ನಾ ನೋಡಿದ ಸಿನಿಮಾ – “ಗರುಡ ಗಮನ ವ್ರುಶಬ ವಾಹನ”
– ನಿತಿನ್ ಗೌಡ.
ಕನ್ನಡದಲ್ಲಿ ಬೂಗತ ಲೋಕದ ಸಿನಿಮಾಗಳಿಗೆ ಬರವಿಲ್ಲ. ಕೊಂಚ ಹೆಚ್ಚೇ ಇವೆ ಅಂದರೂ ತಪ್ಪಿಲ್ಲ. ಓಂ ಮೂಲಕ ಇವುಗಳಿಗೆ ಉಪ್ಪಿ ಓಂಕಾರ ಹಾಕಿದರು ಅಂತ ಅಂದ್ಕೊತಿನಿ. ಓಂ ನಿಂದ ಹಿಡಿದು ಇತ್ತೀಚಿನ ಟಗರು, ಸಲಗ ಮತ್ತು ಸೂರಿಯವರ ಕೆಂಪು ಆದ್ಯಾತ್ಮ “ಪಾಪ್ ಕಾರ‍್ನ್ ಮಂಕಿ ಟೈಗರ‍್” ಹೀಗೆ ಹಲವಾರು ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುವ ಜೊತೆಗೆ ಕ್ರಿಟಿಕಲಿ ಕೂಡ ಹೆಸರು ಗಳಿಸಿದ್ದಾವೆ. ಈಗ ಈ ಸಾಲಿಗೆ “ಗರುಡ ಗಮನ ವ್ರುಶಬ ವಾಹನ” ಸಿನಿಮಾ ಕೂಡ ಸೇರುವಂತಿದೆ ಮತ್ತು ಹಲವಾರು ಕಾರಣಕ್ಕೆ ಹಲವರ ಮೆಚ್ಚುಗೆ ಗಳಿಸುತ್ತಿದೆ. ಚಿತ್ರದ ಕತಾ ಹಂದರ ನೇರ, ಹೊಸತಲ್ಲ ಆದರೆ ಚಿತ್ರಕತೆ, ಸಿನೆಮಾ ಸಾಗುವ ಪರಿ, ಹಿನ್ನೆಲೆ ಸಂಗೀತ, ಪಾತ್ರಗಳ ಬಾವನೆಗಳ ಏರಿಳಿತಗಳಿಗೆ ತಕ್ಕಂತೆ ಕ್ಯಾಮರಾ ಕಣ್ಣಂಚಲ್ಲಿ ಬಂದ ಕುಸುರಿ, ಚಿತ್ರಕ್ಕೆ ತೂಕ ನೀಡಿದೆ. ಮಂಗಳಾದೇವಿ(ಊರು) ಎಂಬುವಲ್ಲಿ ಹರಿ ಮತ್ತು ಶಿವ ಇವರ ಸ್ನೇಹ ಮತ್ತು ಅವರು ಎಣಿಸದಿದ್ದರೂ ರೌಡಿಸಂಗೆ ಅವರು ದುಮುಕಿ ಆ ಜಗತ್ತಿನಲ್ಲಿ ಪಯಣ ,ಕೊನೆಗೆ ಅವರ ಕೊನೆ ಅತವಾ ಹೊಸ ಹರಿ ಶಿವರ ಹುಟ್ಟು. ಈ ಬಾಳಚಕ್ರವನ್ನು ಹೇಗೆ ತೆರೆಯ ಮೇಲೆ ತರಲಾಗಿದೆ ಎಂಬುದೇ ಚಿತ್ರ. ಅಂದಹಾಗೆ ಗರುಡ ಗಮನ ಅಂದ್ರೆ ಗರುಡನ ಮೇಲೆ ಓಡಾಡುವವ ( ಹರಿ ), ವ್ರುಶಬ ವಾಹನ ಎಂದರೆ, ನಂದಿಯನ್ನು ವಾಹನವಾಗಿಸಿಕೊಂಡವ ಅಂದರೆ ಶಿವ.
ಪುರಾಣದ ಪಾತ್ರಗಳ ಗುಣದ ಹೊಂದಿಕೆ
ಕೆಲವು ನಂಬಿಕೆಗಳ ಪ್ರಕಾರ ತ್ರಿಮೂರ‍್ತಿಗಳಾದ ಬ್ರಹ್ಮ, ವಿಶ್ಣು ಮತ್ತು ಶಿವ, ಸ್ರುಶ್ಟಿಯ ಹುಟ್ಟು-ಬದುಕು-ಕೊನೆ(ತೊಡೆದುಹಾಕುವುದು) – ಈ ಮೂರು ಸಂಗತಿಗಳ ಸಂಬಂದಿತ ಹೊಣೆಗಾರಿಕೆಯನ್ನು ಕ್ರಮವಾಗಿ ಮಾಡುತ್ತಾ ಬರುತ್ತಾರೆ. ಈ ಮೂವರಲ್ಲಿನ ಕೆಲವು ಗುಣಗಳನ್ನು ಚಿತ್ರದ ಪಾತ್ರಗಳಿಗೆ ಬಳಸಿಕೊಳ್ಳಲಾಗಿದೆ ಎಂಬುದು ನನ್ನ ಅನಿಸಿಕೆ. ಪುರಾಣದ ಶಿವನ ಅವತಾರಗಳಾದ ವೀರಬದ್ರ ,ಕಾಲಬೈರವ, ಮಂಜುನಾತ ಇವರ ರೌದ್ರ(ಮೂಗಿನ ತುದಿಯ ಸಿಟ್ಟು),ವಿನಾಶ ಮತ್ತು ಶಾಂತ ಗುಣಗಳನ್ನು ಸಿನಿಮಾದ ಶಿವನ ಪಾತ್ರಕ್ಕೆ ಬಳಸಿಕೊಳ್ಳಲಾಗಿದೆ. ಜೀವನದ ಬದಲಾವಣೆಗಳನ್ನು ಪುರಾಣದ ಹರಿಗೆ ರೂಪಕ/ಹೋಲಿಕೆಯಾಗಿ ಜೊತೆಗೆ ಹರಿಯಲ್ಲಿರುವ ಶಾಂತ ಕೋಪ, ಅಳೆದು ತೂಗುವ ಗುಣ ಇವುಗಳನ್ನು ಸಿನಿಮಾದ ಹರಿಯಲ್ಲೂ ಕಾಣಬಹುದು. ಪುರಾಣದ ಬ್ರಹ್ಮನಂತೆ ಬುದ್ದಿವಂತಿಕೆ ಮತ್ತು ಹಣೆಬರಹ ಬರೆಯುವ ಕೆಲಸವನ್ನು ಬ್ರಹ್ಮಯ್ಯ ಪಾತ್ರದಿಂದ ಎದುರುನೋಡಬಹುದು. ಮಂಗಳಾದೇವಿ ಊರು ದೇವಿಯನ್ನು ಪ್ರತಿನಿದಿಸುತ್ತಿರಬಹುದು (ಸ್ತಳಪುರಾಣದ ಪ್ರಕಾರ ಮಂಗಳಾದೇವಿಗೂ ಕತೆ ಇದೆ ಎಂಬ ಮಾತಿದೆ) .
ಪಾತ್ರಗಳ ಹುಟ್ಟು, ಸಾಗುವ ಪರಿ
ನನ್ನ ಪ್ರಕಾರ ನಮ್ಮೆಲ್ಲರಲ್ಲೂ ಹರಿ,ಶಿವ,ಬ್ರಹ್ಮನ ಗುಣಗಳಿರುತ್ತವೆ. ಇಲ್ಲಿ ಬರುವ ಪಾತ್ರಗಳು ಆ ನಿಟ್ಟಿನಲ್ಲಿ ಆ ಕೆಲವು ಗುಣಗಳನ್ನು ಆಗಿಂದಾಗಲೇ ಹೊರಹಾಕುತ್ತವೆ. ಚಿತ್ರದಲ್ಲಿ ಒಂದೇ ಒಂದು ಹೆಣ್ಣಿನ ಪಾತ್ರವನ್ನು ಕಾಣಬಹುದು ಆದರೆ ಈ ಎಲ್ಲಾ ನಾಟಕ(ಇಡೀ ಸಿನಿಮಾ) ಆಗುತ್ತಿರುವುದು ಮಂಗಳಾದೇವಿಯಲ್ಲಿ (ಅಂದರೆ ಅದು ಹೆಣ್ಣನ್ನು ಸೂಚಿಸುತ್ತದೆ). ಚಿತ್ರದ ಮೊದಲಲ್ಲಿ ಬರುವ ಇಂಗ್ಲಿಶ್ ಹಾಡು ಕೂಡ ಹುಡುಗಿಯ ದನಿಯಲ್ಲೇ ಇದೆ. ಇಲ್ಲಿ ಲವ್‍ಸ್ಟೋರಿ ಇಲ್ಲ ಆದರೆ ಹರಿ ಶಿವನ ನಡುವೆ ಒಂದು ಪ್ರೀತಿ ಇದೆ. ಶಿವನ ಪಾತ್ರ ಚಿತ್ರದ ಮೊದಲಿನಿಂದಲೂ ಗಟ್ಟಿತನ ತೋರುತ್ತದೆ. ಪುರಾಣದ ಶಿವನಂತೆ, ಈ ಶಿವನ ಹುಟ್ಟೂ ತಿಳಿಯೋದಿಲ್ಲ. ಬಾವಿಯೋ/ಗುಂಡಿಯೋ ಇದರಿಂದ ಹೊರಬರುವ ಆತನ ಹುಟ್ಟು ಮಂಗಳಾದೇವಿಯ (ಬೂಮಿ ಅನ್ನೋ ಹೋಲಿಕೆ) ಗರ‍್ಬದಿಂದ ಆಯಿತೆಂದು ಅಂದುಕೊಳ್ಳಬೇಕೋ ಅತವಾ ಆತ ಅಲ್ಲಿ ಹೇಗೆ ಬಂದ ಅನ್ನುವ ಗೊಂದಲ ಮೂಡಿಸುವ ಮೂಲಕ ನಿರ‍್ದೇಶಕ ಪುರಾಣದ ಶಿವನ ಹುಟ್ಟಿನ ತರವೇ ಚಿತ್ರದಲ್ಲಿನ ಶಿವನ ಪಾತ್ರದ ಹುಟ್ಟು ಗೊತ್ತಿಲ್ಲದಂತೆ ಇಟ್ಟಿದ್ದಾರೆ. ಇನ್ನು ಮೊದ ಮೊದಲಿಗೆ ಮೆದು ಸ್ವಬಾವದವನಾಗಿರುವ ಹರಿಯ ಪಾತ್ರ ಬದಲಾಗುತ್ತಾ ಸಾಗುತ್ತದೆ ಮತ್ತು ಈ ಪಾತ್ರದ ಏರಿಳಿತ ನಮಗೆ ಕಾಣುತ್ತದೆ. ಬಹುಶಹ ಹರಿ ಬದಲಾಗುತ್ತಾ ಬದಲಾಗುತ್ತಾ ಶಿವ ಆಗುತ್ತಾನೆ, ಕೊನೆಯನ್ನೂ ಕಾಣುತ್ತಾನೆ. ಶಿವ ಹಾಕುವ ಬಟ್ಟೆ/ಇರುವ ಹುಟ್ಟು(ರೀತಿ) ಆತನಂತೆ ಚಿತ್ರ ಮುಗಿಯುವವರೆಗೂ ಬದಲಾಗುವುದಿಲ್ಲ. ಹರಿ ಹಾಗಲ್ಲ ಆತ ಮೊದಲಿಗೆ ಕ್ಲೀನ್ ಶೇವ್ ಅಲ್ಲಿರುತ್ತಾನೆ, ಕೊನೆಗೆ ಗಡ್ಡ ಬೆಳೆಸಿಕೊಳ್ಳುತ್ತಾನೆ. ಇದು ಕೂಡ ಬದಲಾವಣೆ ತೋರಿಸುತ್ತದೆ. ಬ್ರಹ್ಮಯ್ಯ ಕೂಡ ಮೊದಲಿಗೆ ಮೆತ್ತನೆಯ ಸ್ವಬಾವದ ಪಾತ್ರವಾಗಿರುತ್ತಾನೆ. ಆದರೆ ಬರು ಬರುತ್ತಾ ಚತುರನಾಗುತ್ತಾ ಸಾಗುತ್ತಾನೆ. ಅಲ್ಲದೇ ಒಂದು ಲೆಕ್ಕದಲ್ಲಿ ಹಣೆಬರಹ ಬರೆಯುವ ಸ್ಚ್ರಿಪ್ಟ್ ರೈಟರ್ ಆಗುತ್ತಾನೆ. ಇದಲ್ಲದೇ ಡ್ರೈವರ‍್ ಪಾತ್ರ ನೋಡೋದಕ್ಕೆ ದೊಡ್ಡದಾಗಿ(ದೈಹಿಕವಾಗಿ) ಕಾಣುತ್ತೆ ಅತವಾ ಈ ಪಾತ್ರ ನಮ್ಮ ಯೋಚನೆಗಳೇ ನಮ್ಮ ಸೋಲಿಗೆ ಕಾರಣ ಅನ್ನೋದನ್ನ ಹೇಳುತ್ತಿರಬಹುದು. ಬಹುಶಹ ಅದನ್ನು ಎದುರಿಸಿದಲ್ಲಿ,( ನಮ್ಮ ಯೋಚನೆಗಳನ್ನು ಹತೋಟಿಗೆ ತಂದಾಗ) ನಾವು ನಮ್ಮ ಕೆಲಸವನ್ನು ಮಾಡಿ ಗುರಿ ಮುಟ್ಟಬಹುದು ಎಂಬುದನ್ನು ತೋರಿಸುತ್ತಿತ್ತೇನೋ? ಶಿವನ ಮಾತು ಪಟಪಟನೆ ಇರುತ್ತದೆ ಮತ್ತು ಶಿವನ ಕೋಪದಂತೆ ಆಗಾಗ ಬುಗಿಲೇಳುತ್ತದೆಯಾದರೆ, ಹರಿಯ ಮಾತಿನ ಓಟ ಮೆಲ್ಲನೆ ಮತ್ತು ಲೆಕ್ಕಾಚಾರದಿಂದ ಕೂಡಿರುತ್ತದೆ.
ಶಿವ ಮೊದ ಮೊದಲಿಗೆ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರುವುದಿಲ್ಲ. ಚಿಕ್ಕನಿಂದಲೂ ಎಶ್ಟೇ ಹಿಂಸೆ ಕೊಟ್ಟರೂ ಆತ ಎದುರುತ್ತರ ನೀಡುತ್ತಿರುವುದಿಲ್ಲ. ಆದರೆ ಆತ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಾಗ ಇಡೀ ಮಂಗಳಾಪುರಕ್ಕೆ ಗೊತ್ತಾಗುತ್ತದೆ. ಈ ಹಿಂದೆ ಅವನು ಹಿಡಿದಿಟ್ಟುಕೊಂಡ ತನಗಾದ ಎಲ್ಲಾ ಹಿಂಸೆಯ ಸಾಲವನ್ನೂ ಬಡ್ಡಿ ಸಮೇತ ತೀರಿಸುತ್ತಾನೆ. ಅದೂ ಹರಿಗಾಗಿ! ಇದೊಂದು ರೀತಿಯ ಪ್ರೀತಿ ಅನ್ನಬಹುದು. ಶಿವ ತಾ ತಪ್ಪು ಮಾಡಿ ಬಂದ ನಂತರ ಯಾವುದೇ ಗಿಲ್ಟ್ ಇಲ್ಲದೇ ಕ್ರಿಕೆಟ್ ಆಡಿದರೆ, ಹರಿ ಪಾಪನಾಶಕ್ಕಾಗಿ ಕದ್ರಿಗೆ ಹೋಗಿ ಸ್ನಾನ ಮಾಡುತ್ತಾನೆ. ಅಂದರೇ ಆತನಿಗೆ ತಪ್ಪು ಎಂದು ತಿಳಿದೂ ಹಾಗೆ ಮಾಡುತ್ತಾನೆ. ಕೇಬಲ್ ದಂದೆ, ಪ್ರತಿಶ್ಟೆ ಮತ್ತು ಹಣಕ್ಕಾಗಿ ಹುಲಿ ಕುಣಿತ ಮಾಡಿಸೋದು ಹೀಗೆ ಹಂತ ಹಂತವಾಗಿ ಇವರು ಬೂಗತ ಲೋಕದ ಒಂದೊಂದೇ ಮೆಟ್ಟಿಲೇರುತ್ತಾ ಹೋದಂತೆ, ಹರಿ ಬದಲಾಗುತ್ತಾ ಸಾಗುತ್ತಾನೆ ಆದರೆ ಶಿವ ಇದ್ದ ಹಾಗೆಯೇ ಇರುತ್ತಾನೆ. ಹೀಗಿರುವಾಗ ಬ್ರಹ್ಮಯ್ಯ ಎಂಬ ಇನ್ಸ್ಪೆಕ್ಟರ್ ಈ ಜಾಗಕ್ಕೆ ಬರುತ್ತಾನೆ. ಆತ ಇಲ್ಲಿ ಯಾತಾಕ್ಕಾದರೂ ಈ ಜಾಗಕ್ಕೆ ಬಂದೆನೋ ಅನ್ನುವ ಹಂತದಿಂದ ಆ ಜಾಗದ ಸ್ಚ್ರಿಪ್ಟ್ ರೈಟರ್ ಆಗುವ ತನಕದ ಪಯಣ ಕಾಣಬಹುದು. ನಾವೂ ಅಶ್ಟೇ ,ಕಾಲದ ಪರೀಕ್ಶೆಗೆ ಒಳಪಟ್ಟಾಗ, ನಮ್ಮಲ್ಲಿರುವ ಬ್ರಹ್ಮಯ್ಯ ಹೊರಬರಬಹುದು. ಒಂದು ಸೀನ್ ಅಲ್ಲಿ, ಶಾಂತ ಸ್ವಬಾವದ ಬ್ರಹ್ಮಯ್ಯ, ಏಕಾಏಕಿ ಒಬ್ಬನಿಗೆ ಹೊಡೆಯುತ್ತಾನೆ. ಆತ ಹೊಡೆಯುವುದನ್ನು ನೇರವಾಗಿ ತೋರಿಸದೇ, ಆತನ ಆ ಬದಲಾವಣೆಯನ್ನು ಡ್ರೈವರ್ ಮುಕದಲ್ಲಿ ತೋರಿಸಿದ್ದಾರೆ.
ಸುತ್ತಣದ ತಾಣಗಳು ಮತ್ತು ಬಣ್ಣಗಳ ಪ್ರಯೋಗ
ಮೊದಲ ಇಂಗ್ಲಿಶ್ ಹಾಡಿನಲ್ಲಿ ಕೆಂಪು ಮತ್ತು ನೀಲಿ ಎರಡು ಬಣ್ಣಗಳನ್ನು ತೋರಿಸಲಾಗಿದೆ.
ಕೆಂಪು ಶಿವನನ್ನು ಬಿಂಬಿಸಿದರೆ, ನೀಲಿ ಹರಿಯನ್ನು ಬಿಂಬಿಸುತ್ತದೆ. ಒಂದು ಸಿನಿಮಾ ಆಯಾ ಕಾಲಗಟ್ಟದಲ್ಲಿ ,ಆಯಾ ಜಾಗಕ್ಕೆ ಹಿಡಿದ ಕನ್ನಡಿ ಅಂದರೆ, ಅದಕ್ಕೆ ತಕ್ಕಹಾಗೆ ತಾಣಗಳ ಬಳಕೆ ಮಾಡಿದ್ದಾರೆ. ಬ್ರಹ್ಮಯ್ಯ ಡ್ರೈವರ್ ಅನ್ನು ಕಲ್ಲು ಕ್ವಾರಿಗೆ ಕರೆದೊಯ್ದಾಗ, ಆ ಸುತ್ತಣದಲ್ಲಿರುವ ಬಣ್ಣಗಳು, ಆ ಸೀನ್ ಹಿಂದಿನ ಬಾವನೆ ಜನರಿಗೆ ಸರಿಯಾಗಿ ತಲುಪಲು ಸಹಾಯ ಮಾಡಿದೆ. ಪ್ರತಿಶ್ಟೆಗೆ ತಕ್ಕಂತೆ ಬೇರೆ ಬೇರೆ ಬಣ್ಣದ ಹುಲಿಕುಣಿತದ ಹುಲಿಗಳನ್ನೂ ಸಹಾ ಕಾಣಬಹುದು.
ಕ್ಯಾಮರಾ ಚಳಕ
ಸೀನ್ ನಾ ಹಿಂದಿನ ಬಾವನೆಗೆ ತಕ್ಕಂತೆ ಕ್ಯಾಮರಾ ಕೆಲಸ ಮಾಡಿದೆ. ಸ್ಲೋ ಮೋಶನ್(ಮಂದಗತಿ) ಅನ್ನು ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ ಮತ್ತು ಇದಕ್ಕೆ ಕಾರಣವೂ ಇದೆ. ಮೊದಲ ಸೀನ್ ಅಲ್ಲಿ, ಅಂದರೆ ಮೀನು ಹೆಚ್ಚುವಾಗಿನ ಸೀನಿನಲ್ಲಿ ಹಂತ ಹಂತವಾಗಿ ಕುತೂಹಲ ಹುಟ್ಟಿಸಲು ಇದರ ಬಳಕೆ ಮಾಡಲಾಗಿದೆ ಶಿವನ ಶೂ ಸೀನ್, (ಕರ‍್ಟೇನ್ ಪೋಕಸ್ ಮಾಡಿದ್ದು) ಸಿಳ್ಳೆ ಹೊಡೆಯೋ ಗಳಿಗೆ. ಯಾಕೆ ಅನ್ನುವುದನ್ನು ಸಿನಿಮಾದಲ್ಲೇ ನೋಡಬೇಕು(ಆತ ತಪ್ಪು ಮಾಡುತ್ತಿದ್ದರೂ, ಸಿಳ್ಳೆ ಪಡೆಯುತ್ತಾನೆ).
ಹಿನ್ನೆಲೆ ಸಂಗೀತ ಮತ್ತು ಹಾಡುಗಳು
ಮಿದುನ್ ಮುಕುಂದ್ ಅವರ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿ ಲವ್‍ಸ್ಟೋರಿ ಇಲ್ಲ, ಆದರೆ ” ಎಂದೋ ಬರೆದ” ಹಾಡು ಹರಿ ಶಿವನ ನಡುವಿನ ಪ್ರೀತಿ ತೋರಿಸುತ್ತದೆ. ಪುರಂದರ ದಾಸರ “ಚಂದ್ರಚೂಡ..” ಹಾಡಿಗೂ ಅದರ ಹಿಂದೆ ಬರುವ ಸೀನ್ ಗು ನೇರವಾಗಿ ಹೊಂದಿಕೆ ಇಲ್ಲದಿದ್ದರೂ, ಅದನ್ನು ಹೊಂದಿಸಿದ್ದಾರೆ ಮಿದುನ್. ಕನ್ನಡ ಜನಪದರು ಕಟ್ಟಿ ಬೆಳಿಸಿದ ಸೋಜುಗಾದ ಸೂಜುಮಲ್ಲಿಗೆ ಹಾಡನ್ನೂ ಸಹ ಹೀಗೆ ಹೊಂದಿಸಿದ್ದಾರೆ. ಈ ಹಾಡಿನ ಹೊತ್ತಿನಲ್ಲಿನ ಶಿವನ ಹುಲಿಕುಣಿತ , ನಿಜ ಶಿವನ ತಾಂಡವ ಕುಣಿತಕ್ಕೆ ಹೋಲಿಸಬಹುದೇನೋ?
ಚಿತ್ರದ ಅನುಬವ
ಒಟ್ಟಾರೆಯಾಗಿ ಒಂದು ಗಟನೆ ನಡೆದಿದ್ದು, ಅದನ್ನು ಹೋಗಿ ಸೆರೆಹಿಡಿದಿದ್ದಾರೇನೋ ಅನ್ನುವ ಹಾಗೆ ಚಿತ್ರ ಸಹಜವಾಗಿದೆ. ಹರಿ ಶಿವನ ಪಾತ್ರಗಳು ಸರಿತಪ್ಪಿನ ನೆಲೆಗಟ್ಟಲ್ಲಿ ನೋಡುವ ಪಾತ್ರಗಳಲ್ಲ. ಹರಿ ಶಿವ ಹೇಗೆ ಬಂದರೋ ಮತ್ತೆ ಅಲ್ಲಿಗೆ ಹೋಗುತ್ತಾರೆ(ನಾಶ). ಬಹುಶಹ ಅವರಿಗೆ ಆ ಗತಿ ತಂದವರೂ ಅದೇ ರೀತಿ ಇನ್ನೊಬ್ಬ ಹರಿ ಶಿವರ ಹುಟ್ಟಿಗೆ ಕಾರಣವಾಗಿ; ಆ ಚಕ್ರದ ಸುಳಿಯಲ್ಲೇ ಬೀಳುತ್ತಾ ಸಾಗುತ್ತಾರೆ. ಇವರಿಬ್ಬರಿಗೆ ಎದುರಾಗೋ ಸಾವು ತೀರಾ ಸಾದಾರಣ(silly) ಮತ್ತು ಎಣಿಸಲಾಗದ/ಅನಿರೀಕ್ಶಿತ ಅನ್ನಿಸಬಹುದು. ಆದರೆ ಅದೇ ನಿರ‍್ದೇಶಕನ ಉದ್ದೇಶ ಇರಬಹುದು.
( ಚಿತ್ರಸೆಲೆ : kannadamovies.club )
ಇತ್ತೀಚಿನ ಅನಿಸಿಕೆಗಳು