ಅಸೂಯೆಯಿಂದ ಕಳೆದುಕೊಳ್ಳುವುದೇ ಹೆಚ್ಚು

–  ಪ್ರಕಾಶ್ ಮಲೆಬೆಟ್ಟು.

ಅರಿವು, ದ್ಯಾನ, Enlightenment

ಅಸೂಯೆಯ ಹಿಂದೆ ನಮ್ಮ ಮನಸ್ಸಿನ ವಿಕಾರತೆ ಅಡಗಿರುವುದು ಮಾತ್ರವಲ್ಲ, ಅದರೊಳಗೆ ನಮ್ಮ ಸೋಲು ಕೂಡ ಇದೆ. ಅಸೂಯೆ ಇಲ್ಲದಿದ್ದಲ್ಲಿ ನಮ್ಮೊಳಗಿನ ಒಳ್ಳೆ ಮನುಶ್ಯನಿಗೆ ಎಂದಿಗೂ ಸೋಲಾಗುವುದಿಲ್ಲ.

ನಮಗೆಲ್ಲ ಗೌತಮ ಬುದ್ದ ಗೊತ್ತು. ಆದರೆ ದೇವದತ್ತ ಗೊತ್ತ? ಗೌತಮ ಬುದ್ದರ ಚಿಕ್ಕಮ್ಮನ ಮಗನೆ ದೇವದತ್ತ. ಬುದ್ದರ ಬಾಲ್ಯದ ಒಡನಾಡಿ ಹಾಗು ಅನುಯಾಯಿ ಕೂಡ. ಆದರೆ ಗೌತಮ ಬುದ್ದರಿಗೆ ಜನರು ಕೊಡ ಮಾಡುವ ಮರ‍್ಯಾದೆ, ಆ ಪ್ರೀತಿ ಆದರಾತಿತ್ಯ ಕಂಡು ದೇವದತ್ತ ತುಂಬಾ ಅಸೂಯೆ ಪಡುತಿದ್ದ. ಬುದ್ದ ಇಲ್ಲವಾದರೆ ಅವರಿಗೆ ಸಿಗುವ ಎಲ್ಲ ಗೌರವ ತನಗೆ ದೊರಕಬಹುದೆಂಬ ದುರಾಲೋಚನೆಯಿಂದ ಬುದ್ದರನ್ನು ಹತ್ಯೆಗೈಯುವ ಯೋಜನೆ ಕೈಗೊಳ್ಳುತ್ತಾನೆ. ಒಂದು ದಿನ ಬುದ್ದ ಜನರಿಗೆ ಉಪದೇಶ ಮಾಡುತ್ತ ಕುಳಿತಿರುವಾಗ, ದೇವದತ್ತ ಒಂದು ದೊಡ್ಡ, ಬಾರವಾದ ಕಲ್ಲನ್ನು ಎತ್ತರದಿಂದ ಬುದ್ದರನ್ನು ಗುರಿಯಾಗಿಸಿ ಕೆಳಗುರುಳಿಸುತ್ತಾನೆ. ಆದರೆ ಉರುಳಿಸಿದ ಕಲ್ಲು ಕೆಳಗೆ ತಲುಪುವಶ್ಟರಲ್ಲಿ ಎರಡು ಬಾಗಗಳಾಗಿ ಬುದ್ದರವರ ಎಡ ಮತ್ತು ಬಲ ಬದಿಯ ಮೂಲಕ ಹಾದು ಹೋಗುತ್ತದೆ.

ಮತ್ತೊಂದು ಬಾರಿ ನಲಗೇರಿಲ್ ಎನ್ನುವ ಆನೆಯ ಆಹಾರದಲ್ಲಿ ಮದ್ಯ ಬೆರೆಸಿ ಅದನ್ನು ಸೇವಿಸುವಂತೆ ಮಾಡುತ್ತಾನೆ. ಆನೆಯ ಬಳಿ ಪ್ರತಿನಿತ್ಯ ಕಾಳಜಿಯಿಂದ ಮಾತನಾಡಿಸುವ ಬುದ್ದರಿಗೆ ಈ ಬಾರಿ ಅಪಾಯ ಕಾದಿರುತ್ತದೆ. ಕೆರಳಿದ ಆನೆ ಒಮ್ಮೆಲೇ ಅವರ ಮೇಲೆ ದಾಳಿ ಮಾಡಲು ಮುನ್ನುಗ್ಗುತ್ತದೆ. ಆದರೆ ಬುದ್ದರು ತಮ್ಮ ಮಾನಸಿಕ ಶಕ್ತಿಯಿಂದ ಆನೆ ಶಾಂತಗೊಳ್ಳುವಂತೆ ಮಾಡುತ್ತಾರೆ. ಮಾತ್ರವಲ್ಲದೇ ಆನೆ ಅವರ ಮುಂದೆ ಮೊಣಕಾಲೂರಿ ನಮಸ್ಕರಿಸುತ್ತದೆ. ಇತ್ತ ತನ್ನೆಲ್ಲ ಯೋಜನೆಗಳು ವಿಪಲಗೊಂಡಾಗ ದೇವದತ್ತ ಮಾನಸಿಕ ಶಾಂತಿಯನ್ನು ಕಳೆದುಕೊಳ್ಳುತ್ತಾನೆ. ಜನರಿಗೆ ಕೂಡ ಅವನ ಬುದ್ದಿಯ ಅರಿವಾಗಿ ಅವನನ್ನು ತಿರಸ್ಕಾರ ಬಾವದಿಂದ ನೋಡತೊಡಗುತ್ತಾರೆ. ಕಡೆಗೆ ಮನನೊಂದ ದೇವದತ್ತ ಮಾನಸಿಕ ಶಾಂತಿಗೋಸ್ಕರ ಬುದ್ದರ ಬಳಿ ಹೋಗಿ ಶರಣಾಗುತ್ತಾನೆ. ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಅವರ ಮೊಣಕಾಲುಗಳ ಮೇಲೆ ಬಿದ್ದು ತನ್ನ ತಪ್ಪಿಗೆ ಕ್ಶಮೆ ಕೇಳಿ ಅವರನ್ನು ಆಶ್ರಯಿಸುತ್ತಾನೆ.

ಅಸೂಯೆಯಿಂದ ಎಂದಿಗೂ ಗೆಲ್ಲಲು ಸಾದ್ಯವಿಲ್ಲ. ಒಂದು ವೇಳೆ ಗೆದ್ದರೂ ಮಾನಸಿಕ ಶಾಂತಿ ಇರುವುದಿಲ್ಲ. ಇನ್ನೊಬ್ಬರ ಗೆಲುವಿಗೆ, ಯಶಸ್ಸಿಗೆ ನಾವು ಸಂತೋಶ ಪಡಬೇಕು. ಸಾದ್ಯವಾದರೆ ಆ ವ್ಯಕ್ತಿಯ ಗೆಲುವಿನಲ್ಲಿ, ಸಂಬ್ರಮದಲ್ಲಿ ಬಾಗಿಯಾಗಬೇಕು. ಅದು ಬಿಟ್ಟು ಹೊಟ್ಟೆಕಿಚ್ಚು ಪಟ್ಟುಕೊಂಡು ನಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದರಲ್ಲಿ ಪ್ರಯೋಜನ ಏನಿದೆ?

ನಾವು ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು: ಕೊನೆಗೆ ಯಾರೂ ಯಾವುದನ್ನೂ ಹೊತ್ತುಕೊಂಡು ಹೋಗಲ್ಲ. ಎಲ್ಲವನ್ನು ಬಿಟ್ಟು ತೆರಳಬೇಕು – ಅದು ಸಂಪತ್ತಾಗಿರಲಿ, ನಮ್ಮ ಯಶಸ್ಸು ಆಗಿರಲಿ, ಶ್ರೀಮಂತಿಕೆಯಾಗಿರಲಿ. ಯಾವುದನ್ನೂ ನಾವು ಜೊತೆಗೆ ತೆಗೆದುಕೊಂಡು ಹೋಗಲು ಸಾದ್ಯವಿಲ್ಲ. ಬಗವಂತನ ಸನ್ನಿದಾನದಲ್ಲಿ ಎಲ್ಲರೂ ಒಂದೇ. ನಾವು ಆಸ್ತಿಕರಾಗಿದ್ದರೆ ನಮಗೆ ಗೊತ್ತಿದೆ, ಬಗವಂತನ ಸನ್ನಿದಾನದಲ್ಲಿ ಲೆಕ್ಕಕ್ಕೆ ಬರೋದು ನಮ್ಮ ಒಳ್ಳೆತನ ಒಂದೇ. ನಾಲ್ಕು ದಿನದ ಬದುಕಿನಲ್ಲಿ ಅಸೂಯೆಗೆ ಮನದ ಬಾಗಿಲು ತೆರೆಯದೆ, ಸಂತೋಶ, ಪ್ರೀತಿ ವಿಶ್ವಾಸಕ್ಕೆ ಸದಾ ಹಾತೊರೆಯಲಿ ನಮ್ಮ ಮನ. ಬದುಕಿರುವಶ್ಟು ದಿನ ನಾವು ಬೇರೆಯವರ ಮುಕದ ಮೇಲೆ ನೆಮ್ಮದಿಯ, ಸಂತೋಶದ ಮುಗುಳುನಗೆಗೆ ಕಾರಣರಾಗಬೇಕು. ಆಗ ಪ್ರಪಂಚದ ಎಲ್ಲ ಸಂತಸ ತನ್ನಿಂದ ತಾನೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ.

(ಚಿತ್ರ ಸೆಲೆ: mindfulmuscle.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: