ನೌಕಾ ನಿಲ್ದಾಣದಲ್ಲೊಂದು ಕ್ರೇನ್ ಹೋಟೆಲ್

– .

ಜನರನ್ನು ತಮ್ಮ ವಿಶಿಶ್ಟತೆಯಿಂದ ಹೇಗೆ ಅಚ್ಚರಿಗೊಳಿಸಬೇಕು ಎಂಬುದನ್ನು ಹಾಲೆಂಡಿಗರು ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ ಅವರು ಹೊಸ ಹೊಸ ಅವಿಶ್ಕಾರಗಳನ್ನು ಜನತೆಗೆ ಪರಿಚಯಿಸಲು ಸದಾ ಕಾಲ ತುದಿಗಾಲಲ್ಲಿ ನಿಂತಿರುತ್ತಾರೆ. ಅಂತಹ ವಿಶಿಶ್ಟತೆಯ ಒಂದು ತುಣುಕೇ ಹಾರ‍್ಲಿಂಗೆನ್-ಹೆವನ್ ನೌಕಾ ನಿಲ್ದಾಣದಲ್ಲಿರುವ ಕ್ರೇನ್ ಹೋಟೆಲ್.

ಈ ಹೋಟೆಲ್ ನಲ್ಲಿರುವುದು ಒಂದೇ ಕೋಣೆ

ಹಾಲೆಂಡಿನ ಪ್ರಮುಕ ನೌಕಾ ಬಂದರಿನ ಪಟ್ಟಣ ಹಾರ‍್ಲಿಂಗೆನ್-ಹೆವನ್. ಇಲ್ಲಿ ತನ್ನ ಸೇವೆಯಿಂದ ನಿವ್ರುತ್ತಿ ಹೊಂದಿದ ಕ್ರೇನ್ ನಲ್ಲಿನ ಯಂತ್ರ ಕೋಣೆಯನ್ನು ನವೀಕರಣಗೊಳಿಸಿ, ಪುಟ್ಟ ಹೋಟೆಲ್ ಆಗಿ ಪರಿವರ‍್ತಿಸಲಾಗಿದೆ. ಈ ಹೋಟೆಲಿನಲ್ಲಿರುವುದು ಐಶರಾಮಿ ಡಬಲ್ ಬೆಡ್ ರೂಮ್ ಮಾತ್ರ. ಇದರಲ್ಲಿ ಕೇವಲ ಇಬ್ಬರು ಮಾತ್ರ ಉಳಿಯಲು ಸಾದ್ಯವಾಗುವಂತೆ ಅವಕಾಶ ಕಲ್ಪಿಸಲಾಗಿದೆ.

ಕ್ರೇನ್ ಹೋಟೆಲ್ ನ ಹಿನ್ನೆಲೆ

1999 ರವರೆವಿಗೂ ಈ ಕ್ರೇನನ್ನು ಪ್ರಮುಕವಾಗಿ ರಶ್ಯಾ ಮತ್ತು ಸ್ಕಾಂಡಿನೇವಿಯನ್ ಹಡಗುಗಳು ತರುತ್ತಿದ್ದ ಮರದ ದಿಮ್ಮಿಗಳನ್ನು ಹಡಗುಗಳಿಂದ ಹೊರತೆಗೆಯಲು ಬಳಸಲಾಗುತ್ತಿತ್ತು. ಈ ಕ್ರೇನಿನ ಉಪಯೋಗ ಕೆಲವು ವಸ್ತುಗಳಿಗೆ ಸೀಮಿತವಾದ ಕಾರಣ, ಅದಕ್ಕಾಗಿಯೇ ಉನ್ನತ ಕಾರ‍್ಯಕ್ಶಮತೆ ಹೊಂದಿದ ಹೊಸ ಕ್ರೇನುಗಳು ಬಳಕೆಗೆ ಬಂದವು. ಆಗ ಇದು ನೇಪತ್ಯಕ್ಕೆ ಸರಿಯಿತು. 2001ರಲ್ಲಿ ಇದರ ಮಾಲೀಕತ್ವ ಸಹ ಬದಲಾಯಿತು.

ಇದನ್ನು ಕರೀದಿಸಿದ ಹೊಸ ಮಾಲೀಕರು, ಎರಡು ವರ‍್ಶಗಳ ಸತತ ಪ್ರಯತ್ನದಿಂದ ಇದರ ಯಂತ್ರ ಕೋಣೆಯನ್ನು ಅತ್ಯಂತ ಉಚ್ಚ ಶ್ರೇಣಿಯ ಹೋಟೆಲ್ ರೂಮ್ ಆಗಿ ಪರಿವರ‍್ತಿಸಿದರು. ಹೊಸ ಸ್ಪರ‍್ಶ ಪರದೆಗಳ ಮೂಲಕ ನಿಯಂತ್ರಿಸಬಹುದಾದ ಬೆಳಕು ಚೆಲ್ಲುವ ಹಾಗೂ ಇನ್ನಿತರೆ ಸಾದನಗಳನ್ನು ಅದರಲ್ಲಿ ಅಳವಡಿಸಲಾಯಿತು. ಐಶಾರಾಮಿ ಕೋಣೆಯಲ್ಲಿ ಇರಲೇಬೇಕಾದ ಡಿವಿಡಿ ಪ್ಲೆಯರ್ ಹಾಗೂ ಚಲನಚಿತ್ರದ ಡಿಸ್ಕ್ಗಳನ್ನು ಜೋಡಿಸಲಾಯಿತು. ಈ ಅಂಡಾಕಾರದ ಕ್ಯೂಬಿಕಲ್ಗಳನ್ನು ಬವಿಶ್ಯದ ರೂಮಿನಂತೆ ವಿನ್ಯಾಸಗೊಳಿಸಲಾಗಿದೆ.

ಕ್ರೇನ್ ಹೋಟೆಲ್ ನ ವಿಶೇಶತೆ

ಕ್ರೇನ್ ಹೋಟೇಲಿನಲ್ಲಿ ತಂಗುವವರು ಅದರಲ್ಲಿನ ಕಿಟಕಿಗಳ ಮೂಲಕ ಹಳೆಯ ಪಟ್ಟಣದ ಸೌಂದರ‍್ಯವನ್ನು ಆಸ್ವಾದಿಸಬಹುದು. ಕ್ರೇನಿನ ಕ್ಯಾಬಿನ್ನಿನೊಳಗೆ ಹೋದಲ್ಲಿ, 360° ನೋಟ, ವಾಡೆನ್ ಸಮುದ್ರ ಹಾಗೂ ಹತ್ತಿರದ ಬಂದರಿನ ವಿವಿದ ನೋಟವನ್ನು ಅನುಬವಿಸಬಹುದು. ಯಾವುದೇ ಕೋನದಲ್ಲಿ ಬೇಕಾದರೂ ದ್ರುಶ್ಯಾವಳಿಗಳನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು. ಕ್ರೇನಿನ ಮೇಲ್ಚಾವಣಿಯಲ್ಲಿ ತೆರೆದ ವೀಕ್ಶಣಾಲಯದ ಡೆಕ್ (ಅಟ್ಟಣಿಗೆ) ಇದೆ. ಇಲ್ಲಿ ಇಬ್ಬರು ಕುಳಿತು ಪರಿಸರದ ವೀಕ್ಶಣೆಯನ್ನು ಆಸ್ವಾದಿಸುತ್ತಾ ಸ್ನ್ಯಾಕ್ಸ್ ಮತ್ತು ಉಪಹಾರ ಸೇವಿಸಬಹುದು, ವಿಶ್ರಾಂತಿಯನ್ನು ಪಡೆಯಬಹುದು. ಕ್ರೇನಿನ ಮೇಲ್ಚಾವಣಿ ಅಟ್ಟಣಿಗೆಯಲ್ಲಿ ಕುಳಿತು ಅಲೆಗಳ ಏರಿಳಿತಗಳನ್ನು ನೋಡಿ ಕಣ್ತುಂಬಿಸಿಕೊಳ್ಳಬಹುದು. ಬಂದರು ಪ್ರದೇಶದ ಒಂದು ಬಾಗದಲ್ಲಿ ಸಮುದ್ರದಲ್ಲಿನ ಅಲೆಗಳ ಉಬ್ಬರ ಮತ್ತು ಏರಿಳಿತಗಳು ಬಲವಾಗಿದೆ. ಈ ಕಾರಣಕ್ಕಾಗಿ ಈ ವಲಯವನ್ನು ಯುನೆಸ್ಕೋ ಹೆರಿಟೇಜ್ ಪಟ್ಟಿಯಲ್ಲಿ ಸೇರಿಸಿದೆ.

ತಂಗಲು ಬಯಸುವವರಿಗೆ ಸರಿಯಾದ ಕಾಲ ಮತ್ತು ಕಟ್ಟಳೆಗಳು

ಈ ಹೋಟೆಲಿನಲ್ಲಿ ತಂಗುವವರಿಗೆ, ಲಿಪ್ಟ್ ಮೂಲಕ ಆಹಾರದ ಸರಬರಾಜು ಮಾಡುವ ವ್ಯವಸ್ತೆಯಿದೆ. ಇದರ ಸುತ್ತ ಮುತ್ತ ಸಾಕಶ್ಟು ರೆಸ್ಟೋರಂಟ್ ಗಳಿವೆ. ಈ ನವನವೀನ ಕ್ರೇನ್ ಹೋಟೆಲ್ ಕೋಣೆಯಲ್ಲಿ ಉಳಿಯುವ ವೆಚ್ಚವು ರುತುಮಾನ ಮತ್ತು ರಜಾದಿನಗಳ ಮೇಲೆ ಅವಲಂಬಿತ. ಸಾಮಾನ್ಯವಾಗಿ ಒಂದು ರಾತ್ರಿ ಈ ಕ್ರೇನ್ ಹೋಟೆಲ್ಲಿನ ರೂಮಿನಲ್ಲಿ ಉಳಿಯಲು 300 ಯೂರೋಗಳನ್ನು ತೆರೆಬೇಕಾಗಬಹುದು. ರಜಾದಿನಗಳಲ್ಲಿ ಹಾಗೂ ಕೆಲವು ರುತುಮಾನಗಳಲ್ಲಿ ಬೇಡಿಕೆಗೆ ಅನುಗುಣವಾಗಿ ದರ ನಿಗದಿಪಡಿಸಲಾಗುತ್ತದೆ. ಹೊಸ ವರ‍್ಶವನ್ನು ಆಹ್ವಾನಿಸಲು ಇಲ್ಲಿಗೆ ಬರುವ ಜನರ ಸಂಕ್ಯೆ ವಿಪರೀತವಿರುತ್ತದೆ. ಆಗ ಇದರ ಬೆಲೆ ಅತಿ ಹೆಚ್ಚಾಗುತ್ತದೆ. ಹೊಸ ವರ‍್ಶದ ಮುನ್ನಾದಿನ ಇಲ್ಲಿ ಉಳಿಯುವವರಿಗೆ ಉಚಿತವಾಗಿ ಶಾಂಪೇನ್ ನೀಡಲಾಗುವುದು. ಕೆಟ್ಟ ಹವಾಮಾನದ ದಿನಗಳಲ್ಲಿ ಸಾಕಶ್ಟು ರೋಚಕತೆಗೆ ಇಲ್ಲಿ ಉಳಿಯುವವರು ಸಾಕ್ಶಿಯಾಗುತ್ತಾರೆ. ಎಂತಹುದೇ ಕೆಟ್ಟ ಹವಾಮಾನವಿದ್ದರೂ, ಸ್ತಳ ಸೀಮಿತವಾಗಿರುವ ಕಾರಣ ಹೆದರುವ ಅವಶ್ಯಕತೆಯಿಲ್ಲ. ಇಲ್ಲಿನ ರೂಮನ್ನು ಒಂದೆರೆಡು ತಿಂಗಳ ಮುನ್ನವೇ ಮುಂಗಡವಾಗಿ ಕಾದಿರಿಸಬೇಕಾಗುತ್ತದೆ. ರೂಮನ್ನು ಬಾಡಿಗೆಗೆ ಪಡೆದವರು ಒಂದಿಬ್ಬರು ಅತಿತಿಗಳನ್ನು ಮಾತ್ರ ಬೇಟಿ ನೀಡಲು ಅನುಮತಿಸಲಾಗುವುದು. ಅತಿತಿಗಳು ರಾತ್ರಿ ತಂಗುವಂತಿಲ್ಲ.

(ಮಾಹಿತಿ ಮತ್ತು ಚಿತ್ರಸೆಲೆ: uniqhotels.com, havenkraan.nl, luxurydreamhotels.com, atlasobscura.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: