ಮರುಬೂಮಿಯಲ್ಲೊಂದು ಬ್ರುಹತ್ ಹಸ್ತ ಶಿಲ್ಪ

– .

ಮಾನವ ತನ್ನ ಹಸ್ತವನ್ನು ಹಲವಾರು ಕ್ರಿಯೆಗಳಿಗೆ ಬಳಸುತ್ತಾನೆ. ಮಾನವನ ಅಂಗಾಂಗಗಳಲ್ಲಿ ಇದು ಬಹಳ ಪ್ರಮುಕ ಪಾತ್ರವನ್ನು ನಿಬಾಯಿಸುತ್ತದೆ. ನಮಸ್ಕರಿಸುವುದಕ್ಕಾಗಲಿ, ಹಸ್ತಲಾಗವ ನೀಡುವುದಕ್ಕಾಗಲಿ ಹಸ್ತ ಬೇಕೆ ಬೇಕು. ಇದು ಆತ್ಮೀಯತೆ ಹಾಗೂ ಸೌಹಾರ‍್ದತೆಯನ್ನು ಪ್ರಚುರ ಪಡಿಸುತ್ತದೆ.

ಮರುಬೂಮಿಯಲ್ಲೊಂದು ಕಲಾತ್ಮಕ ಕುಸುರಿ

ಚಿಲಿ ದೇಶದಲ್ಲಿರುವ ಅಟಕಾಮಾ ಮರುಬೂಮಿ ಮಾನವನ ಹಸ್ತದ ಕಲಾತ್ಮಕ ಶಿಲ್ಪಕ್ಕೆ ನೆಲೆಯಾಗಿದೆ ಎಂಬ ವಿಚಾರ ಹೆಚ್ಚು ಜನರಿಗೆ ತಿಳಿದಿಲ್ಲ. ಪ್ರವಾಸಿಗರಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಈ ಹಸ್ತದ ಶಿಲ್ಪವು ಸ್ಪೂರ‍್ತಿ ಪಡೆದಿರುವುದು ಮಾನವನ ಸಂಕಟ ಮತ್ತು ಮರುಬೂಮಿಯ ಶೂನ್ಯತೆಯಿಂದ. ಉತ್ತರ ಚಿಲಿ ದೇಶದ ಅಟಕಾಮಾ ಮರುಬೂಮಿಯ ವಿಶೇಶತೆ ಇರುವುದು ಅಲ್ಲಿನ ಹವಾಮಾನದ ವೈಪರಿತ್ಯದ ಕಾರಣ. ಈ ಪ್ರದೇಶದಲ್ಲಿ ಹಗಲಿನಲ್ಲಿ ಅತ್ಯಂತ ಹೆಚ್ಚು ಉಶ್ಣತೆ ಇದ್ದರೆ, ರಾತ್ರಿಯ ವೇಳೆಯಲ್ಲಿ ಅಶ್ಟೇ ತಂಪಾಗಿರುತ್ತದೆ.

ಈ ಬ್ರುಹತ್ ಹಸ್ತ ಶಿಲ್ಪದ ಹಿನ್ನೆಲೆ

ಕಾಲು ಶತಮಾನದ ಹಿಂದೆ, ಚಿಲಿಯ ತಾಮ್ರದ ಗಣಿಗಾರಿಕೆಯ ಕೇಂದ್ರವಾದ ಅಂಟೊಪಾಗಸ್ಟಾ ನಗರದಿಂದ ಅಟಕಾಮಾ ಮರುಬೂಮಿ ಪ್ರತ್ಯೇಕವಾಗಿತ್ತು. ಸುತ್ತಲೂ ಕಾಲಿ ಕಾಲಿ ಪ್ರದೇಶವಾದ್ದರಿಂದ ಯಾವುದೇ ಆಕರ‍್ಶಣೆಯಿಂದ ದೂರವಾಗಿತ್ತು. ಕಾಲಿತನವನ್ನು ಹೋಗಲಾಡಿಸುವ ಸಲುವಾಗಿ ಅಂಟೊಪಾಗಸ್ಟಾ ನಗರದ ಪ್ರಬುತ್ವವು, ಏನಾದರೂ ಆಕರ‍್ಶಕವಾದುದನ್ನು ನಿರ‍್ಮಿಸುವಂತೆ ಸ್ಯಾಂಟಿಯಾಗೋದ ಕ್ಯಾತ ಶಿಲ್ಪಿ ಮಾರಿಯೋ ಇರಾರ‍್ರಾಜಾಬುಲ್ ಅವರನ್ನು ಕೋರಿತು. ಅದರಂತೆ ಕಾರ‍್ಯ ಪ್ರವ್ರುತ್ತರಾದ ಮಾರಿಯೋ, 1992ರ ಮಾರ‍್ಚ್ ವೇಳೆಗೆ ಅದ್ಬುತವಾದ, ಕಬ್ಬಿಣದ ಚೌಕಟ್ಟಿನ ಮೇಲೆ ಕಾಂಕ್ರೀಟಿನಿಂದ ಮಾಡಲ್ಪಟ್ಟ, ಮರುಬೂಮಿಯಿಂದ ಹೊರಕ್ಕೆ ಚಾಚಲ್ಪಟ್ಟ ದೈತ್ಯಾಕಾರದ 36 ಅಡಿ (11 ಮೀಟರ್) ಎತ್ತರದ ಹಸ್ತ ಶಿಲ್ಪವನ್ನು ಲೋಕಾರ‍್ಪಣೆಗೆ ತಯಾರು ಮಾಡಿದರು. ಸಮುದ್ರ ಮಟ್ಟದಿಂದ ಸುಮಾರು 3608 ಅಡಿ (1100 ಮೀಟರ್) ಎತ್ತರದಲ್ಲಿರುವ ಈ ಬ್ರುಹತ್ ಹಸ್ತದ ಶಿಲ್ಪವನ್ನು ‘ಮಾನೋ ಡೆಲ್ ಡೆಸಿಯರ‍್ಟೊ’ (ಹ್ಯಾಂಡ್ ಆಪ್ ಡೆಸರ‍್ಟ್– ಮರುಬೂಮಿಯ ಹಸ್ತ) ಎಂದು ಕರೆದರು.

ಈ ಹಸ್ತದ ಬಗೆಗಿರುವ ವ್ಯಾಕ್ಯಾನಗಳು

ಈ ದೈತ್ಯಾಕಾರದ ಹಸ್ತ ಯಾವುದನ್ನು ಸಂಕೇತಿಸುತ್ತದೆ? ಇದರ ಬಗ್ಗೆ ಹಲವಾರು ವ್ಯಾಕ್ಯಾನಗಳಿವೆ. ಕೆಲವರು ಮರುಬೂಮಿಯಲ್ಲಿರುವ ಈ ದೈತ್ಯಾಕಾರದ ಹಸ್ತವು ‘ಪ್ರಕ್ರುತಿಗೆ ವಿನಮ್ರವಾಗಿರಬೇಕು’ ಎಂದು ನೆನೆಪಿಸುವ ಉದ್ದೇಶವಾಗಿದೆ ಎಂದರೆ, ಮತ್ತೆ ಕೆಲವರು ಇದು ‘ಪ್ರತಿಕೂಲದ ವಿರುದ್ದ ಏರುತ್ತಿರುವ ಮಾನವನ ಪ್ರದರ‍್ಶನದ ಸಂಕೇತ’ ಎಂದಿದ್ದಾರೆ. ಸಾಮಾನ್ಯ ಜನರಿಗೆ ಇದು ‘ದುರ‍್ಬಲತೆಯ ಮತ್ತು ಅಸಹಾಯಕತೆಯ’ ಚಿತ್ರಣವನ್ನು ಪ್ರತಿನಿದಿಸುತ್ತದೆ. ಏಕೆಂದರೆ ಅಲ್ಲಿಗೆ ಹೋದವರ ವಾಹನದಲ್ಲಿ ಇಂದನ ಕಡಿಮೆಯಾದಲ್ಲಿ ಅನುಬವಿಸುವ ಅಸಹಾಯಕತೆ. ಇದಕ್ಕೆ ಮೂಲ ಕಾರಣ ಇಂದನವನ್ನು ಪಡೆಯಲು ಹೋಗಬೇಕಿರುವುದು ಹತ್ತಿರದ ಅಂಟೊಪಾಗಸ್ಟಾ ನಗರಕ್ಕೆ. ಸುಮಾರು 74 ಕಿಲೋಮೀಟರ್ ದೂರವಿರುವ ನಗರ ಎಂದಾಗ ಅಸಹಾಯಕತೆಯ ಅಂದಾಜು ಸಿಗಬಹುದು.

ಎಡ ಹಸ್ತವೇ ಏಕೆ?

ಚಿಲಿಯ ದೈತ್ಯಾಕಾರದ ಹಸ್ತದ ಶಿಲ್ಪವು ಮಾನವನ ಎಡ ಹಸ್ತದ ಪ್ರತಿಬಿಂಬವಾಗಿದೆ. ಎಡ ಹಸ್ತವೇಕೆ? ಬಲ ಹಸ್ತದ ಪ್ರತಿಕ್ರುತಿಯನ್ನೇಕೆ ಇಲ್ಲಿ ಸ್ತಾಪಿಸಲಿಲ್ಲ? ಎಂಬ ಪ್ರಶ್ನೆ ಏಳುವುದು ಸಹಜ. ಇದಕ್ಕೂ ಕಾರಣವಿದೆ. ಏಕೆಂದರೆ, ಇದೇ ಕ್ಯಾತ ಶಿಲ್ಪಿ ಮಾರಿಯೋ ಇರಾರ‍್ರಾಜಾಬುಲ್ ದಶಕದ ಹಿಂದೆ, ಉರುಗ್ವೆಯಲ್ಲಿ, ಬಲ ಹಸ್ತವನ್ನು ನಿರ‍್ಮಿಸಿದ್ದರಿಂದ ಇಲ್ಲಿ ಎಡ ಹಸ್ತಕ್ಕೆ ಪ್ರಾಶಸ್ತ್ಯವನ್ನಿತ್ತ. ಬಲ ಹಸ್ತವು ಚಿಲಿಯ ಅಂಟೊಪಾಗಸ್ಟಾದಿಂದ ಪೂರ‍್ವಕ್ಕೆ 1200 ಮೈಲಿಗಳಶ್ಟು ದೂರದಲ್ಲಿರುವ ಉರುಗ್ವೆಯ ಅಟ್ಲಾಂಟಿಕ್ ಕರಾವಳಿಯಲ್ಲಿದೆ. ಇಲ್ಲಿಯೂ ಕಡಲ ತೀರದ ಮರಳಿನಿಂದ ಮೇಲೆದ್ದಿರುವಂತೆ ಕಾಂಕ್ರೀಟಿನಿಂದ ನಿರ‍್ಮಿಸಿರುವ ಬಲ ಹಸ್ತವನ್ನು ಕಾಣಬಹುದು. ಉರುಗ್ವೆಯಲ್ಲಿನ ಈ ಬಲದ ಹಸ್ತದ ಶಿಲ್ಪವನ್ನು ಮಾರಿಯೋ ಇರಾರ‍್ರಾಜಾಬುಲ್ ‘ಮ್ಯಾನ್ ಎಮರ‍್ಜಿಂಗ್ ಟು ಲೈಪ್’ ಎಂದು ಕರೆದರು. ಆದರೆ ಸ್ತಳೀಯರು ಇದನ್ನು ‘ಮಾನ್ಯುಮೆಂಟ್ ಆಪ್ ಡ್ರೌನ್ಡ್’ (ಮುಳುಗಿದವರ ಸ್ಮಾರಕ) ಅತವಾ ‘ದ ಹ್ಯಾಂಡ್’ ಎಂದು ಗುರುತಿಸುತ್ತಾರೆ. ಈ ಎರಡೂ ದೈತ್ಯ ಹಸ್ತಗಳನ್ನು ಒಟ್ಟಾಗಿ ಕಲ್ಪಿಸಿಕೊಂಡರೆ, ದಕ್ಶಿಣ ಅಮೇರಿಕಾವನ್ನು ಅವುಗಳು ತಮ್ಮ ಬಿಗಿ ಹಿಡಿತದಲ್ಲಿ ಹಿಡಿದಿಟ್ಟುಕೊಂಡಿರುವಂತೆ ಬಾಸವಾಗುತ್ತದೆ.

(ಮಾಹಿತಿ ಮತ್ತು ಚಿತ್ರಸೆಲೆ: monumentos.gob.cl, worldatlas.com, antofaturismo.cl, mybestplace.com, amusingplanet.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.