ಪಂಪ ಬಾರತ ಓದು – 11ನೆಯ ಕಂತು
– ಸಿ.ಪಿ.ನಾಗರಾಜ.
(ಪಂಪನ ವಿಕ್ರಮಾರ‌್ಜುನ ವಿಜಯ ಕಾವ್ಯದ ದ್ವಿತೀಯ ಆಶ್ವಾಸದ 59 ನೆಯ ಗದ್ಯದಿಂದ 64 ಗದ್ಯದವರೆಗಿನ ಪಟ್ಯವನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ದ್ರೋಣ – ಹಸ್ತಿನಾವತಿಯಲ್ಲಿ ಕುರುವಂಶದ ರಾಜಕುಮಾರರಿಗೆ ಶಸ್ತ್ರ ಶಾಸ್ತ್ರ ವಿದ್ಯೆಯನ್ನು ಹೇಳಿಕೊಡುತ್ತಿದ್ದ ಗುರು.
ದ್ರುಪದ – ಪಾಂಚಾಲ ದೇಶದ ರಾಜ. ಚಿಕ್ಕಂದಿನಲ್ಲಿ ದ್ರೋಣ ಮತ್ತು ದ್ರುಪದ ಒಂದೇ ಗುರುಕುಲದಲ್ಲಿ ವಿದ್ಯೆಯನ್ನು ಕಲಿತಿದ್ದರು.
ಅರ್ಜುನ – ಅಯ್ದು ಮಂದಿ ಪಾಂಡವರಲ್ಲಿ ಒಬ್ಬ. ಪಾಂಡು ಮತ್ತು ಕುಂತಿಯ ಮಗ.
= = = = = = = = = = = = = = = = = = = = = = = = = = = =
ದ್ರುಪದನ ಮಾನಹಾನಿ
ಆಗಾಮಿಕ ಸಂಗ್ರಾಮರಂಗಕ್ಕೆ ಪಾತ್ರಂಗಳಮ್ ಸಮೆಯಿಸುವ ಸೂತ್ರಧಾರನಂತೆ ಭಾರದ್ವಾಜನ್ ಶಸ್ತ್ರವಿದ್ಯಾಭ್ಯಾಸಮ್ ಗೆಯ್ಸುತ್ತಿರೆ, ತಾರಾಗಣಂಗಳ ನಡುವಣ ಸಕಳ ಕಳಾಧರನಂತೆ ದೇಶಾಧೀಶ್ವರರಪ್ಪ ಪಲಂಬರ್ ರಾಜಕುಮಾರರ ನಡುವೆ ಶಸ್ತ್ರಕಳಾಧರನಾಗಿ, ತನ್ನುಮನ್ ಗೆಲೆವಂದ ಸಾಮಂತ ಚೂಡಾಮಣಿಯ ಶರಪರಿಣತಿಯನ್ ಆರಯಲೆಂದು, ತನ್ನನ್ ಅಡಸಿದ ಆಯದ ನೀರೊಳಗೆ ಛಾಯಾಲಕ್ಷ್ಯಮನ್ ಒಡ್ಡಿಯುಮ್… ನೆಗಳಮ್ ಬಾಯ್ ಅಳಿವಿನಮ್ ಇಸಿಸಿಯುಮ್…
ದ್ರೋಣ: ಅರೆ ಹೋ ಅಜ ಬಾಪ್ಪು (ಎಂದು ಗುರು ಹರಿಗನನ್ ಪೊಗಳ್ದನ್. ಅಂತು ಪೊಗಳ್ದು…)
ದ್ರೋಣ: (ತನ್ನ ಮನದಲ್ಲಿ) ಈತನ್ ತನ್ನ ಪಗೆವನಪ್ಪ ದ್ರುಪದನನ್ ಅಮೋಘಮ್ ಗೆಲಲ್ ನೆಱಗುಮ್. (ಎಂದು ನಿಶ್ಚೈಸಿ…)
ದ್ರೋಣ: (ಅರ್ಜುನನ್ನು ಕುರಿತು) ಪರಸೈನ್ಯಭೈರವಾ , ಅಣುಗಿನೊಳ್ ಎನ್ನ ಚಟ್ಟರೊಳಗೆ ಈತನೆ ಜೆಟ್ಟಿಗನೆಂದು ಗುಣಕಱುಗೊಂಡು ವಿದ್ದೆಯನ್ ಕೊಟ್ಟ ಎನಗೆ ಸಂತಸಮ್ ಅಪ್ಪಿನಮ್ ಆ ದ್ರುಪದನನ್ ಅಣಿಯರಮ್ ಕೋಡಗಗಟ್ಟುಗಟ್ಟಿ ತಂದು ಬೇಗಮ್ ಒಪ್ಪಿಸು. ಇಂತು ಇದನೆ ಆಮ್ ಬೇಡಿದೆನ್. ಗಡ, ಅದು ಈವ ನಿನ್ನ ದಕ್ಷಿಣೆ .
(ಎಂಬುದುಮ್…)
ಅರ್ಜುನ: ಈ ಬೆಸನ್ ಆವುದು ಗಹನಮ್
(ಎಂದು ಪೂಣ್ದು ಪೋಗಿ, ಒಡವಂದ ಅಂಕದ ಕೌರವರ್ ದ್ರುಪದನ ಅಂಬೇಱಿಂಗೆ ಮೆಯ್ಯೊಡ್ಡದೆ ಒಡ್ಡು ಒಡೆದು ಓಡುತ್ತಿರೆ, ಆಗಳ್ ಸೂಳ್ಪಟ್ಟನ್ . ಜವನ್ ಪಿಡಿದು ಈಡಾಡುವ ಮಾಳ್ಕೆಯಂತೆ ಪಲರನ್ ಕೊಂದಿಕ್ಕಿ… ಬೀಳ್ವ ತಲೆಗಳ್ ಸೂಸೆ… ಮೆಯ್ಮುಟ್ಟೆ ವಂದ ಎಡೆಯೊಳ್ ರಿಪುವನ್ ಮಾಣದೆ ಉರುಳ್ಚಿ ಕಟ್ಟಿ , ದ್ರೋಣನಾ ಮುಂದೆ ಇಕ್ಕಿದನ್. ಆಗಳ್ ಆ ಕುಂಭಸಂಭವನ್ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ, ಕದಂಪನ್ ಕರ್ಚಿ, ದ್ರುಪದನನ್ ತನ್ನ ಮಂಚದ ಕಾಲೊಳ್ ಕಟ್ಟವೇಳ್ದು, ತಲೆಯ ಮೇಲೆ ಕಾಲನ್ ಅವಷ್ಟಂಭದಿಮ್ ನೀಡಿ)
ದ್ರೋಣ: (ದ್ರುಪದನನ್ನು ಕುರಿತು) ಸಿರಿಮೆಯ್ಯೊಳಗೆ ಅಂದು ನೆರವಿಯೊಳ್ ಅಱಿವಿರೆ… ಒರ್ಮೆ ಕಂಡರನ್ ಆರ್ ಅಱಿವರ್… ಎಮ್ಮನ್ ಬಡ ಪಾರ್ವರನ್ ಅಱಿಯಲ್ಕೆ ಅರಿದು. ಅರಸರೆ, ಈಗಳ್ ನೀಮ್ ಅಱಿವಿರ್ ಅಱಿಯಿರೊ ಪೇಳಿಮ್…
(ಎಂದು ಸಾಯೆ ಸರಸಮ್ ನುಡಿದು ಮತ್ತಮ್ ಇಂತು ಎಂದನ್…)
ದ್ರೋಣ: ನೀಮ್ ಆದಿ ಕ್ಷತ್ರಿಯರೇ… ಆದಿತ್ಯನನ್ ಇಳಿಪ ತೇಜರಿರ್. ನಿಮಗೆ ಪಾರ್ವನ ಕಾಲ್ ಮೋದೆ ನಡುತಲೆಯಲ್ ಇರ್ಪುದುಮ್ ಆದುದು.
(ಎಂದು ನುಡಿದು ಕಾಯ್ಪಿನೊಳ್ ಒದೆದನ್, ಒದೆದು…)
ದ್ರೋಣ: ನಿನ್ನನ್ ಇನಿತು ಪರಿಭವಮ್ ಪಡಿಸಿದುದು ಸಾಲ್ಗುಮ್. ನಿನ್ನನ್ ಕೊಲಲ್ ಆಗದು. ಕೊಂದೊಡೆ ಮೇಲಪ್ಪ ಪಗೆಗೆ ಅಂಜಿ ಕೊಂದಂತೆ ಆಗಿ ಇರ್ಕುಮ್.
(ಎಂದು ಕಟ್ಟಿದ ಕಟ್ಟುಗಳೆಲ್ಲಮಮ್ ತಾನೆ ಬಿಟ್ಟು ಕಳೆದು)
ದ್ರೋಣ: ಪೋಗು (ಎಂಬುದುಮ್ ಪರಿಭವ ಅನಳನ್ ಅಳವಲ್ಲದೆ ಅಳುರೆ)
ದ್ರುಪದ: ನಿನ್ನಂ ಕೊಲ್ವನ್ನನ್ ಒರ್ವ ಮಗನುಮನ್… ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳ್ ಒರ್ವ ಮಗಳುಮನ್ ಪಡೆದಲ್ಲದೆ ಇರೆನ್.
(ಎಂದು ಮಹಾ ಪ್ರತಿಜ್ಞಾರೂಢನಾಗಿ ಪೋದನ್.)
= = = = = = = = = = = = = = = = = = = = = = = = = = = =
ಪದ ವಿಂಗಡಣೆ ಮತ್ತು ತಿರುಳು
ಆಗಾಮಿಕ = ಮುಂದೆ ನಡೆಯಲಿರುವ/ಬರಲಿರುವ; ಸಂಗ್ರಾಮ = ಕಾಳಗ; ರಂಗ = ವೇದಿಕೆ/ಕಾಳಗ ನಡೆಯುವ ಜಾಗ; ಪಾತ್ರ = ವ್ಯಕ್ತಿಯು ವಹಿಸಿಕೊಳ್ಳುವ ಕೆಲಸ; ಸಂಗ್ರಾಮ ರಂಗ ಪಾತ್ರಂಗಳಮ್ = ಕಾಳಗದಲ್ಲಿ ಹೋರಾಡಲು ತೊಡಗುವ ವೀರರನ್ನು; ಸಮೆಯಿಸು = ಸಜ್ಜುಗೊಳಿಸು/ತರಬೇತಿಯನ್ನು ನೀಡು; ಸೂತ್ರಧಾರನ್+ಅಂತೆ; ಸೂತ್ರಧಾರ = ನಾಟಕದ ನಿರೂಪಕ/ಯಾವುದೇ ಒಂದು ಕೆಲಸವನ್ನು ಮಾಡಲು ಯೋಜನೆಯನ್ನು ರೂಪಿಸಿ ಮುನ್ನಡೆಸುವವನು; ಅಂತೆ = ಹಾಗೆ; ಭಾರದ್ವಾಜ = ದ್ರೋಣ. ಈತನು ಬರದ್ವಾಜ ಎಂಬ ರಿಸಿಯ ಮಗ; ಶಸ್ತ್ರ = ಬಿಲ್ಲು, ಬಾಣ, ಕತ್ತಿ, ಗುರಾಣಿ ಗದೆ ಈಟಿ ಮುಂತಾದ ಹತಾರಗಳು; ವಿದ್ಯಾಭ್ಯಾಸ = ಅರಿವನ್ನು ಪಡೆಯುವುದು; ಗೆಯ್ = ಮಾಡು;
ಆಗಾಮಿಕ ಸಂಗ್ರಾಮರಂಗಕ್ಕೆ ಪಾತ್ರಂಗಳಮ್ ಸಮೆಯಿಸುವ ಸೂತ್ರಧಾರನಂತೆ ಭಾರದ್ವಾಜನ್ ಶಸ್ತ್ರವಿದ್ಯಾಭ್ಯಾಸಮ್ ಗೆಯ್ಸುತ್ತಿರೆ = ಮುಂದೆ ನಡೆಯಲಿರುವ ಕುರುಕ್ಶೇತ್ರದ ಕಾಳಗ ರಂಗದಲ್ಲಿ ಪಾಲ್ಗೊಳ್ಳುವ ಕಾದಾಳುಗಳನ್ನು ಈಗಿನಿಂದಲೇ ಸಜ್ಜುಗೊಳಿಸುವ ಸೂತ್ರದಾರನಂತೆ ದ್ರೋಣಾಚಾರ‍್ಯನು ಹಸ್ತಿನಾವತಿಯಲ್ಲಿ ಕೌರವರು ಮತ್ತು ಪಾಂಡವರಿಗೆ ಶಸ್ತ್ರಗಳ ಬಳಕೆಯಲ್ಲಿ ತರಬೇತಿಯನ್ನು ನೀಡುತ್ತಿರಲು;
ತಾರಾ = ಚುಕ್ಕಿ/ನಕ್ಶತ್ರ; ಗಣ = ಗುಂಪು/ಸಮೂಹ; ಸಕಲ = ಪೂರ‌್ಣ/ಸಮಗ್ರ; ಕಳಾಧರನ್+ಅಂತೆ; ಕಳಾಧರ = ಚಂದ್ರ/ಕಲಾವಿದ; ಸಕಲ ಕಳಾಧರ = ಹುಣ್ಣಿಮೆಯ ಚಂದ್ರ; ದೇಶ+ಅಧೀಶ್ವರರ್+ಅಪ್ಪ; ದೇಶ = ನಾಡು; ಅಧೀಶ್ವರ = ರಾಜ/ದೊರೆ; ಅಪ್ಪ = ಆಗಿರುವ; ಪಲಂಬರ್ = ಹಲವರು; ಶಸ್ತ್ರಕಳಾಧರನ್+ಆಗಿ; ಶಸ್ತ್ರಕಳಾಧರ = ಶಸ್ತ್ರಗಳ ಪ್ರಯೋಗದಲ್ಲಿ ಮಹಾ ಪರಿಣತನಾಗಿ;
ತಾರಾಗಣಂಗಳ ನಡುವಣ ಸಕಳ ಕಳಾಧರನಂತೆ ದೇಶಾಧೀಶ್ವರರಪ್ಪ ಪಲಂಬರ್ ರಾಜಕುಮಾರರ ನಡುವೆ ಶಸ್ತ್ರಕಳಾಧರನಾಗಿ = ಗಗನದಲ್ಲಿ ಮಿನುಗುತ್ತಿರುವ ಸಹಸ್ರಾರು ಚುಕ್ಕಿಗಳ ನಡುವೆ ಬೆಳಗುತ್ತಿರುವ ಹುಣ್ಣಿಮೆಯ ಚಂದ್ರನಂತೆ ನಾಡಿಗೆ ಒಡೆಯರಾದ ಹಲವು ಮಂದಿ ರಾಜಕುಮಾರರ ನಡುವೆ ಶಸ್ತ್ರವಿದ್ಯೆಯಲ್ಲಿ ಮಹಾ ಪರಿಣತನಾಗಿ;
ತನ್ನುಮನ್ = ತನ್ನನ್ನು; ಗೆಲೆ+ವಂದ; ಗೆಲ್ = ಜಯಿಸು/ಮೀರು/ಹೆಚ್ಚಾಗು; ವಂದ = ಬಂದ; ಸಾಮಂತ = ಚಕ್ರವರ‍್ತಿಯ ಕಯ್ ಕೆಳಗೆ ನಾಡಿನ ಒಂದು ಪ್ರಾಂತ್ರವನ್ನು ಆಳುವವನು; ಚೂಡಾಮಣಿ = ತಲೆಯಲ್ಲಿ ತೊಡುವ ರತ್ನದ ಒಡವೆ. ಇದು ರೂಪಕವಾಗಿ ಬಳಕೆಯಾದಾಗ ‘ಉತ್ತಮ ವ್ಯಕ್ತಿ‘ ಎಂಬ ತಿರುಳು ಬರುತ್ತದೆ; ಸಾಮಂತ ಚೂಡಾಮಣಿ = ಈ ಬಗೆಯ ಬಿರುದು ಚಾಳುಕ್ಯ ವಂಶದ ಎರಡನೆಯ ಅರಿಕೇಸರಿಗೆ ಇತ್ತು. ಪಂಪನು ತಾನು ರಚಿಸಿದ ‘ವಿಕ್ರಮಾರ‍್ಜುನ ವಿಜಯ‘ ಕಾವ್ಯದಲ್ಲಿ ಅರ‍್ಜುನನ ಪಾತ್ರವನ್ನು ತನ್ನ ಒಡೆಯನಾಗಿದ್ದ ಅರಿಕೇಸರಿಯೊಡನೆ ಸಮೀಕರಿಸಿ, ಅರ‍್ಜುನನ ಪಾತ್ರದ ಮೂಲಕ ಅರಿಕೇಸರಿಯ ಹೆಸರನ್ನು ಕಾವ್ಯದ ಮೂಲಕ ಅಮರಗೊಳಿಸಿದ್ದಾನೆ; ಆದ್ದರಿಂದ ‘ಸಾಮಂತ ಚೂಡಾಮಣಿ‘ ಎಂಬ ಬಿರುದು ಅರ‍್ಜುನನ್ನು ಸೂಚಿಸುತ್ತದೆ; ಶರ+ಪರಿಣತಿ+ಅನ್; ಶರ = ಬಾಣ; ಪರಿಣತಿ = ನಿಪುಣತೆ/ಕುಶಲತೆ; ಅನ್ = ಅನ್ನು; ಆರಯಲ್+ಎಂದು; ಆರಯ್ = ಒರೆಹಚ್ಚು/ವ್ಯಕ್ತಿಯ ಕಲಿಕೆಯಲ್ಲಿನ ಇಲ್ಲವೇ ಕೆಲಸದಲ್ಲಿನ ಸರಿ ತಪ್ಪುಗಳನ್ನು ಗುರುತಿಸುವುದು;
ತನ್ನುಮನ್ ಗೆಲೆವಂದ ಸಾಮಂತ ಚೂಡಾಮಣಿಯ ಶರಪರಿಣತಿಯನ್ ಆರಯಲೆಂದು = ಶಸ್ತ್ರವಿದ್ಯೆಯ ಪರಿಣತಿಯಲ್ಲಿ ಗುರುವಾದ ತನ್ನನ್ನೂ ಮೀರಿಸುವಂತಿರುವ ಸಾಮಂತ ಚೂಡಾಮಣಿಯಾದ ಅರ‍್ಜುನನ ಬಾಣ ಪ್ರಯೋಗದ ಕುಶಲತೆಯನ್ನು ಒರೆಹಚ್ಚಿ ನೋಡಲೆಂದು;
ತನ್ನನ್ = ತಾನು; ಅಡಸು = ನಿಲ್ಲಿಸು; ತನ್ನನ್ ಅಡಸಿದ = ತಾನೇ ನಿಲ್ಲಿಸಿದ;
ಆಯ = ಅಗಲಕ್ಕಿಂತ ಉದ್ದ ಹೆಚ್ಚಾಗಿರು ಆಕಾರ; ನೀರ್+ಒಳ್; ಒಳ್ = ಒಳಗೆ/ಅಲ್ಲಿ; ಆಯದ ನೀರೊಳ್ = ಅಗಲ ಚಿಕ್ಕದಾಗಿಯೂ ಉದ್ದ ಹೆಚ್ಚಾಗಿರುವಂತಹ ಕಟ್ಟೆಯೊಂದರಲ್ಲಿ ತುಂಬಿರುವ ನೀರಿನಲ್ಲಿ; ಛಾಯಾ+ಲಕ್ಷ್ಯಮ್+ಅನ್; ಛಾಯಾ = ನೆರಳು/ಪ್ರತಿಬಿಂಬ; ಲಕ್ಷ್ಯ = ಗುರಿ; ಛಾಯಾಲಕ್ಷ್ಯ = ಬಿಲ್ಲು ವಿದ್ಯೆಯ ಪರಿಣತಿಯಲ್ಲಿ ಇದೊಂದು ಬಗೆಯ ಕುಶಲತೆಯ ಪ್ರಯೋಗ. ಬಿಲ್ಲುಗಾರನು ಬಾಣವನ್ನು ಹೂಡಿ ಗುರಿಯಿಟ್ಟು ಹೊಡೆಯಬೇಕಾದ ವಸ್ತುವನ್ನು ಇಲ್ಲವೇ ಪ್ರಾಣಿಯನ್ನು ನೇರವಾಗಿ ನೋಡದೆ, ಅದರ ಪ್ರತಿಬಿಂಬವನ್ನು ನೀರಿನಲ್ಲಿ ನೋಡುತ್ತ, ಬಾಣವನ್ನು ಪ್ರಯೋಗಿಸಿ ಗುರಿಯನ್ನು ಹೊಡೆಯುವುದು; ಒಡ್ಡಿ+ಉಮ್; ಒಡ್ಡು = ಇಡು/ಮಡಗು/ವ್ಯೂಹ ರಚನೆ ಮಾಡು; ಉಮ್ = ಊ;
ಆಯದ ನೀರೊಳಗೆ ಛಾಯಾಲಕ್ಷ್ಯಮನ್ ಒಡ್ಡಿಯುಮ್ = ಚಿಕ್ಕ ತೊಟ್ಟಿಯಲ್ಲಿರುವ ನೀರಿನೊಳಗೆ ಪ್ರತಿಪಲಿಸುತ್ತಿರುವ ಒಂದು ಗುರಿಯನ್ನು ರಚಿಸಿ;
ನೆಗಳ್ = ಮೊಸಳೆ; ಅಳಿವು = ಕೇಡು/ಹಾನಿ/ನಾಶ; ಇಸಿಸಿ+ಉಮ್; ಇಸು = ಬಾಣವನ್ನು ಬಿಡುವುದು;
ನೆಗಳನ್ ಬಾಯ್ ಅಳಿವಿನಮ್ ಇಸಿಸಿಯುಮ್ = ಮೊಸಳೆಯ ಬಾಯಿ ಸೀಳಿಹೋಗುವಂತೆ ಬಾಣದಿಂದ ಹೊಡೆಸಿ;
ತನ್ನನ್ ಅಡಸಿದ ಆಯದ ನೀರೊಳಗೆ ಛಾಯಾಲಕ್ಷ್ಯಮನ್ ಒಡ್ಡಿಯುಮ್… ನೆಗಳಮ್ ಬಾಯ್ ಅಳಿವಿನಮ್ ಇಸಿಸಿಯುಮ್ = ದ್ರೋಣಚಾರ‍್ಯರು ಅರ‍್ಜುನನ ಬಿಲ್ ವಿದ್ಯೆಯ ಪರಿಣತಿಯನ್ನು ಪರೀಕ್ಶಿಸಲು ತಾವೇ ಒಂದು ವ್ಯೂಹವನ್ನು ರಚಿಸುತ್ತಾರೆ. ಕಂಬವೊಂದನ್ನು ನಿಲ್ಲಿಸಿ, ಅದರ ಮೇಲಿನ ತುದಿಯಲ್ಲಿ ಮೊಸಳೆಯ ಬೊಂಬೆಯೊಂದನ್ನು ಕಟ್ಟಿ, ಕಂಬದ ಸುತ್ತ ತೊಟ್ಟಿಯೊಂದನ್ನು ನಿರ‍್ಮಿಸಿ, ಅದರಲ್ಲಿ ನೀರನ್ನು ತುಂಬಿಸುತ್ತಾರೆ. ಅರ‍್ಜುನನಿಗೆ ಈಗ ತೊಟ್ಟಿಯ ನೀರಿನಲ್ಲಿ ಕಾಣಿಸುತ್ತಿರುವ ಮೊಸಳೆಯ ಪ್ರತಿಬಿಂಬವನ್ನು ನೋಡುತ್ತ ಕಂಬದ ಮೇಲಿನ ತುದಿಯಲ್ಲಿ ಕಟ್ಟಿರುವ ಮೊಸಳೆಯನ್ನು ಹೊಡೆಯುವಂತೆ ಹೇಳುತ್ತಾರೆ. ಗುರು ಸೂಚಿಸಿದ ರೀತಿಯಲ್ಲಿಯೇ ಅರ‍್ಜುನನು ನೀರಿನಲ್ಲಿ ಮೊಸಳೆಯ ಪ್ರತಿಬಿಂಬವನ್ನು ನೋಡುತ್ತ ಕಂಬದ ಮೇಲೆ ಕಟ್ಟಿದ್ದ ಮೊಸಳೆಯ ಬಾಯಿಗೆ ಬಾಣವನ್ನು ಬಿಟ್ಟು, ಅದರ ಬಾಯನ್ನು ಸೀಳುತ್ತಾನೆ. ಈ ರೀತಿ ಅರ‍್ಜುನನು ದ್ರೋಣರ ಒಡ್ಡಿದ ಪರೀಕ್ಶೆಯಲ್ಲಿ ಗೆಲ್ಲುತ್ತಾನೆ;
ಅರೆ-ಹೋ-ಅಜ-ಬಾಪ್ಪು = ಇತರರ ಕೆಲಸವನ್ನು ಕಂಡು ಅಚ್ಚರಿ ಮತ್ತು ಆನಂದ ಉಂಟಾದಾಗ ಮೆಚ್ಚುಗೆಯ ಸೂಚಕವಾಗಿ ಉಚ್ಚರಿಸುವಂತಹ ನುಡಿಗಳು; ಗುರು = ಗುರುವಾದ ದ್ರೋಣ; ಹರಿಗನ್+ಅನ್; ಹರಿಗ = ಅರ‍್ಜುನ; ಪೊಗಳ್ = ಹೊಗಳು/ಕೊಂಡಾಡು;
ಅರೆ ಹೋ ಅಜ ಬಾಪ್ಪು ಎಂದು ಗುರು ಹರಿಗನನ್ ಪೊಗಳ್ದನ್ = ಅರ‍್ಜುನನ ಬಿಲ್ ವಿದ್ಯೆಯ ಕುಶಲತೆಯನ್ನು ಕಂಡು ಅಚ್ಚರಿಗೊಂಡ ಗುರು ದ್ರೋಣರು ಆನಂದದಿಂದ “ಅರೆ… ಹೋ… ಅಜ… ಬಾಪ್ಪು“ ಎಂದು ಉದ್ಗರಿಸುತ್ತ ಅರ‍್ಜುನನ್ನು ಹೊಗಳತೊಡಗಿದರು;
ಅಂತು ಪೊಗಳ್ದು = ಆ ರೀತಿ ಹೊಗಳಿದ ನಂತರ;
ಪಗೆವನ್+ಅಪ್ಪ; ಪಗೆ = ಶತ್ರು/ಹಗೆ; ಅಪ್ಪ = ಆಗಿರುವ; ಅಮೋಘ = ಬಹು ದೊಡ್ಡದಾದ/ಒಳ್ಳೆಯ; ನೆಱ = ಶಕ್ತಿ/ಬಲ/ಯೋಗ್ಯತೆ; ನೆಱಗುಮ್ = ಬಲವುಳ್ಳವನಾಗಿದ್ದಾನೆ; ನಿಶ್ಚೈಸು = ತೀರ‍್ಮಾನಿಸು;
ತನ್ನ ಪಗೆವನಪ್ಪ ದ್ರುಪದನನ್ ಅಮೋಘಮ್ ಗೆಲಲ್ ಈತನ್ ನೆಱಗುಮ್ ಎಂದು ನಿಶ್ಚೈಸಿ = ತನ್ನ ಹಗೆಯಾಗಿರುವ ದ್ರುಪದನನ್ನು ದೊಡ್ಡ ರೀತಿಯಲ್ಲಿ ಗೆಲ್ಲಲು ಈತನು ಬಲವುಳ್ಳವನಾಗಿದ್ದಾನೆ ಎಂದು ತೀರ‍್ಮಾನಿಸಿ;
ಪರ = ಎದುರಿನ/ಬೇರೆಯ/ಅನ್ಯ; ಸೈನ್ಯ = ಕಾಳಗದಲ್ಲಿ ಹೋರಾಡುವ ಆಳುಗಳ ಪಡೆ; ಭೈರವ = ಉಗ್ರರೂಪಿಯಾದ ಶಿವ; ಪರಸೈನ್ಯಭೈರವ = ಹಗೆಯ ಸೇನೆಯನ್ನು ದೂಳಿಪಟ ಮಾಡುವ ಉಗ್ರರೂಪಿಯಾದ ಶಿವ; ಅರ‍್ಜುನನ ಶೂರತನವನ್ನು ಹೊಗಳಲು ಬಳಸಿರುವ ಬಿರುದು; ಎನ್ನ = ನನ್ನ; ಚಟ್ಟರ್+ಒಳಗೆ; ಚಟ್ಟ = ಶಿಶ್ಯ/ಗುಡ್ಡ; ಜೆಟ್ಟಿಗನ್+ಎಂದು; ಜೆಟ್ಟಿ = ಕುಸ್ತಿಯನ್ನು ಮಾಡುವ ಮಲ್ಲ/ಶೂರ/ವೀರ; ಜೆಟ್ಟಿಗ = ಬಲಶಾಲಿ/ಗಟ್ಟಿಗ;
ಗುಣ+ಕಱು+ಕೊಂಡು; ಗುಣ = ನಡತೆ; ಕಱು = ಗಮನ/ಗುರುತು; ಗುಣಕಱುಗೊಂಡು = ಗುಣವನ್ನು ಗಮನಿಸಿ ಒಲವಿನಿಂದ;
ಪರಸೈನ್ಯಭೈರವಾ , ಎನ್ನ ಚಟ್ಟರೊಳಗೆ ಈತನೆ ಜೆಟ್ಟಿಗನೆಂದು ಗುಣಕಱುಗೊಂಡು = ಪರಸೈನ್ಯಬೈರವನೇ, ನನ್ನ ಗುಡ್ಡರಲ್ಲಿ ನಿನ್ನನ್ನು “ಇವನೇ ಜೆಟ್ಟಿಗ” ಎಂದು ತಿಳಿದು, ನಿನ್ನ ಗುಣವನ್ನು ಮೆಚ್ಚಿಕೊಂಡು;
ಅಣುಗು+ಇನ್+ಒಳ್; ಅಣುಗು = ಪ್ರೀತಿ; ವಿದ್ದೆ+ಅನ್; ವಿದ್ದೆ = ವಿದ್ಯೆ/ಅರಿವು/ಶಸ್ತ್ರ ಮತ್ತು ಶಾಸ್ತ್ರಗಳಲ್ಲಿ ಪರಿಣತಿ; ಸಂತಸ = ಹಿಗ್ಗು/ಆನಂದ; ಅಪ್ಪಿನಮ್ = ಆಗುವಂತೆ/ದೊರೆಯುವಂತೆ;
ಅಣುಗಿನೊಳ್ ವಿದ್ದೆಯನ್ ಕೊಟ್ಟ ಎನಗೆ ಸಂತಸಮ್ ಅಪ್ಪಿನಮ್ = ಪ್ರೀತಿಯಿಂದ ವಿದ್ಯೆಯನ್ನು ಕಲಿಸಿದ ನನಗೆ ಆನಂದ ಉಂಟಾಗುವಂತೆ;
ಅಣಿಯರ = ಅತಿಶಯ/ಸಡಗರ; ದ್ರುಪದನ್+ಅನ್; ಕೋಡಗ+ಕಟ್ಟು+ಕಟ್ಟಿ; ಕೋಡಗ = ಕಪಿ/ಕೋತಿ/ಮಂಗ; ಕಟ್ಟು = ತೊಡು/ಅಳವಡಿಸು; ಕೋಡಗಗಟ್ಟು = ಇದೊಂದು ನುಡಿಗಟ್ಟು. ವ್ಯಕ್ತಿಯನ್ನು ಸೆರೆಹಿಡಿದಾಗ, ಅವನು ಸ್ವಲ್ಪವೂ ಮಿಸುಕಾಡದಂತೆ ಹಗ್ಗ ಇಲ್ಲವೇ ಸರಪಣಿಯಿಂದ ಅವನ ಕಯ್ ಕಾಲುಗಳನ್ನು ಬಿಗಿದು ಕಟ್ಟುವ ಒಂದು ಬಗೆ; ಕಟ್ಟಿ = ಬಿಗಿದು/ಸೆರೆಹಿಡಿದು; ಒಪ್ಪಿಸು = ಕೊಡು;
ಆ ದ್ರುಪದನನ್ ಅಣಿಯರಮ್ ಕೋಡಗಗಟ್ಟುಗಟ್ಟಿ ತಂದು ಬೇಗಮ್ ಒಪ್ಪಿಸು = ಆ ದ್ರುಪದನನ್ನು ಸಡಗರದಿಂದ ಕೋಡಗಗಟ್ಟು ಕಟ್ಟಿ ತಂದು ಬೇಗ ನನಗೆ ಒಪ್ಪಿಸು;
ಇಂತು = ಈ ರೀತಿ; ಇದನೆ = ಇದನ್ನೇ; ಆಮ್ = ನಾನು; ಬೇಡು = ಕೇಳು/ಬಯಸು;
ಇಂತು ಇದನೆ ಆಮ್ ಬೇಡಿದೆನ್ = ಈ ರೀತಿ ಇದನ್ನು ನಾನು ನಿನ್ನಲ್ಲಿ ಕೇಳಿಕೊಳ್ಳುತ್ತಿದ್ದೇನೆ;
ಗಡ = ಕಂಡೆಯಾ/ತಿಳಿದಿರುವೆಯಾ; ಈ = ಕೊಡು/ನೀಡು; ದಕ್ಷಿಣೆ = ಗುರುಹಿರಿಯರಿಗೆ ಇಲ್ಲವೇ ನೆರವನ್ನು ನೀಡಿದ ವ್ಯಕ್ತಿಗಳಿಗೆ ಕೊಡುವ ಕಾಣಿಕೆ;
ಗಡ, ಅದು ಈವ ನಿನ್ನ ದಕ್ಷಿಣೆ = ಕಂಡೆಯಾ, ಅದು ನೀನು ನನಗೆ ನೀಡುವ ಗುರುಕಾಣಿಕೆ;
ಎಂಬುದುಮ್ = ಎಂದು ಹೇಳಲು; ಬೆಸನ = ಕೆಲಸ/ಕಾರ‍್ಯ; ಆವುದು = ಯಾವುದು; ಗಹನ = ದೊಡ್ಡದು; ಪೂಣ್ = ಮಾತು ಕೊಡು/ಆಣೆ ಮಾಡು/ಪಣ ತೊಡು;
ಈ ಬೆಸನ್ ಆವುದು ಗಹನಮ್ ಎಂದು ಪೂಣ್ದು ಪೋಗಿ = ಆಗ ಅರ‍್ಜುನನು ”ಇದಾವ ದೊಡ್ಡ ಕೆಲಸ” ಎಂದು ನುಡಿದು , ಗುರು ಹೇಳಿದ ಕೆಲಸವನ್ನು ಈಡೇರಿಸಿಕೊಂಡು ಬರುವುದಾಗಿ ಮಾತು ಕೊಟ್ಟು ದ್ರುಪದನ ರಾಜ್ಯದತ್ತ ದಂಡೆತ್ತಿ ಹೋಗಿ;
ಒಡವಂದ = ಜತೆಯಲ್ಲಿ ಬಂದಿದ್ದ; ಅಂಕ = ಹೆಸರು/ಬಿರುದು; ಅಂಬು+ಏಱಿಂಗೆ; ಅಂಬು = ಬಾಣ; ಏಱು = ಹೊಡೆತ/ಪೆಟ್ಟು; ಮೆಯ್+ಒಡ್ಡದೆ; ಒಡ್ಡು = ಚಾಚು/ನೀಡು; ಮೆಯ್ಯೊಡ್ಡು = ಹಗೆಯ ಮುಂದೆ ನಿಂತು ನೇರವಾಗಿ ಹೋರಾಡುವುದು; ಒಡ್ಡು = ಪಡೆ/ಸೇನೆ; ಒಡೆದು = ಬೇರೆ ಬೇರೆಯಾಗಿ/ಚದುರಿಹೋಗಿ; ಓಡು = ಪಲಾಯನ ಮಾಡು;
ಒಡವಂದ ಅಂಕದ ಕೌರವರ್ ದ್ರುಪದನ ಅಂಬೇಱಿಂಗೆ ಮೆಯ್ಯೊಡ್ಡದೆ ಒಡ್ಡು ಒಡೆದು ಓಡುತ್ತಿರೆ = ಅರ‍್ಜುನನ ಸೇನೆಯೊಡನೆ ಬಂದಿದ್ದ ಹೆಸರಾಂತ ಕೌರವರು ದ್ರುಪದನ ಬಾಣಗಳ ಪೆಟ್ಟಿಗೆ ಮಯ್ ಒಡ್ಡಲಾರದೆ, ಅಂದರೆ ಬಾಣಗಳ ಪೆಟ್ಟನ್ನು ತಡೆದುಕೊಂಡು ಹೋರಾಡಲಾಗದೆ, ಕುರುಸೇನೆಯ ಗುಂಪು ಚದುರಿಹೋಗಿ ಪಲಾಯನ ಮಾಡುತ್ತಿರಲು;
ಆಗಳ್ = ಆ ಸಮಯದಲ್ಲಿ; ಸೂಳ್ = ಸರದಿ; ಸೂಳ್ಪಟ್ಟನ್ = ಅರ‍್ಜುನನು ತನ್ನ ಸರದಿಯನ್ನು ಕಯ್ ಕೊಂಡನು. ಅಂದರೆ ಕಾಳಗದ ಮುಂಚೂಣಿಗೆ ಬಂದನು;
ಆಗಳ್ ಸೂಳ್ಪಟ್ಟನ್ = ಆಗ ಅರ‍್ಜುನನು ಸೇನೆಯ ಮುಂಚೂಣಿಗೆ ಬಂದು ಹೋರಾಡತೊಡಗಿದನು;
ಜವ = ಸಾವಿನ ದೇವತೆಯಾದ ಯಮ; ಪಿಡಿ = ಹಿಡಿದುಕೊಳ್ಳು; ಈಡಾಡು = ಕಿತ್ತು ಬಿಸಾಡು/ಎಸೆದು ಚೆಲ್ಲಾಡು; ಮಾಳ್ಕೆ+ಅಂತೆ; ಮಾಳ್ಕೆ = ರೀತಿ;
ಜವನ್ ಪಿಡಿದು ಈಡಾಡುವ ಮಾಳ್ಕೆಯಂತೆ = ಯಮನು ಜೀವಿಗಳನ್ನು ಹಿಡಿದು ಸಾವಿನತ್ತ ಎಸೆಯುವಂತೆ;
ಪಲರನ್ = ಹಲವರನ್ನು; ಕೊಂದು+ಇಕ್ಕಿ;
ಪಲರನ್ ಕೊಂದಿಕ್ಕಿ = ದ್ರುಪದನ ಸೇನೆಯಲ್ಲಿನ ಹಲವರನ್ನು ಕೊಂದುಹಾಕಿ;
ಸೂಸೆ = ಸಿಡಿ/ಚಿಮ್ಮು/ಚಲ್ಲಾಪಿಲ್ಲಿಯಾಗು;
ಬೀಳ್ವ ತಲೆಗಳ್ ಸೂಸೆ = ಬೀಳುತ್ತಿರುವ ತಲೆಗಳು ಚಲ್ಲಾಪಿಲ್ಲಿಯಾಗುತ್ತಿರಲು;
ಮೆಯ್+ಮುಟ್ಟೆ; ವಂದ = ಬಂದ; ಮೆಯ್ಮುಟ್ಟೆ ವಂದ = ಮಯ್ ಮೇಲೆ ಆಕ್ರಮಣ ಮಾಡಲೆಂದು ಬಂದ; ಎಡೆ+ಒಳ್; ಎಡೆ = ಜಾಗ; ಒಳ್ = ಅಲ್ಲಿ; ರಿಪು = ಹಗೆ/ಶತ್ರು; ಉರುಳ್ = ಕೆಳಕ್ಕೆ ಬೀಳು; ಮಾಣ್ = ಬಿಡು; ಮಾಣದೆ = ಬಿಡದೆ; ಇಕ್ಕು = ಕೆಡಹು; ಇಕ್ಕಿದನ್ = ಕೆಡಹಿದನು;
ಮೆಯ್ಮುಟ್ಟೆ ವಂದ ಎಡೆಯೊಳ್ ರಿಪುವನ್ ಮಾಣದೆ ಉರುಳ್ಚಿ ಕಟ್ಟಿ = ತನ್ನ ಮಯ್ ಮೇಲೆ ಆಕ್ರಮಣ ಮಾಡಲೆಂದು ಅತಿ ಹತ್ತಿರಕ್ಕೆ ಬಂದ ಹಗೆಯಾದ ದ್ರುಪದನನ್ನು ಅರ‍್ಜುನನು ಬಿಡದೆ ಕೆಳಕ್ಕೆ ಉರುಳಿಸಿ ಕಟ್ಟಿ ತಂದು;
ದ್ರೋಣನಾ ಮುಂದೆ ಇಕ್ಕಿದನ್ = ದ್ರೋಣನ ಮುಂದೆ ಕುಕ್ಕಿ ಕೆಡಹಿದನು;
ಕುಂಭ = ಮಣ್ಣಿನ ಕೊಡ; ಸಂಭವ = ಹುಟ್ಟು; ಕುಂಭಸಂಭವ = ಕೊಡದಲ್ಲಿ ಹುಟ್ಟಿದವನು/ದ್ರೋಣ; ಪರಾಕ್ರಮ = ಕಲಿತನ; ಧವಳ = ಗೂಳಿ/ಕೊಬ್ಬಿದ ಎತ್ತು;
ಪರಾಕ್ರಮಧವಳ = ಇದೊಂದು ನುಡಿಗಟ್ಟು. ಗೂಳಿಯಂತೆ ದೊಡ್ಡ ಮಯ್ ಕಟ್ಟು ಮತ್ತು ಕಸುವುಳ್ಳ ಶೂರ ಎಂಬ ತಿರುಳಿನಲ್ಲಿ ಬಳಕೆಯಾಗಿದೆ; ಮೆಚ್ಚು = ಒಲಿ/ಪ್ರೀತಿಸು;
ಆಗಳ್ ಕುಂಭಸಂಭವನ್ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ = ಆಗ ದ್ರೋಣನು ಪರಾಕ್ರಮದವಳನೆಂಬ ಬಿರುದನ್ನು ಪಡೆದಿರುವ ಅರ‍್ಜುನನ ಪರಾಕ್ರಮಕ್ಕೆ ಮೆಚ್ಚಿಕೊಂಡು;
ಕದಂಪು = ಕೆನ್ನೆ; ಕರ್ಚು = ಮುದ್ದಿಸು/ಚುಂಬಿಸು; ಕದಂಪನ್ ಕರ್ಚಿ = ಕೆನ್ನೆಗೆ ಮುತ್ತಿಟ್ಟು; ಕಟ್ಟಲ್+ಪೇಳ್ದು;
ದ್ರುಪದನಂ ತನ್ನ ಮಂಚದ ಕಾಲೊಳ್ ಕಟ್ಟವೇಳ್ದು = ದ್ರುಪದನನ್ನು ತನ್ನ ಮಂಚದ ಕಾಲಿಗೆ ಕಟ್ಟಲು ಹೇಳಿ;
ಅವಷ್ಟಂಭ = ಗರ‍್ವ/ಸೊಕ್ಕು/ಹೆಮ್ಮೆ; ನೀಡು = ಚಾಚಿ;
ತಲೆಯ ಮೇಲೆ ಕಾಲನ್ ಅವಷ್ಟಂಭದಿಮ್ ನೀಡಿ = ಅಂದು ದ್ರುಪದನ ಒಡ್ಡೋಲಗದಲ್ಲಿ ತನಗೆ ಆಗಿದ್ದ ಅಪಮಾನಕ್ಕೆ ತಕ್ಕ ಪ್ರತೀಕಾರವನ್ನು ತೀರಿಸಿಕೊಳ್ಳುವಂತೆ ದ್ರೋಣನು ಸೊಕ್ಕಿನಿಂದ ಮೆರೆಯುತ್ತ ಇಂದು ದ್ರುಪದನ ತಲೆಯ ಮೇಲೆ ತನ್ನ ಕಾಲನ್ನು ಚಾಚಿ;
ಸಿರಿ+ಮೆಯ್+ಒಳಗೆ; ಸಿರಿ = ಚಿನ್ನ, ಬೆಳ್ಳಿ, ವಜ್ರದ ಒಡವೆಗಳು, ದೊಡ್ಡ ಪ್ರಮಾಣದ ಆಸ್ತಿ, ನಾಡನ್ನಾಳುವ ಗದ್ದುಗೆ; ಸಿರಿಮೆಯ್ = ಸಿರಿಯನ್ನುಳ್ಳ ವ್ಯಕ್ತಿಯ ಮಯ್ಯಲ್ಲಿ ಸೊಕ್ಕಿನ ನಡೆನುಡಿಗಳು ಎದ್ದುಕಾಣುತ್ತಿರುತ್ತವೆ; ಅಂದು = ಆ ದಿನ; ನೆರವಿ+ಒಳ್; ನೆರವಿ = ಸಮೂಹ/ಗುಂಪು/ಒಡ್ಡೋಲಗ; ಅಱಿ = ತಿಳಿ;
ಸಿರಿಮೆಯ್ಯೊಳಗೆ ಅಂದು ನೆರವಿಯೊಳ್ ಅಱಿವಿರೆ = ಅಂದು ಸಿಂಹಾಸನದ ಮೇಲೆ ಕುಳಿತು ಸಿರಿಯಲ್ಲಿ ಓಲಾಡುತ್ತಿದ್ದ ನೀವು ಒಡ್ಡೋಲಗದಲ್ಲಿ ಹೇಗೆ ತಾನೆ ನನ್ನನ್ನು ಗುರುತಿಸುತ್ತೀರಾ; ಅಂದರೆ ಸಿರಿಯ ಮದ ತುಂಬಿರುವ ವ್ಯಕ್ತಿಗೆ ಕಣ್ಣು ಕುರುಡಾಗಿರುತ್ತದೆ ಎಂಬ ವ್ಯಂಗ್ಯ;
ಒರ್ಮೆ = ಒಮ್ಮೆ; ಕಾಣ್ = ನೋಡು; ಆರ್ = ಯಾರು;
ಒರ್ಮೆ ಕಂಡರನ್ ಆರ್ ಅಱಿವರ್ = ಎಲ್ಲೋ ಒಂದು ಬಾರಿ ಕಂಡವರನ್ನು ಯಾರು ತಾನೆ ಗುರುತಿಸಬಲ್ಲರು;
ಎಮ್ಮಮ್ = ನಮ್ಮನ್ನು; ಬಡ = ಬಡತನ/ಉಣ್ಣಲು ಅನ್ನ, ತೊಡಲು ಬಟ್ಟೆ, ಇರಲು ಮನೆಯಿಲ್ಲದೆ ನರಳುವುದು; ಪಾರ್ವ = ಹಾರುವ/ಬ್ರಾಹ್ಮಣ; ಅರಿದು = ತಿಳಿದು;
ಎಮ್ಮಮ್ ಬಡ ಪಾರ್ವರನ್ ಅಱಿಯಲ್ಕೆ ಅರಿದು = ನಮ್ಮಂತಹ ಬಡ ಹಾರುವರನ್ನು ಗುರುತಿಸಲು ಆಗುವುದಿಲ್ಲ;
ಅರಸರೆ, ಈಗಳ್ ನೀಮ್ ಅಱಿವಿರ್ ಅಱಿಯಿರೊ ಪೇಳಿಮ್ = ಅರಸರೇ, ಈಗಲಾದರೂ ನೀವು ನಾನು ಯಾರೆಂದು ತಿಳಿಯಬಲ್ಲಿರಾ ಇಲ್ಲವೇ ಈಗಲೂ ತಿಳಿಯುತ್ತಿಲ್ಲವೋ ಎಂಬುದನ್ನು ಹೇಳಿರಿ;
ಸರಸ = ವಿನೋದ/ಹಾಸ್ಯ; ಮತ್ತಮ್ = ಮರಳಿ/ಮತ್ತೆ;
ಸಾಯೆ ಸರಸಮ್ ನುಡಿದು = ಅಣಕದ ಮಾತುಗಳಿಂದಲೇ ಕೊಲ್ಲುವಂತೆ ನುಡಿದು; ಅಂದರೆ ಚುಚ್ಚು ಮಾತುಗಳಿಂದಲೇ ದ್ರುಪದನನ್ನು ತನ್ನ ಗುಡ್ಡರ ಮುಂದೆ ತೀವ್ರವಾಗಿ ಅಪಮಾನಗೊಳಿಸಿ; ಮತ್ತಮ್ ಇಂತು ಎಂದನ್ = ದ್ರೋಣನು ಮತ್ತೆ ಈ ರೀತಿ ನುಡಿದನು;
ನೀಮ್ = ನೀವು; ಆದಿ = ಮೂಲ/ಮೊದಲು; ಆದಿತ್ಯ = ಸೂರ‍್ಯ; ಇಳಿಪು = ಕುಗ್ಗಿಸು/ಕಡಿಮೆ ಮಾಡು; ತೇಜ = ಹೊಳಪು/ಕಾಂತಿ; ತೇಜರ್ = ತೇಜಸ್ಸನ್ನು ಹೊಂದಿರುವವರು;
ನೀಮ್ ಆದಿ ಕ್ಷತ್ರಿಯರೇ… ಆದಿತ್ಯನನ್ ಇಳಿಪ ತೇಜರಿರ್ = ನೀವು ಆದಿ ಕ್ಶತ್ರಿಯರೆಂಬ ಕೀರ‍್ತಿವಂತರಲ್ಲವೇ… ಸೂರ‍್ಯನ ಕುಂದಿಸುವಂತಹ ತೇಜೋವಂತರು ನೀವು; ದ್ರೋಣನು ಆಡುತ್ತಿರುವ ನುಡಿಗಳು ಮೇಲ್ನೋಟಕ್ಕೆ ಹೊಗಳಿಕೆಯ ತಿರುಳನ್ನು ಹೊಂದಿದ್ದರೂ, ಅವು ದ್ರುಪದನ ಮನಸ್ಸನ್ನು ಚುಚ್ಚಿ ಗಾಸಿಗೊಳಿಸುತ್ತಿವೆ;
ಮೋದು = ಹೊಡೆ/ಅಪ್ಪಳಿಸು/ಒದೆ; ನಡುತಲೆ+ಅಲ್; ಇರ್ಪುದುಮ್ = ಇರುವುದು; ಕಾಯ್ಪು+ಇನ್+ಒಳ್; ಕಾಯ್ಪು = ಸಿಟ್ಟು/ಕೋಪ; ಒದೆ = ತುಳಿ/ಮೆಟ್ಟು;
ನಿಮಗೆ ಪಾರ್ವನ ಕಾಲ್ ಮೋದೆ ನಡುತಲೆಯಲ್ ಇರ್ಪುದುಮ್ ಆದುದು ಎಂದು ನುಡಿದು ಕಾಯ್ಪಿನೊಳ್ ಒದೆದನ್ = ನಿಮ್ಮನ್ನು ಈ ಹಾರುವನು ಕಾಲಿನಿಂದ ಒದೆದರೆ, ಅದು ನಿಮ್ಮ ನಡುತಲೆಯ ಮೇಲೆ ಇರುವಂತಾದುದು ಎಂದು ಅಣಕದ ನುಡಿಗಳನ್ನಾಡುತ್ತ ದ್ರೋಣನು ಸಿಟ್ಟಿನಿಂದ ದ್ರುಪದನನ್ನು ಕಾಲಿನಿಂದ ಒದ್ದನು;
ಒದೆದು = ಈ ರೀತಿ ಒದ್ದು ಅಪಮಾನಗೊಳಿಸಿದ ನಂತರ;
ಇನಿತು = ಈ ಬಗೆಯಲ್ಲಿ/ಇಷ್ಟು; ಪರಿಭವಮ್+ಪಡಿಸಿದುದು; ಪರಿಭವ = ಸೋಲು/ತಿರಸ್ಕಾರ; ಪಡಿಸು = ಉಂಟು ಮಾಡು; ಸಾಲ್ಗುಮ್ = ಸಾಕು;
ನಿನ್ನನ್ ಇನಿತು ಪರಿಭವಂಬಡಿಸಿದುದು ಸಾಲ್ಗುಮ್ = ನಿನ್ನನ್ನು ಈ ಮಟ್ಟಿಗೆ ಅಪಮಾನಪಡಿಸಿರುವುದು ಸಾಕು;
ಕೊಂದಡೆ = ಕೊಂದರೆ; ಮೇಲ್+ಅಪ್ಪ; ಮೇಲ್ = ಪ್ರಬಲ/ಮಿಗಿಲು/ಹೆಚ್ಚು; ಅಪ್ಪ = ಆಗಿರುವ; ಪಗೆ = ಶತ್ರು/ಹಗೆ; ಅಂಜು = ಹೆದರು; ಕೊಂದ+ಅಂತೆ; ಇರ್ಕುಮ್ = ಇರುವುದು;
ನಿನ್ನನ್ ಕೊಲಲ್ ಆಗದು ಕೊಂದೊಡೆ ಮೇಲಪ್ಪ ಪಗೆಗೆ ಅಂಜಿ ಕೊಂದಂತೆ ಆಗಿ ಇರ್ಕುಮ್ = ಈಗ ನಿನ್ನನ್ನು ಕೊಲ್ಲಲಾಗದು. ಏಕೆಂದರೆ ನಿನ್ನನ್ನು ನಾನು ಕೊಂದರೆ ಪ್ರಬಲನಾದ ಹಗೆಯಿಂದ ಮುಂದೆ ನನಗೆ ಏನಾಗುವುದೋ ಎಂದು ಹೆದರಿಕೊಂಡು ಕೊಂದಂತೆ ಆಗುವುದು;
ಕಟ್ಟು = ಸಂಕೋಲೆ/ಬೇಡಿ; ಕಟ್ಟುಗಳ್+ಎಲ್ಲಮ್; ಬಿಟ್ಟು = ಬಿಡಿಸಿ; ಕಳೆದು = ತೆಗೆದು; ಪೋಗು = ಹೋಗು;
ಎಂದು ಕಟ್ಟಿದ ಕಟ್ಟುಗಳೆಲ್ಲಮಮ್ ತಾನೆ ಬಿಟ್ಟು ಕಳೆದು = ಎಂದು ನುಡಿದು ದ್ರುಪದನಿಗೆ ಬಿಗಿದಿದ್ದ ಕಟ್ಟುಗಳೆಲ್ಲವನ್ನೂ ದ್ರೋಣನು ತಾನೇ ಕಳಚಿ;
ಪೋಗು = ಹೋಗು/ಮರೆಯಾಗು;
ಪೋಗು ಎಂಬುದುಮ್ = ತೊಲಗಾಚೆ ಎನ್ನಲು;
ಪರಿಭವ = ಸೋಲು/ತಿರಸ್ಕಾರ; ಅನಲ = ಬೆಂಕಿ; ಅಳವು+ಅಲ್ಲದೆ; ಅಳವು = ಅಳತೆ; ಅಳುರ್ = ಹರಡು/ಸುಡು;
ಪರಿಭವ ಅನಳನ್ ಅಳವಲ್ಲದೆ ಅಳುರೆ = ಸೋಲಿನಿಂದ ಉಂಟಾದ ಅಪಮಾನದ ಬೆಂಕಿಯು ದೊಡ್ಡ ಪ್ರಮಾಣದಲ್ಲಿ ಹರಡಿಕೊಂಡು ದ್ರುಪದನ ಮಯ್ ಮನವನ್ನು ಸುಡುತ್ತಿರಲು;
ಕೊಲ್ವ+ಅನ್ನನ್; ಅನ್ನನ್ = ಅಂತಹವನು;
ನಿನ್ನನ್ ಕೊಲ್ವನ್ನನ್ ಒರ್ವ ಮಗನುಮನ್ = ನಿನ್ನನ್ನು ಕೊಲ್ಲುವಂತಹ ಒಬ್ಬ ಮಗನನ್ನು;
ಪೆಂಡತಿ+ಅಪ್ಪನ್ನಳ್; ಪೆಂಡತಿ = ಹೆಂಡತಿ; ಅಪ್ಪನ್ನಳ್ = ಆಗುವಂತಹವಳು; ಮಗಳುಮ್+ಅನ್;
ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳ್ ಒರ್ವ ಮಗಳುಮನ್ = ವಿಕ್ರಮಾರ‍್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನು;
ಪಡೆ = ಹೊಂದು;
ಪಡೆದಲ್ಲದೆ ಇರೆನ್ ಎಂದು = ಪಡೆದಲ್ಲದೆ ಇರುವುದಿಲ್ಲ ಅಂದರೆ ಪಡದೇ ಪಡೆಯುತ್ತೇನೆ ಎಂದು ನುಡಿದು;
ಮಹಾ = ದೊಡ್ಡ; ಪ್ರತಿಜ್ಞಾ = ಆಣೆ/ಪ್ರಮಾಣ/ಪಣ; ಆರೂಢ = ಕಯ್ ಕೊಂಡ/ಮಾಡಿದ; ಪೋದನ್ = ಹೋದನು/ತೆರಳಿದನು;
ಮಹಾ ಪ್ರತಿಜ್ಞಾರೂಢನಾಗಿ ಪೋದನ್ = ದ್ರೋಣನ ಮುಂದೆ ದ್ರುಪದನು ದೊಡ್ಡ ಪಣವನ್ನು ತೊಟ್ಟು ಅಲ್ಲಿಂದ ಹೋದನು;
(ಚಿತ್ರ ಸೆಲೆ: kannadadeevige.blogspot.com)
ಇತ್ತೀಚಿನ ಅನಿಸಿಕೆಗಳು