ಕ್ಲಾಡ್ – ಅಪರೂಪದ ಬಿಳಿ ಮೊಸಳೆ

– .

ಅಮೇರಿಕಾ ಸ್ಯಾನ್‍ ಪ್ರಾನ್ಸಿಸ್ಕೋದ ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್ ನಲ್ಲಿರುವ ಕ್ಲಾಡ್ ಎಂಬ ಬಿಳಿ ಮೊಸಳೆಯು ಬಹಳ ಅಪರೂಪದ ಪ್ರಾಣಿಯಾಗಿದೆ. ಇದು ಬಿಳಿ ಮೊಸಳೆಗಳಲ್ಲೇ ಅತ್ಯಂತ ಹಿರಿಯ ಮೊಸಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ವಯಸ್ಸು ಕೇವಲ 26 ವರ‍್ಶ. ಇದನ್ನು ಆಲ್ಬಿನೋ ಅಲಿಗೇಟರ್ ಎನ್ನಲಾಗುತ್ತದೆ.

ಆಲ್ಬಿನೋ ಎಂದರೇನು?

ಆಲ್ಬಿನೋ ಪದ ಅಕ್ಯುಲೋಕ್ಯುಟೇನಿಯಸ್ ಆಲ್ಬಿನಿಸಂ ಅನ್ನು ಸೂಚಿಸುತ್ತದೆ. ಈ ಅನುವಂಶೀಯ ಅಸ್ವಸ್ತತೆಯುಳ್ಳವರ ದೇಹದಲ್ಲಿ ಮೆಲನಿನ್ ಪಿಗ್ಮೆಂಟ್ ಅತ್ಯಂತ ಕಡಿಮೆ ಇರುತ್ತದೆ ಅತವಾ ಉತ್ಪಾದನೆಯೇ ಆಗುವುದಿಲ್ಲ. ದೇಹದಲ್ಲಿನ ಮೆಲನಿನ್ ಪ್ರಮಾಣದ ಮೇಲೆ ಚರ‍್ಮ, ಕೂದಲು ಮತ್ತು ಕಣ್ಣುಗಳ ಬಣ್ಣ ನಿರ‍್ದಾರಿತವಾಗುತ್ತದೆ. ಆಪ್ಟಿಕ್ ನರಗಳ ಬೆಳವಣಿಗೆಯ ಮೇಲೂ ಮೆಲನಿನ್ ಪ್ರಬಾವ ಬೀರುತ್ತದೆ. ಆಲ್ಬಿನಿಸಂ ಇರುವವರಿಗೆ ಚರ‍್ಮ ಹಾಗೂ ಕೂದಲಿನ ಬಣ್ಣ ಬದಲಾಗುವುದಲ್ಲದೆ ಕಣ್ಣಿನ ಸಮಸ್ಯೆ ಸಹ ಎದುರಾಗುತ್ತದೆ. ಆಲ್ಬಿನಿಸಂ ಚಿನ್ಹೆಗಳು, ವ್ಯಕ್ತಿಯ ಚರ‍್ಮ, ಕೂದಲು ಮತ್ತು ಕಣ್ಣಿನ ಬಣ್ಣಗಳಿಂದ ಸ್ಪುಟವಾಗಿ ಕಂಡುಬರುತ್ತದೆ. ಕೆಲವೊಮ್ಮೆ ಸ್ವಲ್ಪ ಮಟ್ಟಿನ ವ್ಯತ್ಯಾಸಗಳಾಗಬಹುದು. ಆಲ್ಬಿನಿಸಂ ಅಸ್ವಸ್ತತೆಯಿರುವವರ ಚರ‍್ಮ ಸೂರ‍್ಯನ ಕಿರಣಗಳ ಪರಿಣಾಮಕ್ಕೆ ಸೂಕ್ಶ್ಮವಾಗಿರುವುದರಿಂದ ಚರ‍್ಮದ ಕ್ಯಾನ್ಸರ್ ಗೆ ಗುರಿಯಾಗುವ ಅಪಾಯ ಹೆಚ್ಚು. ಈ ಆಲ್ಬಿನೋ ಅಲಿಗೇಟರ್ ಕ್ಲಾಡ್ ನಲ್ಲಿ ಮೆಲನಿನ್ ವರ‍್ಣದ್ರವ್ಯ ಇಲ್ಲವಾದ ಕಾರಣ, ಇಡೀ ದೇಹ ಬಿಳಿಯ ಬಣ್ಣದ ಚರ‍್ಮವನ್ನು ಹೊಂದಿದೆ.

ಕ್ಲಾಡ್ ನ ಹುಟ್ಟು

ಕ್ಲಾಡ್ 1995 ರ ಸೆಪ್ಟೆಂಬರ್ 15ರಂದು ಪ್ಲೋರಿಡಾದಲ್ಲಿ ಹುಟ್ಟಿತು. ಹುಟ್ಟಿದಾಗ ಇದರ ತೂಕ ಕೇವಲ 57 ಗ್ರಾಂ (2 ಔನ್ಸ್). ಇಂದು 76 ಹಲ್ಲುಗಳನ್ನು ಹೊಂದಿರುವ ಕ್ಲಾಡ್ ತೂಕ 222 ಪೌಂಡ್ಸ್ (ಅಂದಾಜು 101 ಕೆಜಿ) ಹಾಗೂ ಉದ್ದ 9 ಅಡಿ 5 ಇಂಚು. ಆಲ್ಬಿನಿಸಂ ಅಸ್ವಸ್ತತೆಯಿಂದಾಗಿ ಕ್ಲಾಡ್ ಅರಣ್ಯದಲ್ಲಿ ಇತರೆ ಅಲಿಗೇಟರ್ ನಂತೆ ಜೀವಿಸುವುದು ಸಾದ್ಯವಿರಲಿಲ್ಲ. ಜಗತ್ತಿನಲ್ಲಿ ಈ ಅಸ್ವಸ್ತತೆಗೆ ಒಳಗಾದ ಕೆಲವೇ ಮೊಸಳೆಗಳಿದ್ದು, ಹೆಚ್ಚಿನವು ಇಂದು ಮಾನವನ ಆರೈಕೆಯಲ್ಲಿ ಸುರಕ್ಶಿತವಾಗಿವೆ. ಕ್ಲಾಡ್ ಮೊಸಳೆಯನ್ನು ಇದರ ಹದಿಮೂರನೇ ವಯಸ್ಸಿನಲ್ಲಿ, ಅಂದರೆ 2008ರಲ್ಲಿ, ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್‍ಗೆ ಕರೆತರಲಾಯಿತು. 2009ರಲ್ಲಿ ಇನ್ನೊಂದು ಮೊಸಳೆಯ ಕಡಿತದಿಂದ ಸೋಂಕು ತೀವ್ರವಾದ ಹಿನ್ನೆಲೆಯಲ್ಲಿ, ಬಲ ಪಂಜವನ್ನು ಕತ್ತರಿಸಿ ತೆಗೆಯಬೇಕಾಯಿತು. ಕ್ಲಾಡ್ ಮೊಸಳೆಯ ಮೈ ಬಣ್ಣ ಪೂರ‍್ತಿ ಬಿಳಿ. ಆಲ್ಬಿನಿಸಂ ಅಸ್ವಸ್ತತೆಯಿಂದಾಗಿ ಅದಕ್ಕೆ ದ್ರುಶ್ಟಿಯೂ ಕುಂಟಿತವಾಗಿದೆ. ಇದೇ ಅದರ ಚಲನವಲನದ ಮೇಲೂ ಹೆಚ್ಚು ಪ್ರಬಾವ ಬೀರಿದೆ.

ಕ್ಲಾಡ್ ನ ಪ್ರಸಿದ್ದಿ ಮತ್ತು ಆರೈಕೆ

ಕ್ಯಾಲಿಪೋರ‍್ನಿಯಾ ಅಕಾಡೆಮಿ ಆಪ್ ಸೈನ್ಸಸ್‍ನಲ್ಲಿರುವ ಆಲ್ಬಿನೋ ಅಲಿಗೇಟರ್ ಕ್ಲಾಡ್ ಒಂದು ವಿಶೇಶ ಆಕರ‍್ಶಣೆಯಾಗಿದೆ. ಇದರ ವೀಕ್ಶಣೆಗಾಗಿ, ಸಾಕಶ್ಟು ಪ್ರವಾಸಿಗರು ಬರುವುದುಂಟು. ಆದ್ದರಿಂದ ಇದನ್ನು ಮಗುವಿನಂತೆ ಆರೈಕೆ ಮಾಡಲಾಗುತ್ತದೆ. ವಾರದಲ್ಲಿ ಮೂರು ಬಾರಿ ವಿಶೇಶ ತರಬೇತಿ ಅವದಿಯನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿಯೇ ಮೀನುಗಳಿಂದ ತಯಾರಿಸಲಾದ ಉಂಡೆಗಳನ್ನು ನೀಡಲಾಗುತ್ತದೆ. ದ್ರುಶ್ಟಿ ದೋಶವಿರುವ ಹಿನ್ನೆಲೆಯಲ್ಲಿ, ಕ್ಲಾಡ್ ತನ್ನ ಆಹಾರಕ್ಕಾಗಿ ಸುತ್ತ ಮುತ್ತ ಹುಡುಕಾಡುವ ತೊಂದರೆಯನ್ನು ತಪ್ಪಿಸಲು, ಅದರ ದವಡೆಯ ಬಳಿಗೇ ಆಹಾರವನ್ನು ಒದಗಿಸಲಾಗುತ್ತದೆ. ಕ್ಲಾಡ್ ವಿರಮಿಸುವ ಕಲ್ಲುಬಂಡೆಯ ಕಾವು ಅದರ ಅನುಕೂಲಕ್ಕೆ ಹೊಂದಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗಿದೆ.

ಆಲ್ಬಿನೋ ಅಲಿಗೇಟರ್ ಗಳು ಸಾಮಾನ್ಯವಾಗಿ ಅಮೇರಿಕಾ ಸಂಯುಕ್ತ ಸಂಸ್ತಾನದ ಆಗ್ನೇಯ ಬಾಗದ ಸಿಹಿ ನೀರಿನ ನದಿಗಳಲ್ಲಿ, ಸರೋವರಗಳಲ್ಲಿ, ಜೌಗು ಪ್ರದೇಶದಲ್ಲಿ ಕಂಡುಬರುತ್ತವೆ. ಬಹಳ ಅಪರೂಪವಾದ ಈ ಬಿಳಿ ಅಲಿಗೇಟರ್ ಗಳು ಇಡೀ ವಿಶ್ವದಲ್ಲಿ ಸುಮಾರು 100 ಇರಬಹುದು ಎಂದು ಜೀವಶಾಸ್ತ್ರಜ್ನರು ಅಂದಾಜಿಸಿದ್ದಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: earthtouchnews.com, askinglot.com, smithsonianmag.com, datebook.sfchronicle.com, calacademy.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: