ನಿಂಬೆಹಣ್ಣಿನ ಹಲವು ಬಳಕೆಗಳು

ಶ್ಯಾಮಲಶ್ರೀ.ಕೆ.ಎಸ್.

ಅಡುಗೆ ಮನೆಗೂ ಮತ್ತು ನಿಂಬೆಹಣ್ಣಿಗೂ ಒಂದು ಬಗೆಯ ಅವಿನಾಬಾವ ಸಂಬಂದವಿದೆ. ಬೇಸಿಗೆಯ ದಿನಗಳಲ್ಲಿ ನಿಂಬೆಹಣ್ಣು ಅಡುಗೆ ಮನೆಯಿಂದ ಹೊರಗುಳಿಯುವ ಮಾತೇ ಇಲ್ಲ. ಆ ಉರಿಬಿಸಿಲಲ್ಲಿ ತಂಪು ನೀಗಿಸಲು ಕುಡಿಯುವ ನಿಂಬೆಹಣ್ಣಿನ ಪಾನಕ ನಮ್ಮ ಪಾಲಿಗೆ ಸುರಪಾನವಿದ್ದಂತೆ. ಬೆಳಗಿನ ತಿಂಡಿಗೆ, ಹಬ್ಬ ಹರಿದಿನಗಳಲ್ಲಿ, ದೇವಸ್ತಾನದ ಪ್ರಸಾದ ಹೀಗೆ ನಾನಾ ವಿಶೇಶ ಸಮಾರಂಬಗಳಲ್ಲಿ ನಿಂಬೆಹಣ್ಣಿನ ರಸದ ಚಿತ್ರಾನ್ನ ಕಾಯಂ ಸದಸ್ಯನಾಗಿದೆ. ನಿಂಬೆ ಹಣ್ಣಿನ ರಸವು ಹುಳಿಯಾದರೂ ಸಾಂಬಾರಿನ ತಯಾರಿಕೆಯಲ್ಲಿ ಅದರ ಬಳಕೆ ಇರುವುದಿಲ್ಲ. ಕೆಲವು ರಸಂ ತಯಾರಿಕೆಯಲ್ಲಿ ಬಳಸಲಾಗುವುದು. ನಿಂಬೆ ಹಣ್ಣಿನ ಉಪ್ಪಿನಕಾಯಿ ಬರೀ ರುಚಿಗಲ್ಲದೆ ಆರೋಗ್ಯದ ದ್ರುಶ್ಟಿಯಿಂದಲೂ ಹಿತವಾದುದು. ಹಲವು ಬಗೆಯ ಚಾಟ್ಸ್ ಮತ್ತು ನಿತ್ಯದ ಕಾದ್ಯಗಳ ತಯಾರಿಕೆಯಲ್ಲಿ ಇದರ ಬಳಕೆಯಿದೆ.

ಈ ನಿಂಬೆಹಣ್ಣು ಸರ‍್ವಾಂತರ‍್ಯಾಮಿ. ಹಲವೆಡೆ ಇದರ ಬಳಕೆಯನ್ನು ಕಾಣಬಹುದು. ಅಂಗಡಿ, ಕಟ್ಟಡಗಳು, ವಾಹನಗಳ ಮುಂಬಾಗದಲ್ಲಿ ದ್ರುಶ್ಟಿ ತಾಕದಿರಲಿ, ನಕಾರಾತ್ಮಕ ಶಕ್ತಿ ಪ್ರವೇಶಿಸದಿರಲಿ ಎನ್ನುವ ನಂಬಿಕೆಯಿಂದಲೋ ಏನೋ ಮೆಣಸಿನಕಾಯಿಯ ಜೊತೆ ನಿಂಬೆಹಣ್ಣನ್ನು ಸೇರಿಸಿ ದಾರದಲ್ಲಿ ಕಟ್ಟುವುದನ್ನು ಕಾಣಬಹುದು. ವ್ಯಾಪಾರ ಕೇಂದ್ರಗಳಲ್ಲಿ, ಅಂಗಡಿಗಳಲ್ಲಿ ನೀರು ತುಂಬಿರುವ ಗಾಜಿನ ಬಾಟಲಿಗಳಲ್ಲಿ, ನೀರಿನ ಪಾತ್ರೆಗಳಲ್ಲಿ ನಿಂಬೆಹಣ್ಣುಗಳನ್ನು ಇಡುವುದು ಅಲ್ಲಲ್ಲಿ ಕಣ್ಣಿಗೆ ಬೀಳುತ್ತದೆ. ಎಲ್ಲಾ ಶಕ್ತಿ ದೇವತೆಗಳ ದೇವಸ್ತಾನಗಳಲ್ಲಿ ದೇವಿಯ ಕ್ರುಪೆಗಾಗಿ ಹೆಣ್ಣುಮಕ್ಕಳು ನಿಂಬೆಹಣ್ಣಿನ ದೀಪಗಳಿಂದ ಆರಾದಿಸುವುದು ಹಳೆಯ ಕಾಲದಿಂದಲೂ ನಡೆದು ಬಂದಿರುವ ಆಚರಣೆಯಾಗಿದೆ. ಹೀಗೆ ಇದೊಂದು ದಾರ‍್ಮಿಕ ಪ್ರವ್ರುತ್ತಿಯಾಗಿ ಪರಿಣಮಿಸಿದೆ. ನವರಾತ್ರಿಯ ಹಬ್ಬದಲ್ಲಿ ನಿಂಬೆಹಣ್ಣಿನ ಹಾರವು ದುರ‍್ಗೆ, ಚಾಮುಂಡಿಯರಂತಹ ಶಕ್ತಿ ದೇವತೆಗಳ ಕೊರಳಲ್ಲಿ ಅಲಂಕ್ರುತವಾಗಿರುತ್ತದೆ. ಪ್ರತೀ ವರ‍್ಶವೂ ಆಯುದಪೂಜೆಯ ಹಬ್ಬದಂದು ವಾಹನಗಳ ಪೂಜೆಯ ವೇಳೆ ನಿಂಬೆಹಣ್ಣಿನ ಶಾಂತಿ ಮಾಡಲಾಗುತ್ತದೆ. ಕೆಲವೆಡೆ ಮಾಟ ಮಂತ್ರಗಳೆಂಬ ಹಲವು ದುಶ್ಟ ಚಟುವಟಿಕೆಗಳಿಗೆ ಅವೈಜ್ನಾನಿಕವಾಗಿ ಈ ನಿಂಬೆಹಣ್ಣನ್ನು ಬಳಸಲಾಗುತ್ತಿದ್ದು ಇದೊಂದು ಅಮಾನವೀಯ ಕೆಲಸವಾಗಿದೆ.

ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಊಟದ ಬಳಿಕ ಕೈಯನ್ನು ಸ್ವಚ್ಚಗೊಳಿಸುವ ಸಲುವಾಗಿ ಬಟ್ಟಲಿನಲ್ಲಿ ಬೆಚ್ಚನೆಯ ನೀರಿನೊಂದಿಗೆ ನಿಂಬೆಹಣ್ಣಿನ ಸಣ್ಣತುಂಡನ್ನು ಹಾಕಿ ಕೊಡುವ ಪದ್ದತಿಯಿದೆ. ಇನ್ನು ಸಬೆ ಸಮಾರಂಬಗಳಲ್ಲಿ ಶುಬದ ಸಾಂಕೇತಿಕವಾಗಿ ಬರುವ ಅತಿತಿಗಳಿಗೆ, ಹಿರಿಯರಿಗೆ ನಿಂಬೆಹಣ್ಣನ್ನು ಕೊಡುವ ಸಂಪ್ರದಾಯ ನಮ್ಮಲ್ಲಿದೆ. ನಿಂಬೆರಸವನ್ನು ಉಪಯೋಗಿಸಿ ಜಿಡ್ಡು ಇರುವ ಪಾತ್ರೆಗಳನ್ನು, ಹೆಚ್ಚು ಕೊಳೆಯುಕ್ತ ಬಟ್ಟೆಗಳನ್ನು ಸಿಪ್ಪೆ ಸಮೇತವಾಗಿ ಉಜ್ಜಿ ಶುಬ್ರಗೊಳಿಸಿ ಹೊಳಪು ನೀಡಬಹುದು. ಇದಕ್ಕಾಗಿಯೇ ಇದನ್ನು ಪಾತ್ರೆ ತೊಳೆಯಲು ತಯಾರಿಸುವ ಸಾಬೂನು, ಬಟ್ಟೆ ‌ತೊಳೆಯುವ ಮಾರ‍್ಜಕಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.

ನಿಂಬೆ ಹಣ್ಣು ಹೆಸರಿಗೆ ಹಣ್ಣು ಆದರೆ ಅದರ ರುಚಿ ಹುಳಿ. ಅದರ ಪರಿಮಳ ಸುವಾಸನೆಬರಿತವಾಗಿದೆ. ನಿಂಬೆಯು ಕೂಡ ಒಂದು ವಾಣಿಜ್ಯ ಬೆಳೆಯಾಗಿದೆ. ಆದರೆ ಮನೆಗೆ ಅಗತ್ಯವಿರುವ ನಿಂಬೆಯನ್ನು ಮನೆಯಂಗಳದಲ್ಲಿ ಜಾಗವಿದ್ದಲ್ಲಿ, ಸಾವಯವ ಗೊಬ್ಬರದ ಸಹಾಯದಿಂದ ಬೆಳೆಯಬಹುದಾಗಿದೆ. ಮೂರ‍್ನಾಲ್ಕು ವರ‍್ಶಗಳ ನಂತರ ಇದು ಪಸಲು ಬಿಟ್ಟು ಪಲ ಕೊಡುತ್ತದೆ. ನಿಂಬೆಕಾಯಿ ಹಸಿರಾಗಿದ್ದು ಅಶ್ಟಾಗಿ ರಸವಿರುವುದಿಲ್ಲ. ಸ್ವಾದವೂ ಕಹಿ. ನಿಂಬೆಹಣ್ಣು ಪಕ್ವವಾದಾಗ ಹಳದಿ ಬಣ್ಣದಲ್ಲಿರುತ್ತದೆ. ಹುಳಿ ತುಂಬಿಕೊಂಡು ರಸಮಯವಾಗಿ ಬಳಸಲು ಯೋಗ್ಯವಾಗುತ್ತದೆ. ಈ ಗಿಡದ ಎಲೆಯು ಪುಟ್ಟದಾಗಿ ಸುಂದರವಾಗಿ ಹಸಿರಸಿರಾಗಿದ್ದು, ನಿಂಬೆ ಗಿಡದ ಬಳಿ ಸುಳಿದಾಗಲೆಲ್ಲಾ ಅದರ ಪರಿಮಳ ಹೊಮ್ಮುವುದು. ನಿಂಬೆ, ಸಾಮಾನ್ಯ ಮಟ್ಟದ ಎತ್ತರಕ್ಕೆ ಬೆಳೆದುನಿಂತು ಪೊದೆಯಂತೆ ಬೆಳೆಯುವ ಗಿಡವಾಗಿದೆ. ನಿಂಬೆ ಗಿಡದಲ್ಲಿಯೂ ಮುಳ್ಳುಗಳನ್ನು ಕಾಣಬಹುದು. ಗಾತ್ರದಲ್ಲಿ ಕಿರಿದಾಗಿ ಪಳ ಪಳ ಹೊಳೆಯುವ ಹೊಂಬಣ್ಣವನ್ನು ಹೊಂದಿರುವ ನಿಂಬೆಯ ಮೂಲ ಏಶ್ಯಾ. ದಕ್ಶಿಣ ಬಾರತದಲ್ಲಿ ಇದರ ಬಳಕೆ ಹೆಚ್ಚು. ಇದರ ವೈಜ್ನಾನಿಕ ಹೆಸರು ‘ಸಿಟ್ರಸ್ ಆರಂಟಿಪೋಲಿಯಾ’ (Citrus Aurantifolia) . ನಿಂಬೆಯನ್ನೇ ಹೋಲುವ ದೊಡ್ಡ ಗಾತ್ರದ ಹಣ್ಣು ಗಜನಿಂಬೆ. ಆದರೆ ಅದರ ಬಳಕೆ ತುಂಬಾ ವಿರಳ. ನಿಂಬೆಹಣ್ಣು ಮತ್ತು ಹೇರಳೆಕಾಯಿಗಳೆರಡೂ ಬಳಕೆಯಲ್ಲಿ ನಿಕಟವರ‍್ತಿಗಳಾಗಿವೆ.

ನಿಂಬೆಯಲ್ಲಿ ಯತೇಚ್ಚವಾಗಿ ಸಿಟ್ರಸ್ ಅಂಶ ಹೆಚ್ಚಾಗಿರುವುದರಿಂದ ಸ್ತೂಲ ಕಾಯದ ದೇಹ ಹೊಂದಿರುವವರು ತೂಕ ಇಳಿಸಲು ಇದನ್ನು ಬಳಸುತ್ತಾರೆ. ಬೆಳಗ್ಗೆ ಎದ್ದೊಡನೆಯೇ ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವವರ ಸಂಕ್ಯೆ ಜಾಸ್ತಿಯಾಗುತ್ತಿದೆ. ಇದೇ ನಿಂಬೆರಸದ ನೀರಿಗೆ ಜೇನುತುಪ್ಪ ಸೇರಿಸಿ ಕುಡಿಯುವವರು ಇದ್ದಾರೆ. ದೂರ ಪ್ರಯಾಣ ಮಾಡುವ ವೇಳೆ ಆಗುವ ತಲೆ ತಿರುಗು, ವಾಂತಿಯನ್ನು ತಡೆಯಲು ನಿಂಬೆಹಣ್ಣನ್ನು ಉಪಯೋಗಿಸುವವರಿದ್ದಾರೆ. ನಿಂಬೆಯಲ್ಲಿರುವ ಯತೇಚ್ಚವಾದ ‘ಸಿ’ ಜೀವಸತ್ವ ಹೊಟ್ಟೆ ನೋವು, ಅಜೀರ‍್ಣತೆ, ರಕ್ತದೊತ್ತಡ ಹೀಗೆ ನಾನಾ ಕಾಯಿಲೆಗಳಿಗೆ ಸಂಜೀವಿನಿಯಾಗಿ ಔಶದೀಯ ಕ್ಶೇತ್ರದಲ್ಲಿ ಪ್ರಕ್ಯಾತಿ ಪಡೆದಿದೆ. ಬೇಸಿಗೆಯ ಸಮಯದಲ್ಲಿ ನಿರ‍್ಜಲೀಕರಣದಿಂದ ಮುಕ್ತಿ ಹೊಂದಲು ನಿಂಬೆಹಣ್ಣಿನ ಪಾನೀಯಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಆದ್ದರಿಂದ ನಿಂಬೆಹಣ್ಣು ನಮ್ಮೆಲ್ಲರ ಬೇಸಿಗೆಯ ಸ್ನೇಹಿತನಾಗಿದೆ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: