ಅಂಬಿಗರ ಚೌಡಯ್ಯನ ವಚನ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.

ಓದಿಹೆನೆಂಬ ಒಡಲು
ಕಂಡೆಹೆನೆಂಬ ಭ್ರಾಂತು
ಸರ್ವರಿಗೆ ಹೇಳಿಹೆನೆಂಬ ತೇಜಸ್ಸು
ಇಂತಿವೆಲ್ಲವು ಇದಿರಿಗೆ ಹೇಳೆ
ತನ್ನ ಉದರದ ಕಕ್ಕುಲತೆಯಲ್ಲದೆ
ಆತ ಅರಿವಿಂಗೆ ಒಡಲಲ್ಲ
ಎಂದನಂಬಿಗ ಚೌಡಯ್ಯ

“ನಾನು ಎಲ್ಲವನ್ನೂ ಚೆನ್ನಾಗಿ ಓದಿದ್ದೇನೆ; ಲೋಕದ ಆಗುಹೋಗುಗಳನ್ನು ಕಂಡಿದ್ದೇನೆ; ಎಲ್ಲರಿಗೂ ತಿಳಿಯಹೇಳಬಲ್ಲ ಕಸುವನ್ನು ಹೊಂದಿದ್ದೇನೆ.” ಎಂದು ತನ್ನನ್ನು ತಾನೇ ಹಾಡಿಹೊಗಳಿಕೊಳ್ಳುವ ವ್ಯಕ್ತಿಯು ಎಂದೆಂದಿಗೂ ಒಳ್ಳೆಯ ನಡೆನುಡಿಗಳಿಂದ ಕೂಡಿದ ವ್ಯಕ್ತಿಯಾಗಿರುವುದಿಲ್ಲ. ಏಕೆಂದರೆ ತಾನು ಪಡೆದುಕೊಂಡ ಅಕ್ಕರದ ವಿದ್ಯೆಯಿಂದ ಸುಂದರವಾಗಿ ಮಾತನಾಡುವುದನ್ನು ಕಲಿತುಕೊಂಡು ಜನರನ್ನು ವಂಚಿಸುವ ಕಲೆಯಲ್ಲಿ ಪರಿಣತನಾಗಿ ತನ್ನ ಹೊಟ್ಟೆಯ ಪಾಡನ್ನು ನೀಗಿಕೊಳ್ಳುತ್ತಾನೆಯೇ ಹೊರತು ಎಂದೆಂದಿಗೂ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದಿಲ್ಲ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

‘ಒಳ್ಳೆಯ ನಡೆನುಡಿ’ ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸವು ಆತನಿಗೆ ಮತ್ತು ಆತನ ಕುಟುಂಬಕ್ಕೆ ಒಲವು, ನಲಿವು ಮತ್ತು ನೆಮ್ಮದಿಯನ್ನು ಉಂಟುಮಾಡುವಂತೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಿರಬೇಕು.

ಓದು+ಇಹೆನ್+ಎಂಬ; ಓದು=ಲಿಪಿರೂಪದಲ್ಲಿರುವ ವಿದ್ಯೆಯನ್ನು ನೋಡಿ ಕಲಿಯುವುದು; ಇಹೆನ್=ಇರುವೆನು; ಎಂಬ=ಎನ್ನುವ; ಒಡಲು=ದೇಹ; ಓದಿಹೆನೆಂಬ ಒಡಲು=ನಾನು ಚೆನ್ನಾಗಿ ಓದಿದ್ದೇನೆ ಎಂದು ಅಹಂಕಾರ ಪಡುವ ವ್ಯಕ್ತಿ;

ಕಂಡು+ಎಹೆನ್+ಎಂಬ; ಕಂಡು=ಲೋಕದಲ್ಲಿನ ನಿಸರ‍್ಗ ಮತ್ತು ಮಾನವ ಸಮುದಾಯದ ಸಂಗತಿಗಳನ್ನು ನೋಡಿ; ಎಹೆನ್=ಇರುವೆನು; ಭ್ರಾಂತು=ಇರುವುದನ್ನು ಇಲ್ಲವೆಂದು, ಇಲ್ಲದ್ದನ್ನು ಇದೆಯೆಂದು ತಿಳಿದುಕೊಂಡಿರುವುದು; ಕಂಡೆಹೆನೆಂಬ ಭ್ರಾಂತು=ಲೋಕದಲ್ಲಿನ ಎಲ್ಲವನ್ನು ನಾನು ನೋಡಿ ತಿಳಿದುಕೊಂಡಿದ್ದೇನೆ ಎನ್ನುವುದು ಒಂದು ತಪ್ಪು ಗ್ರಹಿಕೆಯೇ ಹೊರತು, ವಾಸ್ತವವಲ್ಲ. ಏಕೆಂದರೆ ಯಾವುದೇ ಒಬ್ಬ ವ್ಯಕ್ತಿಯು ಲೋಕದಲ್ಲಿನ ಎಲ್ಲ ಸಂಗತಿಗಳನ್ನು ತಿಳಿಯಲಾಗುವುದಿಲ್ಲ;

ಸರ್ವರಿಗೆ=ಎಲ್ಲರಿಗೆ; ಹೇಳಿ+ಇಹೆನ್+ಎಂಬ; ತೇಜಸ್ಸು=ಶಕ್ತಿ/ಹೆಚ್ಚುಗಾರಿಕೆ/ದೊಡ್ಡಸ್ತಿಕೆ; ಸರ್ವರಿಗೆ ಹೇಳಿಹೆನೆಂಬ ತೇಜಸ್ಸು=ಎಲ್ಲರಿಗೂ ಉಪದೇಶ ಮಾಡಬಲ್ಲನೆಂಬ ದೊಡ್ಡಸ್ತಿಕೆ ;

ಇಂತು+ಇವು+ಎಲ್ಲವು; ಇಂತು=ಈ ರೀತಿ; ಇದಿರಿಗೆ=ಬೇರೆಯವರಿಗೆ; ಹೇಳೆ=ಉಪದೇಶಮಾಡುವುದು; ತನ್ನ=ಅವನ; ಉದರ=ಹೊಟ್ಟೆ; ಕಕ್ಕುಲತೆ+ಅಲ್ಲದೆ; ಕಕ್ಕುಲತೆ=ಚಿಂತೆ/ಕಳವಳ; ಅಲ್ಲದೆ=ಹೊರತು; ಅರಿವು=ತಿಳುವಳಿಕೆ; ಒಡಲ್+ಅಲ್ಲ;

ಆತ ಅರಿವಿಂಗೆ ಒಡಲಲ್ಲ=ಅವನು ಒಳ್ಳೆಯ ಅರಿವನ್ನು ಪಡೆದ ವ್ಯಕ್ತಿಯಲ್ಲ. ಏಕೆಂದರೆ ಒಳ್ಳೆಯ ಅರಿವನ್ನು ಹೊಂದಿದ್ದರೆ ಆತ ಮೊದಲು ತಾನು ಆಡುವ ಮಾತು ಮತ್ತು ತಾನು ಮಾಡುವ ಕಾಯಕದಿಂದ ತನ್ನ ಜೀವನವನ್ನು ಮೊದಲು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಂಡು, ಅದರ ಜತೆಜತೆಗೆ ಸಹಮಾನವರ ಮತ್ತು ಸಮಾಜಕ್ಕೆ ಒಳಿತನ್ನು ಮಾಡುತ್ತಿದ್ದ. ಆದರೆ ದಿನಬೆಳಗಾದರೆ ಯಾವೊಂದು ದುಡಿಮೆಯನ್ನು ಮಾಡದೆ ಜನರಿಗೆ ಕೇವಲ ಉಪದೇಶ ಮಾಡುವ ವ್ಯಕ್ತಿಯು ತನ್ನ ಹೊಟ್ಟೆಯ ಪಾಡನ್ನು ನೀಗಿಸಿಕೊಳ್ಳುತ್ತಾನೆಯೇ ಹೊರತು, ಆತ ಸಮಾಜಕ್ಕೆ ಯಾವ ರೀತಿಯಿಂದಲೂ ಉಪಯುಕ್ತ ವ್ಯಕ್ತಿಯಾಗಿರುವುದಿಲ್ಲ; ಎಂದನ್+ಅಂಬಿಗ; ಅಂಬಿಗ=ದೋಣಿಯನ್ನು ನಡೆಸುವ ಕಸುಬನ್ನು ಮಾಡುವವನು;

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: