ಕವಿತೆ: ಮುಂಗಾರು ಮಳೆ

– .

ಸಾಬೂನು ನೀರಿನ
ಗುಳ್ಳೆಯಂತೆ ಮೋಡಗಳು
ತೇಲುತ್ತ ನಬವೆಲ್ಲ ತುಂಬಿ
ತೊನೆ ತೊನೆದು ಉಬ್ಬಳಿಸಿ
ಉಗುಳುಗುಳಿ ಉದುರುತ್ತಿರುವ
ಮುಂಗಾರು ತುಂತುರಿಗೆ
ಮುಕವೊಡ್ಡಿ ಸೊಗಸಾಗುವಾಸೆ!

ಹದವಾಗಿ ತಣಿದು ಕೊರೆವ
ಗಾಳಿಗೆ ಮೈಯೆಲ್ಲ
ಮಂಜುಗಡ್ಡೆಯಾಗಿ ಹನಿದ
ಮುಂಗಾರಿಗೆ ಒದ್ದೆಯಾಗಿ
ಹಿಂಡುವ ಒಳ ತಂಡಿಯ
ಬೆಚ್ಚಗಾಗಿಸಲು
ಮಲೆನಾಡ ಕಡು ಕಾಪಿ
ಹೀರಿದರೆ ಹಿಗ್ಗಿ ಉಯ್ಯಾಲೆಯಲಿ
ಜೀಕಿದಂತಹ ನವೋಲ್ಲಾಸ
ಮೈಯಿಗೆ ಕಾವಾಗಿಸಿ ಬೆಸೆಯುವಾಸೆ!

ಹದ ಮೀರಿ ಮದವೇರಿ
ಮುಂಗಾರು ಹುಯ್ಯಲು
ಹಳ್ಳ ಕೊಳ್ಳ ನದಿಗಳೆಲ್ಲ ಮುನಿದು
ಏರೇರಿ ಮನುಜರ ಮನೆಯಲ್ಲಿ
ಜಾಗ ಪಡೆದು ಪವಡಿಸಿದರೆ
ಕಂಗಾಲಾದ ಮನುಜರು
ಹೋಗುವುದಾದರೂ ಎಲ್ಲಿಗೆ?

ಮಂದಿಯ ಮಬ್ಬಾದ
ಕ್ರುತ್ಯಕ್ಕೆ ಮುಕ ಮುಚ್ಚಿ
ಬೂಮಿ ಬೆತ್ತಲಾಗಿದ್ದಾಳೆ
ಸಾಗರ ಕೊತಕೊತನೆ ಕುದಿದು
ಕೆರಳಿ ಕೆಂಡವಾಗಿದೆ
ವಾಡಿಕೆಯ ಮುಂಗಾರು
ವಚನ ಮೀರಿ ಸುರಿಸಿ
ಇಡಿ ಬೂ ಮಂಡಲವನ್ನೇ
ಆಹುತಿ ಪಡೆಯಲು ಟೊಂಕ
ಕಟ್ಟಿ ನಿಂತಂತೆ

ದೋ ಎಂದು ಸುರಿವ
ಮುಂಗಾರು ಮಳೆಗೆ
ಮನುಜರು ಬೆಚ್ಚುತ್ತಿದ್ದಾರೆ
ಕರಿ ಮೇಗದ ಸ್ಪೋಟದಲ್ಲಿ
ಕರಗಿ ಹೋಗುತ್ತಿದ್ದಾರೆ
ಬದುಕು ಮೂರಾ
ಬಟ್ಟೆಯಾಗುತಿದೆ

(ಚಿತ್ರ ಸೆಲೆ: publictv.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: