ಕವಿತೆ: ನನ್ನಮ್ಮ

– ನಿತಿನ್ ಗೌಡ.

ಅಮ್ಮ ಅಮ್ಮ ನೀ ನನ್ನ ಅಮ್ಮ
ಬಯಸಿ ಬಯಸಿ ನೀ ಪಡೆದೆ ನನ್ನ || ೨||

‌ಕಣ್ಣು ತೆರೆದಾಗ, ನಾ ಜಗವ ಕಂಡೆ
ಆ ಜಗವೆ ನೀನೆಂದು‌ ಕೊನೆಗೆ ಅರಿತೆ

ನಿನ ನಿದ್ದೆಯ ತೊರೆದು ನೀ ಆಡಿಸಿದೆ ನನ್ನ
ನಿನ ಎದೆ ಹಾಲುಣಿಸಿ, ಬೆಳೆಸಿದೆ ನನ್ನ

ನಾ ತೊದಲು ನುಡಿವಾಗ, ನಿನಗೆ ಅದು ಚೆಂದ
ನಿನ ದನಿಯೇ ನನಗಂದು ಸುರಿವ ಮಕರಂದ

ನೀ‌ ಮುನಿಸಿಕೊಂಡಾಗ, ನನ ಲೋಕ‌ ಮಂಕಾಗೆ
ನೀ ಚೆಲುವ ನಗೆ ಬೀರೆ, ಮಂಕು ಮಾಸುವುದು ಹಾಗೆ

ತಾಯೇ…. ನಿನ್ ಉಸಿರ್ ಬಸಿದವಳೇ….
ನಿನ್ನ ಮಡಿಲಲ್ಲೇ ,ನನ ಬೆಳೆಸಿದೆಯಲ್ಲೇ ||೨||

ಇಂದು ನೀ ಹಾಡೋ ಲಾಲಿಗೆ, ನಾ ಮಲಗಬೇಕು
ನಾ ಕೇಳೋ ದನಿ‌, ಅದು ದಿನ ನಿನದಾಗಬೇಕು

ನನ ತುಂಟಾಟ, ಹುಡುಗಾಟ ನೀ ಸಹಿಸಿದೆಯಲ್ಲೇ
ಅದರಲ್ಲೇ ನೆಮ್ಮದಿ ನೀ ಕಂಡೆಯಲ್ಲೇ

ನನ್ ಕನಸ ಹಂದರಕೆ, ನೀನೇನೆ ಒತ್ತಾಸೆ
ಎನ್ ಪ್ರತಿ ಗೆಲುವ ಮೆಟ್ಟಿಲಿಗೆ, ನಿನ ತ್ಯಾಗವೇ ಅಡಿಪಾಯ

ನಮ ಸಾಕು ಬೇಕುಗಳಲ್ಲೇ, ನಿನ ಪ್ರತಿ ದಿನವ ನೀ ಕಳೆದೆ
ಇನ್ನಾದರೂ ಬದುಕು ನೀ, ನಿನಗಾಗೆ ನನ್ನಮ್ಮ

ಜೋಳಿಗೆಯ ತುಂಬಾ ನಿನ ಒಲವ ಸಾಲವಿರಲು
ತೀರಿಸಲಾರೆನು ನಾ ಅದನ ‌ಜನುಮ ಜನುಮದಲು..

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks