ಹಲಬಳಕೆಯ ಹೇರಳೆಕಾಯಿ
ಮೂಸಂಬಿಯನ್ನು ಹೋಲುವ ಹುಳಿಯುಕ್ತ ರಸಬರಿತವಾದ ಹಣ್ಣು ಹೇರಳೆಕಾಯಿ. ನಿಂಬೆಹಣ್ಣಿಗೆ ಪರ್ಯಾಯವಾಗಿ ಇದನ್ನು ಬಳಸಲಾಗುತ್ತದೆ. ‘ಸಿಟ್ರಸ್ ಮೆಡಿಕಾ’ ಎಂಬ ವೈಜ್ನಾನಿಕ ಹೆಸರಿನಿಂದ ಕರೆಯಲ್ಪಡುವ ಹೇರಳೆಕಾಯಿಗೆ ಇಂಗ್ಲೀಶ್ ನಲ್ಲಿ ಸಿಟ್ರಾನ್ ಎಂಬ ಹೆಸರಿದೆ. ಉತ್ತರ ಬಾರತಕ್ಕಿಂತ ದಕ್ಶಿಣ ಬಾರತದಲ್ಲಿ ಇದರ ಬಳಕೆ ಹೆಚ್ಚು. ಇರಾನ್, ತೈವಾನ್ ಗಳಂತಹ ಹೊರದೇಶಗಳಲ್ಲಿಯೂ ಇದರ ಪರಿಚಯವಿದೆ.
ಗ್ರಾಮೀಣ ಬಾಗಗಳಲ್ಲಿ ಕೆಲವೆಡೆ ಇದನ್ನು ಎಳ್ಳಿಕಾಯಿ ಹಾಗೂ ಇರುಳಿಕಾಯಿ ಎಂದೂ ಕರೆಯಲಾಗುತ್ತದೆ. ಹೇರಳೆಕಾಯಿ ಗಿಡವು 4 ರಿಂದ 5 ಮೀಟರ್ ಎತ್ತರಕ್ಕೆ ಬೆಳೆಯುವ ಸಾದ್ಯತೆ ಇದ್ದು, ಎಲ್ಲಾ ಬಗೆಯ ಮಣ್ಣಿನಲ್ಲೂ ಬೆಳೆಯಬಹುದಾಗಿದೆ. ಈ ಗಿಡದಲ್ಲಿ ಅಲ್ಲಲ್ಲಿ ಮುಳ್ಳುಗಳಿದ್ದು ನಿಂಬೆಯ ಎಲೆಯಂತೆ ಕಾಣುವ ಸುವಾಸನೆ ಬರಿತ ಎಲೆಗಳಿಂದ ಕೂಡಿರುತ್ತದೆ. ಈ ಗಿಡದ ಹೂವುಗಳು ಬಿಳಿ ಬಣ್ಣದಲ್ಲಿರುತ್ತವೆ. ಹೇರಳೆಕಾಯಿಯ ಸಿಪ್ಪೆಯು ಮೂಸಂಬಿ ಸಿಪ್ಪೆಯಂತೆ ದಪ್ಪನಾಗಿರುತ್ತದೆ. ಒಮ್ಮೆ ಹೇರಳೆಕಾಯಿ ಸಸಿ ನೆಟ್ಟರೆ ಮೂರು-ನಾಲ್ಕು ವರ್ಶಗಳವರೆಗೆ ಸಾಮಾನ್ಯವಾದ ಮರದೆತ್ತರಕ್ಕೆ ಬೆಳೆದು ವರ್ಶಕ್ಕೆ 200 ರಿಂದ 300 ರಶ್ಟು ಹೇರಳೆಕಾಯಿಗಳನ್ನು ಬಿಡುತ್ತದೆ. ಮೂಸಂಬಿಯ ಸಿಪ್ಪೆಯಂತೆ ಹೇರಳೆಕಾಯಿಯ ಸಿಪ್ಪೆಯು ದಪ್ಪನಾಗಿರುತ್ತದೆ. ಹೇರಳೆಕಾಯಿ ಮೊದಲಿಗೆ ಎಲೆ ಹಸಿರಿನ ಬಣ್ಣದಲ್ಲಿದ್ದು ನಂತರ ಹಳದಿಬಣ್ಣಕ್ಕೆ ತಿರುಗಿದ ಮೇಲೆ ಮಾರಾಟಕ್ಕೂ, ಬಳಕೆಗೂ ಯೋಗ್ಯವಾಗಿರುತ್ತದೆ.
ರುಚಿಯಾದ ಅಡುಗೆಗೆ
ಹೇರಳೆಕಾಯಿಯು ಹುಳಿಯುಕ್ತವಾದ್ದರಿಂದ ಹಾಗೆಯೇ ತಿನ್ನಲು ಸಾದ್ಯವಿಲ್ಲ. ಇದನ್ನು ಹಲವು ಬಗೆಯ ಅಡುಗೆಯಲ್ಲಿ ಬಳಸಬಹುದಾಗಿದೆ. ಹೇರಳೆಕಾಯಿ ರಸದಿಂದ ತಯಾರಿಸಿದ ಚಿತ್ರಾನ್ನವು ತುಂಬಾ ರುಚಿಯಾಗಿರುತ್ತದೆ. ಹೇರಳೆಕಾಯಿ ಬಳಸಿ ಸ್ವಾದಿಶ್ಟಬರಿತ ಉಪ್ಪಿನಕಾಯಿಯನ್ನು ತಯಾರಿಸಬಹುದಾಗಿದೆ. ಹೇರಳೆಕಾಯಿ ಪಾನಕವೂ ಅದ್ಬುತವಾಗಿರುತ್ತದೆ. ಕೆಲವೆಡೆ ಹೇರಳೆಕಾಯಿ ಬಳಸಿ ಸಾಂಬಾರ್, ರಸಂ ಮಾಡುತ್ತಾರೆ.
ಔಶದೀಯ ಗುಣಗಳು
ಹೇರಳೆಕಾಯಿ ಗಿಡವನ್ನು ಆಯುರ್ವೇದೀಯ ಸಸ್ಯವೆಂದು ಹೇಳಬಹುದು. ಇದು ವಿಟಮಿನ್ ಸಿ ಜೊತೆಗೆ ನಾನಾ ಬಗೆಯ ಪೋಶಕಾಂಶಗಳಿಂದ ಕೂಡಿದೆ. ಹೇರಳೆಕಾಯಿಯ ರಸವು ಪಿತ್ತಶಮನಕ್ಕೆ ದಿವ್ಯ ಔಶದಿ. ಅಜೀರ್ಣತೆಗೂ, ಹೊಟ್ಟೆ ನೋವಿಗೂ ಇದು ಉಪಯೋಗಕಾರಿಯಾಗಿದೆ. ಅದಿಕ ರಕ್ತದೊತ್ತಡದ ತಡೆಗೆ, ಕರುಳು ಸಂಬಂದಿ ರೋಗಗಳ ನಿವಾರಣೆಗೆ ಇದು ಉಪಯುಕ್ತವಾಗಿದೆ. ಸುಗಂದ ದ್ರವ್ಯಗಳ ತಯಾರಿಕೆಯಲ್ಲಿಯೂ ಇದರ ಬಳಕೆ ಉಂಟು. ಹೇರಳೆಕಾಯಿ ಗಿಡದ ಎಲೆಗಳಲ್ಲಿ ಮೊಡವೆ, ಅಲರ್ಜಿಯಂತಹ ಹಲವು ಬಗೆಯ ಚರ್ಮವ್ಯಾದಿಗಳನ್ನು ಗುಣಪಡಿಸುವ ಶಕ್ತಿಯಿದೆ. ದೇಹವನ್ನು ತಂಪಾಗಿಸುವ ಗುಣ ಹೇರಳೆಕಾಯಿಯಲ್ಲಿದೆ.
(ಚಿತ್ರಸೆಲೆ: gourmetgarden.in )
ಇತ್ತೀಚಿನ ಅನಿಸಿಕೆಗಳು