‘ಮಾಲ್ಗುಡಿ ಮ್ಯೂಸಿಯಮ್’ಗೆ‌ ಬೇಟಿ ಕೊಟ್ಟಿದ್ದೀರಾ?

– ನಿತಿನ್ ಗೌಡ.

 

ತಾನಾನಾ ತನನ ನಾ… ತಾನಾನಾ ತನನ‌ ನಾ…   ಈ ರಾಗ‌ ಕಿವಿಯ ಮೇಲೆ ಬಿದ್ದೊಡನೆ, ಅದೇನೋ ಗುಂಗು. ಇದನ್ನು ಕೇಳಿದೊಡನೆ ಹಲವರ ನೆನಪಿನ‌ ಬುತ್ತಿ ಮತ್ತೆ  ತೆರೆದುಕೊಳ್ಳುತ್ತದೆ. ಅದರಲ್ಲೂ ತ್ತೊಂಬತ್ತರ ದಶಕದ ಮಕ್ಕಳಿಗೆ ತಮ್ಮ‌ ಬಾಲ್ಯದ ನೆನಪುಗಳು ಕಣ್ಣ ಮುಂದೆ ಹಾದು ಹೋಗಬಹುದು. ಈ ಚೆಂದ ಅನುಬಾವದ ಹಿಂದೆ  ‘ಮಾಲ್ಗುಡಿ ಡೇಸ್’ ಎಂಬ ಕಲೆಯ‌ ಕುಸುರಿ‌ ಇದೆ.ಹೌದು, 80ರ ದಶಕದಲ್ಲಿ ಕೇವಲ ದೂರದರ‍್ಶನದ ಡಿಡಿ-1 ಪ್ರಸಾರವಾಗುತ್ತಿತ್ತು. ಅಂದು ಜನರನ್ನು ರಂಜಿಸಿದ ದಾರವಾಹಿ,  ‘ಮಾಲ್ಗುಡಿ ಡೇಸ್’. ಈಗಿನ‌ ‘ವೆಬ್ ಸೀರೀಸ್’ ಬಗೆಯ ಹಮ್ಮುಗೆ ಅಂದೇ ಟಿ.ವಿ. ಒಯ್ಯುಗೆಯ(TV medium)  ಮೂಲಕ ನಡೆದಿತ್ತು. ಇಂತಹ ಕನಸಿಗೆ ಜೀವ ಕೊಟ್ಟಿದ್ದು ಶಂಕರ್ ನಾಗ್. 

‘ಮಾಲ್ಗುಡಿ ಡೇಸ್’ ಸರಣಿ ಹುಟ್ಟಿನ ಹಿನ್ನೆಲೆ

‘ಮಾಲ್ಗುಡಿ ಡೇಸ್’ ಇದು‌ ಆರ್.ಕೆ.ನಾರಾಯಣ್ ಅವರ ಸಣ್ಣ ಕತೆಗಳನ್ನಿಟ್ಟುಕೊಂಡು ತೆಗೆದ ಟಿವಿ ಸರಣಿ. ಸ್ವತಂತ್ರ ದಕ್ಕಿದ ಕಾಲಕ್ಕೂ ಮೊದಲು ಇದ್ದ ತೆಂಕಣ ಬಾರತದ ಬದುಕಿಗೆ‌ ಹಿಡಿದ ಕನ್ನಡಿಯಂತೆ ಈ‌ ಕತೆಗಳು ಮಾಲ್ಗುಡಿ ( ಮಲ್ಲೇಶ್ವರ + ಬಸವನ ಗುಡಿ ) ಎಂಬ ಕಾಲ್ಪನಿಕ ಊರಿನಲ್ಲಿ‌ ಸಾಗುತ್ತವೆ. ಅನಂತ್ ನಾಗ್ ಅವರು, ತಮ್ಮ ತಮ್ಮನಿಗೆ ಈ ಕತೆಗೆ ಸಾರತಿಯಾಗುವಂತೆ‌ ಹೇಳಿದಾಗ, ಮೊದ ಮೊದಲು ಶಂಕರ್  ಅಶ್ಟೇನೂ ಆಸಕ್ತಿ ತೋರಿಸಿರಲಿಲ್ಲ. ಆಮೇಲೆ ತಮ್ಮನ ಕೋರಿಕೆಯಂತೆ ಅನಂತ್ ನಾಗ್ ಅವರು ಸಹ ಇದರಲ್ಲಿ ನಟಿಸಲು ಒಪ್ಪಿದಮೇಲೆ, ಶಂಕರ್ ಮುಂದುವರೆದರು. ಈ ಮೂಲಕ ಶಂಕರನಲ್ಲಿ  ಹುದುಗಿದ್ದ ಪ್ರತಿಬೆ ಜಗತ್ತಿಗೆ ತೆರೆದುಕೊಳ್ಳಲು, ‘ಮಾಲ್ಗುಡಿ ಡೇಸ್’ ಹೇಳಿ ಮಾಡಿಸಿದ ವೇದಿಕೆ ಎಂಬ ಅನಂತ್ ನಾಗ್ ಅವರ ನಂಬಿಕೆ ಹುಸಿಯಾಗಲಿಲ್ಲ.

ಪಡುವಣಗಟ್ಟದಲ್ಲಿರುವ ಕರ‍್ನಾಟಕದ ಚಿರಾಪುಂಜಿಯೆಂದೇ ಹೆಸರುವಾಸಿಯಾಗಿರುವ ಆಗುಂಬೆಯಲ್ಲಿ, 1985ರಲ್ಲಿ ‘ಮಾಲ್ಗುಡಿ ಡೇಸ್’ ಚಿತ್ರೀಕರಣದ ಸೆಟ್ಟೇರಿತು. ಆಗುಂಬೆ ಜಾಗದ ಆಯ್ಕೆಯ ಹಿಂದಿನ ಸುಳಿವನ್ನು ನೀಡಿದ್ದು ಅನಂತ್ ನಾಗ್ ಅವರು. ಮಾಲ್ಗುಡಿಯ ಬಹುತೇಕ ಚಿತ್ರೀಕರಣ ಆಗುಂಬೆ ಮತ್ತು ಶಿವಮೊಗ್ಗೆಯ ಸುತ್ತ ನಡೆದಿದ್ದು, ಉಳಿದಂತೆ ಬೆಂಗಳೂರು, ತುಮಕೂರಿನಲ್ಲೂ ನಡೆದಿದೆ. ಶಿವಮೊಗ್ಗೆಯ ಅರಸಾಳು ಎಂಬ ಊರಿನಲ್ಲೂ ಕೂಡ ಚಿತ್ರೀಕರಣ ನಡೆದಿತ್ತು. ಇದರಲ್ಲಿ 3 ಸರಣಿಗಳ ಒಟ್ಟು 39 ಕಂತುಗಳಿವೆ. ಇದು 1986ರಲ್ಲಿ ದೂರದರ‍್ಶನದ ಮೂಲಕ ಪ್ರಸಾರವಾಯಿತು. ಇದನ್ನು ಹಿಂದಿ‌ ಮತ್ತು ಇಂಗ್ಲಿಶ್ ನಲ್ಲಿ  ಚಿತ್ರೀಕರಿಸಲಾಗಿತ್ತು.  1990ರಲ್ಲಿ ಶಂಕರ್ ನಾಗ್ ಅವರು  ಬಾರದ ಲೋಕಕ್ಕೆ ಪಯಣಿಸಿದರು‌. ನಂತರ 20 ವರುಶದ ಬಳಿಕ, 2006ರಲ್ಲಿ ಕವಿತಾ ಲಂಕೇಶ್ ಅವರು ಇನ್ನೂ 15 ಕಂತುಗಳನ್ನು ನಿರ‍್ದೇಶಿಸಿದರು. 

ಅಂದು ಮಾಲ್ಗುಡಿ ಡೇಸ್‍‍‍ನ್ನು ಕನ್ನಡದಲ್ಲಿ ನೋಡುವುದರಿಂದ ವಂಚಿತರಾದ ಕೋಟ್ಯಾಂತರ ಕನ್ನಡಿಗರಿಗೆ ಇಂದು ಎರಡು ಸಿಹಿ ಸುದ್ದಿ ಇದೆ. ಒಂದು ಮಾಲ್ಗುಡಿ ಡೇಸ್ ಕನ್ನಡಕ್ಕೆ  ಡಬ್(ಮಾತಚ್ಚು) ಆಗಿದ್ದು, ಅಮೇಜಾನ್ ಪ್ರೈಮ್‍‍‍ನಲ್ಲಿ ನೋಡಸಿಗುತ್ತದೆ. ಎರಡನೆಯ ಸಿಹಿ ಸುದ್ದಿಯೆಂದರೆ ಅದು, ಹಳೆಯ ರೈಲ್ವೇ ನಿಲ್ದಾಣ ಮರಳಿ  “ಮಾಲ್ಗುಡಿ ಮ್ಯೂಸಿಯಮ್”  ಆಗಿ ಮೈದಳೆದು ಕಂಗೊಳಿಸುತ್ತಿರುವುದು. ಈ ರೈಲ್ವೇ ನಿಲ್ಡಾಣ ಇರುವುದು ಶಿವಮೊಗ್ಗದಿಂದ 34 ಕಿ.ಮೀ ದೂರವಿರುವ ಅರಸಾಳು ಎಂಬ ಊರಿನಲ್ಲಿ. ಅರಸಾಳು ಶಿವಮೊಗ್ಗದಿಂದ ರಿಪ್ಪನ್‍ಪೇಟೆಗೆ ಹೋಗುವ ಹಾದಿಯಲ್ಲಿದ್ದು, ರಿಪ್ಪನ್‍ಪೇಟೆಗೆ ಕೇವಲ 6 ಕಿ.ಮೀ ದೂರದಲ್ಲಿದೆ. ಬಾರತೀಯ ರೈಲ್ವೇ ಇಲಾಕೆಯು 2020ರ ಆಗಸ್ಟ್ ತಿಂಗಳಲ್ಲಿ, ಅರಸಾಳಿನ ಹಳೆಯ ರೈಲ್ವೇ ನಿಲ್ಡಾಣವನ್ನು ಮ್ಯೂಸಿಯಮ್ ಆಗಿ ಮಾಡಿ ಶಂಕರ್ ನಾಗ್ ಮತ್ತು ಆರ್.ಕೆ. ನಾರಾಯಣ್ ಅವರ ನೆನಪು ಸದಾ ಮೆಲಕುಹಾಕುವಂತೆ ಮಾಡಿತು. ಜೊತೆಗೆ ಇಲ್ಲಿಯೇ ಇನ್ನೊಂದು ಹೊಸದಾದ ಪುಟ್ಟ ನಿಲ್ದಾಣವನ್ನು ಕಟ್ಟಲಾಗಿದ್ದು, ಶಿವಮೊಗ್ಗ- ಸಾಗರ-ತಾಳಗುಪ್ಪ ಹಾದಿಯ ರೈಲು ಇಲ್ಲಿ ಓಡಾಡುತ್ತದೆ.  ಮಾಲ್ಗುಡಿ ನಿಲ್ದಾಣದಲ್ಲಿ  ಸದಾ ‘ಮಾಲ್ಗುಡಿ ಡೇಸ್’ ಪ್ರಸಾರವಾಗುತ್ತಿರುತ್ತದೆ. ಮಾಲ್ಗುಡಿ ಮ್ಯೂಸಿಯಮ್ ಬೆಳಗ್ಗೆ 10ರಿಂದ  ಸಂಜೆ 6ರವರೆಗೆ ತೆರೆದಿರುತ್ತದೆ, ಮಂಗಳವಾರ ರಜೆ.

ಆರ್.ಕೆ ನಾರಾಯಣ್ ತಮ್ಮ ಕಲ್ಪನೆಯ ಲೋಕದಲ್ಲಿ ತೆಂಕಣ ಬಾರತವನ್ನು ಎಶ್ಟು ಚೆಂದ ಬಣ್ಣಿಸಿದ್ದರೋ, ಅದನ್ನು ತೆರೆಯಮೇಲೆ ಅಶ್ಟೇ  ಸೊಗಸಾಗಿ ಶಂಕರ‍್‍‍ನಾಗ್ ತಂದು ಜೀವ ತುಂಬಿದ್ದಾರೆ. ಕೇವಲ ಒಂದು ಚಿಕ್ಕ ಕಂತು ಚಿತ್ರೀಕರಿಸಿ, ಆರ್.ಕೆ. ನಾರಾಯಣ್ ಅವರಿಗೆ ತೋರಿಸಿದಾಗ, ಇನ್ಮುಂದೆ ಏನನ್ನು ತೋರಿಸುವ ಆಗತ್ಯವಿಲ್ಲ ಎಂದು ಶಂಕರ‍್‍‍ನಾಗ್  ಅವರಿಗೆ ಹೇಳಿದ್ದರಂತೆ. ಈ ಮೂಲಕ ತಮ್ಮ ಕನಸಿನ ಕೂಸನ್ನು ತೆರೆಯ ಮೇಲೆ ತರಲು ಶಂಕರ‍್‍‍ನಾಗ್  ಹೇಳಿಮಾಡಿಸಿದ ವ್ಯಕ್ತಿ ಎಂದು ಅವರು ಮನಗಂಡಂತೆ ಕಾಣುತ್ತದೆ. ಇಂದಿಗೂ ಮಾಲ್ಗುಡಿ ಡೇಸ್ ಒಂದು ಸಿನಿಮೀಯ ದಂತಕತೆ ಅನ್ನಬಹುದು.  ಅಂದಿನ ಕಾಲದಲ್ಲಿ, ದಟ್ಟ ಪಡುವಣ ಗಟ್ಟದ ತಪ್ಪಲಿನಲ್ಲಿ  ಸದ್ದಿಲ್ಲದೇ ಎಲ್ಲಾ ಅಡೆತಡೆಗಳನ್ನು ದಾಟಿ ಒಂದು ಅದ್ಬುತ ಹುಟ್ಟಿತು ಮತ್ತು ಇದರ ಹಿಂದೆ ಕನ್ನಡ ಚಿತ್ರರಂಗದ ಅನಂತ್ ನಾಗ್, ಗಿರೀಶ್ ಕಾರ‍್ನಾಡ್, ವೈಶಾಲಿ ಕಾಸರವಳ್ಳಿ, ವಿಶ್ಣುವರ‍್ದನ್, ಮಾಸ್ಟರ್ ಮಂಜುನಾತ್  ಮತ್ತು ರಮೇಶ್ ಬಟ್ ಹೀಗೆ ಹಲವಾರು ದಿಗ್ಗಜರು ನಟಿಸಿದ್ದರು ಎಂಬುದು ನಮ್ಮ ಹೆಮ್ಮೆ.

ಈಗ ಮಾಲ್ಗುಡಿಯ ಮಾಯಾಲೋಕಕ್ಕೆ ಈ ಕೆಳಗಿನ ತಿಟ್ಟಗಳ ಆಸರೆ ಪಡೆದು ಪಯಣ ಬೆಳೆಸೋಣ.

  • ತೋರುದಾಣದ(ಮ್ಯೂಸಿಯಮ್‍‍ನ) ಮುಂದಾರಿ.

 

  • ಈ ತಿಟ್ಟದಲ್ಲಿ  ತೋರುದಾಣದ ಬಾಗಿಲು, ಒಳಗೆ ಟಿಕೆಟ್ ಮುಂಗಟ್ಟದಲ್ಲಿ ಟಿಕೆಟ್ ನೀಡುತ್ತಿರುವ ಶಂಕರಣ್ಣ,  ಹೊರಗಿನ ಕಣದಲ್ಲಿರುವ  ‘ಮಾಲ್ಗುಡಿ ಚಾ’ ಎಂಬ ರೈಲು ಕಾಣಬಹುದು.  ‘ಮಾಲ್ಗುಡಿ ಚಾ’ ರೈಲಿನ ಬಂಡಿಯ ಒಳಗೆ, ಚಹ ದೊರಕುತ್ತದೆ ಕೂಡ! ಜಿನುಗು ಮಳೆಯ ನಡುವೆ, ‘ಮಾಲ್ಗುಡಿ ಚಾ’ ಬಂಡಿಯಲ್ಲಿ ಕುಳಿತು, ಚಾ ಸವಿಯುತ ನೆನಪು ಮೆಲಕು ಹಾಕುವುದು ಒಂದು ರೋಮಾಂಚಕ ಅನುಬವ ಕೊಡುತ್ತದೆ.

  • ಮುಂಬಾಗದಲ್ಲಿರುವ ರೈಲಿನ ಪುತ್ತಳಿ, ಆಗಿನ ಕಾಲದ ಕೋಣೆ.

  • ಒಳಗಿರುವ ಸ್ವಾಮಿ ಮತ್ತಿತ್ತರ ಪಾತ್ರಗಳ ಚಿತ್ತಾರ. ಆರ್.ಕೆ. ನಾರಾಯಣ್ ಅವರ ತಿಟ್ಟ ಹಾಗೂ ಹಲವಾರು ಸಂಚಿಕೆಗಳ ಕಂತುಗಳಿಗೆ ಸಂಬಂದಿಸಿದ ಪಾತ್ರಗಳನ್ನು , ಸನ್ನಿವೇಶಗಳನ್ನು ಗೋಡೆಯ ಮೇಲೆ ಬಿಡಿಸಲಾಗಿದೆ. ಎತ್ತುಗೆಗೆ ‘ಸ್ವಾಮಿ ಎಂಡ್ ಪ್ರೆಂಡ್ಸ್’, ‘ಮಿಸ್ಸಿಂಗ್ ಮೈಲ್’ ಇತ್ಯಾದಿ.

  • ಸ್ವಾಮಿ ಮತ್ತು ಆತನ ಸಂಗಡಿಗರು

 

  • ಅಂದಿನ ಕಾಲದಲ್ಲಿ ಆಗುಂಬೆಯಲ್ಲಿ ಬಳಸಲಾದ ಬಳಕಗಳು. ಮೀನಿನ ಚಟ್ಟಿಗೆ, ಬಗೆ ಬಗೆಯ ಗಡಿಗೆ, ಮಡಿಕೆ-ಕುಡಿಕೆಗಳು,  ಹಿತ್ತಾಳೆಯ ಬಳಕಗಳು,  ಏಡಿ ಹಿಡಿಯುವ ಕೂಳಿ(ಬಿದಿರಿನಿಂದ ಮಾಡಿದ ಏಡಿ/ಮೀನು ಹಿಡಿಯುವ ಒಂದು ರೀತಿಯ ಬುಟ್ಟಿ/ಬೋನು), ಮೀನು ಹಿಡಿಯುವ ಕುಣಿ, ಮರಿಗೆ ( container) , ಬೀಸುವ ಕಲ್ಲು,   ಮಲೆನಾಡ ಬೇಸಾಯದ ಬಳಕಗಳಾದ ನೊಗ, ಕುಂಟೆ, ನೇಗಿಲು ಇತ್ಯಾದಿ.

  • ಚಿತ್ರೀಕರಣ ನಡೆಯುವ ಹೊತ್ತಿನಲ್ಲಿ ಸೆರೆಸಿಕ್ಕ  ಹಲವು ಕ್ಯಾಂಡಿಡ್ ತಿಟ್ಟಗಳು.ಇವುಗಳ ಹಿಂದೆಯೇ ಚಿಕ್ಕ ಚಿಕ್ಕ ರೋಚಕ ಅನುಬವದ ಕತೆಗಳಿರಬಹುದು.

 

ಮಾಲ್ಗುಡಿ ಮ್ಯೂಸಿಯಮ್ ತಲುಪುವುದು ಹೇಗೆ ?

ಶಿವಮೊಗ್ಗದಿಂದ ಹೊಸನಗರ, ರಿಪ್ಪನ್‍‍ಪೇಟೆ ಹೋಗುವ ಪಯಣಿಗರು, ತಪ್ಪದೇ ಈ ಮ್ಯೂಸಿಯಮ್ ಅನ್ನು ನೋಡಿ.

 

( ಮಾಹಿತಿ ಸೆಲೆ : wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: