ನಾ ನೋಡಿದ ಸಿನೆಮಾ – ನೋ ಟೈಮ್ ಟು ಡೈ

ಕಿಶೋರ್ ಕುಮಾರ್

ಬಾಂಡ್ ಸಿನೆಮಾಗಳು ಯಾರಿಗೆ ತಾನೆ ಗೊತ್ತಿಲ್ಲ. ಮೈ ನವಿರೇಳಿಸೋ ಸಾಹಸಗಳು, ಕುತೂಹಲ ಮೂಡಿಸೋ ಗ್ಯಾಜೆಟ್ ಗಳು, ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳು, ಸುಂದರ ತಾಣಗಳು ಇವೆಲ್ಲದರ ಜೊತೆಗೆ ಕೆಟ್ಟವರನ್ನ ಬಿಡದೆ ಬೇಟೆಯಾಡೋ, ಸೋಲಿಲ್ಲದ ಸರದಾರ ಜೇಮ್ಸ್ ಬಾಂಡ್.

25 ನೇ ಬಾಂಡ್ ಸಿನೆಮಾ

ಹೌದು ಕಳೆದ 59 ಏಡುಗಳಿಂದ (Years) ಮಂದಿಯನ್ನು ರಂಜಿಸುತ್ತಾ ಬಂದಿರುವ ಬಾಂಡ್ ಸಿನೆಮಾ ಸರಣಿಯಲ್ಲಿ ನೋ ಟೈಮ್ ಟು ಡೈ 25 ನೇ ಸಿನೆಮಾ. ಅದಕ್ಕೇ 25 ನೇ ಬಾಂಡ್ ಸಿನೆಮಾ ಹೇಗಿರಬಹುದು ಅಂತ ಬಾಂಡ್ ಸಿನೆಮಾಗಳ ಒಲವಿಗರಿಗೂ ಒಂದು ರೀತಿ ಕುತೂಹಲ ಇತ್ತು. ಇದೇ ಮೊದಲ ಬಾರಿಗೆ ಬಾಂಡ್ ಸಿನೆಮಾ 3D & 4DX ನಲ್ಲಿ ಬಿಡುಗಡೆಯಾದದ್ದು ಮತ್ತೊಂದು ವಿಶೇಶ.

ಹೇಗಿದೆ ಸಿನೆಮಾ?

2015 ರಿಂದ ನೋಡುಗರನ್ನು ಕಾಯಿಸಿದ್ದ ಬಾಂಡ್ ಮತ್ತೆ ನೋಡುಗರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾನೆ. ಮೊದಲ ಸೀನ್ ನಲ್ಲೆ ಟ್ವಿಸ್ಟ್ ಕೊಡೋ ಹೊಸ ಪಾತ್ರಗಳು. ಯಾರಿವರು ಅನ್ನುವಶ್ಟರಲ್ಲಿ ಬಾಂಡ್ ನಮ್ಮ ಕಣ್ಣಮುಂದೆ. ಇನ್ನು ಬಾಂಡ್ ಸಿನೆಮಾಗಳಲ್ಲಿ ತೀಮ್ ಮ್ಯೂಸಿಕ್ ಇರ‍್ಲೇಬೇಕಲ್ವಾ. ಹೀಗೆ ಸಾಗುವಾಗ ಇನ್ನೇನು ಬಾಂಡ್ ಕುಶಿಯಾಗಿದ್ದಾನೆ ಅಂದುಕೊಳ್ಳುವಶ್ಟರಲ್ಲಿ ಎದುರಾಳಿಗಳ ಆಟ ಮೊದಲಾಗುತ್ತೆ. ಅಲ್ಲಿಂದ ಪುಟಿದೇಳುವ ಬಾಂಡ್ ನಾಗಾಲೋಟಕ್ಕೆ ತಡೆ ಒಡ್ಡುವರಾರು? ಹೀಗೆ ಎದುರಾಳಿಗಳನ್ನ ಬೆನ್ನಟ್ಟುವ ಬಾಂಡ್ ಗೆ ಇದೇ ಮೊದಲ ಬಾರಿಗೆ ಬಾಂಡ್ ಮಗಳಾಗಿ ಒಂದು ಹೊಸ ಪಾತ್ರ ಎದುರಾಗುತ್ತದೆ. ಅಲ್ಲಲ್ಲಿ ಸಿಗುವ ಹಳೇ ಪಾತ್ರಗಳು, ಬಾಂಡ್ ಓಟಕ್ಕೆ ತಡೆ ಒಡ್ಡುವ ತನ್ನದೇ ಮಂದಿ, ಒಂದು ದೊಡ್ಡ ಕೆಡುಕಿಗೆ ಹೊಂಚು ಹಾಕಿರೋ ಎದುರಾಳಿಗಳು, ಎದುರಾಳಿಗಳನ್ನು ಮಟ್ಟಹಾಕಿ ಜಗತ್ತನ್ನು ಕಾಪಾಡುವ ಜವಾಬ್ದಾರಿ ಬಾಂಡ್ ನದ್ದೇ. ಜಗತ್ತನ್ನು ಕಾಪಾಡುವ ಹೋರಾಟದ ದಾರಿಯಲ್ಲಿ ತನ್ನವರನ್ನು ಕಳೆದುಕೊಂಡರೂ ಸಹ ಮುನ್ನುಗ್ಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ಜಗತ್ತನ್ನು ಉಳಿಸುತ್ತಾನೆ 007. ಇದೆಲ್ಲದರ ಜೊತೆಗೆ ಕೊನೆಯ ಸೀನ್ ನಲ್ಲಿ ಬರುವ ತಿರುವು, ಇದು ಬಾಂಡ್ ನ ಕೊನೆಯ ಸಿನೆಮಾನ ಅನ್ನೋ ಅನುಮಾನ ಮೂಡಿಸದೇ ಇರದು.

ತಾರಾಗಣ

ಎಂದಿನಂತೆ ಬಾಂಡ್ ಪಾತ್ರದಲ್ಲಿ ಡೇನಿಯಲ್ ಕ್ರೇಗ್. ಈ ಹಿಂದೆ 2015 ರಲ್ಲಿ ತೆರೆಕಂಡಿದ್ದ ಬಾಂಡ್ ಸಿನೆಮಾ ಸ್ಪೆಕ್ಟರ್ ನಲ್ಲಿ ಬಾಂಡ್ ಪ್ರೇಯಸಿಯಾಗಿ ನಟಿಸಿದ್ದ ಲೆಯಾ ಸೆಡೂ ಇಲ್ಲೂ ಮುಂದುರೆದಿದ್ದಾರೆ. 2006 ರ ಬಾಂಡ್ ಸಿನೆಮಾ ಕಸೀನೋ ರಾಯಲ್ ನಲ್ಲಿ ನಟಿಸಿದ್ದ ಜೆಪ್ರಿ ರೈಟ್ ಮತ್ತೆ ಬಾಂಡ್ ಗೆಳೆಯನಾಗಿ ಕಾಣಿಸಿಕೊಂಡಿದ್ದಾರೆ. ಕೊಲೆಗಾರನಾಗಿ ರಮಿ ಮಲೆಕ್ ನಟಿಸಿದ್ದು, ಎದುರಾಳಿಯಾಗಿ ಕ್ರಿಸ್ಟಾಪ್ ವಾಲ್ಟ್ಸ್ ಮತ್ತೆ ಕಾಣಿಸಿಕೊಂಡಿದ್ದಾರೆ. ಉಳಿದಂತೆ M ಪಾತ್ರದಲ್ಲಿ ರಾಲ್ಪ್ ಪಿನೆಜ್, Q ಪಾತ್ರದಲ್ಲಿ ಬೆನ್ ವಿಶಾವ್ ಹಾಗೂ ಮನಿಪೆನಿ ಪಾತ್ರದಲ್ಲಿ ನಯೋಮಿ ಹ್ಯಾರಿಸ್ ಮುಂದುವರೆದಿದ್ದಾರೆ.

‘ಲೇಡಿ ಬಾಂಡ್’

ನೀವು ಕೇಳಿಸಿಕೊಂಡದ್ದು ನಿಜಾನೆ. ಲೇಡಿ ಬಾಂಡ್ ಅನ್ನೋದು ಬಾಂಡ್ ಸಿನೆಮಾಗಳಲ್ಲಿ ಹಿಂದೆಂದೂ ನೋಡಿರದ ಪಾತ್ರ. ಬಾಂಡ್ ಸರಣಿಯುದ್ದಕ್ಕೂ ಬಾಂಡ್ ಪಾತ್ರದಲ್ಲಿ ಮಿಂಚಿರೋರೆಲ್ಲ ಗಂಡಸರೇ. ನೋ ಟೈಮ್ ಟು ಡೈ ಈ ವಿಶಯದಲ್ಲಿ ಸ್ವಲ್ಪ ‍ಹೊಸತನದಿಂದ ಕೂಡಿದೆ, ಯಾಕಂದ್ರೆ ಇಲ್ಲಿ ಹೊಸ ಬಾಂಡ್ ಪಾತ್ರ ನಿಮ್ಮ ಮುಂದೆ ಬರುತ್ತದೆ. ಈ ಪಾತ್ರ ಮಾಡಿರೋದು ಮತ್ತೊಬ್ಬ ಗಂಡಸಲ್ಲ ಬದಲಿಗೆ ಹೆಂಗಸು. ಲಶಾನ ಲಿಂಚ್ ಇಲ್ಲಿ ಲೇಡಿ ಬಾಂಡ್ ಆಗಿ ನಮ್ಮ ಮುಂದೆ ಬರುತ್ತಾರೆ. ಈ ಪಾತ್ರಕ್ಕೆ ಅಶ್ಟು ಒತ್ತುಕೊಟ್ಟಿಲ್ಲ ಅನಿಸಿದರೂ, ಹೊಸತನಕ್ಕೆ ನಾಂದಿ ಹಾಡಿರೋದು ಮೆಚ್ಚಲೇಬೇಕಾದ ವಿಶಯ.

ಕಣ್ಣು ಕುಕ್ಕೋ ಕಾರುಗಳು ಮತ್ತು ಬೈಕ್

ಬಾಂಡ್ ಸಿನೆಮಾ ಅಂದ ಮೇಲೆ ಕೋಟಿಗಟ್ಟಲೆ ಬೆಲೆಬಾಳೋ ಕಾರ್ ಗಳಿಗೇನು ಕಡಿಮೆನಾ? ಈ ಹಿಂದಿನ ಬಾಂಡ್ ಸಿನೆಮಾಗಳನ್ನು ನೋಡಿದರೆ ಆಸ್ಟಿನ್ ಮಾರ‍್ಟಿನ್ ಕಾರುಗಳದ್ದೇ ಹೆಚ್ಚಿನ ಕಾರುಬಾರು. ಈ ಬಾರಿ ಆಸ್ಟಿನ್ ಮಾರ‍್ಟಿನ್ ಕಂಪನಿಯ 4 ಕಾರುಗಳು ಒಂದೇ ಸಿನೆಮಾದಲ್ಲಿ ಕಾಣಿಸಿಕೊಂಡಿರೋದು ಮತ್ತೊಂದು ವಿಶೇಶ. ಆಸ್ಟಿನ್ ಮಾರ‍್ಟಿನ್ ಕಂಪನಿಯ 1964 ರ DB5 ಇಂದ ಮೊದಲಾಗೋ ಬಾಂಡ್ ನ ಪಯಣ, ಮುಂದೆ ಲ್ಯಾಂಡ್ ರೋವರ್ S III (1987 ರ ಬಾಂಡ್ ಸಿನೆಮಾ ‘ದಿ ಲಿವಿಂಗ್ ಡೇ ಲೈಟ್ಸ್’ ನಲ್ಲೂ ಈ ಕಾರನ್ನು ಬಳಸಲಾಗಿತ್ತು), ಆಸ್ಟಿನ್ ಮಾರ‍್ಟಿನ್ V8 ವಾಂಟೇಜ್, ಆಸ್ಟಿನ್ ಮಾರ‍್ಟಿನ್ ಸೂಪರ್ ಲಗೆರಾ, ಆಸ್ಟಿನ್ ಮಾರ‍್ಟಿನ್ ವಾಲ್ಹಲಾ ಜೊತೆಗೆ ಸಾಗುತ್ತದೆ. DB5 ಮತ್ತು V8 ಆಸ್ಟಿನ್ ಮಾರ‍್ಟಿನ್ ಕಂಪನಿಯ ವಿಂಟೇಜ್ ಕಾರುಗಳಾದರೆ, ಸೂಪರ್ ಲಗೆರಾ ಮತ್ತು ವಾಲ್ಹಲಾ ಆಸ್ಟಿನ್ ಮಾರ‍್ಟಿನ್ ಕಂಪನಿಯ ಹೈಬ್ರೀಡ್ ಕಾರುಗಳಾಗಿವೆ. ಇವೆಲ್ಲದರ ಜೊತೆಗೆ ಚಿಂಗಾರಿಯಂತೆ ಸಾಗೋ ಟ್ರಯಂಪ್ ಸ್ಕ್ರಾಂಬ್ಲರ್ 1200 XC ಬೈಕ್ ನೋಡುಗರನ್ನ ಸೆಳೆಯುತ್ತದೆ.

ಕಣ್ಮನ ಸೆಳೆಯೋ ಯೂರೋಪಿನ ನಾಡುಗಳು

ನೂರಾರು ಏಡುಗಳ ಹಳಮೆಯುಳ್ಳ ಸುಂದರ ಕಟ್ಟಡಗಳು ಹಾಗೂ ಕಣ್ಣು ಕೋರೈಸುವ ಸುತ್ತಣಕ್ಕೆ ಹೆಸರಾದ ಯೂರೋಪಿನ ನಾಡುಗಳನ್ನ ಸೆರೆಹಿಡಿದು ನಮ್ಮ ಮುಂದಿಟ್ಟಿದೆ ಬಾಂಡ್ ತಂಡ. ಸಿನೆಮಾ ಮೊದಲಾಗುವುದೇ ನೀಲಿ ಬಣ್ಣದಿಂದ ಕಂಗೊಳಿಸುವ ನಾರ‍್ವೇಯ ಮಂಜುಗಟ್ಟಿದ ಲ್ಯಾಂಗ್ ವ್ಯನ್ ಕೆರೆ. ಹಳೆಯದ್ದನ್ನ ನೆನಪಿಸುವ ಇಟಲಿಯ ಸೇಂಟ್ ಅಮ್ಮ್ಯಾರಿ ಬೀಚ್. ಸಾಹಸಮಯ ಪಟ್ಟುಗಳನ್ನು ಇನ್ನಶ್ಟು ಸುಂದರಗೊಳಿಸುವ ಇಟಲಿಯ ಗ್ರಾವಿನಾದಲ್ಲಿನ ಮಡೋನಾ ಸೇತುವೆ, ಬಾಂಡ್ ನ ಎದುರಾಳಿಗಳು ಬಾಂಡ್ ಗೆ ಮೊದಲ ಪೆಟ್ಟು ನೀಡುವ ಹಳೆ ಕಟ್ಟಡಗಳ ಮಟೆರಾ ಬೀದಿಗಳು. ಸ್ಕಾಟ್ ಲೆಂಡ್ ನ ಸುಂದರ ನದಿ, ಡೆನ್ಮಾರ‍್ಕ್ ನ ಕರಾವಳಿ. ಹಲವು ಬಾಂಡ್ ಸಿನೆಮಾಗಳಲ್ಲಿ ಬರುವ ಜಮೈಕಾದ ಹಸಿರು ಸುತ್ತಣ ಹಾಗೂ ಸುಂದರ ಲಂಡನ್. ಹೊಸ ಬಾಂಡ್ ಸಿನೆಮಾದಲ್ಲಿರುವ ತಾಣಗಳು ನೋಡುಗರಿಗೆ ಹಬ್ಬವೇ ಸರಿ.

ಹಿಂದಿನ ಬಾಂಡ್ ಸಿನೆಮಾಗಳ ನಂಟು

ಹಿಂದೆಂದೂ ಹಿಂದಿನ ಬಾಂಡ್ ಸಿನೆಮಾಗಳ ನೆರಳನ್ನು ಹಿಂಬಾಲಿಸದ ಬಾಂಡ್ ಈ ಬಾರಿ 2006 ರಲ್ಲಿ ಬಿಡುಗಡೆಯಾಗಿದ್ದ 21 ನೇ ಬಾಂಡ್ ಸಿನೆಮಾ ಕಸೀನೋ ರಾಯಲ್ ಹಾಗೂ 2015 ರಲ್ಲಿ ಬಿಡುಗಡೆಯಾಗಿದ್ದ 24 ನೇ ಬಾಂಡ್ ಸಿನೆಮಾ ಸ್ಪೆಕ್ಟರ್ ನೊಂದಿಗೆ ನಂಟು ಹೊಂದಿರುವುದು ಕಂಡುಬರುತ್ತದೆ. ಕಸೀನೋ ರಾಯಲ್ & ಸ್ಪೆಕ್ಟರ್ ನಲ್ಲಿದ್ದ ಪಾತ್ರಗಳು ಇಲ್ಲೂ ಇವೆ.

ಡೇನಿಯಲ್ ಕ್ರೇಗ್ ಅವರ ಕೊನೆಯ ಬಾಂಡ್ ಸಿನೆಮಾ

ಬೇಸರ ತರಿಸಿದರೂ ಇದೇ ದಿಟ. ಇದುವರೆಗೂ ಬಾಂಡ್ ಪಾತ್ರಗಳಲ್ಲಿ 6 ನಟರು ನಟಿಸಿದ್ದರೂ, 2006 ರಿಂದ ಬಾಂಡ್ ಪಾತ್ರದಲ್ಲಿ ನಟಿಸಿರುವ ಡೇನಿಯಲ್ ಕ್ರೇಗ್ ರವರು ತಮ್ಮದೇ ಆದ ಚಾಪು ಮೂಡಿಸಿ ಬಾಂಡ್ ಸಿನೆಮಾ ಅಬಿಮಾನಿಗಳ ಮನದಲ್ಲಿ ನೆಲೆಸಿದ್ದರು. ಆದರೆ ಇದುವರೆಗೂ 5 ಬಾಂಡ್ ಸಿನೆಮಾಗಳಲ್ಲಿ ರಂಜಿಸಿ ಮನಗೆದ್ದಿದ್ದ ಕ್ರೇಗ್ ಅವರು ನೋ ಟೈಮ್ ಟು ಡೈ ತಮ್ಮ ಕೊನೆಯ ಬಾಂಡ್ ಸಿನೆಮಾವಾಗಿರಲಿದೆ ಎಂದು ತಿಳಿಸಿರುವುದು ಕ್ರೇಗ್ ಅಬಿಮಾನಿಗಳಲ್ಲಿ ಬೇಸರ ತರಿಸಿದೆ.

ಕನ್ನಡದಲ್ಲೇ ಮಾತನಾಡಿದ ಬಾಂಡ್

ಹೌದು ಕಣ್ರಿ ಯಾವಾಗ್ಲೂ ನಮ್ಮ ನುಡಿಯಾದ ಕನ್ನಡ ಬಿಟ್ಟು ಇಂಗ್ಲೀಶ್, ತಮಿಳು, ತೆಲುಗು ಹೀಗೆ ಕನ್ನಡೇತರ ನುಡಿಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದ ಬಾಂಡ್ ಈ ಸಾರಿ ಕನ್ನಡದಲ್ಲಿ ಬಿಡುಗಡೆಯಾದದ್ದು ಕನ್ನಡಿಗರ ಪಾಲಿಗೆ ವಿಶೇಶವೇ ಸರಿ. ಹಾಗಾಗಿ ಹಲವಾರು ಕನ್ನಡಿಗರು ಈ ಸಿನೆಮಾವನ್ನು ಕನ್ನಡದಲ್ಲೇ ನೋಡಿ ಆನಂದಿಸಿದ್ದಾರೆ.

‘ಜೇಮ್ಸ್ ಬಾಂಡ್’ಗೂ ತಪ್ಪದ ಕೊರೊನಾ ಕಾಟ

2019 ನವೆಂಬರ್ ನಲ್ಲಿ ಬಿಡುಗಡೆಯಾಗಬೇಕಿದ್ದ ನೋ ಟೈಮ್ ಟು ಡೈ ಕಾರಣಾಂತರಗಳಿಂದ ಏಪ್ರಿಲ್ 2020 ಕ್ಕೆ ಮುಂದೂಡಲ್ಪಟ್ಟಿತ್ತು, ಆದರೆ ಬಾಂಡ್ ನ ಓಟಕ್ಕೆ ಈ ಬಾರಿ ಕೊರೊನಾ ಕಡಿವಾಣ ಹಾಕಿತ್ತು. 2020 ನವೆಂಬರ್ ಗೆ ಮುಂದೂಡಲ್ಪಟ್ಟ ಬಾಂಡ್ ಬಿಡುಗಡೆ, ಮತ್ತೆ ತಲೆದೋರಿದ ಕೋವಿಡ್ ಅಲೆಯಿಂದಾಗಿ 2021 ಅಕ್ಟೋಬರ್ ಗೆ ಬಿಡುಗಡೆ ಮಾಡಲು ಅಣಿಮಾಡಲಾಯಿತು. ಯಾಕೋ ಮಂದಿಯನ್ನು ಹೆಚ್ಚು ಕಾಯಿಸಲೊಪ್ಪದ ಬಾಂಡ್ 30 ಸೆಪ್ಟೆಂಬರ್ 2021 ರಂದೇ ನಮ್ಮ ಮುಂದೆ ಬಂದದ್ದು ಇನ್ನೂ ಕುಶಿ.

(ಮಾಹಿತಿ ಹಾಗೂ ಚಿತ್ರಸೆಲೆ: motorbiscuit.com, screenrant.com, usatoday.com, wikipedia.org, twitter.com, twitter.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: