ಅಗುಡಾದಲ್ಲಿನ ತೇಲುವ ಚತ್ರಿಗಳು

– .

ಪೋರ‍್ಚುಗಲ್ಲಿನ ಅಗುಡಾ ನಗರದಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಮಗೆ ವಿಶೇಶ ಅನುಬವವಾಗುವುದು. ಇದಕ್ಕೆ ಕಾರಣವಿದೆ. ಅಲ್ಲೆಲ್ಲೂ ಮಳೆ ಬರುವ ಸೂಚನೆಯೇ ಇಲ್ಲದಿರುವಾಗ, ಗುಡುಗು ಮಿಂಚು ಸಹ ಇಲ್ಲದಿರುವಾಗ ಮತ್ತು ನೆತ್ತಿಯ ಮೇಲೆ ಸುಡುವ ಸೂರ‍್ಯನಿದ್ದರೂ ಸಹ ಬಿಸಿಲು ನಮಗೆ ತಟ್ಟುವುದಿಲ್ಲ. ಇದು ಹೇಗೆ ಸಾದ್ಯವೆಂದು ಆಕಾಶದತ್ತ ನೋಡಿದಾಗ, ರಸ್ತೆಯ ಮೇಲೆ ಬಹಳ ಎತ್ತರದಲ್ಲಿ ಬಣ್ಣ ಬಣ್ಣದ ಚತ್ರಿಗಳನ್ನು, ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸಿ ಇಡೀ ರಸ್ತೆಗೆ ನೆರೆಳು ಬೀಳುವಂತೆ ಮಾಡಿರುವುದನ್ನು ಗಮನಿಸಬಹುದು. ಕಣ್ಣು ಕೋರೈಸುವಂತಹ ಬಣ್ಣ ಬಣ್ಣದ ಚತ್ರಿಗಳು ಮನ ಸೆಳೆಯುತ್ತವೆ.ಇನ್ನೂ ಕೆಲವು ರಸ್ತೆಗಳಿವೆ. ಅಲ್ಲೆಲ್ಲಾ ತೇಲಿ ಬಿಟ್ಟಿರುವ ಬಣ್ಣ ಬಣ್ಣದ ಬೆಲೂನುಗಳನ್ನು ಕಾಣಬಹುದು. ನೋಡಲು ಒಂದಕ್ಕಿಂತಲೂ ಮತ್ತೊಂದು ಚೆಂದವಾಗಿರುತ್ತವೆ. ವೈವಿದ್ಯಮಯ ಬಣ್ಣಗಳಿಂದ ಕೂಡಿದ ಆಕಾಶ ಬುಟ್ಟಿಗಳನ್ನು ತೇಲಿ ಬಿಟ್ಟಿರುವ ರಸ್ತೆಗಳೂ ಸಹ ಇಲ್ಲಿವೆ. ಚತ್ರಿಗಳು, ಬೆಲೂನುಗಳು ಮತ್ತು ಆಕಾಶ ಬುಟ್ಟಿಗಳ ಬೆಳಕು ನೆರಳಿನಾಟ ನೋಡಲು ಎರಡು ಕಣ್ಣಗಳು ಸಾಲದು.

ಆಕಾಶದೆಡೆ ತಲೆಯೆತ್ತಿದಾಗ ಬಣ್ಣಗಳ ಚಿತ್ತಾರ ಕಂಡಲ್ಲಿ, ಯಾವುದೇ ವಯೋಮಾನದವರಾದರೂ ಮಕ್ಕಳಂತೆ ಕುಶಿ ಪಟ್ಟು ಕುಣಿದು ಕುಪ್ಪಳಿಸುವುದರಲ್ಲಿ ಎರಡು ಮಾತಿಲ್ಲ. ಕಾಮನಬಿಲ್ಲೂ ಸಹ ಇದೇ ಅಲ್ಲವೆ? ಇವುಗಳನ್ನು ನೋಡಿದಾಕ್ಶಣ ನೋಡುಗರ ಮನಸ್ಸಿಲ್ಲಿ ಹೀಗೊಂದು ಪ್ರಶ್ನೆ ಮೂಡುವುದು; ಇಡೀ ರಸ್ತೆಯ ಮೇಲೆ ಬಣ್ಣ ಬಣ್ಣದ ಚತ್ರಿಗಳು, ಬೆಲೂನುಗಳು ಮತ್ತು ಆಕಾಶ ಬುಟ್ಟಿಗಳನ್ನು ಜೋಡಿಸಿ ತೇಲಿ ಬಿಟ್ಟಿರುವುದರ ಹಿಂದಿರುವ ಕಾರಣವಾದರೂ ಏನು? ಎಂದು.

ತೇಲುವ ಚತ್ರಿಗಳ ಹಿನ್ನೆಲೆ

ಪ್ರತಿ ವರ‍್ಶ ಜುಲೈ ತಿಂಗಳಿನಲ್ಲಿ ಪೋರ‍್ಚುಗಲ್‍ನ ಅಗುಡಾದಲ್ಲಿನ ಆಯ್ದ ಬೀದಿಗಳಲ್ಲಿ ನೂರಾರು ಚತ್ರಿಗಳು ತೇಲಾಡುತ್ತವೆ. ನೀವಂದುಕೊಂಡಂತೆ ಮ್ಯಾರಿ ಪಾಪಿನ್ಸ್ ತರಹ, ತೇಲಾಡುವ ಚತ್ರಿಗಳ ಹಿಡಿಕೆಯಿಂದ ನೇತಾಡುವಂತೆ ಕಾಣುವುದಿಲ್ಲ. (ಮ್ಯಾರಿ ಪಾಪಿನ್ಸ್ ಮಾಂತ್ರಿಕ ಶಕ್ತಿ ಹೊಂದಿದ್ದ, ದಕ್ಶ ಸಂವೇದನಾಶೀಲ ಇಂಗ್ಲೀಶ್ ನರ‍್ಸ್. ಮಕ್ಕಳ ಚಲನಚಿತ್ರದ ಪ್ರಮುಕ ಪಾತ್ರದಾರಿಯಾಗಿದ್ದವರು). ನೆಲದಿಂದ ಆಕಾಶಕ್ಕೆ ತಲೆಯೆತ್ತಿ ನೋಡಿದಾಗ ಚತ್ರಿಗಳು ತಾವಾಗಿಯೇ ಯಾವುದೇ ಆದಾರವಿಲ್ಲದೆ ತೇಲುತ್ತಿರುವಂತೆ ಕಾಣುತ್ತವೆ. ಕೆಲವು ವರ‍್ಶಗಳ ಹಿಂದೆ ನಡೆದ ‘ಎಗಿಟಾಗ್ಯೂಡಾ’ದ ಕಲಾ ಉತ್ಸವದ ಅಂಗವಾಗಿ ಜನರ ಗಮನವನ್ನು ಸೆಳೆಯಲು, ಹೆಚ್ಚು ಜನಸಂದಣಿಯ ರಸ್ತೆಗಳಲ್ಲಿ ಚತ್ರಿಗಳನ್ನು ಹಾರಿಬಿಡಲಾಯಿತು. ಆಗ, ಪ್ಯಾಟ್ರೀಶಿಯಾ ಆಲ್ಮೇಡಾ, ತನ್ನ ಚಾಯಾಗ್ರಹಣ ಕೌಶಲ್ಯವನ್ನು ಸದ್ವಿನಿಯೋಗ ಮಾಡಿಕೊಂಡು, ನಗರದ ರಸ್ತೆಗಳಲ್ಲಿ ತೇಲಾಡುತ್ತಿರುವ ಬಣ್ಣದ ಚತ್ರಿಗಳ ರೋಮಾಂಚಕಾರಿ ಚಿತ್ರಗಳನ್ನು ತೆಗೆದು ಪ್ರಚುರಗೊಳಿಸಿದಳು. ಅಂತರ‍್ಜಾಲ ಬಳಕೆ ಹೆಚ್ಚಿರುವ ಈ ದಿನಗಳಲ್ಲಿ, ಪ್ಯಾಟ್ರೀಶಿಯಾ ಆಲ್ಮೇಡಾ ತೆಗೆದ ಅಬೂತಪೂರ‍್ವ ಪೋಟೋಗಳು ವೈರಲ್ ಆದವು. ಎಲ್ಲೆಡೆ, ಇವೇ ಚಿತ್ರಗಳು ಹರಿದಾಡತೊಡಗಿ, ರಾರಾಜಿಸಿದವು. ಇದರಿಂದ ಸ್ಪೂರ‍್ತಿ ಪಡೆದ ಅಗುಡಾ ಜನರು ವರ‍್ಶದಿಂದ, ವರ‍್ಶಕ್ಕೆ ಜುಲೈ ಮಾಸದಲ್ಲಿ ಇನ್ನೂ ಹೆಚ್ಚು ವೈವಿದ್ಯಮಯ ಚತ್ರಿಗಳನ್ನು, ಬೆಲೂನುಗಳನ್ನು ಆಕಾಶ ಬುಟ್ಟಿಗಳನ್ನು ಹಾರಿಸಲು ಮೊದಲು ಮಾಡಿದರು. ಇದು ಸಾಕಶ್ಟು ವಿದೇಶಿ ಪ್ರವಾಸಿಗರನ್ನು ಆಕರ‍್ಶಿಸಲು ನಾಂದಿ ಹಾಡಿತು.

ಎಗಿಟಾಗ್ಯೂಡಾ ಕಲಾ ಉತ್ಸವದ ಮೆರಗು

ಎಗಿಟಾಗ್ಯೂಡಾ ಕಲಾ ಉತ್ಸವದ ಸಮಯದಲ್ಲಿ, ಅದಕ್ಕೆ ಅನುಗುಣವಾಗಿ ಚತ್ರಿಗಳನ್ನು ರಸ್ತೆಯ ಮೇಲ್ಬಾಗದಲ್ಲಿ ತೂಗಿ ಹಾಕಿದ್ದರೂ, ಇದನ್ನು ಹೊರತು ಪಡಿಸಿ, ಇದೇ ಸಮಯದಲ್ಲಿ ವೀಕ್ಶಿಸಲು ಅನೇಕ ಕಲಾತ್ಮಕ ದ್ರುಶ್ಯಗಳು ಸಾಲು ಸಾಲಾಗಿ ಸಿಗುತ್ತವೆ. ಕಲಾ ಪ್ರದರ‍್ಶನಗಳು, ಗೋಶ್ಟಿಗಳು ಎಲ್ಲವನ್ನೂ, ತೇಲುವ ಕೊಡೆಗಳ ತಂಪಾದ ನೆರಳಿನಲ್ಲಿ ಓಡಾಡುತ್ತಾ ವೀಕ್ಶಿಸಿ ರಸಾನುಬವವನ್ನು ಅನುಬವಿಸಬಹುದು. ಆಸಕ್ತಿದಾಯಕ ಚತ್ರಿಗಳ ಪ್ರದರ‍್ಶನದ ಜವಾಬ್ದಾರಿ ‘ಸೆಕ್ಸ್ಟಾಪಿಯರಾ ಪ್ರೋಡ್ಯೂಕೋಸಿಸ್’ ಎಂಬ ಕಲಾ ಗುಂಪಿಗೆ ಸೇರಿದ ಕಾರಣ, ಅದನ್ನು ಅದೇ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಈ ಕಲಾ ಗುಂಪು ಪ್ರತಿ ವರ‍್ಶ ತೇಲಾಡುವ ಚತ್ರಿಗಳನ್ನು ಇನ್ನೂ ಆಕರ‍್ಶಣೀಯವಾಗಿ ಮಾಡಲು, ದ್ರುಶ್ಯಾವಳಿಗಳನ್ನು ಬದಲಿಸಲು, ಹೊಸ ಹೊಸ ವಿನ್ಯಾಸಗಳನ್ನು ಸೇರಿಸುವ, ವಿವಿದ ಮಾರ‍್ಗಗಳನ್ನು ಅನ್ವೇಶಿಸುವ ಜವಾಬ್ದಾರಿಯನ್ನೂ ಸಹ ಹೊತ್ತಿದೆ.

ಮೊದಮೊದಲು ಕಡುಬಣ್ಣದ ಮೂಲ ಪ್ರಾತಮಿಕ ಬಣ್ಣದ ಚತ್ರಿಗಳು ಪ್ರಾಶಸ್ತ್ಯ ಪಡೆದಿದ್ದರೂ, ಇತ್ತೀಚೆಗೆ ತೆಳು ಬಣ್ಣದ ಚತ್ರಿಗಳನ್ನೂ ಕೂಡ ಆಕಾಶದೆತ್ತರದಲ್ಲಿ ಹಾರಿ ಬಿಡಲಾಗುತ್ತಿದೆ. ಯಾವುದೇ ಬಣ್ಣದ ಚತ್ರಿ ತೇಲಾಡಿದರೂ ಸಹ ಅದು ನೀಡುವ ತಂಪು ನೆರಳು, ಬಿಸಿಲಿನಲ್ಲಿ ಬಸವಳಿದ ಜನರಿಂದ ಪ್ರಶಂಸೆಗೆ ಒಳಗಾಗಿದೆ. ನೆತ್ತಿಯ ಮೇಲೆ ಸುಡುವ ಸೂರ‍್ಯನ ಕಿರಣಗಳಿಂದ ತಮ್ಮನ್ನು ತಾವೇ ರಕ್ಶಿಸಿಕೊಳ್ಳಲು, ಕೈಯಲ್ಲಿ ಕೊಡೆ ಹಿಡಿದು, ಶಾಪಿಂಗ್ ಮಾಡಲು ಹೆಣಗುತ್ತಿದ್ದ ಸ್ತಳೀಯರಿಗೆ ತೇಲಾಡುವ ಚತ್ರಿಗಳು, ಸಾಕಶ್ಟು ಉಲ್ಲಾಸದಿಂದ ತಮ್ಮನ್ನು ತಾವೇ ಶಾಪಿಂಗ್ ಬರಾಟೆಯಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿವೆ. ಈ ರೀತಿಯಾಗಿ ಬಣ್ಣ ಬಣ್ಣದ ಈ ತೇಲುವ ಚತ್ರಿಗಳು ನೋಡುಗರ ಮನಸೂರೆಗೊಳ್ಳುತ್ತಾ ಜಗತ್ತಿನ ಗಮನವನ್ನು ತಮ್ಮತ್ತ ಸೆಳೆಯುತ್ತಿವೆ.

( ಮಾಹಿತಿ ಮತ್ತು ಚಿತ್ರ ಸೆಲೆ: earthporm.com  , flickr.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.