ನಾವೇಕೆ ಬಯ್ಯುತ್ತೇವೆ? – 8ನೆಯ ಕಂತು
– ಸಿ.ಪಿ.ನಾಗರಾಜ.
(ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು)
ಕ್ರಿ.ಶ.1901 ರಲ್ಲಿ ಪ್ಯಾಟ್ರಿಕ್ ಎಂಬುವರು “ಜನರೇಕೆ ಬಯ್ಯುತ್ತಾರೆ? ಬಯ್ಯುವಾಗ ಕೆಲವೇ ಬಗೆಯ ಪದಗಳನ್ನು ಮಾತ್ರ ಏಕೆ ಬಯ್ಗುಳವಾಗಿ ಬಳಸುತ್ತಾರೆ?” ಎಂಬ ಪ್ರಶ್ನೆಯನ್ನು ವಿಜ್ನಾನಿಗಳ ಮುಂದೆ ಇಟ್ಟಿದ್ದರು. ನರ ವಿಜ್ನಾನಿಗಳು, ಮನೋವಿಜ್ನಾನಿಗಳು, ನುಡಿ ವಿಜ್ನಾನಿಗಳು ಮತ್ತು ಸಮಾಜ ವಿಜ್ನಾನಿಗಳು ಜತೆಗೂಡಿ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲೆಂದು ನಡೆಸಿದ ಹುಡುಕಾಟದಲ್ಲಿ ಈ ಕೆಳಕಂಡ ಮೂರು ನೆಲೆಗಳಲ್ಲಿ ಬಯ್ಯುವಿಕೆಗೆ ಕಾರಣವಾದ ಸಂಗತಿಗಳು ಕಂಡುಬಂದವು.
- ಮಾನವನ ಮೆದುಳಿನ ನರಮಂಡಲದಲ್ಲಿ ನಡೆಯುವ ಪ್ರಕ್ರಿಯೆಗಳು.
- ಮಾನವನ ಮಾನಸಿಕ ಬೆಳವಣಿಗೆ ಮತ್ತು ವ್ಯಕ್ತಿತ್ವ.
- ಮಾನವನು ಹುಟ್ಟಿ ಬೆಳೆದು ಬಾಳುವ ಸಮಾಜದ ರಚನೆ ಮತ್ತು ಸಂಸ್ಕ್ರುತಿಯ ಆಚರಣೆಗಳು.
ಈ ಮೊದಲಿನ ಏಳು ಕಂತುಗಳಲ್ಲಿ ಬಯ್ಯುವಿಕೆಗೆ ಮಾನವನ ಮೆದುಳಿನ ನರಮಂಡಲದಲ್ಲಿ ನಡೆಯುವ ಪ್ರಕ್ರಿಯೆಗಳು, ಮಾನಸಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವದ ಗುಣಗಳು ಹೇಗೆ ಕಾರಣವಾಗುತ್ತವೆ ಎಂಬುದನ್ನು ಗಮನಿಸಿದ್ದೇವೆ. ಇದೀಗ ಬಯ್ಯುವಿಕೆಯಲ್ಲಿ ಸಮಾಜದ ರಚನೆಯ ಮತ್ತು ಸಂಸ್ಕ್ರುತಿಯ ಸಂಗತಿಗಳು ಹೇಗೆ ನೆಲೆಗೊಂಡಿವೆ ಎಂಬುದನ್ನು ಪರಿಶೀಲಿಸುವುದರ ಮೂಲಕ ಜನರು ಬಯ್ಯುವದಕ್ಕೆ ಪ್ರೇರಣೆಯನ್ನು ನೀಡುವ ಇಲ್ಲವೇ ಬಯ್ಯುವಿಕೆಯನ್ನು ತಡೆಗಟ್ಟುವ ಸಂಗತಿಗಳು ಯಾವುವು ಎಂಬ ಸಂಗತಿಗಳನ್ನು ತಿಳಿಯಬಹುದು.
ನಾನಾಗಲೀ ಇಲ್ಲವೇ ನೀವಾಗಲಿ ಮತ್ತೊಬ್ಬರೊಡನೆ ಮಾತನಾಡುವಾಗ, ನಮ್ಮ ಮತ್ತು ಅವರ ಸಾಮಾಜಿಕ ಹಿನ್ನೆಲೆ (Social Background) ಮುಕ್ಯವಾಗುತ್ತದೆ. ಸಾಮಾಜಿಕ ಹಿನ್ನೆಲೆಯು ವ್ಯಕ್ತಿಯ ಜೈವಿಕ ಮತ್ತು ಸಾಮಾಜಿಕ ಸಂಗತಿಗಳನ್ನು ಒಳಗೊಂಡಿರುತ್ತದೆ. ವ್ಯಕ್ತಿಯ ಲಿಂಗ ಅಂದರೆ ಗಂಡು ಇಲ್ಲವೇ ಹೆಣ್ಣು, ವ್ಯಕ್ತಿಯ ವಯಸ್ಸು ಮತ್ತು ಮಯ್ ಬಣ್ಣ – ಈ ಮೂರು ಅಂಶಗಳನ್ನು ವ್ಯಕ್ತಿಯ ಜೈವಿಕ ಸಂಗತಿಗಳೆಂದು (Biological Factors) ಕರೆಯುತ್ತಾರೆ. ವ್ಯಕ್ತಿಯ ಜಾತಿ, ಮತ, ವಿದ್ಯೆ, ಉದ್ಯೋಗ, ಸಂಪತ್ತು, ಪ್ರಾಂತ್ಯ ಮತ್ತು ತಾಯ್ನುಡಿಯನ್ನು ಸಾಮಾಜಿಕ ಸಂಗತಿಗಳೆಂದು (Social Factors) ಕರೆಯುತ್ತಾರೆ.
ಕುಟುಂಬದ ನೆಲೆ, ದುಡಿಯುವ ನೆಲೆ ಮತ್ತು ಸಾರ್ವಜನಿಕ ನೆಲೆಯಲ್ಲಿ ನಡೆಯುವ ಯಾವುದೇ ಬಗೆಯ ಸನ್ನಿವೇಶಗಳಲ್ಲಿ ನಾವು ಮಾತನಾಡುವಾಗ ನಮ್ಮ ಮತ್ತು ಇತರರ ಸಾಮಾಜಿಕ ಹಿನ್ನೆಲೆಗೆ ತಕ್ಕಂತೆಯೇ ಮಾತುಗಳನ್ನಾಡುತ್ತೇವೆ. ಇದರಿಂದಾಗಿ ನಾವು ನಮಗಿಂತ ಚಿಕ್ಕ ವಯಸ್ಸಿನವರೊಡನೆ/ದೊಡ್ಡವಯಸ್ಸಿನವರೊಡನೆ; ಹೆಂಗಸರೊಡನೆ/ಗಂಡಸರೊಡನೆ; ಬಡವರೊಡನೆ/ಸಿರಿವಂತರೊಡನೆ; ಅದಿಕಾರದ ದೊಡ್ಡ ಗದ್ದುಗೆಯಲ್ಲಿ ಇಲ್ಲವೇ ಚಿಕ್ಕ ಗದ್ದುಗೆಯಲ್ಲಿ ಇರುವವರೊಡನೆ; ಸರಿಸಮಾನವಾದ ವಯಸ್ಸು ಮತ್ತು ಸಾಮಾಜಿಕ ಅಂತಸ್ತು ಉಳ್ಳವರೊಡನೆ; ಪರಿಚಿತರೊಡನೆ/ಅಪರಿಚಿತರೊಡನೆ ಮಾತನಾಡುವಾಗ ನಾವು ಬಳಸುವ ಮಾತುಗಳ ವರಸೆ ಮತ್ತು ನಮ್ಮ ದೇಹದ ಹಾವಬಾವಗಳ ರೀತಿಯು ಬೇರೆ ಬೇರೆ ಬಗೆಯಲ್ಲಿರುತ್ತವೆ.
ಪ್ರತಿಯೊಂದು ಸಾಮಾಜಿಕ ಸನ್ನಿವೇಶದಲ್ಲಿಯೂ ನಾವು ಮತ್ತು ಇತರರು ಆಡುವ ಮಾತುಗಳ ತಿರುಳನ್ನು ನಿರ್ಣಯಿಸುವಲ್ಲಿ ಈ ಕೆಳಕಂಡ ಮೂರು ಸಂಗತಿಗಳು ದೊಡ್ಡ ಪಾತ್ರವನ್ನು ವಹಿಸುತ್ತವೆ.
- ಮಾತನಾಡುತ್ತಿರುವ ಜಾಗದ ಪ್ರಾದೇಶಿಕ ಮತ್ತು ಸಾಮಾಜಿಕ ಪರಿಸರ (Physical and Social Environment)
- ಮಾತಿನಲ್ಲಿ ತೊಡಗಿರುವ ವ್ಯಕ್ತಿಗಳ ನಡುವಣ ಸಾಮಾಜಿಕ ನಂಟು (Social Relation) ಮತ್ತು ಅದಿಕಾರದ ನಂಟು (Power Relation)
- ಮಾತಿನಲ್ಲಿ ವಿನಿಮಯಗೊಳ್ಳುತ್ತಿರುವ ವಿಚಾರ (Topic)
‘ಪ್ರಾದೇಶಿಕ ಪರಿಸರ’ ಎಂದರೆ ಜನರು ನೆಲೆಸಿರುವ ಮನೆ, ವಿದ್ಯೆಯನ್ನು ಕಲಿಯುವ ಶಾಲಾಕಾಲೇಜು, ಆಟದ ಬಯಲು, ದೇಗುಲ, ದುಡಿಮೆಯನ್ನು ಮಾಡುವ ಜಾಗಗಳು ಇತ್ಯಾದಿ.
‘ಸಾಮಾಜಿಕ ಪರಿಸರ’ ಎಂದರೆ ಜನಗಳು ಜತೆಗೂಡಿ ಮಾಡುತ್ತಿರುವ ಎಲ್ಲಾ ಬಗೆಯ ಆಚರಣೆಗಳು. ಮದುವೆ, ಪೂಜೆ, ಆಟೋಟಗಳು, ವಿದ್ಯೆಯ ಕಲಿಕೆ, ಸಾವು ನೋವಿನ ಪ್ರಸಂಗಗಳು ಇತ್ಯಾದಿ.
‘ವ್ಯಕ್ತಿಗಳ ನಡುವಣ ಸಾಮಾಜಿಕ ನಂಟು’ ಎಂದರೆ ಕುಟುಂಬದ ವಲಯದಲ್ಲಿನ ರಕ್ತದ ನಂಟು ಇಲ್ಲವೇ ವಿವಾಹದಿಂದ ಉಂಟಾಗಿರುವ ನಂಟು. ಉದಾಹರಣೆ: ಅಪ್ಪ-ಅಮ್ಮ; ಅಣ್ಣ-ತಂಗಿ; ಅಕ್ಕ-ತಮ್ಮ; ಚಿಕ್ಕಪ್ಪ-ದೊಡ್ಡಪ್ಪ; ಚಿಕ್ಕಮ್ಮ-ದೊಡ್ಡಮ್ಮ; ಗಂಡ-ಹೆಂಡತಿ; ಅತ್ತೆ-ಮಾವ ಇತ್ಯಾದಿ; ದುಡಿಮೆಯ ನೆಲೆಯಲ್ಲಿ ಒಡೆಯ-ಆಳು; ದೊಡ್ಡ ಗದ್ದುಗೆಯಲ್ಲಿರುವವರು-ಸಣ್ಣ ಗದ್ದುಗೆಯಲ್ಲಿರುವವರು; ಸಾರ್ವಜನಿಕ ನೆಲೆಯಲ್ಲಿ ಪರಿಚಿತರು-ಅಪರಿಚಿತರು;
‘ಅದಿಕಾರದ ನಂಟು’ ಎಂಬುದು ವ್ಯಕ್ತಿಗಳ ವಯಸ್ಸು, ಲಿಂಗ-ಗಂಡು/ಹೆಣ್ಣು, ಜಾತಿ, ಮತ, ವಿದ್ಯೆ, ಸಂಪತ್ತು ಮತ್ತು ಪಡೆದಿರುವ ಗದ್ದುಗೆಗೆ ತಕ್ಕಂತೆ ಇಬ್ಬರು ವ್ಯಕ್ತಿಗಳಲ್ಲಿ ಯಾರು ಯಾರ ಮೇಲೆ ಹೆಚ್ಚಿನ ಹತೋಟಿಯನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ; ಕುಟುಂಬದ ವಲಯದಲ್ಲಿ ಸಾಮಾನ್ಯವಾಗಿ ವಯಸ್ಸಾದ ಹಿರಿಯರು ಕಿರಿಯರ ಮೇಲೆ ಹಾಗೂ ತಮ್ಮ ದುಡಿಮೆಯಿಂದಲೇ ಕುಟುಂಬದ ಸದಸ್ಯರನ್ನು ಸಾಕಿ ಸಲಹುತ್ತಿರುವವರು ಹೆಚ್ಚಿನ ಅದಿಕಾರವನ್ನು ಹೊಂದಿರುತ್ತಾರೆ. ದುಡಿಮೆಯ ನೆಲೆಯಲ್ಲಿ ದೊಡ್ಡ ಗದ್ದುಗೆಯಲ್ಲಿರುವವರು ತಮ್ಮ ಕಯ್ ಕೆಳಗಿನ ಕೆಲಸದವರ ಮೇಲೆ ಮತ್ತು ಸಿರಿವಂತರಾದ ಒಡೆಯರು ತಮ್ಮ ಬಳಿ ದುಡಿಯುತ್ತಿರುವ ಕೆಲಸಗಾರರ ಮೇಲೆ ಹೆಚ್ಚಿನ ಅದಿಕಾರವನ್ನು ಹೊಂದಿರುತ್ತಾರೆ.
ಈ ಬಗೆಯ ವ್ಯಕ್ತಿಗಳ ಸಾಮಾಜಿಕ ಹಿನ್ನೆಲೆಯು ಮಾನವರ ಮಾತಿನ ವರ್ತನೆ (Speech Behaviour) ಹೇಗಿರಬೇಕು ಇಲ್ಲವೇ ಹೇಗಿರಬಾರದು ಎಂಬುದನ್ನು ನಿಯಂತ್ರಿಸುತ್ತ ಮತ್ತು ನಿರ್ದೇಶಿಸುತ್ತ ಮಾತಿನ ಸನ್ನಿವೇಶದಲ್ಲಿ ಬಳಕೆಯಾಗುವ ನುಡಿಗಳ ತಿರುಳು ಯಾವುದು ಎಂಬುದನ್ನು ಸೂಚಿಸುತ್ತದೆ. ಮಾನವರು ಆಡುವ ನುಡಿಯ ತಿರುಳು ಅದು ಬಳಕೆಗೊಳ್ಳುವ ಸಾಮಾಜಿಕ ಸಂದರ್ಬವನ್ನು (Social Context) ಅವಲಂಬಿಸಿರುತ್ತದೆ.
ಬಯ್ಯುವಿಕೆಯು ಮಾನವರ ಸಾಮಾಜಿಕ ವರ್ತನೆಯ ಒಂದು ಅಂಗವಾಗಿ ನಿತ್ಯಜೀವನದ ಆಗುಹೋಗುಗಳಲ್ಲಿ ಹಾಸುಹೊಕ್ಕಾಗಿದೆ. ಜನರು ತಾವು ಹುಟ್ಟಿ ಬೆಳೆದು ಬಾಳುತ್ತಿರುವ ನುಡಿ ಸಮುದಾಯದಲ್ಲಿ ತಮ್ಮ ತಾಯ್ನುಡಿಯನ್ನು ಪಡೆದುಕೊಂಡು ಬಳಸುತ್ತಿರುವಂತೆಯೇ ತಮ್ಮ ಸುತ್ತಮುತ್ತಣ ಪರಿಸರದಲ್ಲಿ ಬಳಕೆಯಾಗುತ್ತಿರುವ ಬಯ್ಗುಳದ ನುಡಿಗಟ್ಟುಗಳನ್ನು ತಮ್ಮದಾಗಿಸಿಕೊಂಡು, ಅವನ್ನು ಹೇಗೆ ಬಳಸಬೇಕೆಂಬುದನ್ನು ಅರಿತುಕೊಂಡಿರುತ್ತಾರೆ. ವ್ಯಕ್ತಿಗಳಿಗೆ ವಯಸ್ಸು ಹೆಚ್ಚಾದಂತೆಲ್ಲ ಮತ್ತು ಲೋಕದ ನಡೆನುಡಿಗಳ ಪರಿಚಯವಾದಂತೆಲ್ಲಾ “ಎಲ್ಲಿ, ಯಾವಾಗ, ಯಾರಿಗೆ, ಹೇಗೆ ಬಯ್ಯಬೇಕು ಇಲ್ಲವೇ ಬಯ್ಯಬಾರದು” ಎಂಬ ಅರಿವು ಮತ್ತು ಎಚ್ಚರವು ಆಯಾಯ ನುಡಿ ಸಮುದಾಯದ ಸಾಂಪ್ರದಾಯಿಕವಾದ ನಡಾವಳಿಯಿಂದಲೇ ಬಂದಿರುತ್ತದೆ. ಕೆಲವೊಮ್ಮೆ ಇತರರು ಅಂದರೆ ತಂದೆತಾಯಿ ಇಲ್ಲವೇ ಗುರುಹಿರಿಯರು ನೀಡುವ ಎಚ್ಚರಿಕೆ ಇಲ್ಲವೇ ದಂಡನೆಯಿಂದ ಬರುತ್ತದೆ.
ಜನರು ತಮ್ಮ ನಿತ್ಯ ಜೀವನದ ಪ್ರಸಂಗಗಳಲ್ಲಿ ಉದ್ದೇಶಪೂರ್ವಕವಾಗಿ ಇತರರನ್ನು ಬಯ್ಯುವುದಕ್ಕೆ ಮೊದಲು ಬಯ್ಯುವಿಕೆಯಿಂದ ಉಂಟಾಗುವ ಪರಿಣಾಮದ ಬಗ್ಗೆ ಎಚ್ಚರಿಕೆಯಿಂದ ಇರುತ್ತಾರೆ. ಯಾವುದೇ ವ್ಯಕ್ತಿಯನ್ನು ಅವರ ಮುಂದುಗಡೆಯೇ ನೇರವಾಗಿ ಬಯ್ಯುವುದು ಸಲೀಸಾದ ಕೆಲಸವಲ್ಲ. ಏಕೆಂದರೆ ಬಯ್ಯುವಿಕೆಯಿಂದ ಉಂಟಾಗುವ ಪರಿಣಾಮಗಳು ಬಹುಬಗೆಯಲ್ಲಿರುತ್ತವೆ. ಕೆಲವೊಮ್ಮೆ ಸಾವುನೋವುಗಳು ಉಂಟಾಗುವಂತಹ ಸನ್ನಿವೇಶಗಳು ಬರಬಹುದು. ಆದ್ದರಿಂದ ಜನರು ತಾವು ಇತರರನ್ನು ಉದ್ದೇಶಪೂರ್ವಕವಾಗಿ ಬಯ್ಯುವ ಮುನ್ನ, ಬಯ್ಯುವ ಹಕ್ಕು ತಮಗಿದೆಯೇ ಎಂಬುದರ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಹೊಂದಿರುತ್ತಾರೆ. ತಮ್ಮ ಬಯ್ಗುಳಕ್ಕೆ ಪ್ರತಿಯಾಡದೆ ಒಪ್ಪಿಕೊಳ್ಳುವ ಇಲ್ಲವೇ ಸುಮ್ಮನಿರುವ ವ್ಯಕ್ತಿಗಳು ಇರುವ ಕಡೆಗಳಲ್ಲಿ ಜನರು ಹೆಚ್ಚಾಗಿ ಬಯ್ಗುಳವನ್ನು ಬಳಸುತ್ತಾರೆ.
ಬಯ್ಯುವುದರಿಂದ ತಮ್ಮ ಮಯ್ ಮೇಲೆ ಹಲ್ಲೆಯಾಗುವಂತಿದ್ದರೆ, ಕೆಲಸವನ್ನು ಕಳೆದುಕೊಳ್ಳುವಂತಿದ್ದರೆ , ತಮ್ಮನ್ನು ಜಾತಿಗುಂಪಿನಿಂದ ಇಲ್ಲವೇ ತಮ್ಮ ಒಡನಾಡಿಗಳ ಗುಂಪಿನಿಂದ ಹೊರಕ್ಕೆ ಹಾಕುವಂತಹ ದಂಡನೆಗಳಿಗೆ ಒಳಗಾಗುವಂತಿದ್ದರೆ ಅಂತಹ ಸನ್ನಿವೇಶಗಳಲ್ಲಿ ಬಯ್ಯುವುದಕ್ಕೆ ತೊಡಗದೆ ಎಂತಹ ಅಪಮಾನ, ಸಂಕಟ ಮತ್ತು ಹಾನಿಯನ್ನಾದರೂ ಸಹಿಸಿಕೊಂಡು ಸುಮ್ಮನಾಗುತ್ತಾರೆ.
ಬಯ್ಯುವಿಕೆಯಿಂದ ತಮಗೆ ಹೆಚ್ಚಿನ ಪ್ರಯೋಜನವಾಗುವಂತಿದ್ದರೆ ಅಂತಹ ಸನ್ನಿವೇಶಗಳಲ್ಲಿ ಬಯ್ಯುವಿಕೆಯಲ್ಲಿ ತೊಡಗುತ್ತಾರೆ. ಉದಾಹರಣೆ: ಇತರರ ಗಮನವನ್ನು ತಮ್ಮತ್ತ ಸೆಳೆಯುವುದಕ್ಕಾಗಿ; ಇತರರಿಂದ ಮೆಚ್ಚುಗೆಯನ್ನು ಪಡೆಯುವುದಕ್ಕಾಗಿ; ಕೇಳುಗರ ಮನಸ್ಸನ್ನು ರಂಜಿಸಿ ನಗುವಿನ ವಾತಾವರಣವನ್ನುಂಟುಮಾಡುವುದಕ್ಕಾಗಿ; ಹಣ ಮತ್ತು ಉನ್ನತ ಗದ್ದುಗೆಯಲ್ಲಿರುವವರನ್ನು ಓಲಯಿಸಿಕೊಂಡು ಹೆಚ್ಚಿನ ಪ್ರಯೋಜನವನ್ನು ಪಡೆಯುವುದಕ್ಕಾಗಿ ಅವರ ಹಗೆಗಳನ್ನು ತಾವು ನಿರಂತರವಾಗಿ ಬಯ್ಯುತ್ತಿರುತ್ತಾರೆ.
ಕೆಲವು ನೆಲೆಗಳಲ್ಲಿ ಬಯ್ಯುವುದು ದೊಡ್ಡ ತಪ್ಪಾಗಿ ಕಂಡುಬಂದರೆ; ಇನ್ನು ಕೆಲವು ನೆಲೆಗಳಲ್ಲಿ ಅಂತಹ ದೊಡ್ಡ ತಪ್ಪಾಗಿ ಕಾಣುವುದಿಲ್ಲ; ಮತ್ತೆ ಕೆಲವು ನೆಲೆಗಳಲ್ಲಿ ಅದು ತಪ್ಪೇ ಅಲ್ಲ.
ಕುಟುಂಬದ ನೆಲೆ ಮತ್ತು ದುಡಿಮೆಯ ನೆಲೆಗಳಲ್ಲಿ ಬಯ್ಯುವ ಹಕ್ಕನ್ನು ಕೆಲವು ವ್ಯಕ್ತಿಗಳು ಮಾತ್ರ ಹೊಂದಿರುತ್ತಾರೆ. ಕುಟುಂಬದ ನೆಲೆಯಲ್ಲಿ ವಯಸ್ಸಾದ ಹಿರಿಯರು ಇಲ್ಲವೇ ತಮ್ಮ ದುಡಿಮೆಯಿಂದಲೇ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತಿರುವ ವ್ಯಕ್ತಿಗಳು ಮನೆಯಲ್ಲಿ ಇತರರನ್ನು ಬಯ್ಯಬಲ್ಲ ಹಕ್ಕನ್ನು ಹೊಂದಿರುತ್ತಾರೆ. ಅಂತೆಯೇ ದುಡಿಮೆಯ ನೆಲೆಯಲ್ಲಿ ಒಡೆಯರು ಇಲ್ಲವೇ ಉನ್ನತ ಗದ್ದುಗೆಯಲ್ಲಿರುವವರು ತಮ್ಮ ಕಯ್ ಕೆಳಗಿನವರನ್ನು ಬಯ್ಯಬಲ್ಲ ಹಕ್ಕನ್ನು ಹೊಂದಿರುತ್ತಾರೆ. ಇಂತಹ ಕಡೆಗಳಲ್ಲಿ ಬಯ್ಯುವಿಕೆಯು ಹೆಚ್ಚಿನ ವೇಳೆ ತಪ್ಪಾಗಿ ಕಾಣುವುದಿಲ್ಲ. ಆದರೆ ಬಯ್ಯುವ ಹಕ್ಕನ್ನು ಹೊಂದಿರುವ ವ್ಯಕ್ತಿಗಳು ತಂತಮ್ಮ ನೆಲೆಗಳಲ್ಲಿ ಬಯ್ಯಬಹುದೇ ಹೊರತು, ಅದೇ ರೀತಿ ಬೇರೊಂದು ನೆಲೆಯಲ್ಲಿ ಬಯ್ಯಲು ಹೋದರೆ ಹೆಚ್ಚಿನ ತೊಂದರೆಗೆ ಒಳಗಾಗಬೇಕಾಗುತ್ತದೆ.
ಉದಾಹರಣೆ: ಕುಟುಂಬದ ನೆಲೆಯಲ್ಲಿ ತನ್ನ ಮನೆಯವರನ್ನು ನೇರವಾಗಿ ಬಾಯಿಗೆ ಬಂದಂತೆ ಬಯ್ಯುವ ವ್ಯಕ್ತಿಯೊಬ್ಬ, ತಾನು ದುಡಿಮೆಯನ್ನು ಮಾಡುವ ನೆಲೆಯಲ್ಲಿ ತನ್ನ ಮೇಲಿನ ಅದಿಕಾರಿಯನ್ನು ಇಲ್ಲವೇ ತನ್ನ ಒಡೆಯನನ್ನು ಅದೇ ರೀತಿಯಲ್ಲಿ ನೇರವಾಗಿ ಬಯ್ಯಲಾರ. ಒಂದು ವೇಳೆ ದುಡಿಮೆಯ ನೆಲೆಯಲ್ಲಿ ಮೇಲಿನವರನ್ನು ಇಲ್ಲವೇ ಒಡೆಯನನ್ನು ಬಯ್ದರೆ ತೀವ್ರವಾದ ದಂಡನೆಗೆ ಗುರಿಯಾಗುವುದಲ್ಲದೆ , ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ.
ಆಟದ ಬಯಲಿನಲ್ಲಿ ತನ್ನ ಗೆಳೆಯರೊಡನೆ ಬಯ್ದಾಡುವ ಒಬ್ಬ ತರುಣ, ಅದೇ ಬಗೆಯ ಬಯ್ಗುಳದ ನುಡಿಗಳನ್ನು ತನ್ನ ಮನೆಯಲ್ಲಿಯೋ ಇಲ್ಲವೇ ಕಾಲೇಜಿನ ಪ್ರಿನ್ಸಿಪಾಲರ ಮುಂದೆಯೋ ಆಡಲಾರ. ಒಂದು ವೇಳೆ ಆಡಿದರೆ ಅದು ದೊಡ್ಡ ತಪ್ಪಾಗುತ್ತದೆ.
ಸಾರ್ವಜನಿಕ ನೆಲೆಯಲ್ಲಿ ಅಪರಿಚಿತರೊಡನೆ ಬಯ್ದಾಡುವ ಪ್ರಸಂಗ ಬಂದಾಗ, ವ್ಯಕ್ತಿಗಳು ತೊಟ್ಟಿರುವ ಉಡುಗೆ ತೊಡುಗೆಗಳ ಮೂಲಕ ಅವರ ಸಾಮಾಜಿಕ ಹಿನ್ನೆಲೆಯನ್ನು ಅರಿತುಕೊಂಡು ಬಯ್ಯುವಿಕೆಯಲ್ಲಿ ತೊಡಗುತ್ತಾರೆ. ಈ ನೆಲೆಯಲ್ಲಿ ಬಯ್ದಾಡುವಿಕೆಯಲ್ಲಿ ತೊಡಗಿದವರ ನಡುವೆ ಯಾವುದೇ ಬಗೆಯ ಅದಿಕಾರದ ನಂಟು ಇಲ್ಲದಿರುವುದರಿಂದ ಬಯ್ಯುವಿಕೆಯಲ್ಲಿ ಯಾರು ಮೇಲುಗಯ್ ಪಡೆಯುತ್ತಾರೆ ಮತ್ತು ಬಯ್ಯುವಿಕೆಯಿಂದ ಉಂಟಾದ ಪರಿಣಾಮವೇನು ಎಂಬುದನ್ನು ಹೇಳಲಾಗುವುದಿಲ್ಲ.
ಇದರಿಂದ ತಿಳಿದುಬರುವುದೇನೆಂದರೆ ಬಯ್ಯುವಿಕೆಯಲ್ಲಿ ತೊಡಗುವ ವ್ಯಕ್ತಿಗಳು ಯಾವ ಜಾಗದಲ್ಲಿ ತಾವು ಬಯ್ಯಬಹುದು ಇಲ್ಲವೇ ಬಯ್ಯಬಾರದು ಎಂಬದನ್ನು ಅರಿಯುವುದರ ಮೂಲಕ ತಮ್ಮ ವ್ಯಕ್ತಿತ್ವದ ಇತಿಮಿತಿಗಳನ್ನು ತಿಳಿದುಕೊಂಡಿರಬೇಕು. ಯಾವ ಜಾಗದಲ್ಲಿ ತಾವು ಇತರರನ್ನು ಬಯ್ದು , ಅವರ ಮೇಲೆ ತನ್ನ ಅದಿಕಾರವನ್ನು ಚಲಾಯಿಸಬಲ್ಲರೋ ಮತ್ತು ಯಾರನ್ನು ತಾವು ನಿಯಂತ್ರಿಸಬಲ್ಲರೋ ಅಂತಹ ಕಡೆಗಳಲ್ಲಿ ಮಾತ್ರ ಬಯ್ಯಬಹುದು. ಇಲ್ಲದಿದ್ದರೆ ದೊಡ್ಡ ಹಾನಿಗೆ ಒಳಗಾಗಬೇಕಾಗುತ್ತದೆ. ಆದ್ದರಿಂದ ನಾವು ಬಯ್ಯುವಿಕೆಯಲ್ಲಿ ತೊಡಗುವಾಗ “ ಬಯ್ಯುತ್ತಿರುವ ನೆಲೆ ಯಾವುದು? ; ಸಾಮಾಜಿಕ ಸನ್ನಿವೇಶ ಯಾವುದು?; ಬಯ್ಯಿಸಿಕೊಳ್ಳುತ್ತಿರುವ ವ್ಯಕ್ತಿ ಯಾರು” ಎಂಬ ಸಾಮಾಜಿಕ ಹಿನ್ನೆಲೆಯ ಸಂಗತಿಗಳನ್ನು ಸರಿಯಾಗಿ ಅರಿತಿರಬೇಕು.
(ಚಿತ್ರ ಸೆಲೆ: learnitaliango.com)
ಇತ್ತೀಚಿನ ಅನಿಸಿಕೆಗಳು