ಅಂಬಿಗರ ಚೌಡಯ್ಯನ ವಚನ ಓದು – 4ನೆಯ ಕಂತು

– ಸಿ.ಪಿ.ನಾಗರಾಜ.

ಕುಲ ಹಲವಾದಡೇನು
ಉತ್ತತ್ಯ ಸ್ಥಿತಿ ಲಯ ಒಂದೆ ಭೇದ
ಮಾತಿನ ರಚನೆಯ ಬೇಕಾದಂತೆ ನುಡಿದಡೇನು
ಬಿಡುಮುಡಿಯಲ್ಲಿ ಎರಡನರಿಯಬೇಕು
ಎಂದನಂಬಿಗ ಚೌಡಯ್ಯ.

ನೂರೆಂಟು ಬಗೆಯ ಹೆಸರಿನ ಜಾತಿ ಮತ್ತು ಉಪಜಾತಿಗಳ ಹೆಣಿಗೆಯಿಂದ ಕೂಡಿರುವ ಸಾಮಾಜಿಕ ರಚನೆಯನ್ನು ಅಲ್ಲಗಳೆದು, ಜಗತ್ತಿನಲ್ಲಿ ಹುಟ್ಟಿ ಬೆಳೆದು ಬಾಳಿ ಅಳಿಯುವ ಜನರೆಲ್ಲರೂ ‘ಮಾನವ ಕುಲ’ ಎಂಬ ಒಂದೇ ಜಾತಿಗೆ ಸೇರಿದವರು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಕುಲ=ಜಾತಿ; ಹಲವು+ಆದಡೆ+ಏನು; ಹಲವು=ಬಹಳ/ಅನೇಕ; ಆದಡೆ=ಆದರೆ; ಏನು=ಯಾವುದು; ಕುಲ ಹಲವಾದಡೇನು=ಸಮಾಜದಲ್ಲಿ ಜನರನ್ನು ವಿಂಗಡಿಸಿರುವ ಹಲವು ಬಗೆಯ ಜಾತಿಗಳು ಇದ್ದರೇನು?; ಉತ್ಪತ್ಯ=ಹುಟ್ಟು/ಜನನ; ಸ್ಥಿತಿ=ಇರುವಿಕೆ; ಲಯ=ಸಾವು; ಭೇದ=ರೀತಿ;

ಉತ್ಪತ್ಯ ಸ್ಥಿತಿ ಲಯ ಒಂದೆ ಭೇದ=ಮಾನವ ಜೀವಿಗಳೆಲ್ಲರೂ ಹುಟ್ಟುವ, ಇರುವ ಮತ್ತು ಸಾಯುವ ರೀತಿ ಮಾತ್ರ ಒಂದೇ ಬಗೆಯಲ್ಲಿದೆ. ಮಾನವ ಜೀವಿಗಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಕಾಮದ ನಂಟನ್ನು ಹೊಂದಿದಾಗ ಹೆಣ್ಣಿನ ಬಸಿರಿನಿಂದ ಮಗು ಹುಟ್ಟುತ್ತದೆ. ಹುಟ್ಟಿದ ಮಗು ಬೆಳೆದು ಬಾಳುವಾಗ ಈ ಜಗತ್ತಿನಲ್ಲಿ ಎಲ್ಲರಂತೆಯೇ ಉಸಿರಾಡುತ್ತದೆ; ಉಣ್ಣುತ್ತದೆ; ಉಡುತ್ತದೆ. . ಬಾಲ್ಯ-ಪ್ರಾಯ-ಮುಪ್ಪಿನ ಹಂತಗಳನ್ನು ದಾಟಿ ಕಟ್ಟಕಡೆಗೆ ಹುಟ್ಟಿದ ಮಾನವರೆಲ್ಲರೂ ಸಾವನ್ನಪ್ಪುತ್ತಾರೆ. ಇದುವೇ ಮಾನವ ಜೀವಿಗಳೆಲ್ಲರ ನಿಸರ‍್ಗ ಸಹಜವಾದ ಹುಟ್ಟು-ಬದುಕು-ಸಾವಿನ ರೀತಿ;

ರಚನೆ=ಹೊಸದಾಗಿ ಕಟ್ಟುವುದು/ನಿರ‍್ಮಿಸುವುದು; ಮಾತಿನ ರಚನೆ=ವ್ಯಕ್ತಿಯು ನುಡಿಯ ಮೂಲಕ ವಿಚಾರಗಳನ್ನು ಇಲ್ಲವೇ ಸಂಗತಿಗಳನ್ನು ಬಣ್ಣಿಸಿ ಹೇಳುವುದು; ಬೇಕಾದಂತೆ=ತನ್ನ ಇಚ್ಚೆಗೆ ಬಂದಂತೆ/ತನ್ನ ಮನಸ್ಸಿಗೆ ಹೊಳೆದ ಹಾಗೆ; ನುಡಿದಡೆ+ಏನು; ನುಡಿದಡೆ=ಹೇಳಿದರೆ; ಮಾತಿನ ರಚನೆಯ ಬೇಕಾದಂತೆ ನುಡಿದಡೇನು=ವ್ಯಕ್ತಿಯು ತನ್ನ ಇಚ್ಚೆಗೆ ಬಂದ ರೀತಿಯಲ್ಲಿ ಮಾತನಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ವ್ಯಕ್ತಿಯು ಆಡುವ ನುಡಿ ಇಲ್ಲವೇ ಬರೆಯುವ ಬರಹ ಸಮಾಜದಲ್ಲಿನ ಎಲ್ಲರ ಒಳಿತಿಗೆ ನೆರವಾಗುವಂತೆ ಇರಬೇಕು;

“ಮಾತಿನ ರಚನೆಯ ಬೇಕಾದಂತೆ ನುಡಿದಡೇನು?” ಎಂಬ ಈ ಪ್ರಶ್ನೆಯನ್ನು ವಚನಕಾರನು ಕುಲದ ಬಗ್ಗೆ ಪಾಚೀನ ಕಾಲದಲ್ಲಿ ಸಂಸ್ಕ್ರುತ ನುಡಿಯಲ್ಲಿ ಹೊತ್ತಗೆಗಳನ್ನು ರಚಿಸಿರುವ ವ್ಯಕ್ತಿಗಳಿಗೆ ಹಾಕಿದ್ದಾನೆ. ಅಂಬಿಗರ ಚೌಡಯ್ಯನನ್ನು ಒಳಗೊಂಡಂತೆ ಎಲ್ಲಾ ಶಿವಶರಣಶರಣೆಯರು ಮೇಲು-ಕೀಳಿನ ಜಾತಿ ತಾರತಮ್ಯದಿಂದ ಕೂಡಿರುವ ಸಮಾಜವನ್ನು ತಿರಸ್ಕರಿಸಿ, ಶಿವನನ್ನು ಪೂಜಿಸುವ ಎಲ್ಲ ಶರಣರು ಒಂದೇ ಕುಲಕ್ಕೆ ಸೇರಿದವರು ಎಂಬ ನಿಲುವನ್ನು ತಳೆದಿದ್ದರು.

ಜಾತಿ ತಾರತಮ್ಯ ಇರುವ ಸಮಾಜದಲ್ಲಿ ದುಡಿಯುವ ವರ‍್ಗದ ಜನರು ಬಡತನ, ಸಂಕಟ ಮತ್ತು ಅಪಮಾನದಿಂದ ಹೇಗೆ ನರಳುತ್ತಿದ್ದಾರೆ ಎಂಬುದನ್ನು ತಿಳಿಯಬೇಕಾದರೆ ಇಂಡಿಯಾ ದೇಶದ ಪ್ರಾಚೀನ ಸಮಾಜದ ಚರಿತ್ರೆಯನ್ನು ತಿಳಿಯಬೇಕು. ಸಂಸ್ಕ್ರುತ ನುಡಿಯಲ್ಲಿ ರಚನೆಗೊಂಡಿರುವ ಪ್ರಾಚೀನ ಕಾಲದ ಕೆಲವು ಹೊತ್ತಗೆಗಳಲ್ಲಿ ಇಂಡಿಯಾ ದೇಶದಲ್ಲಿ ಅಂದು ನೆಲೆಸಿದ್ದ ಜನಸಮುದಾಯದ ಸಾಮಾಜಿಕ ರಚನೆಯ ಸ್ವರೂಪವನ್ನು ಮತ್ತು ಜನರು ನಿತ್ಯಜೀವನದಲ್ಲಿ ಮಾಡಬೇಕಾದ ಆಚರಣೆಗಳನ್ನು ಹಾಗೂ ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿರುವ ನುಡಿ ರಚನೆಗಳು ಈ ಕೆಳಕಂಡಂತಿವೆ.

ಇಂಡಿಯಾ ದೇಶದ ಪ್ರಾಚೀನ ಕಾಲದ ಸಾಮಾಜಿಕ ರಚನೆಯಲ್ಲಿ “ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ” ಎಂಬ ನಾಲ್ಕು ವರ‍್ಣಗಳಿದ್ದವು. ಬ್ರಹ್ಮನೆಂಬ ದೇವರ ಮೊಗದಿಂದ ಬ್ರಾಹ್ಮಣ, ತೋಳುಗಳಿಂದ ಕ್ಶತ್ರಿಯ, ತೊಡೆಗಳಿಂದ ವೈಶ್ಯ, ಪಾದಗಳಿಂದ ಶೂದ್ರರು ಹುಟ್ಟಿ ಬಂದಿದ್ದಾರೆ. ವಿದ್ಯೆ, ಸಂಪತ್ತು ಮತ್ತು ರಾಜಕಾರಣದ ಗದ್ದುಗೆಯನ್ನು ಹೊಂದುವುದಕ್ಕೆ ಶೂದ್ರರು ಯೋಗ್ಯರಲ್ಲ. ಪಾದವು ಹೇಗೆ ದೇಹದ ತೂಕವನ್ನು ಹೊರುತ್ತದೆಯೋ ಅಂತೆಯೇ ಶೂದ್ರರು ಇನ್ನುಳಿದ ಮೂರು ವರ‍್ಣದವರ ಸೇವೆಯಲ್ಲಿಯೇ ತಮ್ಮ ಬದುಕನ್ನು ಕಳೆಯಬೇಕು ಎಂಬ ಕಟ್ಟಳೆಯನ್ನು ಗೊತ್ತುಪಡಿಸಲಾಗಿದೆ.

ಪಾಚೀನ ಕಾಲದಲ್ಲಿದ್ದ ಮತ್ತೊಂದು ವರ‍್ಗದ ಜನರನ್ನು ‘ಚಂಡಾಲ’ ರೆಂದು ಹೆಸರಿಸಲಾಗಿದೆ. ಸಾಮಾಜಿಕ ಇತಿಹಾಸದಲ್ಲಿ ಇವರನ್ನು ಪಂಚಮರೆಂದು ಗುರುತಿಸಲಾಗಿದೆ. ಪಂಚಮರನ್ನು ಊರಿನಿಂದ ಹೊರಗಡೆ ಇರಿಸಲಾಗಿತ್ತು. ಕಾಲ ಉರುಳಿದಂತೆಲ್ಲಾ ಈ ನಾಲ್ಕು ವರ‍್ಣಗಳು ಹತ್ತಾರು ನೂರಾರು ಸಾವಿರಾರು ಬಗೆಯ ಕವಲುಗಳಾಗಿ ಮತ್ತೆ ಮತ್ತೆ ಒಡೆದು ಜಾತಿ ಉಪಜಾತಿಗಳಾಗಿ ರೂಪುಗೊಂಡಿವೆ. ಪ್ರತಿಯೊಂದು ಜಾತಿ ಉಪಜಾತಿಗಳು ತಮ್ಮದೇ ಆದ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ಆಚರಿಸುತ್ತಿವೆ. ಇಂತಹ ಜಾತಿ/ವರ‍್ಣ ವಿಂಗಡಣೆಯ ಕಾರಣದಿಂದಾಗಿಯೇ ಸಾವಿರಾರು ವರುಶಗಳಿಂದಲೂ ಸಮಾಜದಲ್ಲಿ ದುಡಿಯುವ ವರ‍್ಗದ ಜನಸಮುದಾಯ ಸಂಕಟದಲ್ಲಿ ನರಳುತ್ತಿದೆ.

ಇದರ ಜತೆಗೆ ಶಾಸ್ತ್ರದಲ್ಲಿ ಹೇಳಿದೆಯೆಂದು ಜನರು ಅನುಸರಿಸುತ್ತಿರುವ ಕಟ್ಟುಪಾಡುಗಳು ಜಾತಿ ಸಮುದಾಯಗಳನ್ನು ಮಾನಸಿಕವಾಗಿ ವಿಂಗಡಿಸಿ “ನಮ್ಮ ಜಾತಿ ಮತ್ತೊಂದು ಜಾತಿಗಿಂತ ಮೇಲು” ಎಂಬ ಮೇಲರಿಮೆಯನ್ನು ಮತ್ತು “ನಮ್ಮ ಜಾತಿ ಮತ್ತೊಂದು ಜಾತಿಗಿಂತ ಕೀಳು” ಎಂಬ ಕೀಳರಿಮೆಯನ್ನು ಜನಮನದಲ್ಲಿ ನಾಟಿಸಿವೆ. ಆದ್ದರಿಂದಲೇ ಜಾತಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಬಾಳುತ್ತಿರುವ ಪ್ರತಿಯೊಬ್ಬರ ಮಯ್ ಮನದಲ್ಲಿಯೂ ಬೇರೆ ಬೇರೆ ಪ್ರಮಾಣದಲ್ಲಿ ಜಾತಿಯ ಬಗೆಗಿನ ಮೇಲರಿಮೆ ಇಲ್ಲವೇ ಕೀಳರಿಮೆಯು ನೆಲೆಸಿದೆ;

ಪಾಚೀನ ಹೊತ್ತಗೆಗಳಲ್ಲಿ ಬ್ರಹ್ಮನ ಮೊಗ, ತೋಳು, ತೊಡೆ ಮತ್ತು ಪಾದಗಳಿಂದ ಬೇರೆ ಬೇರೆ ವರ‍್ಣಗಳ ಜನರು ಹುಟ್ಟಿದರು ಎಂಬುದನ್ನು ವಚನಕಾರ ಅಂಬಿಗ ಚೌಡಯ್ಯನು ಪ್ರಶ್ನಿಸಿ, ಇಂತಹ ಕಟ್ಟುಕತೆಗಳಿಂದ ಕೂಡಿದ ಸಂಗತಿಗಳನ್ನು ಅಲ್ಲಗಳೆದು, ಇಂತಹ ನುಡಿ ರಚನೆಗಳು ವಾಸ್ತವವಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿದ್ದಾನೆ.

ಬಿಡುಮುಡಿ=ಕೊನೆ/ಅಂತಿಮ; ಎರಡನ್+ಅರಿಯಬೇಕು; ಅರಿ=ತಿಳಿ; ಎರಡನರಿಯಬೇಕು=ಎರಡು ಸಂಗತಿಗಳಲ್ಲಿ “ಯಾವುದು ವಾಸ್ತವ/ಯಾವುದು ಕಲ್ಪಿತ ; ಯಾವುದು ನಿಸರ‍್ಗ ಸಹಜವಾದುದು/ಯಾವುದು ಕಟ್ಟುಕತೆ” ಎಂಬುದನ್ನು ಒರೆಹಚ್ಚಿ ನೋಡಿ ನಿಜವಾದುದನ್ನು ತಿಳಿಯುವುದು;

ಬಿಡುಮುಡಿಯಲ್ಲಿ ಎರಡನರಿಯಬೇಕು=ಮಾನವರ ಹುಟ್ಟಿನ ಬಗ್ಗೆ ಸಂಸ್ಕ್ರುತ ನುಡಿಯ ಹೊತ್ತಗೆಗಳಲ್ಲಿ ಹೇಳಿರುವ ಜಾತಿ/ಕುಲ/ವರ್ಣದ ಸಂಗತಿಗಳನ್ನು ಮತ್ತು ನಿಸರ‍್ಗ ಸಹಜವಾದ ಸಂಗತಿಗಳನ್ನು ಒರೆಹಚ್ಚಿ ನೋಡಿ, ಅಂತಿಮವಾಗಿ ಯಾವುದು ವಾಸ್ತವ / ಯಾವುದು ಕಟ್ಟುಕತೆ ಎಂಬುದನ್ನು ಒರೆಹಚ್ಚಿ ನೋಡಿ ತಿಳಿಯಬೇಕು. ತಮಗೆ ಬೇಕಾದಂತೆ ರಚನೆ ಮಾಡಿರುವ ಕಟ್ಟುಕತೆಗಳಿಂದ ಕೂಡಿರುವ ಮಾತಿನ ರಚನೆಗಳನ್ನು ನಿಜವೆಂದು ನಂಬದೆ, ಎಲ್ಲ ಮಾನವರು ಹೆಣ್ಣಿನ ಹೊಟ್ಟೆಯಿಂದ ಹುಟ್ಟುತ್ತಾರೆ ಮತ್ತು ಮಾನವರೆಂಬ ಒಂದೇ ಕುಲಕ್ಕೆ ಸೇರಿದ್ದಾರೆ ಎಂಬ ಸತ್ಯವನ್ನು ಮನಗಾಣಬೇಕು;

ಎಂದನ್+ಅಂಬಿಗ; ಅಂಬಿಗ=ದೋಣಿಯನ್ನು ನಡೆಸುವ ಕಾಯಕದವನು;

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: