ಹಸಿರು ತೋರಣ: ಒಂದು ಸೊಬಗು

ಶ್ಯಾಮಲಶ್ರೀ.ಕೆ.ಎಸ್.

ಹಬ್ಬಗಳು ನಮ್ಮ ಪರಂಪರೆಯ ಬಹುಮುಕ್ಯ ಬಾಗ. ಸಂಸ್ಕ್ರುತಿಯ ಪ್ರತೀಕ. ಇಂತಹ ಹಬ್ಬಗಳ ಆಚರಣೆಯ ಸಂಬ್ರಮವನ್ನು ಹೆಚ್ಚಿಸಲು ಹಿರಿಯರ ವಾಡಿಕೆಯಂತೆ ಮನೆಯ ಮುಂಬಾಗಿಲಿನಲ್ಲಿ ಕಟ್ಟುವಂತಹ ಮಾವಿನ ಎಲೆಯ ಹಸಿರು ತೋರಣವು ತನ್ನದೇ ಆದ ಪಾತ್ರವನ್ನು ನಿರ‍್ವಹಿಸುತ್ತಾ ಬಂದಿದೆ. ಹಬ್ಬ ಹರಿದಿನಗಳು, ಊರ ಜಾತ್ರೆ, ಮದುವೆ ಮುಂಜಿ, ನಾಮಕರಣ ಹೀಗೆ ಎಲ್ಲಾ ಶುಬಕಾರ‍್ಯಗಳಲ್ಲಿ ಮಾವಿನ ಎಲೆಯ ತೋರಣದ ಸಿಂಗಾರ ಇರಲೇಬೇಕು. ಊರ ಜಾತ್ರೆಯಲ್ಲಿ ಊರಿನ ಹೆಬ್ಬಾಗಿಲುಗಳಲ್ಲಿ, ದೇವಸ್ತಾನದ ಆವರಣದ ಬಾಗಿಲುಗಳಲ್ಲಿ, ಮದುವೆ ಮಂಟಪಗಳ ದ್ವಾರಗಳಲ್ಲಿ, ದೇವರ ಉತ್ಸವ ಮತ್ತು ಮೆರವಣಿಗೆ ಜರುಗುವ ಬೀದಿಗಳಲ್ಲಿ, ಹೀಗೆ ನಾನಾ ಕಡೆ ‌ಮಾವಿನ ಎಲೆಯ ತೋರಣದ ಬಳುಕು ಆಗಾಗ್ಗೆ ಕಣ್ಣಿಗೆ ಗೋಚರಿಸುತ್ತದೆ.

ಯುಗಾದಿಯಲ್ಲಿ ತೋರಣದ ಸೊಬಗು

ಹಬ್ಬಗಳ ಹಬ್ಬ ಯುಗಾದಿ ಹಬ್ಬ. ಚೈತ್ರ ಮಾಸದ ವಸಂತ ರುತುವಿನಲ್ಲಿ ಬರುವ, ಹೊಸ ವರುಶದ ಆಗಮನವನ್ನು ಸ್ವಾಗತಿಸುವ ಯುಗಾದಿ ಹಬ್ಬದ ಮುಕ್ಯ ಆಕರ‍್ಶಣೆ ಮಾವು ಬೇವುಗಳಿಂದ ಬಾಗಿಲಿನಲ್ಲಿ ಅಲಂಕ್ರುತವಾದ ಹಸಿರು ತೋರಣ. ಈ ಹಸಿರು ತೋರಣ ನಮ್ಮ ಸಂಪ್ರದಾಯದ ದ್ಯೋತಕ. ಮಾವಿನ ಎಲೆ ಶುಬದ ಸಂಕೇತ. ಬಕ್ತಿ ಬಾವ‌ವನ್ನು ಪ್ರತಿಬಿಂಬಿಸಲು ಮಾವಿನ ಹಸಿರು ಎಲೆಗಳ ತೋರಣ ಬಕ್ತಿ ಬಾವ‌ವನ್ನು ಪ್ರತಿಬಿಂಬಿಸುವ ಗುರುತಾಗಿದೆ. ಅನೇಕ ದಾರ‍್ಮಿಕ ಪೂಜೆಗಳಲ್ಲಿ ದೇವರ ಮುಂದಿಡುವ ತೆಂಗಿನಕಾಯಿ ಕಳಸದಲ್ಲೂ ವೀಳ್ಯದೆಲೆಯಂತೆಯೇ ಮಾವಿನ ಎಲೆಗಳನ್ನು ಬಳಸುವುದು ಶುಬಪ್ರದಾಯವಾಗಿದೆ. ಮಾವಿನ ಎಲೆಗಳ ತುದಿ ಚೂಪಾಗಿ ಎಲೆ ಉದ್ದುದ್ದವಾಗಿರುವುದರಿಂದ ತೋರಣ‌‌ ಕಟ್ಟಲು ಸಹಕಾರಿಯಾಗಿವೆ. ಮನೆಯ ದ್ವಾರದ ಮೇಲಿನ ಎಡ ಮತ್ತು ಬಲ ತುದಿಗಳಿಗೆ ಬಲವಾದ ದಾರವ‌‌ನ್ನು ಕಟ್ಟಿ, ತೋರಣಕ್ಕೆ ಸೂಕ್ತವಾದ ಮಾವಿನ ಎಲೆಗಳನ್ನು ಆರಿಸಿಟ್ಟುಕೊಳ್ಳಬೇಕು. ಆಮೇಲೆ ಎಲೆಗಳನ್ನು ಶುಚಿಮಾಡಿ ದಾರದ ಎಳೆಯ ಮೇಲೆ ಮಾವಿನ ಎಲೆಯ ತೊಟ್ಟಿನ ಸಮೇತವಾಗಿ ಹಿಂದಕ್ಕೆ ಸ್ವಲ್ಪಬಾಗ ಮಡಚಿ, ಬಳಸದೇ ಇರುವ ಹಂಚಿನ ಪೊರಕೆ ಕಡ್ಡಿಯ ತುಂಡಿನ ಸಹಾಯ ದಿಂದ ಸಿಕ್ಕಿಸಿ, ಒಂದರ ಪಕ್ಕ ಒಂದು ಪೋಣಿಸಿಟ್ಟರೆ ತೋರಣ ಸಿದ್ದವಾಗುತ್ತದೆ. ಯುಗಾದಿ ಹಬ್ಬದಂದು ಮಾವಿನ ಎಲೆಯ ತೋರಣದ ಮದ್ಯೆ ಬೇವಿನ ಎಲೆಯ ಸಣ್ಣ ಸಣ್ಣ ಟೊಂಗೆಗಳನ್ನು ಸಿಕ್ಕಿಸುವುದು ರೂಡಿ. ಹಂಚಿನ ಕಡ್ಡಿಯ ಬಳಕೆ ಗೊತ್ತಿಲ್ಲದವರು ಸ್ಟಾಪ್ಲರ್ ಪಿನ್ ಬಳಸಿ ತೋರಣವನ್ನು ಕಟ್ಟಬಹುದು.

ಪೌರಾಣಿಕ ಮತ್ತು ವೈಜ್ನಾನಿಕ ಹಿನ್ನೆಲೆ

ಮಾವಿನ ಮರದ ಕೆಳಗೆ ಶಿವ ಪಾರ‍್ವತಿಯರ ವಿವಾಹವಾಯಿತೆಂಬ ಪೌರಾಣಿಕ ಹಿನ್ನೆಲೆಯಿದೆ. ಆದ್ದರಿಂದ ಮಾವಿನ ಮರಕ್ಕೆ ವಿಶೇಶ ಸ್ತಾನವುಂಟು. ಮಾವಿನ ಎಲೆಯ ತೋರಣದಲ್ಲಿ ದೇವತೆಗಳು ನೆಲೆಸಿರುವರೆಂಬ ಬಾವ ನಮ್ಮ ಹಿರಿಯರಲ್ಲಿ ಇದೆ. ಶತಮಾನಗಳೇ ಕಳೆದರೂ ಮಾವಿನ ಎಲೆಯ ತೋರಣ ಕಟ್ಟುವ ಪದ್ದತಿ ಅಳಿದಿಲ್ಲ. ಆದರೆ ಕೆಲವರು ಪ್ಲಾಸ್ಟಿಕ್ ತೋರಣಗಳನ್ನು ಮನೆಯ ಬಾಗಿಲುಗಳಿಗೆ ಅಲಂಕಾರಕ್ಕಾಗಿ ಹಾಕುವುದನ್ನು ನೋಡಿರಬಹುದು. ಮಾವಿನ ಎಲೆಯ ತೋರಣ ಕಟ್ಟುವುದು ಸಂಪ್ರದಾಯವಾದರೂ ಕೆಲವು ವೈಜ್ನಾನಿಕ ಹಿನ್ನೆಲೆಯನ್ನು ಒಳಗೊಂಡಿದೆ. ಹಸಿರು ಬಣ್ಣವು ಮನಸ್ಸಿಗೆ ಹಿತವಾದುದರಿಂದ ಮಾವಿನ ಹಸಿರೆಲೆಗಳು ಹಬ್ಬದ ದಿನ ಮನೆಯೊಳಗೆ ಹೊರಗೆ ಓಡಾಡುವವರ ಮನಸ್ಸಿಗೆ ಮುದ ನೀಡಿ ಕೆಲಸದ ಶ್ರಮವನ್ನು ಕಡಿಮೆ ಮಾಡುವುದು. ಮನೆಯೊಳಗೆ ಬರುವ ಕ್ರಿಮಿ ಕೀಟಗಳನ್ನು ಒಳಗೆ ಪ್ರವೇಶಿಸದಂತೆ ತೋರಣದಲ್ಲೇ ಇರಿಸಿಕೊಳ್ಳುತ್ತವೆ. ಮಾವಿನ ಹಸಿರು ಎಲೆಗಳಲ್ಲಿ ಆಮ್ಲಜನಕದ ಪ್ರಮಾಣ ಅದಿಕವಾಗಿರುವುದರಿಂದ ಮನೆಯೊಳಗೆ ಅಶುದ್ದ ಗಾಳಿ ಹರಡದಂತೆ ತಡೆಯುತ್ತದೆ. ದನಾತ್ಮಕ ಚಿಂತನೆಯನ್ನು ಹೆಚ್ಚಿಸಿ ಮನೆ ಮತ್ತು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ತರುವಲ್ಲಿ ಅನುಕೂಲಕರವಾಗಿವೆ. ಮಾವಿನ ತಾಜಾ ಎಲೆಗಳು ನಾಲ್ಕೈದು ದಿನಗಳವರೆಗೂ ಹಸಿರಾಗಿ ತೋರಣದಲ್ಲಿ ಬೀಗುತ್ತಾ ಮನೆಯ ಹಬ್ಬದ ವಾತಾವರಣದ ಸೊಬಗನ್ನು ಹೆಚ್ಚಿಸುತ್ತವೆ.

( ಚಿತ್ರಸೆಲೆ:  youtube.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: