ನಿರ‍್ಮಲಾ ಉತ್ತಯ್ಯ ಪೊನ್ನಪ್ಪ – ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ
1969 ರಲ್ಲಿ 100 ಮೀಟರ್ ಗಳ ನ್ಯಾಶನಲ್ ಓಟದ ಪೋಟಿಯನ್ನು ಗೆದ್ದು, ತಮ್ಮ ಹದಿನಾರನೆ ವಯಸ್ಸಿಗೇ ಬಾರತದ ಅತ್ಯಂತ ವೇಗದ ಓಟಗಾರ‍್ತಿ ಎಂಬ ಹೆಗ್ಗಳಿಕೆಯೊಂದಿಗೆ ‘ಸ್ಪ್ರಿಂಟ್ ಕ್ವೀನ್ ಆಪ್ ಇಂಡಿಯಾ’ ಹಾಗೂ ‘ಗೋಲ್ಡನ್ ಗರ‍್ಲ್ ಆಪ್ ಇಂಡಿಯನ್ ಅತ್ಲೆಟಿಕ್ಸ್’ ಎಂಬ ಬಿರುದುಗಳನ್ನು ಪಡೆದವರೇ ಕರ‍್ನಾಟಕದ ನಿರ‍್ಮಲಾ ಉತ್ತಯ್ಯ ಪೊನ್ನಪ್ಪ. ಅವರು ಸತತ ನಾಲ್ಕು ವರುಶಗಳ ಕಾಲ ನ್ಯಾಶನಲ್ ಪೋಟಿ ಗೆದ್ದದ್ದು ಬಾರತದ ಅತ್ಲೆಟಿಕ್ಸ್ ಇತಿಹಾಸದಲ್ಲಿ ಇಂದಿಗೂ ಮುರಿಯದ ದಾಕಲೆಯೇ!
ಹುಟ್ಟು- ಎಳೆವೆಯ ಬದುಕು
1953 ರಲ್ಲಿ ಕರ‍್ನಾಟಕದ ಕೊಡಗಿನಲ್ಲಿ ಹುಟ್ಟಿದ ನಿರ‍್ಮಲಾ ಎಳವೆಯಿಂದಲೇ ಆಟೋಟಗಳ ಬಗ್ಗೆ ವಿಶೇಶ ಒಲವು ಹೊಂದಿದ್ದರು. ಅವರ ತಂದೆ ಸೇನೆಯಲ್ಲಿದ್ದುದ್ದರಿಂದ ಶಿಸ್ತು ಹಾಗೂ ದೈಹಿಕ ಕಸರತ್ತು ಬಹುಬೇಗ ಪುಟ್ಟ ನಿರ‍್ಮಲಾರಿಗೂ ಕರಗತವಾಯಿತು. ಜೊತೆಗೆ ಆಟೋಟಗಳ ಬಗ್ಗೆಯೂ ವಿಶೇಶ ಪ್ರೋತ್ಸಾಹ ತಂದೆಯವರಿಂದ ದೊರೆಯಿತು. ಬೆಂಗಳೂರಿನ ಸೇಕ್ರೆಡ್ ಗರ‍್ಲ್ಸ್ ಹೈಸ್ಕೂಲ್ ನಲ್ಲಿ ಕಲಿಯುತ್ತಿರುವಾಗಲೇ ಶಾಲೆಯ ವಾರ‍್ಶಿಕ ಆಟೋಟಗಳಲ್ಲಿ ನಿರ‍್ಮಲಾ ಪ್ರಾಬಲ್ಯ ಮೆರೆದು, ಸತತವಾಗಿ ಪ್ರಶಸ್ತಿ ಗೆದ್ದು ತಮ್ಮ ಪ್ರತಿಬೆಯಿಂದ ಗಮನ ಸೆಳೆದರು. ಬೆಂಗಳೂರು ಸ್ಕೂಲ್ಸ್ ಅತ್ಲೆಟಿಕ್ಸ್ ಅಸೋಸಿಯೇಶನ್ (BSAA) ಪೋಟಿಗಳಲ್ಲಿ ಸತತವಾಗಿ ಎಲ್ಲಾ ದಾಕಲೆಗಳನ್ನು ತಮ್ಮದಾಗಿಸಿಕೊಂಡು, ಯಶಸ್ಸಿನ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು. ಓಟದ ಸ್ಪರ‍್ದೆಯ ಜೊತೆಗೆ ತಮ್ಮ ಶಾಲೆಯ ಹಾಕಿ ಮತ್ತು ಬಾಸ್ಕೆಟ್ ಬಾಲ್ ತಂಡಗಳಲ್ಲೂ ನಿರ‍್ಮಲಾ ಪ್ರಮುಕ ಆಟಗಾರ‍್ತಿಯಾಗಿ ಕೊಡುಗೆ ನೀಡಿದರು. 1969 ರಲ್ಲಿ ಪಂಜಾಬಿನ ಜಲಂದರ್ ನಲ್ಲಿ ನಡೆದ ಅಂತರ್ ರಾಜ್ಯ ಪೋಟಿಗಳಲ್ಲಿ ಅವರು ಹುಡುಗಿಯರ 100 ಮೀ ಮತ್ತು 200 ಮೀ ಓಟಗಳಲ್ಲಿ ಬಂಗಾರದ ಪದಕ ಗೆದ್ದರೆ, ಅದೇ ಪಂದ್ಯಾವಳಿಯ ಮಹಿಳೆಯರ 200 ಮೀ ಓಟದಲ್ಲಿ ಬಂಗಾರ ಮತ್ತು ಮಹಿಳೆಯರ 100 ಮೀ ಓಟದಲ್ಲಿ ಕಂಚು ಗೆದ್ದು ವಿಶೇಶ ದಾಕಲೆ ನಿರ‍್ಮಿಸಿದರು. 16 ರ ಹರೆಯದಲ್ಲೇ ಕಿರಿಯರ ಹಾಗೂ ಹಿರಿಯರ ಪೋಟಿಗಳೆರೆಡರಲ್ಲೂ ಕಣಕ್ಕಿಳಿದು ಸೈ ಎನಿಸಿಕೊಂಡ ನಿರ‍್ಮಲಾ ದೇಶದೆಲ್ಲೆಡೆ ಮನೆಮಾತಾದರು. ಬಳಿಕ ಅದೇ ವರ‍್ಶದ ಅಕ್ಟೋಬರ್ ನಲ್ಲಿ ಮೈಸೂರಿನಲ್ಲಿ ನಡೆದ ಇಂಡಿಯನ್ ಅತ್ಲೆಟಿಕ್ ಮೀಟ್ ನಲ್ಲಿ 200 ಮೀ ಓಟದಲ್ಲಿ ಮತ್ತೊಂದು ಬಂಗಾರದ ಪದಕವನ್ನುಅವರು ಮುಡಿಗೇರಿಸಿಕೊಂಡರು. ಇದರ ಬೆನ್ನಲೇ ಬೆಂಗಳೂರಿನಲ್ಲಿ ನಡೆದ 42 ನೇ ಅತ್ಲೆಟಿಕ್ ಮೀಟ್ ನಲ್ಲೂ 100 ಮೀ ಓಟದಲ್ಲಿ ಬಂಗಾರದ ಪದಕ ಗೆದ್ದು ಬೀಗಿದರು.
ಗೆಲುವಿನ ನಾಗಾಲೋಟ
ಶಾಲಾ ಶಿಕ್ಶಣದ ನಂತರ ನಿರ‍್ಮಲಾ ಬೆಂಗಳೂರಿನ ಪ್ರತಿಶ್ಟಿತ ಮೌಂಟ್ ಕಾರ‍್ಮಲ್ ಕಾಲೇಜ್ ನಲ್ಲಿ ತಮ್ಮ ಓದನ್ನು ಮುಂದುವರೆಸುವುದರ ಜೊತೆಗೆ, ವ್ರುತ್ತಿಪರ ಆಟಗಾರ‍್ತಿಯಾಗುವತ್ತ ದಾಪುಗಾಲಿಟ್ಟರು. ತಮ್ಮ ಕಾಲೇಜಿನ ವಾರ‍್ಶಿಕ ಪೋಟಿಗಳಲ್ಲಿ ಸತತವಾಗಿ ಜಯಬೇರಿ ಬಾರಿಸಿ, ಅಂತರ್ ಕಾಲೇಜು ಹಾಗೂ ಬಾರತದ ಅಂತರ್ ವಿಶ್ವವಿದ್ಯಾಲಯ ಪೋಟಿಗಳಲ್ಲಿ ಮಿಂಚಿನ ವೇಗದಲ್ಲಿ ಓಡಿ ಎಲ್ಲಾ ಬಗೆಯ ದಾಕಲೆಗಳನ್ನು ಮುರಿದು ಅತ್ಯಂತ ವೇಗದ ಓಟಗಾರ‍್ತಿಯಾಗಿ ಇತಿಹಾಸದ ಪುಟ ಸೇರಿದರು. ಆ ಹೊತ್ತಿಗಾಗಲೇ ರಾಜ್ಯ ಮತ್ತು ರಾಶ್ಟ್ರ ಮಟ್ಟದಲ್ಲಿ ಸೋಲರಿಯದ ಗಟ್ಟಿಗಿತ್ತಿಯಾಗಿ ಚಾಪು ಮೂಡಿಸಿದ್ದ ನಿರ‍್ಮಲಾ, ಒಡಿಶಾದ ಕಟಕ್ ನಲ್ಲಿ ನಡೆದ ವಿಶ್ವವಿದ್ಯಾಲಯಗಳ ಪೋಟಿಯಲ್ಲಿ 100, 200 ಹಾಗೂ 400 ಮೀ ಓಟಗಳಲ್ಲಿ ಬಂಗಾರದ ಪದಕ ಗೆದ್ದರು. ಆ ನಂತರದ ನ್ಯಾಶನಲ್ ಗೇಮ್ಸ್ ನಲ್ಲಿ ಮತ್ತು ಮೈಸೂರಿನಲ್ಲಿ ಜರುಗಿದ ಆಲ್ ಇಂಡಿಯಾ ಅತ್ಲೆಟಿಕ್ ಮೀಟ್ ನಲ್ಲಿ ಓಟದ ಎಲ್ಲಾ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡು ಅತ್ಲೆಟಿಕ್ಸ್ ನ ಅನಬಿಶಕ್ತ ಅರಸಿಯಾಗಿ ಮೆರೆದರು. ಬಳಿಕ 1971 ರ ಅಂತರ್ ವಿಶ್ವವಿದ್ಯಾಲಯ ಪೋಟಿ ಮತ್ತು ಅಂತರ್ ರಾಜ್ಯ ಪೋಟಿಗಳಲ್ಲಿಯೂ ತಮ್ಮದೇ ಹಳೇ ದಾಕಲೆಗಳನ್ನೇ ಉತ್ತಮಗೊಳಿಸುತ್ತಾ ಪದಕಗಳ ಬೇಟೆ ಮುಂದುವರೆಸಿದರು. ನಂತರ 1972 ರಲ್ಲಿ ಕೇರಳದ ಕೊಟ್ಟಾಯಮ್ ನಲ್ಲಿ ನಡೆದ ಅಂತರ್ ರಾಜ್ಯ ಪೋಟಿಯಲ್ಲಿ 100, 200, 400 ಮೀ ಮತ್ತು 4*100 ರಿಲೇ ಓಟಗಳಲ್ಲಿ ಒಟ್ಟು 4 ಬಂಗಾರದ ಪದಕ ಗೆದ್ದು, ಈ ಅಪರೂಪದ ದಾಕಲೆ ಮಾಡಿದ ಬಾರತದ ಮೊದಲ ಓಟಗಾರ‍್ತಿ ಎಂಬ ಹಿರಿಮೆಗೆ ಪಾತ್ರರಾದರು. ಹಾಗೂ ಕೇವಲ 12.2 ಸೆಕೆಂಡುಗಳ ಮಿಂಚಿನ ವೇಗದಲ್ಲಿ 100 ಮೀ ಓಟ ಪೂರೈಸಿ ಹೊಸ ದಾಕಲೆ ಬರೆದರು. ಕೊಟ್ಟಾಯಮ್ ನ ಈ ಪೋಟಿಗೂ ಮುನ್ನ ಅಲ್ಲಿನ ಸ್ತಳೀಯ ಓಟಗಾರ‍್ತಿ ಒಬ್ಬರು ಗೆಲ್ಲುವ ನೆಚ್ಚಿನ ಪಟು ಹಾಗೂ ಅವರಿಗೆ ಸರಿಸಾಟಿ ಯಾರಿಲ್ಲ ಎಂದು ಅಲ್ಲಿನ ಸ್ತಳೀಯ ಪತ್ರಿಕೆಗಳು ಬಣ್ಣಿಸಿರುತ್ತವೆ. ಆದರೆ ಕರ‍್ನಾಟಕದ ನಿರ‍್ಮಲಾ ಯಾವುದೇ ಒತ್ತಡಕ್ಕೆ ಒಳಗಾಗದೆ, ತನ್ನಂಬಿಕೆಯಿಂದ ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ, ನಿರಾಯಾಸವಾಗಿ ಅವರನ್ನು ಮಣಿಸಿ ಬಂಗಾರದ ಪದಕವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತಾರೆ. ಅಲ್ಲಿಂದ ಪೋಟಿಯಿಂದ ಪೋಟಿಗೆ ತಮ್ಮ ಆಟದಲ್ಲಿ ಅವರು ಪಕ್ವವಾಗುತ್ತಾ ಹೋಗುತ್ತಾರೆ. ಅಂತರಾಶ್ಟ್ರೀಯ ಪೋಟಿಗಳಿಗೆ ಸಜ್ಜಾಗಿದ್ದ ನಿರ‍್ಮಲಾ ಇಟಲಿಯ ಟುರಿನ್ ನಲ್ಲಿ ನಡೆಯಲಿದ್ದ ವರ‍್ಲ್ಡ್ ಗೇಮ್ಸ್ ನಲ್ಲಿ ಸ್ಪರ‍್ದಿಸಲು ಅರ‍್ಹತಾ ಸುತ್ತಲ್ಲಿ ಗೆದ್ದು ಬಾರತವನ್ನು ಪ್ರತಿನಿದಿಸಲು ಆಯ್ಕೆಯಾದರೂ, ಆ ಬಳಿಕ 16 ರ ಪ್ರಾಯದ ಅವರನ್ನು ವಯಸ್ಸಿನ ನೆಪವೊಡ್ಡಿ ಪ್ರವೇಶ ನಿರಾಕರಿಸಲಾಗುತ್ತದೆ. ಮತ್ತೊಮ್ಮೆ ಶ್ರೀಲಂಕಾದಲ್ಲಿ ನಡೆಯಲಿದ್ದಅಂತರಾಶ್ಟ್ರೀಯ ಮೀಟ್ ಗೆ ನಿರ‍್ಮಲಾ ಬಾರತ ತಂಡದ ಮುಂದಾಳಾಗಿ ಆಯ್ಕೆಯಾಗಿದ್ದಾಗ, ಅಲ್ಲಿನ ರಾಜಕೀಯ ಬೆಳವಣಿಗೆಗಳಿಂದ ಪಂದ್ಯಾವಳಿಯೇ ರದ್ದಾಗುತ್ತದೆ. ಹೀಗೇ ತಮ್ಮ ವ್ರುತ್ತಿ ಬದುಕಿನ ಉತ್ತುಂಗದಲ್ಲಿರುವಾಗ ಎರಡು ಬಾರಿ ಅಂತರಾಶ್ಟ್ರೀಯ ಪೋಟಿಗಳಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಕೂದಲೆಳೆಯಲ್ಲಿ ಕಳೆದುಕೊಂಡ ನಿರ‍್ಮಲಾರಿಗೆ ಮತ್ತೆಂದೂ ಅಂತರಾಶ್ಟ್ರೀಯ ಪಟುವಾಗಲು ಅವಕಾಶ ಸಿಗದೇ ಇದ್ದದ್ದು ಬಾರತದ ಅತ್ಲೆಟಿಕ್ಸ್ ಇತಿಹಾಸದ ದೊಡ್ಡ ದುರಂತ ಎಂದೇ ಹೇಳಬೇಕು.
ದಿಡೀರ್ ನಿವ್ರುತ್ತಿ
1973 ರ ದುರ‍್ಗಾಪುರ್ ನ್ಯಾಶನಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ನಿರ‍್ಮಲಾ ಕೇವಲ 20 ನೇ ವಯಸ್ಸಿಗೆ ಅತ್ಲೆಟಿಕ್ಸ್ ನಿಂದ ದೂರ ಸರಿಯುತ್ತಾರೆ. ಅವರ ದಿಡೀರ್ ನಿವ್ರುತ್ತಿ ಅವರ ಮೇಲೆ ಅಪಾರ ಬರವಸೆಯನ್ನು ಇಟ್ಟುಕೊಂಡಿದ್ದಅಬಿಮಾನಿಗಳಿಗೆ ಹಾಗೂ ಮಾಜಿ ಅತ್ಲೀಟ್ ಗಳಿಗೆ ಅಚ್ಚರಿ ಹಾಗೂ ನಿರಾಸೆಯನ್ನು ಒಟ್ಟಿಗೆ ಉಂಟು ಮಾಡಿದ್ದು ಸುಳ್ಳಲ್ಲ. ಮುಂದೆ ನಿರ‍್ಮಲಾ ಅವರು ಅಂತರಾಶ್ಟ್ರೀಯ ಅತ್ಲೀಟ್ ಪಿ.ಸಿ. ಪೊನ್ನಪ್ಪರನ್ನು ಮದುವೆ ಆಗಿ ಜೆಮ್ಶೆಡ್ಪುರ್ ನಲ್ಲಿ ನೆಲೆಸುತ್ತಾರೆ. ತಮ್ಮ ಬದುಕಲ್ಲಿ ಶಿಸ್ತನ್ನು ಕಲಿಸಿದ ಅವರ ತಂದೆಯವರಿಗೂ ಮತ್ತು ಓಟದ ಪಟ್ಟುಗಳನ್ನು ಕಲಿಸಿ ತಮ್ಮನ್ನು ಎಳವೆಯಿಂದ ತಿದ್ದಿತೀಡಿದ ಕೋಚ್ ಸೋಮಶೇಕರಪ್ಪರಿಗೂ ತಾವು ಸದಾ ಚಿರರುಣಿ ಎಂದು ನಿರ‍್ಮಲಾ ಅವರು ಈಗಲೂ ನೆನೆಯುತ್ತಾರೆ. ತಮ್ಮ ವ್ರುತ್ತಿ ಬದುಕಿನಲ್ಲಿ ಎಂದೂ ಅಬ್ಯಾಸವನ್ನು ತಪ್ಪಿಸದೇ ಪ್ರತೀ ದಿನ ಸೈಕ್ಲಿಂಗ್, ಜಿಮ್ ಹೀಗೇ ಓಟಗಾರರಿಗೆ ಅಗತ್ಯವಿರುವ ಎಲ್ಲಾ ಬಗೆಯ ಕಸರತ್ತುಗಳನ್ನು ಕರಗತ ಮಾಡಿಸಿದ ಅವರ ಕೋಚ್ ರ ಪಾತ್ರ ಬಹು ದೊಡ್ಡದು. ಆದರೆ ಇನ್ನೂ ಎತ್ತರಕ್ಕೆ ಬೆಳೆಯಬೇಕಿದ್ದ, ಅಂತರಾಶ್ಟ್ರೀಯ ಮಟ್ಟ ತಲುಪುವ ಹೊಸ್ತಿಲಲ್ಲಿ ನಿಂತಿದ್ದ ನಿರ‍್ಮಲಾ ಮಿಂಚಿ ಬೇಗನೆ ಮರೆಯಾಗಿದ್ದು ಮಾತ್ರ ಬಾರತದ ಅತ್ಲೆಟಿಕ್ಸ್ ಗೆ ಆದ ದೊಡ್ಡ ನಶ್ಟವೇ ಸರಿ.
ಪ್ರಶಸ್ತಿ ಪುರಸ್ಕಾರಗಳು
ಕರ‍್ನಾಟಕಕ್ಕೆ ಅಪಾರ ಪದಕಗಳನ್ನು ಗೆದ್ದು, ನಾಡಿನಲ್ಲಿ ಅತ್ಲೆಟಿಕ್ಸ್ ಬೆಳವಣಿಗೆಗೆ 60/70 ರ ದಶಕದಲ್ಲಿ ಮುನ್ನುಡಿ ಬರೆದ ನಿರ‍್ಮಲಾರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ.. ಕರ‍್ನಾಟಕ ಸರ‍್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ದಸರಾ ಪ್ರಶಸ್ತಿಯೊಂದಿಗೆ ಈ.ಎಲ್. ಸೋಂದಿ ಪುರಸ್ಕಾರಕ್ಕೆ ಕೂಡ ಅವರು ಪಾತ್ರರಾದರು.
ನಿರ‍್ಮಲಾ ಅವರು ಈಗ ಕೊಡಗಿನಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ. ತಮ್ಮ ಮಕ್ಕಳಿಗೂ ಆಟೋಟಗಳ ಬಗ್ಗೆ ಪ್ರೋತ್ಸಾಹ ನೀಡಿದ್ದರ ಪಲವಾಗಿ ಅವರ ಮಗಳು ಆರತಿ ಟೆನ್ನಿಸ್ ನಲ್ಲಿ ರಾಶ್ಟ್ರೀಯ ಚಾಂಪಿಯನ್ ಆದರೆ ಅವರ ಮಗ ಚೆಂಗಪ್ಪ ಕೂಡ ರಾಜ್ಯ ಮಟ್ಟದ ಟೆನ್ನಿಸ್ ಆಟಗಾರ ಆಗಿದ್ದು ವಿಶೇಶ. ಸದ್ಯದ ಅತ್ಲೀಟ್ ಗಳ ಪ್ರತಿಬೆಯನ್ನು ಕೊಂಡಾಡುವ ನಿರ‍್ಮಲಾ, ಬಾರತದ ಅತ್ಲೆಟಿಕ್ಸ್ ಬವಿಶ್ಯದ ಬಗ್ಗೆ ಸಾಕಶ್ಟು ಬರವಸೆ ಇಟ್ಟುಕೊಂಡಿದ್ದಾರೆ. ಈಗ ಸುದಾರಿಸಿರುವ ಕೋಚಿಂಗ್ ವಿದಾನ, ಅಬ್ಯಾಸ ಮಾದರಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಕಡಿಮೆ ಪ್ರಾಯದಲ್ಲೇ ತಮ್ಮ ಅಗಾದ ಪ್ರತಿಬೆ ಹಾಗೂ ಪರಿಶ್ರಮದಿಂದ ಸಾಕಶ್ಟು ಸಾದನೆ ಮಾಡಿ ನಾಡಿಗೆ ಹೆಮ್ಮೆ ತಂದ ನಿರ‍್ಮಾಲಾರ ಕೊಡುಗೆಯನ್ನು ನಾವೆಂದಿಗೂ ಮರೆಯದಿರೋಣ. ಮುಂದೆಯೂ, ಅವರಂತ ಹಲವಾರು ಅತ್ಲೀಟ್ ಗಳು ಕರ‍್ನಾಟಕದಿಂದ ಹೊರಹೊಮ್ಮಲಿ ಎಂದು ಆಶಿಸೋಣ.
(ಚಿತ್ರ ಸೆಲೆ: ಸ್ಪೋರ‍್ಟ್ಸ್ ಲೆಜೆಂಟ್ಸ್ ಆಪ್ ಬೆಂಗಳೂರು, ಹೊತ್ತಗೆಯಿಂದ )
ಇತ್ತೀಚಿನ ಅನಿಸಿಕೆಗಳು