ಕವಿತೆ: ಹೂದೋಟದ ಹೂವು

ಶ್ಯಾಮಲಶ್ರೀ.ಕೆ.ಎಸ್.

ಹೂದೋಟದ ಹೂ ನೀನು
ಬಗೆ ಬಗೆಯ ಹೂವಾಗಿ ಅರಳಿ ನಿಂತಿರುವೆ
ಬಿನ್ನ ಬಿನ್ನ ಬಣ್ಣಗಳಲ್ಲಿ ಮಿಂದೆದ್ದು ನೀ
ಪರಿ ಪರಿಯ ಪರಿಮಳವ ಸೂಸುತಲಿರುವೆ

ಸೊಂಪು ಕಂಪಿನ ಕೆಂಡಸಂಪಿಗೆಯೇ ನೀ
ಹಾದಿ ಹಾದಿಗೂ ಸುವಾಸನೆಯ ಎರೆವೆ
ಗಮ ಗಮಿಸುವ ಮುದ್ದು ಮಲ್ಲಿಗೆಯೇ ನೀ
ಹಸಿರೆಲೆಗಳ ನಡುವೆ ಮಿರುಗುತಾ ಮುದ್ದುಗರೆವೆ

ಚುಚ್ಚುವ ಮುಳ್ಳುಗಳ ನಡುವೆ ಇರುವ ಚೆಂಗುಲಾಬಿಯೇ
ನೀ ಮುಗುಳು ನಗೆಯ ಬೀರುತಲಿರುವೆ
ಹೂಬನಕ್ಕೆ ಕಳೆ ತರುವ ಕನಕಾಂಬರಿಯೇ
ನೀ ಅಂಗನೆಯರ ಮುಡಿಯಲಿ ಕಂಗೊಳಿಸುತಲಿರುವೆ

ಸೊಗಸು ಒನಪಿನ ಸೇವಂತಿಯೇ
ನೀ ಹೂವಿನ ಸಂತೆಯಲಿ ಸೋಜಿಗವ ತೋರುತಲಿರುವೆ
ಹೂವನದ ಸಾಲಲಿ ನಿಂತ ಸೂರ‍್ಯಕಾಂತಿಯೇ
ನೀ ನೇಸರನ ಕಿರಣಗಳ ಸ್ಪರ‍್ಶಕೆ ಸೋತು
ಅರಳುತಲಿರುವೆ

ಬದಿಯಲಿ ನಿಂದು ಬೀಗುವ ದಾಸವಾಳವೇ
ನೀ ಅತಿತಿಗಳ ಆಹ್ವಾನಿಸುತಲಿರುವೆ
ಸುಗಂದವ ಒಸರುವ ಸುಗಂದರಾಜನೇ
ನೀ ಹರನ ಪೂಜೆಗೆ ಅರ‍್ಪಿತವಾಗಲಿರುವೆ.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: