‘ಅಮೇಜಾನ್’ – ಯಾವುದಕ್ಕೂ ಹೆದರದ ಗಟ್ಟಿಗಿತ್ತಿ

ರೇಶ್ಮಾ ಸುದೀರ್.

“ಅದೇನು ಗಂಡುಬೀರಿ ತರ ಆಡ್ತೀಯೇ? ಸ್ವಲ್ಪ ನಯ ನಾಜೂಕು ಕಲಿ”

ಗಂಡುಬೀರಿ ಅಂದ್ರೆ ಏನಮ್ಮ? ಅಮ್ಮನ ಮಾತು ಮುಗಿಯೋದ್ರೊಳಗೆ ನನ್ನ ಪ್ರಶ್ನೆ ಸಿದ್ದ. “ಗಂಡುಬೀರಿ ಅಂದ್ರೆ ನೀನೇ… ತಲೆ ಹರಟೆ” ಅಂತ ನನ್ನ ತಲೆಗೆ ಮೊಟಕಿದ್ರೇನೇ ಅಮ್ಮನಿಗೂ ಸಮಾದಾನ ಹಾಗೆ ನನಗೂ. ರಜಾ ದಿನಗಳಲ್ಲಿ ಅಪ್ಪಯ್ಯನ ಮನೆಗೆ (ಅಜ್ಜನಿಗೆ ನಾವೆಲ್ಲ ಮೊಮ್ಮಕ್ಕಳು ಹೀಗೆ ಕರೆಯುತ್ತಿದ್ದದ್ದು) ಹೊರಟ್ರೆ ಸಾಕು, ಅಲ್ಲಿ ಹೋಗ್ಬೇಡ, ಇಲ್ಲಿ ಹೋಗ್ಬೇಡ, ಅವರಿವರ ಹತ್ತಿರ ಜಗಳ ಆಡ್ಬೇಡ, ಅಮ್ಮನ ಎಲ್ಲಾ ಬೇಡಗಳ ಪಟ್ಟಿಗೆ ತಲೆ ಆಡಿಸಿ ಹೊರಡುತ್ತಿದ್ದೆ. ಎಲ್ಲಾ ಉಪದೇಶಗಳನ್ನು ಅಮ್ಮನ ಹತ್ತಿರಾನೇ ಬಿಟ್ಟು, ತಮ್ಮನ ಜೊತೆಗೆ ಬಸ್ ಹತ್ತುತ್ತಿದ್ದೆ, ಅಲ್ಲಿಗೆ ಅಜ್ಜಿಗೆ ಟೆನ್ಶನ್ ಶುರು. ಅಪ್ಪ ಇಲ್ಲದ ಮಕ್ಕಳು, ಇವೋ ಮಹಾ ಪಟಿಂಗರು. ಇದೂ ಒಂದಿದೆ, ಹುಡುಗಿ ಅನ್ನಂಗಿಲ್ಲ, ಹೇಳಿದ್ ಒಂದು ಮಾತೂ ಕೇಳಲ್ಲ. ಬಿಸಿಲು ಅನ್ನದಿಲ್ಲ, ಬೆಂಕಿ ಅನ್ನದಿಲ್ಲ ಒಂದೇ ಸಮ ಹಡ್ಡೆ, ಒಳಕಡೇಲಿ ಅಲೀತಾವೆ. ಏನಾದ್ರೂ ಹೆಚ್ಚುಕಮ್ಮಿ ಆದ್ರೆ ಪುಟ್ಟಕ್ಕನಿಗೆ (ನನ್ನ ಅಮ್ಮ) ಏನ್ ಹೇಳದು ಅಂತ ಮನೇಲಿರೋರ ತಲೆ ತಿನ್ನುತ್ತಿತ್ತು.

ರಜೆ ಬಂತೆಂದರೆ ಸಾಕು, ದೊಡ್ಡಮ್ಮ, ಚಿಕ್ಕಮ್ಮ, ಮಾವಂದಿರ ಮಕ್ಕಳೆಲ್ಲಾ ಒಟ್ಟಿಗೆ ಸೇರಿದರೆ ಅದೊಂದು ಸಣ್ಣ ಶಾಲೆಯೇ ಸರಿ. ಮಕ್ಕಳೆಲ್ಲಾ ಆಟದ ಬರದಲ್ಲಿ ಜಗಳ ಆಡಿಕೊಂಡರೆ ಆ ಜಗಳಕ್ಕೆಲ್ಲಾ ರೂವಾರಿ ನಾನೇ ಆಗಿರುತ್ತಿದೆ. ಮಕ್ಕಳ ಅಮ್ಮಂದಿರು “ಬಜಾರಿ ಎಲ್ಲರನ್ನ ಅಳಿಸ್ತಾಳೆ” ಅಂತ ಅಂದರೆ, ನನಗೆ ಒಳಗೊಳಗೇ ಒಂತರಾ ಕುಶಿ. ತವರು ಮನೆಗೆ ಬಂದ ಅಮ್ಮನ ಹತ್ತಿರ ಎಲ್ಲರ ದೂರೇ ದೂರು. ಪಾಪ ಅಮ್ಮಂಗೆ ಆಡೋ ಹಾಗಿಲ್ಲ, ಅನುಬವಿಸೋ ಹಾಗಿಲ್ಲ. ಸ್ನಾನಕ್ಕೆ ಅಂತ ಕರಕೊಂಡು ಹೋದಾಗ ಒಳಶುಂಟಿ ಪ್ರಯೋಗ.

ಎಸ್‌. ಎಸ್. ಎಲ್. ಸಿ ವರೆಗೂ ನನ್ನದು ಬಾಯ್ಕಟ್(ಅಮಿತಾಬ್ ಬಚ್ಚನ್ ಕಟ್. ನನ್ನ ಸ್ನೇಹಿತವರ‍್ಗ ಹಾಗೆ ಕರೀತಾ ಇದ್ದದ್ದು). ಒಂದು ದಿನ ನೆಂಟರ ಮನೆಗೆ ಅಂತ ಅಮ್ಮ, ಚಿಕ್ಕಮ್ಮ ಮತ್ತು ನಾನು ಹೊರೆಟೆವು. ಬಸ್ಸಿನಲ್ಲಿದ್ದ ಅಮ್ಮನ ದೂರದ ಸಂಬಂದಿ, “ಪಾಪಣ್ಣ ಇಲ್ಲಿ ಬಾ ನನ್ನ ಪಕ್ಕ ಸೀಟಿದೆ” ಅಂತ ಕೂಗಿ ಕರೆದರು. ಬೇಕಂತಲೇ ನನ್ನ ಕಿಚಾಯಿಸಲು ಆತ ಹಾಗೆ ಕರೆದಿದ್ದು ನನಗೆ ನಕಶಿಕಾಂತ ಸಿಟ್ಟು ತರಿಸಿತು, “ಯಾರ‍್ರಿ ಪಾಪಣ್ಣ? ಕಣ್ಣು ಕಾಣಲ್ವ ನಿಮಗೆ? ಅಂತ ಜಗಳಕ್ಕೆ ನಿಂತುಬಿಟ್ಟೆ. ” ಅಯ್ಯೋ ನೀನು ಪಾಪಕ್ಕನ? ನಾನು ನಿನ್ನ ಕೂದಲು ನೋಡಿ ಪಾಪಣ್ಣ ಅಂದುಕೊಂಡೆ ಅಂತ ಮತ್ತು ತಮಾಶೆ ಮಾಡ್ದ. ಇಡೀ ಬಸ್ಸೇ ತಿರುಗಿ ನೋಡುವಂತೆ ಅಬ್ಬರಿಸಿ ಅವನ ಬಾಯಿ ಮುಚ್ಚಿಸಿದೆ. ಅಮ್ಮ ಅಲ್ಲೇ ನನಗೆ ತಿವಿದು ಸುಮ್ನಿರೆ, ಎಲ್ಲಾ ನಿನ್ನ ಬಜಾರಿ ಅಂದ್ಕೋತಾರೆ ಅಂತ ಹೇಳಿದ ಮೇಲೆಯೇ ಇನ್ನೂ ಬುಸುಗುಡುತ್ತಿದ್ದ ನಾನು ಸುಮ್ಮನಾಗಿದ್ದು. ನಮ್ಮದು ವೀರ ವನಿತೆಯರ ನಾಡು. ಏನ್ ಮಾಡೋದು? ಬಾಯಿ ಜೋರು ಮಾಡಿದ್ರೆ ಬಜಾರಿ, ಗಂಡುಬೀರಿಯ ಪಟ್ಟ!

ಶಾಲಾದಿನಗಳಲ್ಲಿ ಸಂಗೀತ, ಬಾಶಣ, ಚರ‍್ಚಾಸ್ಪರ‍್ದೆಗಳಲ್ಲಿ ಬಾಗವಹಿಸಿ ಬಹುಮಾನ ಗಿಟ್ಟಿಸಿಕೊಳ್ಳುತ್ತಿದ್ದೆ. ಅದರಲ್ಲೂ ಬಾಶಣ ಮತ್ತು ಚರ‍್ಚಾಸ್ಪರ‍್ದೆ ನನಗೆ ಅಚ್ಚುಮೆಚ್ಚು. ಸ್ಪರ‍್ದೆ ಅಂದ ಮೇಲೆ ಪ್ರತಿಸ್ಪರ‍್ದಿಗಳು ಕೂಡಾ ಚೆನ್ನಾಗಿ ತಯಾರಿ ಮಾಡಿಕೊಂಡೇ ಬಂದಿರುತ್ತಾರಲ್ಲ. ಒಮ್ಮೆ ಬೇರೆ ಶಾಲೆಯ ವಿದ್ಯಾರ‍್ತಿಗೆ ಮೊದಲ ಬಹುಮಾನ ಬಂತು. ಅವನಿಗಿಂತ ನನ್ನ ಪಾಯಿಂಟುಗಳು ಚೆನ್ನಾಗಿದ್ದವು. ಇವರು ಪಕ್ಶಪಾತ ಮಾಡಿದ್ದಾರೆ ಅಂತ ನಮ್ಮ ಉಪಾದ್ಯಾಯರ ಹತ್ತಿರ ದೂರು ಹೇಳಿ ಜಗಳಕ್ಕೆ ನಿಂತುಬಿಟ್ಟೆ. ಅವರು ಸಮಾದಾನ ಮಾಡಿದ ಮೇಲೂ ದುಮುಗುಡುತ್ತಲೇ ಇದ್ದೆ. ನೀನು ಅವತ್ತು “ತೇಟ್ ಜಟ್ಟಿತರ ಕಾಣ್ತಿದ್ದೆ” ಅಂತ ಅದನ್ನು ಇನ್ನೂ ಮರೆತಿರದ ಆ ಸ್ನೇಹಿತ ಈಗಲೂ ನನಗೆ ತಮಾಶೆ ಮಾಡುತ್ತಾನೆ. ಅಲ್ಪ ಸ್ವಲ್ಪ ಓದೋದ್ರಲ್ಲಿ ಕೂಡಾ ಮುಂದಿದ್ದೆ, ಹಾಗಾಗಿ ಕ್ಲಾಸ್ ಲೀಡರ್ ಮಾಡಿದ್ರು. ಶಿಸ್ತಿಗೆ ಹೆಸರಾಗಿದ್ದ ಕಾನ್ವೆಂಟ್, ಒಂದಿಬ್ಬರು ಸಿಸ್ಟರ್ ಗಳ ಅಚ್ಚುಮೆಚ್ಚಿನ ವಿದ್ಯಾರ‍್ತಿನಿ ಕೂಡಾ, ಅದೂ ಒಂದು ರೀತಿ ಕೋಡು ಮೂಡಿಸಿತ್ತು. ಒಂಚೂರು ಅತ್ತಿತ್ತ ನೋಡಿ ಪಿಸುಗುಟ್ಟಿದರೂ ಸಾಕು ಬೋರ‍್ಡ್ ಮೇಲೆ ಹೆಸರು ಬರೆದಿಡುತ್ತಿದ್ದೆ. ಶಿಕ್ಶೆಗೆ ಒಳಗಾದ ಸಹಪಾಟಿಗಳು ನನ್ನ ಕುರಿತು ಸಿಸ್ಟರ್ ಚಮಚಾ ಅಂತ ಮಾತಾಡಿಕೊಳ್ತಿದ್ದಿದ್ದು ಕಿವಿಗೆ ಬಿದ್ದರೂ ಆಗ ಹೇಗೆ ಸುಮ್ಮನಿದ್ದೆ? ಅಂತ ಈಗ ಅನಿಸುತ್ತಿದೆ. ಈ ಲೀಡರ್‌ಗಿರಿ ಇಂದ ಆಗ ಎಶ್ಟು ವಿರೋದಿಗಳು ನನಗೆ, ಆದರೂ ಕ್ಯಾರೇ ಅನ್ನುತ್ತಿರಲಿಲ್ಲ. ಇಶ್ಟು ಸಾಲದು ಎಂಬಂತೆ, ತಮ್ಮನಂತೂ ಅಮ್ಮನ ಹತ್ತಿರ ದಿನಾ ಹೋಗಿ ದೂರು ಹೇಳುತ್ತಿದ್ದ. “ನನ್ನನ್ನ ಇವಳಿಗೆ ಕಂಪೇರ್ ಮಾಡ್ತಾರೆ ಸಿಸ್ಟರ್‌ಗಳು. ಅವಳು ಎಲ್ಲಾ ವಿಶಯಗಲ್ಲಿ ಮುಂದು, ನೀನ್ ಯಾಕೆ ಹೀಗಿರುತ್ತೀಯಾ? ಅಂತಾರೆ. ಇವಳ ಕ್ಲಾಸ್ ಮೇಟ್ಗಳು ನನಗೆ ಟಾರ‍್ಚರ್ ಕೊಡ್ತಾರೆ. ಒಂದೋ ಇವಳನ್ನ ಅಲ್ಲಿಂದ ಬೇರೆ ಸ್ಕೂಲ್ ಗೆ ಹಾಕು, ಇಲ್ಲಾ ನನ್ನ ಬೇರೆ ಸ್ಕೂಲ್ ಗೆ ಹಾಕು” ಅಂತ, ಒಂದೇ ವರಾತ ತೆಗೆಯೋನು. ಅಲ್ಲಿಗೆ ಅಮ್ಮನ ಕೋರ‍್ಟ್ ಮಾರ‍್ಶಲ್ ಶುರು.

ಆಟ ಆಡೋವಾಗ ಸಹಪಾಟಿಯೊಬ್ಬ ಸ್ನೇಹಿತೆಯ ಕೂದಲು ಹಿಡಿದೆಳೆದ ಅಂತ ಅವನಿಗೆ ನಾವು ನಾಲ್ಕು ಜನ ಹುಡುಗೀರು ಸೇರಿ ಬಗ್ಗಿಸಿ ಗೂಸಾ ಕೊಟ್ಟೆವು. ಅವನು ಅಳುತ್ತಾ ಹೋಗಿ ಸಿಸ್ಟರ್ ಹತ್ತಿರ ದೂರು ಹೇಳಿದಾಗ ಅವರು ಕಣ್ಣಂಚಿನಲ್ಲಿ ನಗೆ ತುಳುಕಿಸಿ, ಬೇಕೆಂದೇ ಗಡಸು ಮುಕ ಮಾಡಿಕೊಂಡು ಗಂಡುಬೀರಿಯರಾಗಿದ್ದೀರಿ ಅಂತ ಕೋಲಿಂದ ನಾವು ಹಾಕಿದ್ದ ಸ್ಕರ‍್ಟ್‌ಗೆ ಪೆಟ್ಟು ಬೀಳುವಂತೆ ಹೊಡೆದ ಹಾಗೆ ಮಾಡಿದರು. ಲಂಗಕ್ಕೆ ಕೋಲು ತಾಗಿದ ಶಬ್ದಕ್ಕೆ ಹುಡುಗ ಪೂರ‍್ತಿ ಕುಶಿ. ನಮಗೂ ಏಟು ಬಿದ್ದಿಲ್ಲವಾದ್ದರಿಂದ ನಾವು ಕುಶಿ. ಅಜ್ಜನ ಮನೆಗೆ ರಜೆಗೆ ಹೋದಾಗ, ಪೇರಲೆಮರ, ಗೇರುಮರ, ನೇರಳೆಮರ ಹೀಗೆ ಹಣ್ಣು ಬಿಡುವ ಒಂದೂ ಮರ ಬಿಡುತ್ತಿರಲಿಲ್ಲ ನಾವು ಮೊಮ್ಮಕ್ಕಳು. ಅದರಲ್ಲೂ ಮರ ಹತ್ತೋದರಲ್ಲಿ ಹುಡುಗೀರೇ ಒಂದು ಕೈಮುಂದೆ. ಮರಹತ್ತಿ ಕೊಂಬೆ ಮೇಲೆ, ಕಾಲು ಕೆಳಗೆ ಇಳಿಬಿಟ್ಟು ಕುಳಿತು ಅಲ್ಲೇ ಹಣ್ಣು ತಿನ್ನುವ ಮಜವೇ ಮಜಾ.

ಇನ್ನೊಂದು ನಾನು ಸೈಕಲ್ ಕಲಿಯಲು ಪ್ರಯತ್ನ ಪಟ್ಟ ಪ್ರಸಂಗ. ಸೈಕಲ್ ಹೊಡಿಯೋದು ಕಲೀಬೇಕು, ಅದಾದ ಮೇಲೆ ಬೈಕ್ ಓಡಿಸಬೇಕು. ಹೀಗೆ ಏನೇನೋ ಕನವರಿಕೆ ಆಗಿತ್ತು. ಆಗ ಗಂಟೆಗೆ ಇಶ್ಟು ಅಂತ ಕೊಟ್ಟರೆ ಬಾಡಿಗೆಗೆ ಸೈಕಲ್ ಸಿಗುತಿತ್ತು. ಬಾಡಿಗೆಗೆ ದುಡ್ಡು ಕೊಡೋರು ಯಾರು? ಅಮ್ಮನ್ನ ಕೇಳಿದ್ರೆ ಬೆನ್ನು ಹುಡಿಹಾರೋದು. ನಿನಗ್ಯಾಕೆ ಸೈಕಲ್ ಉಸಾಬರಿ? ತೆಪ್ಪಗೆ ಮನೇಲಿ ಇರು ಅನ್ನೋ ಉತ್ತರ ಗ್ಯಾರಂಟಿ ಅಂತ ಗೊತ್ತಿತ್ತು. ನನ್ನ ತಮ್ಮ ಹಾಗೂ ಹೀಗೂ ಅಮ್ಮನ ಪುಸಲಾಯಿಸಿ ಸೈಕಲ್ ಬಾಡಿಗೆಗೆ ತರುತ್ತಿದ್ದ. ಆಗ ಅವನ ಮೇಲೆ ಪ್ರೀತಿಯ ಮಳೆಯೇ ಸುರಿಸುತ್ತಿದ್ದೆ. 5 ನಿಮಿಶ ಹೊಡೆದು ಕೊಡುತ್ತೀನಿ ಕೊಡು ಅಂತ ಗೋಗರೀತಿದ್ದೆ. ಅವನೋ ಹಳೇ ಕ್ಯಾತೆ, ಜಗಳದ ತಗಾದೆ ತೆಗೆದು ಇನ್ನಿಲ್ಲದಂತೆ ಕಾಡುತ್ತಿದ್ದ. ಜನ್ಮಾಂತರದಿಂದ ಡ್ಯೂ ಇದ್ದ ಜಗಳಗಳೆಲ್ಲಾ ಸೆಟಲ್ ಆದ ಮೇಲೆ ಅಂತೂ ಇಂತೂ ಒಂದಿನ ಸೈಕಲ್ ಕೊಟ್ಟ. ಹಿಡ್ಕ ಬಿಡಬ್ಯಾಡ ಅಂತ ಹೇಳಿ, ಅವನು ಹೇಗೋ ಹಿಡ್ಕೊಂಡಿದ್ದಾನೆ ಅನ್ನೋ ದೈರ‍್ಯದಲ್ಲಿ 10 ಮಾರು ಮುಂದೆ ಹೋಗಿದ್ದೆ. ತಿರುವಿನಲ್ಲಿ ನೋಡ್ತೀನಿ ಇವನೆಲ್ಲಿ? ದೂರ ನಿಂತು ಹಲ್ಲು ಕಿರುಯುತ್ತಿದ್ದಾನೆ. ನಾನು ಹೆದರಿ ಕೈಬಿಟ್ಟು ಬಿದ್ದು ಮಂಡಿ ತರಚಿಕೊಂಡು ಹೋ ಎಂದು ಅಳುತ್ತಾ ಅಮ್ಮನಲ್ಲಿ ದೂರು ಹೇಳಲು ಹೋದರೆ, ಗಂಡುಬೀರಿ ತರ ಸೈಕಲ್ ಅಂತ ಬೀದಿ ಅಲೀತಿಯಾ ಅಂತ ಇನ್ನು ಎರಡೇಟು ಬಿಗಿಸಿಕೊಂಡು, ಇನ್ನು ಏನೇ ಆದರೂ ಅಮ್ಮನವರೆಗೆ ದೂರು ತರಬಾರದು ಅಂತ ಅವತ್ತೇ ನಿರ‍್ದಾರ ಮಾಡಿದೆ. ಇನ್ನೊಂದು ದಿನ ದೊಡ್ಡ ಸೈಕಲ್ ಹೊಡೆಯುವ ಪ್ರಯತ್ನದಲ್ಲಿ ಬ್ರೇಕ್ ಹಿಡಿಯದೆ, ನಾನು ಕೆಳಗೆ ಹಾರಿದ್ದೆ. ಪುಣ್ಯಕ್ಕೆ ಕಾಲು ಮುರೀಲಿಲ್ಲ. ಆದರೆ ಮರಕ್ಕೆ ಡಿಕ್ಕಿ ಹೊಡೆದು ಅಲ್ಲೇ ಮುಂದೆ ಇದ್ದ ದರೆಯಿಂದ ಸೈಕಲ್ ಉರುಳಿ ಕೆಳಗೆ ಬಿದ್ದಿದ್ದರಿಂದ ಹ್ಯಾಂಡಲ್ ಮುರಿಯಿತು. ಅಲ್ಲಿಗೆ ಸೈಕಲ್, ಅದರಾಚೆ ಬೈಕು ಕಲಿಯುವ ನನ್ನ ಕನಸಿಗೆ ತಿಲಾಂಜಲಿ ಬಿತ್ತು.

ತುಂಗಾ ಮತ್ತು ಬದ್ರಾ ಒಟ್ಟಿಗೆ ಹುಟ್ಟಿದರೂ ಬೇರೆ ಬೇರೆಯಾಗಿ ಹರಿಯುವ ನದಿಗಳು. ತುಂಗೆಯನ್ನು ಹುಡುಕಿಕೊಂಡು ಹೋಗುವ ಬದ್ರೆ ಬೋರ‍್ಗರೆದು, ಉಕ್ಕಿ, ಸೊಕ್ಕಿ ಹರಿಯುವ ಗಂಡಿನ ಲಕ್ಶಣಗಳನ್ನು ಹೊಂದಿರುವ ಹೆಣ್ಣು ನದಿ. ಸಂಗಮದಲ್ಲಿ ತುಂಗೆಯನ್ನು ಸೇರಿದ ಮೇಲೆಯೇ ಬದ್ರೆ ಶಾಂತಳಾಗುವುದು ಎಂದು ಹಿರಿಯರು ಹೇಳುತ್ತಿದ್ದ ಕತೆಯನ್ನು ಕುತೂಹಲದಿಂದ ಕೇಳುತ್ತಿದ್ದೆ. ಬದ್ರಾ ನದಿಯಿಂದ ಸುತ್ತುವರೆದ, ದ್ವೀಪದಂತಿರುವ ಸುಂದರವಾದ ನನ್ನ ತಂದೆಯ ಊರಿಗೆ ನಾವುಗಳು ಹೋದಾಗ, ನದಿಯ ಸಮೀಪಕ್ಕೆ ಹೋಗುವಾಗೆಲ್ಲಾ ಬದ್ರೆ ಅಂದರೆ ತುಂಗಯಂತಲ್ಲ ಅದು ಗಂಡುಬೀರಿನದಿ, ನಿದಾನವಾಗಿ ಹೋಗಿ, ದೊಡ್ಡವರ ಜೊತೆ ಇಲ್ಲದೆ ಹೋಗಬೇಡಿ ಎಂದು ಎಚ್ಚರಿಸುತ್ತಿದ್ದರು. ಬದ್ರೆಗೂ ಗಂಡುಬೀರಿಯ ಪಟ್ಟ ಕಟ್ಟುತ್ತಿದ್ದ ನನ್ನ ಹಿರಿಯರ ಬಗ್ಗೆ ನನಗೆ ಅಚ್ಚರಿ, ಸಿಟ್ಟು ಏಕಕಾಲಕ್ಕೆ ಮೂಡುತಿತ್ತು.

ಬಾಲ್ಯ ಕಳೆದು ಬಹಳ ವರ‍್ಶಗಳ ನಂತರ ನನ್ನ ನೆಚ್ಚಿನ ಬರಹಗಾರರಾದ ತೇಜಸ್ವಿಯವರು ದಕ್ಶಿಣ ಅಮೇರಿಕಾ ಅಮೇಜಾನ್ ನದಿಯ ಕುರಿತು ಬರೆದದ್ದು ನೆನಪಾಯಿತು. ಯುರೋಪ್ ನ ನಿದಿ ಅನ್ವೇಶಕ ಪ್ರಾನ್ಸಿಸ್ಕೋ ಒರ‍್ಲಾನಾ ದಾರಿತಪ್ಪಿ ಅಮೇಜಾನ್ ನದಿ ಮಾರ‍್ಗವಾಗಿ ಅಟ್ಲಾಂಟಿಕ್ ಸಮುದ್ರ ಸೇರಿದ. ಅಲ್ಲಿ ನದಿ ದಂಡೆಯಿಂದ ಈತನ ಮೇಲೆ ಬಾಣಗಳ ದಾಳಿ ಮಾಡಿದ ಹೆಂಗಸರ ಸೈನ್ಯ ನೋಡಿ, ಓರ‍್ಲಾನ ತಾನು ಸಾಗುತ್ತಿದ್ದ ನದಿಗೆ ಅಮೇಜಾನ್ ಎಂದು ಕರೆದ. ಅಮೇಜಾನ್ ಎಂದರೆ ಗಂಡುಬೀರಿ ಎಂದು ಅರ‍್ತ. ಪಳಗಿಸಲಾಗದ, ನಿಯಂತ್ರಣಕ್ಕೆ ಸಿಗದ ಗಟ್ಟಿ/ದಿಟ್ಟ ನಡೆಯ ಹೆಣ್ಣು ಎಂಬ ಅರ‍್ತವೂ ಇದೆ. ನನ್ನೂರಿನ ಬದ್ರೆಗೂ, ದಕ್ಶಿಣ ಅಮೇರಿಕಾದ ಅಮೇಜಾನ್‌ಗೂ ಮನಸ್ಸು ತಾಳೆ ಹಾಕುತ್ತದೆ. ಇದೆಲ್ಲಾ ಯಾಕೋ ನನ್ನ ಬಾಲ್ಯದ ವ್ಯಕ್ತಿತ್ವವನ್ನು ಕುರಿತು ನೆನಪಿಸುವಂತದ್ದು.

ಅದೇನೋ ಗೊತ್ತಿಲ್ಲ ಹೆಣ್ತನದ ನಯ ನಾಜೂಕುಗಳ ಜೊತೆ ಜೊತೆಗೇನೆ ಯಾವುದಕ್ಕೂ ಹೆದರದ ದಾಡಸೀ ವ್ಯಕ್ತಿತ್ವವೇ ನನಗೆ ಪ್ರಿಯ. ಬಗ್ಗಿದ ಹೆಣ್ಣು ಜೀವಕ್ಕೆ ನಮ್ಮದೂ ಒಂದು ಗುದ್ದಿರಲಿ ಎನ್ನುವ ಬುದ್ದಿಯನ್ನು ಮೆಟ್ಟಿನಿಲ್ಲುವ ಚಲ ಇರಲೇಬೇಕೆನ್ನುವುದೇ ನನ್ನ ತುಡಿತ. ಇಂತಹ ವ್ಯಕ್ತಿತ್ವಗಳು ಅಪರೂಪಕ್ಕೊಮ್ಮೆ ಅಲ್ಲಲ್ಲಿ ಕಂಡಾಗ ಕುಶಿಯಿಂದ ಮತ್ತೆ, ಮತ್ತೆ ತಿರುಗಿ ನೋಡುತ್ತೇನೆ. ಕನ್ನಡಿಯಲ್ಲಿ ನನ್ನ ಪ್ರತಿಬಿಂಬ ನೋಡುವಂತೆ. ಹೌದಲ್ಲ ನಾನು ಗಂಡುಬೀರಿ ಎಂದು ಬಿರುದಾಂಕಿತಳಾಗಿದ್ದೆನಲ್ಲ ಚಿಕ್ಕಂದಿನಲ್ಲಿ, ನಾನು ಗಂಡುಬೀರಿಯೇ? ಅಲ್ಲ ನಾನು ಯಾವುದಕ್ಕೂ, ಯಾರಿಗೂ, ಯಾವ ಸಂದರ‍್ಬಕ್ಕೂ ಹೆದರದ ಗಟ್ಟಿಗಿತ್ತಿ.

(ಚಿತ್ರಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Deepa Girish says:

    Reshma, going through your story, made me so nostalgic. Indeed it felt like a time travel. Well written. Hope to read many more of your stories, which reminds us all of the carefree beautiful life we had. Good luck:)

  2. Reshma Sudhir says:

    Thank you so much Deepa.

ಅನಿಸಿಕೆ ಬರೆಯಿರಿ:

%d bloggers like this: