಲಿ; ದಶ=ಹತ್ತು; ಶತ=ನೂರು; ಕಿರಣ=ಕಾಂತಿ; ದಶಶತಕಿರಣ=ಸಾವಿರ ಸಾವಿರ ಬೆಳಕಿನ ಕಿರಣಗಳನ್ನು ಹೊರಸೂಸುವ ಸೂರ‍್ಯ; ಧರೆಗೆ+ಇಳಿದನ್; ಧರೆ=ಬೂಮಿ;

ಅಂದು ದಲ್ ದಶಶತಕಿರಣನ್ ಧರೆಗಿಳಿದನ್=ಆಗ ಗಗನಮಂಡಲದಲ್ಲಿ ಸಾವಿರಾರು ಕಿರಣಗಳಿಂದ ಬೆಳಗುತ್ತಿದ್ದ ಸೂರ‍್ಯನು ದೇವತೆಯ ರೂಪದಲ್ಲಿ ಬೂಮಿಗೆ ಇಳಿದು ಬಂದನು;

ಅಂತು=ಆ ರೀತಿ; ನಭ=ಆಕಾಶ; ಭಾಗದಿನ್=ಕಡೆಯಿಂದ; ಅರವಿಂದ=ತಾವರೆಯ ಹೂವು; ಬಾಂಧವನ್+ಅನ್; ಬಾಂಧವ=ನೆಂಟ; ಅನ್=ಅನ್ನು; ಅರವಿಂದ ಬಾಂಧವ=ಸೂರ‍್ಯ; ಸೂರ‍್ಯನ ಕಿರಣಗಳ ನಂಟಿನಿಂದ ತಾವರೆ ಹೂವು ಅರಳುವುದರಿಂದ ಈ ಬಗೆಯ ಹೆಸರಿದೆ;

ಅಂತು ನಭೋಭಾಗದಿನ್ ಭೂಮಿಭಾಗಕ್ಕೆ ಇಳಿದು, ತನ್ನ ಮುಂದೆ ನಿಂದ ಅರವಿಂದ ಬಾಂಧವನನ್ ನೋಡಿ ನೋಡಿ=ಆ ರೀತಿಯಲ್ಲಿ ಆಕಾಶದ ಕಡೆಯಿಂದ ಬೂಮಿಗೆ ಇಳಿದು ಬಂದು ತನ್ನ ಮುಂದೆ ನಿಂತುಕೊಂಡ ಸೂರ‍್ಯನನ್ನು ನೋಡನೋಡುತ್ತ;

ಕೊಡಗುಸು=ಕನ್ಯೆ/ಮದುವೆಯಾಗದ ತರುಣಿ; ಭಯ+ಇನ್; ಭಯ=ಹೆದರಿಕೆ; ಕೊಡಗೂಸುತನದ ಭಯ=ಮದುವೆಯಾಗುವುದಕ್ಕೆ ಮುನ್ನವೇ ಗಂಡಸಿನೊಡನೆ ಕಾಮದ ನಂಟನ್ನು ಪಡೆದರೆ ಯಾವ ಬಗೆಯ ಅಪವಾದಕ್ಕೆ ಗುರಿಯಾಗಬೇಕಾಗುವುದೋ ಎಂಬ ಹೆದರಿಕೆ; ನಡುಗು=ಕಂಪಿಸು/ಹೆದರಿಕೆಯಿಂದ ತತ್ತರಿಸು; ಕನ್ನಿಕೆ=ಕನ್ಯೆ/ತರುಣಿ; ಬೆಮರ್=ಬೆವರು; ನೀರ್+ಗಳ್; ಬೆಮರ ನೀರ್ಗಳ್=ಬೆವರ ಹನಿಗಳು; ಪೊನಲ್=ಪ್ರವಾಹ; ಒಳ್ಕು=ಹರಿ/ಪ್ರವಹಿಸು; ಒಳ್ಕುಡಿಯಲ್=ತುಂಬಿ ಹರಿಯಲು; ಒಡಗೂಡೆ=ಜತೆ ಸೇರಲು; ಮಡು=ನದಿಯಲ್ಲಿ ನೀರಿನ ಸುಳಿಯೊಡನೆ ಆಳವಾಗಿರುವ ಜಾಗ; ಕರೆ=ದಡ/ತೀರ; ಕರೆಗಣ್ಮಿದುದು=ದಡಗಳ ಮೇಲೆ ಉಕ್ಕಿ ಹರಿಯಿತು;

ಕೊಡಗೂಸುತನದ ಭಯದಿನ್ ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಲ್ ಒಳ್ಕುಡಿಯಲ್ ಗಂಗೆಯ ಒಡಗೂಡೆ ಮಡು ಕರೆಗಣ್ಮಿದುದು=ಮದುವೆಯಾಗುವುದಕ್ಕೆ ಮುನ್ನವೇ ಮಗುವನ್ನು ಪಡೆಯಲು ಹೆದರಿ ನಡುಗುತ್ತಿರುವ ಕುಂತಿಯ ದೇಹದಿಂದ ಸುರಿಯುತ್ತಿರುವ ಬೆವರ ಹನಿಗಳು ಪ್ರವಾಹರೂಪದಲ್ಲಿ ಹರಿದು ಗಂಗೆಯ ಮಡುವನ್ನು ಸೇರಿದಾಗ, ಮಡುವಿನಿಂದ ಉಕ್ಕೆದ್ದ ನೀರಿನ ಅಲೆಗಳು ಗಂಗಾ ನದಿಯ ಎರಡು ದಡಗಳ ಮೇಲೆ ತುಂಬಿ ಹರಿದವು; ಸೂರ‍್ಯನನ್ನು ನೇರವಾಗಿ ಕಂಡಾಗ ಕುಂತಿಯ ಮಯ್ ಮನದಲ್ಲಿ ಉಂಟಾದ ಒಳಮಿಡಿತಗಳ ತೀವ್ರತೆಯನ್ನು ಸೂಚಿಸಲು ಈ ರೀತಿ ಅತಿಶಯವಾದ ನುಡಿಗಳನ್ನು ಬಳಸಲಾಗಿದೆ;

ನಾಣ್=ನಾಚಿಕೆ/ಲಜ್ಜೆ; ಪೆಂಪು+ಏನು; ಪೆಂಪು=ಸೊಗಸು/ಹಿರಿಮೆ; ಪಿರಿದು=ದೊಡ್ಡದು/ಮಿಗಿಲಾದುದು/ಮನೋಹರವಾದುದು;

ನಾಣ ಪೆಂಪೇನ್ ಪಿರಿದೋ=ನಾಚಿಕೆಯ ಸೊಗಸು ಬಹು ಮನೋಹರವಾದುದು. ಏಕೆಂದರೆ ಯಾವುದೇ ಸನ್ನಿವೇಶದಲ್ಲಿ ವ್ಯಕ್ತಿಯು ನಾಚಿಕೊಂಡಾಗ ಆತನ ಇಲ್ಲವೇ ಆಕೆಯ ಮನದಲ್ಲಿ ಉಂಟಾಗುವ ಒಳಮಿಡಿತಗಳು, ಮೊಗದಲ್ಲಿ ಕಂಡುಬರುವ ಮತ್ತು ಮಯ್ಯಲ್ಲಿ ತಲೆದೋರುವ ಹಾವಬಾವಗಳು ಅಪೂರ‍್ವವಾದ ಬಗೆಯಲ್ಲಿರುತ್ತವೆ.

ಆದಿತ್ಯ=ಸೂರ‍್ಯ; ಶಂಕೆ+ಉಮ್+ಅನ್; ಶಂಕೆ=ಅಳುಕು/ಹಿಂಜರಿಕೆ/ಅಂಜಿಕೆ; ಉಮ್=ಊ; ಅನ್=ಅನ್ನು; ನಡುಕಮ್+ಉಮ್+ಅಮ್; ಕಿಡು=ಇಲ್ಲವಾಗು/ಅಳಿ; ಇಂತು=ಈ ರೀತಿ;

ಆಗಳ್ ಆದಿತ್ಯನ್ ಆಕೆಯ ಮನದ ಶಂಕೆಯುಮನ್ ನಡುಗುವ ಮೆಯ್ಯ ನಡುಕಮುಮಮ್ ಕಿಡೆನುಡಿದು ಇಂತು ಎಂದನ್=ಆಗ ಸೂರ‍್ಯನು ಕುಂತಿಯ ಮನದ ಹಿಂಜರಿಕೆಯನ್ನು ಮತ್ತು ಮಯ್ಯ ನಡುಕವನ್ನು ಹೋಗಲಾಡಿಸುವಂತೆ ಈ ರೀತಿ ನುಡಿದನು;

ತರುಣಿ=ಹರೆಯದವಳು/ಯುವತಿ; ಕಾರಣ=ಉದ್ದೇಶ; ಆವುದು=ಯಾವುದು;

ತರುಣಿ, ಬರಿಸಿದ ಕಾರಣಮ್ ಆವುದೊ=ತರುಣಿಯೇ, ನನ್ನನ್ನು ನಿನ್ನ ಬಳಿಗೆ ಬರುವಂತೆ ನೀನು ಕೋರಿಕೊಳ್ಳಲು ಕಾರಣವೇನು;

ಮುನಿ+ಈಶ್ವರ; ಈಶ್ವರ=ಒಡೆಯ; ಮುನೀಶ್ವರ=ದೊಡ್ಡ ಮುನಿಯಾದ ದುರ‍್ವಾಸ; ಏದೊರೆ+ಎಂದು; ಏನ್+ದೊರೆ=ಏದೊರೆ; ಏನ್=ಯಾವುದು; ದೊರೆ=ಬಗೆ/ರೀತಿ; ಏದೊರೆ=ಯಾವ ಬಗೆಯದೆಂದು; ಆನ್=ನಾನು; ಮರುಳಿ+ಎನೆ; ಮರುಳು=ತಿಳಿಗೇಡಿತನ; ಮರುಳಿ=ತಿಳಿಗೇಡಿಯಾದ ಹೆಂಗಸು; ಎನೆ=ಎನ್ನುವಂತೆ; ಅರಿದು+ಉಮ್; ಅರಿದು=ತಿಳಿದು; ಅರಿಯದೆ=ತಿಳಿಯದೆ; ಬರಿಸಿದೆನ್=ನಿನ್ನನ್ನು ಕರೆಸಿಕೊಂಡೆನು; ಏಳು=ಮೇಲಕ್ಕೆ ನಿಲ್ಲು;

ಮುನೀಶ್ವರನ ಮಂತ್ರಮ್ ಏದೊರೆಯೆಂದು ಆನ್ ಮರುಳಿಯೆನೆ ಅರಿದುಮ್ ಅರಿಯದೆ ಬರಿಸಿದೆನ್. ಇನ್ನು ಏಳಿಮ್=ದೊಡ್ಡ ಮುನಿಯಾದ ದುರ‍್ವಾಸನ ಮಹಿಮೆಯನ್ನು ಅರಿತಿದ್ದರೂ, ಅರಿಯದಂತಹ ತಿಳಿಗೇಡಿಯಾಗಿ ಮುನಿಯು ಕೊಟ್ಟ ಮಂತ್ರ ಯಾವ ಬಗೆಯದೆಂದು ತಿಳಿಯಲು ನಿಮ್ಮನ್ನು ಕರೆಸಿಕೊಂಡೆನು. ಇನ್ನು ನೀವು ಇಲ್ಲಿಂದ ಹೊರಡಿ;

ಅಂಬುಜ=ತಾವರೆಯ ಹೂವು; ಅಂಬುಜಮುಖಿ=ತಾವರೆಯ ಮೊಗದವಳು/ಸುಂದರಿ; ಮುನ್=ಮೊದಲು; ಬೇಡು=ಯಾಚಿಸು/ಕೇಳು; ವರಮ್+ಅನ್; ಕುಡು=ಕೊಡು; ಕುಡದೆ=ಕೊಡದೆ; ಪೋಗು+ಅಲ್; ಪೋಗು=ಹೋಗು; ಆಗದು=ಆಗುವುದಿಲ್ಲ; ಎನ್ನ=ನನ್ನ; ದೊರೆ+ಅನ್; ಅಕ್ಕೆ=ಆಗಲಿ;

ಅಂಬುಜಮುಖಿ, ಮುನ್ ಬೇಡಿದ ವರಮನ್ ಕುಡದೆ ಪೋಗಲ್ ಆಗದು. ಎನ್ನ ದೊರೆಯನ್ ಪುತ್ರನ್ ನಿನಗೆ ಅಕ್ಕೆ ಎಂಬುದುಮ್=ಸುಂದರಿಯೇ, ನೀನು ಈ ಮೊದಲು ಬೇಡಿರುವ ವರವನ್ನು ಕೊಡದೆ ಹಿಂತಿರುಗಲು ಆಗುವುದಿಲ್ಲ. ನಿನ್ನ ಕೋರಿಕೆಯಂತೆಯೇ ನನ್ನ ತೇಜಸ್ಸನ್ನುಳ್ಳ ಒಬ್ಬ ಮಗನು ನಿನ್ನ ಬಸಿರಲ್ಲಿ ಹುಟ್ಟಲಿ ಎಂದು ಹೇಳಲು;

ಒದವು=ಉಂಟಾಗು; ಗರ್ಭ+ಒಳ್; ಗರ್ಭ=ಬಸಿರು; ಒಳ್=ಅಲ್ಲಿ; ಅಂಬುಜಮಿತ್ರ=ಸೂರ್ಯ; ಪೋಲ್=ಹೋಲಿಕೆ; ಒಗೆ=ಹುಟ್ಟು;

ಒದವಿದ ಗರ್ಭದೊಳ್ ಅಂಬುಜಮಿತ್ರನನೆ ಪೋಲ್ವ ಮಗನ್ ಒಗೆತಂದನ್=ಕುಂತಿಯ ಬಸಿರಿನಿಂದ ಸೂರ‍್ಯನ ತೇಜಸ್ಸನ್ನೇ ಹೋಲುವ ಒಬ್ಬ ಮಗ ಹುಟ್ಟಿಬಂದನು;

ತನ್ನ+ಒಳ್; ತನ್ನೊಳ್=ತನ್ನಲ್ಲಿ/ತನ್ನ ದೇಹದಲ್ಲಿ; ಒಡನ್+ಪುಟ್ಟಿದ; ಪುಟ್ಟು=ಉಂಟಾಗು; ಒಡವುಟ್ಟಿದ=ಜತೆಯಲ್ಲಿ ಸೇರಿಕೊಂಡಿರುವ; ಮಣಿ+ಕುಂಡಲ+ಅಮ್; ಮಣಿ=ರತ್ನ; ಕುಂಡಲ=ಕಿವಿಗೆ ತೊಡುವ ಓಲೆ; ಸಹಜ=ಹುಟ್ಟಿನಿಂದಲೇ ಬಂದಿರುವ; ಕವಚ=ಉಕ್ಕಿನ ಅಂಗಿ; ಅಮರ್=ಜತೆಗೂಡು; ಇರೆ=ಇರಲು; ತೊಡರ್=ಅಂಟಿಕೊಳ್ಳು/ಹೊಂದಿಕೊಳ್ಳು; ಇರೆಯುಮ್=ಇರಲು;

ತನ್ನೊಳ್ ಒಡವುಟ್ಟಿದ ಮಣಿಕುಂಡಲಮ್ ಒಡವುಟ್ಟಿದ ಸಹಜ ಕವಚಮ್ ಅಮರ್ದು ಇರೆ ತೊಡರ್ದು ಇರೆಯುಮ್=ಸೂರ‍್ಯನ ವರಪ್ರಸಾದದಿಂದ ಹುಟ್ಟಿದ ಮಗುವಿನ ಕಿವಿಯಲ್ಲಿ ರತ್ನದ ಓಲೆಗಳು ಜತೆಗೂಡಿರಲು ಮತ್ತು ಮಗುವಿನ ಮಯ್ ಮೇಲೆ ಹೊನ್ನಿನ ಲೋಹದ ಅಂಗಿಯು ಅಂಟಿಕೊಂಡಿರಲು;

ಆಗಳ್=ಆ ಸಮಯದಲ್ಲಿ; ಬಂದು=ಕುಂತಿಯ ಹತ್ತಿರಕ್ಕೆ ಬಂದು; ಒಡರಿಸು=ನೀಗಿಸು/ನಿವಾರಿಸು/ಪರಿಹರಿಸು;

ಆಗಳ್ ಬಂದು ಆ ಬಾಲಿಕೆಯಾ ಆಕೆಯ ನಡುಕಮನ್ ಒಡರಿಸಿದನ್=ಆಗ ಬಳಿಗೆ ಬಂದ ಸೂರ‍್ಯನು ಕುಂತಿಯ ಮಯ್ ಮನದ ನಡುಕವನ್ನು ಅಂದರೆ ಆಕೆಯು ಹೆದರಿಕೆಯಿಂದ ಮತ್ತು ಲಜ್ಜೆಯಿಂದ ಪಡುತ್ತಿದ್ದ ಸಂಕಟವನ್ನು ನಿವಾರಿಸಿದನು;

ಅಂತು=ಆ ರೀತಿ; ನಡನಡ=ದೇಹವು ಕಂಪಿಸುತ್ತಿರುವುದನ್ನು ಸೂಚಿಸುವ ಅನುಕರಣ ಪದಗಳು; ನಡುಗಿ=ಕಂಪಿಸುತ್ತ;

ಅಂತು ನಡನಡ ನಡುಗಿ=ಆ ರೀತಿಯಲ್ಲಿ ಮಗುವನ್ನು ಹೆತ್ತಿದ್ದಕ್ಕಾಗಿ ಸಮಾಜದಲ್ಲಿ ಅಪಮಾನವುಂಟಾಗುವುದೆಂಬ ಹೆದರಿಕೆಯ ತೀವ್ರತೆಯಿಂದ ಗಡಗಡನೆ ನಡುಗುತ್ತ;

ಜಲದೇವತೆ=ನೀರಿನ ದೇವತೆ. ನಿಸರ‍್ಗದಲ್ಲಿ ಕಂಡುಬರುವ ಉರಿಯುವ ಸೂರ‍್ಯ, ಬೆಳಗುವ ಚಂದ್ರ, ಜೀವಿಗಳಿಗೆ ಆಸರೆಯಾಗಿರುವ ಬೂಮಿ, ಬೀಸುವ ಗಾಳಿ, ದಹಿಸುವ ಬೆಂಕಿ, ಹರಿಯುವ ನೀರು- ಇವೆಲ್ಲವನ್ನೂ ಒಂದೊಂದು ದೇವತೆಯ ಹೆಸರಿನಲ್ಲಿ ಕಲ್ಪಿಸಿಕೊಂಡು ಜನಸಮುದಾಯ ಪೂಜಿಸುತ್ತಿದೆ; ಅಪ್ಪೊಡಮ್=ಆದರೂ; ಮನಮ್=ನನ್ನ ಮನಸ್ಸನ್ನು/ನನ್ನ ಉದ್ದೇಶವನ್ನು; ಕಾಣ್=ನೋಡು;

ಜಲದೇವತೆಗಳ್ ಅಪ್ಪೊಡಮ್ ಮನಮ್ ಕಾಣ್ಬರ್ ಎಂದು=ದುರ‍್ವಾಸ ಮುನಿಯು ಕೊಟ್ಟ ವರದ ಮಹಿಮೆಯನ್ನು ಒರೆಹಚ್ಚಿ ನೋಡಬೇಕೆಂಬ ಕುತೂಹಲದಿಂದ ಈ ರೀತಿ ಸೂರ‍್ಯನನ್ನು ಕೋರಿಕೊಂಡೆನೇ ಹೊರತು ನಿಜವಾಗಿಯೂ ಮಗನನ್ನು ಪಡೆಯಬೇಕೆಂಬ ಉದ್ದೇಶದಿಂದಲ್ಲ ಎಂಬ ನನ್ನ ಮನದ ನಿಜ ಸಂಗತಿಯನ್ನು ಜಲದೇವತೆಗಳಾದರೂ ತಿಳಿದುಕೊಳ್ಳುತ್ತಾರೆ ಎಂಬ ನಿಲುವನ್ನು ಕುಂತಿಯು ತಳೆದು;

ನಿಧಾನಮ್+ಅನ್; ನಿಧಾನ=ಸಂಪತ್ತು; ಈಡಾಡು+ಅಂತೆ; ಈಡಾಡು=ಬಿಸಾಡು/ಚೆಲ್ಲಾಡು; ಕೂಸು=ಮಗು; ಗಂಗೆ+ಒಳ್;

ನಿಧಾನಮನ್ ಈಡಾಡುವಂತೆ ಕೂಸನ್ ಗಂಗೆಯೊಳ್ ಈಡಾಡಿ ಬಂದಳ್=ಸಂಪತ್ತನ್ನು ಬಿಸಾಡುವಂತೆ ತನ್ನ ಮಡಿಲಲ್ಲಿ ಇದ್ದ ಮಗುವನ್ನು ಗಂಗಾ ನದಿಯ ಮಡಿಲಿಗೆ ಬಿಸಾಡಿ ಅರಮನೆಗೆ ಹಿಂತಿರುಗಿದಳು;

ಇತ್ತ=ಈ ಕಡೆ; ಗಂಗಾದೇವಿ+ಉಮ್; ಈ=ನೀಡು; ಈಯದೆ=ಅವಕಾಶವನ್ನು ನೀಡದೆ;

ಇತ್ತ ಗಂಗಾದೇವಿಯುಮ್ ಆ ಕೂಸನ್ ಮುಳುಗಲ್ ಈಯದೆ=ತನ್ನ ಮಡಿಲಲ್ಲಿ ಬಿದ್ದ ಕೂಸನ್ನು ಗಂಗಾದೇವಿಯು ನೀರಿನಲ್ಲಿ ಮುಳುಗಲು ಬಿಡದೆ;

ತೆರೆ=ಅಲೆ/ತರಂಗ; ನಳಿ+ತೋಳ್+ಗಳ್+ಇನ್; ನಳಿ=ಕೋಮಲವಾದ; ಒಯ್ಯನ್+ಒಯ್ಯನೆ; ಒಯ್=ತೆಗೆದುಕೊಂಡು ಹೋಗು; ಒಯ್ಯನೆ=ನೆಟ್ಟನೆ/ನೇರವಾಗಿ; ತಳ್ಕೈಸು=ಅಪ್ಪು/ಆಲಂಗಿಸು;

ತನ್ನ ತೆರೆಗಳ್ ಎಂಬ ನಳಿತೋಳ್ಗಳಿನ್ ಒಯ್ಯನೊಯ್ಯನೆ ತಳ್ಕೈಸಿ ತರೆ=ಗಂಗಾದೇವಿಯ ತನ್ನ ಅಲೆಗಳೆಂಬ ಕೋಮಲವಾದ ಕಯ್ಗಳಿಂದ ಮಗುವನ್ನು ಅಪ್ಪಿಕೊಂಡು, ನೀರಿನಾಳದಲ್ಲಿ ಮಗು ಮುಳುಗದಂತೆ ಅಲೆಗಳ ಮೇಲೆಯೇ ತೇಲಿಸಿಕೊಂಡು ಮುಂದೆ ಮುಂದೆ ತರುತ್ತಿರಲು;

ತೀರ+ಒಳ್; ತೀರ=ದಡ/ದಂಡೆ; ಇರ್ಪ=ಇರುವ;

ಗಂಗಾ ತೀರದೊಳ್ ಇರ್ಪ ಸೂತನ್ ಎಂಬನ್ ಕಂಡು=ಗಂಗಾ ನದಿಯ ದಂಡೆಯಲ್ಲಿದ್ದ ಸೂತನೆಂಬುವನು ನೀರಿನಲ್ಲಿ ತೇಲಿಬರುತ್ತಿರುವ ಮಗುವನ್ನು ಕಂಡು;

ಬಾಳ=ಎಳೆಯ/ಮಗು; ದಿನೇಶ=ಸೂರ‍್ಯ; ಬಿಂಬ=ಮಂಡಲ; ನೆಳಲ್=ಪ್ರತಿರೂಪ; ಜಲ+ಒಳ್; ನೆಲಸು=ತಂಗು/ನೆಲೆಯಾಗಿ ನಿಲ್ಲುವುದು;

ಬಾಳ ದಿನೇಶ ಬಿಂಬದ ನೆಳಲ್ ಜಲದೊಳ್ ನೆಲಸಿತ್ತೊ=ಬಾಲ ಸೂರ‍್ಯನ ಬಿಂಬದ ನೆರಳು ನೀರಿನಲ್ಲಿ ನೆಲೆಸಿದೆಯೋ;

ಮೇಣ್=ಇಲ್ಲವೇ; ಫಣೀಂದ್ರ=ಹಾವುಗಳ ಒಡೆಯನಾದ ಆದಿಶೇಶ; ಆಳಯ+ಇಂದ+ಅಮ್; ಆಳಯ=ನೆಲೆವೀಡು; ಫಣೀಂದ್ರಾಲಯ=ನಾಗಲೋಕ; ಉರ್ಚು=ಹೊರಕ್ಕೆ ಚಾಚು/ಸೀಳಿಕೊಂಡು ಬರು; ಫಣಾ=ಹಾವಿನ ಹೆಡೆ; ಮಣಿ=ರತ್ನ; ಫಣಾಮಣಿ=ಹಾವಿನ ಹೆಡೆಯಲ್ಲಿ ರತ್ನವಿದೆಯೆಂಬ ಕಲ್ಪನೆಯು ಪುರಾಣದ ಕತೆಗಳಲ್ಲಿ ಕಂಡುಬರುತ್ತದೆ; ಮಂಗಳ=ಒಳಿತನ್ನು ಉಂಟುಮಾಡುವುದು; ರಶ್ಮಿ=ಕಿರಣ;

ಫಣೀಂದ್ರ ಆಳಯದಿಂದಮ್ ಉರ್ಚಿದ ಫಣಾಮಣಿ ಮಂಗಳ ರಶ್ಮಿಯೋ=ನಾಗಲೋಕದ ಆದಿಶೇಶನ ಹೆಡೆಯಿಂದ ಹೊರಹೊಮ್ಮಿದ ನಾಗಮಣಿಯ ಕಿರಣಗಳೋ;

ಎನ್ನ=ನನ್ನ; ಎರ್ದೆ+ಅನ್; ಎರ್ದೆ=ಮನಸ್ಸು/ಚಿತ್ತ; ಕರ=ಅತಿ ಹೆಚ್ಚಾಗಿ; ಮೇಳಿಸಿತು+ಅಪ್ಪುದು; ಮೇಳಿಸು=ಸೆಳೆ; ಅಪ್ಪುದು=ಆಗುವುದು;

ಎನ್ನ ಎರ್ದೆಯನ್ ಕರಮ್ ಮೇಳಿಸಿದಪ್ಪುದು ಎಂದು=ನನ್ನ ಮನಸ್ಸನ್ನು ಬಹಳವಾಗಿ ಸೆಳೆಯುತ್ತಿದೆ ಎಂದು ತನ್ನಲ್ಲಿಯೇ ಹೇಳಿಕೊಳ್ಳುತ್ತ;

ಬೊದಿಲ್+ಎನೆ; ಬೊದಿಲ್=ವ್ಯಕ್ತಿಯು ನದಿಯೊಳಕ್ಕೆ ಹಾರಿ ನೀರಿನ ಮೇಲೆ ಬಿದ್ದಾಗ ಉಂಟಾಗುವ ಶಬ್ದವನ್ನು ಸೂಚಿಸುವ ಪದ; ಎನೆ=ಎನ್ನುವಂತೆ; ನೀರ್+ಒಳ್; ಪಾಯ್=ದುಮುಕು/ಜಿಗಿ;

ಬೊದಿಲ್ಲೆನೆ ನೀರೊಳ್ ಪಾಯ್ದು=ಮರುಗಳಿಗೆಯಲ್ಲಿಯೇ ನೀರಿನೊಳಕ್ಕೆ ದುಮುಕಿ;

ಬಾಳನ್+ಅನ್; ಆದಮ್=ಅತಿಶಯವಾದ; ಆದರ=ಒಲವು;

ಆ ಬಾಳನನ್ ಆದಮ್ ಆದರದೆ ಕೊಂಡು=ಆ ಮಗುವನ್ನು ಅತಿ ಹೆಚ್ಚಿನ ಒಲವಿನಿಂದ ಎತ್ತಿಕೊಂಡು;

ನಿಧಿ=ಸಂಪತ್ತು/ಬೂಮಿಯೊಳಗೆ ಹೂತಿಟ್ಟ ಹಣ, ಒಡವೆ, ಬೆಲೆಬಾಳುವ ವಸ್ತು; ಕಂಡನ್+ಅಂತೆ; ವೋಲ್=ಹಾಗೆ/ಅಂತೆ; ಒಸೆ=ಹಿಗ್ಗು;

ನಿಧಿ ಕಂಡನಂತೆ ವೋಲ್ ಒಸೆದನ್=ಬೂಮಿಯೊಳಗೆ ಹೂತಿಟ್ಟಿದ್ದ ಸಂಪತ್ತನ್ನು ಕಂಡವನಂತೆ ಅಪಾರವಾದ ಆನಂದದಿಂದ ಹಿಗ್ಗಿದನು;

ಅಂತು=ಆ ರೀತಿ; ಮನಮ್+ಕೊಂಡು; ಮನಂಗೊಂಡು=ಮನದಲ್ಲಿ ಮೆಚ್ಚಿದವನಾಗಿ; ರಾಧೆ+ಎಂಬ; ನಲ್ಲೆ=ಹೆಂಡತಿ; ಸೋಂಕಿಲ್+ಒಳ್; ಸೋಂಕಿಲ್=ಸೀರೆಯ ಮಡಿಲು/ಸೀರೆಯ ಉಡಿ; ಇಟ್ಟೊಡೆ=ಇಟ್ಟರೆ;

ಅಂತು ಕಂಡು ಮನಂಗೊಂಡು ಎತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಲಳ ಸೋಂಕಿಲೊಳ್ ಕೂಸನ್ ಇಟ್ಟೊಡೆ=ಆ ರೀತಿ ಮನದಲ್ಲಿಯೇ ಮುದಗೊಂಡು ಗಂಗೆಯ ಮಡಿಲಿನಿಂದ ಆ ಮಗುವನ್ನು ಎತ್ತಿಕೊಂಡು ಮನೆಗೆ ತಂದು ತನ್ನ ಹೆಂಡತಿ ರಾದೆಯ ಮಡಲಿನಲ್ಲಿ ಮಗುವನ್ನು ಇಟ್ಟಾಗ;

ರಾಗ=ಪ್ರೀತಿ; ಸುತ=ಮಗ; ಸೂತಕಮ್+ಅನ್; ಸೂತಕ=ಮಗು ಹುಟ್ಟಿದಾಗ ಉಂಟಾಯಿತೆಂದು ತಿಳಿಯುವ ಕೊಳೆ; ಕೊಂಡು+ಆಡೆ; ಕೊಂಡಾಡು=ಆಚರಿಸು/ವ್ಯವಹರಿಸು;

ಆಕೆ ರಾಗಿಸಿ ಸುತನ ಸೂತಕಮನ್ ಕೊಂಡಾಡೆ=ಆಕೆಯು ಮಗುವನ್ನು ತನ್ನ ಬಸಿರಲ್ಲಿ ಹುಟ್ಟಿದ ಮಗನೆಂದೇ ಪ್ರೀತಿಯಿಂದ ಕಂಡು, ಮಗು ಹುಟ್ಟಿದಾಗ ಉಂಟಾಗುವ ಸೂತಕವನ್ನು ಕಳೆದುಕೊಳ್ಳಲು ಮಾಡಬೇಕಾದ ಆಚರಣೆಗಳನ್ನು ಮಾಡಲು;

ಅಂದ=ರೀತಿ; ಅಗುಳ್ದರಲ್+ಆ; ಅಗುಳ್=ಅಗೆ/ತೋಡು; ಅಗುಳ್ದರಲ್=ತೋಡುತ್ತಿರುವ; ಕುಳಿ+ಒಳ್; ಕುಳಿ=ಗುಂಡಿ; ತೊಟ್ಟಗೆ=ಇದ್ದಕ್ಕಿದ್ದಂತೆಯೇ; ನಿಧಿ=ಸಂಪತ್ತು; ಕಂಡ+ಅಂತೆ; ವಸುಧೆ=ಬೂಮಂಡಲ; ಅಸದಳ=ಅತಿಶಯ; ಲೋಗರ್=ಜನರು; ಬಗೆ=ತಿಳಿ/ಎಣಿಸು; ಇರೆ=ಇರಲು;

ಆ ಮಗನ ಅಂದಮ್ ಅಗುಳ್ದರಲಾ ಕುಳಿಯೊಳ್ ತೊಟ್ಟಗೆ ನಿಧಿ ಕಂಡಂತೆ=ದಂಪತಿಗಳಿಗೆ ಆ ಮಗು ದೊರಕಿದ ರೀತಿಯು ತೋಡುತ್ತಿರುವ ಗುಂಡಿಯೊಂದರಲ್ಲಿ ಇದ್ದಕ್ಕಿದ್ದಂತೆಯೇ ಅಪಾರವಾದ ಸಂಪತ್ತು ಕಂಡುಬಂದಂತೆ;

ವಸುಧೆಗೆ ಅಸದಳಮ್ ಆಯ್ತು ಎಂದು ಲೋಗರ್ ಬಗೆದು ಇರೆ=ಇಂತಹ ಅಂದಚೆಂದದ ಮಗು ಸಿಕ್ಕಿದ್ದು ಬೂಮಂಡಲದಲ್ಲಿಯೇ ಅತಿಶಯವಾದುದು ಎಂದು ಜನರೆಲ್ಲರೂ ಮಾತನಾಡಿಕೊಳ್ಳುತ್ತಿರಲು;

ಪೆಸರ್=ಹೆಸರು;

ಆಗಳ್ ವಸುಷೇಣನ್ ಎಂಬ ಪೆಸರ್ ಆಯ್ತು=ಇದರಿಂದಾಗಿ ಆ ಮಗುವಿಗೆ ವಸುಶೇಣ ಎಂಬ ಹೆಸರು ಬಂದಿತು; ‘ವಸು‘ ಎಂದರೆ ‘ರತ್ನ, ಚಿನ್ನ, ಸಂಪತ್ತು‘ ಎಂಬ ತಿರುಳುಗಳಿವೆ. ಮಗುವಿನೊಡನೆ ರತ್ನದ ಹರಳುಗಳಿಂದ ಕೂಡಿದ ಓಲೆ ಮತ್ತು ಚಿನ್ನದ ಕವಚಗಳು ದೊರೆತಿದ್ದರಿಂದ ಈ ಮಗುವಿಗೆ ವಸುಶೇಣ ಹೆಸರು ಬಂತು;

ಅಂತು=ಆ ರೀತಿ; ಲೋಕ+ಅಂತಮ್+ಬರಮ್; ಲೋಕ=ಪ್ರಪಂಚ; ಅಂತ=ಕೊನೆ; ಬರಮ್=ವರೆಗೆ; ಅಳವಿ=ಬಲ/ಶಕ್ತಿ; ಬಳೆ=ಬೆಳೆ;

ಅಂತು ಆ ಲೋಕಾಂತಂಬರಮ್ ವಸುಷೇಣನ್ ಅಳವಿ ಬಳೆಯೆ=ಆ ರೀತಿ ಲೋಕದ ಎಲ್ಲೆಡೆಯಲ್ಲಿಯೂ ವಸುಶೇಣನ ಕೀರ‍್ತಿಯು ಹಬ್ಬಿರಲು;

ಎಸಕ=ಪರಾಕ್ರಮ/ಪ್ರತಾಪ; ಓರಂತೆ=ಒಂದೇ ಸಮನೆ/ನಿರಂತರವಾಗಿ; ಕರ್ಣ+ಉಪಾಂತ+ಒಳ್; ಕರ್ಣ=ಕಿವಿ; ಉಪಾಂತ=ಹತ್ತಿರ/ಸಮೀಪ; ಕರ್ಣೋಪಾಂತ=ಕಿವಿಯ ವರೆಗೂ/ಕಿವಿಯಿಂದ ಕಿವಿಗೆ ಎನ್ನುವುದು ಒಂದು ನುಡಿಗಟ್ಟು. ಜನರು ತಾವು ಕೇಳಿದ ಸಂಗತಿಯನ್ನು ಮತ್ತೊಬ್ಬರಿಗೆ ಹೇಳುತ್ತಿರಲು, ಅಂತಹ ಸುದ್ದಿಯು ಬಹುಬೇಗ ಎಲ್ಲೆಡೆಯಲ್ಲಿಯೂ ಹರಡುವುದು ಎಂಬ ತಿರುಳನ್ನು ಹೊಂದಿದೆ; ಒಗೆ=ಹುಟ್ಟು/ಕಾಣಿಸಿಕೊಳ್ಳು; ಎಸೆ=ಕಂಗೊಳಿಸಲು; ಎಂಬನುಮ್=ಎನ್ನುವವನು;

ಬಳೆದ ಎಸಕಮ್ ಅದು ಓರಂತೆ ಜನಂಗಳ ಕರ್ಣೋಪಾಂತದೊಳ್ ಒಗೆದು ಎಸೆಯೆ, ಕರ್ಣನ್ ಎಂಬನುಮ್ ಆದನ್=ವಸುಶೇಣನ ಪರಾಕ್ರಮದ ಕೀರ‍್ತಿಯು ಕಿವಿಯಿಂದ ಕಿವಿಗೆ ಹಬ್ಬುತ್ತ ಜನಸಮುದಾಯದಲ್ಲಿ ಕಂಗೊಳಿಸುತ್ತಿರಲು ಕರ‍್ಣನೆಂಬ ಮತ್ತೊಂದು ಹೆಸರನ್ನು ಪಡೆದನು.

(ಚಿತ್ರ ಸೆಲೆ: kannadadeevige.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks